ಒಂದು ಚಾರಣ ಕಥೆ
ಚಾರಣ ಮುಗಿಸಿ ಈಗಷ್ಟೇ ಬಂದೆ. ಅಯ್ಯೋ. . . ಚಾರಣ ಎಂದಾಕ್ಷಣ ಅಲ್ಲಿನ ಹಸಿರಿನ ಬಗೆಗೆ, ಪ್ರಾಣಿ ಪಕ್ಷಿಗಳ ಬಗ್ಗೆ, ಅಲ್ಲಿನ ವಾತಾವರಣ ನಮ್ಮ ನಗರಗಳಿಗಿಂತ ಅದೆಷ್ಟು ಚೆನ್ನ ಅಂತ ಮತ್ತದೇ ಹಳೆ ವರಸೆ ತೆಗಿತೀನಿ ಅನ್ಕೋಬೇಡಿ. ನಮ್ಮ ಕಥೆಯ ಹೀರೋ ಕಾಡಲ್ಲ. . . ಬದಲಿಗೆ ಕಾಡಿನ ಮಲ್ಲ ಗುಡ್ಡಪ್ಪ !
ಪಶ್ಚಿಮಘಟ್ಟದ ಬೆಟ್ಟಗಳ ಸಾಲಿನಲ್ಲಿ ಬರುವ ಅಭಯಾರಣ್ಯವೊಂದಕ್ಕೆ ಅಂಟಿಕೊಂಡಿರುವ ಕಾಡೊಂದರಲ್ಲಿ ಚಾರಣ ಎಂದು ನಿಗದಿಯಾದಾಗಿಂದ, ಆ ಪ್ರದೇಶದಲ್ಲಿ ನಿಲ್ಲದ ಆನೆಗಳ ಸಂಚಾರದಿಂದ ನಾಲ್ಕೈದು ಬಾರಿ ನಮ್ಮ ಚಾರಣ ಮುಂದೂಡಲ್ಪಟ್ಟಿತ್ತು. ಅದಕ್ಕೆ ಏನೋ ಚಾರಣದ ಬಗ್ಗೆ ನಮ್ಮ ಕುತೂಹಲ ಮತ್ತು ಹಂಬಲವೂ ಹೆಚ್ಚಾಯಿತು ! ಹಾಗೇ ನಮ್ಮ ತಂಡದಲ್ಲಿದ್ದ ಚಾರಣಿಗರ ಸಂಖ್ಯೆಯೂ ಒಂದಂಕಿಗೆ ಇಳಿಯಿತು.
ಕಾಡೆಂದರೆ ಅದೇನು ಸಾಧಾರಣ ಕಾಡಲ್ಲ, ದಟ್ಟವಾದ ಗೊಂಡಾರಣ್ಯ! ಮನುಷ್ಯರಿಂದ ದೂರ, ಯಾವ ಸೌಕರ್ಯವೂ ಎಟುಕದ, ಪ್ರಾಣಿಗಳಷ್ಟೇ ವಾಸಿಸುವ ಕಾಡು ಕೊಂಪೆ ! ರಾತ್ರಿಯಲ್ಲಿ ಬಂಡೆಗಳ ಮೇಲೆ, ಮರದ ಕೆಳಗೆ, ಆಕಾಶದಡಿ ಹುಲ್ಲಿನ ಮೇಲೆ, ಹೀಗೆ ಏನು ಸಿಗುವುದೋ ಹಾಗೇ ಇರಬೇಕು, ರಾತ್ರಿಯಲ್ಲೂ ಪಾಳಿಯ ಮೇಲೆ ಕಾವಲಿರಬೇಕು, ಎಂಬೆಲ್ಲಾ ವಿವರ ಸಿಕ್ಕಮೇಲಂತೂ, ಕಾಡುಮೇಡಿನ ಹುಚ್ಚು ಏರಿಸಿಕೊಂಡ ನಮಗೆ ಹಿಗ್ಗೋ ಹಿಗ್ಗು!
ಇಂತಿಪ್ಪ ನಮ್ಮ ಚಾರಣ ಆನೆ, ಹುಲಿಗಳ ವಾಸಸ್ಥಳದಲ್ಲಿ ಮಾರ್ಗದರ್ಶಕರಿಲ್ಲದೇ ಸಾಧ್ಯವೇ! ? ಅರಣ್ಯ ಇಲಾಖೆಯಿಂದ ಗುರುತಿಸಲ್ಪಟ್ಟ ಗೈಡ್‌ಗಳು ನಮ್ಮೊಂದಿಗಿರುತ್ತಾರೆ ಎಂಬುದು ಸಮಾಧಾನ ತಂದಿತ್ತು!
ಗೈಡ್‌ಗಳು ಎಂದರೆ ಅರಣ್ಯಇಲಾಖೆಯ ಸಮವಸ್ತ್ರ ಧರಿಸಿದ, ೬ಅಡಿ ಎತ್ತರದ, ಕಟ್ಟುಮಸ್ತಾದ, ಗಂಭೀರ ಅಥವಾ ಮುಂಗೋಪದ ವ್ಯಕ್ತಿಗಳು ಇರಬಹುದು ಎಂದೆಣಿಸಿದ್ದ ನನಗೆ ಆಶ್ಚರ್ಯ! ಒಂದೈದು ಅಡಿ ಎತ್ತರದ, ಸಣಕಲು ದೇಹದ, ಅರ್ಧಂಬರ್ಧ ಬೆಳ್ಳಗಾಗಿ, ಧೂಳು ಮಣ್ಣು ಸೇರಿ ವಿಚಿತ್ರ ಬಣ್ಣಕ್ಕೆ ತಿರುಗಿದ ಕೂದಲಿನ, ನೀರನ್ನೇ ಕಾಣದ ಮಾಸಲು ಅಂಗಿ, ಕೈಯಲ್ಲಿ ಮಚ್ಚಿನ ಜೊತೆಗೆ, ಸೊಂಟದ ವಸ್ತ್ರಕ್ಕೆ ಸಿಕ್ಕಿಸಿದ ಚಾಕು, ಕುರುಚಲು ಗಡ್ಡದ, ಅಗಿಯುತ್ತಿದ್ದ ಅಡಕೆಯಂತೆಯೇ ಕಾಣುತ್ತಿದ್ದ ಹಲ್ಲುಗಳುಳ್ಳ ಮನುಷ್ಯ ನಮ್ಮ ಗೈಡ್. . . ಹೆಸರು ಗುಡ್ಡಪ್ಪ!
ಹೆಸರಿಗೆ ತಕ್ಕಂತೆ ಗುಡ್ಡಗಾಡಿನ ಜನರಂತೆ ಇದ್ದ ಗುಡ್ಡಪ್ಪ , ತನ್ನ ಸೋದರಳಿಯರಿಬ್ಬರನ್ನು ಸಹಾಯಕ್ಕಾಗಿ ಕರೆತಂದಿದ್ದ. ಪರಿಚಯ ವಿನಿಮಯವಾಗುತ್ತಿದ್ದಂತೆ, ಅಡಕೆಯಿಂದ ಕೆಂಪಾದ ಹಲ್ಲು ಕಿರಿಯುತ್ತ ಕಾಡಿನ ಬಗ್ಗೆ ಭಯ ಬೇಡ, ನಾವು ಇಲ್ಲೇ ಹುಟ್ಟಿ ಬೆಳೆದೋರು, ಕಾಡು ನಮಗೆ ಮನೆಯಂತೆ. . . ನೀವು ನಗರದೋರು, ನಾನು ಹೇಳಿದ ಹಾಗೆ ಕೇಳ್ಬೇಕಷ್ಟೆ , ಅಂತ ಭರವಸೆ ಕೂಡ ಕೊಟ್ಟಾಯಿತು . . ! !
ಸನ್ ಸ್ಕ್ರೀನು, ತಂಪು ಕನ್ನಡಕ, ಬದಲಾಯಿಸುವ ಬಟ್ಟೆ, ಸೊಳ್ಳೆ ಕ್ರೀಮ್, ಛತ್ರಿ. . . ಹೀಗೆ ಬೇಕು ಬೇಡದ್ದೆಲ್ಲಾ ತುಂಬಿದ ನಮ್ಮ ಬ್ಯಾಗು ಬೆನ್ನಿಗೆ ಭಾರವಾಗುವಂತಿದ್ದರೆ, ಬರಿ ನೀರಿನ ಕ್ಯಾನ್ ಮತ್ತು ತಾಡಪಾಲು ಇದ್ದ ಬ್ಯಾಗಿನ ಜೊತೆ ಗುಡ್ಡಪ್ಪ , ನಮ್ಮ ಲಗ್ಗೇಜು ಕೂಡ ಮಧ್ಯೆ ಮಧ್ಯೆ ಹೊತ್ತದ್ದು ನಮಗೆ ಖುಷಿ ತಂದಿತ್ತು. ಆಗಲೇ ನನಗನ್ನಿಸಿದ್ದು ಇವರ ಜೀವನ ಎಷ್ಟು ಸರಳ ಅಲ್ವಾ ಅಂತ.
ಚಾರಣದ ದಾರಿಯುದ್ದಕ್ಕೂ ಗುಡ್ಡಪ್ಪ ತನ್ನ ಕಾಡಿನ ಅನುಭವ ಅಥವಾ ತನ್ನ ಜೀವನವನ್ನು ನಮ್ಮೊಡನೆ ಹಂಚಿಕೊಂಡಿದ್ದು, ಕಣ್ಮುಂದೆ ಮತ್ತೊಂದು ಪ್ರಪಂಚ ಅನಾವರಣಗೊಂಡಂತೆ ಆಗಿತ್ತು. ಕಾಡಿನ ಸಂಪನ್ಮೂಲಗಳ ಮೇಲೆ ನಿಂತಿರುವ ಇವರ ಬದುಕು, ದುರಾಸೆ-ಅಸೂಯೆ, ಎರಡರಿಂದಲೂ ಅತಿದೂರ!
ಬೆಟ್ಟ ಏರುತ್ತಿದ್ದಂತೆ ನಡುವಿನ ನಮ್ಮ ವಿರಾಮಗಳು ಹೆಚ್ಚಾದವು. ಇಳಿಯುತ್ತಿದ್ದ ಬೆವರು ಒರೆಸುತ್ತಾ ಬಾಟಲಿಯ ನೀರು ಹೀರುವುದೂ ಮೇಲಾಯಿತು. ನಗುತ್ತಲೇ ಮೆಲ್ಲಗೆ ಗದರುತ್ತಾ ಹೆಚ್ಚು ಕೂರಲು, ನಿಲ್ಲಲೂ ಬಿಡದೆ ಬೇಗ ಹೆಜ್ಜೆ ಹಾಕಿ ಇಲ್ಲಾಂದ್ರೆ ಸಂಜೆ ಒಳಗೆ, ತಲುಪಬೇಕಾದ ಜಾಗಕ್ಕೆ ಹೋಗಕ್ಕೆ ಆಗಲ್ಲ ಎಂದು ಗೊಣಗುತ್ತಿದ್ದ. ಕೇವಲ ಒಂದೇ ಲೀಟರ್ ನೀರು ತಂದಿದ್ದ ನಮಗೆ ದಾರಿಯುದ್ದಕ್ಕೂ ಸಿಗುತ್ತಿದ್ದ ಝರಿ ತೊರೆಯಲ್ಲಿ ನೀರು ತುಂಬಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಇಳಿ ಮಧ್ಯಾಹ್ನದಲ್ಲಿ ಕೊಂಚ ದೊಡ್ಡದು ಎನ್ನಬಹುದಾದ ತೊರೆಯೊಂದರ ಬಳಿ, ಇದೇ ಇಂದಿನ ಕೊನೆಯ ನೀರಿನ ತಾಣ, ನೀರು ಕುಡಿದು ಬಾಟಲಿಗಳನ್ನು ತುಂಬಿಸಿಕೊಳ್ಳಿ ಎಂದು ಗುಡ್ಡಪ್ಪ ಘೋಷಿಸಿದ್ದಾಯಿತು. ಬಾಟಲಿಗೆ ಬಹುವಚನ ಏಕೆ! ನಾವು ತಂದಿರುವುದು ಒಂದೇ ಬಾಟಲಿ! ಇನ್ನು ಅರ್ಧ ದಿನ ಒಂದು ಬಾಟಲಿಯಲ್ಲಿ ಕಾಲ ಹಾಕುವುದು ಸಾಧ್ಯವೇ! ನಮಗೆ ಗಾಬರಿ! ನಮ್ಮ ಯೋಚನೆಗಳು ಅರ್ಥವಾದಂತೆ, ಹುಸಿನಗು ನಗುತ್ತಾ ತನ್ನ ಬ್ಯಾಗಿನಿಂದ ೫ಲೀಟರ್ ಕ್ಯಾನ್ ಹಾಗೂ ೨ಲೀಟರ್ ಖಾಲಿ ಬಿಸ್ಲೇರಿ ಬಾಟಲಿಗಳನ್ನು ಹೊರಗೆಳೆದು, ನೀರು ತುಂಬಿಸಿ ಮತ್ತೆ ಒಳಗೆ ಇಟ್ಟಾಗಿತ್ತು.
ಅವನ ಸೋದರಳಿಯರಿಬ್ಬರೂ ಅವನನ್ನೇ ಅನುಸರಿಸಿದರು. ಅಬ್ಬಾ . . . ನಮಗೆ ಆ ಕ್ಯಾನ್‌ಗಳು ಕಾಣಿಸಿರಲೇ ಇಲ್ಲ. . ! ಅದಿರಲಿ. . . ಎಷ್ಟು ಸಣಕಲು ದೇಹದ ಈ ಮೂವರು ಎಷ್ಟು ಆರಾಮವಾಗೇ ಆ ನೀರಿನ ಭಾರ ಹೊತ್ತು ಬೆಟ್ಟ ಹತ್ತುತ್ತಿದ್ದಾರಲ್ಲ. . ! ಅಂತೂ ನಮ್ಮ ನೀರಿನ ಬವಣೆ ನೀಗಿದಂತಾಯಿತು. ಇದು ಇಷ್ಟಕ್ಕೆ ಮುಗಿಯಲಿಲ್ಲ. ಸಂಜೆ ನಾವು ಉಳಿಯುವ ತಾಣಕ್ಕೆ ತಲುಪುವ ಹೊತ್ತಿಗೆ ಅಷ್ಟೂ ನೀರು ಖಾಲಿ. ಮತ್ತೆ ಅಡುಗೆ ಹೇಗೆ ಮಾಡೋದು ಅಂತ ಯೋಚಿಸುವ ಹೊತ್ತಿಗೆ, ಆ ಮೂವರು ಅದೆಲ್ಲೋ ಮಾಯವಾಗಿ ಮುಕ್ಕಾಲು ಗಂಟೆಯೊಳಗೆ ತುಂಬಿದ ನೀರಿನ ಕ್ಯಾನ್ ಗಳೊಂದಿಗೆ ಪ್ರತ್ಯಕ್ಷರಾಗಿದ್ದರು. ನಾವು ಏರಿದ್ದ ಅಷ್ಟೆತ್ತರದ ಬೆಟ್ಟದ ಬುಡದಲ್ಲಿದ್ದ ಝರಿಗೆ ಓಡಿ ಹೋಗಿ ನೀರು ತಂದರೆಂದು ತಿಳಿದು ಬೆರಗಾದೆ. ನನಗೆ ಆ ಕ್ಷಣಕ್ಕೆ ಮೂವರೂ ಮಾಂತ್ರಿಕರಂತೆ ಕಂಡದ್ದು ನಿಜ! ಮೂರು ದಿನಗಳ ಚಾರಣ ಮುಗಿಸಿ ಅದೊಂದು ಸಂಜೆ ರಾತ್ರಿ ಕಳೆಯಬೇಕಾದ ಗೆಸ್ಟ್‌ಹೌಸ್‌ಗೆ ಬಂದಿಳಿದೆವು. ಆಯಾಸವಾಗಿದ್ದರೂ, ಛೇ. . . . ಇಂಥ ಸುಂದರವಾದ ದಿನಗಳು ಮುಗಿದವಲ್ಲಾ ಅಂತ ಮನಸ್ಸು ಬೇಸರಿಸಿತ್ತು. ಗುಡ್ಡಪ್ಪ ಮತ್ತವನ ತಂಡದವರಿಗೆ ವಿದಾಯ ಹೇಳಿ ಕಳುಹಿಸುವ ಹೊತ್ತು. ಚಾರಣದ ಅದ್ಭುತ ಅನುಭವಕ್ಕೆ ಧನ್ಯವಾದ ಹೇಳುತ್ತಿರುವಾಗಲೇ, ಗುಡ್ಡಪ್ಪನ ಸೋದರಳಿಯ ನಮ್ಮ ಚಾರಣದ ಆಯೋಜಕg೧ನ್ನು ಬದಿಗೆಳೆದು ಏನೋ ಕಿವಿಯಲ್ಲಿ ಉಸಿರಿದ. ಗುಡ್ಡಪ್ಪನ ಮುಖ ಚರ್ಯೆಯೂ ಸ್ವಲ್ಪ ಬದಲಾಯಿತು. ಆದರೆ ಅವರಿಗೆ ಕೊಡಬೇಕಾದ ಹಣವನ್ನು ಗುಡ್ಡಪ್ಪನ ಕೈಗಿಟ್ಟಾಕ್ಷಣ ತನ್ನೆಲ್ಲಾ ಹಲ್ಲುಗಳೂ ಕಾಣುವಂತೆ ನಕ್ಕು, ಕ್ಷಣವೂ ನಿಲ್ಲದೆ ಓಡಿದ.
ಮೈಸೂರು: ಪಕ್ಷದಲ್ಲಿ ಎಲ್ಲರಿಗೂ ಸಿಎಂ ಆಗಬೇಕು ಎನ್ನುವ ಆಸೆ ಇದೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.…
ಮಂಗಳೂರು: ಧರ್ಮಸ್ಥಳದಲ್ಲಿ ಶವಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನಾಗಿ ಬಂದ ಬಳಿಕ ಆರೋಪಿಯಾಗಿ ಜೈಲಿನಲ್ಲಿರುವ ಮಾಸ್ಕ್ ಮ್ಯಾನ್ ಚಿನ್ನಯ್ಯನಿಗೆ ಜಾಮೀನು ಸಿಕ್ಕಿ…
ಟಿ.ನರಸೀಪುರ: ಜಗದ್ಗುರು ಶ್ರೀ ಶಿವರಾತ್ರಿ ಡಾ.ರಾಜೇಂದ್ರ ಶ್ರೀಗಳ 110ನೇ ಜಯಂತೋತ್ಸವ ಹಾಗೂ ಶ್ರೀ ನಂಜುಂಡಸ್ವಾಮಗಳ 16ನೇ ಸಂಸ್ಮರಣೋತ್ಸವ ಕಾರ್ಯಕ್ರಮ ಹೊಸಮಠದ…
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೊ ದರವನ್ನು ಶೇ. 5.5% ರಿಂದ 5.25ಕ್ಕೆ ಅಂದರೆ 25 ಬೇಸಿಸ್ ಪಾಯಿಂಟ್‍ಗಳಷ್ಟು…
ಮಂಡ್ಯ: ಲ್ಯಾಬ್ ಟು ಲ್ಯಾಂಡ್ ಆದರೆ ಮಾತ್ರ ರೈತರಿಗೆ ಸಂಪೂರ್ಣ ಅನುಕೂಲವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಈ ಕುರಿತು…
ಬೆಂಗಳೂರು: ಮಾದಕದ್ರವ್ಯ ಮಾರಾಟ ಮತ್ತು ಮಾದಕದ್ರವ್ಯ ಸೇವನೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಹೊಸ ದಾಖಲೆ ನಿರ್ಮಿಸಿದ್ದಾರೆ. ಪ್ರಸಕ್ತ ಸಾಲಿನ…