ಯುವ ಡಾಟ್ ಕಾಂ

ರಂಗ ವಿದ್ಯಾರ್ಥಿಗಳ ಅಭಿಮನ್ಯು ಕಾಳಗ

ಚಿತ್ರಾ ವೆಂಕಟರಾಜು

ಕರ್ನಾಟಕದ ಆಧುನಿಕ ರಂಗ ಶಿಕ್ಷಣ ಶಾಲೆ ‘ನೀನಾಸಂ’ ರಂಗ ಶಿಕ್ಷಣ ಕೇಂದ್ರವು ಮಲೆನಾಡಿನಲ್ಲಿದ್ದುದರಿಂದ ಆ ಭಾಗದಲ್ಲಿ ಯಕ್ಷಗಾನ ಪ್ರಕಾರ ಪ್ರಚಲಿತದಲ್ಲಿದ್ದುದರಿಂದ ಬಹುಶಃ ಅಂದಿನಿಂದಲೂ ರಂಗ ಶಿಕ್ಷಣದ ವಿದ್ಯಾರ್ಥಿಗಳಿಗೆ ಯಕ್ಷಗಾನದ ಹೆಜ್ಜೆಗಳ ಮೂಲಕ ರಂಗಭೂಮಿ ಪಠ್ಯಕ್ರಮವನ್ನು ಪ್ರಾರಂಭ ಮಾಡಿರುವುದು ಒಂದು ಪದ್ಧತಿಯಾಗಿ ಬೆಳೆದುಬಂದಿದೆ. ಬಿ.ವಿ.ಕಾರಂತರು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ರೆಪರ್ಟರಿಗೆ ವಿಲಿಯಂ ಶೇಕ್ಸ್‌ ಪಿಯರ್‌ನ ‘ಮ್ಯಾಕ್‌ ಬೆತ್’ ನಾಟಕವನ್ನು ಹಿಂದಿಯಲ್ಲಿ ಮಾಡಿಸಿದಾಗಲೂ ಯಕ್ಷಗಾನದ ಹಲವಾರು ಅಂಶಗಳನ್ನು ಅಳವಡಿಸಿಕೊಂಡಿದ್ದರು.

ಹೀಗೆ ಯಕ್ಷಗಾನವನ್ನು ರಂಗಭೂಮಿ ವಿದ್ಯಾರ್ಥಿಗಳಿಗೆ ಕಲಿಸಲು ಅನೇಕ ಕಾರಣಗಳೂ ಇವೆ. ಯಕ್ಷಗಾನದಲ್ಲಿ ಸಂಗೀತ, ತಾಳ, ಲಯ, ಅಭಿನಯ, ಮಾತು ಪ್ರಸಾಧನ ಹೀಗೆ ನಟನೊಬ್ಬನಿಗೆ ಬೇಕಾದ ಎಲ್ಲವೂ ಇದರಲ್ಲಿರುವುದರಿಂದ ರಂಗಾಭ್ಯಾಸದ ಪ್ರಾರಂಭದಲ್ಲಿಯೇ ಯುವ ರಂಗಾಸಕ್ತರಿಗೆ ಕಲಿಸುವುದು ಸಂಪ್ರದಾಯವೇ ಆಗಿಬಿಟ್ಟಿದೆ. ಒಂದು ಕಲಾಪ್ರಕಾರವನ್ನು ಪ್ರದರ್ಶನದ ಉದ್ದೇಶದಿಂದ ಕಟ್ಟುವುದಕ್ಕೂ ಮತ್ತು ಒಂದು ಪ್ರಕಾರವನ್ನು ಮತ್ತೊಂದು ಪ್ರಕಾರಕ್ಕೆ ತೆಗೆದುಕೊಂಡು ಹೋಗುವಾಗ – ಅದು ಕಲಿಕೆಯ ಭಾಗವಾದಾಗ ಅದರ ಉದ್ದೇಶ ಮತ್ತು ಪ್ರಕ್ರಿಯೆ ಬೇರೆಯೇ ಆಗಬೇಕಾಗುತ್ತದೆ; ಆಗಿರುತ್ತದೆ ಕೂಡ. ಇತ್ತೀಚಿನ ವರ್ಷಗಳಲ್ಲಿ ಯಕ್ಷಗಾನದ ಹೊರರೂಪವನ್ನು ಮಾತ್ರ ರಂಗಕ್ಕೆ ಅಳವಡಿಸಿಕೊಂಡ ಅನೇಕ ಪ್ರಯೋಗಗಳು ಆಗುತ್ತಿವೆ. ಆದರೆ ಅದರ ಸತ್ವವನ್ನು ಮಾತ್ರ ಇಟ್ಟುಕೊಂಡು ರಂಗಭೂಮಿಗೆ ತರುವ ಪ್ರಯೋಗಗಳು ತೀರಾ ಅಪರೂಪ. ಇತ್ತೀಚೆಗೆ ಮೈಸೂರು ರಂಗಾಯಣದ ‘ಭಾರತೀಯ ರಂಗ ಶಿಕ್ಷಣ ಕೇಂದ್ರ’ದ ವಿದ್ಯಾರ್ಥಿಗಳು ತಮ್ಮ ರಂಗಶಿಕ್ಷಣ ಅದ್ಯಯನದ ಪ್ರಯೋಗವಾಗಿ ದಿಗ್ವಿಜಯ ಹೆಗ್ಗೋಡು ಅವರ ಭಾಗವತಿಕೆ ಮತ್ತು ನಿರ್ದೇಶನದಲ್ಲಿ ಅಭಿಮನ್ಯು ಕಾಳಗ’ ಪ್ರಸಂಗವನ್ನು ಪ್ರಸ್ತುತಪಡಿಸಿದರು. ಕೃಷ್ಣ ಚೈತನ್ಯ ಮತ್ತು ಶ್ರೀನಿವಾಸ ಪುರಪ್ಪೆಮನೆಯವರ ಹಿಮ್ಮೇಳವಿತ್ತು.

ಯಕ್ಷಗಾನ ಪ್ರಸಂಗವೊಂದನ್ನು ಕಲಾವಿದರಿರಿಂದ ಆಡಿಸುವುದೇ ಬೇರೆ, ರಂಗಭೂಮಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಕಲಿಸುವುದೇ ಬೇರೆ. ಬೇರೆ ಯಾವುದೇ ಕಲೆ- ಅದು ನೃತ್ಯವಿರಲಿ, ಸಮರಕಲೆಯಿರಲಿ, ಸಂಗೀತವಿರಲಿ- ರಂಗಭೂಮಿಯಲ್ಲಿ ಅದನ್ನು ಹೇಗಿದೆಯೋ ಹಾಗೆಯೇ ಬಳಸಿಕೊಳ್ಳುವುದಿಲ್ಲ. ಪ್ರತಿಯೊಂದು ಪ್ರಕಾರದಲ್ಲೂ ರಂಗಭೂಮಿ ನಟನಿಗೆ ಬೇಕಾದ ಆ ಕಲಾಪ್ರಕಾರದ ನಿರ್ದಿಷ್ಟ ಅಂಶಗಳನ್ನು ಅಥವಾ ಆ ಪ್ರಕಾರ ಸತ್ವವನ್ನು ಮಾತ್ರ ತೆಗೆದುಕೊಂಡು ಅಳವಡಿಸಿಕೊಳ್ಳ ಲಾಗುತ್ತದೆ. ಆ ದೃಷ್ಟಿಯಲ್ಲಿ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಅಭಿನಯಿಸಿದ ಯಕ್ಷಗಾನ ಪ್ರಸಂಗವು ಮಾದರಿಯಾಗಿತ್ತು. ಯಕ್ಷಗಾನದ ಹೆಜ್ಜೆಗಳು ತಾಳ-ಲಯ-ಕುಣಿತ-ದೇಹ, ಹಾವ ಮತ್ತು ಭಾವಗಳನ್ನೇ ಪ್ರಮುಖವಾಗಿಟ್ಟುಕೊಂಡು ಪ್ರಯೋಗವನ್ನು ಕಟ್ಟಿದ್ದು ಬಹಳ ವಿಶೇಷವಾಗಿತ್ತು. ಯಕ್ಷಗಾನ ಕಲೆಯ ಮುಖ್ಯ ಆಕರ್ಷಣೆಯಾದ ಉಡುಗೆ-ತೊಡುಗೆಗಳು, ಆಭರಣಗಳು ಮತ್ತು ಪ್ರಸಾಧನವನ್ನು ಸೂಚ್ಯವಾಗಿ ಮಾತ್ರ ಬಳಸಿಕೊಂಡು ರಂಗಭೂಮಿಯನ್ನು ಕಲಿಯಲು ಬಂದ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲೆಯಿಂದ ಅಗತ್ಯವಾಗಿ ಬೇಕಾದ ಆಂಗಿಕ, ವಾಚಿಕ ಮತ್ತು ಭಾವಗಳ ಮೇಲೆ ಹೆಚ್ಚಿನ ಪ್ರಾಶಸ್ಯವನ್ನು ಪ್ರದರ್ಶನದುದ್ದಕ್ಕೂ ನೀಡಲಾಗಿತ್ತು. ಆದರೆ, ಎಲ್ಲಿಯೂ ಅದು ಕೊರತೆ ಎನಿಸದಿರುವುದು ಪ್ರಸ್ತುತಿಯ ವೈಶಿಷ್ಟ್ಯ. ಕತೆಯೇನೋ ಮಹಾಭಾರತದ ಅಭಿಮನ್ಯುವಿನದೇ, ಆದರೆ ಮತ್ತೆ ಮತ್ತೆ ಮತ್ಸರಕ್ಕೆ ಬಲಿಯಾಗುವ, ಒಂದು ತಲೆಮಾರನ್ನೇ ರಾಜಕೀಯಕ್ಕೆ ದಾಳವಾಗಿ ಬಳಸಲ್ಪಡುವ ಕ್ರೌರ್ಯ ಮಾತ್ರ ಇಂದಿನದೇ. ವೇಷಗಳು ಮಹಾಭಾರತದ್ದಾದರೂ ಅವುಗಳಾಡಿದ ಮಾತುಗಳು ಇಂದಿನವೇ. ಅಭಿಮನ್ಯು ಚಕ್ರವ್ಯೂಹದಲ್ಲಿ ಸಿಲುಕಿ ಮೋಸದಿಂದ ಹತನಾಗುವಲ್ಲಿ ಪ್ರಸಂಗ ಮುಗಿದಿದ್ದರೆ ಅದೊಂದು ಕತೆಯಾಗಿಯೇ ಮುಗಿದುಬಿಡುತ್ತಿತ್ತು. ಆದರೆ, ಅಭಿಮನ್ಯುವಿನ ಸಾವಿನ ನಂತರ ದೀರ್ಘ ಮೌನದಲ್ಲಿ ದುರ್ಯೋಧನಾದಿಯಾಗಿ ಪ್ರತಿ ಪಾತ್ರವೂ ರಂಗದಿಂದ ಇಳಿದು ಬಂದು ಅಭಿಮನ್ಯುವಿನ ಶವದ ಮುಂದೆ ತಮ್ಮ ತಮ್ಮ ಶಸ್ತ್ರವನ್ನು ಇಟ್ಟು ತಲೆಬಾಗಿಸಿ ಕೂರುವ ದೃಶ್ಯವು ಯಕ್ಷಗಾನದ ಪ್ರಸಂಗಕ್ಕೆ ನೀಡಿದ ಆಧುನಿಕ ರಂಗಭೂಮಿಯ ನೋಟಕ್ರಮವಾಗಿ ಕಂಡಿತು. ಖಾಲಿ ರಂಗದ ಮೇಲೆ ಇದ್ದ ಅಭಿಮನ್ಯುವಿನ ಶವದಲ್ಲಿ ವಿಶ್ವದಾದ್ಯಂತ ನಡೆಯುತ್ತಲೇ ಇರುವ ಹಲವು ಹತಭಾಗ್ಯ ಮಕ್ಕಳ ಹೆಣಗಳು ಕಣ್ಣಮುಂದೆ ಬಂದವು. ಎಲ್ಲ ಗಂಡಸರು ಅಭಿಮನ್ಯುವಿನ ಶವದ ಮುಂದೆ ತಲೆತಗ್ಗಿಸಿ ಕೂತಾಗ ಪರದೆ ಹಿಡಿದುಕೊಂಡು ಬಂದದ್ದು ಯಕ್ಷಗಾನದ ಒಂದು ತಂತ್ರವೇ ಆದರೂ, ಹೆಣ್ಣುಮಕ್ಕ ಳಿಂದಲೇ ಅದನ್ನು ಮಾಡಿಸಿದ್ದು ವಿಶೇಷವಾಗಿತ್ತು. ಆ ಮೂಲಕ ಪೊರೆಯುವ ತಾಯ್ತನವನ್ನು ಸೂಚ್ಯವಾಗಿಸುವುದರೊಂದಿಗೆ ಮುಗಿದ ಪ್ರಸಂಗ ಪ್ರೇಕ್ಷಕರಲ್ಲಿ ಆದ್ರ್ರತೆಯನ್ನು ಉದ್ದೀಪಿಸಿತು.ಹೀಗೆ ರಂಗಭೂಮಿಗೆ ಬರುವ ಯುವ ಕಲಾಸಕ್ತರಿಗೆ ನಾಡಿನ ವಿವಿಧ ಕಲಾ ಪ್ರಕಾರಗಳನ್ನು ಪರಿಚಯಿಸುವುದು ಪ್ರಸ್ತುತ ಅನಿವಾರ್ಯವಾಗಿದೆ. ಜಾನಪದ ಕಲಾ ಸಾಹಿತ್ಯ ಪ್ರಕಾರಗಳು ದೂರಾಗುತ್ತಿರುವ ಇಂದು ರಂಗಾಸಕ್ತ ವಿದ್ಯಾರ್ಥಿಗಳಿಗೆ ಯಕ್ಷಗಾನದ ಮಜಲು ಗಳನ್ನು ಪರಿಚಯಿಸಲು ಮುಂದಾಗಿರುವುದು. ನಶಿಸುವ ಹಂತದಲ್ಲಿದ್ದ ಕಲೆಗಳಿಗೆ ಮರುಜೀವ ನೀಡಿದಂತಾಗಿದೆ.

ಯಕ್ಷಗಾನದಲ್ಲಿ ಇಂದು ಮರೆತೇ ಹೋಗುತ್ತಿರುವ ಹಳೆಯ ಯುದ್ಧದ ನಡೆಗಳು, ಮಟ್ಟುಗಳನ್ನು ಹೊಸ ತಲೆಮಾರಿನ ವಿದ್ಯಾರ್ಥಿಗಳಿಗೆ ಕಲಿಸುತ್ತಿರುವುದು ಬಹಳ ಸಂತೋಷ, ಆಧುನಿಕತೆಯ ಭರದಲ್ಲಿ ಕಳೆದುಹೋಗುತ್ತಿರುವ ಯಕ್ಷಗಾನದ ಮೂಲಭೂತ ಅಂಶಗಳನ್ನು ಹೊಸ ಅರ್ಥವಂತಿಕೆಯೊಂದಿಗೆ ಮರುಸೃಷ್ಟಿಸಿರುವುದು ಮಹತ್ವದ ಸಂಗತಿ

-ಶ್ರೀನಿವಾಸ.ಕೆ ಪುರಪ್ಪೇಮನೆ, ಹಿರಿಯ ಯಕ್ಷಗಾನ ಕಲಾವಿದರು.

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಆರೋಗ್ಯ ಸಚಿವರ ಕಳಕಳಿ ಶ್ಲಾಘನೀಯ

ಮಹಿಳೆಯರಿಗೆ ಮೆನೋಪಾಸ್ (ಪ್ರೀ ಮೆನೋಪಾಸ್ ಹಾಗೂ ಪೋಸ್ಟ್ ಮೊನೋಪಾಸ್) ಸಮಸ್ಯೆ ಕುರಿತು ಸೂಕ್ತ ಮಾಹಿತಿ ಬೇಕು ಎಂದು ನಟಿ ರಮ್ಯಾ…

19 hours ago

ಓದುಗರ ಪತ್ರ: ರಾಜಕೀಯ ಗದ್ದಲದ ಮುಂದೆ ಜನರ ಸಮಸ್ಯೆ ಗೌಣವಾಗಬಾರದು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿದ್ದ ಹೆಚ್. ಸಿ ಮಹದೇವಪ್ಪ ಸೇರಿದಂತೆ ಅನೇಕರು ಸಚಿವ…

19 hours ago

ಓದುಗರ ಪತ್ರ: ಸಾಹಿತ್ಯ ಸಮಾರಂಭದಲ್ಲಿ ವಿಷಯಾಂತರ ಏಕೆ?

ಸಾಹಿತ್ಯ, ಸಂಗೀತ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅತಿಥಿಗಳು ಆದಷ್ಟು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿದರೆ ಹೆಚ್ಚು ಸೂಕ್ತವಾಗುತ್ತದೆ. ಅದು…

19 hours ago

ಹಾಳಾಗಿರುವ ಜನರೇಟರ್; ಡಯಾಲಿಸಿಸ್ ರೋಗಿಗಳ ಪರದಾಟ

ವೈದ್ಯರು ಮೊಬೈಲ್ ಟಾರ್ಚ್ ‌ಬೆಳಕಿನಲ್ಲೇ ರೋಗಿಗಳ ತಪಾಸಣೆ ನಡೆಸಿ ಚೀಟಿ ಬರೆಯಬೇಕಾದ ಪರಿಸ್ಥಿತಿ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯ ದುಸ್ಥಿತಿ ಶ್ರೀರಂಗಪಟ್ಟಣ:…

19 hours ago

1 ಕೆಜಿ 520 ಗ್ರಾಂ ತೂಕದ ಬಟರ್ ಫ್ರೂಟ್ ಬೆಳೆದ ಸಾವಯವ ಕೃಷಿಕ

ಮಂಜು ಕೋಟೆ ಕ್ಯಾತನಹಳ್ಳಿಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆದು ಗಮನ ಸೆಳೆದ ರೈತ ಎಚ್.ಆರ್.ಮೂರ್ತಿ ಎಚ್.ಡಿ.ಕೋಟೆ: ತಾಲ್ಲೂಕಿನ ಸಾವಯವ ಕೃಷಿಕ…

19 hours ago