ಪ್ರವಾಸಿಗರ ಸ್ವರ್ಗಕ್ಕೆ ತ್ವರಿತವಾಗಿ ಬೇಕಿದೆ ಅಗತ್ಯ ಮೂಲಭೂತ ಸೌಕರ್ಯ!

ದಕ್ಷಿಣದ ಕಾಶ್ಮೀರ, ಸ್ಕಾಟ್‌ಲ್ಯಾಂಡ್ ಆಫ್ ಇಂಡಿಯಾ ಎಂದೆಲ್ಲ ಕರೆಸಿಕೊಳ್ಳುವ ಕೊಡಗು ಜಿಲ್ಲೆ ಪ್ರವಾಸೋದ್ಯಮದಿಂದ ಕಳೆದ ೧೫ ವರ್ಷಗಳಿಂದ ಗಮನ ಸೆಳೆದಿದೆ. ಹಸಿರು ಸೀಮೆಯ ಕೊಡಗು ಜಿಲ್ಲೆಯ ಸೌಂದರ್ಯ ಸವಿಯಲು ವಾರ್ಷಿಕವಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜಿಲ್ಲೆಯ ಗುಡ್ಡಗಾಡು ಹಸಿರು ಪರಿಸರ, ತಂಪು ಹವಾಗುಣ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುವಲ್ಲಿ ಕೆಲ ದಶಕಗಳಿಂದ ಸಫಲವಾಗಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ವೇಗವಾಗಿ ಬೆಳೆಯುತ್ತಿದ್ದು, ಅದರೊಂದಿಗೆ ಸರ್ಕಾರಕ್ಕೂ ಲಾಭವಾಗುತ್ತಿದೆ. ಕೇವಲ ಹೊರ ಜಿಲ್ಲೆ, ರಾಜ್ಯ ಮಾತ್ರವಲ್ಲದೆ ವಿದೇಶಿ ಪ್ರವಾಸಿಗರು ಕೂಡ ಜಿಲ್ಲೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಇಲ್ಲಿಗೆ ಆಗಮಿಸುತ್ತಾರೆ.

ಪ್ರಸಿದ್ಧ ಪ್ರವಾಸಿ ತಾಣಗಳಾದ ದುಬಾರೆ, ಗೋಲ್ಡನ್ ಟೆಂಪಲ್, ಮಡಿಕೇರಿಯ ರಾಜಾ ಸೀಟ್, ಅಬ್ಬಿಫಾಲ್ಸ್, ಮಡಿಕೇರಿ ಕೋಟೆ, ನಾಲ್ಕುನಾಡು ಅರಮನೆ, ರಾಜರ ಗದ್ದಿಗೆ, ಇರ್ಪು, ಮಲ್ಲಳ್ಳಿ ಸೇರಿದಂತೆ ಪವಿತ್ರ ಕ್ಷೇತ್ರವಾದ ಭಾಗಮಂಡಲ, ತಲಕಾವೇರಿ ಕ್ಷೇತ್ರಗಳಿಗೂ ಸಹಸ್ರ ಸಂಖ್ಯೆಯಲ್ಲಿ ಹೊರ ಊರುಗಳ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ಅದರಲ್ಲೂ ನಾಗರಹೊಳೆ ಸಫಾರಿಯತ್ತ ಪ್ರವಾಸಿಗರು, ಅತಿ ಹೆಚ್ಚು ಆಕರ್ಷಿತರಾಗಿದ್ದು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ನಾಗರಹೊಳೆ ಅಭಯಾರಣ್ಯದ ಸೌಂದರ್ಯ ಸವಿಯುತ್ತಿದ್ದಾರೆ. ಹೀಗೆ ವಾರ್ಷಿಕವಾಗಿ ಭೇಟಿ ನೀಡುವ ಪ್ರವಾಸಿಗರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಆದಾಯ ಲಭಿಸುತ್ತಿದೆ.

ಕೆಲ ವರ್ಷಗಳ ಹಿಂದೆ ಕೇವಲ ರಜೆ ದಿನಗಳು, ವೀಕೆಂಡ್‌ನಲ್ಲಿ ಬರುತ್ತಿದ್ದ ಪ್ರವಾಸಿಗರು ಇದೀಗ ವರ್ಷದ ಎಲ್ಲಾ ಅವಧಿಯಲ್ಲಿ ಕೊಡಗಿಗೆ ಲಗ್ಗೆ ಇಡುತ್ತಿದ್ದಾರೆ. ಅದರಲ್ಲೂ ಶನಿವಾರ ಸಂಜೆಯಿಂದ ಸಾಗರೋಪಾದಿಯಲ್ಲಿ ಪ್ರವಾಸಿಗರು ಹರಿದು ಬರುತ್ತಿದ್ದು, ಪ್ರವಾಸಿ ತಾಣಗಳೆಲ್ಲ ಕಿಕ್ಕಿರಿದು ತುಂಬುತ್ತಿವೆ. ಅತೀ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದು ನಗರ ಪಟ್ಟಣಗಳಲ್ಲಿ ವಾಹನ ದಟ್ಟಣೆ ಕಂಡು ಬರುತ್ತಿದೆ.

ಪ್ರವಾಸಿಗರ ಪ್ರವಾಹದಿಂದ ಮಡಿಕೇರಿ, ಕುಶಾಲನಗರದಲ್ಲಿ ನಿರಂತರವಾಗಿ ಟ್ರಾಫಿಕ್ ಜಾಮ್ ಆಗುತ್ತಿದೆ. ಮಡಿಕೇರಿ ಬಸ್ ನಿಲ್ದಾಣ, ಕಾಲೇಜು ರಸ್ತೆಯಲ್ಲಂತೂ ಗಂಟೆ ಗಟ್ಟಲೆ ವಾಹನ ಚಾಲಕರು ಪರದಾಡಿದ್ದಿದೆ. ಅಬ್ಬಿಫಾಲ್ಸ್ ರಸ್ತೆಯಲ್ಲೂ ವಾಹನ ದಟ್ಟಣೆಯ ಕಿರಿಕಿರಿ. ಒಂದೆಡೆ ಪಾರ್ಕಿಂಗ್ ವ್ಯವಸ್ಥೆ, ಹೋಂ ಸ್ಟೇ, ವಸತಿ ಗೃಹಗಳು ದೊರೆಯದೆ, ಅದೆಷ್ಟೋ ಪ್ರವಾಸಿಗರು ತಮ್ಮ ವಾಹನಗಳಲ್ಲೇ ದಿನ ಕಳೆಯುವಂತಾಗುತ್ತಿದೆ.

ವಾಹನ ದಟ್ಟಣೆಯಿಂದ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಕುಶಾಲನಗರ-ಮಡಿಕೇರಿ (೨೭೫) ಮಾರ್ಗ ಮಧ್ಯೆ ಅಪಘಾತ ಪ್ರಕರಣಗಳು ಮರುಕಳಿಸುತ್ತಿದೆ. ಈ ಭಾಗದಲ್ಲಿ ಅಪಘಾತ ಪ್ರಕರಣ ತೀರಾ ಸಾಮಾನ್ಯವೆಂಬಂತೆ ಆಗಿದೆ. ಕೊಡಗು ಬೆಟ್ಟ ಗುಡ್ಡಗಳಿಂದ ಕೂಡಿರುವ ಪ್ರದೇಶ. ಹೆಚ್ಚಿನ ರಸ್ತೆಗಳು ತಿರುವುಗಳಿಂದ ಕೂಡಿದೆ. ಕೆಲವು ಕಡೆ ದಾರಿಯೂ ಕಿರಿದಾಗಿದೆ. ಪ್ರವಾಸಿ ಸ್ಥಳಗಳಿಗೆ ತೆರಳುವ ರಸ್ತೆಗಳ ಪರಿಚಯವಿಲ್ಲದ ಹೊರಜಿಲ್ಲೆಗಳಿಂದ ಬರುವ ವಾಹನಗಳು ಅಪಘಾತಗಳಿಗೆ ಈಡಾಗುವುದು ಸಾಮಾನ್ಯ ಎಂಬ ಪರಿಸ್ಥಿತಿ ಒಂದೆಡೆಯಾದರೆ, ಪ್ರವಾಸಿ ವಾಹನಗಳ ಅತಿವೇಗ, ಅಜಾಗರೂಕತೆ, ನಿಯಂತ್ರಣ ಕಳೆದುಕೊಳ್ಳುವುದು ಸ್ಥಳೀಯರಿಗೂ ಬಹುದೊಡ್ಡ ಸಮಸ್ಯೆ ತಂದೊಡ್ಡುತ್ತಿದೆ.

ಜಿಲ್ಲೆಯ ನಾನಾ ಕಡೆ ಅವೈಜ್ಞಾನಿಕ ಪಾರ್ಕಿಂಗ್ ಕೂಡ ಅಪಘಾತಗಳಿಗೆ ಕಾರಣವೆಂದು ಹೇಳಲಾಗುತ್ತಿದೆ. ನಗರ ಪ್ರದೇಶದ ಕಟ್ಟಡದ ನೆಲಮಹಡಿಯಲ್ಲಿ ಪಾರ್ಕಿಂಗ್ ಸೌಲಭ್ಯವಿಲ್ಲದೇ ಇರುದರಿಂದ ರಸ್ತೆಯ ಎರಡು ಬದಿಯಲ್ಲಿ ಎಲ್ಲೆಂದರಲ್ಲಿ ವಾಹನವನ್ನು ಪಾರ್ಕ್ ಮಾಡಲಾಗುತ್ತದೆ. ಕುಶಾಲನಗರದಿಂದ ಮಡಿಕೇರಿಗೆ ಆಗಮಿಸುವ ಸಂದರ್ಭವೂ ಸ್ಪೈಸಸ್ ಅಂಗಡಿ, ಕೆಫೆ, ಪ್ರವಾಸಿತಾಣಗಳ ಮುಂಭಾಗ ವಾಹನಗಳನ್ನು ಅಡ್ಡಾದಿಡ್ಡಿ ಪಾರ್ಕ್ ಮಾಡಲಾಗಿರುತ್ತದೆ. ವಾರಾಂತ್ಯದಲ್ಲಿ ಹೆಚ್ಚಿನ ಪ್ರವಾಸಿಗರು ಬಂದ ಸಂದರ್ಭ ಹೆಚ್ಚಿನ ವಾಹನ ದಟ್ಟಣೆ ಉಂಟಾಗಿ ಅಪಘಾತ ಸಂಭವಿಸುತ್ತದೆ.

ಮಳೆಗಾಲದಲ್ಲಿಯೂ ಈ ಭಾಗದಲ್ಲಿ ಮಂಜು ಮುಸುಕಿದ ವಾತಾವರಣ ವಾಹನ ಚಲಾಯಿಸಲು ಸವಾಲಿನದ್ದೇ ಆಗಿರುತ್ತದೆ. ಮಳೆಗಾಲದಲ್ಲಿ ಆಗಾಗ್ಗೆ ಬೃಹತ್ ವಾಹನಗಳು ವೇಗವಾಗಿ ಬಂದು ನಿಯಂತ್ರಣ ಕಳೆದುಕೊಂಡು ಅಪಘಾತ ಜರುಗುತ್ತಲೇ ಇರುತ್ತದೆ. ಇಂತಹ ಸಮಸ್ಯೆಗೆ ಶೀಘ್ರ ಮುಕ್ತಿ ನೀಡಬೇಕಾದ ಅವಶ್ಯಕತೆ ಇದೆ.
ಅಪಘಾತ ಸಣ್ಣ ವಿಷಯವಂತೂ ಅಲ್ಲವೇ ಅಲ್ಲ. ಅಪಘಾತದಿಂದ ಒಂದು ಅಥವಾ ೨ ಕುಟುಂಬ ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆದ್ದರಿಂದ ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯಕತೆ ಇದೆ. ಪ್ರವಾಸೋದ್ಯಮದಿಂದ ಕೋಟ್ಯಾಂತರ ರೂಪಾಯಿ ಲಾಭ ಸರಕಾರಕ್ಕೆ ಇದೆಯಾದರೂ ಜಿಲ್ಲೆಯ ರಸ್ತೆಗಳು, ಪಾರ್ಕಿಂಗ್ ಸೌಲಭ್ಯ ಮತ್ತು ಮೂಲಭೂತ ಸೌಕರ್ಯಗಳ ಕಡೆ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಗಮನ ಹರಿಸಬೇಕಿದೆ. ಜೊತೆಗೆ ಒಂದಷ್ಟು ಕಡಿವಾಣ ಹಾಕಬೇಕಾದ ಅನಿವಾರ್ಯತೆಯೂ ಇದೆ.

andolana

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

10 hours ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

14 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

14 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

14 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

14 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

14 hours ago