ಅಂಕಣಗಳು

ಕಣ್ಣು ಕಾಣದವರಿಗೆ ಬೆಟ್ಟ ಕಾಣಿಸುವ ಪುಟ್ಟ ಕುಟುಂಬ

• ಸಿರಿ ಮೈಸೂರು

ಶೃತಿ ಮೈಸೂರಿನಲ್ಲಿ ನೆಲೆಸಿರುವ ಒಂದು ಸಾಮಾನ್ಯ ಕುಟುಂಬದ ಹೆಣ್ಣುಮಗಳು. ಬೆಂಗಳೂರಿನ ಐಟಿ ಕೆಲಸ ತೊರೆದು ಪತಿ ಹರೀಶ್ ಹಾಗೂ ಪುತ್ರಿ ವಿನ್ಮಯಿ ಜೊತೆ ಮೈಸೂರಿನಲ್ಲೇ ನೆಲೆಸಿರುವ ಇವರು ಕುಟುಂಬ ಸಮೇತ ಅದೊಂದು ಚೇತೋಹಾರಿ ಕೆಲಸ ಮಾಡುತ್ತಾರೆ. ಅವರನ್ನ ಕೇಳಿದರೆ ಅದರಲ್ಲೇನಿದೆ ಬಿಡಿ..?’ ಎಂದು ನಗುವ ಇವರು ಅದೆಷ್ಟೋ ಅಂಧರಿಗೆ ಕಣ್ಣಾಗಿದ್ದಾರೆ. ಸದಾ ಹೊಸದನ್ನೇನಾದರೂ ಕಲಿಯುವ ತುಡಿತ ಹೊಂದಿರುವ ಇವರು ಕೆಲ ವರ್ಷಗಳ ಹಿಂದೆ ವ್ಯಾಯಾಮ ಶಾಲೆಯೊಂದಕ್ಕೆ ಸೇರಿಕೊಂಡರು. ಅಲ್ಲಿಯವರು ವ್ಯಾಯಾಮ ತರಗತಿಗಳ ಜೊತೆಗೆ ವಿಶೇಷ ಕೆಲಸವೊಂದನ್ನು ಮಾಡುತ್ತಾರೆ. ವಿವಿಧ ತರಬೇತಿಗಳಿಗೆಂದು ಮೈಸೂರಿನ ಆಡಳಿತ ತರಬೇತಿ ಸಂಸ್ಥೆಗೆ ಆಗಾಗ ಸಾಕಷ್ಟು ಮಂದಿ ಬರುತ್ತಿರುತ್ತಾರೆ. ಹಾಗೆ ಬರುವವರನ್ನು ಚಾಮುಂಡಿ ಬೆಟ್ಟಕ್ಕೆ ಟ್ರೆಕ್ಕಿಂಗ್‌ ಕರೆದುಕೊಂಡು ಹೋಗು ವುದು ಇವರ ಕೆಲಸ. ವಿಶೇಷವೆಂದರೆ ಅವರಲ್ಲಿ ಎಷ್ಟೋ ಬಾರಿ ಅಂಧರ ಗುಂಪು ಇರುತ್ತದೆ. ಇದಕ್ಕೆ ಸ್ವಯಂಸೇವಕರಾಗಿ ಹೋಗುವುದು ಶೃತಿ ಹಾಗೂ ಕುಟುಂಬದ ಹೆಗ್ಗಳಿಕೆ.

‘ನಮಗೆಲ್ಲಾ ಆದರೆ ನಾವು ನೋಡಿರುವ ಒಂದು ಪ್ರಪಂಚ ಇದೆ. ಆದರೆ ಹುಟ್ಟಿನಿಂದಲೂ ಅಂಧರಾಗಿರುವ ಅವರಿಗೆ ಅವರ ಕಲ್ಪನೆಯೇ ಪ್ರಪಂಚ. ಎಲ್ಲಕ್ಕೂ ಮಿಗಿಲಾಗಿ ಅವರ ಕೈಹಿಡಿದು ನಾವು ಕರೆದೊಯ್ಯುವಾಗ ಸಂಪೂರ್ಣವಾಗಿ ನಮ್ಮನ್ನು ನಂಬಿಬಿಡುತ್ತಾರೆ. ಹೇಳಿದ್ದಕ್ಕೆ ಮರುಮಾತಾಡದೇ ಹಾಗೇ ಹೆಜ್ಜೆ ಇಡುತ್ತಾರೆ ಎನ್ನುತ್ತಾ ಶೃತಿ ಅವರೊಂದಿಗಿನ ಟ್ರೆಕ್ಕಿಂಗ್ ಅನುಭವಗಳನ್ನು ಬಿಚ್ಚಿಡುತ್ತಾರೆ. ‘ನಾವು ಏನನ್ನಾದರೂ ಅರ್ಥಮಾಡಿಕೊಳ್ಳಬೇಕಾದರೆ ಕೇವಲ ನೋಡಿ ಅರ್ಥಮಾಡಿಕೊಳ್ಳುತ್ತೇವೆ. ಆದರೆ ಅವರು ಎಲ್ಲರನ್ನೂ ಅನುಭವಿಸುತ್ತಾರೆ. ಕೆಲವೊಮ್ಮೆ ನಮ್ಮನ್ನೇ ಅವರು ನಡೆಸುತ್ತಿದ್ದಾರೇನೋ ಅನಿಸಿಬಿಡುತ್ತದೆ. ಅವರ ಅಂತರಾಳದ ಕಣ್ಣುಗಳು ನಮ್ಮ ಭೌತಿಕ ಕಣ್ಣುಗಳಿಗಿಂತ ಅದೆಷ್ಟೋ ಶಕ್ತಿಶಾಲಿ. ಅಲ್ಲೆಲ್ಲೋ ಆಗುವ ಎಲೆಗಳ ಸದ್ದು, ಗಾಳಿ ಬೀಸುವ ಸಣ್ಣ ಸದ್ದು… ಹೀಗೆ ಎಲ್ಲವೂ ಸೂಕ್ಷ್ಮವಾಗಿ ತಿಳಿಯುತ್ತದೆ ಎಂಬುದು ಶೃತಿಯವರ ಅನುಭವದ ಮಾತು. ಒಮ್ಮೊಮ್ಮೆ ಕೆಲವರು ತಮ್ಮ ಕೈಲಾಗದು ಎಂದು ನಿರ್ಧರಿಸಿ ಬಸ್‌ನಿಂದ ಇಳಿಯದೇ ಉಳಿದ ಘಟನೆಗಳೂ ಇವೆಯಂತೆ. ಹಾಗಾದಾಗ ಅವರನ್ನು ಪ್ರೇರೇಪಿಸಿ, ಟ್ರೆಕ್ಕಿಂಗ್ ಮಾಡುವಂತೆ ಹುರಿದುಂಬಿಸುವುದು ಯಾರಿರಬಹುದು ಊಹಿಸಿ? ಅದು ಅವರೊಂದಿಗೇ ಇರುವ ಸಹೋದ್ಯೋಗಿಗಳು. ಹೌದು… ಅವರೆಲ್ಲರೂ ತರಬೇತಿಗೆಂದು ಅಷ್ಟು ದಿನಗಳ ಕಾಲ ಜೊತೆಯಿರುವಾಗ ಪರಸ್ಪರರ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ತಿಳಿದಿರುತ್ತಾರೆ. ಅದರ ಆಧಾರದ ಮೇಲೆಯೇ ಯಾರಿಗಾದರೂ ಯಾವಾಗಲಾದರೂ ನೈತಿಕ ಸಹಾಯ ಬೇಕಾದಲ್ಲಿ ಭರಪೂರವಾಗಿ ನೀಡುತ್ತಾರೆ. ಆಗಲ್ಲ ಅನ್ನೋದೆಲ್ಲಾ ಇಲ್ಲ. ಟ್ರೆಕ್ಕಿಂಗ್ ಮುಗಿಸೋಣ ಬನ್ನಿ?’ ಎನ್ನುತ್ತಾ ಬರಲಾಗದು ಎನ್ನುವವರನ್ನೂ ಹುರಿದುಂಬಿಸಿ ಕರೆದುಕೊಂಡು ಬರುವ ಛಲ ಇರುವುದು ಅವರಲ್ಲಿ ಮಾತ್ರ. ಇಷ್ಟೇ ಅಲ್ಲದೆ ತಮ್ಮ ಗುಂಪಿನಲ್ಲಿ ಯಾರು ಚೆನ್ನಾಗಿ ಹಾಡುತ್ತಾರೆ, ಯಾರ ವಿಶೇಷ ಪ್ರತಿಭೆ ಏನು ಎಂಬುದೆಲ್ಲಾ ಅವರಿಗೆ ಗೊತ್ತು ಎಂದು ವಿವರಿಸುತ್ತಾರೆ ಶೃತಿ.

ಕೆಲವರು ಶೃತಿ ಪುತ್ರಿ ವಿನ್ಮಯಿಯನ್ನು ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಇಂತಹ ಅದ್ಭುತ ಕೆಲಸ ಮಾಡುತ್ತಿರುವುದಕ್ಕೆ ಅಭಿನಂದಿಸಿದ್ದಿದೆ. ‘ಕೆಲವೊಮ್ಮೆ ನಮ್ಮ ಉಸಿರಾಟದಲ್ಲಿ ಏರುಪೇರಾದಾಗ, ಕೈ ಬೆವರುವಾಗ, ನಮಗೆ ಸುಸ್ತಾದಾಗ ಕೂಡಲೆ ಪತ್ತೆಹಚ್ಚುವ ಅವರು ಆರಾಮಾಗಿರಿ ಎಂದು ಹೇಳುತ್ತಾರೆ. ನಿಜವಾಗಿಯೂ ನಮಗಿಂತ ಸೂಕ್ಷ್ಮ ಅಂತರಂಗ, ಭಾವನಾಶಕ್ತಿ ಅವರಿಗೆ ಇರುತ್ತದೆ. ನಮ್ಮ ಕಣ್ಣಿನಲ್ಲಿ ಅವರಿಗೆ ಜಗತ್ತು ಕಾಣುತ್ತದೆ ಎಂಬುದು ಅದೆಷ್ಟು ಹೆಮ್ಮೆಯ ವಿಷಯವಲ್ಲವೇ? ಅದನ್ನು ನೆನೆದಾಗಲೆಲ್ಲಾ ಖುಷಿಯಿಂದ ನನ್ನ ಕಣ್ಣಾಲಿಗಳು ತುಂಬುತ್ತವೆ’ ಎಂದು ಭಾವುಕರಾಗುತ್ತಾರೆ ಶೃತಿ.

ಕಣ್ಣು ಕಾಣುವವರಿಗೆ ನೋಡುವುದೊಂದು ಜಗತ್ತಾದರೆ, ಅಂಧರಿಗೆ ತಮ್ಮ ಕಲ್ಪನೆಯಲ್ಲಿ ಅದೆಷ್ಟೋ ಜಗತ್ತುಗಳಿವೆ. ನಾವು ಕಾಣುವುದನ್ನು ಅವರಿಗೆ ವಿವರಿಸುವ ಮೂಲಕ ಅವರ ಕಲ್ಪನೆಯ ಜಗತ್ತಿಗೆ ಇನ್ನೊಂದಿಷ್ಟು ಸಿಂಗಾರ ಮಾಡಿದರೆ ಅದೆಷ್ಟು ಖುಷಿಯ ಸಂಗತಿಯಲ್ಲವೇ? ಮಗುವಿನ ನಗುವನ್ನು ಮೊಗದಲ್ಲಿರಿಸಿಕೊಂಡೇ ಕಡಿದಾದ ಬೆಟ್ಟಗಳನ್ನು ಸರಾಗವಾಗಿ ಹತ್ತಿಬಿಡುವ ಅವರ ವ್ಯಕ್ತಿತ್ವಕ್ಕೆ ಕೈಹಿಡಿದು ಸಹಾಯ ಮಾಡುವುದೆಂದರೆ ಅದು ಅಳಿಲು ಸೇವೆಯಷ್ಟೇ. ನಿಜವಾಗಿ ಹೇಳಬೇಕೆಂದರೆ ಅವರ ಬಳಿ ನಾವು ಕಲಿಯುವುದು ಬಹಳಷ್ಟಿದೆ. ಬದುಕನ್ನು ಅವರು ನೋಡುವ ರೀತಿ, ಅವರ ಸೂಕ್ಷ್ಮ ಸಂವೇದನೆ, ಮನದಾಳದಿಂದ ನಗುವ ಮುಗ್ಧತೆ, ಅವರು ತೋರುವ ಮಮತೆ, ಅವರು ತಮ್ಮ ಕೈಹಿಡಿದಿರುವವರ ಮೇಲಿಡುವ ನಂಬಿಕೆ, ಬಂದದ್ದನ್ನೆಲ್ಲಾ ಸರಾಗವಾಗಿ ಸ್ವೀಕರಿಸುವ ಪರಿ… ಅಬ್ಬಬ್ಬಾ! ಅದೆಷ್ಟೆಲ್ಲಾ ಇದೆಯಲ್ಲವೇ ನಾವು ಅವರ ಬಳಿ ಕಲಿಯುವುದು! ಅವರಿಗೆ ನಮ್ಮ ನಕಾರಾತ್ಮಕತೆಯ ಸೋಂಕೇ ಇಲ್ಲ. ಸಕಾರಾತ್ಮಕತೆಯನ್ನೇ ಬದುಕಾಗಿಸಿಕೊಂಡಿರುವ ಅವರಿಗೆ ಖುಷಿಯನ್ನು ಹಂಚುವುದಷ್ಟೇ ಗೊತ್ತು ಎಂಬುದು ಶೃತಿಯವರ ಅಭಿಪ್ರಾಯ ಮಾತ್ರವಲ್ಲ… ಅವರ ಮಾತು ಕೇಳಿದ ಮೇಲೆ ನಮಗೂ ಅನಿಸುವ ಸಂಗತಿ.
sirimysuru18@gmail.com

andolanait

Recent Posts

ಓದುಗರ ಪತ್ರ | ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಿ

ಆರೋಗ್ಯ ಇಲಾಖೆಯೊಂದಿಗೆ ಅಮೂಲ್ಯ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮೈಸೂರಿನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ…

23 mins ago

ಓದುಗರ ಪತ್ರ | ಬೆಲೆ ಏರಿಕೆ ವಿರುದ್ಧ ಜನ ದಂಗೆ ಹೇಳಬಹುದು

ಬಸ್ ಪ್ರಯಾಣ ದರವನ್ನು ಶೇ.೧೫ರಷ್ಟು ಹೆಚ್ಚಳ ಮಾಡುವುದರಿಂದ ಶೇ.೯೦ರಷ್ಟು ಪುರುಷ ನೌಕರರಿಗೆ ಅನುಕೂಲವಾಗಲಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿರುವುದಾಗಿ ಮಾಧ್ಯಮಗಳಲ್ಲಿ…

26 mins ago

ಓದುಗರ ಪತ್ರ | ರಸ್ತೆಯ ಹೆಸರು ಬದಲಾವಣೆ ಬೇಡ

ಮೈಸೂರಿನ ಕೆಆರ್‌ಎಸ್ ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರನ್ನು ಇಡಬೇಕು ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಹರೀಶ್‌ಗೌಡ ಒತ್ತಾಯಿಸಿ, ಮೈಸೂರು…

29 mins ago

ಚಿಕಾಗೋ ಸರಸ್ವತಿ ಮತ್ತು ಮೈಸೂರು ವೀಣೆ

• ಕೀರ್ತಿ ಬೈಂದೂರು ಸರಸ್ವತಿ ರಂಗನಾಥನ್ ಅವರು ಮೂಲತಃ ಮೈಸೂರಿನ ವರು. ಗ್ರಾಮಾಫೋನ್ ರೆಕಾರ್ಡ್ ಕಂಪೆನಿಯ ಸ್ಥಾಪಕರಾದ ಶ್ರೀರಂಗಂ ನಾರಾಯಣ…

37 mins ago

ಮರೆಯಾದ ಕೊಡಗಿನ ಮದ್ದುಕಾರ ಮಾಞ

ಡಾ.ತೀತಿರ ರೇಖಾ ವಸಂತ ಕೊಡಗು - ಕೇರಳ ಗಡಿಭಾಗ ಕುಟ್ಟದ ಹತ್ತಿರದ ಕಾಯಮಾನಿ ಅಚ್ಚಹಸುರಿನ ಸುಂದರ ಊರು. ಸದ್ದಿಲ್ಲದೆ ಸಮುದಾಯಗಳ…

46 mins ago

ಅಸ್ಸಾದಿಯವರ ಶಿಷ್ಯನಾಗಿದ್ದೇ ಅವಿಸ್ಮರಣೀಯ

• ಆದಿತ್ಯ ಸೊಂಡಿ, ಹಿರಿಯ ವಕೀಲರು, ಸುಪ್ರೀಂ ಕೋರ್ಟ್, ಹೊಸದಿಲ್ಲಿ ಡಾ.ಮುಜಾಫರ್ ಅಸ್ಸಾದಿಯವರ ಶಿಷ್ಯನಾಗಿರುವುದು ನನ್ನ ಭಾಗ್ಯ ಎಂದು ನಂಬುತ್ತೇನೆ.…

59 mins ago