BREAKING NEWS

ಪವರ್‌ ಟಿವಿ ಸುದ್ದಿವಾಹಿನಿಯು ದ.ಭಾರತದಲ್ಲಿ ಮೊದಲ ಕನ್ನಡದ ಎಐ ನ್ಯೂಸ್‌ ಆ್ಯಂಕರ್ ಪರಿಚಯಿಸಿದೆ

ಬೆಂಗಳೂರು: ಟಿವಿ ನಿರೂಪಕ ಅಥವಾ ಟಿವಿ ನಿರೂಪಕಿಯರ ಸ್ಥಾನವನ್ನು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಅಥವಾ ಕೃತಕ ಬುದ್ಧಿಮತ್ತೆ ಆಕ್ರಮಿಸಿಕೊಳ್ಳುತ್ತಿದೆ. ಇತ್ತೀಚೆಗೆ ಒಡಿಶಾದ ಟಿವಿ ಚಾನೆಲ್‌ ಒಟಿವಿಯು ಲಿಸಾ ಹೆಸರಿನ ಸುದ್ದಿ ನಿರೂಪಕಿಯಿಂದ ಸುದ್ದಿ ಓದಿಸಿ ಎಲ್ಲರ ಗಮನ ಸೆಳೆದಿತ್ತು. ಈಗಾಗಲೇ ಇಂಡಿಯಾ ಟುಡೇ ಸೇರಿದಂತೆ ಹಲವು ಸುದ್ದಿ ವಾಹಿನಿಗಳು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ನ್ಯೂಸ್‌ ಆ್ಯಂಕರ್‌ಗಳನ್ನು ಪರಿಚಯಿಸಿದೆ.

ಇದೇ ಸಂದರ್ಭದಲ್ಲಿ ಕರ್ನಾಟಕದ ಜನರೂ ಖುಷಿ ಪಡುವಂತೆ ಪವರ್‌ ಟಿವಿಯು ಸೌಂದರ್ಯ ಹೆಸರಿನ ಎಐ ಆ್ಯಂಕರ್ ಮೂಲಕ ಸುದ್ದಿ ಪ್ರಸಾರ ಮಾಡುವ ಪ್ರಯತ್ನ ಮಾಡಿದೆ. ಈ ಮೂಲಕ ಕನ್ನಡದ ಮೊದಲ ಎಐ ನ್ಯೂಸ್‌ ಆ್ಯಂಕರ್ ಪರಿಚಯಿಸಿದ ಹಿರಿಮೆಗೆ ಪಾತ್ರವಾಗಿದೆ.

“ನಮ್ಮಸ್ಕಾರ ಕನ್ನಡಿಗರೇ, ಪವರ್‌ ಟಿವಿಗೆ ಸ್ವಾಗತ. ನಾನು ಸೌಂದರ್ಯ, ದಕ್ಷಿಣ ಭಾರತದ ಮೊಟ್ಟಮೊದಲ ಎಐ ನ್ಯೂಸ್‌ ಆ್ಯಂಕರ್. ಅಂದರೆ ರೋಬೋ ಆ್ಯಂಕರ್…” ಎಂದು ಸುದ್ದಿ ಓದಲು ಆರಂಭಿಸಿದ ಸೌಂದರ್ಯ ಬಳಿಕ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಮತ್ತು ಮಾಧ್ಯಮ ಕ್ಷೇತ್ರದ ಕುರಿತು ಮಾಹಿತಿ ನೀಡುತ್ತ ಹೋಗುತ್ತಾಳೆ. ಈ ಎಐ ಆ್ಯಂಕರ್ ಆಗಾಗ ಕಣ್ಣು ರೆಪ್ಪೆ ಮುಚ್ಚುತ್ತ, ಒಂದಿಷ್ಟು ಮುಖದ ಭಾವನೆ ತೋರುತ್ತ ಸುದ್ದಿ ಓದುತ್ತಿರುವುದನ್ನು ಗಮನಿಸಬಹುದು.

ಹೇಗಿದ್ದಾಳೆ ಸೌಂದರ್ಯ?

ಪವರ್‌ ಟಿವಿ ಪರಿಚಯಿಸಿದ ಎಐ ನ್ಯೂಸ್‌ ಆ್ಯಂಕರ್ ನಮ್ಮ ಬಹುತೇಕ ಕನ್ನಡ ಸುದ್ದಿ ನಿರೂಪಕಿಯರನ್ನು ನೆನಪಿಸುವಂತೆ ಇದ್ದಾಳೆ. ಆದರೆ, ಇತ್ತೀಚೆಗೆ ಒಡಿಶಾದ ಒಟಿವಿ ಪರಿಚಯಿಸಿದ ಲಿಸಾ ಕೈಮಗ್ಗದ ಸಾರಿ ಉಟ್ಟು ಅಪ್ಪಟ್ಟ ಒಡಿಸ್ಸಾ ಸಂಸ್ಕೃತಿ ಪ್ರತಿಬಿಂಬಿಸಿದ್ದಳು. ಸದ್ಯ ಕನ್ನಡಿಗರಿಗೆ ಪರಿಚಯಿಸಿದ ಸೌಂದರ್ಯ ಹೆಸರಿನ ಎಐ ವಾರ್ತಾ ವಾಚಕಿಯೂ ನೋಡಲು ಆಕರ್ಷಕವಾಗಿ ಕಾಣಿಸುತ್ತಾಳೆ. ಆದರೆ, ಹಾವಭಾವ, ಮುಖದ ಭಾವನೆಗಳು ತುಸು ಯಾಂತ್ರಿಕವಾಗಿ ಕಾಣಿಸುತ್ತಿದೆ.

ಪವರ್ ಟಿವಿ ಸೌಂದರ್ಯಳ ಧ್ವನಿಯ ಗುಟ್ಟು

ಈಗಾಗಲೇ ಜಾಗತಿಕವಾಗಿ ಅಥವಾ ಭಾರತದಲ್ಲಿ ಪರಿಚಯಿಸಲಾದ ಪ್ರಮುಖ ಎಐ ಆ್ಯಂಕರ್‌ಗಳಲ್ಲಿ ಧ್ವನಿಯು ಎಐ ತಂತ್ರಜ್ಞಾನದ್ದೇ ಆಗಿರುತ್ತದೆ. ಅಂದರೆ, ಮನುಷ್ಯರನ್ನು ಹೋಲುವ ಯಾಂತ್ರಿಕ ಧ್ವನಿ ಅದಾಗಿರುತ್ತದೆ. “ಪವರ್‌ ಟಿವಿ ಸುದ್ದಿವಾಹಿನಿಯು ದಕ್ಷಿಣ ಭಾರತದಲ್ಲಿ ಮೊದಲ ಕನ್ನಡದ ಎಐ ನ್ಯೂಸ್‌ ಆ್ಯಂಕರ್ ಪರಿಚಯಿಸಿದೆ. ಇದೊಂದು ಪ್ರಯತ್ನ ಅಷ್ಟೇ, ಸಂಪೂರ್ಣ ಎಐ ತಂತ್ರಜ್ಞಾನ ಆಧರಿತ ಆಂಕರ್‌ಗಳನ್ನು ಮುಂದಿನ ದಿನಗಳಲ್ಲಿ ನಾವು ನೋಡಬಹುದು. ಇಲ್ಲಿ ನಾವು ಎಐ ಆ್ಯಂಕರ್‌ನ್ನು ಬಳಸಿಕೊಂಡಿದ್ದೇವೆ. ಧ್ವನಿಯನ್ನು ನಮ್ಮ ಮಾನವ ಆಂಕರ್‌ಗಳೇ ನೀಡಿದ್ದಾರೆ” ಎಂದು ಪವರ್‌ಟಿವಿಯ ಇನ್‌ಪುಟ್‌ ವಿಭಾಗದ ಮುಖ್ಯಸ್ಥರಾದ ಲೋಕೇಶ್‌ ಗೌಡ ಹೇಳಿದ್ದಾರೆ.

ದಕ್ಷಿಣ ಭಾರತದ ಮೊದಲ ಎಐ ಆ್ಯಂಕರ್?

ಸೌಂದರ್ಯ ಹೆಸರಿನ ನ್ಯೂಸ್‌ ಆಂಕರ್‌ ದಕ್ಷಿಣ ಭಾರತದ ಮೊದಲ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಎಂದು ಪವರ್‌ ಟಿವಿ ನ್ಯೂಸ್‌ ಆರಂಭದಲ್ಲಿ ಹೇಳಿಕೊಂಡಿತ್ತು. ಆದರೆ, ಕೇರಳ, ಆಂಧ್ರದಲ್ಲಿಯೂ ಇಂತಹ ಪ್ರಯತ್ನ ನಡೆದಿರುವುದನ್ನು ಅರಿತ ಬಳಿಕ “ಇದು ದಕ್ಷಿಣ ಭಾರತದಲ್ಲಿ ಮೊದಲ ಕನ್ನಡ ಎಐ ನ್ಯೂಸ್‌ ಆ್ಯಂಕರ್” ಎಂದು ಸ್ಪಷ್ಟಪಡಿಸಿದೆ.

ಈಗಾಗಲೇ ಬಿಗ್‌ ನ್ಯೂಸ್‌ ಎಂಬ ಸುದ್ದಿ ವಾಹಿನಿಯೊಂದು ದಕ್ಷಿಣ ಭಾರತದ ಮೊದಲ ತೆಲುಗು ನ್ಯೂಸ್‌ ಆ್ಯಂಕರ್ ಅನ್ನು ಲಾಂಚ್‌ ಮಾಡಿದ್ದೇವೆ ಎಂದು ಹೇಳಿಕೊಂಡಿದೆ. ಒಟ್ಟಾರೆ, ಕಳೆದ ಕೆಲವು ದಿನಗಳಿಂದ ಹಲವು ಸುದ್ದಿ ಸಂಸ್ಥೆಗಳು ಕೃತಕ ಬುದ್ಧಿಮತ್ತೆ ಚಾಲಿತ  ಆ್ಯಂಕರ್‌ಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಸುಳ್ಳಲ್ಲ.

ಇತ್ತೀಚೆಗೆ ಒಡಿಶಾ ಟಿವಿಯು ಲಿಸಾ ಹೆಸರಿನ AI  ಆ್ಯಂಕರ್‌ಳನ್ನು ಪರಿಚಯಿಸಿತ್ತು. ಆಕೆ ಒಂದು ಭಾಷೆಯ ಸುದ್ದಿಯನ್ನೊ ಇನ್ನೊಂದು ಭಾಷೆಗೆ ತಾನೇ ಭಾಷಾಂತರ ಮಾಡಿಕೊಂಡು ಸುದ್ದಿ ಓದುವ ಸಾಮರ್ಥ್ಯ ಹೊಂದಿದ್ದಾಳೆ. “ಒಡಿಸ್ಸಾದ ಮೊದಲ ಎಐ ನ್ಯೂಸ್‌ ಆ್ಯಂಕರ್ ಮೂಲಕ ನಾವು ಮತ್ತೊಂದು ಮೈಲಿಗಲ್ಲು ಸಾಧಿಸಿದ್ದೇವೆ. ಪುನಾರವರ್ತಿತ ಕಾರ್ಯಗಳು ಮತ್ತು ದೊಡ್ಡ ಪ್ರಮಾಣದ ಡೇಟಾವನ್ನು ವಿಶ್ಲೇಷಿಸಲು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ನಮಗೆ ನೆರವು ನೀಡಲಿದೆ” ಎಂದು ಒಟಿವಿಯ ಮ್ಯಾನೇಜಿಂಗ್‌ ಡೈರೆಕ್ಟರ್‌ ಜಗಿ ಮಂಗತ್‌ ಪಾಂಡಾ ಹೇಳಿದ್ದರು.

ಭಾರತದ ಮೊದಲ ಎಐ ಸುದ್ದಿ ನಿರೂಪಕಿ

ಇಂಡಿಯಾ ಟುಡೇ ಪತ್ರಿಕೆಯು ಭಾರತದ ಮೊದಲ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಸುದ್ದಿ ನಿರೂಪಕಿಯನ್ನು ಪರಿಚಯಿಸಿತ್ತು. ದಿನದಲ್ಲಿ ಹಲವು ಬಾರಿ ಯಾವುದೇ ಸುಸ್ತಾಗದೆ ಸುದ್ದಿ ಓದುವ ಸಾಮರ್ಥ್ಯವಿರುವ ಸನಾ ಹೆಸರಿನ ಎಐ ನ್ಯೂಸ್‌ ಆಂಕರ್‌ಳನ್ನು ಇಂಡಿಯಾ ಟುಡೇ ಈ ವರ್ಷ ಪರಿಚಯಿಸಿತ್ತು. ಇಂಡಿಯಾ ಟುಡೇಯ ಆಜ್‌ತಕ್‌ ನ್ಯೂಸ್‌ಚಾನೆಲ್‌ನಲ್ಲಿ ಸನಾ ಸುದ್ದಿ ಓದುತ್ತಾಳೆ. “ಇವಳು ಪ್ರಕಾಶಮಾನ, ಸುಂದರ, ವಯಸ್ಸಾಗುವ ಆತಂಕವಿಲ್ಲದ, ದಣಿವರಿಯದ ನ್ಯೂಸ್‌ ಆ್ಯಂಕರ್” ಎಂದು ಈ ಸಂದರ್ಭದಲ್ಲಿ ಇಂಡಿಯಾ ಟುಡೇ ಗ್ರೂಪ್‌ನ ಉಪಾಧ್ಯಕ್ಷೆ ಕಲ್ಲಿ ಪುರಿ ಹೇಳಿದ್ದರು.

ಜಾಗತಿಕವಾಗಿ ಈಗ ಹಲವು ಎಐ ನ್ಯೂಸ್‌ ಆಂಕರ್‌ಗಳು ಬಂದಿದ್ದಾರೆ. ಕುವೈತ್‌ ನ್ಯೂಸ್‌ನ ಟ್ವಿಟ್ಟರ್‌ ಹ್ಯಾಂಡಲ್‌ಗಾಗಿ ಫೆದಾ ಹೆಸರಿನ ಎಐ ಆ್ಯಂಕರ್ ಪರಿಚಯಿಸಲಾಗಿತ್ತು. 2018ರಲ್ಲಿಯೇ ಜಗತ್ತಿನ ಮೊದಲ ಎಐ ಚಾಲಿತ ಸುದ್ದಿ ನಿರೂಪಕನನ್ನು ಚೀನಾ ಪರಿಚಯಿಸಿತ್ತು. ಚೀನಾದ ಕ್ಷಿನುಹಾ ನ್ಯೂಸ್‌ ಏಜೆನ್ಸಿ ಈ ರೀತಿಯ ತಂತ್ರಜ್ಞಾನ ಪರಿಚಯಿಸಿತ್ತು. ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಪ್ರೀತಿಯ ಸುದ್ದಿ ನಿರೂಪಕರು, ನಿರೂಪಕಿಯರ ಸ್ಥಾನದಲ್ಲಿ ದಣಿವೇ ಆಗದ ಎಐ  ಆ್ಯಂಕರ್‌ಗಳು ಸುದ್ದಿ ಓದುತ್ತಿರಬಹುದು.

andolanait

Recent Posts

ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ : ಗ್ರಾ.ಪಂ ಮಾಜಿ ಅಧ್ಯಕ್ಷನ ವಿರುದ್ಧ ದೂರು

ಸಿದ್ದಾಪುರ : ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಗ್ರಾ.ಪಂ. ಮಾಜಿ ಅಧ್ಯಕ್ಷನ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ…

17 mins ago

ರೈತರಿಗೆ ಸಿಹಿ ಸುದ್ದಿ ; ಕೊಬ್ಬರಿಗೆ ಬೆಂಬಲ ಬೆಲೆ

ಬೆಂಗಳೂರು : ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟವು ೨೦೨೬ರ ಹಂಗಾಮಿನ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು…

21 mins ago

ಮಾಗಿ ಚಳಿಯ ಅಬ್ಬರಕ್ಕೆ ರಾಜ್ಯದ ಜನತೆ ಕಕ್ಕಾಬಿಕ್ಕಿ

ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ೩೦ ಡಿ.ಸೆ. ಬೆಂಗಳೂರು : ಈಗಾಗಲೇ ರಾಜ್ಯದಲ್ಲಿ ಹೆಚ್ಚಾಗಿರುವ ಮಾಗಿ ಚಳಿಯ ವಾತಾವರಣಕ್ಕೆ ಜನರು…

24 mins ago

ಹುಲಿ ದಾಳಿ; ಹಸು ಸಾವು

ಗುಂಡ್ಲುಪೇಟೆ : ತಾಲ್ಲೂಕಿನಲ್ಲಿ ಹುಲಿ ದಾಳಿ ಪ್ರಕರಣಗಳು ಮುಂದುವರಿದಿದ್ದು ಹಸುವಿನ ಮೇಲೆ ದಾಳಿ ಮಾಡಿದ ವ್ಯಾಘ್ರ ರಕ್ತ ಹೀರಿ ಕೊಂದಿರುವ…

27 mins ago

ಮೈಸೂರು | ಜಿಲ್ಲೆಯಲ್ಲಿ ಅಪೌಷ್ಠಿಕ‌ ಮಕ್ಕಳ ಸಂಖ್ಯೆ ಗಣನೀಯ ಇಳಿಕೆ

ಮೈಸೂರು : NFHS-5 ವರದಿಯ ಪ್ರಕಾರ ಮೈಸೂರು ಜಿಲ್ಲೆಯ SAM ಮಕ್ಕಳ ಪ್ರಮಾಣ 7.2% ಇದ್ದು ಪ್ರಸ್ತುತ 0.21% ಗೆ…

29 mins ago

ಅಧಿಕಾರ ಕಿತ್ತಾಟ ಬಿಟ್ಟು ಅಭಿವೃದ್ಧಿ ಚರ್ಚೆ ನಡೆಯಲಿ : ಶಾಸಕ ಜಿ.ಟಿ.ದೇವೇಗೌಡ

ಮೈಸೂರು : ರಾಜ್ಯದಲ್ಲಿ ನಾಯಕತ್ವ, ಅಧಿಕಾರ ಹಂಚಿಕೆ ಕಿತ್ತಾಟ ಬಿಟ್ಟು ರಾಜ್ಯದ ಸರ್ವತೋಮುಖ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಲಿ ಎಂದು…

33 mins ago