• ಶೇಷಾದ್ರಿ ಗಂಜೂರು
ಇದು ಸಾವಿರಾರು ವರ್ಷಗಳ ಹಿಂದಿನ ಕಥೆ. ಅಂದಿನ ಇಸ್ರೇಲ್/ಪ್ಯಾಲೆಸ್ತೀನ್ ಪ್ರದೇಶದಲ್ಲಿ ನಡೆಯಿತೆನ್ನಲಾದ ಕದನದ ಕಥೆ ಅದು. ಆ ಕದನದಲ್ಲಿ, ಸಕಲ ಶಸ್ತ್ರಾಸ್ತ್ರಗಳಿಂದ ಸನ್ನದ್ಧನಾದ ಗೋಲಿಯತ್ ಎಂಬ ಮಹಾದೈತ್ಯ ಯೋಧನನ್ನು ಸಣ್ಣ ಹುಡುಗನೊಬ್ಬ ಎದುರಿಸುತ್ತಾನೆ. ಆ ಹುಡುಗನ ಹೆಸರು ಡೇವಿಡ್. ಕುರಿ ಕಾಯು ವವನಾದ ಅವನ ಬಳಿ ಇರುವ ಒಂದೇ ಆಯುಧವೆಂದರೆ, ಅವನ ಕೈಯಲ್ಲಿರುವ ಒಂದು ಸಣ್ಣ ಕಲ್ಲು. ಆ ಕಲ್ಲನ್ನೇ ದೈತ್ಯ ಗೋಲಿಯತ್‌ನ ಹಣೆಗೆ ಗುರಿಯಿಟ್ಟು ಹೊಡೆದು ಕೊಂದು ಆ ಕದನದಲ್ಲಿ ಡೇವಿಡ್ ವಿಜಯಿಯಾಗುತ್ತಾನೆ. ಇದು, ಬೈಬಲ್ಲಿನಲ್ಲಿ ಇರುವ ಕಥೆ. ಬೈಬಲ್ ಅನ್ನು “ಗಾಸ್ಪೆಲ್” (“ದೈವವಾಣಿ”) ಎಂದು ಕರೆಯುವ ಪರಿಪಾಠವೂ ಇದೆ.
ಡೇವಿಡ್-ಗೋಲಿಯತ್‌ರ ಕತೆ ಸಾವಿರಾರು ವರ್ಷಗಳ ಹಿಂದಿನ ಪುರಾಣದ ಕತೆ ಇರಬಹುದು. ಆದರೆ, ಇಸ್ರೇಲ್-ಪ್ಯಾಲೆಸ್ತೀನಿನಲ್ಲಿ ನಡೆಯುತ್ತಲೇ ಬಂದಿರುವ ಕದನಗಳಿಗೆ ಕೊನೆಯೇ ಇಲ್ಲ; ಪ್ಯಾಲೆಸ್ತೀನ್‌ನ ಗಾಜಾದಲ್ಲಿ ಇಂದು ನಡೆಯುತ್ತಿರುವ ಮಾರಣಹೋಮಕ್ಕೆ, ಅಕ್ಟೋಬರ್ 7ರಂದು ಪ್ಯಾಲೆಸ್ತೀನ್‌ನ ಹಮಾಸ್ ಉಗ್ರರು ನಡೆಸಿದ ಬರ್ಬರ ಹತ್ಯಾಕಾಂಡವೇ ಆದಿ ಎನ್ನಿಸಬಹುದಾದರೂ, ವಾಸ್ತವದಲ್ಲಿ ಈ ಕದನಕ್ಕೆ ಮೊದಲೂ ಇಲ್ಲ. ಸಾವಿರಾರು ವರ್ಷಗಳ ಹಿಂದೆ ಕಲ್ಲಿನಿಂದ ಬಡಿದಾಡಿದವರು ಇಂದು ಅತ್ಯಾಧುನಿಕ ಶಸ್ತ್ರಗಳನ್ನು ಬಳಸುತ್ತಿದ್ದಾರೆ ಅಷ್ಟೇ. ಮಹಾದೈತ್ಯ ಗೋಲಿಯತ್‌ನನ್ನು ಕೊಲ್ಲಲು ಬಳಕೆಯಾದದ್ದು ಒಂದು ಸಣ್ಣ ಕಲ್ಲಾದರೂ, ಡೇವಿಡ್ ಆ ಕಲ್ಲನ್ನು ಸರಿಯಾಗಿ ಗುರಿಯಿಟ್ಟು ಮೈತುಂಬಾ ಕವಚ ತೊಟ್ಟಿದ್ದ ಗೋಲಿಯತ್‌ನ ಹಣೆಗೇ ಹೊಡೆಯಬೇಕಾಯಿತು. ಯುದ್ಧದಲ್ಲಿ, ಆಯುಧದಷ್ಟೇ ಆ ಆಯುಧದ ಗುರಿಯೂ ಮುಖ್ಯ. ಇಂತಹ ಗುರಿಗಳನ್ನು ನಿರ್ಧರಿಸಲು ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ – ಎ.ಐ.) ಒಂದನ್ನು ಇಸ್ರೇಲ್ ನಿರ್ಮಿಸಿದೆ. ಆ ಎ.ಐ.ಗೆ “ಗಾಸ್ಟೆಲ್” ಎಂಬ ಹೆಸರೂ ನೀಡಿದೆ. ಗಾಸ್ಪೆಲ್ ಸೃಷ್ಟಿಯ ಮುನ್ನ, ಇಸ್ರೇಲ್ ಮಿಲಿಟರಿ ಅಧಿಕಾರಿಗಳೇ ಹೇಳಿಕೊಂಡಿರುವಂತೆ ಇಸ್ರೇಲ್ ರಕ್ಷಣಾ ಪಡೆಗೆ ಒಂದು ದೊಡ್ಡ ಸಮಸ್ಯೆ ಇತ್ತಂತೆ, ಅವರ ಬಾಂಬ್ ದಾಳಿಗೆ ಗುರಿಗಳೇ ಸಿಗುತ್ತಿರಲಿಲ್ಲವಂತೆ. ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳ ಪ್ರಕಾರ, ಈ ಕೃತಕ ಬುದ್ಧಿಮತ್ತೆಯ ಬಳಕೆಯ ಮುಂಚೆ, ಇಸ್ರೇಲ್ ಮಿಲಿಟರಿಗೆ, ಕೇವಲ 50 ಸೂಕ್ತ ಗುರಿಗಳನ್ನು ಖಚಿತವಾಗಿ ನಿರ್ಧರಿಸಲು ಸುಮಾರು ಒಂದು ವರ್ಷವಾಗುತ್ತಿತ್ತಂತೆ. ಆದರೆ, ಇದು, “ಎಲ್ಲವೂ ಈಗಲೇ ಆಗಬೇಕು” ಎನ್ನುವ ಯುಗ. ಎಲ್ಲವೂ ಈಗಲೇ ಆಗಬೇಕಿರುವಾಗ ಕೊಲ್ಲುವುದು ನಿಧಾನವಾದರೆ ಹೇಗೆ?! ಯೋಚಿಸಬೇಕಿಲ್ಲ, ಇಸ್ರೇಲ್ ರಕ್ಷಣಾ ಪಡೆಯ ಮುಖ್ಯಸ್ಥರೇ ಹೆಮ್ಮೆಯಿಂದ ಹೇಳಿಕೊಂಡಂತೆ, ಈ ಗಾಸ್ಟೆಲ್ ಕೇವಲ ದಿನವೊಂದರಲ್ಲಿ ಅಂತಹ 100 ಗುರಿಗಳನ್ನು ನಿರ್ಧರಿಸಿ ಹೇಳುತ್ತದಂತೆ. ಹಲವು ವರದಿಗಳ ಪ್ರಕಾರ ಅಕ್ಟೋಬರ್ 7ರಂದು ಹಮಾಸ್ ದುರುಳರು ನಡೆಸಿದ ನರಮೇಧದ ನಂತರದ 35 ದಿನಗಳಲ್ಲಿ, ಇಸ್ರೇಲ್ 15,000ಕ್ಕೂ ಹೆಚ್ಚು ಗುರಿಗಳ ಮೇಲೆ ಬಾಂಬ್ ದಾಳಿ ನಡೆಸಿತಂತೆ. ಹಿಂದಿನ ಕದನಗಳಿಗೆ ಹೋಲಿಸಿದರೆ, ಇದು ಎಷ್ಟೋ ಪಟ್ಟು ಹೆಚ್ಚಂತೆ. ಈ ದಾಳಿಗಳಲ್ಲಿ ಸತ್ತವರು ಸಹಸ್ರಾರು ಮಂದಿ ಸಣ್ಣ ಮಕ್ಕಳಾದರೇನಂತೆ, ಕೃತಕ ಬುದ್ಧಿಮತ್ತೆಯೊಂದು “ದೈವವಾಣಿ”ಯಾಗುತ್ತಿರುವಾಗ, ಅದರ ನಿರ್ಧಾರಗಳ ಸೂಕ್ತತೆಯನ್ನು ಮಾನವರು ಎಷ್ಟರ ಮಟ್ಟಿಗೆ ಪ್ರಶ್ನಿಸಬಹುದು? ಅದರಲ್ಲೂ ಕೊಲ್ಲುವ ಆತುರದಲ್ಲಿದ್ದಾಗ?!
“ಕೊಲ್ಲುವ ಆತುರ ಕೇವಲ ಇಸ್ರೇಲಿಗಳಿಗಷ್ಟೇ ಇಲ್ಲ ಅಥವಾ ಇದಕ್ಕೆ ಕೃತಕ ಬುದ್ಧಿಮತ್ತೆಯೇ ಬೇಕೆಂದೇನೂ ಇಲ್ಲ. ಉದಾಹರಣೆಗೆ, 2019ರಲ್ಲಿ ಹೈದರಾಬಾದಿನಲ್ಲಿ ಯುವತಿಯೊಬ್ಬಳ ಮೇಲೆ ನಡೆದ ಅಮಾನುಷ ಅತ್ಯಾಚಾರ-ಕೊಲೆಯ ನಂತರ, ಅಲ್ಲಿನ ಪೊಲೀಸರು ನಾಲ್ಕು ಜನ ಆರೋಪಿಗಳನ್ನು — ಅಪರಾಧಿಗಳಲ್ಲ — ಬಂಧಿಸಿ “ಪೊಲೀಸ್ ಎನ್‌ಕೌಂಟರ್” ನಲ್ಲಿ ಕೊಂದಾಗ ಇಡೀ ದೇಶ ಸಂಭ್ರಮಿಸಿದ್ದು, ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳ ಸರ್ಕಾರಗಳು ಆ ಎನ್‌ಕೌಂಟರ್‌ನಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳನ್ನು ಸನ್ಮಾನಿಸಿದ್ದೂ ಈ ಕೊಲ್ಲುವ ಆತುರದ ಮನಸ್ಥಿತಿಯಲ್ಲದೇ ಇನ್ನೇನೂ ಅಲ್ಲ. ಮಾನವರ ಇಂತಹ ನೈಜ ಮನಸ್ಥಿತಿಯಿಂದ ನಿರ್ಮಾಣವಾಗಿರುವ ಗಾಸ್ಟೆಲ್ ಅಂತಹ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನಗಳು ವಾಸ್ತವದಲ್ಲಿ ಕೃತಕ’ವೂ ಅಲ್ಲ, “ಬುದ್ಧಿಮತ್ತೆಯ ಪ್ರತೀಕಗಳೂ ಅಲ್ಲ. ಆದರೆ, ಗಾಸ್ಪೆಲ್ ಬಳಕೆಯನ್ನು ಭಾರತ, ಅಮೆರಿಕವೂ ಸೇರಿದಂತೆ ವಿಶ್ವದ ಎಲ್ಲಾ ಮಿಲಿಟರಿ ಶಕ್ತಿಗಳು ಅತ್ಯಂತ ಕುತೂಹಲದಿಂದ ಗಮನಿಸುತ್ತಿರುವುದಂತೂ ನಿಜ; ವಿಷಾದದ ವಿಷಯವೆಂದರೆ, ಆ ಗಮನ ಇರುವುದು ಅಂತಹ ತಂತ್ರಜ್ಞಾನದ ಮೇಲೆ ಕಡಿವಾಣ ಹೇರಲಿಕ್ಕಲ್ಲ, ಬದಲಾಗಿ ತಾವೂ ಸಹ ಅಂತಹ ತಂತ್ರಜ್ಞಾನವನ್ನು ಸೃಷ್ಟಿಸುವ ಹಂಬಲದಿಂದ.
ಕಳೆದ ಹಲವು ವಾರಗಳಿಂದ ಗಾಜಾದ ಘೋರ ದೃಶ್ಯಗಳು ನಮ್ಮ ದಿನಪತ್ರಿಕೆ, ಟಿ.ವಿ. ಮತ್ತು ಮುಖ್ಯವಾಗಿ ಇಂಟರ್‌ನೆಟ್ ಮೂಲಕ ಪ್ರತಿದಿನ ನಮ್ಮ ಕಣ್ಣಾಲಿಗಳ ಮುಂದಿವೆ. ಅದರಲ್ಲೂ ಕೆಲ ಚಿತ್ರಗಳಂತೂ ತಮ್ಮ ಘೋರತೆಯಿಂದ ನಮ್ಮ ಸಹ್ಯತೆಯ ಗಡಿಯನ್ನು ಪ್ರಶ್ನಿಸುವಂತಹ ಚಿತ್ರಗಳು: ಇಸ್ರೇಲ್ ಬಾಂಬ್ ದಾಳಿಗೆ ಪುಡಿ-ಪುಡಿಯಾದ ಪ್ಯಾಲೆಸ್ತೀನ್ ಮಧ್ಯೆ ರಕ್ತಸಿಕ್ತವಾಗಿದ್ದೂ ದೂಳಿನಿಂದ ಹಸುಳೆಗಳ ಚಿತ್ರಗಳು ಅವು. ವಾಟ್ಸ್ ಅಪ್, ಫೇಸ್
ಬುಕ್, ಟ್ವಿಟ್ಟರ್ (X) ಇತ್ಯಾದಿ ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಂಡಿರುವ ಇಂತಹ ಹಲವು ಚಿತ್ರಗಳು, ವಿಶ್ವಾದ್ಯಂತ ಎಷ್ಟೋ ಕೋಟಿ ಮಂದಿಯನ್ನು ತಲುಪಿವೆ, ತಲುಪುತ್ತಿವೆ. ಆ ಚಿತ್ರಗಳನ್ನು ಕೊಂಚ ಗಮನಕೊಟ್ಟು ನೋಡಿ. ಹಲವು ಚಿತ್ರಗಳಲ್ಲಿ ಆ ಹಸುಳೆಗಳ ಕೈ-ಕಾಲುಗಳಲ್ಲಿ ವಿಲಕ್ಷಣತೆ ಕಾಣುತ್ತದೆ; ಚಿತ್ರಗಳ ನೆರಳು-ಬೆಳಕುಗಳಲ್ಲೂ ಏನೋ ಸರಿಯಿಲ್ಲವೆಂಬ ಭಾವನೆ ಮೂಡುತ್ತದೆ. ಇವೆಲ್ಲಾ, ಕೃತಕ ಬುದ್ಧಿಮತ್ತೆಯ ಸಹಾಯದಿಂದ ಸೃಷ್ಟಿಯಾದ, ಇಂದು ಡೀಪ್ ಫೇಕ್” ಎಂದು ಕರೆಯಲ್ಪಡುವ ಚಿತ್ರಗಳ ಕುರುಹುಗಳು. ಬಾಂಬ್-ಕ್ಷಿಪಣಿಗಳ ತಯಾರಿಕೆಯನ್ನು ಕಾರ್ಖಾನೆಗಳ ಮೂಲಕ ಯಾಂತ್ರೀಕೃತ ಮಾಡಿ, ಹೀಗೆ ತಯಾರಾಗುವ ಮಾರಕಾಸ್ತ್ರಗಳನ್ನು ಯಾರ ಮೇಲೆ, ಎಲ್ಲಿ, ಯಾವಾಗ ಪ್ರಯೋಗಿಸಬೇಕೆಂಬ ನಿರ್ಧಾರವನ್ನೂ ಗಾಸ್ಟೆಲ್‌ನಂತಹ ತಂತ್ರಜ್ಞಾನಗಳಿಗೆ ವಹಿಸುವುದು ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ, “ಡೀಪ್ ಫೇಕ್” ಇತ್ಯಾದಿಗಳ ಮೂಲಕ ಸತ್ಯ-ಅಸತ್ಯಗಳ ನಡುವಿನ ಗೆರೆಯನ್ನು ಅಳಿಸಿ ನಮ್ಮ ಆಲೋಚನೆ, ತಿಳಿವು, ನಿರ್ಧಾರಗಳ ಲಹರಿಯನ್ನೇ ಬದಲಾಯಿಸುವ ಯತ್ನಗಳೂ ನಡೆಯುತ್ತಿವೆ. ಈ ಯತ್ನಗಳಿಗೆ, ಕೃತಕ ಬುದ್ಧಿಮತ್ತೆಯಂತಹ ಹೊಸ ತಂತ್ರಜ್ಞಾನಗಳೇ ಬೇಕಿಲ್ಲ ಎಂದೋ, ಇನ್ನೆಲ್ಲೋ ನಡೆದ ಸಂಘರ್ಷಗಳ ಚಿತ್ರ-ವಿಡಿಯೋಗಳನ್ನು ಇಂದೋ-ನಿನ್ನೆಯೋ ಗಾಜಾದಲ್ಲಿ ನಡೆದದ್ದೆಂದು ತೋರುವುದೂ ನಡೆದಿದೆ. ಈ ಪ್ರಯತ್ನಗಳ ಉದ್ದೇಶ ಒಂದೇ: ನಮ್ಮ ಆಂತರಿಕ ತಲ್ಲಣ-ಉದ್ವೇಗಗಳನ್ನು ಪ್ರಚೋದಿಸಿ ನಮ್ಮ ಪೂರ್ವಗ್ರಹಗಳನ್ನು ಮತ್ತಷ್ಟು ಆಳಕ್ಕೆ ಕೊಂಡೊಯ್ಯುವುದು. ಹೀಗಾದಾಗ, ನಮ್ಮ ಅರಿವಿಲ್ಲದಯೇ ನಾವೂ ಇಂತಹ ಸುಳ್ಳು ಚಿತ್ರ-ವಿಡಿಯೋಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಆರಂಭಿಸುತ್ತೇವೆ.
“ಡೀಫ್ ಫೇಕ್” ನಂತಹ ತಂತ್ರಜ್ಞಾನ ಒಂದೆಡೆ ನಿಜಕ್ಕೂ ಎದುರಾಗಿದ್ದರೆ, ಇನ್ನೊಂದೆಡೆ, ಆ ಗುಮ್ಮನ ಭಯವನ್ನು ಬಳಸಿಕೊಂಡು ಸತ್ಯವನ್ನೂ ಅಸತ್ಯದಂತೆ ಬಿಂಬಿಸುವುದೂ ನಡೆದಿದೆ. ಇದಕ್ಕೆ ಉದಾಹರಣೆ ಗಳೆಂದರೆ, ಹಮಾಸ್ ಉಗ್ರರ ದಾಳಿಯ ನಂತರ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಕೆಲವೊಂದು ಚಿತ್ರಗಳನ್ನು ಟ್ವಿಟ್ಟರ್ (X) ಮೂಲಕ ಹಂಚಿಕೊಂಡರು. ಅವು, ಆ ಉಗ್ರರು ನಿರ್ದಯೆಯಿಂದ ಕೊಂದ ಇಸ್ರೇಲಿ ಹಸುಳೆಗಳ ದಾರುಣ ಚಿತ್ರಗಳು, ಪ್ಯಾಲೆಸ್ತೀನ್ ಪರ ಇರುವ ಹಲವರು ಆ ಚಿತ್ರಗಳನ್ನು ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಿದ ಸುಳ್ಳುಗಳೆಂದು ಬಿಂಬಿಸಿದರು; ಹಾಗೆಯೇ, ಇಸ್ರೇಲಿನ ದಾಳಿಗೆ ಸಿಲುಕಿ ಗಾಜಾದ ಅಲ್-ಷಿಫಾ ಆಸ್ಪತ್ರೆ ನೆಲಸಮವಾದಾಗ ಅದರ ಅಡಿಯಲ್ಲಿ ಸಿಕ್ಕವರ ಕರುಣಾಜನಕ ದೃಶ್ಯಗಳನ್ನು ಇಸ್ರೇಲ್ ಪರ ವಾದಿಗಳು ಅವನ್ನೆಲ್ಲಾ “ಫೇಕ್” ಎನ್ನುವುದೂ ನಡೆಯಿತು. ಸುಳ್ಳು ಸುದ್ದಿಗಳನ್ನು ಹರಡುವಿಕೆಯ ಮೇಲೆ ಗಮನ ವಿಡುವ ತಜ್ಞರ ಅಧ್ಯಯನಗಳ ಪ್ರಕಾರ, ಇಂದಿನ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದಲ್ಲಿ, “ಡೀಪ್ ಫೇಕ್’ನಂತಹ ತಂತ್ರಜ್ಞಾನದ ಬಳಕೆಗಿಂತ, ಕೃತಕ ಬುದ್ಧಿಮತ್ತೆಯ ಗುಮ್ಮ ಎಲ್ಲೆಡೆ ಇದ್ದಾನೆಂದು ಬಿಂಬಿಸಿ ಯಾವುದನ್ನೂ ಸತ್ಯವೆಂದು ಒಪ್ಪಿಕೊಳ್ಳಲಾಗದಂತಹ ಅಪಾಯಕಾರಿ ಸ್ಥಿತಿಯ ನಿರ್ಮಾಣವೇ ಹೆಚ್ಚಿನ ಮಟ್ಟಿಗೆ ಆಗಿದೆಯಂತೆ. ಇಷ್ಟೆಲ್ಲಾ ತಲ್ಲಣಗಳಿಗೆ ಕಾರಣವಾಗಿರುವ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನದ ಮೇಲೆ ಕಡಿವಾಣ ಹಾಕಬಾರದೇಕೆ ಎಂಬ ಆಲೋಚನೆ ಬರಬಹುದು. ಅಂತಹ ಪ್ರಯತ್ನಗಳೂ ನಡೆದಿವೆ. ಕಳೆದ ವಾರವಷ್ಟೇ, ಯೂರೋಪಿಯನ್ ಯೂನಿಯನ್, ಕೃತಕ ಬುದ್ಧಿಮತ್ತೆಯ ಸಂಶೋಧನೆ ಮತ್ತು ಬಳಕೆಯ ಮೇಲೆ ಕೆಲವೊಂದು ನಿರ್ಬಂಧ ಹೇರುವ ದಿಕ್ಕಿನಲ್ಲಿ ಮೊದಲ ಹೆಜ್ಜೆ ಇಟ್ಟಿತು. ಆದರೆ, ಗ್ಲೋಬಲ್ ವಾರ್ಮಿಂಗ್, ಅಣ್ವಸ್ತ್ರಗಳಂತಹ ಮಹಾ ವಿಪತ್ತುಗಳ ವಿಷಯದಲ್ಲಿಯೇ ಒಂದಾಗಿ ಹೆಜ್ಜೆ ಇಡದ ವಿಶ್ವ ನಾಯಕರು ಕೃತಕ ಬುದ್ಧಿಮತ್ತೆಯ ವಿಷಯದಲ್ಲಿ ಒಂದಾಗುವುದು ದೂರದ ಮಾತು. ಅದೂ ಅಲ್ಲದೆ, ಇಸ್ರೇಲ್-ಪ್ಯಾಲೆಸ್ತೀನ್ ನಂತಹ ಜಾಗತಿಕ ಸಂಘರ್ಷಗಳ ಸಂದರ್ಭದಲ್ಲೇ ಕೃತಕ ಬುದ್ಧಿಮತ್ತೆಗಳ ಇನ್ನೂ ಒಂದು ಮುಖವನ್ನು ನಾವು ಗಮನಿಸಬೇಕು. ಗಾಜಾದಲ್ಲಿ ಇಸ್ರೇಲ್ ಮಾಡುತ್ತಿರುವಂತಹ ಪ್ರಹಾರದಂತಹ ಸಂದರ್ಭಗಳಲ್ಲಿ, ಲೆಕ್ಕವಿಲ್ಲದಷ್ಟು ಜನ ಮನೆ-ಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗುತ್ತಾರೆ. ಅಷ್ಟೇ ಅಲ್ಲ, ಪ್ರಾಣ ಭಯದಲ್ಲಿ ಚೆಲ್ಲಾಪಿಲ್ಲಿಯಾಗುವಾಗ ಕುಟುಂಬಗಳು ಬೇರ್ಪಡೆಯಾಗುತ್ತವೆ. ನೀರು, ಆಹಾರ, ಗಾಯಾಳುಗಳ ಶುಶೂಷೆಯಂತಹ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವುದೂ ಕಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ, ಮಾನವೀಯ ನೆರವು ನೀಡಲು ಹೊರಗಿನಿಂದ ಬರುವ ರೆಡ್‌ಕ್ರಾಸ್, UNHCR (ನಿರಾಶ್ರಿತರ ನೆರವಿಗೆಂದೇ ಮುಡಿಪಾಗಿರುವ ವಿಶ್ವಸಂಸ್ಥೆಯ ಅಂಗ ಸಂಸ್ಥೆ) ಇತ್ಯಾದಿಗಳು ಎದುರಿಸುವ ಸಮಸ್ಯೆಗಳು ಒಂದೆರಡಲ್ಲ. ಈ ಸಮಸ್ಯೆಗಳನ್ನು ಎದುರಿಸಲು ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗಳು ನಿಜಕ್ಕೂ ಪೂರಕವಾಗಿ ಕೆಲಸ ಮಾಡಬಲ್ಲವು. ಈಗಾಗಲೇ UNHCR, ಸೂಡಾನಿನಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಸಿಲುಕಿರುವ ಲಕ್ಷಾಂತರ ನಿರಾಶ್ರಿತರ ನೆರವಿಗೆಂದೇ ಪ್ರಾಜೆಕ್ಟ್ ಜೆಟ್‌ಸನ್ ಎಂಬ ಹೆಸರಿನ ಕೃತಕ ಬುದ್ಧಿಮತ್ತೆಯ ಪ್ರಾಯೋಗಿಕ ಬಳಕೆಯಲ್ಲಿ ತೊಡಗಿದೆ. ವಿಶ್ವಸಂಸ್ಥೆ ಪ್ರಕಟಿಸಿರುವ ವರದಿಗಳ ಪ್ರಕಾರ, ಸುಡಾನಿನ ವಿವಿಧ ಪ್ರದೇಶಗಳಿಂದ ನಿರಾಶ್ರಿತರ ಆಗಮನ-ನಿರ್ಗಮನಗಳ ಕುರಿತು ಕರಾರುವಕ್ಕಾದ ಮುನ್ಸೂಚನೆ ನೀಡುವಲ್ಲಿ ಈ ತಂತ್ರಜ್ಞಾನ ಉತ್ತಮವಾಗಿ ಕೆಲಸಮಾಡುತ್ತಿದೆಯಂತೆ.
ಕೊನೆಗೆ, ಕೃತಕ ಬುದ್ಧಿಮತ್ತೆಯಿರಲಿ, ಇನ್ಯಾವುದೇ ತಂತ್ರಜ್ಞಾನವಿರಲಿ, ಎಲ್ಲವೂ ಸಾಧನಗಳೇ. ಅವುಗಳ ಬಳಕೆ ಮಾತ್ರ ನಮ್ಮ ಮನಸ್ಥಿತಿಯ ಮೇಲೆ
(ಲೇಖಕ ಶೇಷಾದ್ರಿ ಗಂಜೂರ್, ಕೆನಡಾದ ಟೊರಾಂಟೊ ನಗರದಲ್ಲಿರುವ ಥಾನ್ಸನ್ ರಾಯಿಟರ್ಸ್ ಸಂಸ್ಥೆಯ ಸೆಂಟರ್ ಫಾರ್ ಕಾಗ್ನಿಟಿವ್ ಕಂಪ್ಯೂಟಿಂಗ್ ಪ್ರಯೋಗಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ) seshadri.ganjur@gmail.com
ಮೈಸೂರು: ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಇಂದು(ಡಿ.23) ಮೈಸೂರಿನ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ…
ಹುಬ್ಬಳ್ಳಿ : ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 9 ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ತಡರಾತ್ರಿ ಹುಬ್ಬಳ್ಳಿಯಲ್ಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಬಿಜೆಪಿ ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಅವರು ಆಕ್ಷೇಪಾರ್ಹ ನೀಡಿರುವ ಹೇಳಿಕೆಯ ಕೇಸ್…
ಶಿವರಾಜಕುಮಾರ್ ಶಸ್ತ್ರಚಿಕಿತ್ಸೆಗೆಂದು ಇತ್ತೀಚೆಗೆ ಅಮೇರಿಕಾಗೆ ಪ್ರಯಾಣ ಬೆಳಸಿದ್ದಾರೆ. ಜನವರಿ 26ರಂದು ಅವರು ಚಿಕಿತ್ಸೆ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಬೆಂಗಳೂರಿಗೆ ವಾಪಸ್ಸಾಗಿ…
ವಿಜಯ್ ರಾಘವೇಂದ್ರ ಅಭಿನಯದ ಮೂರು ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆ. ವಿಶೇಷವೆಂದರೆ, ‘ಕೇಸ್ ಆಫ್ ಕೊಂಡಾನ’, ‘ಜಾಗ್ 101’ ಮತ್ತು…
• ಕೆ.ಬಿ.ಶಂಶುದ್ದೀನ್ ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಪಟ್ಟಣ ಅಭಿವೃದ್ಧಿಯಾದಂತೆ ಕಳ್ಳತನವೂ ಹೆಚ್ಚಳ; ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯ…