Blood soaked Kurdish armed
ಡಿ.ವಿ.ರಾಜಶೇಖರ
ಸಮಕಾಲೀನ ಜಗತ್ತಿನಲ್ಲಿ ಅತ್ಯಂತ ಹಿಂಸಾತ್ಮಕ ಎಂದು ಕುಖ್ಯಾತವಾದ ಟರ್ಕಿ, ಇರಾಕ್, ಸಿರಿಯಾದಲ್ಲಿ ನಡೆಯುತ್ತಿರುವ ಕರ್ದೀಸ್ತಾನ್ ಸಶಸ್ತ್ರ ಹೋರಾಟ ಅಂತ್ಯವಾಗುತ್ತಿರುವಂತೆ ಕಾಣುತ್ತಿದೆ. ಶಸ್ತ್ರಗಳನ್ನು ಕೆಳಗಿಳಿಸುವಂತೆ ಟರ್ಕಿಯ ಜೈಲಿನಲ್ಲಿರುವ ಸ್ವತಂತ್ರ ಕರ್ದೀಸ್ತಾನ್ ನಾಯಕ ಅಬ್ದುಲ್ಲಾ ಓಕಲಾನ್ ಹೋರಾಟಗಾರರಿಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಪಶ್ಚಿಮ ಏಷ್ಯಾ ಬದಲಾವಣೆಯತ್ತ ಹೊರಳುತ್ತಿರುವಂತೆ ಕಾಣುತ್ತಿದೆ.
ಬಹುಪಾಲು ಸುನ್ನಿ ಜನಾಂಗಕ್ಕೆ ಸೇರಿದ ಕರ್ದರು ಟರ್ಕಿ, ಇರಾಕ್, ಸಿರಿಯಾ ಮತ್ತು ಇರಾನ್‌ನಲ್ಲಿ ನೆಲೆಸಿದ್ದು ಸುಮಾರು ನಾಲ್ಕು ದಶಕಗಳಿಂದ ಸ್ವತಂತ್ರ ದೇಶ ರಚನೆಗಾಗಿ ಸಶಸ್ತ್ರ ಹೋರಾಟ ನಡೆಸುತ್ತಾ ಬಂದಿದ್ದಾರೆ. ೧೯೮೭ರಲ್ಲಿ ಆರಂಭವಾದ ಕರ್ದಿಷ್ ವರ್ಕರ್ಸ್ ಪಾರ್ಟಿ (ಪಿಕೆಕೆ) ಸಂಘಟನೆಯ ಅಡಿಯಲ್ಲಿ ಹೋರಾಟ ನಡೆಯುತ್ತಾ ಬಂದಿದೆ. ನಾಲ್ಕೂ ದೇಶಗಳಲ್ಲಿ ನೆಲೆಸಿರುವ ಕರ್ದರ ಜನಸಂಖ್ಯೆ ಸುಮಾರು ಐದು ಕೋಟಿ. ಕರ್ದ್ ಹೋರಾಟಗಾರರ ಸಂಖ್ಯೆ ನಿಖರವಾಗಿ ಗೊತ್ತಿಲ್ಲವಾದರೂ ಕನಿಷ್ಠ ಎರಡು ಕೋಟಿ ಯುವಕರು ಹೋರಾಟಗಾರರ ಭಾಗವಾಗಿದ್ದಾರೆ ಎನ್ನಲಾಗಿದೆ. ಈ ಪೈಕಿ ಮೂವತ್ತರಿಂದ ನಲ್ವತ್ತು ಲಕ್ಷ ಹೋರಾಟಗಾರರು ಮಹಿಳೆಯರು ಎನ್ನುವುದು ಜಗತ್ತಿನ ಗಮನ ಸೆಳೆದಿದೆ. ಅದರಲ್ಲಿಯೂ ಅತ್ಯಂತ ಸುಂದರ ಗೆರಿಲ್ಲಾ ಮಹಿಳೆಯರಿರುವ ಸಂಘಟನೆ ಪಿಕೆಕೆ ಎಂದೂ ಮಾಧ್ಯಮಗಳು ವರ್ಣಿಸಿವೆ.
ನಾಲ್ಕೂ ದೇಶಗಳಲ್ಲಿ ಕರ್ದ್ ಗೆರಿಲ್ಲಾಗಳ ಹಿಂಸಾತ್ಮಕ ದಾಳಿಗೆ ಕನಿಷ್ಠ ೬೦ ಸಾವಿರ ಜನರು ಬಲಿಯಾಗಿದ್ದಾರೆ ಎಂದು ಹೇಳಲಾಗಿದೆ. ಪಿಕೆಕೆ ನಾಯಕ ಅಬ್ದುಲ್ಲಾ ಓಕಲಾನ್ ಅವರ ಈ ನಿರ್ಧಾರಕ್ಕೆ ನಿರ್ದಿಷ್ಟ ಕಾರಣ ಗೊತ್ತಾಗಿಲ್ಲ. ಕರ್ದರ ಸಮಸ್ಯೆಗೆ ರಾಜಕೀಯ ಪರಿಹಾರ ಕಂಡುಕೊಳ್ಳುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಆಗುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಓಕಲಾನ್ ಈ ನಿರ್ಧಾರಕ್ಕೆ ಬಂದಿರಬಹುದೆಂದು ಊಹಿಸಲಾಗಿದೆ. ಸ್ವತಂತ್ರ ಪ್ಯಾಲೆಸ್ಟೇನ್ ದೇಶಕ್ಕಾಗಿ ಹೋರಾಡುತ್ತಿದ್ದ ಹಮಾಸ್ ಹೋರಾಟಗಾರರಿಗೆ ಬಂದ ಗತಿ, ಸಿರಿಯಾದಲ್ಲಿ ಕರ್ದರನ್ನು ಮೂಲೆಗುಂಪು ಮಾಡಿ ಸರ್ಕಾರ ರಚನೆ, ಇರಾಕ್‌ನಲ್ಲಿ ಕರ್ದ್ ಹೋರಾಟಕ್ಕೆ ಬೆಂಬಲ ನೀಡಿದ್ದ ಅಮೆರಿಕದ ಈಗಿನ ನಿರಾಸಕ್ತಿ ಮುಂತಾದವು ಈ ಬೆಳವಣಿಗೆಗೆ ಕಾರಣ ವಾಗಿರಬಹುದೆಂದು ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಇದೇನೇ ಇದ್ದರೂ ಹೋರಾಟ ವಾಪಸ್ ಪಡೆದು ಟರ್ಕಿಯಲ್ಲಿ ಕದನ ವಿರಾಮ ಘೋಷಿಸಿ ರುವುದಾಗಿ ಓಕಲಾನ್ ಹೇಳಿದ್ದಾರೆ. ಜೈಲಿನಲ್ಲಿರುವ ಓಕಲಾನ್ ಅವರ ಈ ಹೇಳಿಕೆಯ ಹಿಂದೆ ಟರ್ಕಿ ಸರ್ಕಾರದ ಕೈವಾಡ ಇದೆಯೇ ಇಲ್ಲವೇ ಎಂಬುದು ಇನ್ನು ತಿಳಿಯಬೇಕಿದೆ. ಶಸ್ತ್ರ ತ್ಯಾಗ ಮಾಡಬೇಕಾದರೆ ಅವುಗಳನ್ನು ಯಾರಿಗೆ ಒಪ್ಪಿಸಬೇಕು? ಶಸ್ತ್ರ ತ್ಯಾಗದ ನಂತರ ಹೋರಾಟಗಾರರ ಮುಂದಿನ ಹೆಜ್ಜೆ ಯಾವುದಿರಬೇಕು ಎಂಬುದು ಇನ್ನೂ ಸ್ಪಷ್ಟವಿಲ್ಲದಿರುವುದರಿಂದ ಆತಂಕ ಇನ್ನೂ ಉಳಿದಿದೆ.
ಜುರಾತೃಷ್ಟ್ರ ಪಂಥಕ್ಕೆ ಸೇರಿದವರಾದ ಕರ್ದ್ ಜನಾಂಗ ಮುಸ್ಲಿಮರಲ್ಲಿ ಸ್ವಲ್ಪ ಭಿನ್ನವಾದುದು. ಧಾರ್ಮಿಕ ಕಟ್ಟುನಿಟ್ಟು ಸ್ವಲ್ಪ ಕಡಿಮೆ. ಬಹುಪಾಲು ಮಂದಿ ಉದಾರವಾದಿಗಳು. ಸ್ವತಂತ್ರ ದೇಶ ರಚಿಸಬೇಕೆಂಬ ಕನಸಿಗೆ ಕಟ್ಟುಬಿದ್ದು ಕರ್ದರು ಪಟ್ಟಪಾಡು ಹೇಳತೀರದು. ಯಾವುದೇ ದೇಶದಲ್ಲಿ ಅವರು ಬಹುಸಂಖ್ಯಾತರಲ್ಲ. ಇರಾಕ್, ಇರಾನ್, ಸಿರಿಯಾ, ಟರ್ಕಿಯ ಕೆಲವು ಪ್ರದೇಶಗಳಲ್ಲಿ ಅವರು ಬಹುಸಂಖ್ಯಾತರಿದ್ದಾರೆ.
ಟರ್ಕಿಯಲ್ಲಿ ಎರಡು ಪ್ರದೇಶಗಳಲ್ಲಿ ಅವರು ಬಹುಸಂಖ್ಯಾತರಿದ್ದರೂ ಆ ಪ್ರದೇಶಗಳಿಗೆ ಸ್ವಾಯತ್ತತೆ ನೀಡಿಲ್ಲ. ಟರ್ಕಿಯ ಅಧ್ಯಕ್ಷ ಎರ್ಡೋಗನ್ ಆಡಳಿತದಲ್ಲಿ ಅವರ ದಮನ ನಡೆಯುತ್ತಲೇ ಬಂದಿದೆ. ಇರಾಕ್‌ನಲ್ಲಿ ಕರ್ದೀಸ್ತಾನ ಎಂಬ ಪ್ರದೇಶವಿದೆ. ಸದ್ದಾಂ ಹುಸೇನ್ ಅಧ್ಯಕ್ಷರಾಗಿದ್ದಾಗ ಕರ್ದರನ್ನು ಮುಗಿಸಲು ರಾಸಾಯನಿಕ ಅಸ್ತ್ರ ಪ್ರಯೋಗಿಸಿದ ಕ್ರೂರ ಉದಾಹರಣೆಯಿದೆ. ಇರಾಕ್‌ನಲ್ಲಿ ಪರಮಾಣು ಅಸ್ತ್ರಗಳಿರಬಹುದು ಎಂಬ ಸಂಶಯದ ಮೇಲೆ ಅಮೆರಿಕ ಸದ್ದಾಂ ಹುಸೇನ್ ಅವರನ್ನು ಪದಚ್ಯುತಿಗೊಳಿಸಲು ಪ್ರಯತ್ನಗಳನ್ನು ನಡೆಸಿತು. ಈ ಯತ್ನದ ಭಾಗವಾಗಿ ಅಮೆರಿಕ ಕರ್ದ್ ಹೋರಾಟಗಾರರಿಗೆ ಬೆಂಬಲ ನೀಡಲಾರಂಭಿಸಿತು. ಕರ್ದೀಸ್ತಾನವನ್ನು ಸ್ವಾಯತ್ತ ಪ್ರದೇಶದಂತೆ ಮಾಡಿ ಅದಕ್ಕೆ ವೈಮಾನಿಕ ರಕ್ಷಣೆ ನೀಡಿತು. ಅಮೆರಿಕದ ಈ ನೆರವಿನಿಂದ ಕರ್ದ್ ಹೋರಾಟಗಾರರು ಸದ್ದಾಂ ಹುಸೇನ್ ಆಡಳಿತಕ್ಕೆ ದೊಡ್ಡ ಸವಾಲಾಗಿದ್ದರು. ಸದ್ದಾಂ ಹುಸೇನ್ ನಿರ್ಗಮನ ಹೊಸ ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಿತು. ಇರಾಕ್ ಮತ್ತು ಸಿರಿಯಾ ಮಧ್ಯೆ ಐಎಸ್‌ಐಎಸ್ ಇಸ್ಲಾಮಿಕ್ ಉಗ್ರಗಾಮಿಗಳು ಸ್ವತಂತ್ರ ಇಸ್ಲಾಮಿಕ್ ದೇಶ ರಚನೆಗೆ ಮುಂದಾದರು. ಆಗ ಅಮೆರಿಕ ಕರ್ದ್ ಹೋರಾಟಗಾರರಿಗೆ ಬೆಂಬಲ ನೀಡಿ ಐಎಸ್ಐಎಸ್ ಉಗ್ರಗಾಮಿಗಳ ವಿರುದ್ದ ಹೋರಾಟಕ್ಕೆ ಇಳಿಸಿತು. ಐಎಸ್‌ಐಸ್ ಉಗ್ರಗಾಮಿಗಳನ್ನು ಮುಗಿಸುವಲ್ಲಿ ಕರ್ದ್ ಹೋರಾಟಗಾರರು ಬಹುಪಾಲು ಯಶಸ್ವಿಯಾದರು. ಯಶಸ್ಸಿನ ಹಿನ್ನೆಲೆಯಲ್ಲಿ ಕರ್ದ್ ಹೋರಾಟಗಾರರು ಇರಾಕ್-ಸಿರಿಯಾ ನಡುವೆ ಸ್ವತಂತ್ರ ದೇಶವನ್ನು ರಚಿಸುವ ಪ್ರಯತ್ನಕ್ಕೆ ಕೈಹಾಕಿದರು. ಈ ಬೆಳವಣಿಗೆ ಟರ್ಕಿಯ ಎರ್ಡೋಗನ್‌ಗೆ ಗಾಬರಿ ಹುಟ್ಟಿಸಿತು. ಕರ್ದ್ ಹೋರಾಟಗಾರರ ವಿರುದ್ಧ ಐಎಸ್‌ಐಎಸ್‌ಗೆ ಟರ್ಕಿ ರಹಸ್ಯವಾಗಿ ಬೆಂಬಲ ನೀಡಲಾರಂಭಿಸಿತು. ಕರ್ದ್ ಹೋರಾಟಗಾರರು ಎರ್ಡೋಗನ್ ವಿರುದ್ಧ ದೊಡ್ಡ ಯುದ್ಧ ಘೋಷಿಸಿ ಟರ್ಕಿಯಲ್ಲಿ ಹಿಂಸಾಚಾರ ನಡೆಸಿದರು. ಟರ್ಕಿಯನ್ನು ಅಸ್ಥಿರಗೊಳಿಸುವಲ್ಲಿ ಕರ್ದರು ಯಶಸ್ವಿಯಾದರು. ಆದರೆ ಕರ್ದರ ಉದ್ದೇಶ ಮಾತ್ರ ಈಡೇರಲಿಲ್ಲ.
ಸಿರಿಯಾದಲ್ಲಿಯೂ ಕರ್ದರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಇತ್ತೀಚಿನ ಕೆಲವು ವರ್ಷಗಳ ಬೆಳವಣಿಗೆಗಳಲ್ಲಿ ಸಿರಿಯಾದ ಅಧ್ಯಕ್ಷ ಬಷಾರ್ ಅಸ್ಸಾದ್ ಪದಚ್ಯುತಿಗೊಂಡಿದ್ದಾರೆ. ಅಸ್ಸಾದ್ ವಿರೋಧಿ ಹೋರಾಟಗಾರರೆಲ್ಲಾ ಒಂದಾಗಿ ಸಿರಿಯಾ ಮೇಲೆ ಮುಗಿಬಿದ್ದಿದ್ದಾರೆ. ರಷ್ಯಾ ಬೆಂಬಲದ ಅಸ್ಸಾದ್ ಪ್ರತಿರೋಧ ಒಡ್ಡಲಾಗದೆ ಪರಾರಿಯಾಗಿದ್ದಾರೆ. ಅಸ್ಸಾದ್ ವಿರೋಧಿ ಹೊರಾಟಗಾರರ ಸಂಘಟನೆಯಲ್ಲಿ ಕರ್ದ್ ಹೋರಾಟಗಾರರೂ ಭಾಗಿಯಾಗಿದ್ದರು. ಅಮೆರಿಕ ಬೆಂಬಲದ ಸಶಸ್ತ್ರ ಹೋರಾಟಗಾರರು ಅಸ್ಸಾದ್ ಪದಚ್ಯುತಿಗೊಳಿಸುವಲ್ಲಿ ಸಫಲರಾದರು. ಸುನ್ನಿ ಜನಾಂಗಕ್ಕೆ ಸೇರಿದ ಹೋರಾಟಗಾರ ಅಹಮದ್ ಅಲ್ ಷಾರಾ ತಾತ್ಕಾಲಿಕವಾಗಿ ಅಧ್ಯಕ್ಷರಾಗಿ ಅಽಕಾರಕ್ಕೆ ಬಂದರು. ಕರ್ದ್ ಹೋರಾಟಗಾರರು ಕೆಲವು ಪ್ರದೇಶಗಳನ್ನು ತಮ್ಮ ಹಿಡಿತದಲ್ಲಿ ಇಟ್ಟು ಕೊಂಡಿದ್ದರು. ಕರ್ದ್ ಹೋರಾಟಗಾರರನ್ನು ಅಽಕಾರದಿಂದ ದೂರ ಇಡುವ ಪ್ರಯತ್ನಗಳು ಆರಂಭವಾದವು. ಶಸ್ತ್ರ ತ್ಯಾಗ ಮಾಡಬೇಕೆಂಬ ಆದೇಶ ಹೊರಟಿತು. ಅಮೆರಿಕ ಈ ಸಂದರ್ಭದಲ್ಲಿಯು ಕರ್ದ್ ಹೋರಾಟಗಾರರ ಪರ ನಿಲ್ಲಲಿಲ್ಲ. ಸ್ವತಂತ್ರ ಕರ್ದ್ ದೇಶ ರಚನೆ ಕನಸು ಸಿರಿಯಾದಲ್ಲಿಯೂ ವಿಫಲವಾಯಿತು. ಕರ್ದರು ಇರುವ ಕಡೆಯಲ್ಲೆಲ್ಲಾ ಒಂದೊಂದು ದೇಶ ರಚನೆ ಹೇಗೆ ಸಾಧ್ಯ ಎನ್ನುವ ಪ್ರಶ್ನೆಯನ್ನು ಅಮೆರಿಕ ಮುಂದಿಟ್ಟಿದೆ. ಟರ್ಕಿಯಲ್ಲಿ ಹೆಚ್ಚು ಕರ್ದ್ ಜನರಿರುವುದರಿಂದ ಅಲ್ಲಿ ಸ್ವತಂತ್ರ ದೇಶ ರಚನೆ ಮಾಡಬಹುದು ಎಂದು ಅಭಿಪ್ರಾಯ ಮೊದಲು ಇತ್ತು. ಆದರೆ ಅಧ್ಯಕ್ಷ ಎರ್ಡೋಗನ್ ಜನರಲ್ಲಿರುವ ರಾಷ್ಟ್ರೀಯತೆಯ ಭಾವಾವೇಶವನ್ನು ಬಡಿದೆಬ್ಬಿಸುವಲ್ಲಿ ಸಫಲರಾಗಿದ್ದಾರೆ. ಟರ್ಕಿಯನ್ನು ಒಡೆಯಲು ಜನರು ಒಪ್ಪುವುದಿಲ್ಲ.
ಹೀಗಾಗಿ ಸಮಸ್ಯೆಗೆ ರಾಜಕೀಯ ಪರಿಹಾರ ಕಂಡುಕೊಳ್ಳುವುದೊಂದೇ ದಾರಿಯಾಗಿದೆ. ಕರ್ದರ ಪಿಕೆಕೆಯನ್ನು ಭಯೋತ್ಪಾದಕ ಸಂಘಟನೆಯೆಂದು ಘೋಷಿಸಲಾಗಿದೆ. ೧೯೯೯ರಷ್ಟು ಹಿಂದೆಯೇ ಕರ್ದರ ನಾಯಕ ಓಕಲಾನ್ ಅವರನ್ನು ಬಂಧಿಸಿ ಜೈಲಿನಲ್ಲಿಡಲಾಗಿದೆ. ಅವರಿಗೆ ಮೊದಲು ಗಲ್ಲು ಶಿಕ್ಷೆ ವಿಧಿಸಲಾಗಿತ್ತಾದರೂ ನಂತರ ಶಿಕ್ಷೆಯನ್ನು ಜೀವಾವಧಿಗೆ ಇಳಿಸಲಾಗಿದೆ. ಇದೇನೇ ಇದ್ದರೂ ಅವರ ಬಿಡುಗಡೆಯಾಗದೆ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇಲ್ಲ. ಕರ್ದರು ನಾಲ್ಕು ದಶಕಗಳಿಂದ ಹೋರಾಟ ಮಾಡುತ್ತ ಬಂದಿದ್ದಾರೆ. ಅವರಿಗೆ ಪುನರ್ ವ್ಯವಸ್ಥೆ ಕಲ್ಪಿಸಬೇಕು. ಜೊತೆಗೆ ಕರ್ದರು ಯಾವುದೇ ಕಹಿ ಭಾವನೆಯಿಲ್ಲದೆ ಬದುಕುವಂಥ ವಾತಾವರಣವನ್ನು ಎರ್ಡೋಗನ್ ಸರ್ಕಾರ ಸೃಷ್ಟಿಸಬೇಕು. ಕರ್ದ್ ನಾಯಕರನ್ನು ಟರ್ಕಿಯ ಆಡಳಿತದ ಭಾಗವನ್ನಾಗಿ ಮಾಡಬೇಕು. ಕರ್ದರ ಏಳಿಗೆ ಬಗ್ಗೆ ಎರ್ಡೋಗನ್ ಗಮನ ಕೊಡದೆ ಹೋದರೆ ಸಶಸ್ತ್ರ ಹೋರಾಟ ನಿಲ್ಲುವ ಸಾಧ್ಯತೆ ಇಲ್ಲ. ಇರಾಕ್, ಸಿರಿಯಾ, ಇರಾನ್ ಆಡಳಿತಗಾರರೂ ಕೂಡ ಈ ವಿಚಾರದಲ್ಲಿ ಎಚ್ಚರಿಕೆ ವಹಿಸಿ ಕರ್ದ್ ಜನರ ಅಭಿವೃದ್ಧಿ ಕಡೆಗೆ ಗಮನಕೊಡಬೇಕು. ಈ ದೇಶಗಳ ಜೊತೆ ಹೊಂದಾಣಿಕೆ ಆಗದಿದ್ದರೆ ಸಮಸ್ಯೆ ಉಳಿದಂತೆಯೇ ಆಗುತ್ತದೆ.
ಮೊದಲನೇ ಮಹಾಯುದ್ಧದ ನಂತರ ಪಶ್ಚಿಮ ಏಷ್ಯಾ ಮತ್ತು ನೆರೆಯ ದೇಶಗಳು ಪುನರ್ ಸಂಘಟಿತವಾದವು. ಕರ್ದರಿಗೆ ಪ್ರತ್ಯೇಕ ದೇಶ ಗುರುತಿಸುವ ಬಗ್ಗೆ ಅಂದಿನ ವಿಶ್ವ ನಾಯಕರಲ್ಲಿ ಚರ್ಚೆಯೂ ಆಯಿತು. ಆದರೆ ಅದೊಂದು ನಿರ್ಣಯವಾಗಿ ರೂಪು ತಾಳಲೇ ಇಲ್ಲ. ಹೀಗಾಗಿ ಸಮಸ್ಯೆ ಇಂದಿಗೂ ಕರ್ದರನ್ನು ಕಾಡುತ್ತಿದೆ.
” ಜುರಾತೃಷ್ಟ್ರ ಪಂಥಕ್ಕೆ ಸೇರಿದವರಾದ ಕರ್ದ್ ಜನಾಂಗ ಮುಸ್ಲಿಮರಲ್ಲಿ ಸ್ವಲ್ಪ ಭಿನ್ನವಾದುದು. ಧಾರ್ಮಿಕ ಕಟ್ಟುನಿಟ್ಟು ಸ್ವಲ್ಪ ಕಡಿಮೆ. ಬಹುಪಾಲು ಮಂದಿ ಉದಾರವಾದಿಗಳು. ಸ್ವತಂತ್ರ ದೇಶ ರಚಿಸಬೇಕೆಂಬ ಕನಸಿಗೆ ಕಟ್ಟುಬಿದ್ದು ಕರ್ದರು ಪಟ್ಟಪಾಡು ಹೇಳತೀರದು. ಯಾವುದೇ ದೇಶದಲ್ಲಿ ಅವರು ಬಹುಸಂಖ್ಯಾತರಲ್ಲ. ಇರಾಕ್, ಇರಾನ್, ಸಿರಿಯಾ, ಟರ್ಕಿಯ ಕೆಲವು ಪ್ರದೇಶಗಳಲ್ಲಿ ಅವರು ಬಹುಸಂಖ್ಯಾತರಿದ್ದಾರೆ.”
ನವದೆಹಲಿ: ಶನಿವಾರ ಐದನೇ ದಿನವೂ ಇಂಡಿಗೋ ವಿಮಾನ ಹಾರಾಟ ಅಡಚಣೆಗಳು ಮುಂದುವರೆದಿದ್ದು, ದೇಶಾದ್ಯಂತ ಹಲವಾರು ವಿಮಾನಗಳು ರದ್ದಾಗಿವೆ. ಕಳೆದ ನಾಲ್ಕು…
ಮೈಸೂರು: 9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನನ್ನು ಗ್ರಾಮಸ್ಥರು ಹಿಡಿದು ಥಳಿಸಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ…
ಕೇರಳದ ಕೋಯಿಕ್ಕೋಡಿನಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕರಾದ ಕೆ.ಕೆ. ಮಹಮ್ಮದ್…
ಕಂದಾಯ ಇಲಾಖೆ ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ಜಾರಿಗೆ ದಿಟ್ಟ ಹೆಜ್ಜೆ ಇಟ್ಟಿದೆ. ಇದು ನಾಗರಿಕ ಸ್ನೇಹಿಯೂ ಆಗಿದೆ. ಇಂದಿಗೂ ತಾಲ್ಲೂಕು…
ರಾಜ್ಯದಲ್ಲಿ ಇನ್ನು ಮುಂದೆ, ಜಾತಿ, ಧರ್ಮ ಭಾಷೆ, ಧಾರ್ಮಿಕ ಮತ್ತು ಜನಾಂಗೀಯ ನಿಂದನೆ, ಲೈಂಗಿಕ ದೃಷ್ಟಿಕೋನ ಮತ್ತು ಜನ್ಮ ಸ್ಥಳದ…
ಮಲ್ಕುಂಡಿ ಮಹದೇವಸ್ವಾಮಿ ವಿಕಲ್ಪಗಳ ಅಲೆಯ ಮೇಲೆ ಸದಾ ತೇಲಿ ಬರುವ ಸಂಕಲ್ಪ ಬಾಬಾ ಸಾಹೇಬರ ಪಾರ್ಥಿವ ಶರೀರ ಪ್ರಕೃತಿಯಲ್ಲಿ ಲೀನವಾಗುವ…