ವಾರಾಂತ್ಯ ವಿಶೇಷ

ಸೇನಾ ವಿಶೇಷತೆಗಳ ಆಗರ ಜನರಲ್ ತಿಮ್ಮಯ್ಯ ಮ್ಯೂಸಿಯಂ

ಚಂದನ್ ನಂದರಬೆಟ್ಟು

ಕರ್ನಾಟಕದ ಕಾಶ್ಮೀರ ಎಂದು ಕರೆಯಲ್ಪಡುವ ಕೊಡಗು, ಭಾರತದ ಪುಟ್ಟ ಜಿಲ್ಲೆಯಾದರೂ ದೇಶದ ರಕ್ಷಣಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ಆ ಕೊಡುಗೆಗಳಲ್ಲಿ ಅತ್ಯಂತ ಅನನ್ಯವಾದ ಹೆಸರೆಂದರೆ ಭಾರತೀಯ ಸೇನೆಯ ದಂಡ ನಾಯಕರಾಗಿದ್ದ ಜನರಲ್ ಕೆ.ಎಸ್. ತಿಮ್ಮಯ್ಯ ಅವರು. ತಿಮ್ಮಯ್ಯನವರು ಹುಟ್ಟಿ ಬೆಳೆದಿದ್ದ ಮನೆ ‘ಸನ್ನಿಸೈಡ್’ ಈಗ ಯುದ್ಧ ಸ್ಮಾರಕವಾಗಿ ಪರಿವರ್ತನೆಯಾಗಿದೆ.

೨೦೨೧ರ ಫೆ.೬ರಂದು ಭಾರತದ ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಈ ಯುದ್ಧ ಸ್ಮಾರಕವನ್ನು ಲೋಕಾರ್ಪಣೆ ಮಾಡಿದ್ದಾರೆ. ಮಡಿಕೇರಿಯ ಜನರಲ್ ತಿಮ್ಮಯ್ಯ ರಸ್ತೆಯ ಪಕ್ಕದಲೇ ಇರುವ ‘ಸನ್ನಿಸೈಡ್’ ಮ್ಯೂಸಿಯಂನ ಅವರಣಕ್ಕೆ ಪ್ರವೇಶಿಸುತ್ತಿದ್ದಂತೆ ಯುದ್ಧ ಟ್ಯಾಂಕರ್, ಯುದ್ಧ ವಿಮಾನ ಹಾಗೂ ಸ್ಮಾರಕ ನೋಡುಗರನ್ನು ಸೆಳೆಯುತ್ತವೆ.

ಈಗಾಗಲೇ ಸೇನೆಯ ಅನೇಕ ವಿಶೇಷತೆಗಳಿಂದ ದೇಶದ ಜನರನ್ನು ಬಹಳಷ್ಟು ಆಕರ್ಷಿಸಿರುವ ಈ ಮ್ಯೂಸಿಯಂನಲ್ಲಿ ಮಹಾರಾಷ್ಟ್ರದ ಪುಣೆಯ ಕೀರ್ಕಿ ಸೇನಾ ಕೇಂದ್ರದ ಯುದ್ಧ ಟ್ಯಾಂಕರ್ ಗಮನಸೆಳೆಯುತ್ತದೆ. ಈ ಟ್ಯಾಂಕರ್ ೧೯೭೧ರಲ್ಲಿ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಹಿಮ್ಮತ್ ಹೆಸರಿನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

ಇಲ್ಲಿನ ಮತ್ತೊಂದು ಆಕರ್ಷಣೆ ಎಂದರೆ ಮಿಗ್ ೨೧ ಯುದ್ಧ ವಿಮಾನ. ಈ ಯುದ್ಧ ವಿಮಾನವು ೧೯೭೧ರ ಭಾರತ-ಪಾಕಿಸ್ತಾನದ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಅದಲ್ಲದೆ ಭಾರತೀಯ ಯುದ್ಧ ನೌಕೆಯಾದ ಶಿವಾಲಿಕ್‌ನ ಮಾದರಿ ನೌಕೆ ಕೂಡ ಮ್ಯೂಸಿಯಂಗೆ ಸೇರ್ಪಡೆಗೊಂಡಿದೆ. ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಹೊಸದಾಗಿ ಸೇರ್ಪಡೆ ಆಗಿರುವ ‘ಐಎನ್‌ಎಸ್ ಶಿವಾಲಿಕ್’ ಮಾದರಿಯ ಯುದ್ಧ ನೌಕೆಯನ್ನು ಭಾರತೀಯ ನೌಕಾಪಡೆಯ ಪೂರ್ವ ವಿಭಾಗದ ವೈಸ್ ಅಡ್ಮಿರಲ್ ಭಿಸ್ವಜಿತ್ ದಾಸ್ ಗುಪ್ತ ಅವರು ಲೋಕಾರ್ಪಣೆ ಮಾಡಿದ್ದಾರೆ. ಜೊತೆಗೆ ರಿಯರ್ ಅಡ್ಮಿರಲ್ ಉತ್ತಯ್ಯ ಅವರಿಂದ ಉದ್ಘಾಟನೆಗೊಂಡ ನೌಕಾಪಡೆಯ ಜಲಾಂರ್ತಗಾಮಿ ಯುದ್ಧ ನೌಕೆಯ ಮಾದರಿ ಕೂಡ ಸೇರ್ಪಡೆಯಾಗಿದೆ.

ಮನದಣಿಯುವಷ್ಟು ಗೌರವದಿಂದ ಇವೆಲ್ಲವುಗಳನ್ನು ವೀಕ್ಷಿಸಿ ಮುಂದೆ ಹೆಜ್ಜೆ ಹಾಕಿ ತಿಮ್ಮಯ್ಯ ಅವರ ಮನೆ ಸನ್ನಿಸೈಡ್‌ನ ಒಳಹೊಕ್ಕರೆ, ತಿಮ್ಮಯ್ಯ ಅವರು ಬಳಸಿದ್ದ ಸಮವಸ್ತ್ರ, ಪಡೆದಿದ್ದ ವಿವಿಧ ಮೆಡಲ್‌ಗಳು, ತಿಮ್ಮಯ್ಯ ಅವರು ತಮ್ಮ ಕುಟುಂಬದೊಂದಿಗೆ ಕಳೆದ ಕ್ಷಣಗಳು, ಸೇನೆಯಲ್ಲಿದ್ದಾಗ ಮೊದಲ ರಾಷ್ಟ್ರಪತಿ ಬಾಬು ರಾಜೆಂದ್ರ ಪ್ರಸಾದ್ ಅವರೊಂದಿಗಿನ ಅಪರೂಪದ ಛಾಯಾಚಿತ್ರಗಳು, ಜೊತೆಗೆ ಸೇನೆಯಲ್ಲಿದ್ದಾಗ ತಿಮ್ಮಯ್ಯ ಅವರು ವಿವಿಧ ಸಂದರ್ಭಗಳಲ್ಲಿ ತೆಗೆಸಿಕೊಂಡಿದ್ದ ಭಾವಚಿತ್ರಗಳು ಸನ್ನಿಸೈಡ್ ಮನೆಯ ಗೋಡೆಗಳನ್ನು ಅಲಂಕರಿಸಿವೆ.

ಜೊತೆಗೆ ಭಾರತೀಯ ಸೇನೆಯ ಯೋಧರು ಬಳಸಿದ ೨೭ ಶಸ್ತ್ರಾಸ್ತ್ರಗಳು ಇಲ್ಲಿದ್ದು, ೫೦ ರಿಂದ ೬೦ ವರ್ಷಗಳ ಹಿಂದಿನ ಲೈಟ್ ಮಷಿನ್ ಗನ್, ಮೀಡಿಯಂ ಮಷಿನ್ ಗನ್, ಸೆಲ್ಛ್ ಲೋಡಿಂಗ್ ರೈಫಲ್‌ಗಳು, ರಾಕೆಟ್ ಲಾಂಚರ್, ೩೨ ಎಂ.ಎಂ. ರೈಫಲ್, ಪಾಯಿಂಟ್ ೩೮ ರೈಫಲ್‌ಗಳು ಆಕರ್ಷಿಸುತ್ತವೆ. ತಿಮ್ಮಯ್ಯ ಅವರ ಬಾಲ್ಯದ ಚಿತ್ರಗಳು, ಕಲಾಕೃತಿಗಳು ಗಮನ ಸೆಳೆಯುತ್ತವೆ. ತಿಮ್ಮಯ್ಯ ಅವರು ಸೇನಾಧಿಕಾರಿಯಾಗಿ ಮಾಡಿದ ಸಾಧನೆಯನ್ನು, ಎರಡು ಪ್ರತ್ಯೇಕ ಕೋಣೆಗಳಲ್ಲಿ ಪರಿಚಯಿಸಲಾಗಿದೆ. ೧೫ ನಿಮಿಷಗಳ ಅವಧಿಯ ಸಾಕ್ಷ್ಯಚಿತ್ರವು ತಿಮ್ಮಯ್ಯ ಅವರ ಬದುಕಿನ ಚಿತ್ರಣವನ್ನು ಕಟ್ಟಿಕೊಡಲಿದೆ.

ತಿಮ್ಮಯ್ಯ ಅವರು ಹುಟ್ಟಿ ಬೆಳೆದ ಮನೆ ಸನ್ನಿಸೈಡ್ ಹಳೆಯದಾಗಿದ್ದರೂ ಹಿಂದಿನ ಕಾಲದಲ್ಲಿ ಮನೆಯನ್ನು ಬೆಚ್ಚಗಿಡಲು ಉಪಯೋಗಿಸುತ್ತಿದ್ದ ಉರುವಲು ಒಲೆಗಳ ಸಹಿತ ಎಲ್ಲವನ್ನೂ ನವೀಕರಿಸಿಡಲಾಗಿದೆ. ಮನೆಯ ಬಳಿಯಲ್ಲಿ ಅತ್ಯಂತ ಪ್ರಶಾಂತ ವಾತಾವರಣ ಇದ್ದು, ನೋಡುಗರು ತನ್ಮಯರಾಗುತ್ತಾರೆ. ಕೊಡಗು ಜಿಲ್ಲೆಯ ಮುಖ್ಯ ಪ್ರವಾಸಿ ಕೇಂದ್ರಗಳಲ್ಲಿ ಒಂದಾಗಿರುವ ಸನ್ನಿಸೈಡ್ ಪ್ರವಾಸಿಗರು ಕಣ್ತುಂಬಿಕೊಳ್ಳಬಹುದಾಗಿರುವಂತಹ ಹಾಗೂ ಮಾಹಿತಿಯನ್ನು ಹೊತ್ತು ನಿಂತಿರುವ ದೇಶದ ಹೆಮ್ಮೆಯ ಪ್ರತೀಕವಾಗಿದೆ.

” ಕೊಡಗಿನ ಪ್ರವಾಸವೆಂದರೆ ಕಣ್ಣು ಹಾಯಿಸಿದಲ್ಲೆಲ್ಲ ಕಾಣಸಿಗುವ ಹಸಿರು ಹೊದ್ದ ಕಾಫಿ ತೋಟಗಳು, ಕಾಡು-ಮೇಡು, ಬೆಟ್ಟ-ಗುಡ್ಡ-ಕಣಿವೆ, ಮಳೆಗಾಲದಲ್ಲಿ ಭೋರ್ಗರೆಯುವ ಜಲಪಾತಗಳು, ನದಿ, ತೊರೆಗಳ ಜುಳು ಜುಳು… ಹಕ್ಕಿ, ಪಕ್ಷಿಗಳ ನಿನಾದದ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವ ಜತೆಗೆ ದೇಶವನ್ನು ಕಾಯುವ ಭಾರತೀಯ ಸೇನೆಗೆ ಜಿಲ್ಲೆಯ ಕೊಡುಗೆಯ ಜೊತೆಗೆ ಸ್ವಾತಂತ್ರ್ಯಾನಂತರ ಭಾರತೀಯ ಸೇನೆಯ ದಂಡ ನಾಯಕರಾಗಿದ್ದ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಬಾಲ್ಯ, ಜೀವನ, ಸಾಧನೆಗಳ ಸಾಹಸಗಾಥೆಯನ್ನು ಪರಿಚಯಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರೂಪಿಸಿರುವ ಜನರಲ್  ತಿಮ್ಮಯ್ಯ ಮ್ಯೂಸಿಯಂನಲ್ಲಿ ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು.”

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಜನರ ಹಿತ ಕಾಯಲಿ!

ಜನರ ಹಿತ ಕಾಯಲಿ! ನಕಲಿ ವೈದ್ಯರು, ಕಲಬೆರಿಕೆ ಔಷಧದ ಹಾವಳಿಯಿಂದ ಜನ ಬೇಸ್ತುಬಿದ್ದಿರುವಾಗ ನೈಜ ದರಕ್ಕಿಂತ ಅತ್ಯಧಿಕ ದರಕ್ಕೆ ಔಷಧಿ ಮಾರಾಟ…

18 mins ago

ಓದುಗರ ಪತ್ರ: ಜಾಗೃತಿ, ನಿಯಂತ್ರಣ ಇರಬೇಕು

ಆಹಾರದಲ್ಲಿ ಬಳಸುವ ಉಪ್ಪು, ಸಕ್ಕರೆ ಬಳಕೆ ಪ್ರಮಾಣಕ್ಕೆ ಕಡಿವಾಣ ಹಾಕಲು ಅರೋಗ್ಯ ಇಲಾಖೆ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಹಾಗೆಯೇ…

21 mins ago

ಓದುಗರ ಪತ್ರ: ಚಾ.ನಗರ ಜಿಲ್ಲೆಗೆ ವಿಶೇಷ ಅನುದಾನ ನೀಡಲು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಲಿ

ಚಾಮರಾಜನಗರ ಜಿಯ ಕೊಳ್ಳೇಗಾಲ ಮತ್ತು ಹನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು ರೂ.೫೦೦ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ…

23 mins ago

ಆಯಾ ಕೆಲಸ ಮಾಡಿ ಮಕ್ಕಳನ್ನು ಮಾಸ್ಟರ್ಸ್‌ ಮಾಡಿದ ಸತ್ಯಮ್ಮ

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಮಕ್ಕಳು ದೊಡ್ಡ ಹುದ್ದೆಗಳಿಗೆ ಹೋದರೂ ತನ್ನ ಕಾಯಕ ಮುಂದುವರಿಸಿರುವ ‘ಮಹಾತಾಯಿ’ ತೆಲಂಗಾಣದ ಸಂಗಾರೆಡ್ಡಿಯ ರಾಕೇಶ್…

27 mins ago

ಮಂಜಿನ ನಗರಿಯಲ್ಲಿ ರಸ್ತೆಗಳ ದುಸ್ಥಿತಿ

ಪುನೀತ್ ಮಡಿಕೇರಿ ಮಡಿಕೇರಿ ದಸರಾ ಸಮೀಪಿಸುತ್ತಿದ್ದರೂ ಗುಂಡಿಗಳಿಗೆ ಸಿಗದ ಮುಕ್ತಿ ಮಡಿಕೇರಿ ದಸರಾ ಜನೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಆದರೆ, ದಸರಾ…

34 mins ago

ಅ.೧, ೨ರಂದು ಶ್ರೀ ಗುರುಮಲ್ಲೇಶ್ವರ ದಾಸೋಹ ಭವನ ಉದ್ಘಾಟನೆ

ಮಹೇಂದ್ರ ಹಸಗೂಲಿ ದೇಪಾಪುರದಲ್ಲಿ ಗುಡಿಸಲಿನಲ್ಲಿ ಆರಂಭವಾದ ಅನ್ನ ದಾಸೋಹಕ್ಕೆ ಈಗ ದಾಸೋಹ ಭವನದ ರೂಪ ಗುಂಡ್ಲುಪೇಟೆ: ಸಣ್ಣ ಗುಡಿಸಲಿನಲ್ಲಿ ಆರಂಭಗೊಂಡ…

40 mins ago