ಚುನಾವಣೆ ಕಳೆದು ಚಲನಚಿತ್ರ ವಾಣಿಜ್ಯ ಮಂಡಳಿಗೆ ಹೊಸ ಭಾರವಾಹಿಗಳ ಆಯ್ಕೆ ಆಗಿದೆ. ನಟ, ನಿರ್ಮಾಪಕಿ ಜಯಮಾಲ ನೇತೃತ್ವದ ಆಡಳಿತ ಮಂಡಳಿ ಕಾರ್ಯೋನ್ಮುಖವಾಗಿದೆ. ಚುನಾವಣೆ ಮುಗಿದು ಅಧಿಕಾರ ಸ್ವೀಕರಿದ್ದಷ್ಟೇ. ನಿರ್ಮಾಪಕರ ಕುರಿತಂತೆ ಆಡಿದ ಮಾತು, ನಿರ್ಮಾಪಕರು ಆಡಿದ ಮಾತು ವಿವಾದಕ್ಕೆ ಎಡೆಮಾಡಿ, ಅದನ್ನು ವಾಣಿಜ್ಯ ಮಂಡಳಿಯ ಅಂಗಳಕ್ಕೆ ತಂದು ಬಿಟ್ಟಿತು.
ನಿರ್ಮಾಪಕರ ಕುರಿತಂತೆ ಪಾಡ್‌ಕಾಸ್ಟ್ ಒಂದರಲ್ಲಿ ತಾವು ಆಡಿದ್ದ ಮಾತಿಗೆ ಚಕ್ರವರ್ತಿ ಚಂದ್ರಚೂಡ್ ಮೊನ್ನೆ ವಾಣಿಜ್ಯ ಮಂಡಳಿಯಲ್ಲಿ ಕ್ಷಮೆ ಯಾಚಿಸಿದ್ದಾರೆ. ತಮ್ಮಂಥವರ ಬಾಯಲ್ಲಿ ಸಿನಿಮಾರಂಗದ ಇತರರನ್ನು ನೋಯಿಸುವಂಥ, ಅವಹೇಳನವಾಗುವಂಥ ಅಂತಹ ಮಾತು ಬರಬಾರದಿತ್ತು ಎಂದು ಹೇಳಿದ್ದಾರೆ. ಚಂದ್ರಚೂಡ್ ಅವರು ಮಾತುಗಳು ಉದ್ಯಮಕ್ಕೆ ಘಾಸಿಗೊಳಿಸಿತ್ತು. ಮುಂದೆ ಅವರಾಗಲೀ ಬೇರೆಯಾರೇ ಆಗಲಿ, ಇಂತಹ ಮಾತುಗಳನ್ನಾಡಿದರೆ ಕ್ಷಮೆಯೇ ಇಲ್ಲ ಎಂದು ಅಧ್ಯಕ್ಷರಾದ ಜಯಮಾಲ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಇವತ್ತು ತೆರೆ ಕಾಣಲಿರುವ ‘ಕಾಟನ್‌ಪೇಟೆ ಗೇಟ್’ ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು, ಅದರ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಆಡಿದ್ದ ಮಾತುಗಳು, ಚಿತ್ರೋದ್ಯಮದ ಸಾಕಷ್ಟು ಮಂದಿಯನ್ನು ಕೆರಳಿಸಿತ್ತು. ನಿರ್ದೇಶಕ ಪ್ರೇಮ್ ದೂರು ದಾಖಲಿಸಿದಷ್ಟೇ ಅಲ್ಲದೆ, ವಾಣಿಜ್ಯ ಮಂಡಳಿಗೂ ಪತ್ರ ಬರೆದಿದ್ದರು. ‘ಯುವರಾಜ’ ಚಿತ್ರದ ಮೂಲಕ ಕನ್ನಡ ಚಿತ್ರಗಳನ್ನು ನಿರ್ಮಿಸಲು ಆರಂಭಿಸಿದ್ದ ಶ್ರೀನಿವಾಸ್, ಸಾಕಷ್ಟು ಮಂದಿಗೆ ಚಿತ್ರನಿರ್ದೇಶಿಸಲೋ, ಅಭಿನಯಿಸಲೋ, ಸಾಲವಾಗಿಯೋ ಕೊಟ್ಟ ಹಣದ ಹಿನ್ನೆಲೆಯಲ್ಲಿ ಅವರು ಆಡಿದ ಮಾತುಗಳು ತುಟಿ ಮೀರಿದವು ಎನ್ನುವ ಅಭಿಪ್ರಾಯ ಸಾರ್ವತ್ರಿಕವಾಗಿ ಕೇಳಿ ಬಂತು. ಜನಪ್ರಿಯ ನಟರನ್ನು ಕುರಿತ ಮಾನಹಾನಿಕಾರಕ ಹೇಳಿಕೆ ಅಲ್ಲಿತ್ತು ಎನ್ನುವುದನ್ನು, ಆ ಮಾತುಗಳನ್ನು ಕೇಳಿದವರು ಅಲ್ಲಗಳೆಯಲು ಸಾಧ್ಯವಿಲ್ಲ.
ತಮಗೆ ಬರಬೇಕಾದ ಹಣವನ್ನು ಇಲ್ಲವೇ ಆಗಬೇಕಾದ ಕೆಲಸವನ್ನು ವಾಣಿಜ್ಯ ಮಂಡಳಿಯ ಮೂಲಕವೋ, ಇಲ್ಲವೇ, ದಾಖಲೆಗಳಿದ್ದರೆ ನ್ಯಾಯಾಲಯದ ಮೂಲಕವೋ ಪಡೆಯಬಹುದಿತ್ತು ಎನ್ನುವ ಉದ್ಯಮದ ಮಂದಿಯ ಮಾತಲ್ಲಿ ಹುರುಳಿಲ್ಲದೆ ಇಲ್ಲ. ಇದೀಗ ಸಂಬಂಧಪಟ್ಟವರೆಲ್ಲ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದು, ಮುಂದಿನ ವಾರ ಅಲ್ಲಿ ಇದರ ಇತ್ಯರ್ಥ ಆಗುವ ಸಾಧ್ಯತೆ ಆದರೂ ಆಗಬಹುದು.
ವಾಣಿಜ್ಯ ಮಂಡಳಿಯ ಹೊಸ ಆಡಳಿತ ಮಂಡಳಿ, ಮಾರ್ಚ್ 3ನೇ ತಾರೀಕಿನಂದು ಕನ್ನಡಚಿ ತರಂಗದ 93ನೇ ಹುಟ್ಟುಹಬ್ಬ ಆಚರಿಸುವುದಾಗಿ ನಿರ್ಧರಿಸಿತ್ತು. ನಿರ್ಮಾಪಕರ ಸಂಘವೂ ಸಹಮತ ಸೂಚಿಸಿದೆ ಎನ್ನಲಾದ ಈ ಕಾರ್ಯಕ್ರಮದ ಅಗತ್ಯ ಇದೆಯೇ ಎಂದು ಅಲ್ಲಿನ ಸದಸ್ಯೆಯೊಬ್ಬರು ಕೇಳಿದ್ದು, ‘ಸರ್ಕಾರ ಸಬ್ಸಿಡಿಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು ಎಂದು ವಾಣಿಜ್ಯ ಮಂಡಳಿ ಒತ್ತಾಯಿಸಬೇಕು’ ಎಂದು ಒತ್ತಾಯಿಸಲು ಕೆಲವು ನಿರ್ಮಾಪಕರ ಜೊತೆ ಬಂದ ಸಂದರ್ಭದಲ್ಲಿ, ಮಾರ್ಚ್ 3ರಂದೇ ಒಂದು ಬಾರಿ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನೆ ಆಗಿತ್ತು. ಅಂದು ಉದ್ಘಾಟನೆಯ ವೇಳೆ, ‘ಮುಂದೆ ಪ್ರತಿವರ್ಷ ಮಾರ್ಚ್ 3ನ್ನು ವಿಶ್ವಕನ್ನಡ ಸಿನಿಮಾದಿನ ಎಂದು ಆಚರಿಸಲಾಗುವುದು’ ಎಂದು ಅಂದಿನ ಮುಖ್ಯಮಂತ್ರಿಗಳು ಹೇಳಿದ್ದರು. ಕನ್ನಡದ ಮೊದಲ ವಾಕ್‌ಚಿತ್ರ ‘ಸತಿಸುಲೋಚನಾ’ 1934ರ ಮಾರ್ಚ್ 3ರಂದು ತೆರೆಕಂಡಿತ್ತು. ಶತಮಾ ನೋತ್ಸವ ವರ್ಷದತ್ತ ಹೆಜ್ಜೆ ಇಡುತ್ತಿರುವ ಕನ್ನಡ ಚಿತ್ರರಂಗದ ಕುರಿತಂತೆ ಸಾಕಷ್ಟು ದಾಖಲೆಗಳಾಗಬೇಕು ಎನ್ನುವ ನಿಟ್ಟಿನಲ್ಲಿ ವಾಣಿಜ್ಯ ಮಂಡಳಿ ಈಗಿ ನಿಂದಲೇ ಕೆಲಸ ಮಾಡಬೇಕು ಎನ್ನುವುದು ಜಯಮಾಲ ಅವರ ಅಭಿಪ್ರಾಯ.
ಚಿತ್ರರಂಗಕ್ಕೆ ಕೈಗಾರಿಕೆಯ ಸ್ಥಾನಮಾನ ನೀಡಿದಾಗ, ಈ ರಂಗಕ್ಕೆ ಉತ್ತೇಜನ ನೀಡಲು ಕೊಡುತ್ತಿದ್ದ ಸಹಾಯಧನದ ರೀತಿ ಹೇಗಿರಬೇಕು, ಎನ್ನುವುದರ ಕುರಿತಂತೆ ಸಂಬಂಧಪಟ್ಟ ಇಲಾಖೆಗಳು ಪರಸ್ಪರ ಚರ್ಚಿಸಿ ನಿರ್ಧರಿಸಬೇಕಾದ ಅಗತ್ಯ ಇದ್ದಂತಿದೆ. ಹಾಗಾಗಿ, ಚಿತ್ರರಂಗದಲ್ಲೂ ಈ ಬಗ್ಗೆ ಅನುಮಾನಗಳು ಎದ್ದಿವೆ. ಸಹಾಯಧನಕ್ಕಾಗಿಯೇ ‘ಸಂತೆಗೆ ಮೂರು ಮೊಳ ಸುತ್ತುವ ಮಂದಿಗೆ ಇದು ನುಂಗಲಾರದ ತುತ್ತಾದರೆ ಆಶ್ಚರ್ಯವಿಲ್ಲ.
ಕಳೆದ ಭಾನುವಾರ ಕರ್ನಾಟಕ ಚಲನಚಿತ್ರ ಕಾರ್ಮಿಕರ, ಕಲಾವಿದರ, ತಂತ್ರಜ್ಞರ ಒಕ್ಕೂಟದ 40 ವರ್ಷ ಪೂರ್ಣಗೊಂಡ ಸಂದರ್ಭದ ಸಮಾವೇಶ ಆಯೋಜಿಸಲಾಗಿತ್ತು. 1984ರಲ್ಲಿ ‘ಪ್ರೊಡಕ್ಷನ್ ಬಾಯ್ಸ್ ಅಂಡ್ ಲೈಟ್ ಬಾಯ್ ಯೂನಿಯನ್’ ಸ್ಥಾಪನೆಯಾಗಿತ್ತು. ಆದರೆ ಎಲ್ಲ ವಿಭಾಗಗಳ ಸಂಘಟನೆಗಳು ಸೇರಿ ಒಕ್ಕೂಟ ಸ್ಥಾಪನೆ ಆದದ್ದು 1987ರಲ್ಲಿ. ಇರಲಿ, ಒಕ್ಕೂಟ 40ಕ್ಕೆ ಕಾಲಿಡುತ್ತಿರುವ ಈ ವೇಳೆ ಸಂಸ್ಥೆಗೊಂದು ಸ್ವಂತ ಕಟ್ಟಡ ಇಲ್ಲದೆ ಇರುವುದು, ಸದಸ್ಯರಿಗೆ ಸೂರಿಲ್ಲದೆ ಇರುವ ವಿಷಯದ ಪ್ರಸ್ತಾಪವಿತ್ತು. ವಾಣಿಜ್ಯ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ನಿರ್ಮಾಪಕರ ಸಂಘದ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ನಟ, ಸಂಸದ ಜಗ್ಗೇಶ್, ನಿರ್ಮಾಪಕರಾದ ಸಂದೇಶ್, ರಮೇಶ್ ರೆಡ್ಡಿ, ಕೆವಿಎನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪೈರೆಸಿಯಿಂದಾಗಿ ಭಾರತೀಯ ಚಿತ್ರೋದ್ಯಮಕ್ಕೆ ಆಗುತ್ತಿರುವ ನಷ್ಟ ಮತ್ತು ಅದನ್ನು ತಡೆಯಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ರಾಜ್ಯಸಭೆಯಲ್ಲಿ ಒತ್ತಾಯಿಸಿದ್ದ ಜಗ್ಗೇಶ್ ಅವರು, ಕನ್ನಡ ಚಿತ್ರರಂಗದಲ್ಲಿ ಈ ಸಮಸ್ಯೆಯ ಬಗ್ಗೆ ಮಾತನಾಡಲು ಹೊರಟಾಗ ಯಾರೂ ಜೊತೆಗೆ ಬಾರದೆ ಇರುವುದನ್ನು ಹೇಳಿಕೊಂಡರು. ಪೈರೆಸಿ ಹೇಗಾಗುತ್ತದೆ, ಎಲ್ಲಿ ಆಗುತ್ತದೆ ಎನ್ನುವುದರ ಕುರಿತು ಸಮಗ್ರ ವರದಿಯನ್ನು ಅವರು ಮಾಡಿಸಿಕೊಂಡು ಕಾರ್ಯೋನ್ಮುಖರಾಗಿದ್ದಾರೆ. ಇಡೀ ಚಿತ್ರೋದ್ಯಮ ಅವರಿಗೆ ಒತ್ತಾಸೆಯಾಗಬೇಕು. ಒಕ್ಕೂಟದ ಹಿತ ಕಾಯುವ ಕೆಲಸವನ್ನು ವಾಣಿಜ್ಯ ಮಂಡಳಿ ಮಾಡುತ್ತದೆ ಎಂದ ಡಾ. ಜಯಮಾಲ ಅವರು ಈ ಸಂಸ್ಥೆಯ ಮೂಲಕ ಕಾರ್ಮಿಕರ ಹಿತ ಕಾಯಲು ಕಟಿಬದ್ಧರಾದ ಮಂದಿಯನ್ನು ಸಂದರ್ಭದಲ್ಲಿ ಮರೆಯಬಾರದು ಎಂದುಕಿವಿಮಾತು ಹೇಳಿದರು. ಒಕ್ಕೂಟದ ಸರ್ವಸದಸ್ಯರ ಸಭೆಯ ಬದಲು ಈ ಸಮಾರಂಭ ಹಮ್ಮಿಕೊಂಡದ್ದಾಗಿ ಹೇಳಿದವರು ಕಾರ್ಯಕ್ರಮದ ಸಂಚಾಲಕ, ನಿರ್ಮಾಣ ನಿರ್ವಾಹಕರ ಸಂಘದ ಅಧ್ಯಕ್ಷ ರವಿ.
ಬೆಂಗಳೂರು ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಕಲಾವಿದರಿಗೆ, ಸಹಕಲಾವಿದರಿಗೆ ಹಾಗೂ ಕಾರ್ಮಿಕರಿಗೆ ಹೀಗೆ ಚಿತ್ರರಂಗದಲ್ಲಿ ಕಾರ್ಯನಿರ್ವಹಿಸುವ ಎಲ್ಲರಿಗೂ ಅನುಕೂಲವಾಗಲೆಂದು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲ ಹಾಗೂ ಮಾಜಿ ಸಂಸದೆ, ನಟಿ ಸುಮಲತಾ ಅಂಬರೀಶ್ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು. ಕಲಾವಿದರ ಸಂಘದ ಪ್ರಧಾನಕಾರ್ಯದರ್ಶಿ ರಾಕ್ ಲೈನ್ ವೆಂಕಟೇಶ್, ಖಜಾಂಚಿ ದೊಡ್ಡಣ್ಣ ಮುಂತಾದವರು ಉಪಸ್ಥಿತರಿದ್ದರು.
ಕಲಾವಿದರ ಸಂಘದಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಸುತ್ತಿರುವುದು ಬಹಳ ಒಳ್ಳೆಯ ಕೆಲಸ. ದಯವಿಟ್ಟು ಎಲ್ಲರೂ ಇದರ ಉಪಯೋಗ ಪಡೆದುಕೊಳ್ಳಿ. ಎಷ್ಟೋ ಕಾಯಿಲೆಗಳು ಬಹಳ ತಡವಾಗಿ ತಿಳಿದು ಸಾಕಷ್ಟು ಜನ ಕಲಾವಿದರನ್ನು ನಾವು ಕಳೆದುಕೊಂಡಿದ್ದೇವೆ. ಇಂತಹ ಆರೋಗ್ಯ ತಪಾಸಣೆ ಶಿಬಿರದಲ್ಲಿ ಎಲ್ಲಾ ರೀತಿಯ ಉಚಿತ ತಪಾಸಣೆಗಳಿದ್ದು, ಇದರ ಉಪಯೋಗ ಪಡೆದುಕೊಂಡು ಮುತುವರ್ಜಿ ವಹಿಸಬಹುದು ಎಂದು ವಾಣಿಜ್ಯಮಂಡಳಿ ಅಧ್ಯಕ್ಷೆ ಡಾ. ಜಯಮಾಲ, ಶಿಬಿರದ ಆಯೋಜಕರಿಗೆ ಧನ್ಯವಾದ ಹೇಳಿದರು.
ಕಲಾವಿದರ ಸಂಘ ಅಂಬರೀಶ್ ಅವರ ಕನಸು. ಅವರು ತಮ್ಮ ಮನೆ ಆಗುವುದಕ್ಕಿಂತ ಹೆಚ್ಚಾಗಿ ಕಲಾವಿದರ ಸಂಘ ಆಗುವುದಕ್ಕೆ ಶ್ರಮಿಸಿದ್ದಾರೆ. ಈ ಸಂಘದಲ್ಲಿ ಕಲಾವಿದರಿಗೆ ಉಪಯೋಗವಾಗುವ ಕಾರ್ಯಗಳು ಆಗುತ್ತಿರಬೇಕೆಂಬುದು ಅಂಬರೀಶ್ ಅವರ ಆಸೆಯಾಗಿತ್ತು. ಆರೋಗ್ಯವೇ ಮಹಾಭಾಗ್ಯ, ಆರೋಗ್ಯದ ನಂತರ ಮಿಕ್ಕೆಲ್ಲಾ. ಹೀಗಾಗಿ ಕಲಾವಿದರ ಸಂಘದಿಂದ ಕಲಾವಿದರಿಗಾಗಿ ಈ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿದೆ. ತುಂಬಾ ಉತ್ತಮ ಕೆಲಸ ಇದು ಎಂದು ಸುಮಲತಾ ಅಂಬರೀಶ್ ತಿಳಿಸಿದರು.
ಬೆಂಗಳೂರಿನ ಹಲವು ಪ್ರತಿಷ್ಠಿತ ಆಸ್ಪತ್ರೆಗಳು ಈ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ನೆರವಾದವು, ECG, 2D ECHO, BP, SUGAR, ENT, DETAL, Eye ಹಾಗೂ ಕ್ಯಾನ್ಸರ್ ತಪಾಸಣೆ ಸೇರಿದಂತೆ ಹಲವು ಉಚಿತ ತಪಾಸಣೆಗಳನ್ನು ಸಾಕಷ್ಟು ಕಲಾವಿದರು ಈ ಶಿಬಿರದಲ್ಲಿ ಭಾಗಿಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಕಾರ್ಯ ದರ್ಶಿ ರಾಕ್‌ಲೈನ್ ವೆಂಕಟೇಶ್ ಮತ್ತು ಖಜಾಂಚಿ ದೊಡ್ಡಣ್ಣ ಅವರ ಬಹು ದಿನಗಳ ಯೋಜನೆ ಆಗಿತ್ತು ಈ ಶಿಬಿರ.
ಕಲಾವಿದರ ಸಂಘ ಇದರ ಬೆನ್ನಲ್ಲೇ ಬಹುದೊಡ್ಡ ಯೋಜನೆಯೊಂದನ್ನು ಹಾಕಿಕೊಂಡಿದೆ, ಅದರ ಪೂರ್ವಭಾವಿ ಕೆಲಸಗಳು, ಸಿದ್ಧತೆ ನಡೆದಿದೆ. ಇಷ್ಟರಲ್ಲೇ ಇಡೀ ಯೋಜನೆಯ ಕುರಿತಂತೆ ವಿವರವಾಗಿ ಹೇಳುವುದಾಗಿ ಕಾರ್ಯದರ್ಶಿ ರಾಕ್ ಲೈನ್ ಅವರ ಮಾತು. ಕಲಾವಿದರ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದ ಡಾ. ರಾಜಕುಮಾರ್ ಅವರ ಕನಸು ನನಸಾಗುವ ಯೋಜನೆ ಅದು ಎನ್ನಲಾಗುತ್ತಿದೆ. ಬೆಂಗಳೂರಿನ ಜಯನಗರದಲ್ಲಿ ಮೊದಲು ಸಂಘಕ್ಕೆ ನೀಡಿದ ಜಾಗದಲ್ಲಿ ಕಟ್ಟಡ ನಿರ್ಮಿಸಿ, ಅಲ್ಲಿ ಇತರ ಚಟುವಟಿಕೆಗಳ ಜೊತೆಗೆ ಅಭಿನಯ ತರಬೇತಿ ನೀಡಬೇಕು ಎನ್ನುವುದು ಅವರ ಕನಸಾಗಿತ್ತು. ಜೊತೆಗೆ ನಾಟಕ ಪ್ರದರ್ಶನದ ಆಸೆಯೂ ಅವರಿಗಿತ್ತು. ಸಿನಿಮಾ ತಂತ್ರಜ್ಞಾನ ಸೆಲುಲಾಮ್‌ನಿಂದ ಡಿಜಿಟಲ್‌ಗೆ ಹೊರಳಿ, ಕೃತಕ ಬುದ್ದಿ ಮತ್ತೆಯ ನಡುವೆ ನಡೆದಾಡುವ ವರ್ತಮಾನದಲ್ಲಿ, ಕಲಾವಿದರ ಸಂಘದ ಹೊಸ ಯೋಜನೆ ಏನು ಎನ್ನುವ ಕುತೂಹಲ ಎಲ್ಲರದು. ಕಾದು ನೋಡೋಣ.
ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಎಂ.ಸತ್ಯವರ ಗ್ರಾಮದ ಸಮೀಪದ ಹೊಸಕೋಟೆ-ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿ (NH-648) ಮತ್ತು…
ಮೈಸೂರಿನ ರಾಮಕೃಷ್ಣ ನಗರದಲ್ಲಿರುವ, ರಾಮಕೃಷ್ಣ ವೃತ್ತದಿಂದ (ಆಂದೋಲನ ಸರ್ಕಲ್), ಕುವೆಂಪು ನಗರದ ಕಾಂಪ್ಲೆಕ್ ತನಕದ ಸುಮಾರು ಒಂದು ಕಿ.ಮೀ. ದೂರದ…
ಹನೂರು : ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಫೆ.14 ರಿಂದ 18 ರವರೆಗೆ ಐದು ದಿನಗಳ…
ಮುಂಬೈ : ಲಂಡನ್ನಿನಲ್ಲಿ ಇದ್ದುಕೊಂಡು ದೇಶ ಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆಯ (ಎಫ್‌ಇಒ) ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸುವ ಬದಲು, ಭಾರತಕ್ಕೆ…
ಹಳ್ಳಿಗಳ ಹಬ್ಬ, ಜಾತ್ರೆಗಳಲ್ಲಿ ಬಲೂನ್‌ಗಳ ಮಾರಾಟ ಅವಘಡ ಸಂಭವಿಸಿದರೆ ಯಾರು ಹೊಣೆ? 2025ರ ವರ್ಷಾಂತ್ಯದಲ್ಲಿ ಮೈಸೂರಿನಲ್ಲಿ ನಡೆದಿದ್ದ ಸ್ಫೋಟ ಬಲೂನ್‌ಗಳಿಗೆ…
ಕುಕ್ಕರಹಳ್ಳಿ ಕೆರೆಯ ಜಲಮೂಲ ಉಳಿವಿಕೆ ಅಭಿಯಾನ ಅಭಿಯಾನಕ್ಕೆ ಹೆಚ್ಚುತ್ತಿರುವ ಜನಬೆಂಬಲ ನಾಲಾ ನಡಿಗೆ, ನಾಲಾ ಹಬ್ಬ ಆಚರಿಸಲು ನಿರ್ಧಾರ ಗಿರೀಶ್…