ತಲಾ ಆದಾಯ – ಭಾರತವನ್ನೂ ಮೀರಿಸಿದ ಬಾಂಗ್ಲಾದೇಶ

ಮೂಲಭೂತವಾದವನ್ನು ತಿರಸ್ಕರಿಸಿರುವುದರಿಂದಲೇ ಬಾಂಗ್ಲಾದೇಶವು ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿದೆ!   

ಕೆಲವೇ ವಾರಗಳ ಮುನ್ನ ಭಾರತದ ವಿಶ್ಲೇಷಕರು, ಭಾರತ ಸರ್ಕಾರ ಅನಧಿಕೃತವಾಗಿ, ಎಂದೂ ಎದುರಾಗುವುದಿಲ್ಲ ಎಂದು ಹೇಳುತ್ತಿದ್ದ ಅಂಕಿಅಂಶಗಳಿಗೆ ಎದುರಾಗಬೇಕಾಯಿತು. ೨೦೨೦ರಲ್ಲೇ ಬಾಂಗ್ಲಾದೇಶ ಭಾರತವನ್ನು ಹಿಂದಿಕ್ಕುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿತ್ತು. ಭಾರತ ಸರ್ಕಾರ ಸೂಕ್ತ ನೀತಿಗಳನ್ನು ಅನುಸರಿಸದೆ ಹೋದರೆ ಬಾಂಗ್ಲಾದೇಶ ಭಾರತವನ್ನು ಶೀಘ್ರದಲ್ಲೇ ಹಿಂದಿಕ್ಕುತ್ತದೆ ಎಂಬ ಅಭಿಪ್ರಾಯವೂ ದಟ್ಟವಾಗಿತ್ತು. ಈಗ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಒದಗಿಸಿರುವ ದತ್ತಾಂಶಗಳು ಆತಂಕಗಳನ್ನು ರುಜುವಾತು ಮಾಡಿವೆ. ೨೦೨೦ರಿಂದಲೇ ಬಾಂಗ್ಲಾದೇಶ ಭಾರತಕ್ಕಿಂತಲೂ ಹೆಚ್ಚಿನ ತಲಾ ಜಿಡಿಪಿಯನ್ನು ದಾಖಲಿಸಲಾರಂಭಿಸಿದ್ದು, ಇದೇ ಗತಿಯನ್ನು ಗಮನಿಸಿದರೆ, ಭವಿಷ್ಯದಲ್ಲೂ ಭಾರತಕ್ಕಿಂತಲೂ ಮುಂದೆ ಸಾಗುವ ಸಾಧ್ಯತೆಗಳನ್ನು ಕಾಣಬಹುದಾಗಿದೆ.

ಇದು ಎರಡು ಕಾರಣಗಳಿಗಾಗಿ ಪ್ರಶಂಸಾರ್ಹ ಎನಿಸುತ್ತದೆ. ಮೊದಲನೆಯದಾಗಿ, ಬಾಂಗ್ಲಾದೇಶ ಭಾರತಕ್ಕೆ ಹೋಲಿಸಿದರೆ ಗಾತ್ರದಲ್ಲಿ ಮತ್ತು ಒಟ್ಟು ಜಿಡಿಪಿಯಲ್ಲಿ, ಒಂದು ಪುಟ್ಟ ದೇಶ. ಆದರೂ ತಲಾ ಜಿಡಿಪಿಯನ್ನು ಹೆಚ್ಚಿಸುವಲ್ಲಿ ಅದು ಭಾರತಕ್ಕಿಂತಲೂ ಮುನ್ನಡೆ ಸಾಧಿಸಿದೆ. ಜನಸಂಖ್ಯೆ ಹೆಚ್ಚಾಗಿದೆ ಎಂಬ ಕಾರಣ ಒಡ್ಡಿ ಭಾರತ ವಾಸ್ತವವನ್ನು ಮರೆಮಾಚಲಾಗುವುದಿಲ್ಲ. ಏಕೆಂದರೆ ಬಾಂಗ್ಲಾದೇಶದಲ್ಲಿ ಜನದಟ್ಟಣೆ ಭಾರತಕ್ಕಿಂತಲೂ ಹೆಚ್ಚಾಗಿದೆ. ಭಾರತದಲ್ಲಿ ಪ್ರತಿ ಕಿಲೋಮೀಟರ್‌ಗೆ ಜನಸಂಖ್ಯೆ ೪೧೫ರಷ್ಟಿದ್ದರೆ ಬಾಂಗ್ಲಾದೇಶದಲ್ಲಿ ೧೧೦೬ರಷ್ಟಿದೆ. ಬಾಂಗ್ಲಾದೇಶದಲ್ಲಿ ಭಾರತದಷ್ಟೇ ಕಡಿಮೆ ಪ್ರಮಾಣದ ಜನದಟ್ಟಣೆ ಇದ್ದಿದ್ದರೆ ಅಲ್ಲಿನ ತಲಾ ಜಿಡಿಪಿಯ ಪ್ರಮಾಣ ಇನ್ನೂ ದುಪ್ಪಟ್ಟಾಗುತ್ತಿತ್ತು. ಭಾರತ ಇನ್ನೂ ಹಿಂದುಳಿಯುತ್ತಿತ್ತು.

ಇತ್ತೀಚೆಗೆ ಈ ಲೇಖಕ ದುಬೈನಲ್ಲಿ ನೆಲೆಸಿರುವ ಬಾಂಗ್ಲಾದೇಶೀಯರೊಡನೆ ಚರ್ಚೆ ನಡೆಸಿದ್ದ ಸಂದರ್ಭದಲ್ಲಿ, ಅಲ್ಲಿ ಅನೇಕ ಬಾಂಗ್ಲಾದೇಶದ ಪ್ರಜೆಗಳು ದುಬೈ ತೊರೆದು ಸ್ವದೇಶಕ್ಕೆ ಮರಳುತ್ತಿರುವುದಾಗಿ ವಿಷಾದ ವ್ಯಕ್ತಪಡಿಸಿದ್ದರು. ಹೀಗೆ ತೊರೆಯಲು ಕಾರಣವೇನೆಂದರೆ ಬಾಂಗ್ಲಾದೇಶದಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿದ್ದು ಕೌಶಲರಹಿತ ಕಾರ್ಮಿಕರಿಗೂ ದಿನಕ್ಕೆ ೬೦೦ ಟಾಕಾಗಳಷ್ಟು ವೇತನ ಪಡೆಯಲು ಸಾಧ್ಯವಾಗುತ್ತಿದೆ. ಬಾಂಗ್ಲಾದೇಶದಲ್ಲಿ ವೇತನವೂ ಹೆಚ್ಚಳವಾಗುತ್ತಿದ್ದು ಅಲ್ಲಿಂದ ದುಬೈಗೆ ಬರುವ ವಲಸೆ ಕಾರ್ಮಿಕರ ದೃಷ್ಟಿಯಲ್ಲಿ ದುಬೈ ತನ್ನ ಆಕರ್ಷಣೆಯನ್ನು ಕಳೆದುಕೊಂಡಿದೆ. ಭಾರತದಲ್ಲೂ ಸಹ ಪೊಲೀಸರ ಬಳಿ ಕೇಳಿದರೆ ಹೇಳುತ್ತಾರೆ, ಬಾಂಗ್ಲಾದೇಶದಿಂದ ವಲಸೆ ಬರುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ವಲಸೆ ನೀತಿಯಾಗಲೀ, ಭದ್ರತಾ ಅಧಿಕಾರಿಗಳು ಹೆಚ್ಚು ಜಾಗ್ರತೆ ವಹಿಸುತ್ತಿದ್ದಾರೆ ಎನ್ನುವುದಾಗಲೀ ಅಲ್ಲ, ಬದಲಾಗಿ ಬಾಂಗ್ಲಾದೇಶದಲ್ಲೇ ಅವರಿಗೆ ಹೆಚ್ಚಿನ ಅವಕಾಶಗಳು ಲಭಿಸುತ್ತಿವೆ. ಇದಕ್ಕೆ ವ್ಯತಿರಿಕ್ತವಾಗಿ ಬಿಹಾರದಿಂದ ಬಾಂಗ್ಲಾದೇಶಕ್ಕೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಐಎಂಎಫ್ ತನ್ನ ವರದಿಯಲ್ಲಿ ಹೇಳಿರುವಂತೆ ಜಿಡಿಪಿಯ ಒಂದು ಭಾಗವಾಗಿ ಆದಾಯವು ಸತತವಾಗಿ ಕ್ಷೀಣಿಸುತ್ತಲೇ ಇದ್ದು ಇತರ ಮಿತ್ರ ರಾಷ್ಟ್ರಗಳಿಗಿಂತಲೂ ಕಡಿಮೆ ಇದೆ. ೨೦೧೩ರಿಂದಲೂ ಇದೇ ಭೂ ಪ್ರದೇಶದಲ್ಲಿ ಬೆಳವಣಿಗೆಯಾಗುತ್ತಿರುವ ಮಾರುಕಟ್ಟೆಗಳಿಗೆ ಹೋಲಿಸಿದರೆ ಅಂತರ ಹೆಚ್ಚಾಗುತ್ತಲೇ ಇದೆ. ಬಾಂಗ್ಲಾದೇಶವು ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಸುರಕ್ಷತೆಗಾಗಿ ಮಾಡುವ ಖರ್ಚುಗಳನ್ನು ಹೆಚ್ಚಿಸಿ ಮೂಲ ಸೌಕರ್ಯಗಳಲ್ಲಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಬೇಕಿದೆ .

ಇದೇ ವೇಳೆ ಭಾರತದಲ್ಲೂ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಖರ್ಚು ಅತಿ ಕಡಿಮೆ ಎಂದೇ ಹೇಳಬಹುದು. ಐಎಂಎಫ್ ವರದಿಯಲ್ಲೇ ಹೇಳಿರುವಂತೆ ಸಾಲದ ಬಿಕ್ಕಟ್ಟಿನ ಅಪಾಯಗಳು ಕಡಿಮೆಯೇ ಇದ್ದರೂ, ಸಾಲ ತೀರುವಳಿ ಮತ್ತು ಆದಾಯದ ನಡುವಿನ ಅನುಪಾತ ಹೆಚ್ಚಾಗುತ್ತಲೇ ಇದೆ. ಅಭಿವೃದ್ಧಿ ಪ್ರೇರಿತ ಮತ್ತು ಪುನಸ್ಸಂಪಾದನೆಗೆ ನೀಡುವ ಬೆಂಬಲವನ್ನೂ ಸೇರಿದಂತೆ, ಆದ್ಯತೆಯ ವೆಚ್ಚಗಳು ಸಾರ್ವಜನಿಕ ಹಣಕಾಸು ನಿರ್ವಹಣೆಯ ಮೇಲೆ ಒತ್ತಡ ಹೆಚ್ಚಿಸುತ್ತದೆ.

ಆದಾಗ್ಯೂ ಈ ಕೊರತೆಗಳ ಹೊರತಾಗಿಯೂ ಸರ್ಕಾರವು ಕ್ಷಿಪ್ರಗತಿಯಲ್ಲಿ ಸ್ಪಂದಿಸಿದ್ದು ಕೋವಿದ್ ಸಾಂಕ್ರಾಮಿಕದಿಂದ ಉದ್ಭವಿಸಿದ ಆರ್ಥಿಕ ದುಷ್ಪರಿಣಾಮಗಳನ್ನು ನಿವಾರಿಸಲೆತ್ನಿಸಿದೆ. ಹಣಕಾಸು ರವಾನೆಯ ಪ್ರಮಾಣ ಕೋವಿದ್ ಪೂರ್ವದ ಪರಿಸ್ಥಿತಿಗಿಂತಲೂ ಉತ್ತಮವಾಗಿದ್ದು ಇದರಿಂದ ಬಳಕೆಗೆ ಹೆಚ್ಚು ಪ್ರೋತ್ಸಾಹ ದೊರೆತಿದೆ.

೨೦೨೦ರ ಹಣಕಾಸು ವರ್ಷದಲ್ಲಿ ಜಿಡಿಪಿಯಶೇ ೧.೭ರಷ್ಟಿದ್ದ ಚಾಲ್ತಿ ಖಾತೆಯ ಕೊರತೆ ೨೦೨೧ರ ಹಣಕಾಸು ವರ್ಷದಲ್ಲಿ ಶೇ ೧.೩ಕ್ಕೆ ಕುಸಿದಿದೆ. ಭಾರತಕ್ಕೆ ಹೋಲಿಸಿದರೆ ಬಾಂಗ್ಲಾದೇಶ ಚಾಲ್ತಿ ಖಾತೆಯ ಅಧಿಕ್ಯವನ್ನೇ ನಿರಂತರವಾಗಿ ಕಾಣುತ್ತಿದೆ. ಆದಾಗ್ಯೂ ೨೦೨೨ರ ಹಣಕಾಸು ವರ್ಷದಲ್ಲಿ ಚಾಲ್ತಿಖಾತೆಯ ಪ್ರಮಾಣ ಜಿಡಿಪಿಯ ಶೇ ೨.೪ರಷ್ಟಾಗಲಿದೆ. ಏಕೆಂದರೆ ಆಮದು ಪ್ರಮಾಣ ಹೆಚ್ಚಾಗಲಿದ್ದು ಹಣರವಾನೆಯೂ ಸಹ ಸಾಧಾರಣ ಮಟ್ಟದಲ್ಲಿರಲಿದೆ ಎಂದು ಐಎಂಎಫ್ ಹೇಳುತ್ತದೆ.

ಹಣಕಾಸು ವರ್ಷ ೨೦೨೨ರಲ್ಲಿ ಅಭಿವೃದ್ಧಿಯು ಶೇ ೬.೬ರಷ್ಟಾಗಲಿದ್ದು ರಫ್ತು ವ್ಯಾಪಾರದಲ್ಲಿ ವೃದ್ಧಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಉತ್ತೇಜನಾಪೂರ್ವಕ ಯೋಜನೆಗಳ ಮುಂದುವರಿಕೆ, ಹೊಂದಾಣಿಕೆಯಾಗುವಂತಹ ಹಣಕಾಸು ಮತ್ತು ಆರ್ಥಿಕ ನೀತಿಗಳು ಇದಕ್ಕೆ ಕಾರಣ ಎನ್ನಲಾಗಿದೆ.

ಕೋವಿದ್ ಸಂಬಂಧಿ ವೆಚ್ಚವನ್ನು ಹೆಚ್ಚಿಸಲಾಗಿರುವುದರಿಂದ ಹಣಕಾಸು ಕೊರತೆ ಜಿಡಿಪಿಯ ಶೇ ೬.೧ರಷ್ಟಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿ ಅಷ್ಟಾಗಿ ಕೇಳಿಬರದ ಮತ್ತೊಂದು ಅಂಶವೆಂದರೆ, ಬಾಂಗ್ಲಾದೇಶದ ಆರ್ಥಿಕತೆಯಲ್ಲಿ ಬೆಳವಣಿಗೆಯಾಗಲು ಮೂಲ ಕಾರಣ ಶೇಖ್ ಹಸೀನಾ ಸರ್ಕಾರವು ( ಆಕೆ ಪ್ರಧಾನಿಯಾಗಿದ್ದ ೧೯೯೬-೨೦೦೧ರ ಅವಧಿ ಮತ್ತು ೨೦೦೯ರಿಂದ ಈಚೆಗೆ) ದೇಶದಲ್ಲಿ ಮೂಲಭೂತವಾದಿ ಶಕ್ತಿಗಳಿಗೆ ಪ್ರಾಬಲ್ಯ ಸಾಧಿಸಲು ಅವಕಾಶವನ್ನು ನೀಡದಿರುವುದು. ಕೋಮು ಆಧಾರದ ಮೇಲೆ ಜನರನ್ನು ಧೃವೀಕರಿಸುವ ಯಾವುದೇ ಪ್ರಯತ್ನಗಳನ್ನು ಕ್ಷಿಪ್ರಗತಿಯಲ್ಲಿ, ನಿರ್ಣಾಯಕವಾಗಿ ನಿಯಂತ್ರಿಸಲಾಗುತ್ತಿದೆ.

ಮುಸ್ಲಿಂ ಜನಸಂಖ್ಯೆಯು ಶೇ ೯೦ರಷ್ಟಿದ್ದರೂ ಇದು ಸಾಧ್ಯವಾಗಿದೆ. ಆಗಾಗ್ಗೆ ಭಾರತದಲ್ಲಿ ನಡೆಯುವ ಕೋಮು ಸಂಘರ್ಷಗಳು ಬಾಂಗ್ಲಾದೇಶದಲ್ಲೂ ಪ್ರಭಾವ ಬೀರುವ ಸಂದರ್ಭದಲ್ಲಿ ಸರ್ಕಾರವು ಕೂಡಲೇ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತರುತ್ತದೆ.

ಅಚ್ಚರಿದಾಯಕ ಅಂಶವೆಂದರೆ ಶೇಖ್ ಹಸೀನಾ ಅವರ ಪಕ್ಷ ೧೪ ಇತರ ಪಕ್ಷಗಳೊಡನೆ ಸಮ್ಮಿಶ್ರ ಸರ್ಕಾರ ನಡೆಸುತ್ತಿದ್ದರೂ, ಸರ್ಕಾರ ಇನ್ನೂ ಸುಸ್ಥಿರವಾಗಿದೆ. ಬಾಂಗ್ಲಾದೇಶದಲ್ಲಿ ಬಂಗಾಲಿಗಳ ಸಂಖ್ಯೆ ಶೇ ೯೮ರಷ್ಟಿದೆ. ಅವರ ಪೈಕಿ ಹಿಂದೂಗಳ ಸಂಖ್ಯೆ ಶೇ ೮.೫ರಷ್ಟಿದೆ. ಇತರ ಧಾರ್ಮಿಕ ಅಲ್ಪಸಂಖ್ಯಾತರೆಂದರೆ ಕ್ರೈಸ್ತರು ಮತ್ತು ಬೌದ್ಧರು ಶೇ ೧ರಷ್ಟೂ ಇಲ್ಲ.

ಕುತೂಹಲಕಾರಿ ಅಂಶವೆಂದರೆ ಬಾಂಗ್ಲಾದೇಶದ ಸಂವಿಧಾನವು ಧಾರ್ಮಿಕ ಸ್ವಾತಂತ್ರ್ಯವನ್ನು ನೀಡುತ್ತದೆ, ಹಾಗಾಗಿ ಅಧಿಕೃತವಾಗಿ ಜಾತ್ಯತೀತ ರಾಷ್ಟ್ರವಾಗಿದೆ. ಇಸ್ಲಾಂ ಪ್ರಭುತ್ವದ ಧರ್ಮ ಎಂದು ಪರಿಗಣಿಸಲ್ಪಟ್ಟರೂ ಇದು ಸಾಧ್ಯವಾಗಿದೆ. ಬಾಂಗ್ಲಾದೇಶ ಸರ್ಕಾರವು ಪ್ರತಿಯೊಬ್ಬ ಪ್ರಜೆಗೂ ಯಾವುದೇ ಧರ್ಮವನ್ನು ಅನುಸರಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕು ನೀಡುತ್ತದೆ.

ಪ್ರತಿಯೊಂದು ಧಾರ್ಮಿಕ ಸಮುದಾಯಕ್ಕೂ ಅಥವಾ ಗುಂಪಿಗೂ ತಮ್ಮದೇ ಆದ ದಾರ್ಮಿಕ ಸಂಸ್ಥೆಗಳನ್ನು ಸ್ಥಾಪಿಸಿ, ನಿರ್ವಹಿಸಲು ಅಧಿಕಾರವನ್ನು ನೀಡುತ್ತದೆ. ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಾದರೂ ಯಾವುದೇ ವ್ಯಕ್ತಿಯೂ ಧಾರ್ಮಿಕ ಮಾರ್ಗದರ್ಶನವನ್ನು ಪಡೆಯಬೇಕಿಲ್ಲ ಅಥವಾ ತನ್ನ ಧರ್ಮಕ್ಕೆ ಸಂಬಂಧಿಸದೆ ಇರುವಂತಹ ಯಾವುದೇ ಧಾರ್ಮಿಕ ಆಚರಣೆಗಳಲ್ಲಿ, ಪೂಜಾ ವಿಧಾನಗಳಲ್ಲಿ , ನಿರ್ದೇಶನ ನೀಡಿದ್ದರೂ ಸಹ, ಭಾಗವಹಿಸಬೇಕಿಲ್ಲ.

ಮಹತ್ತರವಾದ ಸಂಗತಿ ಎಂದರೆ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಪಾಲ್ಗೊಳ್ಳುವ ವ್ಯಕ್ತಿಯು ಧಾರ್ಮಿಕ ಉಪದೇಶ ಅಥವಾ ಮಾರ್ಗದರ್ಶನವನ್ನು ಪಡೆಯಬೇಕಿಲ್ಲ ಒಂದು ವೇಳೆ ನಿರ್ದೇಶನ ಇದ್ದರೂ ಸಹ ಅಂತಹ ಆಚರಣೆಗಳು ತನ್ನ ಧರ್ಮಕ್ಕೆ ಸಂಬಂಧಿಸದೆ ಇದ್ದರೆ ಆ ವ್ಯಕ್ತಿಗಳು ಅಂತಹ ಆಚರಣೆಗಳಲ್ಲಿ, ಪೂಜಾ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕಿಲ್ಲ.

