ಬೆಂಗಳೂರು ಡೈರಿ
ಆರ್.ಟಿ.ವಿಠ್ಠಲಮೂರ್ತಿ
ಅಧಿಕಾರ ಹಂಚಿಕೆಯ ಒಪ್ಪಂದದ ಬಲೆಯಲ್ಲಿ ಸಿಲುಕಿರುವ ರಾಜ್ಯ ಕಾಂಗ್ರೆಸ್ ಈಗ ಸಮಾಧಾನದ ನಿಟ್ಟುಸಿರು ಬಿಡುತ್ತಿದೆ. ಕರ್ನಾಟಕದ ನೆಲೆಯಲ್ಲಿ ತನಗೆ ಪರ್ಯಾಯವಾಗಿ ಮೇಲೆದ್ದು ನಿಂತಿರುವ ಬಿಜೆಪಿ-ಜಾ.ದಳ ಮೈತ್ರಿಕೂಟದಲ್ಲಿ ಶುರುವಾಗಿರುವ ಮುಸುಕಿನ ಗುದ್ದಾಟವೇ ಇದಕ್ಕೆ ಕಾರಣ. ಅಂದ ಹಾಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅದ್ಧೂರಿ ಗೆಲುವು ಸಾಽಸಿದ ಕಾಂಗ್ರೆಸ್ ಪಕ್ಷಕ್ಕೆ ಒಂದು ಭರವಸೆ ಇತ್ತು. ಅದೆಂದರೆ ರಾಜ್ಯದಲ್ಲಿರುವ ಬಿಜೆಪಿ ಪಕ್ಷವೇ ಆಗಲಿ, ಜಾ.ದಳ ಪಕ್ಷವೇ ಆಗಲಿ, ತನಗೆ ಸಮರ್ಥ ಎದುರಾಳಿಯಾಗಿ ನೆಲೆ ನಿಲ್ಲುವುದು ಕಷ್ಟ ಎಂಬುದು ಈ ಭರವಸೆ.
ಈ ಭರವಸೆಯ ಜತೆಗೆ ನೂರಾ ಮೂವತ್ತೆ ದಕ್ಕೂ ಹೆಚ್ಚು ಸೀಟುಗಳ ಬಲ ಸೇರಿದ್ದರಿಂದ ತನ್ನ ಹಾದಿ ನಿರಾಯಾಸವಾಗಿರುತ್ತದೆ ಎಂದು ಕಾಂಗ್ರೆಸ್ ಪಕ್ಷ ಭಾವಿಸಿತ್ತು. ಆದರೆ ಅದರ ಈ ಭಾವನೆಗೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹೊಡೆತ ಬಿತ್ತು. ಕಾರಣ ಆ ಸಂದರ್ಭದಲ್ಲಿ ತಲೆ ಎತ್ತಿದ ಬಿಜೆಪಿ-ಜಾ.ದಳ ಮೈತ್ರಿಕೂಟ. ವಾಸ್ತವವಾಗಿ ಈ ಎರಡೂ ಶಕ್ತಿಗಳು ಪರಸ್ಪರ ಕೈಗೂಡಿಸುತ್ತವೆ ಎಂಬ ನಿರೀಕ್ಷೆ ಕಾಂಗ್ರೆಸ್ ಪಾಳೆಯದಲ್ಲಿರಲಿಲ್ಲ. ಆದರೆ ತಮ್ಮ ಉಳಿವಿನ ದೃಷ್ಟಿಯಿಂದ ಕಾಂಗ್ರೆಸ್ ವಿರೋಧಿತನಗಳನ್ನು ಕ್ರೋಢೀಕರಿಸುವ ಅನಿವಾರ್ಯತೆಗೆ ಸಿಲುಕಿದ ಬಿಜೆಪಿ ಮತ್ತು ಜಾ.ದಳ ಪಕ್ಷಗಳ ನಾಯಕರು ಪರಸ್ಪರ ಮೈತ್ರಿ ಸಾಧಿಸಿದರು.
ಇಂತಹ ಮೈತ್ರಿ ಸಾಧಿತವಾಗಲು ರಾಜ್ಯ ರಾಜಕಾರಣದ ವಸ್ತುಸ್ಥಿತಿಯೇ ಕಾರಣ. ಅದರ ಪ್ರಕಾರ, ಕಾಂಗ್ರೆಸ್ ವಿರೋಧಿ ಮತಗಳು ವಿಭಜನೆಯಾದ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿತ್ತು. ಒಂದು ವೇಳೆ ಈ ಮತಗಳು ಕನ್‌ಸಾಲಿಡೇಟ್ ಆಗಿದ್ದಿದ್ದರೆ ರಾಜ್ಯದ ಗಣನೀಯ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲುತ್ತಿದ್ದರು. ಆದರೆ ಅದು ಸಾಧಿತವಾಗದೆ ಇದ್ದ ಕಾರಣಕ್ಕಾಗಿ ಕಾಂಗ್ರೆಸ್ ಅಭೂತ ಪೂರ್ವ ಜಯಗಳಿಸಿತ್ತು ಮತ್ತು ಬಿಜೆಪಿ, ಜಾ.ದಳ ಪಕ್ಷಗಳ ಅಭ್ಯರ್ಥಿಗಳು ಸೋಲು ಅನುಭವಿಸಿದ್ದರು.
ಗಮನಿಸಬೇಕಾದ ಸಂಗತಿ ಎಂದರೆ, ಇಂತಹ ವಸ್ತುಸ್ಥಿತಿಯನ್ನು ಮೊದಲು ಗಮನಿಸಿದವರು ಬಿಜೆಪಿ ನಾಯಕ, ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್. ಅವರು ಈ ಅಂಕಿ ಅಂಶಗಳನ್ನು ಸಂಗ್ರಹಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗಮನಕ್ಕೆ ತಂದ ನಂತರ ಕರ್ನಾಟಕದ ರಾಜಕೀಯ ಚಿತ್ರಣ ಬದಲಾಯಿತು. ಬಿಜೆಪಿ-ಜಾ.ದಳ ಪರಸ್ಪರ ಕೈಗೂಡಿಸಲು ಸಮ್ಮತಿಸಿದ್ದಕ್ಕೆ ಇದು ಮುಖ್ಯ ಕಾರಣ. ಕುತೂಹಲದ ಸಂಗತಿ ಎಂದರೆ ಯಾವ ಅಂಶವನ್ನು ಗಮನಿಸಿ ಉಭಯ ಪಕ್ಷಗಳ ಮಧ್ಯೆ ಮೈತ್ರಿ ಸಾಧಿಸಲಾಯಿತೋ ಆ ಉದ್ದೇಶ ವಿಫಲವಾಗಲಿಲ್ಲ.
ಹೀಗಾಗಿ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆಯಲ್ಲಿದ್ದರೂ ಸುಮಾರು ಹತ್ತೊಂಬತ್ತು ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಗಳಿಸಲು ಬಿಜೆಪಿ-ಜಾ.ದಳ ಮೈತ್ರಿಕೂಟಕ್ಕೆ ಸಾಧ್ಯವಾಯಿತು. ವಾಸ್ತವವಾಗಿ ಈ ಫಲಿತಾಂಶದಿಂದ ಕಾಂಗ್ರೆಸ್ ಪಕ್ಷ ಚಿಂತೆಗೀಡಾಗಿದ್ದು ಸಹಜವೇ. ಹೀಗೆ ಚಿಂತೆಗೀಡಾದ ಕಾಂಗ್ರೆಸ್ ಪಾಳೆಯಕ್ಕೆ ಮತ್ತಷ್ಟು ಚಿಂತೆ ತಂದೊಡ್ಡಿದ್ದು ಅಧಿಕಾರ ಹಂಚಿಕೆಯ ಮಾತು. ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸುವ ಮುನ್ನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಹಣಾಹಣಿ ಶುರುವಾದಾಗ, ಅಧಿಕಾರ ಹಂಚಿಕೆಯ ಸಂಬಂಧ ಒಂದು ಒಪ್ಪಂದವಾಗಿದೆ ಎಂಬ ಮಾತು ಮತ್ತಷ್ಟು ಭೂತಾಕಾರವಾಗಿ ಕಾಂಗ್ರೆಸ್ ಪಾಳೆಯದ ಮೇಲೆರಗಿತು.
ಇಂತಹ ಒಪ್ಪಂದ ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮುಯ್ಯ ಅವರ ಬಣ ಆಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಣ ದೊಡ್ಡ ಧ್ವನಿಯಲ್ಲಿ ಹೇಳತೊಡಗಿದವು. ವಾಸ್ತವವಾಗಿ ಈ ಅಂಶವೇ ಬಿಜೆಪಿ-ಜಾ.ದಳ ಪಾಳೆಯಕ್ಕೆ ಟಾನಿಕ್‌ನಂತೆ ದಕ್ಕಿದ್ದು. ಈ ಅಂಶವೇ ಮುಂದಿನ ದಿನಗಳಲ್ಲಿ ಸರ್ಕಾರದ ಅಸ್ಥಿರತೆಗೆ ಮತ್ತು ಅದರ ಉರುಳುವಿಕೆಗೆ ಕಾರಣವಾಗಲಿದೆ ಎಂದು ಮೈತ್ರಿಕೂಟ ಭಾವಿಸತೊಡಗಿತು.
ಅದರೆ ಅದು ಇಂತಹ ಭಾವನೆಯಲ್ಲಿರುವ ಕಾಲದಲ್ಲೇ ಒಂದು ಬೆಳವಣಿಗೆ ಕಾಂಗ್ರೆಸ್ ಪಾಳೆಯದ ಸಮಾಧಾನಕ್ಕೆ ಕಾರಣವಾಗಿದೆ. ಅದೆಂದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಮ್ಮ ಮಿತ್ರಪಕ್ಷ ಜಾ.ದಳ ಪಕ್ಷವನ್ನು ದೂರ ಇಡಲು ಬಯಸಿರುವುದು. ತಾವು ಶ್ರಮ ಪಟ್ಟು ಪಕ್ಷ ಕಟ್ಟುವುದು, ನಾಳೆ ಅಧಿಕಾರಕ್ಕೆ ಬಂದರೆ ಕುಮಾರಸ್ವಾಮಿ ಬಂದು ಮುಖ್ಯಮಂತ್ರಿಯಾಗುವುದು ವಿಜಯೇಂದ್ರ ಅವರಿಗೆ ಬೇಕಿಲ್ಲ. ಕಾರಣ ಭವಿಷ್ಯದಲ್ಲಿ ಸ್ವಂತ ಶಕ್ತಿಯ ಮೇಲೆ ಅಽಕಾರ ಹಿಡಿಯುವ ಶಕ್ತಿ ನಮಗೆ ಬರಬೇಕೇ ವಿನಾ ಮಿತ್ರ ಪಕ್ಷದ ಸಾಥ್ ಪಡೆದು ಸರ್ಕಾರ ರಚಿಸುವ ಅನಿವಾರ್ಯತೆ ಬರಬಾರದು ಎಂಬುದು ವಿಜಯೇಂದ್ರ ಅವರ ಲೆಕ್ಕಾಚಾರ.
ಈ ಲೆಕ್ಕಾಚಾರ ಇರುವುದರಿಂದಲೇ ಅವರು ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿಯ ವಿರುದ್ಧ ಜನಾಕ್ರೋಶ ಯಾತ್ರೆ ಆರಂಭಿಸಿದಾಗ, ನೆಪ ಮಾತ್ರಕ್ಕೂ ಜಾ.ದಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಹೀಗೆ ಜಾ.ದಳ ಪಕ್ಷವನ್ನು ವಿಶ್ವಾಸಕ್ಕೆ ತಗೆದುಕೊಂಡರೆ ಏನಾಗುತ್ತದೆ? ನಾಳೆ ಅವರ ಬೆಂಬಲದಿಂದಲೇ ಜನಾಕ್ರೋಶ ಯಾತ್ರೆ ಯಶಸ್ವಿಯಾಯಿತು ಎಂಬ ಮಾತು ಬರುತ್ತದೆ. ಆದರೆ ಅದು ವಿಜಯೇಂದ್ರ ಅವರಿಗಿಷ್ಟವಿಲ್ಲ. ಹೀಗಾಗಿ ಪಕ್ಷದ ವರಿಷ್ಠರು ಜಾ.ದಳದ ಜತೆಗಿನ ಮೈತ್ರಿಗೆ ಅದೆಷ್ಟೇ ಒತ್ತು ನೀಡಿದರೂ, ನಾವು ಮಾತ್ರ ವೈಯಕ್ತಿಕ ನೆಲೆಯಲ್ಲಿ ನೂರಾ ಹದಿನಾಲ್ಕು ಎಂಬ ಮ್ಯಾಜಿಕ್ ಸಂಖ್ಯೆಯಷ್ಟು ಸೀಟುಗಳನ್ನು ಗೆಲ್ಲಬೇಕು ಎಂಬುದು ಅವರ ಲೆಕ್ಕಾಚಾರ.
ಯಾವಾಗ ಇಂತಹ ಲೆಕ್ಕಾಚಾರದೊಂದಿಗೆ ವಿಜಯೇಂದ್ರ ಜನಾಕ್ರೋಶ ಯಾತ್ರೆ ಆರಂಭಿಸಿದರೋ ಇದಾದ ನಂತರ ಜಾ.ದಳ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಕೂಡ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ರಾಜಧಾನಿ ಬೆಂಗಳೂರಿನಲ್ಲೊಂದು ಪ್ರತಿಭಟನಾ ಪ್ರದರ್ಶನ ಏರ್ಪಡಿಸಿದರು. ಅರ್ಥಾತ್, ದಿನ ಕಳೆದಂತೆ ಬಿಜೆಪಿ-ಜಾ.ದಳ ಪಕ್ಷಗಳ ನಡುವಣ ಬಿರುಕು ಹೆಚ್ಚಾಗುತ್ತಲೇ ಇದೆ. ವಾಸ್ತವವಾಗಿ ಈ ಎರಡೂ ಶಕ್ತಿಗಳ ನಡುವೆ ಬಿರುಕು ಕಾಣಿಸಿರುವುದೇ ಕಾಂಗ್ರೆಸ್ ಪಕ್ಷಕ್ಕೆ ಹಿತಕರವಾಗಿ ಕಾಣಿಸತೊಡಗಿದೆ.
ಅಂದ ಹಾಗೆ ಎರಡೂ ಪಕ್ಷಗಳ ಮಧ್ಯೆ ತಾತ್ವಿಕ ಭಿನ್ನಾಭಿಪ್ರಾಯ ಕಂಡರೆ ಅದನ್ನು ಸರಿಪಡಿಸಬಹುದು.ಆದರೆ ಜಾ.ದಳದ ವಿಷಯದಲ್ಲಿ ಬಿಜೆಪಿ ಪಾಳೆಯದಲ್ಲಿ ಕಾಣಿಸಿರುವುದು ತಾತ್ವಿಕ ಭಿನ್ನಾಭಿಪ್ರಾಯವಲ್ಲ. ಬದಲಿಗೆ ಭವಿಷ್ಯದ ಮುಖ್ಯಮಂತ್ರಿ ಹುದ್ದೆಯ ವಿಷಯ. ಅಂದರೆ ಇದು ಸ್ಪಷ್ಟವಾಗಿ ಅಧಿಕಾರ ಹಂಚಿಕೆಯ ವಿಷಯದಲ್ಲಿ ಕಾಣಿಸಿಕೊಂಡಿರುವ ಭಿನ್ನಾಭಿಪ್ರಾಯ. ಇಂತಹ ಭಿನ್ನಾಭಿಪ್ರಾಯವನ್ನು ನಿವಾರಿಸಿರುವುದು ಸುಲಭವಲ್ಲ. ಯಾಕೆಂದರೆ, ಇವತ್ತು ತಾವು ಶ್ರಮ ವಹಿಸಿ ಪಕ್ಷ ಕಟ್ಟುವುದು, ನಾಳೆ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದ ಕೂಡಲೇ ಜಾ.ದಳ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಬಂದು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರುವುದು ವಿಜಯೇಂದ್ರ ಅವರಿಗೆ ಇಷ್ಟವಿಲ್ಲ.
ಒಂದು ದೃಷ್ಟಿಯಿಂದ ಇದು ಸಹಜವೂ ಹೌದು. ಪರಿಣಾಮ ಬಿಜೆಪಿ-ಜಾ.ದಳ ಮಧ್ಯೆ ಕಾಣಿಸಿಕೊಂಡಿರುವ ಈ ಭಿನ್ನಾಭಿಪ್ರಾಯ ದಿನ ಕಳೆದಂತೆ ಹೆಚ್ಚುತ್ತಾ ಹೋಗುವುದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅವು ಒಗ್ಗೂಡಿ ಹೋರಾಡುವುದು ಕಷ್ಟ ಎಂಬುದು ಕಾಂಗ್ರೆಸ್ ಪಾಳೆಯದ ಲೆಕ್ಕಾಚಾರ. ಹೀಗೆ ಅವು ಒಗ್ಗೂಡಿ ಹೋರಾಡದೆ ಹೋದರೆ ಕಾಂಗ್ರೆಸ್ ವಿರೋಧಿ ಮತಗಳು ಎರಡು ನೆಲೆಗಳಲ್ಲಿ ಒಡೆದು ಹೋಗುತ್ತವೆ. ಇದು ತಮಗೆ ಪ್ಲಸ್ ಆಗಲಿದೆ ಎಂಬುದು ಕೈ ಪಾಳೆಯದ ಈಗಿನ ನಂಬಿಕೆ. ಅದು ಎಷ್ಟರ ಮಟ್ಟಿಗೆ ನಿಜವಾಗುತ್ತದೋ ಗೊತ್ತಿಲ್ಲ. ಆದರೆ ಅಧೀಕಾರ ಹಂಚಿಕೆಯ ಗೊಂದಲದಲ್ಲಿ ತಲ್ಲಣಗೊಂಡಿರುವ ಅದಕ್ಕೆ ಬಿಜೆಪಿ-ಜಾ.ದಳ ಮೈತ್ರಿಯ ಮಧ್ಯೆ ಕಾಣಿಸಿಕೊಂಡಿರುವ ಗೊಂದಲ, ಸಮಾಧಾನವನ್ನಂತೂ ತಂದಿದೆ. ಅದೇ ಸದ್ಯದ ವಿಶೇಷ.
” ಬಿಜೆಪಿ-ಜಾ.ದಳ ಪಕ್ಷಗಳ ನಡುವಣ ಬಿರುಕು ಹೆಚ್ಚಾಗುತ್ತಲೇ ಇದೆ. ವಾಸ್ತವವಾಗಿ ಈ ಎರಡೂ ಶಕ್ತಿಗಳ ನಡುವೆ ಬಿರುಕು ಕಾಣಿಸಿರುವುದೇ ಕಾಂಗ್ರೆಸ್ ಪಕ್ಷಕ್ಕೆ ಹಿತಕರವಾಗಿ ಕಾಣಿಸತೊಡಗಿದೆ. ಅಂದ ಹಾಗೆ ಎರಡೂ ಪಕ್ಷಗಳ ಮಧ್ಯೆ ತಾತ್ವಿಕ ಭಿನ್ನಾಭಿಪ್ರಾಯ ಕಂಡರೆ ಅದನ್ನು ಸರಿಪಡಿಸಬಹುದು. ಆದರೆ ಜಾ.ದಳದ ವಿಷಯದಲ್ಲಿ ಬಿಜೆಪಿ ಪಾಳೆಯದಲ್ಲಿ ಕಾಣಿಸಿರುವುದು ತಾತ್ವಿಕ ಭಿನ್ನಾಭಿಪ್ರಾಯವಲ್ಲ. ಬದಲಿಗೆ ಭವಿಷ್ಯದ ಮುಖ್ಯಮಂತ್ರಿ ಹುದ್ದೆಯ ವಿಷಯ. ಅಂದರೆ ಇದು ಸ್ಪಷ್ಟವಾಗಿ ಅಧಿಕಾರ ಹಂಚಿಕೆಯ ವಿಷಯದಲ್ಲಿ ಕಾಣಿಸಿಕೊಂಡಿರುವ ಭಿನ್ನಾಭಿಪ್ರಾಯ.”
ಚಿಕ್ಕಬಳ್ಳಾಪುರ: ಶಿಡ್ಲಘಟ್ಟದ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡರನ್ನು…
ವಾಷಿಂಗ್ಟನ್: ಅಮೇರಿಕಾದಾದ್ಯಂತ ಬೀಸುತ್ತಿರುವ ಭೀಕರ ಹಿಮಬಿರುಗಾಳಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಹಿಮಪಾತ ಹಾಗೂ ಮೈಕೊರೆಯುವ ಚಳಿಗೆ ಇದುವರೆಗೆ ಸುಮಾರು 25ಕ್ಕೂ ಹೆಚ್ಚು…
ಬೆಂಗಳೂರು: ನಟಿ ಕಾವ್ಯಾಗೌಡ ಹಾಗೂ ಆಕೆಯ ಪತಿ ಸೋಮಶೇಖರ್ ಮೇಲೆ ಪತಿ ಸಂಬಂಧಿಕರೇ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ರಾಮಮೂರ್ತಿ…
ಬೆಂಗಳೂರು: ಅರಬ್ಬಿ ಸಮುದ್ರದ ಮೇಲೆ ತೇವಾಂಶ ಭರಿತ ಮೋಡಗಳು ಹಾದು ಹೋಗಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಸೋಮವಾರ ಮಳೆಯಾಗಿದೆ. ರಾಜಧಾನಿ…
ದಾವಣಗೆರೆ: 2028ಕ್ಕೆ ಎಚ್.ಡಿ.ಕುಮಾರಸ್ವಾಮಿ ಸಿಎಂ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹಮ್ಮದ್ ಖಾನ್ ವ್ಯಂಗ್ಯವಾಡಿದ್ದಾರೆ. ಈ ಕುರಿತು…
ಗದಗ: ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುವ ವೇಳೆ ಚಿನ್ನದ ನಿಧಿ ಪತ್ತೆಹಚ್ಚಿ ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ…