sudents
ಪ್ರಸಂಗ-೧
ಒಬ್ಬ ಮಹಿಳಾ ಅಧಿಕಾರಿ ಮತ್ತು ಮನೆ ಕೆಲಸದಾಕೆಯ ಮಧ್ಯೆ ಚರ್ಚೆ ನಡೆಯುತ್ತಿದೆ. ಆಕೆ ಸಂಬಳ ಜಾಸ್ತಿ ಕೇಳುತ್ತಿದ್ದಾಳೆ. ಈಕೆ ನಿರಾಕರಿಸುತ್ತಾಳೆ. ನಾನು ಮುಂದಿನ ತಿಂಗಳಿಂದ ಕೆಲಸಕ್ಕೆ ಬರುವುದಿಲ್ಲ, ಬೇರೆ ಯಾರನ್ನಾದರೂ ನೋಡಿಕೊಳ್ಳಿ ಎನ್ನುತ್ತಾಳೆ ಕೆಲಸದವಳು. ಇವಳಿಲ್ಲದಿದ್ದರೆ ಇವಳಂಥ ನೂರು ಜನ ಸಿಗುತ್ತಾರೆ ಇವಳಿಗೆ ಬುದ್ಧಿ ಕಲಿಸಬೇಕೆಂದು ನಾಲ್ಕಾರು ಕಡೆ ಕೆಲಸದವರಿಗಾಗಿ ಆ ಅಧಿಕಾರಿ ವಿಚಾರಿಸುತ್ತಾಳೆ. ಯಾರೂ ಸಿಗುತ್ತಿಲ್ಲ.
ಸಿಕ್ಕರೂ ಅವರ ಕೆಲಸದ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಒಂದು ವಾರ ಕಳೆದರೂ ಅಧಿಕಾರಿ ಮತ್ತೊಬ್ಬ ಕೆಲಸದವರನ್ನು ಹುಡುಕುವಲ್ಲಿ ಸೋಲುತ್ತಾಳೆ. ಮರುದಿನ ಅಧಿಕಾರಿಣಿಯ ದನಿ ಬದಲಾಗಿರುತ್ತದೆ. ಹೇಗಾದರೂ ಅವಳನ್ನೇ ಕರೆದು ಕೆಲಸಕ್ಕೆ ಉಳಿಸಿಕೊಳ್ಳುವ ಅನಿವಾರ್ಯತೆ ಉಂಟಾಗುತ್ತದೆ.
ಪ್ರಸಂಗ -೨
ಶ್ರೀಮಂತರೊಬ್ಬರ ಮನೆ ಶೌಚಾಲಯದ ನಲ್ಲಿ ಹಾಳಾಗಿ ನೀರು ಹರಿದು ಹೋಗುತ್ತಿದೆ. ಮನೆಯ ನೀರಿನ ಟ್ಯಾಂಕ್ ಖಾಲಿಯಾಗುತ್ತಿದೆ. ನಲ್ಲಿ ತಂದು ಬದಲಿಸಲು ತಿಳಿದಿಲ್ಲ, ಬೇಕಾದ ಸಲಕರಣೆಗಳಿಲ್ಲ. ಅಲ್ಲಿ ಕೆಲಸದವರ ನಂಬರ್ ಹುಡುಕಿ ಕರೆ ಮಾಡುತ್ತಾರೆ. ಆತ ಎರಡು ದಿನಗಳ ಕಾಲ ಊರಲ್ಲಿಲ್ಲ ಎನ್ನುತ್ತಾನೆ. ಮತ್ತೊಬ್ಬನಿಗೆ ಮಾಡುತ್ತಾರೆ, ಆತ ದೂರದಲ್ಲಿದ್ದೇನೆ ಬಂದು ನೋಡಲು ೧,೦೦೦ ರೂಪಾಯಿ ಆಗುತ್ತದೆ ಎನ್ನುತ್ತಾನೆ. ಅಧಿಕಾರಿಗೆ ಸಿಟ್ಟು ಬರುತ್ತದೆ, ಫೋನ್ ಕಟ್ ಮಾಡುತ್ತಾರೆ. ಶೌಚಾಲಯದಲ್ಲಿ ಹರಿಯುವ ನೀರಿನ ಶಬ್ದ ಕೇಳಲಾಗದೆ ಕೆಲಸದವರಿಗಾಗಿ ಹುಡುಕಾಡಿದರೂ ತುರ್ತಿಗೆ ಯಾರೂ ಸಿಗುತ್ತಿಲ್ಲ. ಮತ್ತೆ ಅವನಿಗೇ ಫೋನ್ ಮಾಡಿ ಅವನು ಕೇಳಿದ ಹಣ ಕೊಡಲು ಒಪ್ಪಿ ಕರೆಯುತ್ತಾರೆ.
ಪ್ರಸಂಗ-೩
ಒಂದು ಸಂಜೆ ದೊಡ್ಡ ವ್ಯಕ್ತಿಯೊಬ್ಬರ ವಾಹನ ದಾರಿ ಮಧ್ಯೆ ಕೆಟ್ಟು ನಿಂತು ಹೋಗಿದೆ, ಸ್ಟಾರ್ಟ್ ಆಗುತ್ತಿಲ್ಲ. ಏನಾಗಿದೆ ಎಂದು ನೋಡಲು ಬರುವುದಿಲ್ಲ. ಯಾರಿಗೆ ಕೈ ತೋರಿದರೂ ನಿಲ್ಲಿಸಿ ಸಹಾಯಕ್ಕೆ ಬರುತ್ತಿಲ್ಲ. ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸಿ ಸಿಕ್ಕಿದ ಲಾರಿಯಲ್ಲಿ ಹತ್ತಿಕೊಂಡು ಹೋಗಿ ಮುಂದಿನ ಊರು ತಲುಪಿ ಮೆಕ್ಯಾನಿಕ್ ಕಳಿಸಿ ಗಾಡಿ ತರಿಸಿಕೊಳ್ಳುತ್ತಾನೆ.
ಮೇಲಿನ ಈ ಮೂರೂ ಪ್ರಸಂಗಗಳು ಹೇಳುತ್ತಿರುವ ಸಂಗತಿಯೆಂದರೆ ಬಹುತೇಕ ಸಂದರ್ಭಗಳಲ್ಲಿ ನಮ್ಮ ಹಣ, ವಿದ್ಯೆ, ದೊಡ್ಡಸ್ತಿಕೆ ಯಾವುದೂ ಉಪಯೋಗಕ್ಕೆ ಬರುವುದಿಲ್ಲ. ಆ ಸಂದರ್ಭದ ಸಮಸ್ಯೆ ಪರಿಹರಿಸಿಕೊಳ್ಳಲು ಬೇಕಾದ ಕೌಶಲವೊಂದೇ ಅದಕ್ಕೆ ಪರಿಹಾರ.
ಮೊದಲ ಪ್ರಸಂಗದಿಂದ ತಿಳಿಯುವ ಇನ್ನೊಂದು ವಿಚಿತ್ರ ಸಂಗತಿಯೆಂದರೆ, ಆ ಕೆಲಸ ಬಿಟ್ಟು ಇನ್ನೊಂದು ಕೆಲಸ ಹುಡುಕಿಕೊಳ್ಳುವ ಕೆಲಸದವಳಿಗೆ ಇರುವ ಧೈರ್ಯ ಮೂರ‍್ನಾಲ್ಕು ಪದವಿ ಮಾಡಿದ ಎಷ್ಟು ಜನರಿಗಿದೆ? ಕೋಟಿ ರೂ. ಸಂಪಾದನೆ ಮಾಡುವ ತಿಳಿವಳಿಕೆ ಇರುವ ಶ್ರೀಮಂತನಿಗೆ ನಲ್ಲಿ ಬದಲಿಸುವ ಸಾಮಾನ್ಯ ಜ್ಞಾನಇರುವುದಿಲ್ಲ.
ಸಮಾಜದ ದೃಷ್ಟಿಯಲ್ಲಿ ದೊಡ್ಡ ವ್ಯಕ್ತಿಯಾದರೂ ಪ್ರತಿದಿನ ತನ್ನನ್ನು ಹೊತ್ತು ಸಾಗಿಸುವ ವಾಹನದಲ್ಲಿ ಸಣ್ಣವ್ಯತ್ಯಾಸವಾದರೂ ಅದನ್ನು ಅರ್ಥ ಮಾಡಿಕೊಳ್ಳುವ ಕನಿಷ್ಠ ಜ್ಞಾನವೂ ಇರುವುದಿಲ್ಲ. ಇವಿಷ್ಟೇ ಅಲ್ಲ, ವಿದ್ಯುತ್, ಮೊಬೈಲ್, ಟಿವಿ, ಸೋಲಾರ್, ಸ್ಟೌವ್ ರಿಪೇರಿ, ಪೇಂಟಿಂಗ್ ಕೆಲಸ, ಕಂಪ್ಯೂಟರ್ ಕೆಲಸ, ಟೈಲರಿಂಗ್ಹೀಗೆ ಸೇವಾವಲಯ ಅತ್ಯಂತ ವ್ಯಾಪಕವಾದುದು.
ಇದು ಕೌಶಲ್ಯಗಳ ಯುಗ. ನಮ್ಮ ಆಧುನಿಕ ಜೀವನಶೈಲಿಯಲ್ಲಿ ನಾವು ಅವಲಂಬಿತರಾಗಿಬಳಸುತ್ತಿರುವ ಅಸಂಖ್ಯಾತ ಅಗತ್ಯ ವಸ್ತುಗಳು, ಐಷಾರಾಮಿ ವಸ್ತುಗಳನ್ನು ನಿರ್ವಹಣೆ ಮಾಡುವ ದೊಡ್ಡ ವರ್ಗವೇ ಬೇಕಾಗಿದೆ. ವಾಹನಗಳು, ಯಂತ್ರಗಳು, ಎಲೆಕ್ಟ್ರಾನಿಕ್-ಎಲೆಕ್ಟ್ರಿಕ್ಉಪಕರಣಗಳು ಹೀಗೆ ಮನೆತುಂಬಿಕೊಂಡಿರುವ ನೂರಾರು ವಸ್ತುಗಳನ್ನು ಕೊಂಡುತಂದರೆ ಸಾಲದು, ಅವುಗಳನ್ನು ಬಳಸುವ, ಕೆಟ್ಟಾಗ ಸರಿಪಡಿಸುವ ಕಾರ್ಯವೂ ಅಷ್ಟೇ ಮಹತ್ವದ್ದು. ಇವೆಲ್ಲವೂ ಉದ್ಯೋಗದ ಮೂಲಗಳೇ ಆಗಿವೆ.
ಎಲ್ಲರೂ ಇಂತಹ ಕೆಲಸಗಳಿಗಾಗಿಬೇರೆಯವರ ಮೇಲೆಯೇ ಅವಲಂಬಿತರಾಗಿದ್ದೇವೆ. ಯಾವ ಉದ್ಯೋಗವೂ ಸಿಗದಿದ್ದಾಗ ಈ ಸೇವಾ ವಲಯಕ್ಕೆ ಬರುವವರು ಕೆಲವರಾದರೆ, ಆಸಕ್ತಿಯಿಂದಲೇ ಈ ವಲಯಕ್ಕೆ ಹೋಗಿ ಅಲ್ಲಿ ಪರಿಣತರಾಗಿ, ಉದ್ಯೋಗದಾತರಾಗಿ ಬೆಳೆದಿರುವವರು ಹಲವರು. ಯಾವ ಕೆಲಸವೂ ಕೀಳಲ್ಲ, ಮೇಲಲ್ಲ. ತನಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಕೆಲಸ ಮಾಡುವುದು ಆತ್ಮತೃಪ್ತಿಯ ಮಾರ್ಗ.
ಎಲ್ಲರಿಗೂ ದೊಡ್ಡ ದೊಡ್ಡ ಉದ್ಯೋಗಗಳಿಗೇ ಹೋಗಬೇಕೆಂಬ ಕನಸಿರುವುದು ಸಹಜ. ಆದರೆ ವಾಸ್ತವವಾಗಿ ಅವರ ಸಾಮರ್ಥ್ಯ ಮತ್ತು ಆಸಕ್ತಿಗಳೇ ಅವರ ಉದ್ಯೋಗವನ್ನು ನಿರ್ಧರಿಸುತ್ತಿರುವುದು ಸುಳ್ಳಲ್ಲ. ಜೊತೆಗೆ, ಎಲ್ಲಾ ಉದ್ಯೋಗದಾತರೂ ನಿರೀಕ್ಷಿಸುತ್ತಿರುವುದು ಪುಸ್ತಕ ಜ್ಞಾನವನ್ನಲ್ಲ, ಬದಲಿಗೆ ಆ ಕ್ಷೇತ್ರದಲ್ಲಿ ಅಭ್ಯರ್ಥಿ ಹೊಂದಿರುವ ಪ್ರಾಯೋಗಿಕ ಜ್ಞಾನವನ್ನು. ಇತ್ತೀಚಿನ ದಿನಗಳಲ್ಲಿ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಇತ್ತೀಚೆಗೆ ಜಾರಿಯಾದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಆ ನಿಟ್ಟಿನಲ್ಲಿ ಉತ್ತಮ ಪ್ರಯೋಗವಾಗಿದೆ.
ಕೌಶಲ್ಯ ಶಿಕ್ಷಣವು ಶಿಕ್ಷಣದ ನಂತರದ ಒಂದು ಕೋರ್ಸ್ ಆಗುವುದಕ್ಕಿಂತ ಚಿಕ್ಕ ವಯಸ್ಸಿನಿಂದಲೇ ಔಪಚಾರಿಕ ಶಿಕ್ಷಣದ ಜೊತೆ ಜೊತೆಗೇ ಕಲಿಸಿದರೆ ಹೆಚ್ಚು ಪರಿಣಾಮಕಾರಿಯೂ ಉಪಯುಕ್ತವೂ ಆಗಬಹುದು. ಅನಿವಾರ್ಯ ಕಾರಣಗಳಿಗಾಗಿ ಶಾಲೆ ಬಿಡುವ ಮಕ್ಕಳಿಗೂ ಜೀವನ ರೂಪಿಸಿಕೊಳ್ಳಲು, ಆಸಕ್ತಿಯ ಕ್ಷೇತ್ರ ವೊಂದಕ್ಕೆ ಪ್ರವೇಶಿಸಲು ನೆರವಾಗಬಹುದು. ಶಾಲೆ, ಕಾಲೇಜುಗಳ ಒಳಗಿದ್ದೂ ಓದಿನಲ್ಲಿ ಹೆಚ್ಚು ಆಸಕ್ತಿ ಇಲ್ಲದ ಆದರೆ, ಯಾವುದಾದರೂ ಕೌಶಲ್ಯ ದಲ್ಲಿ ಮುಂದಿರುವ ಹಲವು ಮಕ್ಕಳಿರುತ್ತಾರೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಇಂತಹ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಎಂದೇ ಹೇಳಬಹುದು. ಅವರಿಗೆ ಶಿಕ್ಷಣ ಮುಂದುವರೆಸಲು ಆಸಕ್ತಿಯಿಲ್ಲದಿದ್ದಾಗ ಶಾಲೆ, ಕಾಲೇಜಿನಲ್ಲೇ ಭಾಷಾ ವಿಷಯಗಳ ಜೊತೆಗೆ ವೃತ್ತಿಪರ ಕೌಶಲ್ಯವೊಂದನ್ನು ಕಲಿತು, ಅದಕ್ಕೆ ಪೂರಕವಾದ ಪ್ರಮಾಣಪತ್ರ ದೊಂದಿಗೆ ಹೊರಬರುವ ಅವಕಾಶ ಇದ್ದರೆ ಶಾಲೆ-ಕಾಲೇಜುಗಳು ಮತ್ತಷ್ಟು ಆಕರ್ಷಕವಾಗಬಹುದು.
ಪ್ರೌಢಶಾಲೆ, ಪದವಿಪೂರ್ವ ಕಾಲೇಜಿಗೆ ಬಂದರೂ ಇನ್ನೂ ತುಂಬಾ ಮಕ್ಕಳಿಗೆ ಭವಿಷ್ಯದ ಯೋಜನೆಯ ಬಗ್ಗೆ ಸ್ಪಷ್ಟತೆ ಇಲ್ಲ. ಅಂತಹ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಲು ಬೇಕಾದ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳಲ್ಲಿ ತಮ್ಮ ನೆಚ್ಚಿನ ಕ್ಷೇತ್ರದ ಬಗ್ಗೆ ಮೊದಲು ಸ್ಪಷ್ಟತೆ ಬರಬೇಕು. ಅದಕ್ಕೆ ಬೇಕಾದ ವೃತ್ತಿಪರತೆಯನ್ನು ರೂಢಿಸಿಕೊಳ್ಳಲು ಆಯಾ ಕ್ಷೇತ್ರದ ಪರಿಣಿತರನ್ನು ಮಾರ್ಗದರ್ಶಕರಾಗಿ ಆಯ್ಕೆ ಮಾಡಿಕೊಳ್ಳಬೇಕು. ರಜೆ ಅಥವಾ ಅರೆಕಾಲಿಕ ಅವಧಿಯಲ್ಲಿ ತರಬೇತಿ ಪಡೆಯಬೇಕು. ಶಾಲೆಯಲ್ಲಿ ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಗಳನ್ನು ಉತ್ತಮವಾಗಿ ಕಲಿತ ಮಕ್ಕಳಿಗೆ ವ್ಯವಹಾರಿಕವಾಗಿಯೂ ಮುಂದುವರಿಯಲು ಸಾಕಷ್ಟು ಸಹಾಯವಾಗುತ್ತದೆ. ಅಂತರ್ಜಾಲದಲ್ಲಿ ವೃತ್ತಿ ಕೌಶಲಗಳ ಬಗ್ಗೆ ಸಾಕಷ್ಟು ಮಾಹಿತಿ ಮತ್ತು ತರಬೇತಿಗಳು ದೊರೆಯುತ್ತಿದ್ದು, ಅವುಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿದೆ.
-ಡಾ. ನೀಗೂ ರಮೇಶ್
ಮಂಡ್ಯ: ಮೂರು ದಿನಗಳ ಕಾಲ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಲಿರುವ ಕೃಷಿ ಮೇಳಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಕೃಷಿ…
ಬೆಂಗಳೂರು: ಸೋಮವಾರದಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಆರಂಭವಾಗುವ ಚಳಿಗಾಲದ ಅಧಿವೇಶನದ ವೇಳೆ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ…
ಮೈಸೂರು: ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ…
ಮಂಡ್ಯ: ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡಹೊಸಗಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೆನ್ನಮ್ಮ…
ರಾಜ್‌ಘಾಟ್‌ಗೆ ಭೇಟಿ ನೀಡಿದ ವ್ಲಾಡಿಮಿರ್ ಪುಟಿನ್, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ದೆಹಲಿಯಲ್ಲಿ ರಾಷ್ಟ್ರಪತಿ…
ಬೆಂಗಳೂರು: ರಾಜ್ಯದ ಹಲವೆಡೆ ಒಣಹವೆ ಇದ್ದರೆ ಮತ್ತೆ ಕೆಲವೆಡೆ ಮಂಜು, ಮೋಡ ಕವಿದ ವಾತಾವರಣ ಮುಂದುವರೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ…