ಆಂದೋಲನ ಪುರವಣಿ

ವನಿತೆ ಮಮತೆ : ಮಹಿಳೆಯೆಂಬ ಮಹಾ ತಪಸ್ವಿ

ಮಹಿಳೆ ಮನೆಗಷ್ಟೇ ಸೀಮಿತವಲ್ಲ ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಸವಾಲುಗಳ ನಡುವೆಯೇ ಹೊಸ ಸಾಧ್ಯತೆಗಳನ್ನು ಹರಸಿ ಹೊರಟ ಹೆಣ್ಣು ಸಾಧನೆಯ ಶಿಖರವೇರಿದ ಸಾಕಷ್ಟು ನಿದರ್ಶನಗಳು ನಮ್ಮ ಮುಂದಿವೆ. ಹೀಗಿದ್ದರೂ ಅವಳ ಸವಾಲುಗಳ ರಾಶಿ ಬೆಳೆಯುತ್ತಲೇ ಇದೆ. ಇಂತಹ ಹೊತ್ತಿನಲ್ಲಿ ದುಡಿಯುವ ಮಹಿಳೆಯ ಬದುಕು-ಬವಣೆ ಬಗ್ಗೆ ಚಿತ್ರಿಸಿದ್ದಾರೆ ಉಪನ್ಯಾಸಕಿ ದಿನಮಣಿ.

 

 

 

 

-ದಿನಮಣಿ ಬಿ.ಎಸ್.
ಉಪನ್ಯಾಸಕರು, ಮಹಾರಾಜ ಕಾಲೇಜು, ಮೈಸೂರು ವಿವಿ

‘ಮಹಿಳೆ ಮನಗೆ; ಪುರುಷ ಹೊಲಕ್ಕೆ’ ಎನ್ನುವ ಗಾದೆ ಮಾತು ಚಾಲ್ತಿಯಲ್ಲಿದ್ದ ಕಾಲವೊಂದಿತ್ತು. ಆದರೀಗ ಅದು ಬದಲಾಗಿ, ಪುರುಷ-ಮಹಿಳೆ ನಡುವೆ ಜೈವಿಕ ಅಂಶಗಳಲ್ಲಿನ ವ್ಯತ್ಯಾಸ ಬಿಟ್ಟರೆ ಇನ್ಯಾವುದೇ ಬೇಧವಿಲ್ಲದ, ಮುಂದುವರಿದ ಸಮಾಜದಲ್ಲಿ ನಾವಿಂದು ಇದ್ದೇವೆ.

ಆಧುನಿಕ ಸಂದರ್ಭ, ಉದಾರೀಕರಣ, ಜಾಗತೀಕರಣ, ಉನ್ನತ ಶಿಕ್ಷಣ, ಔದ್ಯೋಗಿಕ ಪ್ರಗತಿ ಸೇರಿ ಸಾಕಷ್ಟು ಅಂಶಗಳು ಇಂದು ಪುರುಷ-ಸ್ತ್ರೀ ನಡುವಿನ ಅಂತರವನ್ನು ಕಡಿಮೆ ಮಾಡಿವೆ. ಇದೆಲ್ಲದರಿಂದ ಇಂದು ಮಹಿಳೆ ಮನೆ, ಗ್ರಾಮ, ರಾಜ್ಯ, ರಾಷ್ಟ್ರ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾಳೆ. ಸಮಾಜವೊಂದರ ಸುಸ್ಥಿತಿಗೆ ಅಲ್ಲಿನ ಸಂಸ್ಕೃತಿಯೇ ಆಧಾರ. ಆ ಸಮಾಜದ ಸಾಂಸ್ಕೃತಿಕ ನೆಲೆಗಟ್ಟಿನ ಮೂಲಾಧಾರ ಮಹಿಳೆಯೇ ಆಗಿರುತ್ತಾಳೆ.

