ಬೆಂಗಳೂರು : ಬಿಜೆಪಿ ತೊರೆದಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಸೋಮವಾರ ಬೆಳಿಗ್ಗೆ ಆಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಅವರು ಶೆಟ್ಟರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಕಾಂಗ್ರೆಸ್ ಪಕ್ಷ ಸೇರಿದ ಬಳಿಕ ಮಾತನಾಡಿದ ಶೆಟ್ಟರ್, ಜನಸಂಘ ಮತ್ತು ಬಿಜೆಪಿಯಲ್ಲಿ ಸಕ್ರಿಯವಾಗಿದ್ದ ಕುಟುಂಬ ನಮ್ಮದು. ನನ್ನ ತಂದೆ ಜನಸಂಘದಿಂದ ದಕ್ಷಿಣ ಭಾರತದಲ್ಲಿ ಮೊದಲ ಮೇಯರ್ ಆಗಿದ್ದರು. ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಪ್ರಮುಖರಲ್ಲಿ ನಾನೂ ಒಬ್ಬ. ಆದರೆ, ಈ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸುವ ಮೂಲಕ ಪಕ್ಷದ ಕೆಲವರು ನನಗೆ ಅವಮಾನ ಮಾಡಿದರು. ಸ್ವಾಭಿಮಾನಕ್ಕೆ ಧಕ್ಕೆ ಬಂದಿರುವುದರಿಂದ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದೇನೆ ಎಂದರು.
ಲಿಂಗಾಯತ ಸಮುದಾಯದ ಹಿರಿಯ ರಾಜಕೀಯ ನಾಯಕರಲ್ಲಿ ನಾನೂ ಒಬ್ಬ. ಬಿ.ಎಸ್. ಯಡಿಯೂರಪ್ಪ ಅವರು ಚುನಾವಣಾ ರಾಜಕೀಯದಿಂದ ನಿವೃತ್ತರಾಗಿದ್ದಾರೆ. ಈಗ ಬಿಜೆಪಿಯಲ್ಲಿ ಲಿಂಗಾಯತ ನಾಯಕರಲ್ಲಿ ನಾನೇ ಹಿರಿಯ. ಈ ಕಾರಣಕ್ಕಾಗಿಯೇ ಬಿಜೆಪಿಯ ಕೆಲವರು ನನ್ನನ್ನು ತುಳಿಯುವ ಪ್ರಯತ್ನ ಮಾಡಿದರು. ಬಿಜೆಪಿ ರಾಜ್ಯ ಘಟಕವು ಈಗ ಸಂಪೂರ್ಣವಾಗಿ ಕೆಲವು ವ್ಯಕ್ತಿಗಳ ಹಿಡಿತದಲ್ಲಿದೆ. ಇದರಿಂದಾಗಿಯೇ ನನ್ನಂತಹ ಹಿರಿಯರಿಗೆ ಅವಮಾನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಏಕೆ ನಮ್ಮನ್ನು ಈ ರೀತಿ ಅವಮಾನಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಬಿಜೆಪಿ ವರಿಷ್ಠರಿಂದ ಉತ್ತರ ಬಂದಿಲ್ಲ. ಸ್ವಾಭಿಮಾನವನ್ನು ಉಳಿಸಿಕೊಳ್ಳುವುದಕ್ಕಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದೇನೆ. ಇದು ನನ್ನ ಹಾಗೂ ಕಾಂಗ್ರೆಸ್ ಪಕ್ಷದ ಪಾಲಿಗೆ ಹೊಸ ಅಧ್ಯಾಯ. ಕಾಂಗ್ರೆಸ್ ಪಕ್ಷದ ಸಂಘಟನೆಗೆ ಸಂಪೂರ್ಣವಾಗಿ ಶ್ರಮಿಸುತ್ತೇನೆ ಎಂದರು.
ಶೆಟ್ಟರ್ ಅವರನ್ನು ಸ್ವಾಗತಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಶೆಟ್ಟರ್ ಅವರು ಸಂಘ ಪರಿವಾರದ ಮೂಲದವರಾದರೂ ಯಾವತ್ತೂ ಕೂಡ ಜನವಿರೋಧಿಯಾಗಿ ನಡೆದುಕೊಳ್ಳಲಿಲ್ಲ. ಒಬ್ಬ ಸಜ್ಜನ ರಾಜಕಾರಣಿ. ಅವರ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಹೆಚ್ಚಿನ ಬಲ ಬಂದಿದೆ. ಇದು ರಾಷ್ಟ್ರ ಮಟ್ಟದಲ್ಲೂ ಬದಲಾವಣೆಯ ದಿಕ್ಸೂಚಿ ಆಗಲಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಮಾತನಾಡಿ, ಶೆಟ್ಟರ್ ರಾಜ್ಯದ ಸ್ವಾಭಿಮಾನಿ ರಾಜಕಾರಣಿಗಳಲ್ಲಿ ಒಬ್ಬರು. ಅವರನ್ನು ಬಿಜೆಪಿ ನಾಯಕರು ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಸ್ವಾಭಿಮಾನದ ಪ್ರಶ್ನೆಗಾಗಿಯೇ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬಂದಿದ್ದಾರೆ ಎಂದರು.
