A tree protects when it is protected
ಪಂಜು ಗಂಗೊಳ್ಳಿ
ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಎಷ್ಟು ಗಿಡಗಳನ್ನು ನೆಡಬಹುದು? ನೂರು, ಸಾವಿರ, ಹತ್ತು ಸಾವಿರ, ಲಕ್ಷ, ಹತ್ತು ಲಕ್ಷ… ಈ ವರ್ಷ ಏಪ್ರಿಲ್ ತಿಂಗಳಲ್ಲಿ ತನ್ನ ೮೭ನೇ ವರ್ಷ ಪ್ರಾಯದಲ್ಲಿ ಹೃದಯಾಘಾತದಿಂದ ತೀರಿಕೊಂಡ ತೆಲಂಗಾಣದ ರೆಡ್ಡಿಪಳ್ಳಿ ಗ್ರಾಮದ ದರಿಪಳ್ಳಿ ರಾಮಯ್ಯ ಎಂಬ ಒಬ್ಬ ಸಾಮಾನ್ಯ ವ್ಯಕ್ತಿ ಒಂದು ಕೋಟಿಗೂ ಹೆಚ್ಚು ಗಿಡಗಳನ್ನು ನೆಟ್ಟ ಮಹಾ ವೃಕ್ಷಪ್ರೇಮಿ!
ದರಿಪಳ್ಳಿ ರಾಮಯ್ಯ ಹೇಗೆ ಮತ್ತು ಏಕೆ ಗಿಡ ನೆಡುವ ಕಾಯಕದಲ್ಲಿ ತನ್ನನ್ನು ತೊಡಗಿಸಿಕೊಂಡರು ಎಂಬುದು ಬೇರೆಯವರಿಗೆ ಬಿಡಿ, ಸ್ವತಃ ಅವರಿಗೂ ಗೊತ್ತಿರಲಿಲ್ಲ. ಬಹುಶಃ ಅವರ ಬಾಲ್ಯದಲ್ಲಿ ತಮ್ಮ ತಾಯಿ ಕಹಿ ಹಾಗಲದ ಬೀಜಗಳನ್ನು ಮುಂದಿನ ಬೆಳೆಗಾಗಿ ತೆಗೆದಿರಿಸಿ, ಜೋಪಾನ ಮಾಡುವುದನ್ನು ನೋಡಿ ಅದರಿಂದ ಪ್ರಭಾವಿತರಾಗಿರಬಹುದು ಎಂದು ಅವರು ಹೇಳುತ್ತಿದ್ದರು.
ತಾಯಿಯ ಆ ಕೆಲಸ ರಾಮಯ್ಯರನ್ನು ಎಷ್ಟು ತೀವ್ರವಾಗಿ ಪ್ರಭಾವಿಸಿತೆಂದರೆ, ಮುಂದೆ ಅವರು ತಮ್ಮ ಜೀವಿತದುದ್ದಕ್ಕೂ ಗಿಡಮರಗಳನ್ನು ಬೆಳೆಸುವುದನ್ನು ತನ್ನ ಬದುಕಿನ ಉದ್ದೇಶವನ್ನಾಗಿ ಮಾಡಿಕೊಂಡರು. ಅದೇ ಕಾರಣಕ್ಕೆ ನೆರೆಹೊರೆಯ ಜನ ಅವರನ್ನು ಹುಚ್ಚ ಅಂತಲೂ ಕರೆಯುತ್ತಿದ್ದರು. ಆದರೆ ಜನರ ಯಾವುದೇ ಟೀಕೆಗಳಿಗೆ ಕಿವಿ ಕೊಡದ ರಾಮಯ್ಯ ತಾನು ಗಿಡ ನೆಡುವುದಕ್ಕಾಗಿಯೇ ಹುಟ್ಟಿದವನು ಎಂಬಂತೆ ತಮ್ಮ ಕಾಯಕವನ್ನು ಮುಂದುವರಿಸಿ, ಮುಂದೆ ಅದೇ ಜನರಿಂದ ‘ಚೆಟ್ಟು ರಾಮಯ್ಯ (ಮರ ರಾಮಯ್ಯ)’, ‘ವನಜೀವಿ ರಾಮಯ್ಯ’ ಅಂತ ಪ್ರೀತಿಯಿಂದ ಕರೆಸಿಕೊಂಡರು.
೧೯೩೭ರ ಜುಲೈ ೧ ರಂದು ದರಿಪಳ್ಳಿ ಲಾಲಯ್ಯ ಹಾಗೂ ಪುಲ್ಲಮ್ಮ ದಂಪತಿಯ ಪುತ್ರನಾಗಿ ಜನಿಸಿದ ರಾಮಯ್ಯ ೧೦ನೇ ತರಗತಿವರೆಗೆ ಮಾತ್ರ ಓದಿದರು. ಮುಂದಿನ ೫೦ ವರ್ಷಗಳ ಕಾಲ ಗಿಡ ನೆಡುವುದು, ಬೀಜ ನೆಡುವುದು ಅವರ ಬದುಕಿನ ಏಕಮೇವ ಉದ್ದೇಶವಾಯಿತು. ರಸ್ತೆಗಳ ಅಕ್ಕಪಕ್ಕ, ಬಂಜರು ನೆಲ ಏನೇ ಕಾಣಿಸಲಿ ಅಲ್ಲಿ ಬೀಜಗಳನ್ನು ಹುಗಿದರು. ಸಸಿಗಳನ್ನು ನೆಟ್ಟರು. ಹೀಗೆ, ಒಂದು ಕೋಟಿಗೂ ಮಿಕ್ಕಿ ಗಿಡಗಳನ್ನು ನೆಟ್ಟರೂ ರಾಮಯ್ಯ ಅದರಿಂದ ಸಂಪೂರ್ಣ ತೃಪ್ತಿ ಹೊಂದಲಿಲ್ಲ. ಏಕೆಂದರೆ, ಅವರ ಗುರಿ ಕನಿಷ್ಠ ಮೂರು ಕೋಟಿ ಗಿಡಗಳನ್ನು ನೆಡುವುದಾಗಿತ್ತು! ರಾಮಯ್ಯ ತಾನು ಹೆಚ್ಚು ಓದದಿದ್ದರೂ ಪಠ್ಯಪುಸ್ತಕಗಳಲ್ಲಿ ಇತರರು ಓದುವ ವಿಷಯವಾದರು. ತೆಲಂಗಾಣ ಸರ್ಕಾರ ಆರನೇ ತರಗತಿಯ ಸಮಾಜ ಪುಸ್ತಕದಲ್ಲಿ ರಾಮಯ್ಯರ ಬದುಕಿನ ಕತೆಯನ್ನು ಅಳವಡಿಸಿತು. ಮಹಾರಾಷ್ಟ್ರ ಸರ್ಕಾರ ೯ನೇ ತರಗತಿಯ ಮಕ್ಕಳಿಗೆ ಅವರ ಬದುಕನ್ನು ಕಲಿಕಾ ವಿಷಯವನ್ನಾಗಿಸಿತು. ೧೯೯೫ರಲ್ಲಿ ಕೇಂದ್ರ ಸರ್ಕಾರ ಅವರಿಗೆ ‘ವನಸೇವಾ ಪ್ರಶಸ್ತಿ’ ಹಾಗೂ ೨೦೧೭ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು.
ರಾಮಯ್ಯ ಹತ್ತನೇ ತರಗತಿಗೆ ಶಾಲಾ ಕಲಿಕೆಯನ್ನು ನಿಲ್ಲಿಸಿದರೂ ಗಿಡಮರಗಳ ಬಗ್ಗೆ ಯಾವುದೇ ಪುಸ್ತಕ ಕಣ್ಣಿಗೆ ಬಿದ್ದರೂ ಅದನ್ನು ಓದುತ್ತಿದ್ದರು. ಸ್ಥಳೀಯ ಗ್ರಂಥಾಲಯಗಳಲ್ಲಿ ಓದುವುದರ ಜೊತೆಯಲ್ಲಿ ಆ ಗ್ರಂಥಾಲಯಗಳ ಆವರಣಗಳನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಿದರು. ಬೀಜ, ಸಸಿಗಳನ್ನು ಸಂಗ್ರಹಿಸುವ ಜೊತೆಯಲ್ಲಿ ನಿರುಪಯುಕ್ತ ತಗಡು, ಪ್ಲೇಟಿನಂತಹ ವಸ್ತುಗಳನ್ನು ಸಂಗ್ರಹಿಸಿ, ಅವುಗಳ ಮೇಲೆ ಗಿಡಮರಗಳ ಪ್ರಾಮುಖ್ಯತೆಯ ಬಗ್ಗೆ ಸ್ಲೋಗನ್ಗಳನ್ನು ಬರೆದು, ಜನರಿಗೆ ಕಾಣಿಸುವಂತಹ ಸ್ಥಳಗಳಲ್ಲಿ ಲಗತ್ತಿಸುತ್ತಿದ್ದರು. ಎರಡು ಕೋಣೆಗಳಿರುವ ಅವರ ಪುಟ್ಟ ಮನೆ ಯಾವಾಗಲೂ ಬೀಜ, ಸಸಿ ಮತ್ತು ಹಸಿರಿನಮಹತ್ವವನ್ನು ಸಾರುವ ಫಲಕ, ಫ್ಲೆಕ್ಸ್, ಬ್ಯಾನರ್ ಮೊದಲಾದವುಗಳಿಂದ ತುಂಬಿರುತ್ತಿತ್ತು.
‘ಧರ್ಮೋ ರಕ್ಷತಿ ರಕ್ಷಿತಃ’ ಎಂಬ ವಾಕ್ಯವನ್ನು ‘ವೃಕ್ಷೆ ರಕ್ಷತಿ ರಕ್ಷಿತಃ’ ಎಂದು ಬದಲಾಯಿಸಿ ಬರೆದು, ತನ್ನ ಕುತ್ತಿಗೆಗೆ ನೇತು ಹಾಕಿಕೊಳ್ಳುತ್ತಿದ್ದರು! ನೋಡುಗರ ಕುಹಕ, ಗೇಲಿ ಯಾವುದಕ್ಕೂ ಅವರು ಜಗ್ಗುತ್ತಿರಲಿಲ್ಲ. ಬದಲಿಗೆ, ಆ ಫಲಕವನ್ನು ಹಾಗೆ ನೇತು ಹಾಕಿಕೊಂಡು, ‘ನಾನೀಗ ಮಿಸ್ ವರ್ಲ್ಡ್‌ನಂತೆ ಸುಂದರವಾಗಿ ಕಾಣಿಸುವುದಿಲ್ಲವೇ?’ ಎಂದು ತನ್ನನ್ನು ತಾನೇ ತಮಾಷೆ ಮಾಡಿಕೊಳ್ಳುತ್ತಿದ್ದರು. ಹೇಗೆ ಹಣೆಗೆ ನಾಮ ಹಚ್ಚಿಕೊಳ್ಳುವವನು ಪೂಜಾರಿಯೋ, ಖಾಕಿ ಧರಿಸುವವನು ಪೊಲೀಸಿನವನೋ ಹಾಗೆಯೇ, ಹೆಗಲ ಮೇಲೆ ಹಸಿರು ಶಾಲು ಧರಿಸಿಕೊಳ್ಳುವವನು ರಾಮಯ್ಯ’ ಎಂಬುದು ಅವರು ತಮ್ಮನ್ನು ಗೇಲಿ ಮಾಡುವವರಿಗೆ ಕೊಡುವ ಉತ್ತರವಾಗಿತ್ತು.
ದರಿಪಳ್ಳಿ ರಾಮಯ್ಯ ತಮ್ಮ ಬದುಕಿನಲ್ಲಿ ಹಣವನ್ನು ಒಂದು ಮುಖ್ಯ ವಿಷಯವನ್ನಾಗಿ ಪರಿಗಣಿಸಲೇ ಇಲ್ಲ. ‘ಅಷ್ಟೊಂದು ಗಿಡಗಳನ್ನು ನೆಟ್ಟಿದ್ದರಿಂದ ನಿಮಗೇನು ಸಿಕ್ಕಿತು?’ ಎಂದು ಯಾರಾದರು ಕೇಳಿದರೆ ಅವರು ತುಸುವೂ ಆಲೋಚಿಸದೆ, ‘ಸಂತೋಷ’ ಎಂದು ಉತ್ತರಿಸುತ್ತಿದ್ದರು. ರಾಮಯ್ಯನವರ ಮನೆ ಅಂಗಳದಲ್ಲಿ ಪೂರ್ಣವಾಗಿ ಬೆಳೆದ ಕೆಲವು ರಕ್ತಚಂದನದ ಮರಗಳಿವೆ. ಒಮ್ಮೆ ಅವರ ಒಬ್ಬ ಸಂಬಂಧಿಕ, ಅವುಗಳನ್ನು ಕಡಿದು ಮಾರಿ ಒಂದಷ್ಟು ಹಣ ಗಳಿಸು ಎಂದು ಹೇಳಿದಾಗ ರಾಮಯ್ಯ, ಅವುಗಳಿರುವುದು ಕಡಿದು ಮಾರಲಿಕ್ಕಲ್ಲ. ಬದಲಿಗೆ, ಅವುಗಳ ಬೀಜಗಳನ್ನು ಮುಂದಿನ ತಲೆಮಾರುಗಳಿಗೆ ಸಂಗ್ರಹಿಸಿಡುತ್ತೇನೆ ಎಂದು ಉತ್ತರಿಸಿದ್ದರು. ರಾಮಯ್ಯ ಹೇಳಿದಂತೆಯೇ ರಕ್ತ ಚಂದನದ ಬೀಜಗಳನ್ನು ಸಂಗ್ರಹಿಸಿ, ಮೊಳಕೆ ಬರಿಸಿ, ಸಸಿ ಮಾಡಿ ಸಾವಿರಾರು ಸಂಖ್ಯೆಯಲ್ಲಿ ಜನರಿಗೆ ಉಚಿತವಾಗಿ ಹಂಚಿದರು. ಯಾರಾದರೂ ಹಣ ಕೊಟ್ಟರೆ ತೆಗೆದುಕೊಳ್ಳುತ್ತಿದ್ದರು. ಮತ್ತು, ಆ ಹಣವನ್ನು ಮತ್ತಷ್ಟು ಗಿಡ ಮತ್ತು ಗಿಡಗಳ ಕುರಿತ ಪುಸ್ತಕಗಳನ್ನು ಖರೀದಿಸಲು ಬಳಸುತ್ತಿದ್ದರು. ಬೀಜ, ಸಸಿಗಳನ್ನು ಖರೀದಿಸುವ ಸಲುವಾಗಿ ಅವರು ತಮ್ಮ ಮೂರು ಎಕರೆ ಜಮೀನನ್ನು ಮಾರಿದ್ದರು.
ತೇಗದ ಬೀಜಗಳ ಹೊರ ಕವಚ ಬಹಳ ಗಟ್ಟಿಯಾದುದು. ಸುಲಭದಲ್ಲಿ ಅದನ್ನು ಒಡೆಯಲು ಸಾಧ್ಯವಿಲ್ಲ. ಆ ಕೆಲಸವನ್ನು ಸುಲಭಗೊಳಿಸಲು ರಾಮಯ್ಯ ಒಂದು ಸುಲಭೋಪಾಯವನ್ನು ಹುಡುಕಿದ್ದರು. ತೇಗದ ಬೀಜಗಳನ್ನು ಒಂದು ಚೀಲದೊಳಕ್ಕೆ ತುಂಬಿಸಿ, ಚೀಲದ ಬಾಯಿ ಕಟ್ಟಿ ಕುಳಿತುಕೊಳ್ಳುವ ಒಂದು ಆಸನದಂತೆ ಮಾಡಿದರು. ಅವರ ಹೆಂಡತಿ ಅಡುಗೆ ಮಾಡುವಾಗ ಒಲೆಯ ಮುಂದೆ ಕುಳಿತುಕೊಳ್ಳುವಾಗ ಆ ತೇಗದ ಬೀಜಗಳ ಚೀಲವನ್ನು ಆಸನದಂತೆ ಉಪಯೋಗಿಸಿದರು. ಕೆಲವು ದಿನ ಅವರು ಅದರ ಮೇಲೆ ಕುಳಿತುಕೊಂಡ ಪರಿಣಾಮವಾಗಿ ಸುಲಭದಲ್ಲಿ ಆ ಬೀಜಗಳ ಹೊರ ಕವಚವನ್ನು ಒಡೆಯಲು ಸಾಧ್ಯವಾಯಿತು. ರಾಮಯ್ಯರ ಹೆಂಡತಿ ಜಾನಮ್ಮ ಗಂಡನ ಎಲ್ಲಾ ಕೆಲಸಗಳಲ್ಲಿ ಬೆಂಬಲವಾಗಿ ನಿಂತು, ತನ್ನಿಂದಾದ ಸಹಾಯವನ್ನು ಮಾಡುತ್ತಿದ್ದರು.
ರಾಮಯ್ಯ ತಮ್ಮ ಬದುಕಿನುದ್ದಕ್ಕೂ ಒಂದು ದಿನವೂ ತಪ್ಪಿಸದೆ ತನ್ನ ಸೈಕಲ್ಲಿನಲ್ಲಿ ಗಿಡಗಳನ್ನು ಕಟ್ಟಿಕೊಂಡು, ಕಿಸೆಯಲ್ಲಿ ಬೀಜಗಳನ್ನು ತುಂಬಿಕೊಂಡು ಮೈಲು ಗಟ್ಟಲೆ ಪೆಡಲ್ ತುಳಿಯುತ್ತಿದ್ದರು. ಎಲ್ಲಾದರೂ ಬಂಜರು ಅಥವಾ ಖಾಲಿಭೂಮಿ ಕಾಣಿಸಿದರೆ ತನ್ನ ಕಿಸೆಯಿಂದ ಬೀಜಗಳನ್ನು ತೆಗೆದು ಅಲ್ಲಿ ಎಸೆಯುತ್ತಿದ್ದರು. ಮುಂದೊಂದು ದಿನ ಆ ಬಂಜರು ಅಥವಾ ಖಾಲಿ ಭೂಮಿ ಹಸಿರಿನಿಂದ ಕಂಗೊಳಿಸಲಿ ಎಂಬ ನಿರೀಕ್ಷೆಯಿಂದ. ಇಂದು ತೆಲಂಗಾಣದ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಗಿಡ ಮರಗಳ ಸಮೂಹ ಬೆಳೆದಿರುವುದು ಕಾಣಿಸಿದರೆ ಅದಕ್ಕೆ ರಾಮಯ್ಯರೇ ಕಾರಣ ಎಂಬಷ್ಟು ಅವರ ಹಸಿರು ಸೇವೆಯನ್ನು ಜನ ನೆನಪಿಸಿಕೊಳ್ಳುತ್ತಾರೆ. ಒಂದು ಕೈಯಲ್ಲಿ ಸೈಕಲ್ಲಿನ ಹ್ಯಾಂಡಲ್ ಹಿಡಿದು, ಇನ್ನೊಂದು ಕೈಯಿಂದ ಬೀಜಗಳನ್ನು ಎಸೆಯುವ ಹಾಗೂ ಕಾಲುಗಳಿಂದ ಪೆಡಲ್ ತುಳಿಯುವ ರಾಮಯ್ಯ ಅವರ ನಿತ್ಯ ಕಾಯಕ ತೆಲಂಗಾಣದ ಜನರಿಗೆ ಚಿರಪರಿಚಿತ ದೃಶ್ಯವಾಗಿತ್ತು.
ಒಮ್ಮೆ ರಾಮಯ್ಯ ಹೀಗೆ ಸೈಕಲ್ ಏರಿ ಗಿಡ ನೆಡಲು ಹೋಗುತ್ತಿದ್ದಾಗ ಮಕ್ಕಳ ಹಿಂಡೊಂದು ಅವರನ್ನು ಅಟ್ಟಿಸಿಕೊಂಡು ಹೋಗಿ, ಅವರು ಬಿದ್ದು, ಕಾಲಿನ ಮೂಳೆ ಮುರಿದು ಕೆಲವು ತಿಂಗಳ ಕಾಲ ಮನೆಯಿಂದ ಹೊರಬರಲಾಗಲಿಲ್ಲ. ಮನೆಯ ನಾಲ್ಕು ಗೋಡೆಗಳ ನಡುವೆ ಸುಮ್ಮನೆ ಕುಳಿತುಕೊಳ್ಳಲು ಒಪ್ಪದ ಅವರು, ‘ಮುರಿದದ್ದು ನನ್ನ ಕಾಲು. ಕೈಗಳಿಗೇನೂ ತೊಂದರೆಯಿಲ್ಲವಲ್ಲ’ ಎಂದು ತನಗೆ ತಾನೇ ಹೇಳಿಕೊಂಡು, ಕಲ್ಲಿನಿಂದ ಆಕೃತಿಗಳನ್ನು ಕಡೆಯಲು ಕಲಿತುಕೊಂಡು ಶಿಲ್ಪಿಯಾದರು!
ರಾಮಯ್ಯ ಗಿಡ ಮರಗಳನ್ನು ನೆಡುವುದು ಮಾತ್ರವಲ್ಲ, ಅವುಗಳ ಔಷಧಿಯ ಗುಣಗಳನ್ನೂ ಬಲ್ಲವರಾಗಿದ್ದರು. ತಾನು ನೆಡುತ್ತಿದ್ದ ಎಲ್ಲಾ ಗಿಡಗಳ ಹೆಸರುಗಳು ಅವರಿಗೆ ತಿಳಿದಿತ್ತು. ಹಲಸು, ಮಾವು, ಕದಂಬ, ಆಲ, ಅಶ್ವತ್ಥ, ಬೇವು, ಗಂಧ, ಚಂದನ, ದೇವದಾರು, ಹೊಂಗೆ, ಬಿಲ್ವ ಹೀಗೆ ನೂರಾರು ಹೆಸರುಗಳು ಅವರಿಗೆ ಗೊತ್ತಿದ್ದವು. ರಾಮಯ್ಯ ಮತ್ತು ಜಾನಮ್ಮ ಮದುವೆ, ಜನ್ಮ ದಿನಾಚರಣೆ ಅಥವಾ ಮದುವೆ ವಾರ್ಷಿಕೋತ್ಸವ ಮೊದಲಾಗಿ ಯಾವುದೇ ಸಮಾರಂಭಕ್ಕೆ ಹೋದರೂ ಸಸಿಗಳನ್ನು ಉಡುಗೊರೆಯಾಗಿ ಕೊಡುತ್ತಿದ್ದರು.
ರಾಮಯ್ಯ ತಾನು ನೆಟ್ಟ ಗಿಡಮರಗಳನ್ನು ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಏನೇ ಬರಲಿ ಏನೇ ಆಗಲಿ ತಾನು ನೆಟ್ಟ ಒಂದೇ ಒಂದು ಬೀಜವಾಗಲೀ, ಸಸಿಯಾಗಲೀ ಸಾಯಬಾರದು ಎಂಬ ಛಲದಿಂದ ಅವುಗಳನ್ನು ಪೋಷಿಸುತ್ತಿದ್ದರು. ಹಸಿದನಿಗೆ ಮೀನು ಕೊಡುವ ಬದಲು ಮೀನು ಹಿಡಿಯಲು ಕಲಿಸು ಎಂಬ ಮಾತಿನಂತೆ ರಾಮಯ್ಯ, ಮಕ್ಕಳಿಗೆ ಹಣ್ಣನ್ನು ಕೊಡುವ ಬದಲು ಸಸಿಗಳನ್ನು ಕೊಡಿ ಅನ್ನುತ್ತಿದ್ದರು. ಆ ಮಕ್ಕಳು ಆ ಸಸಿಗಳನ್ನು ನೆಟ್ಟು ತಮ್ಮ ಜೀವನ ಪರ್ಯಂತ ಅವುಗಳ ಹಣ್ಣುಗಳನ್ನು ತಿನ್ನಲಿ ಎನ್ನುತ್ತಿದ್ದರು. ಅವರ ಪ್ರಕಾರ, ಇಂದಿನ ಮಕ್ಕಳೇ ಮುಂದಿನ ನಾಗರಿಕರು ಹೇಗೋ ಹಾಗೆಯೇ, ಇಂದಿನ ಸಸಿಗಳೇ ಮುಂದಿನ ಮರಗಳು.
” ದರಿಪಳ್ಳಿ ರಾಮಯ್ಯ ತಮ್ಮ ಬದುಕಿನಲ್ಲಿ ಹಣವನ್ನು ಒಂದು ಮುಖ್ಯ ವಿಷಯವನ್ನಾಗಿ ಪರಿಗಣಿಸಲೇ ಇಲ್ಲ. ‘ಅಷ್ಟೊಂದು ಗಿಡಮರಗಳನ್ನು ನೆಟ್ಟಿದ್ದರಿಂದನಿಮಗೇನು ಸಿಕ್ಕಿತು?’ ಎಂದು ಯಾರಾದರು ಕೇಳಿದರೆ ಅವರು ತುಸುವೂ ಆಲೋಚಿಸದೆ, ‘ಸಂತೋಷ’ ಎಂದು ಉತ್ತರಿಸುತ್ತಿದ್ದರು.”
ಬೆಂಗಳೂರು : ಭಾರತವನ್ನು ಆತ್ಮನಿರ್ಭರ ರಾಷ್ಟ್ರವನ್ನಾಗಿಸುವ ದಿಶೆಯಲ್ಲಿ ಕರ್ನಾಟಕದಂತಹ ಸ್ವಾವಲಂಬಿ ರಾಜ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ…
ಹನೂರು : ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ…
ಬೆಂಗಳೂರು : ರಾಜ್ಯದ ಎಲ್ಲಾ ರೀತಿಯ ಸಿವಿಲ್ ಹುದ್ದೆಗಳಿಗೆ 2027ರ ಡಿಸೆಂಬರ್ 31ರವರೆಗೆ ಹೊರಡಿಸುವ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ…
ಮಂಡ್ಯ : ಸಾರ್ವಜನಿಕರಿಗೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ವು ಜಿಲ್ಲೆಯಲ್ಲಿ…
ಮಂಡ್ಯ : ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯದ್ದು ಬರಿ ಡಬಲ್ ಸ್ಟ್ಯಾಂಡರ್ಡ್ ನಾಟಕವಾಗಿದೆ. ಜಾತ್ಯತೀತ ಜನತಾದಳವನ್ನು ಓಡಿಸುವುದಕ್ಕೆ ಅವರಿಗೆ ತಾಕತ್ತಿದೆಯೇ?.…
ನಾಗಮಂಗಲ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ ಮಂಡ್ಯ : ನಾಗಮಂಗಲ ತಾಲ್ಲೂಕಿನ ನಕಲಿ ದಾಖಲೆ ಸೃಷ್ಟಿ…