ಅಂಕಣಗಳು

ಆಮ್ ಆದ್ಮಿ ಸೋಲಿಸುವಲ್ಲಿ ಕೊನೆಗೂ ಬಿಜೆಪಿ ಯಶಸ್ವಿ

ದೆಹಲಿ ಕಣ್ಣೋಟ 

ಶಿವಾಜಿ ಗಣೇಶನ್‌

ದೀಪದ ಕೆಳಗಿನ ಕತ್ತಲು ಈಗ ಮಾಯವಾಯಿತು. ದೇಶದ ರಾಜಧಾನಿಯ ಆಡಳಿತವನ್ನು ಕೊನೆಗೂ ಭಾರತೀಯ ಜನತಾ ಪಕ್ಷ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಈಗ ನಿಟ್ಟುಸಿರು ಬಿಟ್ಟಿದೆ. ಪುಟ್ಟ ರಾಜ್ಯ ವಾದರೂ ಪ್ರತಿಷ್ಠೆಯಾಗಿದ್ದ ದಿಲ್ಲಿಯ ಅಧಿಕಾರವನ್ನು ಪಡೆಯಬೇಕೆನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಆಸೆ ಕೊನೆಗೂ ಕೈಗೂಡಿದೆ. ಪ್ರಧಾನಿ ಮೋದಿ ಅವರು ತಮ್ಮ ಗುರಿಯನ್ನು ಸಾಧಿಸುವಲ್ಲಿ ಯಶಸ್ಸು ಕಂಡು ತಮ್ಮ ನಾಯಕತ್ವದ ಮಹತ್ವವನ್ನು ತೋರಿಸಿಕೊಟ್ಟಿದ್ದಲ್ಲದೆ ಎದೆಯುಬ್ಬಿಸಿ ನಡೆಯುವಂತೆ ನೋಡಿಕೊಂಡಿದ್ದು ದಿಲ್ಲಿ ಚುನಾವಣೆಯ ವಿಶೇಷ.

ದಶಕದ ಹಿಂದೆ ದೇಶದಲ್ಲಿನ ಭ್ರಷ್ಟಾಚಾರದ ವಿರುದ್ಧವಾಗಿ ಹೋರಾಟ ಮಾಡಿ ದಿಲ್ಲಿ ರಾಜ್ಯದ ಅಧಿಕಾರದ ಗದ್ದಿಗೆ ಏರಿದ್ದ ಅರವಿಂದ ಕೇಜ್ರಿವಾಲ್ ಈ ಚುನಾವಣೆಯಲ್ಲಿ ಭ್ರಷ್ಟಾಚಾರದ ಆರೋಪಗಳನ್ನು ಹೊತ್ತು ಅಧಿಕಾರ ಕಳೆದುಕೊಂಡಿರುವುದು, ಅವರ ಹತ್ತು ವರ್ಷಗಳ ರಾಜಕಾರಣದ ದುರಂತ!

ಇತ್ತ ರಾಷ್ಟ್ರೀಯ ಪಕ್ಷವಾಗಿ ಐದು ದಶಕಗಳ ಕಾಲ ದೇಶವನ್ನಾಳಿ ದಿಲ್ಲಿ ರಾಜ್ಯದ ಆಳ್ವಿಕೆಯನ್ನೂ ಕಂಡುಂಡ ಕಾಂಗ್ರೆಸ್ ಮತ್ತೆ ದೇಶದ ರಾಜಧಾನಿಯಲ್ಲಿ ಹೇಳ ಹೆಸರಿಲ್ಲದಂತೆ ಆಗಿರುವುದು ವಿಪರ್ಯಾಸ. ಈ ಚುನಾವಣೆಯಲ್ಲಿ ‘ಮತದಾರರಿಗೆ ಐದು ವರ್ಷಗಳವರೆಗೆ ಉಚಿತ ವಿದ್ಯುತ್, ನೀರು, ದವಸಧಾನ್ಯ, ಆರೋಗ್ಯ ಸೇವೆ, ಮಹಿಳೆಯರು ಮತ್ತು ವೃದ್ಧರಿಗೆ ಪ್ರತಿ ತಿಂಗಳು ಹಣಕಾಸಿನ ನೆರವು, ಶಿಕ್ಷಣ ಸೌಲಭ್ಯ ಹೀಗೆ ಮೂರೂ ಪಕ್ಷಗಳು ಪೈಪೋಟಿಗೆ ಬಿದ್ದವರಂತೆ ‘ಉಚಿತ ಕೊಡುಗೆ‘ಗಳ ಘೋಷಣೆ ನೀಡದವು. ಈ ಉಚಿತ ಕೊಡುಗೆಗಳನ್ನು ಗಮನಿಸಿದಾಗ ಮತದಾರರಿಗೆ ಯಾವುದೇ ಪಕ್ಷವನ್ನಾದರೂ ವಿವೇಚನೆ ಇಲ್ಲದೆ ಕಣ್ಮುಚ್ಚಿ ಆಯ್ಕೆ ಮಾಡಿಕೊಳ್ಳಬಹುದು ಎನ್ನುವಂತಾಗಿತ್ತು.

ದಿಲ್ಲಿ ಚುನಾವಣೆಗೂ ಮುನ್ನ ನಡೆದ ಕೇಂದ್ರ ಬಜೆಟ್‌ನಲ್ಲಿ ಮಧ್ಯಮ ವರ್ಗದ ಮತ್ತು ಸರ್ಕಾರಿ ನೌಕರರಿಗೆ ಹನ್ನೆರಡು ಲಕ್ಷ ರೂ.ಗಳವರೆಗಿನ ಆದಾಯ ತೆರಿಗೆ ವಿನಾಯಿತಿ ಇನ್ನೂ ಮುಂತಾದ ಘೋಷಣೆಗಳು ಬಿಜೆಪಿಯ ಗೆಲುವಿಗೆ ಕಾರಣವಾಗಿರಬಹುದೇ ಎನ್ನುವ ಹತ್ತು ಹಲವು ಪ್ರಶ್ನೆಗಳು ಈಗ ಚರ್ಚೆಗೆ ಗ್ರಾಸವಾಗಿವೆ.

ದಿಲ್ಲಿಯು ದೇಶದ ರಾಜಧಾನಿಯಾಗಿರುವ ಕಾರಣ ಅಲ್ಲಿ ನಿತ್ಯ ಉಸಿರಾಡುವುದೇ ರಾಜಕಾರಣ ಮತ್ತು ವ್ಯಾಪಾರ ವಹಿವಾಟು. ಮತದಾರರಲ್ಲಿ ಮುಖ್ಯವಾಗಿ ಸರ್ಕಾರಿ ಮತ್ತು ಖಾಸಗಿ ಉದ್ದಿಮೆಯ ನೌಕರರು, ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳಿಂದ ಕಟ್ಟಡ ಕಾರ್ಮಿಕರಾಗಿ ವಲಸೆ ಬಂದ ಲಕ್ಷಾಂತರ ಮಂದಿಯೇ ದೆಹಲಿಯ ಬಹುಸಂಖ್ಯಾತ ಮತದಾರರು. ಹೊಸ ದಿಲ್ಲಿ ಮತ್ತು ದಿಲ್ಲಿಗೆ ಹೊಂದಿಕೊಂಡಿರುವ ವ್ಯವಹಾರಿಕವಾಗಿ ದಿಲ್ಲಿಯ ಹೊರಭಾಗವಾಗಿರುವ ಉತ್ತರ ಪ್ರದೇಶಕ್ಕೆ ಸೇರಿದ ಗೌತಮ ಬುದ್ಧನಗರ (ನೊಯ್ಡಾ), ಹರಿಯಾಣದ ಗುರುಗ್ರಾಮ, ಹೀಗೆ ನೆರೆಹೊರೆಯ ರಾಜ್ಯಗಳ ಹಲವು ಪ್ರದೇಶಗಳು ದಿಲ್ಲಿಯ ಉಪನಗರಗಳಾಗಿ ಅಭಿವೃದ್ಧಿ ಹೊಂದಿವೆ.

ಈ ಬಾರಿಯ ಚುನಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಮಾಡು ಇಲ್ಲವೇ ಮಡಿ ಎನ್ನುವಂತೆ ಸವಾಲಾಗಿ ಸ್ವೀಕರಿಸಿದ್ದರು. ಹಾಗಾಗಿ ಮತದಾರರನ್ನು ಕಳೆದೆರಡು ಚುನಾವಣೆಗಳಲ್ಲಿ ಉಚಿತ ಕೊಡುಗೆಗಳಿಂದಲೇ ತನ್ನತ್ತ ಸೆಳೆದಿದ್ದ ಆಮ್ ಆದ್ಮಿ ಪಾರ್ಟಿಗಿಂತ ತಾನೇನೂ ಕಡಿಮೆ ಇಲ್ಲ ಎನ್ನುವಂತೆ ಮೂರು ಹಂತಗಳಲ್ಲಿ ಉಚಿತ ಕೊಡುಗೆಗಳನ್ನು ಧಾರಾಳವಾಗಿ ಬಿಜೆಪಿ ಪ್ರಕಟಿಸಿತು. ಉಚಿತ ಕೊಡುಗೆಗಳಿಂದ ದೇಶ ಮತ್ತು ರಾಜ್ಯಗಳು ಆರ್ಥಿಕವಾಗಿ ದಿವಾಳಿ ಆಗುತ್ತವೆ ಎಂದು ಮಾತು ಮಾತಿಗೂ ಟೀಕಿಸುತ್ತಿದ್ದ ಪ್ರಧಾನಿ ಮೋದಿ ದಿಲ್ಲಿ ಚುನಾವಣೆಯಲ್ಲಿ ಈ ಬಗ್ಗೆ ಬಾಯಿ ತೆರೆಯಲಿಲ್ಲ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡೋ ಅಥವಾ ಹೇಗಿದ್ದರೂ ಕೇಂದ್ರ ಸರ್ಕಾರ ತನ್ನ ಕೈಯಲ್ಲಿ ಇರುವುದರಿಂದ ದಿಲ್ಲಿ ಸರ್ಕಾರಕ್ಕೆ ಆರ್ಥಿಕವಾಗಿ ಒತ್ತಾಸೆಯಾಗಿ ನಿಲ್ಲಬಹುದು ಎನ್ನುವ ಕಾರಣಕ್ಕಾಗಿಯೋ ಆಮ್ ಆದ್ಮಿ ಪಾರ್ಟಿ ಮತ್ತು ಕಾಂಗ್ರೆಸ್ಸಿಗಿಂತಲು ತುಸು ಹೆಚ್ಚು ಎನಿಸುವಷ್ಟು ಉಚಿತ ಕೊಡುಗೆಗಳ ಮಹಾಪೂರವನ್ನೇ ಮತದಾರರಿಗೆ ನೀಡುವ ಮೂಲಕ ಬಿಜೆಪಿ ಅವರ ಒಲವು ಗಳಿಸಿರುವುದನ್ನು ತಳ್ಳಿಹಾಕಲಾಗದು.

ಲೋಕಸಭೆ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಯಲ್ಲಿ ಉಲ್ಟಾ ಆದ ಫಲಿತಾಂಶದಿಂದ ಮುಖಭಂಗಕ್ಕೆ ಒಳಗಾಗಿದ್ದ ಚುನಾವಣಾ ಸಮೀಕ್ಷೆ ನಡೆಸುವ ಸಂಸ್ಥೆಗಳು ದಿಲ್ಲಿ ಚುನಾವಣೆಯಲ್ಲಿ ನೀಡಿದ ಸಮೀಕ್ಷೆ ನಿಜವಾಯಿತು. ಇದರ ಪರಿಣಾಮ ಚುನಾವಣಾ ಸಮೀಕ್ಷೆ ನಡೆಸುವ ಸಂಸ್ಥೆಗಳ ಮೇಲೆ ಮತ್ತೆ ವಿಶ್ವಾಸ ಮೂಡುವಂತೆ ಈ ಚುನಾವಣೆ ಅವುಗಳ ಗೌರವವನ್ನು ಉಳಿಸಿತು. ಕೇವಲ ಒಂದು ಸಂಸ್ಥೆಯ ಭವಿಷ್ಯ ಉಲ್ಟಾ ಆದದ್ದು ಬಿಟ್ಟರೆ ಎಲ್ಲ ಸಮೀಕ್ಷೆಗಳೂ ನಿಜವಾದದ್ದು ವಿಶೇಷ.

ಪ್ರತಿಪಕ್ಷಗಳ ಆಡಳಿತವಿದ್ದ ರಾಜ್ಯಗಳ ನಾಯಕರನ್ನೇ ಗುರಿಯಾಗಿಸಿ ಶುದ್ಧ ಹಸ್ತರೆಂದೇ ಮತ್ತು ಭ್ರಷ್ಟಾಚಾರದ ವಿರುದ್ಧವೇ ಹೋರಾಟ ಮಾಡಿದ ಅರವಿಂದ ಕೇಜ್ರಿವಾಲ್ ಅವರಿಂದ ಹಿಡಿದು ಹಲವು ರಾಜ್ಯಗಳ ನಾಯಕರನ್ನು ಇಡಿ ಮತ್ತು ಸಿಬಿಐ ತನಿಖಾ ಸಂಸ್ಥೆಗಳ ಮೂಲಕ ಬೆನ್ನುಹತ್ತಿದ್ದ ಬಿಜೆಪಿಯ ಕೇಂದ್ರ ಸರ್ಕಾರಕ್ಕೆ ಈಗ ಗೆಲುವು ಸಿಕ್ಕಂತಾಗಿದೆ. ವಿರೋಧ ಪಕ್ಷಗಳ ಪ್ರಮುಖ ನಾಯಕರ ವರ್ಚಸ್ಸನ್ನು ಹರಾಜು ಮಾಡುವ ಮೂಲಕ ಬಿಜೆಪಿಯು ಈಗ ಮತದಾರರ ಮನಸ್ಸನ್ನು ಗೆದ್ದಿದೆ. ಆದರೂ ದಿಲ್ಲಿ ಚುನಾವಣೆಯ ಫಲಿತಾಂಶವನ್ನು ಗಮನಿಸಿದರೆ ಬಿಜೆಪಿಗೆ ಆಮ್ ಆದ್ಮಿ ಪಾರ್ಟಿಯೇ ಪ್ರತಿಸ್ಪರ್ಧಿಯಾಗಿ ಪೈಪೋಟಿ ನೀಡಿದೆ.

ಒಟ್ಟು ೭೦ ಕ್ಷೇತ್ರಗಳಲ್ಲಿ ಬಿಜೆಪಿಯು ೪೮ ಕಡೆಗಳಲ್ಲಿ ಗೆಲುವು ಸಾಽಸಿದರೂ ಆಮ್ ಆದ್ಮಿ ಪಾರ್ಟಿ ೨೨ ಕ್ಷೇತ್ರಗಳನ್ನಾದರೂ ಉಳಿಸಿಕೊಂಡಿದೆ. ಆದರೆ ಕಳೆದ ಚುನಾವಣೆಯಂತೆ ಕಾಂಗ್ರೆಸ್ ಈ ಬಾರಿಯೂ ಸೊನ್ನೆ ಫಲಿತಾಂಶವನ್ನು ಗಳಿಸಿದೆ. ಅಂದರೆ ದಿಲ್ಲಿಯ ಮಟ್ಟಿಗೆ ಕಾಂಗ್ರೆಸ್ ಸತ್ತುಹೋಗಿದೆ ಎನ್ನುವಂತೆ ಈ ಚುನಾವಣೆ ಫಲಿತಾಂಶ ತೋರಿಸಿಕೊಟ್ಟಿದೆ. ರಾಹುಲ್ ಗಾಂಽ ಅವರ ವರ್ಚಸ್ಸು ಮತ್ತು ಕಾರ್ಯವೈಖರಿ ದಿಲ್ಲಿ ಮತದಾರರ ಮನಸ್ಸನ್ನು ಗೆಲ್ಲಲು ಸಾಧ್ಯವಾಗಿಲ್ಲ. ಬಿಜೆಪಿಗೆ ಸಡ್ಡುಹೊಡೆದು ಚುನಾವಣೆಯಲ್ಲಿ ಭಾರೀ ಪೈಪೋಟಿ ನೀಡಿದ ಒಂಬತ್ತೂವರೆ ವರ್ಷಗಳ ಕಾಲ ದಿಲ್ಲಿ ರಾಜ್ಯವನ್ನಾಳಿದ ‘ಶುದ್ಧ ಹಸ್ತ‘ ಮತ್ತು ‘ಭ್ರಷ್ಟಾಚಾರದ ವಿರೋಽ ಹೋರಾಟಗಾರ‘ ಎನ್ನುವ ಹೆಸರು ಗಳಿಸಿದ್ದ ಅರವಿಂದ ಕೇಜ್ರಿವಾಲ್ ಅವರ ನಿಜವಾದ ಹೋರಾಟವನ್ನು ಈ ಚುನಾವಣೆ ಬೆತ್ತಲು ಮಾಡಿದ್ದು ವಿಶೇಷ. ಕೇಂದ್ರದ ಬಿಜೆಪಿ ಸರ್ಕಾರ ಲಿಕ್ಕರ್ ಪರವಾನಗಿಯಲ್ಲಿ ನಡೆದಿದೆ ಎನ್ನಲಾದ ನೂರಾರು ಕೋಟಿ ರೂ. ಭ್ರಷ್ಟಾಚಾರದ ಹಗರಣದ ಬೆನ್ನುಹತ್ತಿ ನಡೆಸಿದ ತನಿಖೆ, ಕೊನೆಗೂ ಕೆಲವು ತಿಂಗಳು ಕೇಜ್ರಿವಾಲ್ ಅವರನ್ನು ಜೈಲಿಗೆ ಕಳುಹಿಸಿದ ಘಟನೆಗಳು ಮತ್ತು ಮುಖ್ಯಮಂತ್ರಿಯ ಐಷಾರಾಮಿ ಬಂಗಲೆ ‘ಶೀಷ್ ಮಹಲ್‘ ನಿರ್ಮಾಣ ಆಮ್ ಆದ್ಮಿ ನಾಯಕನ ಪ್ರಾಮಾಣಿಕತೆಯನ್ನು ದಿಲ್ಲಿಯ ಜನರು ಅನುಮಾನದಿಂದ ನೋಡುವಂತೆ ಮಾಡುವಲ್ಲಿ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಮೋದಿ ಸಫಲರಾದರು.

ದಿಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾ ಅವರನ್ನೂ ಕೂಡ ಭ್ರಷ್ಟಾಚಾರದ ಹಗರಣದ ಮೇಲೆ ಆರು ತಿಂಗಳು ಜೈಲಿಗೆ ಕಳುಹಿಸುವಲ್ಲಿ ಕೇಂದ್ರದ ಇಡಿ ಮತ್ತು ಸಿಬಿಐ ತನಿಖೆಗಳು ಮತ್ತು ಕೇಂದ್ರ ಸರ್ಕಾರ ಹೇಳಿದಂತೆ ನಿರಂತರವಾಗಿ ಕಿರುಕುಳ ನೀಡುತ್ತಾ ಬಂದ ಲೆಫ್ಟಿನೆಂಟ್ ಗೌರ್ನರ್ ಆಡಳಿತ ಬಿಜೆಪಿ ಗೆಲುವಿಗೆ ಸಹಾಯವಾದದ್ದನ್ನು ಅಲ್ಲಗಳೆಯಲಾಗದು. ಕೇಂದ್ರ ಸರ್ಕಾರ ದೇಶದಲ್ಲಿ ಪ್ರತಿಪಕ್ಷಗಳ ಸರ್ಕಾರಗಳನ್ನು ತನ್ನ ತನಿಖಾ ಸಂಸ್ಥೆಗಳ ಮೂಲಕ ಹೇಗೆ ಬಗ್ಗುಬಡಿಯಬಹುದು ಎನ್ನುವುದಕ್ಕೆ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ನಡೆದ ಘಟನೆಗಳು ಸಾಕ್ಷಿಯಾಗಿವೆ. ಕೇಂದ್ರ ಸರ್ಕಾರವು ದ್ವೇಷದ ರಾಜಕಾರಣ ಮಾಡುತ್ತಿದೆ ಎನ್ನುವ ಕಾರಣಕ್ಕಾಗಿಯೇ ಜೈಲಿಗೆ ಹೋದರೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದೆ ಜೈಲಿನಲ್ಲಿದ್ದುಕೊಂಡೇ ಆಡಳಿತ ನಡೆಸಿದ ಕೇಜ್ರಿವಾಲ್ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳ ಮಟ್ಟಕ್ಕೆ ಅಭಿವೃದ್ಧಿ ಪಡಿಸಿ ಜನರ ಮನಸ್ಸನ್ನು ಗೆದ್ದಿದ್ದ ಶಿಕ್ಷಣ ಸಚಿವೆ ಆತಿಶಿ ಮಾರ್ನೆಲಾ ಅವರನ್ನು ತಾತ್ಕಾಲಿಕ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ವಿಶೇಷ.

ಆದರೂ ಅರವಿಂದ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರನ್ನು ದಿಲ್ಲಿಯ ಮತದಾರರು ಅವರ ಮೇಲಿನ ಆರೋಪಗಳಿಂದ ಕ್ಷಮಿಸಲಿಲ್ಲ. ಅವರಿಗೊಂದು ಪಾಠ ಕಲಿಸಿದರು. ಮತ ಎಣಿಕೆಯ ಆರಂಭದಿಂದಲೂ ಹಿನ್ನಡೆಯಲ್ಲಿದ್ದ ಆತಿಶಿ ಕೊನೆಯ ಘಟ್ಟದಲ್ಲಿ ಮೂರೂವರೆ ಸಾವಿರ ಮತಗಳ ಅಂತರದಿಂದ ಗೆಲುವು ಸಾಽಸುವ ಮೂಲಕ ಮುಖ್ಯಮಂತ್ರಿಯಾಗಿ ತಮ್ಮ ವರ್ಚಸ್ಸನ್ನು ಕಾಪಾಡಿಕೊಂಡು ತಮ್ಮ ಪಕ್ಷದ ಮರ್ಯಾದೆಯನ್ನು ಉಳಿಸಿಕೊಂಡರು.

ಅದೇನೇ ಇದ್ದರೂ ದಿಲ್ಲಿಯಲ್ಲಿ ತನ್ನ ಸರ್ಕಾರದ ನೆರಳಿನಡಿಯಲ್ಲೇ ಇದ್ದ ಮೂರನೇ ಶಕ್ತಿಯಾಗಿ ಬೆಳೆಯುತ್ತಿದ್ದ ಆಮ್ ಆದ್ಮಿ ಪಾರ್ಟಿಯನ್ನು ಬಿಜೆಪಿಯು ಚುನಾವಣೆಯಲ್ಲಿ ಗಂಭೀರವಾಗಿಯೇ ತೆಗೆದುಕೊಂಡಿತ್ತು. ತನ್ನ ಪ್ರಚಾರದ ದಿನಗಳಲ್ಲಿ ಎದುರಾಳಿ ಪಕ್ಷದ ಶಕ್ತಿಯನ್ನು ಕುಂದಿಸಲು ಒಂದು ರಾಜಕೀಯ ಪಕ್ಷ ಏನೆಲ್ಲ ಕೆಲಸ ಮಾಡಬಹುದೋ ಅದೆಲ್ಲವನ್ನೂ ಬಿಜೆಪಿಯು ಎಎಪಿ ಮೇಲೆ ಪ್ರಯೋಗಿಸಿತು. ದಿಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಬಲ ವಿರೋಧಿಯಲ್ಲ ಎನ್ನುವ ಸತ್ಯವನ್ನು ಬಿಜೆಪಿ ಕಂಡುಕೊಂಡಿದ್ದರಿಂದ ಪ್ರಚಾರ ಕಾರ್ಯದಲ್ಲಿ ಆ ಪಕ್ಷವನ್ನು ನಗಣ್ಯವಾಗಿ ನೋಡುತ್ತಾ ಬಂದಿತು.

” ಬಿಜೆಪಿ ಮತ್ತು ಕಾಂಗ್ರೆಸ್‌ನಂತಹ ರಾಷ್ಟ್ರೀಯ ಪಕ್ಷಗಳ ಆಡಳಿತ ವೈಖರಿ ಮತ್ತು ಭ್ರಷ್ಟಾಚಾರದ ವಿರುದ್ಧ ನಡೆಸಿದ ಹೋರಾಟದ ಮೂಸೆಯಿಂದ ಹುಟ್ಟಿಕೊಂಡ ಪಕ್ಷವೊಂದು ಹಲವು ಸವಾಲುಗಳನ್ನು ಎದುರಿಸಿ ಕೊನೆಗೆ ದೇಶದ ಉದ್ದಗಲಕ್ಕೂ ದೈತ್ಯವಾಗಿ ಬೆಳೆದ ಬಿಜೆಪಿಯ ಮುಂದೆ ಶರಣಾಗಬೇಕಾಗಿ ಬಂದದ್ದು ಇಂದಿನ ರಾಜಕಾರಣದ ವಿಶೇಷ. ಆಮ್ ಆದ್ಮಿ ಪಕ್ಷಕ್ಕೆ ‘ಇಂಡಿಯಾ‘ ಮೈತ್ರಿಕೂಟವು ಒಂದು ಶಕ್ತಿಯಾಗಿ ನಿಲ್ಲಲಿಲ್ಲ ಎನ್ನುವುದು ವಾಸ್ತವ. ಬದಲಾಗಿ ಮೈತ್ರಿಕೂಟದ ನೇತೃತ್ವವಹಿಸಿದ್ದ ಕಾಂಗ್ರೆಸ್ ಪಕ್ಷವೇ ಅದರ ವಿರುದ್ಧ ಸೆಣಸಾಡಿತು. ಜೊತೆಗೆ ‘ಇಂಡಿಯಾ‘ ಮೈತ್ರಿಕೂಟ ದಿಲ್ಲಿಯಲ್ಲಿ ಯಾವ ಜಾದೂವನ್ನು ಮಾಡಲಾಗದೆ ಕೇವಲ ಬಿಜೆಪಿಯನ್ನು ವಿರೋಧಿಸುವುದಕ್ಕಾಗಿ ಹುಟ್ಟಿಕೊಂಡ ಒಂದು ರಾಜಕೀಯ ಗುಂಪು ಎನ್ನುವಷ್ಟಕ್ಕೆ ಸೀಮಿತವಾಯಿತು.

ಆಂದೋಲನ ಡೆಸ್ಕ್

Recent Posts

ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ಇಳುವರಿ ಜೊತೆಗೆ ಹೆಚ್ಚಿನ ಆದಾಯ ಪಡೆಯರಿ : ರೈತರಿಗೆ ಸಿಎಂ ಕರೆ

ಬೆಳಗಾವಿ : ರಾಜ್ಯ ಸರ್ಕಾರ ರೈತ ಪರ ಸರಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ…

19 mins ago

ಟಿ-20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ :ಸೂರ್ಯಕುಮಾರ್ ಯಾದವ್ ನಾಯಕ

ಹೊಸದಿಲ್ಲಿ: ಮುಂಬರುವ ಐಸಿಸಿ ಟಿ-೨೦ ವಿಶ್ವಕಪ್‌ಗಾಗಿ ೧೫ ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಶುಭಮನ್…

30 mins ago

ಮೊಟ್ಟೆ ಕ್ಯಾನ್ಸರ್‌ ಕಾರಕವಲ್ಲ : ಕೇಂದ್ರ ವರದಿ

ಹೊಸದಿಲ್ಲಿ : ಮೊಟ್ಟೆ ಸೇವೆನೆಗೆ ಸುರಕ್ಷಿತವಾಗಿದ್ದು ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕವಾಗುವ ಯಾವುದೇ ಅಂಶ ಪತ್ತೆ ಆಗಿಲ್ಲ ಎಂದು ಕೇಂದ್ರ ಆಹಾರ…

33 mins ago

‘ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಿ’ : ಶಿವಶಂಕರ್ ಸೂಚನೆ

ಚಾಮರಾಜನಗರ : ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವಂತಹ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಲಶಕ್ತಿ ಮಂತ್ರಾಲಯದ…

38 mins ago

ಮೈಸೂರು | ನಾಳೆಯಿಂದ ಅರಮನೆ ಅಂಗಳದಲ್ಲಿ ಫಲಪುಷ್ಪ ಪ್ರದರ್ಶನ

ಮೈಸೂರು : ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಪ್ರವಾಸಿಗರು, ಸ್ಥಳೀಯರಿಗೆ ಮನರಂಜನೆ ಒದಗಿಸಲು ಅರಮನೆ ಅಂಗಳದಲ್ಲಿ ಡಿ.೨೧ರಿಂದ ೩೧ರವರೆಗೆ…

1 hour ago

ರೇಸ್‌ಕ್ಲಬ್‌ ಸುತ್ತಮುತ್ತ ಕುದುರೆ ಚಟುವಟಿಕೆಗಳಿಗೆ ನಿರ್ಬಂಧ

ಮೈಸೂರು : ಮೈಸೂರಿನ ರೇಸ್‌ಕ್ಲಬ್‌ನ ಪ್ರದೇಶದ ಸುತ್ತಲಿನ ಎರಡು ಕಿ.ಮೀ ವ್ಯಾಪ್ತಿಯಲ್ಲಿ ಕುದುರೆ, ಕತ್ತೆ, ಹೇಸರಗತ್ತೆ ಪ್ರಾಣಿಗಳ ಚಲನವಲನ, ಕುದುರೆಗಳನ್ನು…

2 hours ago