ಕನ್ನಡ ಚಿತ್ರರಂಗ ಸದ್ದು ಮಾಡುತ್ತಿದೆ. ರಾಜ್ಯಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ. ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲ ಮುಖಗಳ ಪರಿಚಯವೂ ಈಗ ಆಗತೊಡಗಿದೆ. ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ತಮ್ಮ ಸಿನಿಮಾ ‘ಕಾಟನ್‌ಪೇಟೆ ಗೇಟ್’ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಆಡಿದ ಮಾತು ಚಿತ್ರರಂಗದ ಬಹುತೇಕ ಮಂದಿಯ ವಿರೋಧಕ್ಕೆ ಸಹಜವಾಗಿಯೇ ಕಾರಣವಾಗಿತ್ತು.
ಕೊನೆಗೆ ತಾವು ಆಡಿದ ಮಾತಿಗೆ ಸಂಬಂಧಪಟ್ಟ ಎಲ್ಲರ ಕ್ಷಮೆ ಕೇಳಿ ಆ ಪ್ರಕರಣಕ್ಕೆ ಅಂತ್ಯ ಹಾಡುವಂತಾಯಿತು. ಮಧ್ಯೆ ಚಲನಚಿತ್ರ ವಾಣಿಜ್ಯ ಮಂಡಳಿ ನಿಂತಿತ್ತು. ಅದರ ಬೆನ್ನಿಗೆ ಪ್ರೇಮ್ ನಿರ್ದೇಶನದ ‘ಕೆಡಿ’ ಚಿತ್ರದ ಐಟಂ ಹಾಡಿನ ವಿವಾದ. ಕೆವಿಎನ್ ನಿರ್ಮಾಣದ ಈ ಚಿತ್ರದ ಮುಖ್ಯಪಾತ್ರಧಾರಿ ಧ್ರುವ ಸರ್ಜಾ.
ಪ್ಯಾನ್ ಇಂಡಿಯಾ ಹೆಸರಿನಲ್ಲಿ ಕನ್ನಡದಲ್ಲಿ ತಯಾರಾಗಿ ಇತರ ಭಾಷೆಗಳಲ್ಲೂ ಡಬ್ ಆಗಿ ಪ್ರದರ್ಶನ ಕಾಣುವ ಚಿತ್ರಗಳಿಗೆ ಆಯಾ ಭಾಷೆಗಳಲ್ಲಿ ಹಾಡುಗಳೂ ಇರುತ್ತವೆ. ಪ್ರಸ್ತುತ ಸಾಕಷ್ಟು ವಿವಾದಕ್ಕೆ ಒಳಗಾದ ಈ ಹಾಡನ್ನು ಸ್ವತಃ ನಿರ್ದೇಶಕ ಪ್ರೇಮ್ ಅವರೇ ಬರೆದಿದ್ದರು. ಹಿಂದಿ ಸೇರಿದಂತೆ ಇತರ ಭಾಷೆಗಳಿಗೆ ಆ ಐಟಂ ಡ್ಯಾನ್ಸ್‌ನ ಹಾಡು ಭಾಷಾಂತರವಾಗಿತ್ತು. ಆ ಹಾಡಿನ ಬಿಡುಗಡೆಯಾಗಿ ಅದು ಪ್ರಸಾರವಾಗುತ್ತಲೇ ಅದರ ವಿರುದ್ಧ ತೀವ್ರತರ ಪ್ರತಿಕ್ರಿಯೆ ವ್ಯಕ್ತವಾಯಿತು. ಲೋಕಸಭೆಯಲ್ಲಿ ಈ ಹಾಡಿನ ಪ್ರಸ್ತಾಪವಾಯಿತು. ವಾರ್ತಾ ಸಚಿವರು ಅದರ ಕಡೆ ಗಮನ ಹರಿಸುವಂತೆ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ ಆದೇಶಿಸಿದ್ದಾಗಿ ಹೇಳಿದರು. ಸರ್ಸೆ ಸೆರಗ ಸರ್ಸೆ (ಸರ್ಕೆ ಚುನರಿ-ಹಿಂದಿಯಲ್ಲಿ) ಹಾಡಿನ ಸಾಲಗಳು ದ್ವಂದ್ವಾರ್ಥ ಮತ್ತು ಅಶ್ಲೀಲತೆಯಿಂದ ಕೂಡಿದ್ದು, ಮಹಿಳೆಯರನ್ನು ಕೀಳಾಗಿ ಬಿಂಬಿಸಲಾಗಿದೆ ಎನ್ನುವ ಆರೋಪ ಎಲ್ಲೆಡೆ ಕೇಳಿಬಂತು.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ರಾಜ್ಯ ಮಹಿಳಾ ಆಯೋಗ ಇದರ ವಿರುದ್ಧ ದನಿ ಎತ್ತಿದವು, ದೂರು ನೀಡಿದವು. ವಕೀಲರೊಬ್ಬರು ಇದರ ವಿರುದ್ಧ ದೂರು ದಾಖಲಿಸಿದರು. ಹಿಂದಿ ಹಾಡನ್ನು ತೆಗೆದು ಹಾಕಲಾಯಿತು. ಆ ಹಾಡಿಗೆ ನರ್ತಿಸಿದ ನಟಿ ನೋರಾ ಫತೇಹಿ, ಮೂರು ವರ್ಷಗಳ ಹಿಂದೆ, ಚಿತ್ರೀಕರಣದ ಸಂದರ್ಭದಲ್ಲಿ ತಮಗೆ ಆ ಹಾಡಿನ ಅರ್ಥ ತಿಳಿದಿರಲಿಲ್ಲ; ಹಿಂದಿ ಆವೃತ್ತಿ ಬಿಡುಗಡೆಯ ವೇಳೆ ಅದನ್ನು ನೋಡಿದಾಗಲೇ ಅದರ ಅರ್ಥ ಆದದ್ದು ಎಂದು ದೂರಿದರು. ಆಕೆಯ ವಿರುದ್ಧ ಫತ್ವಾ ಹೊರಡಿಸಿದ್ದಾಗಿಯೂ ವರದಿಯಾಯಿತು. ಹಿಂದಿಗೆ ಭಾಷಾಂತರ ಮಾಡಿದಾತ, ತಾನು ಮೂಲವನ್ನು ಹಾಗೇ ತರ್ಜಮೆ ಮಾಡಿದ್ದಾಗಿ ಹೇಳಿದ.
ನಿರ್ದೇಶಕ ಪ್ರೇಮ್ ಇದನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಇದಕ್ಕೂ ಮೊದಲು ದ್ವಂದ್ವಾರ್ಥದ ಇಂತಹ ಹಾಡುಗಳು ಕನ್ನಡದಲ್ಲಿ ಬಂದಿದ್ದವು ಎಂದರಲ್ಲದೆ, ಹಾಡನ್ನು ತಪ್ಪಾಗಿ ಅರ್ಥೈಸಲಾಗಿದೆ ಎನ್ನುವವರೆಗೆ ಅವರ ವಾದ ಇತ್ತು. ಕೊನೆಗೆ ಆ ಗೀತೆಯ ಸಾಲುಗಳನ್ನು ಬದಲಾಯಿಸುವುದಾಗಿ ಬಹಿರಂಗವಾಗಿ ಹೇಳಿ, ಕ್ಷಮೆ ಯಾಚಿಸಿದರು.
ಸಾಮಾಜಿಕ ತಾಣಗಳಲ್ಲಿ ಪ್ರಸಾರ ಆಗುವ ಚಲನಚಿತ್ರಗಳ ಹಾಡು, ಟೀಸರ್, ಟ್ರೈಲರ್‌ಗಳು ಪ್ರಮಾಣಪತ್ರ ಪಡೆಯಬೇಕಾದ ಅಗತ್ಯ ಇಲ್ಲ. ಹಾಗಾಗಿ ಈ ಬೆಳವಣಿಗೆ. ಬಿಡುಗಡೆ ಆಗುವ ಹಾಡು, ಟೀಸರ್, ಟ್ರೈಲರ್‌ಗಳು ಪ್ರಮಾಣಪತ್ರ ಪಡೆದಿರಬೇಕು ಎನ್ನುವ ನಿಯಮವಿದೆ. ಹಿಂದೆ ಪ್ರಾದೇಶಿಕ ಅಧಿಕಾರಿ ಒಬ್ಬರು, ಆಡಿಯೋ ಬಿಡುಗಡೆ ವೇಳೆ, ಪ್ರಮಾಣಪತ್ರ ಪಡೆಯದೆ ಇದ್ದ ಕಾರಣ, ಪ್ರದರ್ಶನ ತಡೆದಿದ್ದರು. ಆದರೆ ಈಗ ಅಷ್ಟೇನೂ ಕಟ್ಟುನಿಟ್ಟು ಇದ್ದಂತಿಲ್ಲ. ಯಾವುದೇ ಚಲನಚಿತ್ರ ಪ್ರಮಾಣಪತ್ರ ಪಡೆದು ಬಿಡುಗಡೆಯ ವೇಳೆ ಪ್ರಕಟಿಸುವ ಜಾಹೀರಾತು, ಮುದ್ರಿಸುವ ಭಿತ್ತಿಪತ್ರ ಎಲ್ಲದರಲ್ಲೂ ಅದು ಪಡೆದ ಪ್ರಮಾಣ ಪತ್ರ ‘ಯು’, ‘ಯು/ಎ’ ಅಥವಾ ‘ಎ’ ಎನ್ನುವುದನ್ನು ಪ್ರಕಟಿಸಬೇಕು. ಇಲ್ಲದೆ ಹೋದರೆ ಅದು ಅಪರಾಧ ಆಗುತ್ತದೆ. ಆದರೆ ಇತ್ತೀಚಿನ ದಿನಗಳ ಪತ್ರಿಕಾ ಜಾಹೀರಾತು, ಭಿತ್ತಿಪತ್ರಗಳಲ್ಲಿ ಸಿನಿಮಾ ಪಡೆದ ಪ್ರಮಾಣಪತ್ರದ ವಿವರ ಇರುವುದೇ ಅಪರೂಪ. ‘ಕೆಡಿ’ ಹಾಡಿನ ಈ ಪ್ರಕರಣ, ಸಾಮಾಜಿಕ ತಾಣಗಳಲ್ಲಿ ಸಿನಿಮಾ ಹಾಡುಗಳ ಪ್ರಸಾರ ಮಾಡುವ ಮುನ್ನ ಅದು ಪ್ರಮಾಣಪತ್ರ ಪಡೆದಿರಬೇಕು ಎನ್ನುವ ನಿಯಮವನ್ನು ಮುಂದಿನ ದಿನಗಳಲ್ಲಿ ತಂದರೆ ಆಶ್ಚರ್ಯವಿಲ್ಲ.
‘ಲವ್ ಮಾಕ್‌ಟೈಲ್ ೩’ ಯುಗಾದಿ ದಿನ ತೆರೆಕಂಡ ಚಿತ್ರ. ಡಾರ್ಲಿಂಗ್ ಕೃಷ್ಣ ನಿರ್ಮಾಣ, ನಿರ್ದೇಶನ ನಟನೆಯ ಈ ಚಿತ್ರದ ಕಥೆಯ ಕುರಿತಂತೆ ಈಗ ವಿವಾದವೊಂದು ಎದ್ದಿದೆ. ಅದು ತಾವು ಹಿಂದೆ ಅವರಿಗೆ ಹೇಳಿದ ಕಥೆ ಎಂದು ರಾಘವೇಂದ್ರ ನಾಯಕ್ ಅವರು ಆರೋಪಿಸಿದ್ದಾರೆ. ನಿರ್ಮಾಪಕ, ನಿರ್ದೇಶಕ ಗುರು ದೇಶಪಾಂಡೆ ಮತ್ತು ಅವರು ಜೊತೆಯಾಗಿ ಹೋಗಿ ಈ ಕಥೆಯನ್ನು ಹೇಳಿದ್ದರಂತೆ. ಆಗ ಕೃಷ್ಣ ಅವರು, ಇಂತಹದೇ ಕಥೆಯೊಂದನ್ನು ತಾವು ತಮ್ಮ ಮುಂದಿನ ಚಿತ್ರಕ್ಕಾಗಿ ಆರಿಸಿಕೊಂಡದ್ದಾಗಿ ಹೇಳಿದ್ದರಂತೆ. ಚಿತ್ರ ತೆರೆಕಂಡ ಮೇಲೆ ಅದನ್ನು ಪೇಯ್ಡ್ ಪ್ರೀಮಿಯರ್‌ನಲ್ಲಿ ನೋಡಿದಾಗ, ಚಿತ್ರದ ಉತ್ತರಾರ್ಧಮ ತಾವು ಹೇಳಿದ ಕಥೆ ಎಂದು ಅವರಿಗೆ ಅನಿಸಿತಂತೆ.
ಕೃಷ್ಣ ಹಾಗೂ ಗುರು ದೇಶಪಾಂಡೆ ಮತ್ತು ರಾಘವೇಂದ್ರ ನಾಯಕ್ ಅವರ ನಡುವೆ ಎದ್ದ ಈ ವಿವಾದ ಈ ‘ಕಥಾ ಪ್ರಸಂಗ’ ಮತ್ತದರ ಬೆಳವಣಿಗೆ ಮಾಧ್ಯಮಗಳಿಗೆ ಸೀಕರಣೆ. ಕೃಷ್ಣ ಮತ್ತು ಗುರು ದೇಶಪಾಂಡೆ ಅವರ ವೃತ್ತಿಜೀವನದ ಆರಂಭದ ದಿನಗಳು, ಆ ದಿನಗಳಲ್ಲಿ ಪರಸ್ಪರ ಅವಕಾಶಗಳು ಇತ್ಯಾದಿ ಮಾತೂ ಅಲ್ಲಿವೆ. ಪರಸ್ಪರರ ಮಾತುಗಳು, ಅವುಗಳ ನಡುವೆ ಇರುವ ಸತ್ಯಗಳ ದರ್ಶನವೂ ಆಗತೊಡಗಿದೆ.
ಇಬ್ಬರೂ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಇವತ್ತು ಇಬ್ಬರನ್ನೂ ಮಂಡಳಿ ಅಲ್ಲಿಗೆ ಬರುವಂತೆ ಹೇಳಿದೆ. ಆದರೆ ಇದರ ನಡುವೆಯೇ, ಕೃಷ್ಣ ಕಾನೂನು ಮೊರೆ ಹೋಗುವ ಮಾತುಗಳನ್ನು ಹೇಳಿದ್ಧಾರೆ. ಎದುರಾಳಿಗಳು ಅಲ್ಲೇ ವಾದಿಸುವ ಮಾತೂ ಹೇಳಿದ್ಧಾರೆ. ಈ ನಡುವೆ ‘ಕಥೆಯನ್ನು ಕದ್ದು ಚಿತ್ರ ಮಾಡುವ ಅಗತ್ಯ ತಮಗಿಲ್ಲ, ಒಂದು ವೇಳೆ ಅಂತಹ ಸಂದರ್ಭ ಬಂದರೆ ನಾವು ಚಿತ್ರ ನಿರ್ಮಾಣವನ್ನೇ ಮಾಡುವುದಿಲ್ಲ’ ಎಂದು ಕೃಷ್ಣ ಅವರ ಸಂಗಾತಿ ಮಿಲನ ಹೇಳಿದ್ದಾರೆ.
ಅತ್ತ ಗುರು ದೇಶಪಾಂಡೆ ಅವರು, ಚಿತ್ರದ ಕಥೆಯ ಆತ್ಮ ನಾವು ಹೇಳಿದ್ದು; ಅದರ ನಿರೂಪಣೆ, ಪಾತ್ರ ಪೋಷಣೆ ಎಲ್ಲ ಬೇರೆಯೇ ಇದೆ ಎಂದೂ ಹೇಳಿದ್ಧಾರೆ. ಕಥೆಗಾರ ರಾಘವೇಂದ್ರ ನಾಯಕ್ ಅವರಂತೂ, ಮುಂದೆ ಯಾರಿಗಾದರೂ ಕಥೆ ಹೇಳಲು ಹೋಗುವಾಗ, ಅದನ್ನು ರೆಕಾರ್ಡ್ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಚಿತ್ರ ಸಾಹಿತಿ (ಗೀತರಚನೆಕಾರ ಅಲ್ಲ), ತನ್ನ ಕಥೆಯನ್ನು ನೋಂದಣಿ ಮಾಡಿಕೊಂಡು ಕೃತಿಸ್ವಾಮ್ಯ ಇಟ್ಟುಕೊಳ್ಳಬಹುದು. ಮುಂಬೈನಲ್ಲಿರುವ ಸ್ಕ್ರೀನ್ ರೈಟರ್ಸ್ ಅಸೋಸಿಯೇಶನ್‌ನಲ್ಲಿ ತಮ್ಮ ಕಥೆ, ಚಿತ್ರಕಥೆ, ಕಥಾಸಾರಾಂಶ ಇತ್ಯಾದಿಯನ್ನು ಆನ್‌ಲೈನ್ ಮೂಲಕವೇ ನೋಂದಾಯಿಸಿಕೊಳ್ಳಬಹುದು. ಆದರೆ ಕನ್ನಡ ಚಿತ್ರರಂಗದಲ್ಲಿ ಕೃತಿಸ್ವಾಮ್ಯ, ಉಲ್ಲಂಘನೆಗಳ ಕುರಿತ ಮಾಹಿತಿ ಸಾಕಷ್ಟು ಮಂದಿಗೆ ಇದ್ದಂತಿಲ್ಲ. ಉತ್ತರ ಭಾರತದ ರಾಜ್ಯಗಳಲ್ಲಿ ಚಿತ್ರೀಕರಣ ಮಾಡಿ ಅಲ್ಲಿ ಸಹಾಯಧನ ಮತ್ತು ಇತರ ಸೌಲಭ್ಯಗಳನ್ನು ಪಡೆಯಲು ಬಯಸುವ ನಿರ್ಮಾಪಕರು ಕಡ್ಡಾಯವಾಗಿ ತಮ್ಮ ಚಿತ್ರಕಥೆಯನ್ನು ನೋಂದಾಯಿಸಿಕೊಳ್ಳಬೇಕು.
ಸ್ಕ್ರೀನ್ ರೈಟರ್ಸ್ ಅಸೋಸಿಯೇಶನ್‌ನಲ್ಲಿ ಮಾತ್ರವಲ್ಲದೆ ದೆಹಲಿಯಲ್ಲಿರುವ ಕೇಂದ್ರ ಸರ್ಕಾರದ ಕೃತಿಸ್ವಾಮ್ಯ ಕಚೇರಿಯಲ್ಲೂ ಇದನ್ನು ನೋಂದಾಯಿಸಿಕೊಳ್ಳಬಹುದು. ಕೃತಿಸ್ವಾಮ್ಯದ ಉಲ್ಲಂಘನೆ ಆದಾಗ ಅಲ್ಲಿಂದ ನೆರವು ಪಡೆದುಕೊಳ್ಳಲು ಇದು ಅನುಕೂಲವಾಗುತ್ತದೆ. ಸಾಹಿತ್ಯ ಕೃತಿಗಳು, ನಾಟಕ ಕೃತಿಗಳು, ನೃತ್ಯ ಸಂಯೋಜನೆ, ಸಂಗೀತ ಸಂಯೋಜನೆ ಮತ್ತು ಗ್ರಾಫಿಕ್ಸ್ ಮತ್ತು ಶಿಲ್ಪಕಲೆ ಚಟುವಟಿಕೆಗಳು ಈ ಕೃತಿಸ್ವಾಮ್ಯದಲ್ಲಿ ಒಳಗೊಳ್ಳುತ್ತದೆ. ಯಾವುದೇ ಮೂಲ ಸಾಹಿತ್ಯದ ಯಾವುದೇ ಭಾಗವನ್ನು ಮೂಲ ಲೇಖಕರ ಅನುಮತಿ ಇಲ್ಲದೆ ಬಳಸುವುದು ನೇರವಾಗಿ ಕೃತಿಸ್ವಾಮ್ಯದ ಉಲ್ಲಂಘನೆ ಆಗುತ್ತದೆ. ಕಾನೂನು ಪ್ರಕಾರ ಅಪರಾಧ ಆಗುತ್ತದೆ. ಸಿನಿಮಾಗಳಲ್ಲಿ ರಿಮೇಕ್ಗಳ ವಿಷಯ ಬಂದಾಗ ಮೂಲದ ಇಷ್ಟು ಭಾಗ ಇದ್ದರೆ ಅದನ್ನು ರಿಮೇಕ್ ಎನ್ನಬಹುದು ಎಂದಿದೆ. ರಿಮೇಕ್‌ಗಳಿಗೆ ತೆರಿಗೆ ವಿನಾಯಿತಿ, ಸಹಾಯಧನ ಇಲ್ಲದ ದಿನಗಳ ಮಾತಿದು. ಈಗ ಜಿಎಸ್‌ಟಿ ಜಾರಿಗೆ ಬಂದ ಮೇಲೆ ತೆರಿಗೆಯ ಸಮಸ್ಯೆ ಇಲ್ಲ. ಆದರೆ ಸಹಾಯಧನಕ್ಕೆ ಅವು ಅನರ್ಹ ಆಗುತ್ತವೆ. ಹಾಗಿದ್ದರೂ, ರಿಮೇಕ್ ಚಿತ್ರಗಳನ್ನು ಸಹಾಯಧನ ಕೋರಿ ಅರ್ಜಿ ಸಲ್ಲಿಸುವ ಮಂದಿ ಇಲ್ಲದೆ ಇಲ್ಲ. ಕೃತಿಸ್ವಾಮ್ಯ, ಅದರ ಉಲ್ಲಂಘನೆಯ ಕುರಿತಂತೆ ಸಂಬಂಧಪಟ್ಟವರು ತಿಳಿದುಕೊಳ್ಳಬೇಕು. ವಿಶೇಷವಾಗಿ ಕೃತಕ ಬುದ್ಧಿಮತ್ತೆ, ಗೂಗಲ್ ಮತ್ತು ಇತರ ಸಾಮಾಜಿಕ ತಾಣಗಳ ವಿಜೃಂಭಣೆಯ ಈ ದಿನಗಳಲ್ಲಿ ಅದರತ್ತ ಹೆಚ್ಚು ಗಮನ ಬೇಕು.
” ಚಿತ್ರ ಸಾಹಿತಿ (ಗೀತರಚನೆಕಾರ ಅಲ್ಲ), ತನ್ನ ಕಥೆಯನ್ನು ನೋಂದಣಿ ಮಾಡಿಕೊಂಡು ಕೃತಿಸ್ವಾಮ್ಯ ಇಟ್ಟುಕೊಳ್ಳಬಹುದು. ಮುಂಬೈನಲ್ಲಿರುವ ಸ್ಕ್ರೀನ್ ರೈಟರ್ಸ್ ಅಸೋಸಿಯೇಶನ್‌ನಲ್ಲಿ ತಮ್ಮ ಕಥೆ, ಚಿತ್ರಕಥೆ, ಕಥಾಸಾರಾಂಶ ಇತ್ಯಾದಿಯನ್ನು ಆನ್‌ಲೈನ್ ಮೂಲಕವೇ ನೋಂದಾಯಿಸಿಕೊಳ್ಳಬಹುದು. ಆದರೆ ಕನ್ನಡ ಚಿತ್ರರಂಗದಲ್ಲಿ ಕೃತಿಸ್ವಾಮ್ಯ, ಉಲ್ಲಂಘನೆಗಳ ಕುರಿತ ಮಾಹಿತಿ ಸಾಕಷ್ಟು ಮಂದಿಗೆ ಇದ್ದಂತಿಲ್ಲ.”
ಕೆಲವು ತಿಂಗಳ ಹಿಂದೆ ಹೈದರಾಲಿರಸ್ತೆಯ ಎರಡೂ ಬದಿ ೪೦ ಮರಗಳನ್ನು ಹೊಂದಿ ಹಸಿರು ಕಂಗೊಳಿಸುತ್ತಿತ್ತು. ರಸ್ತೆ ಅಗಲೀಕರಣದ ನೆಪದಲ್ಲಿ ಅಹೋರಾತ್ರಿ…
ಇತ್ತೀಚಿನ ದಿನಗಳಲ್ಲಿ ಬೆಂಗಳೂರು, ಮೈಸೂರು, ಹೈದರಾಬಾದ್, ಮುಂಬೈನಂತಹ ನಗರ ಪ್ರದೇಶಗಳಲ್ಲಿ ಓಲಾ, ಊಬರ್, ರ‍್ಯಾಪಿಡೋ, ನಮ್ಮ ಯಾತ್ರೆ ಎಂಬ ಆಪ್…
ಮಹಾದೇಶ್ ಎಂ.ಗೌಡ ಹನೂರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ೨೪ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ…
ಭೇರ್ಯ ಮಹೇಶ್ ಡಿಜಿಟಲ್ ಗ್ರಂಥಾಲಯ, ಸ್ವಚ್ಛತೆ, ನೈರ್ಮಲ್ಯ, ನೀರು ಸರಬರಾಜು, ಇನ್ನಿತರ ವಿಭಾಗಗಳಲ್ಲಿ ವಿಶೇಷ ಸಾಧನೆ ಭೇರ್ಯ: ಭಾರತದ ನಿಜವಾದ…
ಮಂಜು ಕೋಟೆ ಇಂದು ಕೋಟೆಯಲ್ಲಿ ಸಮಾವೇಶ; ಬೃಹತ್ ವೇದಿಕೆ ನಿರ್ಮಾಣ; ಸಾವಿರಾರು ಜನರು ಸೇರುವ ನಿರೀಕ್ಷೆ; ಶಕ್ತಿ ಪ್ರದರ್ಶನಕ್ಕೆ ಮುಂದಾದ…
ಎಚ್.ಎಸ್.ದಿನೇಶ್‌ಕುಮಾರ್ ಮೈಸೂರು: ಅಂತರ ರಾಜ್ಯ ವಾಹನಗಳು, ಪ್ರವಾಸಿ ವಾಹನಗಳು ಹೆಚ್ಚಾಗಿ ಸಂಚರಿಸುವ ಹಾಗೂ ಪ್ರಮುಖ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ನಗರದ…