ಅಂಕಣಗಳು

ವರ್ಷಾಂತ್ಯಕ್ಕೆ ಕಾಮರಾಜ್ ಸೂತ್ರದನ್ವಯ ಸಂಪುಟ ಸರ್ಜರಿ?

ಸರ್ಕಾರಕ್ಕೆ ಮಾರಕವಾಗಲಿದೆಯೇ ಪದಚ್ಯುತಿ ಭಿನ್ನಮತೀಯರ ಪಡೆ? 

ಕೆಲ ದಿನಗಳ ಹಿಂದೆ ಕಾಂಗ್ರೆಸ್‌ನ ಹಿರಿಯ ನಾಯಕ ಸಲೀಂ ಅಹ್ಮದ್ ಅವರು ಕುತೂಹಲಕಾರಿ ವಿಷಯವೊಂದನ್ನು ಪ್ರಸ್ತಾಪಿಸಿದರು.

ಅಂದ ಹಾಗೆ ಕರ್ನಾಟಕ ಕಂಡ ಸಜ್ಜನ ಮತ್ತು ಅಗಾಧ ತಿಳಿವಳಿಕೆಯ ನಾಯಕರಲ್ಲಿ ಸಲೀಂ ಅಹ್ಮದ್ ಮುಂಚೂಣಿಯಲ್ಲಿರುವವರು. ರಾಜೀವ್ ಗಾಂಧಿಯವರ ರಾಜಕೀಯ ಪರ್ವ ಕಾಲದಲ್ಲಿ ಮೇಲೆದ್ದು ನಿಂತ ಸಲೀಂ ಅಹ್ಮದ್ ತಂತ್ರಗಾರಿಕೆಯ ರಾಜಕಾರಣ ಮಾಡಿದ್ದರೆ ಯಾವತ್ತೋ ಮಂತ್ರಿಯಾಗಿರುತ್ತಿದ್ದರು. ಅಷ್ಟೇ ಏಕೆ ಮುಖ್ಯಮಂತ್ರಿ ಹುದ್ದೆಯ ಮೆಟೀರಿಯಲ್ ಎನ್ನಿಸಿಕೊಳ್ಳುತ್ತಿದ್ದರು. ಆದರೆ ಪಕ್ಕಾ ಸೆಕ್ಯುಲರ್ ಮನಃ ಸ್ಥಿತಿಯ ಸಲೀಂ ಅಹ್ಮದ್ ಅವರು ಯಾವತ್ತೂ ಅಧಿಕಾರಕ್ಕಾಗಿ ವಾಮಮಾರ್ಗ ಹಿಡಿದವರಲ್ಲ. ಇವತ್ತಿಗೂ ಅವರ ನಿಷ್ಠೆ ಏನಿದ್ದರೂ ಪಕ್ಷಕ್ಕೆ. ಪಕ್ಷದ ಇಚ್ಛೆಗೆ ವಿರುದ್ಧವಾಗಿ ಅವರು ಎಂದೂ ಹೆಜ್ಜೆ ಇಡಲಾರರು.

ಇವತ್ತು ರಾಜ್ಯ ಕಾಂಗ್ರೆಸ್‌ನಲ್ಲಿ ಬಣ ಸಂಘರ್ಷ ನಡೆಯುತ್ತಲೇ ಬಂದಿದೆಯಲ್ಲ ಈ ಬಣ ಸಂಘರ್ಷದಲ್ಲಿ ಸಲೀಂ ಅಹ್ಮದ್ ಯಾವತ್ತೂ ಕಾಣಿಸಿಕೊಂಡಿಲ್ಲ. ಅವರು ಏಕಕಾಲಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಬ್ಬರ ಜತೆಗೂ ನಿಂತವರು.

ಇಂತಹ ಸಲೀಂ ಅಹ್ಮದ್ ಅವರು ಮೊನ್ನೆ ಕುತೂಹಲಕಾರಿ ಹೇಳಿಕೆಯೊಂದನ್ನು ನೀಡಿದರು. ಅವರ ಪ್ರಕಾರ; ಈ ವರ್ಷಾಂತ್ಯದ ವೇಳೆಗೆ ರಾಜ್ಯ ಸಚಿವ ಸಂಪುಟ ಪುನಾರಚನೆಯಾಗಲಿದ್ದು, ಹಾಲಿ ಸಚಿವ ಸಂಪುಟದಲ್ಲಿರುವ ಶೇಕಡಾ ಐವತ್ತರಷ್ಟು ಮಂತ್ರಿಗಳು ಅಧಿಕಾರದಿಂದ ಕೆಳಗಿಳಿದು, ಪಕ್ಷದ ಕೆಲಸಕ್ಕೆ ನಿಯೋಜಿತರಾಗಲಿದ್ದಾರೆ.

ಹೀಗೆ ಮಂತ್ರಿ ಮಂಡಲದಲ್ಲಿರುವವರನ್ನು ತೆಗೆದುಹಾಕಿ ಪಕ್ಷದ ಕೆಲಸಕ್ಕೆ ನಿಯೋಜಿಸುವುದು ಎಂದರೆ ಕಾಮರಾಜ್ ಸೂತ್ರವನ್ನು ಅನುಸರಿಸುವುದು ಎಂದರ್ಥ. ಇಲ್ಲಿ ಕುತೂಹಲ ಏಕೆಂದರೆ, ಅಧಿಕಾರ ಹಂಚಿಕೆಯ ಮಾತು ಅಸ್ಪಷ್ಟವಾಗಿರುವ ಕಾಲದಲ್ಲಿ ಮಂತ್ರಿ ಮಂಡಲ ಪುನಾರಚನೆಯ ಮಾತು ಸ್ಪಷ್ಟವಾಗಿ ಉಲ್ಲೇಖ ಆಗಿರುವುದು.

ಅರ್ಥಾತ್, ಅಧಿಕಾರ ಹಂಚಿಕೆಯ ಮಾತಿಗೆ ಪಕ್ಷದ ವರಿಷ್ಠರು ಇದುವರೆಗೆ ಉತ್ತರ ನೀಡದೆ ಹೋದರೂ ಮಂತ್ರಿ ಮಂಡಲ ಪುನಾರಚನೆ ಮಾಡುವ ಸಂದೇಶವಂತೂ ವರಿಷ್ಠರಿಂದ ರವಾನೆಯಾಗಿದೆ. ಇವತ್ತು ವರಿಷ್ಠರ ಸಂದೇಶ ಇಲ್ಲದೆ ಸಲೀಂ ಅಹ್ಮದ್ ಅವರಂತಹ ಪಕ್ಷ ನಿಷ್ಠ ನಾಯಕರು ಮಾತನಾಡಲು ಸಾಧ್ಯವೇ ಇಲ್ಲ. ಇಲ್ಲಿ ಗಮನಿಸಬೇಕಿರುವ ಸಂಗತಿ ಎಂದರೆ ಹಾಲಿ ಮಂತ್ರಿ ಮಂಡಲವನ್ನು ಪುನಾರಚಿಸುವ ಇಂಗಿತ ವರಿಷ್ಠರಲ್ಲೇಕಿದೆ ಎಂಬುದು. ವಾಸ್ತವವಾಗಿ ಬಿಹಾರ ವಿಧಾನಸಭಾ ಚುನಾವಣೆಯ ನಂತರ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಟಾನಿಕ್ ನೀಡಬೇಕು ಎಂಬುದು ವರಿಷ್ಠರ ಇಂಗಿತ.

ಕಳೆದ ಹನ್ನೊಂದು ವರ್ಷಗಳಿಂದ ದಿಲ್ಲಿ ಗದ್ದುಗೆಯಿಂದ ದೂರವಿದ್ದು, ಹತಾಶ ಸ್ಥಿತಿಯಲ್ಲಿ ನಿಂತಿರುವ ಪಕ್ಷಕ್ಕೆ ಟಾನಿಕ್ ನೀಡದೆ ಇದ್ದರೆ ಮುಂದಿನ ಲೋಕಸಭಾ ಚುನಾವಣೆಯ ಹೊತ್ತಿಗೆ ಪರಿಸ್ಥಿತಿ ಮತ್ತಷ್ಟು ಗಂಡಾಂತರಕಾರಿಯಾಗಲಿದೆ ಎಂಬುದು ವರಿಷ್ಠರಿಗೆ ಗೊತ್ತು. ಹೀಗಾಗಿ ದೇಶದ ಎಲ್ಲ ರಾಜ್ಯ ಘಟಕಗಳನ್ನೂ ಗಟ್ಟಿಗೊಳಿಸಲು ಮತ್ತು ಪಕ್ಷದ ಸರ್ಕಾರ ಎಲ್ಲೆಲ್ಲಿವೆಯೋ ಅಲ್ಲಿ ಮಂತ್ರಿಮಂಡಲ ಪುನಾರಚನೆಯಂತಹ ಕೆಲಸಕ್ಕೆ ಕಾಮರಾಜ್ ಸೂತ್ರವನ್ನು ಜಾರಿಗೊಳಿಸುವುದು ಕೈ ವರಿಷ್ಠರ ಲೆಕ್ಕಾಚಾರ.

ಅಂದ ಹಾಗೆ ಕರ್ನಾಟಕದಲ್ಲಿ ಕಾಮರಾಜ್ ಸೂತ್ರವನ್ನು ಕಾಂಗ್ರೆಸ್ ಪಕ್ಷ ಮಾತ್ರವಲ್ಲ, ಜನತಾ ಪರಿವಾರದ ಸರ್ಕಾರಗಳೂ ಅನುಸರಿಸಿವೆ. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದರಲ್ಲ, ಆ ಸಂದರ್ಭದಲ್ಲಿ ಹೆಗಡೆ ಅವರು ಕಾಮರಾಜ್ ಸೂತ್ರವನ್ನು ಅನುಸರಿಸುವ ಮೂಲಕ ಘಟಾನುಘಟಿ ನಾಯಕರಿಗೆ ತಮ್ಮ ಸಂಪುಟದಿಂದ ಕೊಕ್ ನೀಡಿದ್ದರಲ್ಲದೆ, ಆ ಪೈಕಿ ಹಲವರನ್ನು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನಾಗಿ ಮತ್ತು ಕೆಲವರನ್ನು ಪಕ್ಷದ ಕೆಲಸಕ್ಕೆ ನಿಯೋಜಿಸಿದ್ದರು.

ಹೆಗಡೆ ಅವರ ಈ ಪ್ರಯತ್ನ ದೊಡ್ಡ ಮಟ್ಟದಲ್ಲೇ ಯಶಸ್ವಿಯಾಗಿತ್ತು. ಮುಂದೆ ಈ ಕಾಮರಾಜ್ ಸೂತ್ರವನ್ನು ಸಣ್ಣ ಮಟ್ಟದಲ್ಲಾದರೂ ಎಚ್.ಡಿ. ದೇವೇಗೌಡರು ಜಾರಿಗೊಳಿಸಿದ್ದರು. ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಸಚಿವ ಸಂಪುಟದಲ್ಲಿದ್ದ ಹಲವು ಸಚಿವರು ಮಂತ್ರಿಗಿರಿಯಿಂದ ಕೆಳಗಿಳಿದು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಾಗಿದ್ದರು. ಯಥಾಪ್ರಕಾರ, ೧೯೯೬ರ ಲೋಕಸಭಾ ಚುನಾವಣೆಯಲ್ಲಿ ಈ ಪ್ರಯೋಗ ಯಶಸ್ವಿಯಾಗಿ ಅನುಷ್ಠಾನಗೊಂಡಿತು. ಆದರೆ ಈಗ ಕಾಮರಾಜ್ ಸೂತ್ರವನ್ನು ಒಂದು ಮಟ್ಟದಲ್ಲಾದರೂ ಜಾರಿಗೆ ತರಲು ಹೊರಟಿರುವ ಕಾಂಗ್ರೆಸ್ ವರಿಷ್ಠರು, ವರ್ಷಾಂತ್ಯದ ಹೊತ್ತಿಗೆ ಹದಿನೈದಕ್ಕೂ ಹೆಚ್ಚು ಮಂತ್ರಿಗಳಿಗೆ ಕೊಕ್ ಕೊಡಲು ಹೊರಟಿದ್ದಾರೆ.

ಆದರೆ ಹೀಗೆ ಮಂತ್ರಿಗಿರಿಯಿಂದ ಕೆಳಗಿಳಿಯುವವರಿಗೆ ಪರ್ಯಾಯ ರಾಜಕಾರಣದ ಮಾರ್ಗಗಳೇನೂ ಇಲ್ಲ. ಏಕೆಂದರೆ, ಮೊದಲನೆಯದಾಗಿ ಲೋಕಸಭಾ ಚುನಾವಣೆಗಳು ಹತ್ತಿರದಲ್ಲಿಲ್ಲ. ಹೀಗಾಗಿ ಈ ಬಾರಿ ಮಂತ್ರಿಗಿರಿಯಿಂದ ಕೊಕ್ ಪಡೆಯುವವರು ನೇರವಾಗಿ ಪಕ್ಷದ ಕೆಲಸಕ್ಕೇ ನಿಯೋಜನೆಯಾಗಲಿದ್ದಾರೆ. ಅದೇ ರೀತಿ ಇವರ ಪದಚ್ಯುತಿಯಿಂದ ತೆರವಾಗುವ ಸ್ಥಾನಗಳಿಗೆ ಪಕ್ಷದಲ್ಲಿರುವ ಅತೃಪ್ತರನ್ನು ನೇಮಕ ಮಾಡುವ ಮೂಲಕ ಕುದಿಯುತ್ತಿರುವ ಗೊಂದಲವನ್ನು ಶಮನಗೊಳಿಸಬಹುದು ಎಂದು ವರಿಷ್ಠರು ಯೋಚನೆ ಮಾಡಿದ್ದಾರೆ. ಆದರೆ ಅವರ ಈ ಯೋಚನೆ ಅಷ್ಟು ಸರಳವಾಗಿಲ್ಲ. ಏಕೆಂದರೆ, ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿರುವ ಬಹುತೇಕರು ಅನುಭವಿಗಳು. ಹಲವು ಬಾರಿ ಮಂತ್ರಿಗಳಾಗಿ ಕೆಲಸ ಮಾಡಿದವರು. ಅಂತಹವರು ಮಂತ್ರಿಗಿರಿಯಿಂದ ಕೆಳಗೆ ಇಳಿದರೆ ಸುಮ್ಮನಿರುತ್ತಾರಾ? ನಿಶ್ಚಿತವಾಗಿಯೂ ಇಲ್ಲ. ಏಕೆಂದರೆ ಒಂದು ಕಾಲದಲ್ಲಿ ಕಾಮರಾಜ್ ಸೂತ್ರವನ್ನು ಜಾರಿಗೊಳಿಸಿದರೆ ಅದಕ್ಕೆ ಪಕ್ಷವನ್ನು ಬಲಪಡಿಸುವ ಕನಸಿದೆ ಎಂದು ಸಮರ್ಥನೆ ಮಾಡಿಕೊಳ್ಳಬಹುದಿತ್ತು. ಆದರೆ ಈಗ ಕಾಮರಾಜ್ ಸೂತ್ರದಡಿ ಮಂತ್ರಿಗಳನ್ನು ಕೈ ಬಿಟ್ಟು ಪಕ್ಷದ ಕೆಲಸಕ್ಕೆ ನಿಯೋಜಿಸುವುದು ಮತ್ತು ಅದನ್ನು ದಕ್ಕಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಏಕೆಂದರೆ ಇವತ್ತು ಮಂತ್ರಿಗಳಾಗಿರುವ ಬಹುತೇಕರು ತಮ್ಮ ತಮ್ಮ ವಿಶೇಷ ಅರ್ಹತೆಗಳನ್ನು ಹೈಕಮಾಂಡ್‌ಗೆ ತೋರಿಸಿಯೇ ಮಂತ್ರಿಗಳಾದವರು. ಹೀಗೆ ತಮ್ಮ ವಿಶೇಷ ಅರ್ಹತೆಗಳನ್ನು ತೋರಿಸಿ ಮಂತ್ರಿಗಳಾಗಿದ್ದರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಮಂತ್ರಿಗಿರಿಯಿಂದ ಕೆಳಗಿಳಿಸಿದರೆ, ಹೀಗೆ ಇಳಿದವರ ಪಡೆಯೇ ರಾಜ್ಯ ಕಾಂಗ್ರೆಸ್‌ನ ಮೊದಲ ಭಿನ್ನಮತೀಯ ಪಡೆಯಾಗುತ್ತದೆ.

ಇವತ್ತು ರಾಜ್ಯ ಕಾಂಗ್ರೆಸ್‌ನಲ್ಲಿ ಅತೃಪ್ತರ ಪಡೆ ಇರಬಹುದು. ಆದರೆ ಭಿನ್ನಮತೀಯರ ಪಡೆ ಇದುವರೆಗೂ ಎದ್ದು ನಿಂತಿಲ್ಲ. ಆದರೆ ವರ್ಷಾಂತ್ಯದ ಹೊತ್ತಿಗೆ ಕಾಮರಾಜ್ ಸೂತ್ರವನ್ನು ಅನುಸರಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾದರೆ ಪ್ರಬಲ ಭಿನ್ನಮತೀಯ ಪಡೆ ಮೇಲೆದ್ದು ನಿಲ್ಲುತ್ತದೆ. ಈ ಭಿನ್ನಮತೀಯರ ಪಡೆ ಸರ್ಕಾರವನ್ನು ಅಲುಗಾಡಿಸುವ ಹಂತಕ್ಕೆ ಹೋದರೂ ಅಚ್ಚರಿಯಿಲ್ಲ.

” ತಮ್ಮ ವಿಶೇಷ ಅರ್ಹತೆಗಳನ್ನು ತೋರಿಸಿ ಮಂತ್ರಿಗಳಾಗಿದ್ದರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಮಂತ್ರಿಗಿರಿಯಿಂದ ಕೆಳಗಿಳಿಸಿದರೆ, ಹೀಗೆ ಇಳಿದವರ ಪಡೆಯೇ ರಾಜ್ಯ ಕಾಂಗ್ರೆಸ್‌ನ ಮೊದಲ ಭಿನ್ನಮತೀಯ ಪಡೆಯಾಗುತ್ತದೆ.”

-ಬೆಂಗಳೂರು ಡೈರಿ

ಆರ್‌.ಟಿ.ವಿಠ್ಠಲಮೂರ್ತಿ

ಆಂದೋಲನ ಡೆಸ್ಕ್

Recent Posts

ದಿಲ್ಲಿ ಗಣರಾಜ್ಯೋತ್ಸವ ಸ್ತಬ್ಧಚಿತ್ರ 2026 : ಕೃಷಿ ಮತ್ತು ತಂತ್ರಜ್ಞಾನದ ಸಮಾಗಮ

ಬೆಂಗಳೂರು : ಭಾರತವನ್ನು ಆತ್ಮನಿರ್ಭರ ರಾಷ್ಟ್ರವನ್ನಾಗಿಸುವ ದಿಶೆಯಲ್ಲಿ ಕರ್ನಾಟಕದಂತಹ ಸ್ವಾವಲಂಬಿ ರಾಜ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ…

5 hours ago

ಮ.ಬೆಟ್ಟ | ಪಾದಯಾತ್ರಿ ಮೇಲೆ ದಾಳಿ ಮಾಡಿದ್ದ ಚಿರತೆ ಸೆರೆ ; ನಿಟ್ಟುಸಿರು ಬಿಟ್ಟ ಯಾತ್ರಾರ್ಥಿಗಳು

ಹನೂರು : ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ…

6 hours ago

ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌ : 5 ವರ್ಷ ವಯೋಮಿತಿ ಸಡಿಲಿಕೆಗೆ ಸಚಿವ ಸಂಪುಟ ಒಪ್ಪಿಗೆ!

ಬೆಂಗಳೂರು : ರಾಜ್ಯದ ಎಲ್ಲಾ ರೀತಿಯ ಸಿವಿಲ್ ಹುದ್ದೆಗಳಿಗೆ 2027ರ ಡಿಸೆಂಬರ್ 31ರವರೆಗೆ ಹೊರಡಿಸುವ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ…

7 hours ago

ಇವಿ ವಾಹನ ಸವಾರರಿಗೆ ಸಿಹಿ ಸುದ್ದಿ : ಮಂಡ್ಯದಲ್ಲಿ ಮೊದಲ ಇವಿ ಫಾಸ್ಟ್‌ ಚಾರ್ಜಿಂಗ್‌ ಕೇಂದ್ರ ಆರಂಭ

ಮಂಡ್ಯ : ಸಾರ್ವಜನಿಕರಿಗೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ವು ಜಿಲ್ಲೆಯಲ್ಲಿ…

8 hours ago

ಜಾ.ದಳ ಓಡಿಸಲು ಚಲುವರಾಯಸ್ವಾಮಿಗೆ ಸಾಧ್ಯವೇ? : ಜೆಡಿಎಸ್‌ ನಾಯಕ ಸುರೇಶ್‌ ಗೌಡ ಪ್ರಶ್ನೆ

ಮಂಡ್ಯ : ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯದ್ದು ಬರಿ ಡಬಲ್ ಸ್ಟ್ಯಾಂಡರ್ಡ್ ನಾಟಕವಾಗಿದೆ. ಜಾತ್ಯತೀತ ಜನತಾದಳವನ್ನು ಓಡಿಸುವುದಕ್ಕೆ ಅವರಿಗೆ ತಾಕತ್ತಿದೆಯೇ?.…

8 hours ago

ಜಮೀನು ಕಬಳಿಕೆ ಪ್ರಕರಣ | ಸಚಿವ ಚಲುವರಾಯಸ್ವಾಮಿಯೇ ನೇರ ಹೊಣೆ : ಸುರೇಶ್‌ಗೌಡ ಆರೋಪ

ನಾಗಮಂಗಲ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ ಮಂಡ್ಯ : ನಾಗಮಂಗಲ ತಾಲ್ಲೂಕಿನ ನಕಲಿ ದಾಖಲೆ ಸೃಷ್ಟಿ…

8 hours ago