ಕುಖ್ಯಾತ ದಂತಚೋರ, ಕಾಡುಗಳ್ಳ, ವೀರಪ್ಪನ್ ಅಟ್ಟಹಾಸ ಮೆರೆದಿದ್ದ ಹಳ್ಳಿ ಈಗ ವಿಶ್ವ ಕ್ರೀಡಾ ವಲಯದಲ್ಲಿ ಭಾರತದ ಹೆಮ್ಮೆಯ ಕುರುಹಾಗಿ ಗಮನ ಸೆಳೆದಿದೆ. ಅದು ವೀರಪ್ಪನ್ ಹುಟ್ಟೂರು ಗೋಪಿನಾಥಂ, ಈ ಗ್ರಾಮದ ಯುವಕರೊಬ್ಬರು ಒಂದು ವರ್ಷದ ಹಿಂದೆ ಅಪ್ಪಟ ದೇಸಿ ಆಟವಾದ ದೊಣ್ಣೆವರಸೆ (ಸಿಲಂಬಮ್)ಯ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಸ್ವರ್ಣ ಪದಕ ಗಳಿಸಿ ಸಾಧನೆ ಮಾಡಿ, ಕಾಡೊಳಗಿನ ಊರಿನತ್ತ ಪ್ರಪಂಚವೇ ತಲೆಯೆತ್ತಿ ನೋಡುವಂತೆ ಮಾಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಗಡಿಯಂಚಿನ ಗೋಪಿನಾಥಂ ಗ್ರಾಮದ ಮುನಿಸ್ವಾಮಿ ಮತ್ತು ತಂಗಮಣಿ ದಂಪತಿಯ ಪುತ್ರ 27 ವರ್ಷದ ಎಂ.ಮುರುಗನ್ ಅವರೇ ಈ ಸಾಧನೆ ಮಾಡಿರುವ ಕ್ರೀಡಾಪಟು.
ನೇಪಾಳದ ಪೊಖಾರದಲ್ಲಿ ಯೂತ್ ಆ್ಯಂಡ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್ ಆರ್ಗನೈಸೇಷನ್ ಆಫ್ ನೇಪಾಳ್ ವತಿಯಿಂದ 2022, ಜ.16 ರಿಂದ 20ರವರೆಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಟ್ಟದ ದೊಣ್ಣೆ ವರಸೆ ಸ್ಪರ್ಧೆಯಲ್ಲಿ ಎಂ. ಮುರುಗನ್ ಜಯಗಳಿಸಿ ಚಿನ್ನದ ಪದಕ ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾರೆ.
ಈ ಕ್ರೀಡಾಕೂಟದಲ್ಲಿ ತಮಿಳುನಾಡಿನ ಅರಸನ್ ಅಕಾಡೆಮಿಯ 11 ಮತ್ತು ಕರ್ನಾಟಕದ ಗೋಪಿನಾಥಂನ ಎಂ.ಮುರುಗನ್ ಸೇರಿದಂತೆ 12 ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ತಂಡಕ್ಕೆ 11 ಚಿನ್ನ ಮತ್ತು 1 ಬೆಳ್ಳಿ ಪದಕ ಲಭಿಸಿದೆ. ಅಂತಿಮವಾಗಿ ಸಮಗ್ರ ಸ್ಪರ್ಧೆಯಲ್ಲಿ ಮುರುಗನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ದೊಣ್ಣೆವರಸೆ ಕ್ರೀಡೆಯಲ್ಲಿ 100ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.
ಜಿಲ್ಲಾಧಿಕಾರಿಯಿಂದ ಸನ್ಮಾನ : 2021ರ ನ.27 ರಿಂದ 29 ರವರೆಗೆ ಗೋವಾದಲ್ಲಿ ನಡೆದ ರಾಷ್ಟ್ರ ಮಟ್ಟದ ಸಿಲಂಬಮ್ ಕ್ರೀಡೆಯಲ್ಲೂ ಮುರುಗನ್ ಜಯಗಳಿಸಿ ಚಿನ್ನದ ಪದಕ ಗಳಿಸಿದ್ದರು. ಅದೇ ವರ್ಷ ಡಿಸೆಂಬರ್‌ನಲ್ಲಿ ಗೋಪಿನಾಥಂನಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅಂದಿನ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮುರುಗನ್‌ರನ್ನು ಸನ್ಮಾನಿಸಿದರು.
ಅಳಿವಿನಂಚಿನಲ್ಲಿದೆ ಸಮರ ಕಲೆ : ದೊಣ್ಣೆವರಸೆ ಚೋಳ ಮತ್ತು ಕದಂಬರ ಕಾಲದ ಸಾಂಪ್ರದಾಯಿಕ ಸಮರ ಕಲೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಾ ಬರುತ್ತಿದೆ.ಇದಕ್ಕೆ ಬಳಸುವ ದೊಣ್ಣೆಯ ತುದಿಯಲ್ಲಿ ಮೊನಚಾದ ಕಬ್ಬಿಣ ಅಳವಡಿಸಲಿದ್ದು, ಈಟಿ ಮಾದರಿಯಲ್ಲಿ ಇರಲಿದೆ. ಹಿಂದೆ ರಾಜ ಮಹಾರಾಜರು ಯುದ್ಧಕಾಲದಲ್ಲಿ ಪ್ರಯೋಗಿಸುತ್ತಿದ್ದ ಬಹು ಜನಪ್ರಿಯವೆನಿಸಿದ್ದ, ಈ ದೊಣ್ಣೆವರಸೆ ಕಾಲ ಕಳೆದಂತೆ ಸ್ವಯಂ ರಕ್ಷಣೆಗೆ ಬಳಕೆಯಾಗುತ್ತಿತ್ತು. ಈಗ ಕಣ್ಮರೆಯಾಗುತ್ತಿದೆ. ತಮಿಳುನಾಡು ಭಾಗದಲ್ಲಿ ಇತ್ತೀಚೆಗೆ ಈ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ದೊಣ್ಣೆವರಸೆಯ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಲು ಕುಸ್ತಿ ರೀತಿ ವಿವಿಧ ರೀತಿಯ ಪಟ್ಟುಗಳನ್ನು ದೊಣ್ಣೆ ತಿರುಗಿಸುತ್ತಾ ಪ್ರದರ್ಶಿಸಬೇಕಿದೆ. ಸ್ಥಳೀಯ ಮಟ್ಟದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಎದುರಾಳಿಗಳಿರಲಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇವಲ ಸ್ಪರ್ಧಾಳುವಿನಿಂದ ದೊಣ್ಣೆವರಸೆಯ ವೈವಿಧ್ಯಮಯ ಪಟ್ಟುಗಳ ಪ್ರದರ್ಶನಕ್ಕೆ ಮಾತ್ರ ಅವಕಾಶ ಇರುತ್ತದೆ.
ಬಿ.ಕಾಂ. ಪದವೀಧರ : ಎಂ.ಮುರುಗನ್ ಪ್ರೌಢಶಿಕ್ಷಣದವರೆಗೆ ಗೋಪಿನಾಥಂ ಸರ್ಕಾರಿ ಶಾಲೆಯಲ್ಲಿ ಕಲಿತಿದ್ದು, ಪಿಯು ಶಿಕ್ಷಣವನ್ನು ಕೊಳ್ಳೇಗಾಲದ ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ, ಬಿ.ಕಾಂ. ಪದವಿಯನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪಡೆದರು. ನಂತರ 2 ವರ್ಷಗಳು ಸ್ವಗ್ರಾಮದಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡು ಸಾವಯವ ಬೇಸಾಯವನ್ನು 2017ರವರೆಗೆ ಮಾಡಿದ್ದರು. 2018ರಿಂದ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಮಾನವ ಸಂಪನ್ಮೂಲ (ಎಚ್.ಆರ್.) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
7 ವರ್ಷಗಳಿಂದ ಅಭ್ಯಾಸ : ದೊಣ್ಣೆವರಸೆ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಮುರುಗನ್ ಅವರು ಬಿಡುವಿನ ವೇಳೆ ಮತ್ತು ರಜಾ ದಿನಗಳಲ್ಲಿ ಅಭ್ಯಾಸ ಮಾಡುತ್ತಾರೆ. ಬೆಂಗಳೂರಿನ ಅರಸನ್ ಅಕಾಡೆಮಿಯಲ್ಲಿ 7 ವರ್ಷಗಳಿಂದ ನುರಿತ ತರಬೇತುದಾರರಿಂದ ದೊಣ್ಣೆ ವರಸೆಯನ್ನು ಕಲಿಯುತ್ತಿದ್ದಾರೆ.
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…