ಮಾಧ್ಯಮಗಳ ಗಮನವೆಲ್ಲ ಬೋಲ್ಟ್, ನಟ್ ಟೈಟ್ ಮಾತಿನತ್ತ
ಮೊನ್ನೆ ಶನಿವಾರ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ೧೬ನೇ ಆವೃತ್ತಿಯ ಉದ್ಘಾಟನೆ. ರಾಜ್ಯದ ಮುಖ್ಯಮಂತ್ರಿಗಳು. ಉಪಮುಖ್ಯಮಂತ್ರಿಗಳು ಜೊತೆಗಿದ್ದರು. ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆಗಾಗಿ ೧೫೦ ಎಕರೆ ಜಮೀನನ್ನು ವಾರ್ತಾ ಇಲಾಖೆಗೆ ವರ್ಗಾಯಿಸಿದ್ದು, ಸದಭಿರುಚಿಯ ಚಿತ್ರಗಳ ನಿರ್ಮಾಣಕ್ಕೆ ಕರೆ ನೀಡಿದ್ದೇ ಮೊದಲಾದ ಉದ್ಯಮಕ್ಕೆ ಸಂಬಂಧಪಟ್ಟ ವಿಷಯ ಮುಖ್ಯಮಂತ್ರಿಗಳ ಮಾತಲ್ಲಿತ್ತು.
ಉಪಮುಖ್ಯಮಂತ್ರಿಗಳು ಚಿತ್ರೋದ್ಯಮದ ಹೆಚ್ಚಿನ ಮಂದಿಯ ಗೈರುಹಾಜರಿನ ಬಗ್ಗೆ ಅಸಮಾಧಾನ ಪ್ರಕಟಿಸಿದರು. ಶಿವರಾಜಕುಮಾರ್, ‘ಇದು ನಮ್ಮ ಮನೆ ಹಬ್ಬ’ ಎಂದರು. ಅದನ್ನು ಉದ್ಧರಿಸುತ್ತಾ ಮನೆಮಂದಿ ಎಲ್ಲ ಸೇರಿದರೆ ಹಬ್ಬ, ಇಲ್ಲಿ ಎಲ್ಲರೂ ಇರಬೇಕಾಗಿತ್ತು, ಎನ್ನುತ್ತಾ, ಮುಂದುವರಿದು ಹೇಳಿದ, ‘ನಟ್ಟು ಬೋಲ್ಟು ಎಲ್ಲಿ ಟೈಟು ಮಾಡಬೇಕು ಅಂತ ನಮಗೆ ಗೊತ್ತು’ ಎಂದು ಹೇಳಿದ ಮಾತು ಸಾಕಷ್ಟು ಪರ-ವಿರೋಧ ಚರ್ಚೆಗೆ ದಾರಿ ಮಾಡಿ ಕೊಟ್ಟಿತ್ತು.
‘ನೀವು ಬಣ್ಣ ಹಚ್ಚಿಕೊಂಡು ನಟಿಸುತ್ತೀರಿ, ನಾವು ಬಣ್ಣ ಹಚ್ಚದೆ ನಟಿಸುತ್ತೇವೆ’ ಎನ್ನುವ ರಾಜಕಾರಣಿಗಳ ಸಾರ್ವಕಾಲಿಕ ಹೇಳಿಕೆಯನ್ನು ಉಪಮುಖ್ಯಮಂತ್ರಿಗಳೂ ಅಲ್ಲಿ ಪುನರುಚ್ಚರಿಸಿದರು. ಮೇಕೆದಾಟು ಜಾಥಾ ವೇಳೆ ಜೊತೆ ಸೇರಿದ್ದ ನಟ, ಸಂಗೀತ ಸಂಯೋಜಕ ಸಾಧುಕೋಕಿಲ ಅವರನ್ನು ಚಲನಚಿತ್ರ ಅಕಾಡೆಮಿ ಅಧ್ಯಕ್ಷರನ್ನಾಗಿ ನಾಮಕರಣ ಮಾಡಿದ್ದು ಇದೇ ಕಾರಣಕ್ಕೆ ಎಂದು ಅವರು ಹೇಳಿದರು. ನಾಡಿನ ನೆಲ, ಜಲ ಸಮಸ್ಯೆಗಳು ಬಂದಾಗ ಚಿತ್ರರಂಗ ಪಕ್ಷಾತೀತವಾಗಿ ಹೋರಾಟಕ್ಕೆ ಜೊತೆಯಾಗುತ್ತಿದ್ದ ದಿನಗಳ ಕುರಿತೂ ಮಾತುಗಳಿದ್ದವು. ಚಿತ್ರೋತ್ಸವವನ್ನು ಹಮ್ಮಿಕೊಳ್ಳುವುದು ಚಿತ್ರರಂಗಕ್ಕಾಗಿ, ಅವರ ಪಾಲ್ಗೊಳ್ಳುವಿಕೆ ಮುಖ್ಯ ಎನ್ನುವುದು ಅವರ ಮಾತಿನ ಒಟ್ಟು ಆಶಯವಾಗಿತ್ತು. ಆದರೆ ಅದನ್ನು ಹೇಳಿದ ರೀತಿ ಸರಿಯಾಗಿರಲಿಲ್ಲ ಎನ್ನುವುದು ಉದ್ಯಮದ ಬಹುತೇಕ ಮಂದಿಯ ಅಭಿಪ್ರಾಯ. ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಈ ಉತ್ಸವದ ಕುರಿತಂತೆ ಜನಸಾಮಾನ್ಯರ ಗಮನಕ್ಕೆ ಬರಲು ಸಾಧ್ಯವಾದದ್ದು ಉಪಮುಖ್ಯಮಂತ್ರಿಗಳ ಮಾತು ಎನ್ನುವುದನ್ನು ಒಪ್ಪದೆ ನಿರ್ವಾಹವಿಲ್ಲ. ಕಾರಣವಿಷ್ಟೆ. ಇಂತಹ ಚಿತ್ರೋತ್ಸವಗಳನ್ನು ನಡೆಸುವ ದೇಶಗಳು, ವರ್ಷಪೂರ್ತಿ ಕೆಲಸ ಮಾಡುವ ಚಿತ್ರೋತ್ಸವ ನಿರ್ದೇಶನಾ ಲಯವನ್ನು ಸ್ಥಾಪಿಸಿಕೊಂಡಿರುತ್ತವೆ. ಪತ್ರವ್ಯವಹಾರ, ಬೇರೆಬೇರೆ ದೇಶಗಳ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡ, ಪ್ರಶಸ್ತಿ ಪಡೆದ ಚಿತ್ರಗಳ ಜೊತೆ ಮಾತುಕತೆ, ಹೀಗೆ ವರ್ಷಪೂರ್ತಿ ನಡೆಯುತ್ತದೆ. ಆದರೆ ಬೆಂಗಳೂರಿನಲ್ಲಿ ಅಂತಹದೊಂದು ವ್ಯವಸ್ಥೆ ಇನ್ನೂ ಆಗಿಲ್ಲ. ಮಾನ್ಯತೆ ಪಡೆದ ಚಿತ್ರೋತ್ಸವಗಳ ಷರತ್ತುಗಳಲ್ಲಿ ಚಿತ್ರೋತ್ಸವ ನಿರ್ದೇಶನಾಲಯ ಸ್ಥಾಪನೆ ಮುಖ್ಯವಾದದ್ದು. ಹಿಂದೊಮ್ಮೆ ವಾರ್ತಾ ಇಲಾಖೆಯಲ್ಲಿ ಇದರ ಸ್ಥಾಪನೆ ಆಗಿದೆ ಎಂದು ವರದಿಯಾಗಿತ್ತು. ಆದರೆ ಅದಿನ್ನೂ ಸರಿಯಾದ ರೀತಿಯಲ್ಲಿ ಸ್ಥಾಪನೆ ಆದಂತಿಲ್ಲ. ಕೇರಳ ಚಲನಚಿತ್ರ ಅಕಾಡೆಮಿಯಲ್ಲಿ ಚಿತ್ರೋತ್ಸವ ವಿಭಾಗಕ್ಕೆ ಪ್ರತ್ಯೇಕ ಅಽಕಾರಿಗಳು ಮತ್ತು ನೌಕರರಿದ್ದಾರೆ. ಸಂಸ್ಕೃತಿ ಇಲಾಖೆಯ ನಿರ್ದೇಶಕರು, ಕಾರ್ಯದರ್ಶಿ, ಆರ್ಥಿಕ ವಿಭಾಗದ ಸಹ ಕಾರ್ಯದರ್ಶಿ ಮುಂತಾದವರು ಅಕಾಡೆಮಿಯ ಆಡಳಿತ ವಿಭಾಗದಲ್ಲಿರುತ್ತಾರೆ. ಚಿತ್ರೋತ್ಸವ, ಪ್ರಕಟಣೆ ಮತ್ತಿತರ ವಿಭಾಗಗಳಿಗೆ ಸಹನಿರ್ದೇಶಕರಿಗೆ ಕಡಿಮೆ ಇಲ್ಲದ ಅಽಕಾರಿಗಳಿರುತ್ತಾರೆ. ಆದರೆ ಇಲ್ಲಿ ರಿಜಿಸ್ಟ್ರಾರ್, ಲೆಕ್ಕಿಗ ಮತ್ತು ಸಹಾಯಕರನ್ನು ಹೊರತುಪಡಿಸಿದರೆ, ಬೇರೆ ಯಾರೂ ಇಲ್ಲ. ಅಧ್ಯಕ್ಷರ ನೇಮಕವಾಗಿ ಒಂದು ವರ್ಷದ ನಂತರ ಸದಸ್ಯರ ನೇಮಕ ಆಗಿದೆ. ಚಿತ್ರೋತ್ಸವವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ತನ್ನ ಅಧಿನದ ಅಕಾಡೆಮಿಯ ಮೂಲಕ ಹಮ್ಮಿಕೊಳ್ಳುತ್ತದೆ.
ಕನಿಷ್ಠ ಆರು ತಿಂಗಳಾದರೂ ಸಮಯಾವಕಾಶ ಕೋರುವ ಈ ಚಿತ್ರೋತ್ಸವವನ್ನು ಎರಡು ತಿಂಗಳ ಒಳಗೆ ಮಾಡಲಾಗುತ್ತಿದೆ. ಚಿತ್ರಗಳ ಆಯ್ಕೆ ಮತ್ತು ಇತರ ಕೆಲಸಗಳಿಗಾಗಿ, ಕಲಾತ್ಮಕ ನಿರ್ದೇಶಕ ವಿದ್ಯಾಶಂಕರ್ ಅವರ ನೇತೃತ್ವದ ಕಾರ್ಯನಿರ್ವಾಹಕ ಸಮಿತಿ ಕೆಲಸ ಮಾಡುತ್ತದೆ. ಸರ್ಕಾರದ ನಿಧಾನಗತಿಯ ಪರಿಣಾಮ ಚಿತ್ರೋತ್ಸವದ ಮೇಲೆ ಆಗುತ್ತದೆ. ಮೂಲಗಳ ಪ್ರಕಾರ, ಈ ಬಾರಿ ಚಿತ್ರೋತ್ಸವಕ್ಕಾಗಿ ಬಿಡುಗಡೆಯಾದ ಮೊತ್ತ ಅದರ ಖಾತೆಗೆ ತಡವಾಗಿ ಬಂದಿದೆ. ಅದರಿಂದಾಗಿ ವಿದೇಶದಿಂದ ಬರುವ ಅತಿಥಿಗಳಿಗೆ ಆಹ್ವಾನ ಕಳುಹಿಸುವುದು ತಡವಾಗಿ, ವೀಸಾ ಪಡೆಯಲು ತೊಂದರೆ ಆಗುತ್ತದೆ. ೧೫-೨೦ ದಿನಗಳಲ್ಲಿ ವೀಸಾ ಪಡೆಯುವುದು ಬಹುತೇಕ ದೇಶಗಳಲ್ಲಿ ದುರ್ಲಭ. ಅದಷ್ಟೇ ಅಲ್ಲ, ಸಾಕಷ್ಟು ಮುಂಚಿತವಾಗಿ ಅತಿಥಿಗಳಿಗೆ, ಆಯ್ಕೆಯಾದ ಚಿತ್ರಗಳ ನಿರ್ದೇಶಕರಿಗೆ ವಿಮಾನ ಪ್ರಯಾಣದ ಟಿಕೆಟ್ ಖರೀದಿಸದಿದ್ದರೆ, ಕೊನೆಯ ಕ್ಷಣದಲ್ಲಿ ದುಪ್ಪಟ್ಟು ದರ ತೆರಬೇಕಾಗುತ್ತದೆ.
ಬೆಂಗಳೂರು ಚಿತ್ರೋತ್ಸವ ಮಾನ್ಯತೆ ಪಡೆದಿರುವುದು, ವಿಶೇಷ ವಿಭಾಗದಲ್ಲಿ. ಇದು ಏಷ್ಯಾ ವಿಭಾಗದ ಸ್ಪರ್ಧೆ. ಅದು ಮಾನ್ಯತೆ ಪಡೆದ ವಿಶೇಷ ವಿಭಾಗ. ಉಳಿದಂತೆ ಭಾರತೀಯ ಚಿತ್ರಗಳ ಸ್ಪರ್ಧೆ ಮತ್ತು ಕನ್ನಡ ಚಿತ್ರಗಳ ಸ್ಪರ್ಧೆಗಳಿವೆ. ಸ್ಪರ್ಧೆಗೆ ಚಿತ್ರಗಳನ್ನು ಆಹ್ವಾನಿಸುವುದು, ಅವುಗಳಲ್ಲಿ ಆಯ್ಕೆ ಮುಂತಾಗಿ ಮಾಡಲು ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ. ಈ ಬಾರಿ ಸ್ಪರ್ಧೆಗೆ ಬಂದಿದ್ದ ಕನ್ನಡ ಚಿತ್ರಗಳು ೧೩೦ಕ್ಕೂ ಹೆಚ್ಚು. ಇವುಗಳನ್ನು ಒಂದೇ ಸಮಿತಿ ವೀಕ್ಷಿಸಿ, ಆಯ್ಕೆ ಮಾಡಲು ಸಾಕಷ್ಟು ಕಾಲಾವಕಾಶ ಇಲ್ಲದ ಕಾರಣ, ಮೂರು ಆಯ್ಕೆ ಸಮಿತಿಗಳನ್ನು ರಚಿಸಿ ಚಿತ್ರಗಳನ್ನು ವೀಕ್ಷಿಸಲಾಗಿದೆ. ಸ್ಪರ್ಧೆಗೆ ಚಿತ್ರಗಳ ಆಯ್ಕೆಯ ಕುರಿತಂತೆ ಅಸಮಾಧಾನ ಇದೆ. ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ನ್ಯಾಯಾಲಯ ಇದಕ್ಕೆ ಸಂಬಂಧಪಟ್ಟಂತೆ ದಾಖಲೆಗಳನ್ನು ನೀಡಲು ಹೇಳಿದೆ. ಚಿತ್ರೋತ್ಸವ ಸಮಿತಿಯ ಮಂದಿ ಎಲ್ಲ ಚಿತ್ರಗಳನ್ನು ನೋಡಿದ್ದಕ್ಕೆ ದಾಖಲೆ, ಪುರಾವೆಗಳನ್ನು ನೀಡಿದ್ದಾಗಿ ಹೇಳಲಾಗಿದೆ. ಮಾರ್ಚ್ ೨೦ಕ್ಕೆ ಕೇಸ್ ಮುಂದೂಡಲಾಗಿದೆ. ವಿಮಿಯೋ ಮೂಲಕ ಕಳುಹಿಸಿದ ಚಿತ್ರವನ್ನು ನೋಡಿದರೆ ಅದು ಸಂಬಂಧಪಟ್ಟವರಿಗೆ ತಿಳಿಯುತ್ತದೆ, ನಮ್ಮ ಚಿತ್ರಗಳನ್ನು ನೋಡಿಲ್ಲ ಎಂದು ಒಂಬತ್ತು ಮಂದಿ ನಿರ್ಮಾಪಕರು ದೂರಿದ್ದಾರೆ. ಉಳಿದವರು ದೂರ ಉಳಿದಿದ್ದಾರೆ. ಸ್ಪರ್ಧೆಗೆ ಆಯ್ಕೆಯಾದ ಚಿತ್ರಗಳನ್ನು ಹೊರತುಪಡಿಸಿದರೆ, ಉಳಿದ ಚಿತ್ರಗಳ ನಿರ್ಮಾಪಕರಿಗೆ ನಿರಾಸೆ ಆಗುವುದು ಸಹಜವೇ. ತಮ್ಮ ಚಿತ್ರಗಳು ಶ್ರೇಷ್ಠ ಎಂದು ಅವುಗಳ ನಿರ್ಮಾಪಕರು ಅಂದುಕೊಂಡರೆ ತಪ್ಪೂ ಇಲ್ಲ. ಹೆತ್ತವರಿಗೆ ಹೆಗ್ಗಣ ಮುದ್ದು ಅಲ್ಲವೇ? ಸ್ಪರ್ಧೆಗೆ ಚಿತ್ರಗಳನ್ನು ಆಹ್ವಾನಿಸುವುದು, ಅಂತಿಮ ಸುತ್ತಿನ ಆಯ್ಕೆ ಇವುಗಳಿಗೆ ಮಾತ್ರವಲ್ಲದೆ, ಸಮಕಾಲೀನ ವಿಶ್ವ ಚಿತ್ರಗಳ ಆಯ್ಕೆ, ಅವರೊಂದಿಗೆ ಪತ್ರವ್ಯವಹಾರ ಇತ್ಯಾದಿ ಕೂಡಾ ಸಾಕಷ್ಟು ಸಮಯ ಬೇಡುತ್ತದೆ. ಇವೆಲ್ಲ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುವ ಚಿತ್ರಗಳ ಮಾತಾಯಿತು. ಭಾರತದಲ್ಲಿ ಐದು ಮಾನ್ಯತೆ ಪಡೆದ ಚಿತ್ರೋತ್ಸವಗಳಿವೆ. ಗೋವಾದಲ್ಲಿ ನಡೆಯುವ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವ, ಕೊಲ್ಕೊತ್ತಾ, ಕೇರಳ ಮತ್ತು ಮುಂಬೈ ಚಿತ್ರೋತ್ಸವಗಳು, ಜೊತೆಗೆ ಇತ್ತೀಚೆಗೆ ಬೆಂಗಳೂರಿನ ಚಿತ್ರೋತ್ಸವ ಇವು. ಇವುಗಳಲ್ಲಿ ಪ್ರದರ್ಶನವಾಗುವ ಚಿತ್ರಗಳ ಗುಣಮಟ್ಟದಲ್ಲಿ ಕೇರಳ ಮತ್ತು ಬೆಂಗಳೂರು ಚಿತ್ರೋತ್ಸವಗಳು ಮುಂದಿವೆ.