ಹಿಂದೂ ಶಾಲೆಗಳಲ್ಲಿ ಕುರಾನ್ ಪಠಣ ಮಾಡುವ ಅಥವಾ ಮುಸ್ಲಿಂ ಶಾಲೆಗಳಲ್ಲಿ ಗೀತೆಯನ್ನು ಪಠಿಸುವ ಹಪಹಪಿ ಕಾಣಲಾಗುವುದಿಲ್ಲ.

ಸಾಮಾಜಿಕ ಸೌಹಾರ್ದತೆಯನ್ನು ಕಾಪಾಡಲು ನೀಡಿರುವ ಈ ಪ್ರಾಶಸ್‌ತಯ ಮತ್ತು ಮೂಲಭೂತವಾದವನ್ನು ಸಂಪೂರ್ಣವಾಗಿ ತಿರಸ್ಕರಿಸಿರುವುದರಿಂದಲೇ ಬಾಂಗ್ಲಾದೇಶವು, ಐಎಂಎಫ್ ಸೂಚಿಸಿರುವ ಹಲವು ನ್ಯೂನತೆಗಳ ಹೊರತಾಗಿಯೂ, ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿದೆ. ಬಾಂಗ್ಲಾದೇಶ ಇನ್ನೂ ಉತ್ತಮ ಸಾಧನೆ ಮಾಡುತ್ತದೆ ಎಂಬ ನಿರೀಕ್ಷೆಯಲ್ಲಿರಬಹುದು. ಯಾವುದೇ ದೇಶ ತನ್ನ ತಲಾ ಜಿಡಿಪಿ ಮತ್ತು ತಲಾ ಆದಾಯವನ್ನು ಪ್ರತಿ ವರ್ಷ ಹೆಚ್ಚಿಸಿಕೊಳ್ಳುವುದೋ ಆ ದೇಶವು ಮುನ್ನಡೆ ಸಾಧಿಸಲು ಸಾಧ್ಯ .

(ಲೇಖಕರು- ಫ್ರೀ ಪ್ರೆಸ್ ಜರ್ನಲ್ನ ಸಲಹಾ ಸಂಪಾದಕರು, ಅನುವಾದ : ನಾ ದಿವಾಕರ)

andolana

Recent Posts

ಮುಡಾಗೆ ಆರ್ಥಿಕ ಸಂಕಷ್ಟ; 20 ಕೋಟಿ ರೂ ನಷ್ಟ

ಮೈಸೂರು: ಬದಲಿ ನಿವೇಶನ ಹಂಚಿಕೆ, ೫೦:೫೦ ಅನುಪಾತದಲ್ಲಿ ನಿವೇಶನ ಅಕ್ರಮ ಹಂಚಿಕೆ ಹಗರಣದಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿರುವ ಮೈಸೂರು…

42 mins ago

ಆಂದೋಲನ ಫಲಶ್ರುತಿ: ಕೊನೆಗೂ ತೆರವಾಯ್ತು ಬೃಹತ್‌ ಮರದ ಕಾಂಡ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜುಂಬೂ ಸವಾರಿ ಸಾಗುವ ಮಾರ್ಗದಲ್ಲಿ ಕಳೆದ ಎರಡೂ ವರ್ಷಗಳಿಂದ ಬಿದ್ದಿದ್ದ ಬೃಹತ್ ಮರದ ಕಾಂಡವನ್ನು…

52 mins ago

ಜಂಬೂ ಸವಾರಿ ಮಾರ್ಗದಲ್ಲಿ ಸಣ್ಣ ಬದಲಾವಣೆ

ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿಯನ್ನು ವೀಕ್ಷಿಸಲು ಆಗಮಿಸಿದ ಎಲ್ಲರಿಗೂ ಚಿನ್ನದ ಅಂಬಾರಿ ನೋಡುವ ಅವಕಾಶ ಸಿಗಬೇಕು…

59 mins ago

ಪೈಲ್ವಾನರ ಕಸರತ್ತಿಗೆ ಗರಡಿ ಮನೆಗಳು ಸಜ್ಜು

ಮೈಸೂರು: ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ ಎಂದು ಕರೆಯುವ ಮೈಸೂರನ್ನು ಗರಡಿ ಮನೆಗಳ ನಗರಿ ಎಂದೂ ಇತ್ತೀಚಿನ ವರ್ಷಗಳಲ್ಲಿ ಕರೆಯುವುದು…

1 hour ago

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

9 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

11 hours ago