ದಶಕಗಳ ಹಿಂದೆ ಶಿಕ್ಷಕಿ, ಶೂಶ್ರುಷಕಿಯಂತಹ ಹುದ್ದೆಗಳು ಮಹಿಳೆಯರಿಗೆ ಸೂಕ್ತ ಎಂದು ಭಾವಿಸಲಾಗಿತ್ತು. ಆದರೆ ಈಗ ಕೃಷಿ, ಕಟ್ಟಡ ನಿರ್ಮಾಣ, ಕೈಗಾರಿಕೆ, ರಸ್ತೆ ಕೆಲಸ, ರೈಲು, ಟ್ಯಾಕ್ಸಿ ಚಾಲನೆ, ಸಾಹಿತಿ, ಗಡಿ ಕಾಯುವ ಸೈನಿಕಳಾಗಿ, ಸಾಮಾಜಿಕ ಕಾರ್ಯಕರ್ತೆಯಾಗಿ, ರಾಜಕಾರಣಿಯಾಗಿಯೂ ಗುರುತಿಸಿಕೊಳ್ಳುತ್ತಿದ್ದಾಳೆ. ಚಂದ್ರನನ್ನು ತೋರಿಸಿ ಮಕ್ಕಳಿಗೆ ಊಟ ತಿನ್ನಿಸುತ್ತಿದ್ದ ಹೆಣ್ಣು ಚಂದ್ರನ ಅಂಗಳಕ್ಕೆ ಕಾಲಿಟ್ಟಿದ್ದಾಳೆ. ಹಾರುವ ವಿಮಾನಗಳನ್ನು ಅಚ್ಚರಿಯಿಂದ ನೋಡುತ್ತಿದ್ದ ಹೆಣ್ಣುಮಗಳು ಪೈಲಟ್ ಆಗಿದ್ದಾಳೆ. ಸದ್ಯ ಮಹಿಳೆ ಕಾಲಿಡದ ಕ್ಷೇತ್ರವೇ ಇಲ್ಲ ಎಂದರೂ ತಪ್ಪಾಗದು.

ಸಾವಾಲುಗಳು ಸಾಕಷ್ಟಿವೆ

ಇಂತಿಪ್ಪ ದಿನಗಳಲ್ಲಿ ಮಹಿಳೆ ಅವಕಾಶಗಳ ಜೊತೆಗೆ ಸವಾಲುಗಳನ್ನೂ ಎದುರಿಸುತ್ತಿದ್ದಾಳೆ. ಅವುಗಳಲ್ಲಿ ಪ್ರಮುಖವಾದವು ಎಂದರೆ,

* ತಾಯಿಯಾದ ಉದ್ಯೋಗಸ್ಥ ಮಹಿಳೆ ತಮ್ಮ ಮಗುವಿನೊಂದಿಗೆ ಹೆಚ್ಚಿನ ಸಮಯ ಕಳೆಯಲು ಆಗುತ್ತಿಲ್ಲವಲ್ಲಾ ಎನ್ನುವ ತಪ್ಪಿತಸ್ಥ ಪ್ರಜ್ಞೆಯನ್ನು ಅನುಭವಿಸುವುದು.

* ಖಾಸಗಿ, ಅಸಂಘಟಿತ ವಲಯಗಳಲ್ಲಿ ವೇತನ ತಾರತಮ್ಯ, ಲೈಂಗಿಕ ದೌರ್ಜನ್ಯ, ಮಾನಸಿಕ ಕಿರುಕುಳವನ್ನು ಅಲ್ಲಲ್ಲಿ ಎದುರಿಸುತ್ತಿರುವುದು.

* ಇತ್ತೀಚೆಗೆ ದುಡಿಯುವ ಮಹಿಳೆಗೆ ಸೌಂದರ್ಯವೂ ಅರ್ಹತೆಯಾಗಿರುವುದು. ಇದರಿಂದ ಸೌಂದರ್ಯವರ್ಧಕಗಳು, ಬ್ಯೂಟಿ ಪಾರ್ಲರ್‌ಗಳಿಗಾಗಿ ಮಾಡಬೇಕಾದ ಖರ್ಚು (ಪಿಂಕ್ ಟ್ಯಾಕ್ಸ್).

* ರಾತ್ರಿ ಪಾಳಿಗಳಲ್ಲಿ ದುಡಿಯುವ ಮಹಿಳೆಗೆ ಸೂಕ್ತ ರಕ್ಷಣೆ ಇಲ್ಲದೇ ಇರುವುದು, ಋತುಚಕ್ರದಂತಹ ಸಮಯದಲ್ಲಿ ಆಗುವ ಹಾರ್ಮೋನು ವ್ಯತ್ಯಾಸಗಳು ಕೆಲಸದ ಮೇಲೆ ಪರಿಣಾಮ ಬೀರುವುದು.

ಪುರುಷ-ಸ್ತ್ರೀ ಜವಾಬ್ದಾರಿ ಹಂಚಿಕೆ

ಈಗ ಕುಟುಂಬಗಳ ಸ್ವರೂಪ ಬದಲಾಗಿದೆ. ಹಿಂದೆ ಇದ್ದ ಕೂಡು ಕುಟುಂಬ, ತುಂಬು ಕುಟುಂಬ ಪದ್ಧತಿ ಈಗ ಹೆಚ್ಚಾಗಿ ಕಂಡುಬರುವುದಿಲ್ಲ. ಮಕ್ಕಳಿಗೆ ಮದುವೆ ಮಾಡುವಾಗಲೇ ಮನೆಯನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುವ ವಧು ಸಿಕ್ಕರೆ ಸಾಕು ಎನ್ನುವ ಕಾಲ ಬದಲಾಗಿ, ಉದ್ಯೋಗದಲ್ಲಿ ಇದ್ದರೆ ಸರಿ, ಆರ್ಥಿಕವಾಗಿ ಸಹಾಯ ಆಗುತ್ತದೆ ಎಂದು ಪೋಷಕರು ಮತ್ತು ಮದುವೆ ಗಂಡೂ ಬಯಸುತ್ತಿದ್ದಾರೆ. ಆದರೆ ಗಂಡು ಉದ್ಯೋಗ ಮಾಡಿ ಬಂದರೆ ಅವರಿಗೆ ಸಿಗುವ ವಿನಾಯಿತಿಗಳು ಹೆಣ್ಣಿಗೆ ಸಿಗುವುದಿಲ್ಲ. ಕಚೇರಿಯಲ್ಲಿ ಕೆಲಸ ಮಾಡುವುದರ ಜೊತೆಗೆ ಮನೆಯ ಬಹುಪಾಲು ಕೆಲಸಗಳೂ ಅವಳ ಪಾಲಿಗೇ ಇರುತ್ತವೆ. ಇಂತಹ ಸಂದರ್ಭಗಳಲ್ಲಿ ಸತಿ-ಪತಿಗಳಿಬ್ಬರೂ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದು ಸೂಕ್ತ.

ಎಲ್ಲವನ್ನೂ ನಿಭಾಯಿಸುವ ಹೆಣ್ಣು

ಒಂದು ಕಡೆ ಕುಟುಂಬ, ವಯಕ್ತಿಕ ಬದುಕು, ಮಕ್ಕಳು, ಬಂಧುಗಳು, ಸ್ನೇಹಿತರು, ಕಚೇರಿ ಹೀಗೆ ಸಾಕಷ್ಟು ಬಂಧಗಳನ್ನು ತನ್ನ ಸುತ್ತ ಹೆಣೆದುಕೊಂಡ ಹೆಣ್ಣಿಗೆ ಅದ್ಯಾಕೋ ಇನ್ನೂ ಸೂಕ್ತ ಗೌರವವೇ ಸಿಕ್ಕುತ್ತಿಲ್ಲ. ಉನ್ನತ ಹುದ್ದೆಗೆ ಏರುವುದು ಅಷ್ಟು ಸುಲಭದ ಮಾತಲ್ಲ, ಹಾಗೊಂದು ವೇಳೆ ಏರಿದರೂ ಪುರುಷ ಅಧಿಕಾರಿಗೆ ಸಿಗುವ ಗೌರವ, ಹೆಣ್ಣಿಗೆ ಸಿಗುವುದು ಕಷ್ಟ. ಸಹೋದ್ಯೋಗಿಗಳು ಹೆಣ್ಣನ್ನು ತಮ್ಮ ಮೇಲಧಿಕಾರಿ ಎಂದು ಅಷ್ಟು ಸುಲಭಕ್ಕೆ ಒಪ್ಪಿಕೊಳ್ಳುವ ಮನಸ್ಥಿತಿಯೂ ಇನ್ನೂ ಗಟ್ಟಿಯಾಗಿಲ್ಲ. ಇದೆಲ್ಲದರಿಂದ ಹೊರಬಂದು, ಎಲ್ಲವನ್ನೂ ನಿಭಾಯಿಸಿಕೊಂಡು ಮುಂದೆ ಸಾಗುವ ಹೆಣ್ಣು ನಿಜಕ್ಕೂ ಮಹಾ ತಪಸ್ವಿಯೇ ಹೌದು.

ಒತ್ತಡ ನಿವಾರಣೆಗೆ ಹಲವು ಮಾರ್ಗ

ತನ್ನ ಆರೋಗ್ಯವನ್ನೂ ಕಾಪಾಡಿಕೊಂಡು ಕುಟುಂಬದ ಆ ಮೂಲಕ ಸಮಾಜದ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿ ಹೊತ್ತಿರುವ ಹೆಣ್ಣು, ಅದರಲ್ಲಿಯೂ ಉದ್ಯೋಗಸ್ಥ ಮಹಿಳೆ ಪುಟ್ಟ ಪುಟ್ಟ ವಿಚಾರಗಳಿಗೆ ಮಹತ್ವ ನೀಡುತ್ತಾ, ಬದುಕಿನಲ್ಲಿ ಒಂದಷ್ಟು ವಿಚಾರಗಳನ್ನು ಅಳವಡಿಸಿಕೊಂಡರೆ ಸಂತೋಷ ಕಾಣಬಹುದು.

* ಹೊತ್ತಿಗೆ ಸರಿಯಾಗಿ ಆಹಾರ-ವಿಹಾರಗಳನ್ನು ರೂಢಿಸಿಕೊಳ್ಳುವುದು

* ಇಷ್ಟವಾದ ಹವ್ಯಾಸಗಳನ್ನು ಮುಂದುವರೆಸುವುದು.

* ಸ್ನೇಹಿತರೊಂದಿಗೆ ಕೆಲ ಕಾಲ ಕಳೆಯುವುದು.

* ಇಷ್ಟದ ಹಾಡುಗಳನ್ನು ಕೇಳುವುದು, ಬರೆಯುವುದು, ಓದುವುದು.

* ಪ್ರೀತಿ ಪಾತ್ರರೊಂದಿಗೆ ಒಡನಾಟ ಇಟ್ಟುಕೊಳ್ಳುವುದು.

* ಸಹೋದ್ಯೋಗಿಗಳ ಸಹಕಾರದೊಂದಿಗೆ ಸಮರ್ಪಕವಾಗಿ ಉದ್ಯೋಗ ನಿರ್ವಹಿಸುವುದು.

* ಕುಟುಂಬಸ್ಥರ ಒತ್ತಾಸೆಗೆ ಅನುಗುಣವಾಗಿ, ಪರಸ್ಪರ ಪ್ರೀತಿಯಿಂದ ನಡೆದುಕೊಳ್ಳುವುದು.

ಹೀಗೆ ಆರೋಗ್ಯಕರ ವಾತಾವರಣವನ್ನು ನಿರ್ಮಿಸಿಕೊಂಡು ಮುಂದುವರಿದಲ್ಲಿ ಉದ್ಯೋಗಸ್ಥ ಮಹಿಳೆಯರ ಒತ್ತಡದ ಪ್ರಮಾಣ ತಗ್ಗಬಹುದು. ಸಾಧನೆಗೂ ನೆರವಾಗಬಹುದು. ಆದರೆ ಇದರಲ್ಲಿ ಕೇವಲ ಮಹಿಳೆಯ ಪಾತ್ರದ, ಸಮರ್ಪಣೆಯ ಜೊತೆಗೆ ಸುತ್ತಮುತ್ತಲ ಸಾಮಾಜಿಕ ಪರಿಸರದ್ದೂ ಪ್ರಮುಖ ಪಾತ್ರ ಇರಬೇಕು. ಒಳ, ಹೊರಗೂ ದುಡಿಯುವ ಮಹಿಳೆಗೆ ಕುಟುಂಬದ, ಸಮಾಜದ ಸೂಕ್ತ ಸಹಕಾರ, ನೈತಿಕ ಬೆಂಬಲವೇ ಅವಳ ಸಾಧನೆಗೆ ಆಧಾರ ಸ್ತಂಭ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು. ಎಲ್ಲ ಮಹಿಳೆಯರೂ ದುಡಿಯುವ ಮಹಿಳೆಯರೇ. ಆದರೆ ಕೆಲವರಿಗೆ ಮಾತ್ರ ಸಂಬಳ ಬರುತ್ತದೆ, ಹಲವರಿಗೆ ಬರುವುದಿಲ್ಲ ಎನ್ನುವುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕಿದೆ.

andolana

Recent Posts

ಗ್ರಾಮ ಪಂಚಾಯ್ತಿ ಚುನಾವಣೆ : ಸಿದ್ಧತೆಗೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ ಸರ್ಕಾರ

ಬೆಂಗಳೂರು : 2026-31ನೇ ಸಾಲಿನ ಗ್ರಾಮ ಪಂಚಾಯ್ತಿಗಳ ಚುನಾವಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಹಾಗೂ…

1 hour ago

ಗ್ರಾಮ ಸ್ವರಾಜ್ಯದ ಕಲ್ಪನೆಗೆ ಶಕ್ತಿ ತುಂಬಿದ್ದು ಗಾಂಧಿಜೀ : ಸಿಎಂ

ಬೆಂಗಳೂರು : ಹಳ್ಳಿಯಿಂದ ದಿಲ್ಲಿಯೇ ಹೊರತು, ದಿಲ್ಲಿಯಿಂದ ಹಳ್ಳಿ ಅಲ್ಲ ಎಂದು ಪ್ರತಿಪಾದಿಸಿದ ಮಹಾತ್ಮಾ ಗಾಂಧೀಜಿಯವರು ಗ್ರಾಮ ಸ್ವರಾಜ್ಯದ ಕಲ್ಪನೆಗೆ…

1 hour ago

ಮದುವೆ ಆರತಕ್ಷತೆಗೆ ತೆರಳುತ್ತಿದ್ದ ವರನ ಮೇಲೆ ಚಾಕು ಇರಿತ ; ವಧು ಮಾಜಿ ಲವರ್‌ನಿಂದ ಕೃತ್ಯ ಶಂಕೆ

ಕೊಳ್ಳೇಗಾಲ : ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಮದುವೆಯ ಆರತಕ್ಷತೆಗೆ ತೆರಳುತ್ತಿದ್ದ ವರನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಏಕಾಏಕಿ ದಾಳಿ…

3 hours ago

ಚಿರತೆ ದಾಳಿ : ರೈತನಿಗೆ ಗಾಯ

ಗುಂಡ್ಲುಪೇಟೆ : ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ರಾಜಶೇಖರ ಮೂರ್ತಿ ಎಂಬುವವರ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದ್ದು, ಅದೃಷ್ಟವಶಾತ್ ರೈತ…

4 hours ago

ಮಹಾತ್ಮ ಗಾಂಧಿ ಪುಣ್ಯತಿಥಿ | ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ, ಖರ್ಗೆ ಸೇರಿ ಗಣ್ಯರ ನಮನ

ಹೊಸದಿಲ್ಲಿ : ರಾಷ್ಟ್ರಪಿತಿ ಮಹಾತ್ಮ ಗಾಂಧಿ ಅವರ 78ನೇ ಪುಣ್ಯತಿಥಿ ಹಿನ್ನೆಲೆಯಲ್ಲಿ ಇಂದು ರಾಷ್ಟ್ರಪತಿ ಮುರ್ಮು, ಪ್ರಧಾನಮಂತ್ರಿ ನರೇಂದ್ರ ಮೋದಿ…

4 hours ago

ಡ್ರಗ್ಸ್‌ ಗುಮಾನಿ | ಎನ್‌ಸಿಬಿ ಅಧಿಕಾರಿಗಳ ದಾಳಿ ಫಾಲೋಅಪ್‌ ಅಷ್ಟೇ : ಗೃಹ ಸಚಿವ

ಮೈಸೂರು : ಮೈಸೂರಿನಲ್ಲಿ ಡ್ರಗ್ಸ್‌ ತಯಾರು ಮಾಡುವ ಯಾವ ವಸ್ತುಗಳ ಸಹ ಸಿಕ್ಕಿಲ್ಲ. ಎನ್‌.ಸಿ.ಬಿ ಅಧಿಕಾರಿಗಳು ದಾಳಿ ಮಾಡಿರುವುದು ಫಾಲೋಅಪ್‌…

5 hours ago