Andolana originals

ರಾಜ್ಯ ಬಜೆಟ್; ಕೊಡಗು ಜಿಲ್ಲೆಯಲ್ಲಿವೆ ಹತ್ತಾರು ನಿರೀಕ್ಷೆ

ನವೀನ್ ಡಿಸೋಜ

ಮಡಿಕೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.೬ರಂದು ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಸಹಜವಾಗಿಯೇ ಕೊಡಗು ಜಿಲ್ಲೆಯಲ್ಲಿಯೂ ಹತ್ತಾರು ನಿರೀಕ್ಷೆಗಳಿದ್ದು, ಬಜೆಟ್‌ನಲ್ಲಿ ವಿವಿಧ ಯೋಜನೆಗಳು ಘೋಷಣೆಯಾಗುವುದನ್ನು ಜನರು ಎದುರು ನೋಡುತ್ತಿದ್ದಾರೆ.

ಬಿಜೆಪಿ ಭದ್ರಕೋಟೆಯಾಗಿ ಗುರುತಿಸಿಕೊಂಡಿದ್ದ ಕೊಡಗು ಜಿಲ್ಲೆಯಲ್ಲಿ ಸದ್ಯ ೨ ಕ್ಷೇತ್ರ ಗಳಲ್ಲಿಯೂ ಕಾಂಗ್ರೆಸ್‌ನ ಶಾಸಕ ರಿದ್ದಾರೆ. ಇದರಿಂದ ಜಿಲ್ಲೆಗೆ ಒಂದಷ್ಟು ಯೋಜನೆಗಳನ್ನು ಜನರು ನಿರೀಕ್ಷಿಸುತ್ತಿದ್ದಾರೆ.

ವನ್ಯಜೀವಿ-ಮಾನವ ಸಂಘರ್ಷಕ್ಕೆ ತಡೆ: ಮುಖ್ಯವಾಗಿ ಜಿಲ್ಲೆಯಲ್ಲಿ ವನ್ಯಜೀವಿ-ಮಾನವ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಒಂದೆಡೆ ರೈತರು ಬೆಳೆದ ಫಸಲು ಕಾಡು ಪ್ರಾಣಿಗಳ ಪಾಲಾಗುತ್ತಿದ್ದರೆ, ಮತ್ತೊಂದೆಡೆ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವಂತಹ ಘಟನೆಗಳೂ ನಡೆಯುತ್ತಿವೆ. ಮುಖ್ಯವಾಗಿ ಕಾಡಾನೆ ಹಾವಳಿ ಹಾಗೂ ಹುಲಿ ದಾಳಿ ಪ್ರಕರಣಗಳು ಹೆಚ್ಚುತ್ತಿರುವುದರಿಂದ ವನ್ಯಮೃಗಗಳ ಹಾವಳಿ ತಡೆಗೆ ಬಜೆಟ್‌ನಲ್ಲಿ ಅನುದಾನ ಘೋಷಣೆಯಾಗುವ ನಿರೀಕ್ಷೆ ಇದೆ.

ಪ್ರವಾಸೋದ್ಯಮ ಅಭಿವೃದ್ಧಿ: ಪ್ರವಾಸಿಗರ ಸ್ವರ್ಗವಾಗಿ ಗುರುತಿಸಿಕೊಂಡಿರುವ ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ದಿನದಿಂದ ದಿನಕ್ಕೆ ಕಳೆಗುಂದುತ್ತಿದೆ. ಕೊಡಗಿನಲ್ಲಿ ಕೆಲವೇ ಕೆಲವು ಪ್ರವಾಸಿ ತಾಣಗಳು ಹೆಚ್ಚು ಪ್ರಚಾರಕ್ಕೆ ಬಂದಿದ್ದು, ಇನ್ನೂ ಹಲವು ಸ್ಥಳಗಳು ಎಲೆಮರೆ ಕಾಯಿಯಂತಿವೆ. ಜೊತೆಗೆ ಪ್ರವಾಸೋದ್ಯಮ ಅವಲಂಬಿಸಿ ಸಾವಿರಾರು ಮಂದಿ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ವಿಶೇಷ ಯೋಜನೆ ಪ್ರಕಟಿಸುವ ನಿರೀಕ್ಷೆ ಯಲ್ಲಿ ಈ ಕ್ಷೇತ್ರವನ್ನೇ ನಂಬಿಕೊಡವರಿದ್ದಾರೆ.

ಆರೋಗ್ಯ ಕ್ಷೇತ್ರಕ್ಕೆ ಬೇಕಿದೆ ಸರ್ಜರಿ: ಜಿಲ್ಲೆಯಲ್ಲಿ ಪ್ರಮುಖವಾಗಿ  ಆರೋಗ್ಯ ಕ್ಷೇತ್ರವೇ ರೋಗಗ್ರಸ್ತವಾಗಿದೆ. ಜಿಲ್ಲಾ ಆಸ್ಪತ್ರೆಯನ್ನು ಬೋಧಕ ಆಸ್ಪತ್ರೆ ಯನ್ನಾಗಿ ಮೇಲ್ದರ್ಜೆ ಗೇರಿಸಿದರೂ ಹಲವು ಸೌಕರ್ಯಗಳ ಕೊರತೆಯಿದೆ.  ಮುಖ್ಯವಾಗಿ ತಜ್ಞ ವೈದ್ಯರೆ ಇಲ್ಲ. ಹೃದ್ರೋಗ ಘಟಕ ಆರಂಭದ ಬಗ್ಗೆ ಈ ಹಿಂದೆ ಬಜೆಟ್‌ನಲ್ಲಿ ಘೋಷಣೆಯಾಗಿದ್ದರೂ ಹಲವಾರು ಕಾರಣದಿಂದ ಆರಂಭಗೊಂಡಿಲ್ಲ. ಇಂದಿಗೂ ಉತ್ತಮ ಚಿಕಿತ್ಸೆಗೆ ದೂರದ ಮೈಸೂರು ಹಾಗೂ ಮಂಗಳೂರಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಂತಹ ಯೋಜನೆಗಳು ಅಥವಾ ಇದೇ ಆಸ್ಪತ್ರೆಯಲ್ಲಿಯೇ ಉನ್ನತ, ಗುಣಮಟ್ಟದ ಚಿಕಿತ್ಸೆ ದೊರೆಯುವಂತಹ ಯೋಜನೆಗಳ ನಿರೀಕ್ಷೆ ಹೊಂದಲಾಗಿದೆ.

ರಸ್ತೆ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್: ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುವ ಮಳೆ, ವಿಭಿನ್ನ ವಾತಾವರಣದಿಂದ ರಸ್ತೆಗಳು ಎಷ್ಟೇ ದುರಸ್ತಿಗೊಳಿಸಿದರೂ ಮತ್ತೆ ಹದಗೆಡುತ್ತಿವೆ. ಹೆಚ್ಚಿನ ಮಳೆಯಿಂದ ರಸ್ತೆ, ಸೇತುವೆಗಳು ಪ್ರತಿ ವರ್ಷ ಹಾನಿಗೊಳಗಾಗುತ್ತವೆ. ಹೀಗಾಗಿ ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆನ್ನುವ ಒತ್ತಾಯ ಕೂಡ ಕೇಳಿ ಬಂದಿದೆ. ಕಾವೇರಿ ನದಿ ಸ್ವಚ್ಛತೆಗೆ ಅನುದಾನ: ಕಾವೇರಿ ನದಿ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಹುಟ್ಟಿ ಲಕ್ಷಾಂತರ ಮಂದಿಯ ದಾಹ ತೀರಿಸುತ್ತಿದೆ. ಆದರೆ, ಕಾವೇರಿ ಮೂಲದಲ್ಲೇ ಕಲುಷಿತಗೊಳ್ಳುತ್ತಿದೆ. ಚರಂಡಿ ನೀರು, ರೆಸಾರ್ಟ್‌ಗಳ ಕೊಳಚೆ ನೀರು ನದಿ ಸೇರ್ಪಡೆಯಾಗುತ್ತಿರುವುದಲ್ಲದೆ, ಕಸವನ್ನು ತಂದು ಸುರಿಯಲಾಗುತ್ತಿದೆ. ಕುಡಿಯಲೂ ಯೋಗ್ಯವಿಲ್ಲದ ಪರಿಸ್ಥಿತಿಗೆ ನದಿ ನೀರು ಕಲುಷಿತವಾಗಿದೆ. ಹೀಗಾಗಿ ಕಾವೇರಿ ನದಿ ಸ್ವಚ್ಛತೆಗೆ ವಿಶೇಷ ಅನುದಾನ ಘೋಷಿಸಬೇಕೆನ್ನುವ ಬೇಡಿಕೆಯೂ ಇದೆ.

ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಸೂರು: ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಎಲ್ಲರಿಗೂ ಸೂರು ಕಲ್ಪಿಸಲು ಸಾಧ್ಯವಾಗಿಲ್ಲ. ಇಂದಿಗೂ ಸಿದ್ದಾಪುರ, ನೆಲ್ಯಹುದಿಕೇರಿ ಭಾಗದಲ್ಲಿ ಪ್ಲಾಸ್ಟಿಕ್ ಶೆಡ್‌ಗಳಲ್ಲಿ ಸಂತ್ರಸ್ತರು ವಾಸ ಮಾಡುತ್ತಿದ್ದಾರೆ. ಸರ್ಕಾರದ ಮನೆ ನಿರ್ಮಾಣದ ಭರವಸೆ ಭರವಸೆಯಾಗಿಯೇ ಉಳಿದಿದೆ. ಹೀಗಾಗಿ ಈ ಬಾರಿಯ ಬಜೆಟ್‌ನಲ್ಲಿ ಸೂರು ಒದಗಿಸಲು ಅನುದಾನ ಮೀಸಲಿಡುವ ನಿರೀಕ್ಷೆಯಲ್ಲಿ ಸಂತ್ರಸ್ತರಿದ್ದಾರೆ. ಕಾಫಿ ಬೆಳೆಗಾರರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್, ವಿರಾಜಪೇಟೆ ಆಸ್ಪತ್ರೆ ಅಭಿವೃದ್ಧಿಗೆ ಅನುದಾನ, ಕುಶಾಲನಗರ ಹಾಗೂ ಪೊನ್ನಂಪೇಟೆಯಲ್ಲಿ ತಾಲ್ಲೂಕು ಆಸ್ಪತ್ರೆಗಳ ಅಭಿವೃದ್ಧಿ, ಕಾಫಿ ಬ್ರ್ಯಾಂಡಿಗ್‌ಗೆ ಉತ್ತೇಜನ, ಕಾಫಿ ಭತ್ತಕ್ಕೆ ಬೆಂಬಲ ಬೆಲೆ, ರೈಲು ಮಾರ್ಗ ಪ್ರಕ್ರಿಯೆಗೆ ಅನುದಾನ ಇತ್ಯಾದಿ ನಿರೀಕ್ಷೆಗಳಿವೆ.

” ಕೊಡಗಿಗೆ ಅತಿ ಅಗತ್ಯವಾಗಿರುವ ರೈಲು ಸಂಪರ್ಕವನ್ನು ಕೇಂದ್ರ ಹಾಗೂ ರಾಜ್ಯದ ಪ್ರತಿಷ್ಠೆಯ ಕಿತ್ತಾಟದಿಂದ ಕೈ ಬಿಡಲಾಗಿದೆ. ಈ ಬಜೆಟ್‌ನಲ್ಲಿ ಕೊಡಗಿಗೆ ರೈಲು ಸಂಪರ್ಕಕ್ಕಾಗಿ ಬೇಕಿರುವ ಅನುದಾನವನ್ನು ಕರ್ನಾಟಕ ಸರ್ಕಾರ ಮೀಸಲಿಟ್ಟು ಪ್ರಕ್ರಿಯೆ ಪ್ರಾರಂಭಿಸಬೇಕು. ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಅನುದಾನ ಮೀಸಲಿಡಬೇಕು. ವನ್ಯಜೀವಿ ಹಾಗೂ ಮಾನವ ಸಂಘರ್ಷ ನಿಯಂತ್ರಣಕ್ಕೆ ವಿಶೇಷ ಅನುದಾನ ನೀಡಬೇಕು ಮತ್ತು ಶಾಶ್ವತ ಪರಿಹಾರ ಸೂತ್ರ ಕಂಡುಕೊಳ್ಳಬೇಕು.”

-ಅಮೀನ್ ಮೊಹಿಸಿನ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ

” ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವಂತಾಗಲು ಬಜೆಟ್‌ನಲ್ಲಿ ಅನುದಾನ ಘೋಷಿಸಬೇಕು. ಕೃಷಿಗೆ ಬೆಂಬಲ ಕೊಡುವ ಬಜೆಟ್ ಆಗಬೇಕು. ಕೈಗಾರಿಕೆಗೆ ಪ್ರೋತ್ಸಾಹ ನೀಡಬೇಕು. ಕೊಡಗು ಜಿಲ್ಲೆಯಲ್ಲಿ ಕಾಫಿ ಹಾಗೂ ಭತ್ತಕ್ಕೆ ಬೆಂಬಲ ಬೆಲೆ ನೀಡಬೇಕು. ವನ್ಯಜೀವಿ ಹಾವಳಿ ತಡೆಗೆ ಸೂಕ್ತ ಅನುದಾನ ಒದಗಿಸಬೇಕು.”

-ತೇಲಪಂಡ ಶಿವಕುಮಾರ್ ನಾಣಯ್ಯ, ಬಿಜೆಪಿ ಸಾಮಾಜಿಕ ಜಾಲತಾಣದ ಪ್ರಧಾನ ಸಂಚಾಲಕ 

 

 

 

ಆಂದೋಲನ ಡೆಸ್ಕ್

Recent Posts

ಬೆಳಗಾವಿಯಲ್ಲಿ ಮಳೆಗಾಲದ ಅಧಿವೇಶನ

ಜುಲೈ ಮಧ್ಯಭಾಗದಲ್ಲಿ ಕಲಾಪ ಆರಂಬವಾಗುವ ನಿರೀಕ್ಷೆ ಬೆಂಗಳೂರು : ಇದೇ ಮೊದಲ ಬಾರಿಗೆ ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಈ ಬಾರಿಯ ಮಳೆಗಾಲದ…

60 mins ago

ಕಾಕ್ರೋಚ್‌ ಪಾರ್ಟಿಯ ಎಕ್ಸ್‌, ಇನ್‌ಸ್ಟಾ, ವೆಬ್‌ಸೈಟ್‌ಗೆ ತಡೆ ; ಅಭಿಜಿತ್‌ ದಿಪ್ಕೆ

ನವದೆಹಲಿ :  ಬದಲಾವಣೆ ಬಯಸುತ್ತಿರುವ ಯುವ ಮನಸ್ಸುಗಳು  ಕಾಕ್ರೋಚ್​ ಜನತಾ ಪಾರ್ಟಿಯ ಮೂಲಕ ರಾಜಕೀಯ ವ್ಯವಸ್ಥೆಯನ್ನು ಪ್ರಶ್ನೆ ಮಾಡುತ್ತಿವೆ.  ಈ…

2 hours ago

ಲಾರಿ ಹಾಗೂ ಕ್ರೂಸರ್‌ ವಾಹನದ ನಡುವೆ ಡಿಕ್ಕಿ: ಒಂದೇ ಕುಟುಂಬದ ಐವರು ಸಾವು

ಕಲಬುರ್ಗಿ: ಲಾರಿ ಹಾಗೂ ಕ್ರೂಸರ್ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐದು ಮಂದಿ ದಾರುಣವಾಗಿ ಮೃತಪಟ್ಟಿರುವ…

4 hours ago

ಎಬೋಲಾ ಪೀಡಿತ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ: ಸಚಿವ ದಿನೇಶ್‌ ಗುಂಡೂರಾವ್‌

ಬೆಂಗಳೂರು: ಎಬೋಲಾ ಪೀಡಿತ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌…

4 hours ago

ಚೀನಾದಲ್ಲಿ ಕಲ್ಲಿದ್ದಲು ಗಣಿ ಸ್ಫೋಟ: 82 ಜನರು ಸಾವು

ಬೀಜಿಂಗ್:‌ ಉತ್ತರ ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಅನಿಲ ಸ್ಫೋಟದಲ್ಲಿ 82 ಜನರು ಸಾವನ್ನಪ್ಪಿದ್ದಾರೆ. ಇದು ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ…

5 hours ago

ನಟ ದರ್ಶನ್‌ ಆತ್ಮಹತ್ಯೆಗೆ ಯತ್ನ ವದಂತಿ: ಸಚಿವ ಪರಮೇಶ್ವರ್‌ ಹೇಳಿದ್ದಿಷ್ಟು.!

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ನಟ ದರ್ಶನ್‌ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆಂಬ ವದಂತಿ ಕುರಿತು ಗೃಹ…

6 hours ago