ಕ್ಯಾಂಪಸ್ ಕಲರವ |
ಕಾಲೇಜು ಮೆಟ್ಟಿಲು ಹತ್ತಿದ ಯುವ ಮನಸುಗಳ ಮನದಾಳ
ಪ್ರೌಢಶಾಲೆಯನ್ನು ಮುಗಿಸಿ ಕಾಲೇಜು ಕ್ಯಾಂಪಸ್ ಗೆ ಎಂಟ್ರಿ ಕೊಡುವಾಗ ಮನದ ಮೂಲೆಯಲ್ಲಿ ಸಣ್ಣ ಅಳುಕು, ದೊಡ್ಡ ಸಂಭ್ರಮ ಎಲ್ಲರೆದೆಯಲ್ಲೂ ಇರುತ್ತದೆ. ಮೊದಲ ದಿನ, ಮೊದಲ ವಾರ, ಮೊದಲ ತಿಂಗಳು… ಹೀಗೆ ಅನೇಕ ಮೊದಲುಗಳಿಗೆ ಯುವ ಮನಸ್ಸು ತೆರೆದುಕೊಳ್ಳುತ್ತಿರುತ್ತದೆ. ಹೊಸ ಜಗತ್ತು, ಹೊಸ ಮುಖಗಳು, ಹೊಸತನವನ್ನೇ ಹುಡುಕುವ ಕಣ್ಣುಗಳಿಗೆ ಕಾಲೇಜು ಕ್ಯಾಂಪಸ್ ದೊಡ್ಡ ಹೆಬ್ಬಾಗಿಲೇ ಹೌದು. ಈ ಹೆಬ್ಬಾಗಿಲು ಹೊಕ್ಕು ಒಂದು ತಿಂಗಳು ಕಳೆದಿದೆ. ಈಗ ಅಲ್ಲಿನ ರಸ ನಿಮಿಷಗಳು, ತಮಗೆ ದಕ್ಕಿದ ನೋಟಗಳ ಬಗ್ಗೆ ಹಲವು ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.
ಹೊಸ ಲೋಖಕ್ಕೆ ಕಾಲಿಟ್ಟ ಅನುಭವ-
ಮೊದಲಿಗೆ ಕಾಲೇಜು ಎನ್ನುವ ಪದವೇ ನನ್ನ ಪಾಲಿಗೆ ರೋಮಾಂಚಕ. ಬೇರೆಯೇ ಲೋಕಕ್ಕೆ ಪ್ರವೇಶ ಪಡೆಯುತ್ತಿದ್ದೇನೆ ಎನ್ನುವ ಭಾವ. ಕಾಲೇಜು ಸೇರಿ ಈಗ ತಿಂಗಳು ಕಳೆದಿದೆ ಅಷ್ಟೆ. ಕೆಲವಷ್ಟು ತಿಳಿದುಕೊಂಡಿದ್ದೇವೆ. ಇನ್ನೂ ತಿಳಿಯಬೇಕಾದ್ದು ಅಪಾರ ಇದೆ. ಹೊರಗಿನ ಪ್ರಪಂಚದ ಬಗ್ಗೆ ಅರಿವು ಮೂಡುತ್ತಿದೆ. ಹೊಸ ಪರಿಸರ, ಹೊಸ ಜನ, ಹೊಸ ವಿಚಾರಗಳು ಕಾಣುತ್ತಿವೆ. ಕಾಲೇಜಿಗೆ ಹೋಗಲು ಮಾಡುವ ಪ್ರಯಾಣ, ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುತ್ತಿದ್ದೇವೆ. ಪ್ರತಿಯೊಬ್ಬ ಉಪನ್ಯಾಸಕರೂ ಆತ್ಮೀಯವಾಗಿ ಮಾತನಾಡಿಸುತ್ತಾರೆ. ಪಾಠಗಳನ್ನು ಚೆನ್ನಾಗಿ ಮಾಡುತ್ತಾರೆ. ಹೊಸ ಸ್ನೇಹಿತರು, ಅವರ ಹಿನ್ನೆಲೆ, ಹೆಸರು, ಊರು ಎಲ್ಲವುಗಳ ಪರಿಚಯ ನಿಧಾನವಾಗಿ ಆಗುತ್ತಿದೆ. ಈಗಷ್ಟೇ ಶಾಲೆ ದಾಟಿ ಹೋದ ನಮಗೆ ಕಾಲೇಜು ಬೇರೆಯೇ ರೀತಿಯ ಅಪರೂಪದ ಸ್ಥಳದ ಹಾಗೆ ಭಾಸವಾಗುತ್ತಿದೆ.
ಕಾಲೇಜಿಗೆ ಸೇರಿಸುವಾಗಲೇ ನಮ್ಮ ಮನೆಯವರು ಒಂದಷ್ಟು ನಿರೀಕ್ಷೆ ಗಳನ್ನು ಇಟ್ಟುಕೊಂಡಿದ್ದಾರೆ. ಹಾಗೆಯೇ ಹಲವು ಷರತ್ತುಗಳನ್ನೂ ವಿಧಿಸಿದ್ದಾರೆ. ಅವೆಲ್ಲವನ್ನೂ ಪರಿಪಾಲಿಸಿಕೊಂಡು ಹೋಗುತ್ತಾ, ಉತ್ತಮ ಓದಿನ ಕಡೆಗೂ ಗಮನ ನೀಡುವ ಇಚ್ಛೆ ಇದೆ. ಎಲ್ಲ ಹಂತಗಳಲ್ಲೂ ಬೆಸ್ಟ್ ಫ್ರೆಂಡ್ಸ್ ಇರುತ್ತಾರೆ. ಹಾಗೆಯೇ ಪಿಯು ಹಂತದಲ್ಲಿ ಬೆಸ್ಟ್ ಫ್ರೆಂಡ್ ಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರ ವಹಿಸುತ್ತಾ, ಎಲ್ಲರ ಜೊತೆಗೆ ವಿಶ್ವಾಸದಿಂದ ಇದ್ದು, ಶಿಕ್ಷಕರು ಹೇಳಿದ ಪಾಠ, ಮಾತುಗಳನ್ನು ಪಾಲಿಸಿಕೊಂಡು ಮುಂದೆ ಸಾಗುವೆ.
– ರಂಚಿತಾ ಟಿ.
ಮರಿಮಲ್ಲಪ್ಪ ಪದವಿಪೂರ್ವ ಕಾಲೇಜು, ಮೈಸೂರು.
–ಮೊದಲಿದ್ದ ಭಯ ಹೋಗಿದೆ-
ನಮ್ಮದು ಬಡತನದ ಕುಟುಂಬ, ನಾನು ಇಲ್ಲಿಯ ವರೆಗೂ ರೆಸಿಡೆನ್ಸಿ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡಿಕೊಂಡು ಬಂದಿದ್ದು. ಪಿಯುಸಿಯಲ್ಲೂ ಅದೇ ವಾತಾವರಣದಲ್ಲಿ ಶಿಕ್ಷಣ ಪಡೆಯಲು ಇಚ್ಛಿಸುತ್ತಿದ್ದೇನೆ. ಕಾಲೇಜಿಗೆ ಧಾವಿಸಿದ ಮೊದಲ ದಿನಗಳಲ್ಲಿ ಭಯ ಎದುರಾಗಿತ್ತು, ಹೊಸ ಗೆಳತಿಯರ ಒಡನಾಟ ನನ್ನ ಪುಟ್ಟ ಪ್ರಪಂಚವನ್ನು ಹಿರಿದಾಗಿಸಿ ಭಯದ ವಾತಾವರಣವನ್ನು ಹೋಗಲಾಡಿಸಿದೆ. ಆಧುನಿಕ ಜಂಜಾಟಗಳಿಂದ ದೂರ ಉಳಿಯುವ ಆಸಕ್ತಿ ನನದು, ಶಿಕ್ಷಕರು, ಉಪನ್ಯಾಸಕರ ಉತ್ತಮ ಬೋಧನೆಯನ್ನೇ ಕಾಲೇಜು ಹಂತದಲ್ಲೂ ನಿರೀಕ್ಷಿಸುತ್ತಿದ್ದೇನೆ.
ಸರ್ಕಾರಿ ಕಾಲೇಜುಗಳು ಅಂದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು, ಮೂಲ ಸೌಕರ್ಯ ಕಡಿಮೆ ಹಾಗೂ ಇನ್ನಿತರ ಸಮಸ್ಯೆಗಳು ಎನ್ನುವವರ ನಡುವೆ ಸರ್ಕಾರಿ ಕಾಲೇಜುಗಳು ಬದುಕನ್ನು ಕಲಿಸಿಕೊಡುತ್ತದೆ ಎನ್ನುವುದು ನನ್ನ ಕಾಲೇಜನ್ನು ನೋಡಿದ ನಂತರ ಅನ್ನಿಸಿದೆ. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿ ವಿಜ್ಞಾನ ವಿಭಾಗವನ್ನು ಆಯ್ದುಕೊಂಡಿದ್ದೇನೆ ಮುಂದಿನ ದಿನಗಳಲ್ಲಿ ಎಂ.ಬಿ.ಬಿ.ಎಸ್ ಮಾಡಿ ವೈದ್ಯಳಾಗುವ ಇಚ್ಛೆ ಇದೆ. ಅದಕ್ಕೆ ಸ್ಪೂರ್ತಿದಾಯಕ ವಾಗಿರುವಂತೆ ನಮ್ಮ ಸರ್ಕಾರಿ ಕಾಲೇಜಿನ ಉಪನ್ಯಾಸಕರು ಬೋಧನೆ ಮಾಡುತ್ತಾರೆ ಎಂಬ ಭರವಸೆ ನನಗೆ ವಸತಿ ಶಾಲೆಯಲ್ಲೇ ಅರಿವಾಗಿದೆ.
ಒಟ್ಟಾರೆಯಾಗಿ ಪಿಯುಸಿ ನಮ್ಮ ಬದುಕನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಮೊದಲ ಹಂತವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಇರಲಿದೆ.
–ಚೈತ್ರಾ
ಸರ್ಕಾರಿ ಪದವಿಪೂರ್ವ ಕಾಲೇಜು, ಚಾಮರಾಜನಗರ.
ಹಳೆ ಗೆಳೆಯರನ್ನು ಮಿಸ್ ಮಾಡಿಕೊಳ್ಳುತ್ತಿರುವೆ-
ಕಾಲೇಜಿಗೆ ಪ್ರವೇಶ ಪಡೆದು ಕೆಲವೇ ದಿನಗಳು ಕಳೆದಿದೆ, ಪ್ರಾಥಮಿಕ ಮತ್ತು ಪ್ರೌಢಶಾಲೆ ಸಂದರ್ಭದಲ್ಲಿ ಅತಿಹೆಚ್ಚು ಗೆಳೆಯರ ಒಡನಾಟದಲ್ಲೇ ಇದ್ದೆ. ಕಾಲೇಜಿಗೆ ಪ್ರವೇಶ ಪಡೆದ ಸಂದರ್ಭದಲ್ಲಿ ಕೆಲವು ಗೆಳೆಯರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಹೊಸ ಗೆಳೆಯರ ಸಂಗಡ ತುಸು ತ್ರಾಸವಾಗಿದೆ. ಕಾಲೇಜಿನ ವಾತಾವರಣ ನಾನು ಅಂದುಕೊಂಡಂತೆ ಇಲ್ಲ, ಹೊಸ ಗೆಳೆಯರು, ಉಪನ್ಯಾಸಕರು, ವಿಜ್ಞಾನ ವಿಭಾಗವಾದ್ದರಿಂದ ಚೂರು ಭಯ ಬೇರೆ.
ಈಗಲೂ ನಮ್ಮ ಹಿರಿಯರು ಹೇಳುವ ಕಾಲೇಜಿನ ಅನುಭವವೇ ನಮ್ಮ ಕಣ್ಣ ಮುಂದಿದೆ. ಹಾಡು, ಹರಟೆ, ಮತ್ತೊಬ್ಬರನ್ನು ರೇಗಿಸುವುದು, ಕ್ಲಾಸ್ ಬಂಕ್ ಮಾಡಿ ಸಿನಿಮಾ ನೋಡುವುದು, ಲೆಕ್ಚರ್ ಗಳಿಂದ ಬೈಸಿಕೊಳ್ಳುವುದು, ನೋಟ್ಸ್ ಬರೆಯದೇ ಜೆರಾಕ್ಸ್ ಮಾಡಿಸಿಕೊಳ್ಳುವುದು, ಹುಡುಗಿಯರ ಕಾಲೇಜಿನತ್ತಲೇ ಚಿತ್ತ ಇದೇ. ಆದರೆ ಇದನ್ನು ಹೊರತುಪಡಿಸಿ ನಾನು ಗ್ರಂಥಾಲಯ, ಕ್ರೀಡೆ, ನಾಟಕ, ಸಾಹಿತ್ಯ ಇತ್ತ ಗಮನ ಹರಿಸಬೇಕು ಎಂದು ಕೊಂಡಿದ್ದೇನೆ.
ನನ್ನಯ ಕಾಲೇಜಿನ ಪ್ರವೇಶದ ಮೊದಲ ಅನುಭವಗಳಂತೂ ತುಂಬಾ ಚೆನ್ನಾಗಿವೆ. ಮುಂದಿನ ದಿನಗಳಲ್ಲೂ ನೆನಪಿನಲ್ಲಿ ಉಳಿಯುವ ದಿನಗಳು ಅಂದರೆ ಅದು ಇದೇ ದಿನಗಳಾಗಿರುತ್ತವೆ.
ಮಹೇಶ್ ಕುಮಾರ್,
ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು, ಚಾಮರಾಜನಗರ.
ಇದು ಪ್ರಮುಖ ಘಟ್ಟ ಎಂದು ಹೇಳಿದ್ದಾರೆ
ಎಸ್‌ಎಸ್‌ಎಲ್‌ಸಿ ಬಳಿಕ ಕಾಲೇಜು ಪ್ರವೇಶ ಸಹಜ. ಇಂದು ಶಿಕ್ಷಣಕ್ಕೆ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ಇದೆ. ನಮ್ಮ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಇದು ಅತ್ಯಂತ ಪ್ರಮುಖ ಘಟ್ಟ ಎಂದು ಹಿರಿಯರು ಹೇಳಿದ್ದಾರೆ.
ಕಾಲೇಜಿನ ವಾತಾವರಣ ತುಸು ಬೇರೆ ಅನಿಸುತ್ತಿದೆ.
ಎಲ್ಲರೂ ಫ್ರೆಂಡ್ಲಿಯಾಗಿದ್ದೇವೆ. ಪ್ರಾಧ್ಯಾಪಕರು ಕೂಡ ಆತ್ಮೀಯವಾಗಿ ಕಾಣುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ ಸಿಲಬಸ್‌ಗಳ ಒತ್ತಡವಿತ್ತು. ಇಲ್ಲೂ ಸಿಲಬಸ್‌ಗಳಿದ್ದರೂ ಅಷ್ಟೊಂದು ಒತ್ತಡವಿಲ್ಲ ಎನಿಸುತ್ತಿದೆ.
ವಿದ್ಯಾರ್ಥಿಗಳಾಗಿರುವ ನಮ್ಮ ಮೇಲೆ ಪೋಷಕರು, ಉಪನ್ಯಾಸಕರು ಹಲವಾರು ನಿರೀಕ್ಷೆಗಳನ್ನು ಇಟ್ಟಿರುತ್ತಾರೆ. ಅವುಗಳನ್ನು ಪೂರೈಸುವತ್ತ ಗಮನ ನೀಡಬೇಕಿದೆ. ಜೊತೆಗೆ ಕಾಲೇಜಿನಲ್ಲಿ ಸಿಗುವ ವಿಶೇಷ ಅನುಭವಗಳು, ಹಾಸ್ಯ, ಹಾಡು, ಹರಟೆ ಎಲ್ಲವುಗಳಲ್ಲೂ ಭಾಗಿಯಾಗುತ್ತಾ ಓದಿನತ್ತಲೂ ಚಿತ್ತ ಹರಿಸಬೇಕು. ಈಗ ಒಂದು ತಿಂಗಳು ಕಳೆದಿದೆ ಕಾಲೇಜು ಸೇರಿ. ಹೊಸ ವಾತಾವರಣ, ಹೊಸ ಸ್ನೇಹಿತರು ಸಿಕ್ಕಿದ್ದಾರೆ. ಸಿಲಬಸ್ ಗಳ ಒತ್ತಡ ಕಡಿಮೆ ಇರುವ ಕಾರಣ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಆಸೆ ಇದೆ.
-ಎನ್.ಪಲ್ಲವಿ, ಬಿಜಿಎಸ್ ಪದವಿಪೂರ್ವ ಕಾಲೇಜು, ನಾಗಮಂಗಲ.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…