ರಾಷ್ಟ್ರ ಮಟ್ಟದ ಬ್ಯಾಸ್ಕೆಟ್‌ಬಾಲ್ ಪ್ರತಿಭೆ ಮೈಸೂರಿನ ಶ್ರಾವಣಿ ಶಿವಣ್ಣ ಮನದಾಳದ ಮಾತು; ಗಿರೀಶ್ ಹುಣಸೂರು
ಮಕ್ಕಳಸ್ಕೂಲ್ ಮನೇಲಲ್ವೆ. . . ಹೌದು. ಈ ಮಾತನ್ನು ಅಕ್ಷರಶಃ ನಿಜವಾಗಿಸಿರುವವರು ಮೈಸೂರಿನ ರಾಷ್ಟ್ರಮಟ್ಟದ ಬ್ಯಾಸ್ಕೆಟ್‌ಬಾಲ್ ಪ್ರತಿಭೆ ಶ್ರಾವಣಿ. ಬಾಲ್ಯದಿಂದಲೂ ತಂದೆ ಶಿವಣ್ಣ ಬ್ಯಾಸ್ಕೆಟ್‌ಬಾಲ್ ಆಡುವುದನ್ನು ಆಡಾಡ್ತ, ನೋಡ್ತಾ ಬೆಳೆದ ಶ್ರಾವಣಿ ಇಂದು ಅಪ್ಪನ ಕನಸನ್ನು ನನಸು ಮಾಡುವ ಎತ್ತರಕ್ಕೆ ಬೆಳೆದುನಿಂತು, ಮೊಬೈಲ್, ಸಾಮಾಜಿಕ ಜಾಲತಾಣಗಳಲ್ಲಿ ಕಳೆದುಹೋಗುತ್ತಿರುವ ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿ ಹೊರಹೊಮ್ಮಿದ್ದಾರೆ.
ಬ್ಯಾಸ್ಕೆಟ್ ಬಾಲ್‌ನಲ್ಲಿ ಗುರುವೂ ಆಗಿರುವ ತಂದೆಯ ಕನಸನ್ನು ನನಸು ಮಾಡುವುದೇ ನನ್ನ ಗುರಿ; ಇದು ಭಾರತ ಬ್ಯಾಸ್ಕೆಟ್‌ಬಾಲ್ ತಂಡವನ್ನು ಪ್ರತಿನಿಽಸಿ ಗೆಲುವಿನ ನಾಗಾಲೋಟವನ್ನು ಮುಂದುವರಿಸಿರುವ, ಈಗಷ್ಟೇ ಎಸ್‌ಎಸ್‌ಎಲ್‌ಸಿ ಮುಗಿಸಿ, ಪ್ರಥಮ ಪಿಯುಸಿಗೆ ದಾಖಲಾಗಬೇಕಿರುವ ಶ್ರಾವಣಿ ಶಿವಣ್ಣ ಅವರ ಮನದಾಳದ ಮಾತು.
ಇತ್ತೀಚೆಗೆ ಮಾಲ್ಡೀವ್ಸ್‌ನಲ್ಲಿ ಆಗ್ನೇಯ ಏಷ್ಯಾ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಶನ್ ಆಯೋಜಿಸಿದ್ದ ೧೬ ವರ್ಷದ ಒಳಗಿನವರ ಅಂತಾರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಽಸಿ, ಪಂದ್ಯದ ಗೆಲುವಿನೊಂದಿಗೆ ಮೈಸೂರಿಗೆ ಹಿಂತಿರುಗಿರುವ ಶ್ರಾವಣಿ ಶಿವಣ್ಣ, ಇಂದು ನಾನೇನು ಆಗಿದ್ದೇನೋ ಅದಕ್ಕೆಲ್ಲಾ ಅಪ್ಪನೇ ಕಾರಣ. ಅಪ್ಪನೇ ನನ್ನ ಗುರು, ನನ್ನ ರೋಲ್ ಮಾಡೆಲ್. . . ಎಲ್ಲವೂ ಎಂದು ‘ಆಂದೋಲನ’ದೊಂದಿಗೆ ಸಂತಸ ಹಂಚಿಕೊಂಡರು ಶ್ರಾವಣಿ.