ವಿದೇಶಗಳಲ್ಲಿ ಪ್ರತಿಷ್ಠಿತ ಚಿತ್ರೋತ್ಸವಗಳ ಉದ್ಘಾಟನಾ ಸಮಾರಂಭ ಭಾರತದಲ್ಲಿ ನಡೆಯುವಂತೆ ಅದ್ಧೂರಿಯಾಗಿ ಇರುವುದಿಲ್ಲ. ಭಾರತದ್ದಿರಲಿ, ವಿದೇಶದ್ದಿರಲಿ, ಚಿತ್ರೋತ್ಸವಗಳಿಗೆ ಪ್ರವೇಶಕ್ಕೆ ಪ್ರತಿನಿಧಿ ಶುಲ್ಕ ತೆತ್ತು ಹೋಗಬೇಕು. ಬೆಂಗಳೂರು ಚಿತ್ರೋತ್ಸವದಲ್ಲೂ ಸಿನಿಮಾ ಕುಟುಂಬದ ಮಂದಿಗೆ ಪ್ರತಿನಿಧಿ ಶುಲ್ಕ ನಿಗದಿಪಡಿಸಲಾಗಿದೆ. ಆದರೆ, ಇಲ್ಲಿ ಚಿತ್ರೋದ್ಯಮದ ಮಂದಿ ಬಹುತೇಕ ಉಚಿತ ಪಾಸ್‌ಗಳನ್ನು ನಿರೀಕ್ಷಿಸುತ್ತಾರೆ. ಉದ್ಘಾಟನಾ ಸಮಾರಂಭದ ಮಾತಿರಲಿ, ಮಲಯಾಳಂ, ತಮಿಳು ಚಿತ್ರರಂಗದ ಖ್ಯಾತನಾಮ ನಟರು, ನಿರ್ದೇಶಕರು ಸಾಲಲ್ಲಿ ನಿಂತು ಚಿತ್ರೋತ್ಸವಗಳಲ್ಲಿ ಚಿತ್ರಗಳನ್ನು ವೀಕ್ಷಿಸುವುದಿದೆ.
ಇಲ್ಲಿ ಅದು ಕಷ್ಟಸಾಧ್ಯ. ಜನಪ್ರಿಯ ನಟರು, ಬಂದರೆಂದರೆ ಅವರ ಜೊತೆ ಬರುವ ಅಭಿಮಾನಿ ಹಿಂಬಾಲಕರ ಬಳಗ ಬಹಳ ದೊಡ್ಡದಿರುತ್ತದೆ. ಇರಲಿ, ಅವರ ಜೊತೆ ಬಂದವರು, ಅವರ ಪಕ್ಕದಲ್ಲೇ ಆಸನ ನಿರೀಕ್ಷಿಸುತ್ತಾರೆ. ಸರ್ಕಾರದ ಕಾರ್ಯಕ್ರಮಗಳಾದಾಗ ಅಲ್ಲಿ ಶಿಷ್ಟಾಚಾರಗಳು ಬೇರೆ ಇರುತ್ತವೆ. ಯಾವುದೇ ವರ್ಷದ ಆಹ್ವಾನ ಪತ್ರಿಕೆ ನೋಡಿದರೂ ಇದು ತಿಳಿಯುತ್ತದೆ. ಸಚಿವರು, ನಗರದ ಶಾಸಕರು ಮೊದಲ್ಗೊಂಡು ಜನಪ್ರತಿನಿಽಗಳು ಮುಂತಾಗಿ ಹೆಸರುಗಳು ಎರಡು ಮೂರು ಪುಟಗಳಲ್ಲಿ ತುಂಬಿರುತ್ತವೆ.
ಆಹ್ವಾನ ಪತ್ರಿಕೆ ಮುದ್ರಣ ಆಗುವುದು ಮೂರು ನಾಲ್ಕು ದಿನಗಳ ಮೊದಲು. ಅದರ ನಂತರ ಅಂಚೆ ಮೂಲಕವಾಗಲಿ, ಕೊರಿಯರ್, ವೈಯಕ್ತಿಕವಾಗಿ ತಲುಪಿಸುವ ವೇಳೆ, ತಡವಾಗಿರುತ್ತದೆ. ನಾಳೆ ಚಿತ್ರೋತ್ಸವ ಎಂದರೆ ಇಂದು ತಲುಪಿದ್ದಿದೆ, ಅಂದೇ ತಲುಪಿದ್ದಿದೆ! ಜನಪ್ರಿಯ ನಟನಟಿಯರ ಕಾರ್ಯಕ್ರಮಗಳು ಕನಿಷ್ಠ ತಿಂಗಳ ಮೊದಲೇ ನಿಗದಿ ಆಗಿರುತ್ತದೆ. ಕನಿಷ್ಠ, ಪತ್ರ ಮುಖೇನ ಮೊದಲೇ ಮಾಹಿತಿಯಾದರೂ ನೀಡುವ ಕೆಲಸ ಆಗಬೇಕು.
ಇವುಗಳೆಲ್ಲ ಸರಿ ಆಗಬೇಕಾದ ಅಗತ್ಯ ಇದೆ. ಇದಕ್ಕಾಗಿ ಎಲ್ಲೆಲ್ಲಿ ಬೋಲ್ಟ್ ನಟ್ ಟೈಟ್ ಮಾಡಬೇಕೋ ಮಾಡಬೇಕಾಗಿದೆ. ಅದು ಮುಂದಿನ ಬಾರಿಗಾದರೂ ಆಗಲಿ.
ಡಾಕಾ: ಮಾಜಿ ಪ್ರಧಾನಿ ಮತ್ತು ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಇಂದು ಬೆಳಿಗ್ಗೆ ಡಾಕಾದ ಎವರ್‌ಕೇರ್…
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವೈಕುಂಠ ಏಕಾದಶಿಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ ಶ್ರೀ ಲಕ್ಷ್ಮೀವೆಂಟಕರಮಣಸ್ವಾಮಿ ದೇವಾಲಯವು ಇಂದು…
ಬೆಂಗಳೂರು: ಹೊಸ ವರ್ಷಾಚರಣೆಯ ವೇಳೆ ರಾಜ್ಯದ ವಿವಿಧೆಡೆ ಸಾರ್ವಜನಿಕರು ಅಸ್ವಸ್ಥರಾಗುವ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಇತರೆ ಸಮಸ್ಯೆಗಳಿಗೆ ಸಿಲುಕುವ ಸಾಧ್ಯತೆ…
ಬೆಳಗಾವಿ: ನಿಯಮಗಳನ್ನು ಗಾಳಿಗೆ ತೂರಿ ಕೇರಳದ ಅಕ್ರಮ ವಲಸಿಗರಿಗೆ ಮನೆ ಕಲ್ಪಿಸಿಕೊಡುವ ಮೂಲಕ ಸಿಎಂ ಸಿದ್ದರಾಮಯ್ಯ ಸಿಎಂ ಕುರ್ಚಿ ಉಳಿಸಿಕೊಳ್ಳಲು…
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಅರಣ್ಯದಲ್ಲಿ ನೂತನ ವರ್ಷಾಚರಣೆಗೆ ಕಡಿವಾಣ ಹಾಕಲಾಗಿದೆ. ಈ ಬಾರಿ ವಾಸ್ತವ್ಯದ…
ಬೆಂಗಳೂರು: ದೇಶದೆಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ ಮನೆ ಮಾಡಿದ್ದು, ವೈಕುಂಠ ಏಕಾದಶಿಯಂದು ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ ಇದೆ.…