ಶೆಟ್ಟರ್ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ದೊಡ್ಡ ಶಕ್ತಿ ಬಂದಿದೆ. ನಮ್ಮ ಪಕ್ಷ 150ಕ್ಕೂ ಹೆಚ್ಚು ಸ್ಥಾನ ಗಳಿಸಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಅಮರ ಸಿಂಹ ಪಾಟೀಲ ಕೂಡ ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು.
‘ರಾಜ್ಯದಲ್ಲಿ ಹೊಸ ಅಧ್ಯಾಯ, ಹೊಸ ಇತಿಹಾಸ ಆರಂಭವಾಗಿದೆ. ಮಾಜಿ ಮುಖ್ಯಮಂತ್ರಿ, ಮಾಜಿ ವಿರೋಧ ಪಕ್ಷದ ನಾಯಕರು ಹಾಗೂ ಆರು ಬಾರಿ ಶಾಸಕರಾಗಿದ್ದ ಜಗದೀಶ ಶೆಟ್ಟರ್ ಅವರು ಕಾಂಗ್ರೆಸ್ ಕುಟುಂಬ ಸೇರಿದ್ದಾರೆ’ ಎಂದು ರಾಜ್ಯ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ.
ಮೈಸೂರು: ಯುವತಿಯ ಪ್ರೀತಿ ವಿಚಾರವಾಗಿ ಯುವಕನ ಮೇಲೆ ಹಲ್ಲೆ ನಡೆಸಲಾಗಿದ್ದು, ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೈಸೂರು ಜಿಲ್ಲೆ ಟಿ.ನರಸೀಪುರ…
ನಮ್ಮ ಸಂವಿಧಾನಕ್ಕೆ ಬರೋಬ್ಬರಿ 75ವರ್ಷಗಳು ತುಂಬಿವೆ. ಭಾರತದ ಪ್ರಜೆಗಳಾದ ನಮಗೆ ಸಂವಿಧಾನವೇ ‘ಸಾಮಾಜಿಕ ನ್ಯಾಯದ ತಾಯಿ’. ಸರ್ವಜನಾಂಗದ ಹಿತರಕ್ಷಣೆಯ ಹೊಣೆಹೊತ್ತ…
ಭವಿಷ್ಯದ ಗುರಿಸಾಧನೆಗಾಗಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆಗೆ ನಿರ್ಧಾರ ಕಳೆದ ವಾರ ಬಿಜೆಪಿ-ಜಾ.ದಳ ಪಾಳೆಯಗಳಲ್ಲಿ ದೊಡ್ಡ ಮಟ್ಟದ ಸಂಚಲನ…
2025ರ ವರ್ಷಾಂತ್ಯದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಘೋರ ದುರಂತಕ್ಕೆ ಸಾಕ್ಷಿಯಾದದ್ದು ಅತ್ಯಂತ ವಿಷಾದಕರ ಮತ್ತು ಆತಂಕಕಾರಿ ಸಂಗತಿ. ಹೊಟ್ಟೆ ಪಾಡಿಗಾಗಿ…
ಹೊಸ ವರ್ಷದ ಹೊಸ್ತಿಲಲ್ಲಿರುವ ನಾವು 2025ರ ವರ್ಷಪೂರ್ತಿ ಸುಂದರ ಹಾಗೂ ಕಹಿ ಘಟನೆಗಳನ್ನು ಮೆಲುಕು ಹಾಕಿದ್ದು. ಅದೇ ಮಾದರಿಯಲ್ಲಿ ಪ್ರಸಕ್ತ…
* ರೈತರ ಕೈಗೆ ಸಿಗದ ಫಸಲು * ಸ್ಥಳಾಂತರಕ್ಕೆ ಅನುಮತಿ ನೀಡಲು ಅರಣ್ಯ ಇಲಾಖೆಯಿಂದ ಮನವಿ * ವಾನರ ಸೇನೆ…