ಬಾಲ್ಯದಲ್ಲಿ ಶ್ರಾವಣಿಗೆ ನೃತ್ಯದ ಬಗ್ಗೆ ಒಲವಿದ್ದರೆ, ಈಕೆಯ ಅಣ್ಣ ಸಾಗರ್‌ಗೆ ಬ್ಯಾಸ್ಕೆಟ್‌ಬಾಲ್ ಅಚ್ಚುಮೆಚ್ಚಿನ ಆಟವಾಗಿತ್ತು. ತಂದೆ ಶಿವಣ್ಣ ಅವರು ಬ್ಯಾಸ್ಕೆಟ್‌ಬಾಲ್ ಆಡುವುದನ್ನು ನೋಡುತ್ತಲೇ ಬೆಳೆದ ಶ್ರಾವಣಿಗೆ ದಿನಕಳೆದಂತೆ ಬ್ಯಾಸ್ಕೆಟ್‌ಬಾಲ್ ಕ್ರೀಡೆ ಬಗ್ಗೆ ಆಸಕ್ತಿ ಹುಟ್ಟಲಾರಂಭಿಸಿತು.
ಚಿಕ್ಕವಳಿದ್ದಾಗಿನಿಂದಲೂ ಅಪ್ಪ ಆಡುವುದನ್ನು ನೋಡುತ್ತಿದ್ದೆ. ಅಪ್ಪನಂತೆ ಆಗಬೇಕು ಎಂದು ಅಂದುಕೊಂಡರೂ ಬ್ಯಾಸ್ಕೆಟ್‌ಬಾಲ್ ಕ್ರೀಡೆಯನ್ನು ಹಾಬಿಯಾಗಿ ತೆಗೆದುಕೊಂಡರೂ ಅಷ್ಟೇನು ಗಂಭೀರವಾಗಿರಲಿಲ್ಲ. ಬರ ಬರುತ್ತಾ ಆಸಕ್ತಿ ಬೆಳೆಯುತ್ತಾ ಹೋಯಿತು. ಫಿಸಿಕಲಿ ತುಂಬಾ ಆಕ್ಟೀವ್ ಆಗಿದ್ದೆ, ಹೀಗಾಗಿ ಬ್ಯಾಸ್ಕೆಟ್‌ಬಾಲ್‌ನಲ್ಲಿ ಮುಂದುವರಿಯಲು ಸಾಧ್ಯವಾಯಿತು. ರಾಷ್ಟ್ರಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿ ಅಪ್ಪನ ಕನಸನ್ನು ನನಸು ಮಾಡುವುದೇ ನನ್ನ ಗುರಿ. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಬ್ಯಾಸ್ಕೆಟ್‌ಬಾಲ್ ವಿಶ್ವಕಪ್ ಪಂದ್ಯಾವಳಿಯನ್ನು ಎದುರು ನೋಡುತ್ತಿದ್ದೇನೆ. ಬ್ಯಾಸ್ಕೆಟ್ ಬಾಲ್ ಕ್ರೀಡೆಯಲ್ಲೇ ಮುಂದುವರಿಯಬೇಕೆಂಬ ಆಸೆ ಇದೆ ಎನ್ನುತ್ತಾರೆ ಶ್ರಾವಣಿ. ೬ನೇ ತರಗತಿವರೆಗೂ ಅಂಡರ್ ೧೩ರಲ್ಲಿ ಆಡುತ್ತಿದ್ದ ಶ್ರಾವಣಿ ಈವರೆಗೆ ಐದು ರಾಷ್ಟ್ರೀಯ ಚಾಂಪಿಯನ್ ಶಿಪ್‌ಗಳಲ್ಲಿ ಕರ್ನಾಟಕ ತಂಡದ ಜೊತೆಗೂಡಿ ಪದಕ ಗೆದ್ದು ಬಂದಿದ್ದಾರೆ. ಇತ್ತೀಚೆಗೆ ನಡೆದ ೨೦೨೪-೨೫ನೇ ಸಾಲಿನ ಖೇಲೊ ಇಂಡಿಯಾ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಬ್ಯಾಸ್ಕೆಟ್ ಬಾಲ್ ತಂಡದ ಸದಸ್ಯೆಯಾಗಿದ್ದರು.
೨೦೨೧-೨೨ರಲ್ಲಿ ನಡೆದ ೧೩ ವರ್ಷ ವಯಸ್ಸಿನ ಒಳಗಿನವರ ೪೭ನೇ ರಾಷ್ಟ್ರೀಯ ಸಬ್ ಜೂನಿಯರ್ ಬ್ಯಾಸ್ಕೆಟ್ ಬಾಲ್ ಪಂದ್ಯದಲ್ಲಿ ಚಿನ್ನ, ೨೦೨೨-೨೩ರಲ್ಲಿ ನಡೆದ ೩೮ನೇ ಯೂತ್ ರಾಷ್ಟ್ರೀಯ ಚಾಂಪಿಯನ್ ಶಿಪ್‌ನಲ್ಲಿ ಬೆಳ್ಳಿ, ೩೯ನೇ ಯೂತ್ ರಾಷ್ಟ್ರೀಯ ಚಾಂಪಿಯನ್ ಶಿಪ್‌ನಲ್ಲಿ ಚಿನ್ನ, ೨೦೨೩-೨೪ರಲ್ಲಿ ನಡೆದ ೪೦ನೇ ಯೂತ್ ರಾಷ್ಟ್ರೀಯ ಚಾಂಪಿಯನ್ ಶಿಪ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ ಶ್ರಾವಣಿ.
ಶಿವಣ್ಣ ಅವರು ೨೦೧೮ರಲ್ಲಿ ಆಲ್ ಸ್ಟಾರ್ಸ್ ಅಕಾಡೆಮಿ ಸ್ಥಾಪಿಸಿ, ಅಕಾಡೆಮಿಯ ಮೂಲಕ ಜೆ. ಪಿ. ನಗರದ ಡಾ. ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿ ನೂರಾರು ಮಕ್ಕಳನ್ನು ಬ್ಯಾಸ್ಕೆಟ್‌ಬಾಲ್ ತರಬೇತುಗೊಳಿಸುತ್ತಾ ಬರುತ್ತಿದ್ದಾರೆ. ನಗರದ ಎಕ್ಸೆಲ್ ಶಾಲೆಯಲ್ಲಿ ಈ ವರ್ಷ ಎಸ್‌ಎಸ್‌ಎಲ್‌ಸಿ ಮುಗಿಸಿರುವ ಶ್ರಾವಣಿ, ಅಪ್ಪನೊಂದಿಗೆ ನಿತ್ಯ ಬ್ಯಾಸ್ಕೆಟ್‌ಬಾಲ್ ಅಭ್ಯಾಸ ಮಾಡುತ್ತಾ ಬಂದಿದ್ದು, ಮಗಳು ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾವಳಿಗೆ ಆಯ್ಕೆ ಆಗಿರುವುದು ಸಂತಸ ತಂದಿದೆ. ಇಂದಿನ ಪೋಷಕರು ಅಂಕಗಳ ಹಿಂದೆ ಬಿದ್ದು, ಪರೀಕ್ಷೆಗಳಲ್ಲಿ ಹೆಚ್ಚು ಹೆಚ್ಚು ಅಂಕ ಗಳಿಸುವಂತೆ ಮಕ್ಕಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಮಕ್ಕಳ ಓದಿನ ಜೊತೆಗೆ ಕ್ರೀಡೆಗೂ ಪೋಷಕರು ಉತ್ತೇಜನ ನೀಡಬೇಕು ಎನ್ನುತ್ತಾರೆ.
ಶಾಲಾ ಶಿಕ್ಷಕಿಯಾಗಿರುವ ಶ್ರಾವಣಿಯ ತಾಯಿ ವಾಣಿಶ್ರೀ ಅವರು ಮಗಳ ಕ್ರೀಡಾಸಕ್ತಿಗೆ ನೀರೆರೆದು ಪೋಷಿಸುತ್ತಾ ಬರುತ್ತಿದ್ದಾರೆ. ಆಕೆ ೭ನೇ ತರಗತಿ ಯಲ್ಲಿದ್ದಾಗಲೇ ಮೊದಲ ರಾಷ್ಟ್ರಮಟ್ಟದ ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿ ಯಲ್ಲಿ ಭಾಗವಹಿಸಿದ್ದಳು ಎಂದು ನೆನೆಯುತ್ತಾರೆ ವಾಣಿಶ್ರೀ ಅವರು.
ಮೈಸೂರಿನಲ್ಲಿ ಬ್ಯಾಸ್ಕೆಟ್‌ಬಾಲ್ ಕ್ರೀಡೆಗೆ ಹೆಚ್ಚಿನ ಉತ್ತೇಜನ ಸಿಗುವಲ್ಲಿ ‘ಆಂದೋಲನ’ ಪತ್ರಿಕೆ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ, ಮಾಜಿ ಮೇಯರ್ ಬಿ. ಎಲ್. ಭೈರಪ್ಪ ಹಾಗೂ ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ವೆಂಕಟೇಶ್ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಬ್ಯಾಸ್ಕೆಟ್‌ಬಾಲ್ ತರಬೇತುದಾರರಾಗಿರುವ ಶಿವಣ್ಣ ಅವರು ಸ್ಮರಿಸುತ್ತಾರೆ. ಜೆ. ಪಿ. ನಗರದ ಡಾ. ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿ ತಾವು ನಡೆಸುತ್ತಿದ್ದ ಬ್ಯಾಸ್ಕೆಟ್‌ಬಾಲ್ ತರಬೇತಿಗೆ ಸರಸ್ವತಿಪುರಂ, ಕುವೆಂಪುನಗರ ಭಾಗಗಳಿಂದಲೂ ಮಕ್ಕಳು ಬರುತ್ತಿದ್ದರು. ಅವರಿಗೆ ಹತ್ತಿರದಲ್ಲೇ ತರಬೇತಿ ನೀಡುವ ಸಲುವಾಗಿ ಕ್ರೀಡಾಂಗಣವನ್ನು ಹುಡುಕುವಾಗ ಜಯನಗರದ ಕಾವೇರಿ ಶಾಲೆ ಹಿಂಭಾಗದ ಕೆಜಿಕೆ ಗ್ರೌಂಡ್ ಲಭ್ಯವಾಯಿತು. ಸ್ವತಃ ಕೋಟಿ ಅವರೇ ಒಂದೆರಡು ಬಾರಿ ಕ್ರೀಡಾಂಗಣಕ್ಕೆ ಬಂದು ಮಕ್ಕಳನ್ನು ಹುರಿದುಂಬಿಸಿದ್ದರಲ್ಲದೇ, ಅಲ್ಲಿ ಬ್ಯಾಸ್ಕೆಟ್‌ಬಾಲ್ ಅಂಕಣವನ್ನು ಸಜ್ಜುಗೊಳಿಸುವಲ್ಲಿ ಈ ಮೂವರ ಪಾತ್ರ ಹಿರಿದು. ಹೀಗಾಗಿ ಮೈಸೂರಿನಲ್ಲಿ ರಾಜಶೇಖರ ಕೋಟಿ ಅವರ ಹೆಸರಿನಲ್ಲಿ ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿ ಆಯೋಜಿಸುವ ಉದ್ದೇಶವಿದೆ ಎನ್ನುತ್ತಾರೆ ಶಿವಣ್ಣ.
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…
ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…