ಪ್ರೊ. ಆರ್.ಎಂ ಚಿಂತಾಮಣಿ
ನಮ್ಮ ಸಂವಿಧಾನದ 280ನೇ ವಿಧಿಯಂತೆ ಕೇಂದ್ರ ಸರ್ಕಾರದ ತೆರಿಗೆ ಆದಾಯವನ್ನು ರಾಜ್ಯಗಳೊಡನೆ ಹಂಚಿಕೊಳ್ಳುವ ವಿಧಾನ ವಿಧಾನವನ್ನು ಸಲಹೆ ಮಾಡಲು ಐದು ವರ್ಷಗಳಿಗೊಮ್ಮೆ ಕೇಂದ್ರ ಸರ್ಕಾರ ಹಣಕಾಸು ಆಯೋಗವನ್ನು ಅಸ್ತಿತ್ವಕ್ಕೆ ತರುತ್ತದೆ. ನಮ್ಮದು ಒಕ್ಕೂಟ ವ್ಯವಸ್ಥೆ ಇರುವ ಪ್ರಜಾಪ್ರಭುತ್ವವಾದ್ದರಿಂದ ಕೇಂದ್ರ ಮತ್ತು ರಾಜ್ಯಗಳ ನಡುವಿನ ಹಣಕಾಸು ಸಂಬಂಧಗಳನ್ನು ನಿರ್ಧರಿಸುವಲ್ಲಿ ಆಯೋಗ (Finance Commission) ಮಹತ್ವದ ಪಾತ್ರ ನಿರ್ವಹಿಸುತ್ತದೆ.
ಈಗಾಗಲೇ 15 ಆಯೋಗಗಳು ಕಾರ್ಯ ನಿರ್ವ ಹಿಸಿದ್ದು, ನೇಮಕವಾದ ಎರಡರಿಂದ ಎರಡೂವರೆ ವರ್ಷಗಳಲ್ಲಿ ಅಂತಿಮ ವರದಿಯನ್ನು ಸರ್ಕಾರಕ್ಕೆ (ರಾಷ್ಟ್ರಪತಿಗಳಿಗೆ) ಸಲ್ಲಿಸಿ ಕರ್ತವ್ಯ ಪೂರ್ಣಗೊಳಿಸಿವೆ. ಮುಂದಿನ ಐದು ಹಣಕಾಸು ವರ್ಷಗಳಲ್ಲಿ ಕೇಂದ್ರದಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಪನ್ಮೂಲ ವರ್ಗಾವಣೆಯ (Devolution) ವಿಧಾನಗಳನ್ನು ಹಾಗೂ ಮುಂದುವರಿದು ರಾಜ್ಯಗಳಿಂದ ಸ್ಥಳೀಯ ಸಂಸ್ಥೆಗಳಿಗೆ (ಪಂಚಾಯಿತಿಗಳು ಮತ್ತು ಮುನಿಸಿಪಾಲಿಟಿಗಳು) ಹಣಕಾಸು ವರ್ಗಾವಣೆಯ ಆಧಾರಗಳನ್ನು ವರದಿಗಳಲ್ಲಿ ಸಲಹೆ ಮಾಡಲಾಗಿರುತ್ತದೆ.
ಆಯೋಗದಲ್ಲಿ ಒಕ್ಕೂಟ ಹಣಕಾಸು ವ್ಯವಸ್ಥೆಯಲ್ಲಿ ತಜ್ಞರು ಮತ್ತು ನುರಿತ ಹಣಕಾಸು ಆಡಳಿತಗಾರರಾದ ಒಬ್ಬರು ಪೂರ್ಣಾವಧಿ ಅಧ್ಯಕ್ಷರು ಮತ್ತು ನಾಲ್ವರು ಸದಸ್ಯರಿರುತ್ತಾರೆ. ಸರ್ಕಾರದ ಕಾರ್ಯದರ್ಶಿ ಮಟ್ಟದ ಅಧಿಕಾರಿಯೊಬ್ಬರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ಈಗ ಕೇಂದ್ರ ಸಚಿವ ಸಂಪುಟದ ಕಳೆದ ನವೆಂಬರ್ 29ರ ಸಭೆಯ ನಿರ್ಣಯದಂತೆ 16ನೇ ಆಯೋಗವನ್ನು ನೇಮಕ ಮಾಡಲಾಗಿದೆ. ಗೆಜೆಟ್ ಪ್ರಕಟಣೆಯಲ್ಲಿ ಸಲಹೆಗಾಗಿ ಆಯೋಗಕ್ಕೆ ಒಪ್ಪಿಸಲಾದ ವಿಷಯಗಳ ಪಟ್ಟಿಯನ್ನೂ (Terms of reference) ಕೊಡಲಾಗಿದೆ. ಹಣಕಾಸು ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿರುವ ರುತ್ವಿಕ್ ಆರ್. ಪಾಂಡೆ ಅವರು ಆಯೋಗದ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ಒಂದು ತಿಂಗಳ ನಂತರ (ಡಿ.31) ಅಧ್ಯಕ್ಷರ ಹೆಸರು ಪ್ರಕಟಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಭಾರತ ಅರ್ಥ ವ್ಯವಸ್ಥೆಯ ತಜ್ಞ ಅರವಿಂದ ಪನಗಾರಿಯಾ ಅವರು 16ನೇ ಆಯೋಗದ ಅಧ್ಯಕ್ಷರು. ಸೂಕ್ತವಾದ ಸಮರ್ಥರನ್ನೇ ಆರಿಸಿದ್ದಾರೆ ಎನ್ನಬಹುದು. ನಾಲ್ವರು ಸದಸ್ಯರ ನೇಮಕ ಆಗಬೇಕಾಗಿದೆ. ಆಗ ಆಯೋಗ ಪೂರ್ಣವಾಗುತ್ತದೆ.
ಶಿಫಾರಸಿಗಾಗಿ ಒಪ್ಪಿಸಿದ ವಿಷಯಗಳು
ಸ್ಕೂಲವಾಗಿ ಹೇಳುವುದಾದರೆ ಹಿಂದಿನ ಆಯೋಗಗಳಿಗೆ ವಹಿಸಿದ ವಿಷಯಗಳನ್ನೇ ಈಗಲೂ ಒಪ್ಪಿಸಲಾಗಿದೆ. ವಿವರವಾದ ವಿಷಯಗಳನ್ನು ನಂತರ ಪ್ರಕಟಿಸುವುದಾಗಿ ಹೇಳಲಾಗಿದೆ. ಆಯೋಗವು 2026ರ ಏ.1ರಿಂದ ಮಾ.31, 2031ರವರೆಗೆ ಐದು ವರ್ಷಗಳ ಅವಧಿಗೆ 1) ಕೇಂದ್ರದ ತೆರಿಗೆ ಆದಾಯದ ವಿಭಜನೆ ಮತ್ತು ರಾಜ್ಯಗಳ ಪಾಲನ್ನು ವಿತರಿಸುವ ಆಧಾರಗಳು ಮತ್ತು ವಿಧಾನ 2)ಕೇಂದ್ರದಿಂದ ರಾಜ್ಯಗಳಿಗೆ ವಿಶೇಷ ಅನುದಾನಗಳು
Grants in Aid) 3) ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (National Disaster Management Fund) ಮತ್ತು ಅದರಿಂದ ಅನುದಾನಗಳು ಮತ್ತು 4) ರಾಜ್ಯಗಳಿಗಾಗಿ ಸಂಚಿತ ನಿಧಿ (Consolidated Fund for States) ಮುಂತಾದ ವಿಷಯಗಳ ಬಗ್ಗೆ ಶಿಫಾರಸುಗಳೊಡನೆ ವರದಿ ಸಲ್ಲಿಸಬೇಕಾಗಿದೆ. ಇವುಗಳಲ್ಲದೆ ಸ್ಥಳೀಯ ಸಂಸ್ಥೆಗಳ (ಪಂಚಾಯತ್ ರಾಜ್ ಮತ್ತು ಮುನಿಸಿಪಲ್ ಸಂಸ್ಥೆಗಳು) ಸಂಪನ್ಮೂಲಗಳನ್ನು ವೃದ್ಧಿಸುವ ಕುರಿತು ಮತ್ತು ರಾಜ್ಯಗಳಿಗೆ ವಿದ್ಯುತ್ ಉತ್ಪಾದನೆಯಲ್ಲಿ ಪ್ರಗತಿ ಮತ್ತು ಫಲಾನುಭವಿಗಳಿಗೆ ಅನುಕೂಲತೆಗಳ ವರ್ಗಾವಣೆಯ ಸಾಧನೆಗಳ ಆಧಾರದ ಮೇಲೆ ಉತ್ತೇಜನಗಳನ್ನು ಕೊಡುವ ಬಗ್ಗೆಯೂ ಸಲಹೆಗಳನ್ನು ಕೊಡಬೇಕಾಗಿದೆ. ಆಯೋಗವು ತನ್ನ ಅಂತಿಮ ವರದಿಯನ್ನು ಅ.31, 2025ರೊಳಗೆ ಸಲ್ಲಿಸಲೇಬೇಕಾಗುತ್ತದೆ. ಅಂದರೆ ಮುಂದಿನ ಮೂರಾಲ್ಕು ತಿಂಗಳುಗಳಲ್ಲಿ ಸಾಕಷ್ಟು ಸಾರ್ವಜನಿಕ ಚರ್ಚೆಗಳಾಗಿ ಸರ್ಕಾರ ಸಮಯಬದ್ದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಆಯೋಗಕ್ಕೆ ಒಂದು ವರ್ಷ ಒಂಬತ್ತು ತಿಂಗಳುಗಳಿಗಿಂತ ಕಡಿಮೆ ಅವಧಿ ಈಗ ಲಭ್ಯವಾಗುತ್ತದೆ. ಅದು ಸೈದ್ದಾಂತಿಕ ಹಿನ್ನೆಲೆಯನ್ನು ಅಧ್ಯಯನ ಮಾಡಬೇಕು. ತಜ್ಞರೊಡನೆ ಚರ್ಚಿಸಬೇಕು. ಅವಶ್ಯವಿರುವ ಅಂಕಿ ಸಂಖ್ಯೆಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಬೇಕು. ಕೇಂದ್ರ ಹಣಕಾಸು
ಇಲಾಖೆಯೊಡನೆ ಸುದೀರ್ಘ ಚರ್ಚೆ ನಡೆಸಿ ಅಭಿಪ್ರಾಯ ಪಡೆಯಬೇಕು. ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಭೇಟಿ ಕೊಟ್ಟು ಚರ್ಚಿಸಿ ಅವರ ಅಹವಾಲುಗಳನ್ನು ದಾಖಲಿಸಬೇಕು. ಸ್ಥಳೀಯ ಸಂಸ್ಥೆಗಳು ಅಹವಾಲು ಸಲ್ಲಿಸಿದರೆ ಅವುಗಳನ್ನು ದಾಖಲಿಸಬೇಕು. ವಿವಿಧ ರಾಜಕೀಯ ಪಕ್ಷಗಳ ಅಭಿಪ್ರಾಯಗಳನ್ನು ಕೇಳಬೇಕು. ರಾಜ್ಯಗಳಲ್ಲಿಯ ವಿದ್ಯುತ್ ಉತ್ಪಾದನೆಯ ಗತಿಯನ್ನು ಉತ್ತೇಜನಕ್ಕೆ ಮಾನದಂಡಗಳನ್ನು ನಿರ್ಧರಿಸಬೇಕು. ಅರ್ಹ ಫಲಾನುಭವಿಗಳಿಗೆ ನೇರ ವರ್ಗಾವಣೆ ಪ್ರಗತಿಯನ್ನೂ ಗಮನಿಸಬೇಕು. ಇವನ್ನೆಲ್ಲ ಕ್ರೋಢೀಕರಿಸಿ ಈ ಕಡಿಮೆ ಸಮಯದಲ್ಲಿ ವರದಿ ತಯಾರಿಸುವುದೇ ಒಂದು ಸವಾಲಿನ ಕೆಲಸ.
ಇನ್ನಷ್ಟು ಸವಾಲುಗಳು
ಮೊದಲನೆಯದಾಗಿ ಕೇಂದ್ರದ ಸೆಸ್‌ಗಳು ಮತ್ತು ಸರ್ಚಾರ್ಜ್‌ಗಳು ವಿಭಾಗಿಸಲ್ಪಡುವ ತೆರಿಗೆ ಆದಾಯದಲ್ಲಿ ಸೇರದೇ ಪೂರ್ಣವಾಗಿ ಕೇಂದ್ರಕ್ಕೆ ಉಳಿಯುತ್ತಿರುವ ಬಗ್ಗೆ ರಾಜ್ಯಗಳ ತಕರಾರು ಮುಂದುವರಿಯುತ್ತಿದೆ. ಅದರಲ್ಲಿಯೂ ಕೇಂದ್ರ ಮತ್ತು ರಾಜ್ಯದಲ್ಲಿ ವಿಭಿನ್ನ ಪಕ್ಷಗಳ ಆಡಳಿತವಿದ್ದಲ್ಲಿ ವಿರೋಧ ಇನ್ನೂ ತೀವ್ರವಾಗುತ್ತದೆ. ಅಲ್ಲದೆ ಇತ್ತೀಚಿನ ವರ್ಷಗಳಲ್ಲಿ ಕೇಂದ್ರದ ಒಟ್ಟು ತೆರಿಗೆ ಸ್ವೀಕೃತಿಯಲ್ಲಿ ಈ ಸೆಸ್ ಮತ್ತು ಸರ್ಚಾರ್ಜ್ಗಳ ಪ್ರಮಾಣ ತೀರ ಹೆಚ್ಚಾಗುತ್ತದೆ. ಇದೆಲ್ಲ ಎಲ್ಲಾ ರಾಜ್ಯಗಳಿಂದ ತೆರಿಗೆಗಳೊಡನೆ ಸಂಗ್ರಹವಾಗುತ್ತಿದ್ದು, ಎಲ್ಲವೂ ಕೇಂದ್ರಕ್ಕೆ ಉಳಿಯುತ್ತಿದೆಯಲ್ಲ ಎನ್ನುವುದು ರಾಜ್ಯಗಳ ಕೆಂಗಣ್ಣಿಗೆ ಕಾರಣ. ಒಂದೊ ಸೆಸ್ ಸರ್ಚಾರ್ಜ್ಗಳು ರದ್ದಾಗಬೇಕು ಅಥವಾ ವಿಭಜಿಸಲ್ಪಡುವ ತೆರಿಗೆ ಮೊತ್ತದಲ್ಲಿ ಸೇರಬೇಕು ಎಂಬುದು
ರಾಜ್ಯಗಳವಾದ. ಇದನ್ನು ಸರಿಪಡಿಸುವ ಜವಾಬ್ದಾರಿ ಈ ಆಯೋಗಕ್ಕಿದೆ. 14ನೇ ಹಣಕಾಸು ಆಯೋಗವು ರಾಜ್ಯಗಳ ಪಾಲನ್ನು ಶೇ.32ರಿಂದ ಶೇ.42ಕ್ಕೆ ಬರಿಸಿತ್ತು. ಅದೇ ಆಯೋಗದ ಸದಸ್ಯರಾಗಿದ್ದ ಹಿರಿಯ ಅರ್ಥಶಾಸ್ತ್ರಜ್ಞ ಡಿ.ಅಭಿಜಿತ್ ಸೇನ್ ಅವರು ತಮ್ಮ ಭಿನ್ನಮತವನ್ನು ದಾಖಲಿಸುತ್ತ ‘ರಾಜ್ಯಗಳಿಗೆ ಹೆಚ್ಚು ಸಂಪನ್ಮೂಲವನ್ನು ವರ್ಗಾಯಿಸುವ ಅವಶ್ಯಕತೆಯನ್ನು ಒಪ್ಪುತ್ತೇನೆ. ಆದರೂ ಇಷ್ಟು ವರ್ಗಾವಣೆಯಿಂದ ಕೇಂದ್ರದ ಸಂಪನ್ಮೂಲದಲ್ಲಿ ದೇಶದ ಜಿ.ಡಿ.ಪಿ.ಯ ಶೇ.01 ರಷ್ಟು ಕಡಿತವಾಗುವುದನ್ನು ಒಪ್ಪಲಿಕ್ಕಾಗುವುದಿಲ್ಲ’ ಎಂದು ಹೇಳಿದ್ದಾರೆ. ಇದಕ್ಕೆ ಪರ್ಯಾಯ ಹುಡುಕುವುದು ಇಂದಿನ ಅವಶ್ಯವಾಗಿದೆ.
ರಾಜ್ಯಗಳಿಗೆ ವಿತರಿಸುವಾಗ ರಾಜ್ಯಗಳ ಜನಸಂಖ್ಯೆಯನ್ನು ಒಂದು ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಆದರೆ ಕೆಲವು ರಾಜ್ಯಗಳು ಜನಸಂಖ್ಯಾ ನಿಯಂತ್ರಣ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿ ತಮ್ಮ ಜನಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಿಕೊಂಡಿವೆ. ಇನ್ನು ಕೆಲವು ಇದರಲ್ಲಿ ಹಿಂದೆ ಇದ್ದು, ಇದೇ ಮಾನದಂಡವನ್ನು ಮುಂದುವರಿಸಿದರೆ ಜನಸಂಖ್ಯೆ ಕಡಿಮೆ ಮಾಡಿಕೊಂಡ ರಾಜ್ಯಗಳಿಗೆ ಅನ್ಯಾಯವಾಗುವುದಿಲ್ಲವೆ.
ಇದನ್ನೂ ಸರಿಪಡಿಸುವ ಸವಾಲು ಆಯೋಗದ ಮುಂದೆ ಇದೆ. ಕೋಶೀಯ ಶಿಸ್ತಿನ ಬಗ್ಗೆಯೂ ಆಯೋಗ ಗಮನ ಹರಿಸಬೇಕಿದೆ.
ಒಂದು ಮಾತು: ಪ್ರೊ.ಅರವಿಂದ ಪನಗಾರಿಯಾರವರು ಭಾರತವನ್ನು ಇಂಚಿಂಚೂ ಬಲ್ಲವರು. ಅನುಭವಿಗಳು. ಒಂದು ಮಾದರಿ ವರದಿ ಕೊಡುತ್ತಾರೆಂದು ಆಶಿಸೋಣ.
ಅಕ್ಷತಾ ರಜೆಗೆ ಊರಿಗೆ ಬಂದಿದ್ದೆ. ಒಂದು ಬದಿಯಲ್ಲಿ ಬಂಟಾಜೆ ಕಾಡಿನಲ್ಲಿ ಹುಟ್ಟಿ ಸೀರೆ ನದಿಯನ್ನು ಸೇರುವ ತೊರೆ. ಇನ್ನೊಂದು ಬದಿಯಲ್ಲಿ…
'ಎಲೆ? ಯಾವೂರೆಲೆ ಕಂಡರಿ ಇಲ್ಲಿ. ಅರೆಕಲ್ಲ ಮೇಲೆನೆ ಊಟ. ಪ್ಲಾಸ್ಟಿಕ್ ಲೋಟದಲ್ಲಿರೋ ನೀರಾ ಮುಂದಿರೋ ಅರೆಕಲ್ಲ ಮೇಲೆ ಚಿಮುಕಿಸಿ ರೆಡಿ…
ಹಾದಿಬದಿಯ ನಿರಾಶ್ರಿತರು ಆಕಾಶವನ್ನೇ ಹೊದಿಕೆಯಾಗಿಸಿಕೊಂಡು,ಭೂಮಿಯನ್ನೇ ಹಾಸಿಗೆಯನ್ನಾಗಿಸಿ ಕೊಂಡು ಸಿಕ್ಕ ಕೆಲಸ ಮಾಡುತ್ತಾ, ಸಿಕ್ಕಸಿಕ್ಕ ಹಾಗೆ ಬದುಕು ಸವೆಸುತ್ತಾ ಕಳೆಯುತ್ತಾರೆ. ಚಳಿಯಾದರೇನು,…
ಎಚ್.ಡಿ.ಕೋಟೆ : ತಾಲೂಕಿನ ಚೌಡಹಳ್ಳಿ ಗ್ರಾಮದ ಪಕ್ಕದಲ್ಲೇ ಇರುವ ಜಮೀನೊಂದರಲ್ಲಿ ಹಸುವಿನ ಮೇಲೆ ದಾಳಿ ನಡೆಸಿರುವ ಹುಲಿ ಹಸುವನ್ನು ಕೊಂದು…
ಮೈಸೂರು : ಮೈಸೂರು ಮೂಲದ ಗೃಹಿಣಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಉತ್ತರ ಕರ್ನಾಟಕ ಮೂಲದ ಪೊಲೀಸ್ ಕಾನ್ಸ್ ಟೇಬಲ್ ನೊಂದಿಗೆ…