BREAKING NEWS

ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ : ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಚುರುಕು

ಬೆಂಗಳೂರು-ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಆಡಳಿತಾರೂಢ ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಚುರುಕುಗೊಂಡಿದ್ದು, ಕೆಲವರಿಗೆ ಟಿಕೆಟ್ ಕೈತಪ್ಪುವ ಭೀತಿ ಎದುರಾಗಿದೆ.
ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವವರಿಗೆ ಹಾಗೂ ಕಾರ್ಯಕರ್ತರನ್ನು ಕಡೆಗಣಿಸಿರುವ ಹಾಗೂ ಇನ್ನಿತರ ಕಾರಣಗಳಿಂದ ಕೆಲವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ. ಹೀಗಾಗಿ ಅವರು ತಮ್ಮ ತಮ್ಮ ಗಾಡ್ ಫಾದರ್‌ಗಳ ಮೂಲಕ ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ.
ಚುನಾವಣೆಗೆ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಈಗಾಗಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿರುವುದರಿಂದ ತಮ್ಮ ನಾಲ್ಕು ದಶಕಗಳ ರಾಜಕೀಯ ಹೋರಾಟದಿಂದ ಹಿಂದೆ ಸರಿಯಲಿದ್ದಾರೆ.
ವಯಸ್ಸು ಹಾಗೂ ಕೆಲವು ಗುರುತರ ಆರೋಪಗಳನ್ನು ಎದುರಿಸುತ್ತಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಟಿಕೆಟ್ ತಪ್ಪುವ ಭೀತಿ ಬಿಟ್ಟು ಬಿಡದಂತೆ ಕಾಡುತ್ತಿದೆ.
ಶಿವಮೊಗ್ಗ ನಗರದಿಂದ ಅವರಿಗೆ ಟಿಕೆಟ್ ಕೊಡಬಾರದೆಂದು ಕಾರ್ಯಕರ್ತರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪಕ್ಷದವರ ಮೇಲೆ ಒತ್ತಡ ಹಾಕಿದ್ದಾರೆ.
ವಿಧಾನಪರಿಷತ್ ಹಾಲಿ ಸದಸ್ಯ ಅಯನೂರು ಮಂಜುನಾಥ್, ಶಿವಮೊಗ್ಗ ನಗರದ ಹೆಸರಾಂತ ವೈದ್ಯ ಚನ್ನಗಿರಿ ಮೂಲದ ಡಾ.ಧನಂಜಯ್ಯ ಸರ್ಜಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಹೀಗಾಗಿ ಈಶ್ವರಪ್ಪನವರಿಗೆ ಟಿಕೆಟ್ ಸಿಗುತ್ತದೆಯೇ ಇಲ್ಲವೇ ಅವರ ಪುತ್ರ ಕಾಂತೇಶ್ ಸ್ಪರ್ಧೆ ಮಾಡಲಿದ್ದಾರೆಯೇ ಎಂಬುದು ಕೊನೆ ಕ್ಷಣದವರೆಗೂ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಕ್ಷೇತ್ರದಲ್ಲಿ ಸ್ವಪಕ್ಷೀಯರಿಂದಲೇ ವಿರೋಧ ಎದುರಿಸುತ್ತಿರುವ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಕ್ಷೇತ್ರದ ಹಾಲಿ ಶಾಸಕ ಎಂ.ಪಿ.ಕುಮಾರಸ್ವಾಮಿಗೂ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಖಚಿತತೆ ಇಲ್ಲ.
ವಿಜಯ ಸಂಕಲ್ಪ ಯಾತ್ರೆ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಹಲವು ನಾಯಕರನ್ನು ಪಕ್ಷದ ಕಾರ್ಯಕರ್ತರೇ ರಸ್ತೆಯಲ್ಲೇ ಅಡ್ಡಗಟ್ಟಿ ಕುಮಾರಸ್ವಾಮಿಗೆ ಟಿಕೆಟ್ ಕೊಡಬಾರದು ಎಂದು ದಾಂಧಲೆ ಎಬ್ಬಿಸಿದ್ದರು. ಹೀಗಾಗಿ ಕುಮಾರಸ್ವಾಮಿ ಪರಿಸ್ಥಿತಿ ಡೋಲಾಯಮಾನವಾಗಿದೆ.
ರಾಜಧಾನಿ ಬೆಂಗಳೂರಿನ ಗೋವಿಂದರಾಜನಗರ ಮತ್ತು ಚಾಮರಾಜನಗರ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಸೋಮಣ್ಣ ಪರಿಸ್ಥಿತಿ ಕೂಡ ವಿಭಿನ್ನವಾಗಿಲ್ಲ. ಸದ್ಯಕ್ಕೆ ಅವರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆಗಳು ಕ್ಷೀಣಿಸಿವೆ.
ತಮ್ಮ ಪುತ್ರ ಅರುಣ್ ಸೋಮಣ್ಣ ಅವರಿಗೆ ಗೋವಿಂದರಾಜನಗರಕ್ಕೆ ಹಾಗೂ ತಮಗೆ ಚಾಮರಾಜನಗರಕ್ಕೆ ಟಿಕೆಟ್ ಕೊಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ, ಶಿಕಾರಿಪುರದಿಂದ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರಕ್ಕೆ ಸೀಮಿತವಾಗಿ ಒಂದೇ ಕ್ಷೇತ್ರಕ್ಕೆ ಸ್ಪರ್ಧಿಸಿದರೆ ಅವರೆದುರು ವಿಜಯೇಂದ್ರ ಅವರನ್ನು ಕಣಕ್ಕಿಳಿಸಲು ಬಿಜೆಪಿ ಲೆಕ್ಕ ಹಾಕಿದೆ.
ಈ ಕ್ಷೇತ್ರದಲ್ಲಿ ವೀರಶೈವ ಲಿಂಗಾಯಿತ ಮತಗಳು ನಿರ್ಣಾಯಕವಾಗಿರುವುದು ಹಾಗೂ ವಿಜಯೇಂದ್ರ ಸ್ಪರ್ಧೆ ಮಾಡಿದರೆ ಸಿದ್ದರಾಮಯ್ಯನವರನ್ನು ವರುಣಾದಲ್ಲಿ ಕಟ್ಟಿ ಹಾಕಬಹುದು ಎಂಬ ದೂರದೃಷ್ಟಿಯಿಂದ ವಿಜಯೇಂದ್ರ ಅವರಿಗೆ ಭಾರೀ ಬೇಡಿಕೆ ಬಂದಿದೆ.
ಸೊರಬಾದಲ್ಲೂ ಕುಮಾರಬಂಗಾರಪ್ಪಗೆ ಟಿಕೆಟ್ ಕೊಡಬಾರದೆಂದು ಸ್ವಪಕ್ಷದವರೇ ಪ್ರತಿಭಟನೆ ನಡೆಸಿದ್ದಾರೆ. ಕಾರ್ಯಕರ್ತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಕ್ಷೇತ್ರವನ್ನು ನಿರ್ಲಕ್ಷಿಸಿರುವವರ ಬದಲಿಗೆ ಬೇರೊಬ್ಬರಿಗೆ ಟಿಕೆಟ್ ನೀಡಬೇಕೆಂಬ ಒತ್ತಡ ಕೇಳಿಬಂದಿದೆ.
ವಯಸ್ಸಿನ ಕಾರಣದಿಂದ ಗೋವಿಂದ ಕಾರಜೋಳ, ಅನರ್ಹತೆ ಭೀತಿ ಎದುರಿಸುತ್ತಿರುವ ನೆಹರು ಓಲೇಕರ್, ಕಳೆದ ಬಾರಿಯೇ ನನ್ನ ಕೊನೆಯ ಚುನಾವಣೆ ಎಂದಿದ್ದ ಕೆ.ಜಿ.ಬೋಪಯ್ಯ, ವಿವಾದಕ್ಕೆ ಸಿಲುಕಿರುವ ಬಸವರಾಜ್ ದಡೇಸೂರ್, ಎನ್.ಐ.ಗೋಪಾಲಕೃಷ್ಣ ಸೇರಿದಂತೆ ಮತ್ತಿತರರಿಗೆ ಟಿಕೆಟ್ ಕೈ ತಪ್ಪಿದರೂ ಅಚ್ಚರಿ ಇಲ್ಲ.
ಈಗಾಗಲೇ ಪಕ್ಷದ ವತಿಯಿಂದ ಕೆಲವರಿಗೆ ಮಾಹಿತಿ ನೀಡಲಾಗಿದ್ದು,ಕಾರ್ಯಕರ್ತರಿಗೆ ಸಜ್ಜಾಗುವಂತೆ ಸೂಚನೆ ಕೊಡಲಾಗಿದೆ.

lokesh

Recent Posts

911 ಅಕ್ರಮ ವಿದೇಶಿ ನುಸುಳುಕೋರರು ಪತ್ತೆ : ಗೃಹ ಸಚಿವ ಖರ್ಗೆ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಿದ್ದು, ನಗರದಲ್ಲಿ 911 ಅಕ್ರಮ ವಿದೇಶ ನುಸುಳುಕೋರರು ಇರೋದಾಗಿ ಖುದ್ದು…

3 hours ago

ಕಾವೇರಿ ವನ್ಯಧಾಮದಲ್ಲಿ 8 ಕಳ್ಳಬೇಟೆ ಶಿಬಿರ ಧ್ವಂಸ : ಎಫ್‌ಐಆರ್ ದಾಖಲು, ತನಿಖೆ ಚುರುಕು

ಹನೂರು : ಕಾವೇರಿ ವನ್ಯಜೀವಿ ವಿಭಾಗದ ಹನೂರು ವಲಯ ವ್ಯಾಪ್ತಿಯಲ್ಲಿ ಆಗಸ್ಟ್ 15ರಿಂದ 19ರವರೆಗೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಇಲಾಖಾ…

4 hours ago

1984 ಸಿಖ್‌ ವಿರೋಧಿ ದಂಗೆ ಪ್ರಕರಣ; ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಸಜ್ಜನ್‌ ಕುಮಾರ್‌ ನಿಧನ

ಹೊಸದಿಲ್ಲಿ : ಸಾವಿರಾರು ಜನರ ಸಾವಿಗೆ ಕಾರಣವಾದ 1984ರ ಸಿಖ್ ವಿರೋಧಿ ಗಲಭೆಯ ಸಂದರ್ಭದಲ್ಲಿ ಐವರು ವ್ಯಕ್ತಿಗಳ ಹತ್ಯೆ ಪ್ರಕರಣದಲ್ಲಿ…

6 hours ago

ನಾರಾಯಣಸ್ವಾಮಿಗೆ ಕಮಾಂಡೆಂಟ್‌ ಬೆಳ್ಳಿ ಪದಕ

ಮೈಸೂರು: ನಗರದ ಸಂತ ಮರಿಯಾ ದಿ ಮಥಿಯಾಸ್ ಶಾಲೆಯ ಶಿಕ್ಷಕ ನಾರಾಯಣಸ್ವಾಮಿ ಅವರು ಮೈಸೂರು ೩ ಕರ್ನಾಟಕ ರಾಷ್ಟ್ರೀಯ ಕೆಡೆಟ್…

6 hours ago

ಹನೂರು ಎನ್‌ಕೌಂಟರ್‌ ಬೆನ್ನಲ್ಲೇ ಕಳ್ಳಬೇಟೆ ಕಡಿವಾಣಕ್ಕೆ ಸರ್ಕಾರದ ಚಿಂತನೆ

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದ ಎನ್‌ಕೌಂಟರ್‌ ಪ್ರಕರಣದ ಬೆನ್ನಲ್ಲೇ ಆ ಭಾಗದಲ್ಲಿ ನಡೆಯುತ್ತಿರುವ ಕಳ್ಳಬೇಟೆ ಪ್ರಕರಣಗಳನ್ನು ರಾಜ್ಯ…

10 hours ago

ಟೋಲ್ ಬಳಿ ಸೈನ್ ಬೋರ್ಡ್‌ಗೆ ಖಾಸಗಿ ಬಸ್ ಡಿಕ್ಕಿ; ಇಬ್ಬರು ದುರ್ಮರಣ, 20ಕ್ಕೂ ಹೆಚ್ಚು ಜನರಿಗೆ ಗಾಯ

ಮಂಡ್ಯ: ಟೋಲ್‌ ಬಳಿಯ ಸೈನ್ ಬೋರ್ಡ್‌ಗೆ ಅತಿ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ…

11 hours ago