Categories: ಅಂಕಣಗಳು

ರಾಕಿಭಾಯ್ ಬೆನ್ನಲ್ಲೇ ಬಂದ ಚಾರ್ಲಿಗೂ ಅಭೂತಪೂರ್ವ ಸ್ವಾಗತ

 ಚಾರ್ಲಿಯ ಮೊದಲ ವಾರಾಂತ್ಯ ಗಳಿಕೆ ೨೯ ಕೋಟಿ ಎಂದು ಇದಕ್ಕೆ ಸಂಬಂಧಿಸಿದ ಪ್ರಕಟಣೆಗಳು ಹೇಳಿವೆ. ಇದು ಕೂಡಾ ದಾಖಲೆಯದೇ!

ಕೊರೋನಾ ವೈರಾಣು ಎರಡು ವರ್ಷಗಳ ಕಾಲ ಇಡೀ ಚಿತ್ರೋದ್ಯಮವನ್ನು ಸ್ಥಗಿತಗೊಳಿಸಿತ್ತು. ಈ ಸಂದರ್ಭದಲ್ಲೇ ಚಿತ್ರಮಂದಿರಗಳ ಬದಲು ಒಟಿಟಿ ತಾಣಗಳು ಗರಿಗೆದರಿದವು. ಚಿತ್ರಮಂದಿರಗಳ ಪರ್ಯಾಯ ಎನ್ನುವಂತೆ ಅವು ಹೊಸ ಚಿತ್ರಗಳಿಗೆ ವರದಾನವಾಗುವ ಸೂಚನೆಯೂ ಆರಂಭದಲ್ಲಿ ಇತ್ತು. ಅದೇನಿದ್ದರೂ ಆ ತಾಣಗಳ ಅಳತೆಗೋಲಿನಂತೆ, ಉತ್ತಮ ಗುಣಮಟ್ಟದ ಚಿತ್ರಗಳಿಗೆ ಮಾತ್ರ ಎನ್ನುವುದು ನಂತರ ತಿಳಿಯಿತೆನ್ನಿ.

ಕೊರೋನೋತ್ತರ ಕನ್ನಡ ಚಿತ್ರರಂಗದ ಕುರಿತಂತೆ ಎಲ್ಲೆಡೆ ಮಾತು. ಭಾರತೀಯ ಭಾಷಾ ಚಿತ್ರರಂಗಗಳ ಪೈಕಿ ಅತ್ಯಂತ ಕನಿಷ್ಟ ಗಳಿಕೆಯದೆಂದುಕೊಂಡ ಮಂದಿ ಈ ವರ್ಷ, ೨೦೨೨ರಲ್ಲಿ ಮೂಗಿನ ಮೇಲೆ ಬೆರಳಿಡುವಂತೆ ಎರಡು ಚಿತ್ರಗಳು ಸುದ್ದಿ ಮಾಡಿದವು. ಮೊದಲು ‘ಕೆಜಿಎಫ್ ಚಾಪ್ಟರ್ ೨’; ನಂತರ ‘೭೭೭ ಚಾರ್ಲಿ’.

ಕೆಜಿಎಫ್ ನಾಯಕ ರಾಕಿಭಾಯ್ ಈಗ ದೇಶವಿದೇಶಗಳಲ್ಲಿ ಚಿರಪರಿಚಿತ. ರಾಕಿಭಾಯ್ ಆಗಿ ನಟಿಸಿದ ಯಶ್ ಅವರೂ ಕೂಡಾ. ದೇಶದ ಅತ್ಯಂತ ಜನಪ್ರಿಯ ನಟರ ಸರ್ವೆ ಮಾಡಿದರೆ, ಸಾಮಾನ್ಯವಾಗಿ ಹಿಂದಿ ಚಿತ್ರರಂಗದ ಮಂದಿಯೇ ಹೆಚ್ಚು ಸಂಖ್ಯೆಯಲ್ಲಿರುತ್ತಾರೆ. ದಕ್ಷಿಣದ ಮಂದಿ ಒಬ್ಬರೋ ಇಬ್ಬರೋ ಇದ್ದರೆ ಹೆಚ್ಚು. ಆದರೆ ಈ ಬಾರಿ ಹಾಗಾಗಲಿಲ್ಲ. ಅತ್ಯಂತ ಜನಪ್ರಿಯ ಹತ್ತು ಮಂದಿ ನಟರಲ್ಲಿ ಒಂಬತ್ತು ಮಂದಿ ದಕ್ಷಿಣದವರು. ಒಬ್ಬರು ಮಾತ್ರ ಹಿಂದಿಯವರು! ಯಶ್ ಈ ಹತ್ತರಲ್ಲಿ ಒಬ್ಬರು.
ಈಗಾಗಲೇ ಹೇಳಿದಂತೆ, ಹಿಂದಿ ಚಿತ್ರರಂಗ ಕೆಜಿಎಫ್ ಚಿತ್ರದ ಗಳಿಕೆ ಕಂಡು ಅಚ್ಚರಿಗೊಂಡಿದೆ. ಅದರ ಹಿಂದಿ ಡಬ್ಬಿಂಗ್ ಆವೃತ್ತಿ ಮಾತ್ರ ಗಳಿಸಿದ್ದು ಐನೂರು ಕೋಟಿಗಿಂತಲೂ ಹೆಚ್ಚು. ತೆರೆಕಂಡ ಐವತ್ತು ದಿನಗಳಲ್ಲಿ ಅದು ಚಿತ್ರಮಂದಿರಗಳಲ್ಲಿ ಗಳಿಸಿದ ಮೊತ್ತ ೧,೨೪೦ ಕೋಟಿ ರೂ. ಎನ್ನಲಾಗಿದೆ. ಇದು ಕನ್ನಡ ಚಿತ್ರರಂಗವಂತೂ ಕಂಡುಕೇಳರಿಯದ ಗಳಿಕೆ.

ತಮ್ಮ ಈ ಚಿತ್ರದ ಪತ್ರಿಕಾಗೋಷ್ಠಿಯ ವೇಳೆ ಯಶ್ ಅವರು, ಕನ್ನಡ ಚಿತ್ರರಂಗ ಹೆಮ್ಮೆಪಡುವಂತೆ ಈ ಚಿತ್ರ ಮೂಡಿಬರಲಿದೆ ಎಂದು ಹೇಳಿದ್ದರು. ಕನ್ನಡ ಚಿತ್ರರಂಗದ ಮಾರುಕಟ್ಟೆಯ ದೃಷ್ಟಿಯಿಂದ ಇದು ದಾಖಲೆ.

ಪ್ರೇಮಲೋಕದ ಮೂಲಕ ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ವಿಸ್ತರಿಸಿ, ಅದರ ಸಾಧ್ಯತೆಯನ್ನು ಕಳೆದ ಎಂಬತ್ತರ ದಶಕದಲ್ಲೇ ತೋರಿಸಿಕೊಟ್ಟವರು ರವಿಚಂದ್ರನ್. ಮೊನ್ನೆ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಅವರು, ‘ಈ ಚಿತ್ರ ಸಾವಿರ ಕೋಟಿ ದಾಟಿದರೆ, ಮುಂದಿನದು ಎರಡು ಸಾವಿರ ಕೋಟಿ ದಾಟುವ ಸಾಧನೆಯಾಗಬೇಕು’ ಎಂದು ಕೆಜಿಎಫ್ ದಾಖಲೆಯನ್ನು ತಾರೀಫು ಮಾಡುತ್ತಾ ಮುಂದೇನು ಆಗಬೇಕು ಎನ್ನುವುದನ್ನು ಹೇಳಿದರು.

ಇತ್ತೀಚೆಗೆ ಬಂದ ‘ದೊಡ್ಡಮ್ಮ‘ನ ಆರ್ಭಟದ ನಡುವೆ ಭಾವನೆಗಳ ತಂಗಾಳಿ ಸುಳಿದಂತೆ ಈ ಚಿತ್ರ ಬಂದಿದೆ ಎಂಬಂತಹ ಸಾಲುಗಳು, ಸಾಮಾಜಿಕ ಜಾಲತಾಣವೊಂದರಲ್ಲಿತ್ತು. ಇದು ‘೭೭೭ ಚಾರ್ಲಿ’ ನೋಡಿ ಚಿತ್ರಪ್ರೇಮಿಯೊಬ್ಬರು ಬರೆದ ವಿಮರ್ಶೆಯಲ್ಲಿನ ಸಾಲುಗಳು. ದೊಡ್ಡಮ್ಮನ ಪ್ರಸ್ತಾಪ ಕೆಜಿಎಫ್‌ನಲ್ಲಿದೆ. ‘೭೭೭ ಚಾರ್ಲಿ’ ಚಿತ್ರವನ್ನು ಮೊದಲ ಪ್ರೀಮಿಯರ್‌ನಲ್ಲಿ ನೋಡಿದ ಪರಿಸರ ಮತ್ತು ಪ್ರಾಣಿ ಸಂರಕ್ಷಣಾ ಆಂದೋಲನಗಳ ನಾಯಕಿ, ಮೇನಕಾ ಗಾಂಧಿ ಮೆಚ್ಚಿದ್ದರು. ಪ್ರಾಣಿಗಳ ಕುರಿತಂತೆ ಇಂತಹ ಚಿತ್ರಗಳು ಬರಬೇಕು ಎಂದು ಹೇಳಿದ್ದರು. ಪ್ರೀಮಿಯರ್ ಪ್ರದರ್ಶನ ನೋಡಿ ಭಾವುಕರಾಗಿ ಕಣ್ಣಾಲಿ ತೇವವಾಗಿಸಿಕೊಂಡ, ಬಿಕ್ಕಿಬಿಕ್ಕಿ ಅತ್ತ ಪ್ರೇಕ್ಷಕರ ವಿಡಿಯೋಗಳೇ ಚಾರ್ಲಿಯ ಪ್ರಚಾರಕ್ಕೆ ಹೆಚ್ಚು ನೆರವಾಯಿತು ಎಂದರೆ ಅತಿಶಯೋಕ್ತಿ ಅಲ್ಲ.

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಚಿತ್ರವನ್ನು ವೀಕ್ಷಿಸಿದರು. ಹೊರಬರುತ್ತಲೇ ಭಾವುಕರಾದರು. ಮಾಧ್ಯಮಗಳ ಮುಂದೆ ಕಣ್ಣುತುಂಬಿಕೊಂಡೇ ಮಾತನಾಡಿದರು. ಬೀದಿನಾಯಿಗಳನ್ನು ದತ್ತು ತೆಗೆದುಕೊಳ್ಳುವಂತೆ ಸಾರ್ವಜನಿಕರನ್ನು ಕೋರಿದರು. ಅವರು ಕೂಡಾ ಮನೆಯಲ್ಲಿ ನಾಯಿ ಸಾಕುತ್ತಿದ್ದಾರೆ. ಶ್ವಾನಪ್ರಿಯರಿಗೆ ಮಾತ್ರವಲ್ಲ, ಪ್ರತಿಯೊಬ್ಬ ಭಾವಜೀವಿಯ ಮನಕಲಕಿಸುವ ಕಥಾನಕ ಇದು.

ಚಾರ್ಲಿ ಹೆಸರಿನ ನಾಯಿ ಮತ್ತು ಧರ್ಮ ಹೆಸರಿನ ನಾಯಕ ಇವರಿಬ್ಬರ ಜೀವನ ಯಾನ ಈ ಚಿತ್ರ. ಚಾರ್ಲಿ ಚಾಪ್ಲಿನ್ ಬಹುಶಃ ಚಾರ್ಲಿ ಹೆಸರಿಗೆ ಸ್ಫೂರ್ತಿಯಾಗಿರಬೇಕು. ಮಹಾಭಾರತದ ಧರ್ಮರಾಯ ಧರ್ಮ ಹೆಸರಿಗೆ.

ಈ ಚಿತ್ರ ನಿರ್ಮಾಣವಾಗಿ ತೆರೆಗೆ ಬರಲು ಐದು ವರ್ಷಗಳ ಸಮಯ ತೆಗೆದುಕೊಂಡಿದೆ. ಕೊರೋನಾ ವೈರಾಣು ತಂದ ರೋಗ ಮಾತ್ರವಲ್ಲದೆ, ಚಿತ್ರರಂಗದಲ್ಲಿ ಆಗಾಗ ಕಾಣಿಸುವ ವಿಶೇಷರೋಗ ಈ ಚಿತ್ರದ ನಿರ್ಮಾಣಕ್ಕೂ ತಗಲಿತ್ತು ಎನ್ನಲಾಗಿದೆ.
ಆದರೆ, ಚಾರ್ಲಿಯ ಸ್ವಾಮಿನಿಷ್ಠೆ, ಪ್ರೀತಿಯಂತೆಯೇ ಅದರ ನಿರ್ಮಾಪಕ, ನಾಯಕ ರಕ್ಷಿತ್ ಶೆಟ್ಟಿ ಮತ್ತು ಮೊದಲ ಬಾರಿಗೆ ನಿರ್ದೇಶಕನ ನಿಲುವಂಗಿ ತೊಟ್ಟ ಕಿರಣ್‌ರಾಜ್ ಅವರಿಬ್ಬರ, ಜೊತೆಗೆ ಅವರ ತಂಡದ ಸಿನಿಮಾ ನಿಷ್ಠೆ ಮತ್ತು ಪ್ರೀತಿ ಈ ಚಿತ್ರವನ್ನು ಮುನ್ನೆಲೆಗೆ ತಂದು ನಿಲ್ಲಿಸಿದೆ. ರಕ್ಷಿತ್ ಶೆಟ್ಟಿ ಅವರ ಪರಂವಾ ಸ್ಟುಡಿಯೊ ಈ ಚಿತ್ರವನ್ನು ನಿರ್ಮಿಸಿದೆ.

ಚಾರ್ಲಿಯ ಮೊದಲ ವಾರಾಂತ್ಯ ಗಳಿಕೆ ೨೯ ಕೋಟಿ ಎಂದು ಇದಕ್ಕೆ ಸಂಬಂಧಿಸಿದ ಪ್ರಕಟಣೆಗಳು ಹೇಳಿವೆ. ಇದು ಕೂಡಾ ದಾಖಲೆಯದೇ. ಕೆಜಿಎಫ್ ಮತ್ತು ಚಾರ್ಲಿ ಚಿತ್ರಗಳ ಪ್ರಚಾರದ ವಿಷಯಕ್ಕೆ ಬಂದರೆ, ಚಾರ್ಲಿ ಚಿತ್ರದ ನಿರ್ಮಾಣ ವೆಚ್ಚದಷ್ಟು ಮೊತ್ತ ಕೆಜಿಎಫ್‌ನ ಪ್ರಚಾರದ್ದು ಎನ್ನುವ ಮಾತು ಅತಿಶಯೋಕ್ತಿ ಅಲ್ಲ ಎನಿಸುತ್ತದೆ.

ಪ್ರಚಾರ, ಖರ್ಚುವೆಚ್ಚ ಏನೇ ಇರಲಿ, ೨೦೨೨ರಲ್ಲಿ ಈ ಎರಡು ಚಿತ್ರಗಳು, ಗಳಿಕೆಯ ಕಾರಣಕ್ಕೆ ಒಂದು, ವಸ್ತುವಿನ ಕಾರಣಕ್ಕೆ ಇನ್ನೊಂದು ಕನ್ನಡ ಚಿತ್ರರಂಗದತ್ತ ಇತರ ರಂಗಗಳವರು ತಿರುಗಿ ನೋಡುವಂತೆ ಮಾಡಿದ್ದು ಮಾತ್ರ ನಿಜ. ಎರಡಕ್ಕೂ ಚಿತ್ರರಸಿಕರು ಮೆಚ್ಚುಗೆಯ ಸ್ವಾಗತ ನೀಡಿದ್ದಾರೆ.

 

andolana

Recent Posts

ಪ್ರಧಾನಿ ವಿರುದ್ಧ ಅವಹೇಳನಕಾರಿ ವೀಡಿಯೋ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಯದುವೀರ್‌ ಆಗ್ರಹ

ನಾಳೆಯಿಂದ ಬಿಜೆಪಿ ಪ್ರತಿಭಟನೆ: ಸಂಸದರ ಮಾಹಿತಿ ಮೈಸೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತ ಅವಹೇಳನಕಾರಿ ವೀಡಿಯೋ ಮಾಡಿದವರ…

1 hour ago

ಗೃಹ ಬಳಕೆ, ಕೈಗಾರಿಕೆಗೆ ದಿನದ 24 ಗಂಟೆಯೂ ವಿದ್ಯುತ್

ಬೆಳಗಾವಿ : ಮುಂದಿನ ಮಾರ್ಚ್‌ನಿಂದ ಎರಡೂವರೆ ಸಾವಿರ ಮೆಗಾ ವ್ಯಾಟ್ ಸೌರಶಕ್ತಿ ವಿದ್ಯುತ್ ಸೇರ್ಪಡೆಯಾಗುತ್ತಿದ್ದು, ಗೃಹ ಬಳಕೆ ಹಾಗೂ ಕೈಗಾರಿಕೆಗಳಿಗೆ…

1 hour ago

ಬೆಳಗಾವಿ ಅಧಿವೇಶನದಲ್ಲೂ ನಟ ದರ್ಶನ್‌ ಬಗ್ಗೆ ಚರ್ಚೆ : ಏನದು?

ಬೆಳಗಾವಿ : ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೈದಿಗಳಿಗೆ ರಾಜ್ಯಾಥಿತ್ಯ ಸೌಲಭ್ಯಗಳು ಸಿಗುತ್ತಿರುವ ಬಗ್ಗೆ ವಿಧಾನಪರಿಷತ್‌ನಲ್ಲಿ ಪ್ರಸ್ತಾಪವಾಯಿತು. ಶೂನ್ಯವೇಳೆಯಲ್ಲಿ ಸದಸ್ಯ ಧನಂಜಯ್…

1 hour ago

ದಿ ಡೆವಿಲ್‌ ಚಿತ್ರದ ವಿಮರ್ಶೆ ಹಂಚಿಕೊಂಡ ಪತ್ನಿ ವಿಜಯಲಕ್ಷ್ಮಿ….!

ಬೆಂಗಳೂರು : ನಟ ದರ್ಶನ್ ಅವರ ಅನುಪಸ್ಥಿತಿಯಲ್ಲಿ ದಿ ಡೆವಿಲ್ ಸಿನಿಮಾ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾವನ್ನು ಅಭಿಮಾನಿಗಳು, ದರ್ಶನ್…

2 hours ago

ಸರ್ಕಾರಿ ಶಾಲೆಗಳಿಗೆ ಗುಡ್‌ನ್ಯೂಸ್‌ : ಶಾಲಾ ಕೊಠಡಿ ದುರಸ್ಥಿಗೆ ರೂ.360 ಕೋಟಿ ಬಿಡುಗಡೆ

ಬೆಳಗಾವಿ : ರಾಜ್ಯದಲ್ಲಿ ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 360 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ…

2 hours ago

ಹೊಸ ತಾಲ್ಲೂಕುಗಳಿಗೆ ಸದ್ಯಕ್ಕಿಲ್ಲ ಆಸ್ಪತ್ರೆ ಭಾಗ್ಯ

ಬೆಳಗಾವಿ : ರಾಜ್ಯದಲ್ಲಿ ಹೊಸ ತಾಲ್ಲೂಕುಗಳಲ್ಲಿ ಸದ್ಯಕ್ಕೆ ತಾಲ್ಲೂಕು ಮಟ್ಟದ ಆಸ್ಪತ್ರೆಗಳ ಮಂಜೂರಾತಿ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ…

2 hours ago