ವೈಡ್ ಆಂಗಲ್
ಬಾ.ನಾ.ಸುಬ್ರಹ್ಮಣ್ಯ
ಎಲ್ಲವೂ ಬದಲಾಗಿದೆ. ಬಹುತೇಕ. ಗೋವಾದಲ್ಲಿ ಈ ಚಿತ್ರೋತ್ಸವ ನೆಲೆನಿಂತಾಗಲೇ ಅದು ವೇದ್ಯ. ಸಿನಿಮಾ ಸಂಸ್ಕೃತಿಯ ಗಂಧಗಾಳಿಯೂ ಇಲ್ಲದ ಗೋವಾ, ಅಲ್ಲಿ ಏಷ್ಯಾದ ಪ್ರತಿಷ್ಠಿತ ಚಿತ್ರೋತ್ಸವಕ್ಕೆ ಶಾಶ್ವತ ನೆಲೆ, ಭಾರತೀಯ ಚಿತ್ರೋದ್ಯಮ ಎಂದರೆ ಹಿಂದಿ ಎಂದು ನಂಬಿಕೊಂಡ ಮಂದಿ, ಚುನಾವಣೆ ಗೆದ್ದಿದ್ದಕ್ಕೆ ಪಡೆದ ಉಡುಗೊರೆ, ಅಂದಿನ ವಾರ್ತಾ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ನೀಡಿದ ಕೊಡುಗೆ, ಮನೋಹರ್ ಪರಿಕ್ಕರ್ ಅವರಿಗೆ. ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದದ್ದಕ್ಕಾಗಿ. ೨೦೦೪ರಿಂದ ಹೀಗೆ ಗೋವಾದಲ್ಲಿ ತನ್ನ ಶಾಶ್ವತ ಸ್ಥಾನ ಪಡೆದುಕೊಂಡಿತು ಚಿತ್ರೋತ್ಸವ.
ಅದಕ್ಕಾಗಿ ಮುಖ್ಯಮಂತ್ರಿಗಳಾಗಿದ್ದ ಮನೋಹರ್ ಪರಿಕ್ಕರ್ ಅವರ ಇಚ್ಛಾಶಕ್ತಿ, ಕೇವಲ ಮೂರು ತಿಂಗಳಲ್ಲಿ ಅದಕ್ಕಾಗಿ ಸಿದ್ಧತೆ ಅನೂಹ್ಯ. ಪ್ರವಾಸೋದ್ಯಮಕ್ಕೆ ಹೆಸರಾದ ಗೋವಾದಲ್ಲಿ ಈ ಚಿತ್ರೋತ್ಸವಕ್ಕೂ ಅದೇ ಆದ್ಯತೆ ಇದೆಯೇನೋ ಅನಿಸಿದರೆ ತಪ್ಪೇನೂ ಇಲ್ಲ. ೧೯೫೨ರಲ್ಲಿ ಆರಂಭವಾದ ಭಾರತದ ಈ ಉತ್ಸವಕ್ಕೆ ಅದರದ್ದೇ ಆದ ಮಹತ್ವ. ಏಷ್ಯಾದ ಅತಿ ಹಿರಿಯ ಚಿತ್ರೋತ್ಸವ ಎನ್ನುವ ಹೆಗ್ಗಳಿಕೆ. ಮೊದಲೆಲ್ಲಾ ಎಲ್ಲ ರಾಜ್ಯಗಳ ಸಿನಿ ಮಂದಿಯ ವಾರ್ಷಿಕ ಕಮ್ಮಟ ಎನ್ನುವ ಹಾಗಿತ್ತು ಈ ಉತ್ಸವ. ಅದು ಭಾರತದ ಏಕಮೇವ ಅಂತಾರಾಷ್ಟ್ರೀಯ ಚಿತ್ರೋತ್ಸವ ಆಗಿತ್ತು.
ಆದರೆ ಈಗ ಬಹುತೇಕ ರಾಜ್ಯಗಳು ಅಂತಾರಾಷ್ಟ್ರೀಯ ಚಿತ್ರೋತ್ಸವಗಳನ್ನು ಹಮ್ಮಿಕೊಳ್ಳುತ್ತಿವೆ. ಕರ್ನಾಟಕ, ಕೇರಳ, ಕೊಲ್ಕತ್ತಾ, ಮುಂಬೈ ಗಳಲ್ಲಿ ನಡೆಯುವ ಚಿತ್ರೋತ್ಸವಗಳು ಅಧಿಕೃತ ಮಾನ್ಯತೆ ಪಡೆದವುಗಳು. ಇವಲ್ಲದೆ ಚೆನ್ನೈ, ಪೂನಾಗಳಲ್ಲಿ ನಡೆಯುತ್ತವೆ. ಚಲನಚಿತ್ರ ಸಮಾಜಗಳು ನಡೆಸುವ ಚಿತ್ರೋತ್ಸವಗಳಲ್ಲದೆ, ಖಾಸಗಿಯವು ಹಲವು.
ಹ್ಞಾಂ, ೫೬ನೇ ಚಿತ್ರೋತ್ಸವದ ಉದ್ಘಾಟನೆಯ ರೂಪ ಬದಲಾಗಿದೆ. ಹಿಂದೆಲ್ಲ ಸಭಾಂಗಣಗಳಲ್ಲಿ ಈ ಸಮಾರಂಭದ ಉದ್ಘಾಟನೆ ಆಗುತ್ತಿತ್ತು. ಮನರಂಜನಾ ಕಾರ್ಯಕ್ರಮಗಳು, ಭಾಷಣಗಳು, ನಿರೂಪಕರ ಸ್ವಯಂ ಸಂಭ್ರಮಗಳು ಹೀಗೆ..ಸಮಯದ ಪರಿವೆ ಇಲ್ಲದ ಸಂಭ್ರಮ! ಯಾವ ಪ್ರತಿಷ್ಠಿತ ಚಿತ್ರೋತ್ಸವಗಳ ಉದ್ಘಾಟನಾ ಸಮಾರಂಭಗಳಲ್ಲೂ ಇವುಗಳಿಲ್ಲ. ಅಧಿಕೃತವಾಗಿ ಈ ಉತ್ಸವವನ್ನು ಉದ್ಘಾಟಿಸುವ ಒಂದೆರಡು ಮಾತುಗಳು ಮಾತ್ರ. ಉಳಿದಂತೆ ಸಿನಿಮಾ ಮತ್ತು ಸಿನಿಮಾ ಕುರಿತ ಕಾರ್ಯಕ್ರಮಗಳು.
ದೇಶದ ವಿವಿಧ ರಾಜ್ಯಗಳ ಸಿನಿಮಾ ಮತ್ತುಸಾಂಸ್ಕೃತಿಕ ವೈಭವದ ಪ್ರದರ್ಶನದ ಮೂಲಕ ಈ ಬಾರಿ ಚಿತ್ರೋತ್ಸವದ ಉದ್ಘಾಟನೆ. ಅದು ವೇದಿಕೆಯ ಮೇಲೆ ಅಲ್ಲ. ರಸ್ತೆಯ ಮೇಲೆ. ಚಿತ್ರೋತ್ಸವದ ಪ್ರಮುಖ ಕೇಂದ್ರವಾದ ಹಳೆಯ ವೈದ್ಯಕೀಯ ಕಾಲೇಜಿನ ಮುಂದಿರುವ ರಸ್ತೆಯಿಂದ ಕಲಾ ಅಕಾಡೆಮಿಯವರೆಗೆ ಈ ಸಾಂಸ್ಕೃತಿಕ ವೈಭವವನ್ನು ಬಿಂಬಿಸುವ ಮೆರವಣಿಗೆ. ಕರ್ನಾಟಕದಿಂದ ಹೊಂಬಾಳೆ ಸಂಸ್ಥೆಯ ಟ್ಯಾಬ್ಲೋ ಇತ್ತು.
ಭಾರತೀಯ ಸಂಗೀತ, ನೃತ್ಯಗಳ ಮೂಲಕ, ಭಾರತದ ವಿವಿಧತೆಯಲ್ಲಿ ಏಕತೆಯ ಘೋಷವಾಕ್ಯವನ್ನು ಹೇಳುವ ಪ್ರಯತ್ನದ ‘ಭಾರತ್ ಏಕ್ ಸೊರ್’ ಸೇರಿದಂತೆ ಹಲವು ಸಾಂಸ್ಕೃತಿಕ ಮತ್ತು ಸಿನಿಮಾ ವೈಭವದ ಮೆರವಣಿಗೆ. ಮೊದಲ ಬಾರಿಗೆ ಗೋವಾ ಚಿತ್ರೋತ್ಸವ ಹಮ್ಮಿಕೊಂಡ ಮೊದಲ ವರ್ಷ ೨೦೦೪ರಲ್ಲಿ, ಮಾಂಡೋವಿ ನದಿಯಲ್ಲಿ, ಗೋವಾದ ವಿಶಿಷ್ಟ ಸಂಸ್ಕೃತಿಯನ್ನು ಬಿಂಬಿಸುವ ಟ್ಯಾಬ್ಲೋಗಳ ಮೆರವಣಿಗೆ ಇತ್ತು. ಈ ಬಾರಿ ಭಾರತೀಯ ಸಿನಿಮಾ, ಸಂಸ್ಕೃತಿ ಮತ್ತು ಜಾನಪದಗಳ ಮೆರವಣಿಗೆ, ನೀರಿನ ಮೇಲಲ್ಲ, ರಸ್ತೆಯ ಮೇಲೆ. ಭಾರತೀಯ ಚಲನಚಿತ್ರ ಪರಂಪರೆಯ ಮೆರವಣಿಗೆ ಸಾಗುತ್ತಿದ್ದರೆ ವಿಶ್ವವೇ ಅದನ್ನು ಗಮನಿಸುತ್ತದೆ ಎನ್ನುವುದು ಉತ್ಸವದ ಮಂದಿಯ ಘೋಷ ವಾಕ್ಯ.
ಹಾಗಂತ ಯಾವುದೇ ಕಾರ್ಯಕ್ರಮ ಇರಲಿಲ್ಲ ಎಂದೇನೂ ಇಲ್ಲ. ಸಿನಿಮಾ ಮತ್ತು ಸಾಂಸ್ಕೃತಿಕ ಹಿರಿಮೆ ಸಾರುವ ಮೆರವಣಿಗೆಗೆ ಮುನ್ನ ವೇದಿಕೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಗೋವಾದ ರಾಜ್ಯಪಾಲರು, ಮುಖ್ಯಮಂತ್ರಿ, ವಾರ್ತಾ ಮತ್ತು ಪ್ರಸಾರ ಇಲಾಖೆಯ ರಾಜ್ಯ ಸಚಿವರು, ಕಾರ್ಯದರ್ಶಿ, ಚಿತ್ರೋತ್ಸವ ನಿರ್ದೇಶಕರು ಸೇರಿದಂತೆ ದೇಶ ವಿದೇಶಗಳ ಸಿನಿಮಾ ಗಣ್ಯಮಾನ್ಯರು ವೇದಿಕೆಯಲ್ಲಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ಪ್ರೇಕ್ಷಕರು. ಮೆರವಣಿಗೆಯನ್ನು ಕಣ್ತುಂಬಿಕೊಳ್ಳುವುದಕ್ಕಾಗಿ. ಸಮಾರೋಪ ಸಮಾರಂಭದಲ್ಲಿ ಚಿತ್ರರಂಗದಲ್ಲಿ ಐವತ್ತು ವರ್ಷ ಪೂರೈಸಿದ ನಟ ರಜನಿಕಾಂತ್ ಅವರನ್ನು ಗೌರವಿಸುವ ಕಾರಕ್ರಮವಿದ್ದರೆ, ನಿನ್ನೆ, ಉದ್ಘಾಟನಾ ಮೆರವಣಿಗೆಗೆ ಮುನ್ನ ತೆಲುಗಿನ ನಂದಮೂರಿ ಬಾಲಕೃಷ್ಣ ಅವರನ್ನು ಗೌರವಿಸಲಾಯಿತು.
ಬರ್ಲಿನ್ ಚಿತ್ರೋತ್ಸವದಲ್ಲಿ ಗ್ರ್ಯಾಂಡ್ ಜೂರಿ ಪ್ರಶಸಿ ಗಳಿಸಿದ ‘ದ ಬ್ಲೂಟ್ರೈಲ್’ ಈ ಬಾರಿಯ ಉದ್ಘಾಟನಾ ಚಿತ್ರ. ಚಿತ್ರೋತ್ಸವ ನಡೆಯುವ ಎಲ್ಲ ಚಿತ್ರಮಂದಿರಗಳಲ್ಲೂ ಇದರ ಪ್ರದರ್ಶನವಿತ್ತು. ಚಿತ್ರಗಳ ಪ್ರದರ್ಶನ ನಡೆಯುವ ಚಿತ್ರಮಂದಿರಗಳ ಸಂಖ್ಯೆಯನ್ನೂ ಈ ಬಾರಿ ಹೆಚ್ಚಿಸಲಾಗಿದೆ. ಅಲ್ಲಿಗೆ ಪ್ರತಿನಿಧಿಗಳು ಮತ್ತು ಪತ್ರಕರ್ತರ ಓಡಾಟಕ್ಕೂ ವ್ಯವಸ್ಥೆ ಕಲ್ಪಿಸಲಾಗಿದೆ.
ಅಂತಾರಾಷ್ಟ್ರೀಯ ಸ್ಪರ್ಧೆ, ಭಾರತೀಯ ಪನೋರಮಾ, ಚೊಚ್ಚಲ ಸಿನಿಮಾ ನಿರ್ದೇಶಕರ ಸ್ಪರ್ಧೆ, ಯುನೆಸ್ಕೋ ಗಾಂಧಿ ಪದಕ ಸ್ಪರ್ಧೆ ಎಂದಿನಂತೆ ಇವೆ. ಅಂತಾರಾಷ್ಟ್ರೀಯ ಸ್ಪರ್ಧೆಗೆ ಭಾರತದಿಂದ ಮಲಯಾಳದ ‘ಸರ್ಕೀಟ್’, ತಮಿಳಿನ ‘ಅಮರನ್’ ಮತ್ತು ಮರಾಠಿಯ ‘ಗೊದಲ್’ ಚಿತ್ರಗಳಿವೆ. ‘ಅಮರನ್’ ಈ ಬಾರಿಯ ಪನೋರಮಾ ವಿಭಾಗದ ಉದ್ಘಾಟನಾ ಚಿತ್ರ ಕೂಡಾ. ಈಗಾಗಲೇ ಹೇಳಿದಂತೆ ಈ ಚಿತ್ರೋತ್ಸವದ ಪನೋರಮಾ ವಿಭಾಗದಲ್ಲಿ ಕರ್ನಾಟಕದಿಂದ ಮೂರು ಕಥಾಚಿತ್ರಗಳು ಮತ್ತು ಒಂದು ಕಥಾಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಗಿವೆ. ‘ಸು ಫ್ರಂ ಸೋ’ (ಜೆಪಿ ತುಮಿನಾಡ್), ವನ್ಯಾ (ಬಡಿಗೇರ್ ದೇವೇಂದ್ರ) ಮತ್ತು‘ಇಂಬು’ (ತುಳು ಶಿವಧ್ವಜ್ ಶೆಟ್ಟಿ) ಕಥಾ ಚಿತ್ರಗಳಾದರೆ ಕೊಡವ ಸಾಕ್ಷ್ಯ ಚಿತ್ರ ಅಲ್ಲಿನ ಜಾನಪದ ನೃತ್ಯದ ಕುರಿತು ಹೇಳುವ ‘ಉಮ್ಮತ್ತಾಟ್’ (ಪ್ರಕಾಶ್ ಕೊಟ್ಟುಕಾತ್ತಿರ) ಕಥೇತರ ಚಿತ್ರ. ಪ್ರೀಮಿಯರ್ ವಿಭಾಗದಲ್ಲಿ ಪ್ರದರ್ಶನವಾಗಲಿರುವ ೧೩ ಚಿತ್ರಗಳಲ್ಲಿ ಕನ್ನಡದ‘ರುಧಿರ್ವನಂ’(ಅಗ್ನಿ) ಸೇರಿದೆ. ಚೊಚ್ಚಲ ಸಿನಿಮಾ ನಿರ್ದೇಶಕರ ಸ್ಪರ್ಧೆಯಲ್ಲಿ ಭಾರತದ ಎರಡು ಚಿತ್ರಗಳಿದ್ದರೆ, ಯುನೆಸ್ಕೋ ಗಾಂಧಿ ಪದಕ ಪ್ರಶಸ್ತಿಗೆ ದೇಶದ ಮೂರು ಚಿತ್ರಗಳು ಸ್ಪರ್ಧಿಸಿವೆ.
ದೇಶ ಕೇಂದ್ರಿತ ಸಿನಿಮಾ ವಿಭಾಗಕ್ಕೆ ಜಪಾನ್ ದೇಶದ ಚಿತ್ರಗಳು. ಆಸ್ಟ್ರೇಲಿಯದತ್ತ ವಿಶೇಷ ಗಮನ. ಜೊತೆಗೆ ಪಾಲುದಾರ ದೇಶವಾಗಿ ಸ್ಪೇನ್ ದೇಶದ ಚಿತ್ರಗಳು. ಸಮಕಾಲೀನ ವಿಶ್ವ ಸಿನಿಮಾಗಳ ಪ್ರದರ್ಶನ, ರಾಷ್ಟ್ರೀಯ ಚಲನಚಿತ್ರ ಪ್ರಾಚ್ಯಾಗಾರ ಮತ್ತು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ಆಯ್ದ ಚಿತ್ರಗಳ ಪ್ರದರ್ಶನ ಈ ಬಾರಿಯ ವಿಶೇಷ. ಅಭಿವೃದ್ಧಿ ನಿಗಮ ಭಾರತೀಯ ಚಿತ್ರೋದ್ಯಮದ ಒತ್ತಾಸೆಯಾಗಿ ಐವತ್ತು ವರ್ಷಗಳು ತುಂಬಿದ, ಸುವರ್ಣ ಮಹೋತ್ಸವ ವರ್ಷದ ನೆನಸಿದು. ಭಾರತೀಯ ಚಿತ್ರರಂಗದ ಹಲವು ಖ್ಯಾತನಾಮರ ಶತಮಾನೋತ್ಸವ ವರ್ಷವಿದು. ವಿ.ಶಾಂತಾರಾಂ, ಗುರುದತ್, ಋತ್ವಿಕ್ ಘಟಕ್, ಸಲೀಲ್ ಚೌಧರಿ, ಡಾ.ಭಾನುಮತಿ, ಭೂಪೇನ್ ಹಜಾರಿಕಾ, ರಾಜ್ ಖೋಸ್ಲಾ ಮುಂತಾದವರಿಗೆ ಶತಮಾನೋತ್ಸವ ಗೌರವವಾಗಿ ಅವರ ಚಿತ್ರಗಳ ಪ್ರದರ್ಶನವಿದೆ.
ಬದಲಾಗುತ್ತಿರುವ ಸಿನಿಮಾ ತಾಂತ್ರಿಕತೆಗೆ ಒತ್ತುಕೊಟ್ಟ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿದೆ. ಕೃತಕ ಬುದ್ಧಿಮತ್ತೆಯ ಚಿತ್ರಗಳು, ಫಿಲಂ ಬಜಾರ್‌ನತ್ತ ವಿಶೇಷ ಗಮನ ಈ ಬಾರಿ ಎದ್ದು ಕಾಣುತ್ತಿದೆ. ಬದಲಾದ ತಂತ್ರಜ್ಞಾನದ ಸಾಧ್ಯತೆಗಳು ಮತ್ತಿತರ ವಿಷಯಗಳ ಕುರಿತ ಚರ್ಚೆಗಳು, ತಜ್ಞರ ತರಗತಿಗಳು ಮೊದಲಾಗಿ ಹಮ್ಮಿಕೊಳ್ಳಲಾಗಿದೆ. ಭವಿಷ್ಯದ ಸೃಜನಶೀಲರಿಗೆ ನೆರವಾಗುವ ಕಾರ್ಯಕ್ರಮ ಉತ್ಸವದ ಮತ್ತೊಂದು ಹೆಚ್ಚುಗಾರಿಕೆ.
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಈ ಚಿತ್ರೋತ್ಸವದ ಮೂಲಕ ಅಲ್ಲಿನ ಪ್ರವಾಸೋದ್ಯಮ ಮತ್ತು ಸಂಸ್ಕ ತಿಯನ್ನು ಚಿತ್ರೋತ್ಸವದ ಮೂಲಕ ಬೆಳೆಸುವ ಹಂಬಲ. ಅದನ್ನು ಪ್ರಕಟಿಸಿದರು ಕೂಡಾ. ಚಿತ್ರಗಳಿಗಿಂತ ಉತ್ಸವದ ಕಡೆಗೆ ಅವರ ಗಮನ ಹೆಚ್ಚಿತ್ತು. ಮುಂದಿನ ಎಂಟು ದಿನಗಳು ಅದನ್ನು ಹೇಳಲಿವೆ. ಕಳೆದ ಎರಡು ವರ್ಷಗಳಿಂದ ಚಿತ್ರೋತ್ಸವ ನಿರ್ದೇಶಕರಾಗಿ ಶೇಖರ್ ಕಪೂರ್ ಅವರಿದ್ದಾರೆ. ‘ಏನು ಬದಲಾವಣೆ ತಂದಿರಿ?’ ಎನ್ನುವ ಪ್ರಶ್ನೆಗೆ ಅವರು ಸಂಗೀತ ಹಾಕಿಸಿ ಕುಣಿದರು. ಪ್ರೇಕ್ಷಕರನ್ನು ಕುಣಿಯಲು ಹೇಳಿದರು! ಚಿತ್ರಗಳ ಆಯ್ಕೆಗಿಂತ ಉತ್ಸವವೇ ಮುಖ್ಯ ಎನ್ನುವುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇಕೇ?
ಏನೇ ಇರಲಿ, ಏಷ್ಯಾದ ಅತಿ ಪ್ರತಿಷ್ಠಿತ, ಮಾನ್ಯತೆ ಪಡೆದ ಚಿತ್ರೋತ್ಸವ ಗೋವಾದಲ್ಲಿ ನೆಲೆಗೊಂಡಿದೆ. ಮಾನ್ಯತೆ ಪಡೆದ ಚಿತ್ರೋತ್ಸವಗಳು ಭಾರತದಲ್ಲಿ ಇನ್ನೂ ನಾಲ್ಕು ಇವೆ ಎನ್ನುವುದು ಅಲ್ಲಿನ ನಿರೂಪಕರಿಗೆ ತಿಳಿದಂತಿರಲಿಲ್ಲ. ಉತ್ಸವದ ಮೆರವಣಿಗೆ ಸಾಗಿದೆ, ಜಗತ್ತು ಗಮನಿಸುತ್ತಿದೆ
” ಅಂತಾರಾಷ್ಟ್ರೀಯ ಸ್ಪರ್ಧೆ, ಭಾರತೀಯ ಪನೋರಮಾ, ಚೊಚ್ಚಲ ಸಿನಿಮಾ ನಿರ್ದೇಶಕರ ಸ್ಪರ್ಧೆ, ಯುನೆಸ್ಕೋ ಗಾಂಧಿ ಪದಕ ಸ್ಪರ್ಧೆ ಎಂದಿನಂತೆ ಇವೆ. ಅಂತಾರಾಷ್ಟ್ರೀಯ ಸ್ಪರ್ಧೆಗೆ ಭಾರತದಿಂದ ಮಲಯಾಳದ ‘ಸರ್ಕೀಟ್’, ತಮಿಳಿನ ‘ಅಮರನ್’ ಮತ್ತು ಮರಾಠಿಯ ‘ಗೊದಲ್’ ಚಿತ್ರಗಳಿವೆ.”
ಮಂಡ್ಯ: ಮೂರು ದಿನಗಳ ಕಾಲ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಲಿರುವ ಕೃಷಿ ಮೇಳಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಕೃಷಿ…
ಬೆಂಗಳೂರು: ಸೋಮವಾರದಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಆರಂಭವಾಗುವ ಚಳಿಗಾಲದ ಅಧಿವೇಶನದ ವೇಳೆ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ…
ಮೈಸೂರು: ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ…
ಮಂಡ್ಯ: ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡಹೊಸಗಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೆನ್ನಮ್ಮ…
ರಾಜ್‌ಘಾಟ್‌ಗೆ ಭೇಟಿ ನೀಡಿದ ವ್ಲಾಡಿಮಿರ್ ಪುಟಿನ್, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ದೆಹಲಿಯಲ್ಲಿ ರಾಷ್ಟ್ರಪತಿ…
ಬೆಂಗಳೂರು: ರಾಜ್ಯದ ಹಲವೆಡೆ ಒಣಹವೆ ಇದ್ದರೆ ಮತ್ತೆ ಕೆಲವೆಡೆ ಮಂಜು, ಮೋಡ ಕವಿದ ವಾತಾವರಣ ಮುಂದುವರೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ…