BREAKING NEWS

ಕೋವಿಡ್‌ ಸಮಯದಲ್ಲಿ ನಡೆದ ಅಕ್ರಮಗಳ ತನಿಖೆಗೆ ಸರ್ಕಾರ ಶಿಫಾರಸ್ಸು ಮಾಡಿದೆ: ದಿನೇಶ್‌ ಗುಂಡೂರಾವ್‌

ಬೆಂಗಳೂರು : ಕೋವಿಡ್ ಕಾಲಮಾನದಲ್ಲಿ ನಡೆದ ಅವ್ಯವಹಾರಗಳು ಹಾಗೂ ಇತರ ಅಕ್ರಮಗಳ ಕುರಿತು ನ್ಯಾಯಾಂಗ ತನಿಖೆ ನಡೆಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಬೆಂಗಳೂರಿನ ಜಯನಗರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕೋವಿಡ್ ಕಾಲದಲ್ಲಿ ವೈದ್ಯಕೀಯ ಸಲಕರಣೆಗಳ ಖರೀದಿ ಹಾಗೂ ಇತರ ವ್ಯವಹಾರಗಳಲ್ಲಿ ಮಾರುಕಟ್ಟೆ ದರ ಮೀರಿ, ಒಂದಕ್ಕೆ ಹತ್ತು ಪಟ್ಟು ದುಬಾರಿ ಬಿಲ್ ಪಾವತಿ ಮಾಡಲಾಗಿದೆ. ಈ ವಿಚಾರವನ್ನು ತನಿಖೆ ನಡೆಸಬೇಕೆಂದು ಆರಂಭದಿಂದಲೂ ಒತ್ತಡಗಳಿವೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಕೂಡ ವರದಿ ನೀಡಿವೆ ಎಂದರು.

ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಪರಿಶೀಲನೆ ನಡೆಸಿ ನ್ಯಾಯಾಂಗ ತನಿಖೆಗೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯವರಿಗೆ ಶಿಫಾರಸ್ಸು ಮಾಡಿದೆ ಎಂದು ಹೇಳಿದರು.

ಅನಾಥ ಶವಗಳು, ರಸ್ತೆಬದಿಗಳಲ್ಲಿ ಮೃತಪಟ್ಟವರ ಪಾರ್ಥೀವ ಶರೀರಗಳನ್ನು ಮಾರಾಟ ಮಾಡಿಕೊಳ್ಳುವಂತಹ ಮೆಡಿಕಲ್ ಮಾಫಿಯಾ ತಲೆ ಎತ್ತುತ್ತಿದೆ ಎಂಬ ಆರೋಪ ಗಂಭೀರವಾದದ್ದು. ಇದನ್ನು ಸರ್ಕಾರ ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ. ಅಗತ್ಯ ಮಾಹಿತಿ ಕಲೆ ಹಾಕಲಾಗುವುದು. ಆರೋಪ ಮಾಡಿದವರಿಂದಲೂ ವಿವರಣೆ ಪಡೆದು ನಂತರ ತನಿಖೆಗೆ ಸಮಿತಿ ರಚಿಸಬೇಕೇ ಎಂಬುದರ ಬಗ್ಗೆ ನಿರ್ಧರಿಸುವುದಾಗಿ ಹೇಳಿದರು.

ತುರ್ತು ಸೇವೆಯಾದ ಆರೋಗ್ಯ ಕವಚ ಯೋಜನೆ ಸುಧಾರಣೆಗೆ ರಚಿಸಲಾಗಿರುವ ಸಮಿತಿ ವಾರದೊಳಗಾಗಿ ವರದಿ ನೀಡಲಿದ್ದು, ಮುಂದಿನ 2-3 ತಿಂಗಳೊಳಗಾಗಿ ಹೊಸ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದರು.

ಇತ್ತೀಚೆಗಷ್ಟೇ 170 ಹೊಸ ಆಂಬುಲೆನ್ಸ್‍ಗಳನ್ನು ಖರೀದಿಸಲಾಗಿದೆ. ಬಹಳ ವರ್ಷಗಳಿಂದಲೂ 108 ಸೇವೆ ಟೆಂಡರ್ ಇಲ್ಲದೆ ಹಳೆಯ ಒಪ್ಪಂದದ ಮೇಲೆಯೇ ಮುಂದುವರೆದುಕೊಂಡು ಬಂದಿವೆ. ಒಂದು ಕಾಲದಲ್ಲಿ ಮುಂಚೂಣಿಯಲ್ಲಿದ್ದ ಸೇವೆ ಈಗ ಹಿಂದುಳಿದಿದೆ. ಆಧುನಿಕ ತಂತ್ರಜ್ಞಾನ ಅಳವಡಿಕೆ, ಕ್ಷಿಪ್ರ ಪ್ರತಿಕ್ರಿಯೆ ಸೇರಿದಂತೆ ಹಲವರು ಲೋಪದೋಷಗಳಿವೆ. ಇವುಗಳನ್ನು ಸರಿಪಡಿಸಲಾಗುವುದು ಎಂದು ಹೇಳಿದರು.

ಕಳೆದ ಬಜೆಟ್‍ನಲ್ಲಿ ಘೊಷಿಸಲಾದ ಆಶಾಕಿರಣ ಯೋಜನೆಯನ್ನು ಇದೇ ತಿಂಗಳಿನಲ್ಲಿ ಉದ್ಘಾಟಿಸಲಾಗುವುದು. ಕಾಂಟ್ರಾಕ್ಟ್ ಲೆನ್ಸ್ ಮತ್ತು ಶಸ್ತ್ರಚಿಕಿತ್ಸೆ ಮೂಲಕ ನೆರವಾಗುವ ಮಹತ್ವದ ಯೋಜನೆ ಶೀಘ್ರವೇ ಜಾರಿಯಾಗಲಿದೆ ಎಂದರು.

ಆರೋಗ್ಯ ಇಲಾಖೆಯಲ್ಲಿ ಸುಮಾರು ವರ್ಷಗಳಿಂದ ನೇಮಕಾತಿಯಾಗಿಲ್ಲ. ಹೀಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿ ಮತ್ತು ಡಿ ದರ್ಜೆ ಸಿಬ್ಬಂದಿಗಳ ಕೊರತೆ ಇದೆ. ಇದನ್ನು ಬಗೆಹರಿಸಲು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ವೈದ್ಯರು, ಖಾಸಗಿ ಕ್ಲಿನಿಕ್ ಸೇರಿದಂತೆ ಇತರೆಡೆ ಕೆಲಸ ಮಾಡಲು ಅವಕಾಶ ಇದೆ. ಆದರೆ ಅದರಿಂದ ಸರ್ಕಾರಿ ಆಸ್ಪತ್ರೆಗಳ ಸೇವೆಗೆ ತೊಂದರೆ ಆಗಬಾರದೆಂಬ ಎಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ವೈದ್ಯರ ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ಹೆಚ್ಚಿಸುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದರು.

ಜಯನಗರ ಆಸ್ಪತ್ರೆಯಲ್ಲಿ ರೇಡಿಯೋಲಾಜಿಸ್ಟ್ ಕೊರತೆ ಇದೆ ಎಂದು ಹೇಳಲಾಗಿದೆ. ಒಂದು ವಾರದೊಳಗಾಗಿ ಈ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ರಾಜ್ಯಾದ್ಯಂತ ಡಯಾಲಿಸಿಸ್ ಕೇಂದ್ರಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದ್ದು, ಅಗತ್ಯ ಯಂತ್ರೋಪಕರಣಗಳನ್ನು ಖರೀದಿಸಲಾಗುತ್ತಿದೆ ಎಂದರು.

ದಕ್ಷಿಣ ಭಾರತದ ರಾಜ್ಯದಲ್ಲಿ ತಮಿಳುನಾಡು, ಕೇರಳಗಿಂತಲೂ ರಾಜ್ಯದ ಆರೋಗ್ಯ ಸೇವೆ ಹಿಂದುಳಿದಿರುವ ಬಗ್ಗೆ ವರದಿಯಿದೆ. ಇದನ್ನು ಸುಧಾರಿಸಲು ಸಾಕಷ್ಟು ಕ್ರಮ ಕೈಗೊಳ್ಳಲಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚಿನ ವ್ಯವಸ್ಥೆ ಕಲ್ಪಿಸಿ ಜೀವನಶೈಲಿ ಹಾಗೂ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು. ಏಕ ಬಳಕೆಯ ಡಯಾಲಿಸಿಸ್ ಸೇವೆ, 108 ತುರ್ತು ಸಹಾಯವಾಣಿ ಸುಧಾರಣೆ ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಹೇಳಿದರು.

ಶಾಸಕ ಸಿ.ಕೆ.ರಾಮು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಸಚಿವರ ಪರಿಶೀಲನೆ ವೇಳೆ ಆಸ್ಪತ್ರೆ ಸಿಬ್ಬಂದಿಯೊಬ್ಬರು ವರ್ಗಾವಣೆಗೆ ಪತ್ರ ನೀಡಿದಾಗ ಸಚಿವರು ಸಿಡಿಮಿಡಿಗೊಂಡು ತರಾಟೆಗೆ ತೆಗೆದುಕೊಂಡರು.

andolanait

Recent Posts

ಕುವೈತ್‌ ಪ್ರವಾಸ: ಪ್ರಧಾನಿ ಮೋದಿಗೆ 20ನೇ ಅಂತರಾಷ್ಟ್ರೀಯ ಗೌರವ

ಕುವೈತ್‌/ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಕುವೈತ್‌ ಪ್ರವಾಸದಲ್ಲಿದ್ದು, ಇಲ್ಲಿನ ರಾಜ ಶೇಕ್‌ ಮಿಶಾಲ್‌ ಅಲ್‌…

13 mins ago

ಮೈಸೂರಿನಲ್ಲಿ ನಿಮ್ಹಾನ್ಸ್‌ ಘಟಕ ಸ್ಥಾಪನೆಗೆ ಕ್ರಮ ಎಂದ ಸಿಎಂ ಸಿದ್ದರಾಮಯ್ಯ

ಕಲಬುರ್ಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಒತ್ತು ನೀಡುತ್ತಿದ್ದು, 371 ಜೆ ಜಾರಿಯಾದ ದಶಮಾನೋತ್ಸವದ ಪ್ರಯುಕ್ತ 371 ಹಾಸಿಗೆಗಳ…

18 mins ago

ಫೇಕ್‌ ಎನ್‌ಕೌಂಟರ್‌ ಹೇಳಿಕೆ: ಪ್ರಹ್ಲಾದ್‌ ಜೋಶಿ ವಿರುದ್ಧ ಬಿ.ಕೆ.ಹರಿಪ್ರಸಾದ್‌ ಕಿಡಿ

ಬೆಂಗಳೂರು: ವಿಧಾನ ಪರಿಷತ್‌ ಶಾಸಕ ಸಿ.ಟಿ.ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ನೀಡಿರುವ ಹೇಳಿಕೆ ಅಮಿತ್‌…

48 mins ago

ಹೆಣ್ಣು ಕಾನೂನನ್ನು ಅರಿತರೆ ಅಷ್ಟೇ, ದೌರ್ಜನ್ಯ ಎದುರಿಸಲು ಸಾಧ್ಯ: ನಾಗಲಕ್ಷ್ಮೀ ಚೌಧರಿ

ಮಂಡ್ಯ: ಹೆಣ್ಣು ಕಾನೂನು ಅರಿತಕೊಂಡಾಗಷ್ಟೇ, ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯ ಎದುರಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ…

2 hours ago

ಮೈಸೂರು:  ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿ

ಮೈಸೂರು: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಮಾಸುವ ಮುನ್ನವೇ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಸಾವನ್ನಪ್ಪಿರುವ…

2 hours ago

ಡಿ.ಕೆ.ಸಹೋದರರಿಗೆ ಮದುವೆ ಕರೆಯೋಲೆ ನೀಡಿದ ಡಾಲಿ ಧನಂಜಯ್‌

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಅವರು ತಮ್ಮ ಮದುವೆ ಕರೆಯೋಲೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಡಿ.ಕೆ.ಸುರೇಶ್‌ ಅವರಿಗೆ ನೀಡಿ…

2 hours ago