ಜಿ.ಎಂ.ಪ್ರಸಾದ್
ಸಂವಿಧಾನದ ಶಾಸಕಾಂಗ ಮತ್ತು ಕಾರ್ಯಾಂಗದಂತೆ ನ್ಯಾಯಾಂಗವೂ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಅನ್ಯಾಯಕ್ಕೊಳಗಾದವರಿಗೆ ಆಶಾಕಿರಣವಾಗಿ, ಸಂವಿಧಾನದ ಕಾವಲುಗಾರನಾಗಿ ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ನ್ಯಾಯಾಂಗ ತನ್ನದೇ ಆದ ಕಾರ್ಯ ನಿರ್ವಹಿಸುತ್ತದೆ.
ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳಬೇಕಾದದ್ದು ಈ ದೇಶದ ನಾಗರಿಕರಾದ ನಮ್ಮೆಲ್ಲರ ಕರ್ತವ್ಯ. ಸಂವಿಧಾನದಲ್ಲಿ ನ್ಯಾಯಾಂಗವೆಂದರೆ ಏನು? ಅದು ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ. 1950 ಜನವರಿ 28ರಂದು ಸುಪ್ರೀಂ ಕೋರ್ಟ್ ಸ್ಥಾಪಿಸಲಾಯಿತು. ಈ ಬಗ್ಗೆ ಸಂವಿಧಾನದ 5ನೇ ಭಾಗ, 124ರಿಂದ 147ರವರೆಗಿನ ವಿಧಿಯು ಸುಪ್ರೀಂ ಕೋರ್ಟ್ ಕಾರ್ಯವಿಧಾನಗಳ ಬಗ್ಗೆ ತಿಳಿಸುತ್ತದೆ. ಅದರಲ್ಲಿ 124ನೇ ವಿಧಿಯು ಭಾರತಕ್ಕೆ ಒಂದು ಸರ್ವೋಚ್ಚ ನ್ಯಾಯಾಲಯ ಇರತಕ್ಕದ್ದು ಎಂಬುದಾಗಿಯೂ ಹೇಳಿದೆ. ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿಗಳೂ ಸೇರಿದಂತೆ 34 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಆದರೆ ಈ ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತುತ 80,221 ವ್ಯಾಜ್ಯಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ. ಸುಪ್ರೀಂ ಕೋರ್ಟ್‌ಗೆ ಸಂವಿಧಾನ ನೀಡಿರುವ ಅಧಿಕಾರದ ವ್ಯಾಪ್ತಿಯು ವಿಸ್ತಾರವಾಗಿರುವುದರಿಂದ ದಿನದಿಂದ ದಿನಕ್ಕೆ ವ್ಯಾಜ್ಯಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. 34 ನ್ಯಾಯಮೂರ್ತಿಗಳ ಮುಂದೆ 80,221 ಪ್ರಕರಣಗಳು ಬಾಕಿ ಇರುವುದರಿಂದ ನ್ಯಾಯಮೂರ್ತಿಗಳ ಸಂಖ್ಯೆಯೂ ಹೆಚ್ಚಾದರೆ ಪ್ರಕರಣಗಳು ಬೇಗನೆ ಇತ್ಯರ್ಥವಾಗುವ ಸಾಧ್ಯತೆಗಳಿವೆ.
ಈ ಹಿಂದೆಯೂ ಹಲವು ಬಾರಿ ನ್ಯಾಯಮೂರ್ತಿಗಳ ಸಂಖ್ಯೆಯನ್ನು ಸಂಸತ್ತು ಹೆಚ್ಚಿಸಿಕೊಂಡು ಬಂದಿದೆ. ಈ ಬಗ್ಗೆ ಕಾನೂನು ಆಯೋಗದ 229ನೇ ವರದಿ (2009)ಯು ಕಾಲಮಿತಿಯೊಳಗೆ ವ್ಯಾಜ್ಯಗಳನ್ನು ಇತ್ಯರ್ಥ ಮಾಡಬೇಕು, ನ್ಯಾಯಾಂಗ ವ್ಯವಸ್ಥೆಯಲ್ಲಿ ಕೊಂಚ ಸುಧಾರಣೆ ತರಬೇಕು, ರಾಜ್ಯ ಹೈಕೋರ್ಟ್‌ಗಳಲ್ಲಿ ವಿಭಾಗೀಯ ಪೀಠಗಳು ಇರುವಂತೆ ಸುಪ್ರೀಂ ಕೋರ್ಟ್‌ನಲ್ಲಿಯೂ ಪ್ರಾದೇಶಿಕ ಪೀಠಗಳ ಸ್ಥಾಪನೆಯಾಗಬೇಕು. ದೆಹಲಿ, ಚೆನ್ನೈ, ಹೈದರಾಬಾದ್, ಕೊಲ್ಕತ್ತಾ ಹಾಗೂ ಮುಂಬೈನಲ್ಲಿ ಆ ಪ್ರಾದೇಶಿಕ ಪೀಠಗಳು ರಚನೆಯಾಗಬೇಕು ಎಂದು ಶಿಫಾರಸ್ಸು ಮಾಡಿದೆ.
ರಾಷ್ಟ್ರಮಟ್ಟದಲ್ಲಿ ಸುಪ್ರೀಂ ಕೋರ್ಟ್ ಕಾರ್ಯನಿರ್ವಹಿಸುವ ಮಾದರಿಯಲ್ಲಿಯೇ ರಾಜ್ಯಗಳಲ್ಲಿ ಹೈಕೋರ್ಟ್‌ಗಳೂ ಕಾರ್ಯನಿರ್ವಹಿಸ ಬೇಕು ಎಂದು ಸಂವಿಧಾನ ವಿವರವಾಗಿ ಹೇಳಿದೆ. ದೇಶದಲ್ಲಿ ಪ್ರಸ್ತುತ 25 ಹೈಕೋರ್ಟ್‌ಗಳಿವೆ. ಸಂವಿಧಾನದ ಐದನೇ ಭಾಗ, 214ರಿಂದ 231ನೇ ವಿಧಿಯವರೆಗೆ ರಾಜ್ಯ ಹೈಕೋರ್ಟ್‌ಗಳ ಬಗ್ಗೆ ಸವಿವರವಾಗಿ ತಿಳಿಸಲಾಗಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಕಾಲಕಾಲಕ್ಕೆ ನ್ಯಾಯಮೂರ್ತಿಗಳು ನೇಮಕವಾಗುತ್ತಿರುತ್ತಾರೆ. ಆದರೆ ಹೈಕೋರ್ಟ್‌ಗಳಲ್ಲಿ ಹಾಗಲ್ಲ. ದೇಶದ 25 ಹೈಕೋರ್ಟ್‌ಗಳಿಗೆ 1,114 ಹುದ್ದೆಗಳು ಮಂಜೂರಾಗಿವೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ವಿವಿಧ ಹೈಕೋರ್ಟ್‌ಗಳಲ್ಲಿ 768 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದು, 346 ಹುದ್ದೆಗಳು ಭರ್ತಿಯಾಗದೆಖಾಲಿ ಉಳಿದಿವೆ.
ಈ ಪೈಕಿ 160 ನ್ಯಾಯಮೂರ್ತಿಗಳೊಂದಿಗೆ ಅಲಹಾಬಾದ್ ಹೈಕೋರ್ಟ್ ಅತಿಹೆಚ್ಚು ಹುದ್ದೆಗಳನ್ನು ಹೊಂದಿದ್ದರೆ, ಸಿಕ್ಕಿಂ ಹೈಕೋರ್ಟ್ 3 ನ್ಯಾಯಮೂರ್ತಿಗಳೊಂದಿಗೆ ಅತಿ ಕಡಿಮೆ ಹುದ್ದೆಗಳನ್ನು ಹೊಂದಿದೆ. ಸಿಕ್ಕಿಂ, ಮೇಘಾಲಯ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಗಳನ್ನು ಹೊರತುಪಡಿಸಿದರೆ ಬಹುತೇಕ ಹೈಕೋರ್ಟ್‌ಗಳಲ್ಲಿ ದೊಡ್ಡ ಸಂಖ್ಯೆಯಲ್ಲಿಯೇ ಹುದ್ದೆಗಳು ಖಾಲಿ ಉಳಿದಿವೆ. ಅತಿ ಹೆಚ್ಚು ಹುದ್ದೆಗಳನ್ನು ಹೊಂದಿರುವ ಅಲಹಾಬಾದ್ ಹೈಕೋರ್ಟ್‌ವೊಂದರಲ್ಲೇ 160 ಹುದ್ದೆಗಳ ಪೈಕಿ 67 ಹುದ್ದೆಗಳು ಖಾಲಿ ಉಳಿದಿವೆ. ಅಲ್ಲದೆ ಹೈಕೋರ್ಟ್‌ಗಳಲ್ಲಿ 62,00,820 ವ್ಯಾಜ್ಯಗಳು ಇತ್ಯರ್ಥವಾಗದೆ ಬಾಕಿ ಉಳಿದಿದ್ದು, ಇವೂ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿವೆ.
ಸುಪ್ರೀಂ ಕೋರ್ಟ್ ಕೊಲಿಜಿಯಂ ಹೈಕೋರ್ಟ್‌ಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡಬೇಕು. ಹೈಕೋರ್ಟ್‌ಗಳು ಕೂಡ ಕಾಲಮಿತಿಯೊಳಗೆ ವ್ಯಾಜ್ಯಗಳನ್ನು ಇತ್ಯರ್ಥಪಡಿಸಬೇಕು. ವ್ಯಾಜ್ಯಗಳನ್ನು ಇತ್ಯರ್ಥಪಡಿಸುವ ಸಮಯ ಹೆಚ್ಚಾದಷ್ಟು ಶ್ರೀಸಾಮಾನ್ಯರು ನ್ಯಾಯ ಸಿಗುವ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳಂತೆ ಕೆಳಹಂತದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲೂ ನ್ಯಾಯಾಂಗ ವ್ಯವಸ್ಥೆ ಕಾರ್ಯನಿರ್ವಹಿಸುವುದರಿಂದ ತಳಮಟ್ಟದ ನ್ಯಾಯಾಲಯಗಳಲ್ಲಿ ಬಾಕಿ ಇರುವ 4,47,79,304 ವ್ಯಾಜ್ಯಗಳನ್ನು ಇತ್ಯರ್ಥಪಡಿಸಿದರೆ, ಕೆಳಹಂತದ ನ್ಯಾಯಾಲಯಗಳ ಮೇಲಿನ ಒತ್ತಡವೂ ಕಡಿಮೆಯಾಗಲಿದೆ. ಇಲ್ಲಿಯೂ ವ್ಯಾಜ್ಯಗಳನ್ನು ಇತ್ಯರ್ಥಪಡಿಸುವಲ್ಲಿ ಕಾಲಮಿತಿಯು ಬಹುಮುಖ್ಯವಾದ ಸಂಗತಿ. ಇದರಿಂದ ಶ್ರೀಸಾಮಾನ್ಯರಿಗೂ ನ್ಯಾಯಾಂಗ ವ್ಯವಸ್ಥೆ ಮೇಲಿನ ನಂಬಿಕೆ ಗಟ್ಟಿಯಾಗಲಿದೆ.
ಸುಪ್ರೀಂ ಕೋರ್ಟ್‌ನಿಂದ ತಳಹಂತದ ನ್ಯಾಯಾಲಯದವರೆಗೂ ಮಹಿಳಾ ನ್ಯಾಯಮೂರ್ತಿ ನ್ಯಾಯಾಧೀಶರುಗಳ ಸಂಖ್ಯೆ ತೀರಾ ಕಡಿಮೆ ಇದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಾಗಬೇಕು. ಸುಪ್ರೀಂ ಕೋರ್ಟ್‌ನಲ್ಲಿಯೂ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಾಗಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಇರುವ ಮೀಸಲಾತಿ ಸೌಲಭ್ಯದ ರೀತಿ ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಮೀಸಲಾತಿ ಸಿಗಬೇಕು. ಈ ನಿಟ್ಟಿನಲ್ಲಿ ಸಂವಿಧಾನದಲ್ಲಿ ಕೆಲವೊಂದು ಅಗತ್ಯ ತಿದ್ದುಪಡಿಗಳನ್ನು ತಂದು ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನ-ಮಾನಗಳು ಲಭಿಸುವಂತೆ ಮಾಡಬೇಕು.
ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಇದೊಂದು ಒಳ್ಳೆಯ ಕಾಲ. ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿನ ಆಮೆಗತಿ ಪ್ರಕ್ರಿಯೆ ಬದಲಾಗಬೇಕು. ಅಂತಿಮವಾಗಿ ಸತ್ಯ ಜಯಿಸಬೇಕು, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಸಿಗಬೇಕು ಎಂದರೆ ನ್ಯಾಯಾಲಯಗಳು ವ್ಯಾಜ್ಯಗಳನ್ನು ಶೀಘ್ರವಾಗಿ ಇತ್ಯರ್ಥ ಮಾಡಬೇಕು.
ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…
ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…
ದಾ.ರಾ. ಮಹೇಶ್ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…
ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…