ಆಂದೋಲನ ಪುರವಣಿ

ಹಾಡು ಪಾಡು : ದೇವರಾಜ ಅರಸರ ಕಾಲದ ಚಿಕ್ಕ ಹೆಜ್ಜೂರು ಸೋಮಣ್ಣನವರ ಕುರಿತು

ಜಯಶಂಕರ ಹಲಗೂರು


jayashankarahalagur@gmail.com

ಹುಣಸೂರು ಹತ್ತಿರದ ಚಿಕ್ಕ ಹೆಜ್ಜೂರಿನ ಸೋಮಣ್ಣ ಕಣ್ಮುಚ್ಚಿದ್ದಾರೆ. ಮೊಟ್ಟಮೊದಲು ಕಂಡಾಕ್ಷಣ ನನಗೆ ಅವರೊಬ್ಬ ಯಜಮಾನಿಕೆಯ ಸಂಕೇತದಂತೆ ಕಂಡಿದ್ದರು. ಮಂಡಿ ಮುಚ್ಚುವ ದೊಗಳೆ ಚಡ್ಡಿ, ತುಂಬುತೋಳಲಿನ ಬಿಳಿಯ ಬನಿಯನ್ ಒಳಗೆ ಭದ್ರವಾಗಿ ತುಂಬಿಕೊಂಡಿದ್ದ ದಢೂತಿ ಕಾಯವನ್ನು ಉರುಳಾಡಿಸಿಕೊಂಡು ನಡೆಯುತಿದ್ದ ಅವರು ಪೈಲ್ವಾನಂತೆ ಕಾಣುತ್ತಿದ್ದರು. ಬಾಯ್ತುಂಬ ಇರುತ್ತಿದ್ದ ಎಲೆಯಡಿಕೆ ತಾಂಬೂಲ ಚಿಮ್ಮದಂತೆ ತುಟಿ ಬಿಗಿದು ಮೂಗಿನಲ್ಲೇ ಜೋರಾಗಿ ಮಾತಾಡುತ್ತಿದ್ದ ಅವರು ಮಹಾ ಗತ್ತಿನ ಆಸಾಮಿಯಂತೆಯೂ ಕಂಡಿದ್ದರು. ಎಪ್ಪತ್ತು ವರ್ಷ ದಾಟಿದ್ದರೂ ಶ್ರೀಮಂತವಾದ ತೋಳು ತೋಡೆಗಳ ಜಟ್ಟಿಯಂತಿದ್ದರು.
ಮಾತು ಆರಂಭವಾದೊಡನೆ ಥೇಟ್ ತೇಜಸ್ವಿ ಶೈಲಿಯ ಮಾತೇ ಇವರದು ಅನ್ನಿಸತೊಡಗಿತು. ನೋಟದಲ್ಲಿ, ರೂಪಿನಲ್ಲಿದ್ದ ಗತ್ತು ಗಾಂಭೀರ್ಯಗಳು ಮಾತಿನಲ್ಲಿ ಮಾಯವಾಗಿ, ಆಪ್ತವಾದ ಹರಟೆಮಲ್ಲನಂತೆ ಕಾಣತೊಡಗಿದ್ದರು. ಅವರ ಅನುಭವ ಲೋಕದಲ್ಲಿ ಕಾಲಿಟ್ಟೊಡನೆ, ಅವರ ಮಾತಿನ ಮೋಡಿಗೆ ಸಿಕ್ಕೊಡನೆ ಅವರ ದೈತ್ಯ ದೇಹದೊಳಗೆ ಸಾಮಾಜಿಕ ನ್ಯಾಯಕ್ಕಾಗಿ, ಮೌಲ್ಯಯುತ ರಾಜಕಾರಣಕ್ಕಾಗಿ, ಹಲಬಗೆಯ ಸಂಕಟಗಳಿಗಾಗಿ, ಮನುಷ್ಯ ಪ್ರೇಮಕ್ಕಾಗಿ ಸದಾ ಮಿಡಿವ ಪುಟ್ಟ ಹೃದಯವಿರುವುದು ತಕ್ಷಣ ನಮಗೆ ಹೊಳೆದುಬಿಟ್ಟಿತ್ತು. ವರ್ಣರಂಜಿತ ವ್ಯಕ್ತಿಯಾದ ಸೋಮಣ್ಣನವರು ಅಯಸ್ಕಾಂತದಂತೆ ಎಲ್ಲರನ್ನೂ ಸೆಳೆದುಕೊಳ್ಳಬಲ್ಲವರಾಗಿದ್ದರು. ಅಂತೆಯೇ ನಾನು ಕೂಡ ಮೊದಲ ಭೇಟಿಯಲ್ಲಿಯೇ ಅವರಿಗೆ ಫಿದಾ ಆಗಿಹೋಗಿದ್ದೆ.
ಅರಸು ಅವರೊಡನೆ ಸೋಮಣ್ಣನವರ ಕುಟುಂಬದ ಸ್ನೇಹ ಸಂಬಂಧದ ಬಗ್ಗೆ ಬಹಳ ಕಥೆಗಳಿವೆ. ಇವರ ತಂದೆ ಚಿಕ್ಕ ಹೆಜ್ಜೂರು ಮಲ್ಲಪ್ಪನವರೂ ದೇವರಾಜ ಅರಸು ಅವರೂ ಸ್ನೇಹಿತರು. ಅರಸರು ಪದವಿ ಮುಗಿಸಿದ ಕಾಲದಿಂದಲೂ ಆ ಸ್ನೇಹ ವಿಶ್ವಾಸವಿತ್ತು. ಸೋಮಣ್ಣನವರೂ ಸಹಜವಾಗಿಯೇ ಅರಸು ಅವರ ಆಪ್ತರೂ ಅಭಿಮಾನಿಯೂ ಆಗಿದ್ದರು.
ಅರಸು ಅವರು ಹತ್ತಾರು ಸಲ ಇವರ ಮನೆಗೆ ಬಂದಿದ್ದಾರೆ, ಅಧಿಕಾರದಲ್ಲಿ ಇದ್ದಾಗಲೂ ಸಹ. ಅರಸು ಇವರ ಮನೆಗೆ ಕೂರಲು ಬಂದಾಗ ಕೂರಲಿಕ್ಕಾಗಿಯೇ ಇವರ ತಂದೆ ಮುತುವರ್ಜಿವಹಿಸಿ ಮಾಡಿಸಿದ್ದ ವಿಶೇಷವಾದ ಕುರ್ಚಿಯನ್ನು ತಮ್ಮ ಮಹಾ ಆಸ್ತಿ ಎಂಬಂತೆ ತೋರಿಸುತ್ತಾ ಸೋಮಣ್ಣ ಸಂಭ್ರಮಿಸುತ್ತಿದ್ದರು. ಒರೆಸಿ ಒಪ್ಪವಾಗಿಟ್ಟಿರುವ ಆ ಕುರ್ಚಿಯ ಮೇಲೆ ಈಗಲು ಯಾರೂ ಕೂರುವುದಿಲ್ಲವಂತೆ. ಅದು ದೇವರಾಜ ಅರಸರಿಗೆ ಮಾತ್ರ ಮೀಸಲಾಗಿತ್ತಂತೆ! ಸೋಮಣ್ಣನವರು ತಮ್ಮ ವಿಶಿಷ್ಟವಾದ ಶೈಲಿಯಲ್ಲಿ ನಮ್ಮ ಅರಸರು ಅಂತ ಹೇಳೋದೆ ಒಂದು ಚಂದ!
ಅರಸರು ಇವರ ಮನೆಗೆ ಬಂದು ಹುಳ್ಳಿಕಟ್ಟು ಸಾರು ಮುದ್ದೆ ಮತ್ತು ಬಳೆಯಾಕಾರದ ಕಜ್ಜಾಯವನ್ನು ಬಯಸಿ ಬಯಸಿ ತಿನ್ನುತ್ತಿದ್ದರಂತೆ. ಅಂದು ನಮಗೂ ಅದೇ ಊಟೋಪಚಾರ ನಡೆಸಿ ಸೋಮಣ್ಣ ಆನಂದಿಸಿದ್ದರು. ಭೂ ಸುಧಾರಣಾ ಕಾನೂನು ಜಾರಿಯ ಕಾಲದಲ್ಲಿ ಇವರ ತಂದೆಯ ನೂರಾರು ಎಕರೆ ಪಿತ್ರಾರ್ಜಿತ ಭೂಮಿ ಉಳುವವರ ಪಾಲಾದುದರ ಸಾರ್ಥಕತೆ, ಅದನ್ನು ಸಾಧ್ಯವಾಗಿಸಿದ ಅರಸು ಅವರ ಬಗ್ಗೆ ಮೆಚ್ಚುಗೆಯನ್ನು ಸೋಮಣ್ಣ ತುಳುಕಿಸಿದ್ದರು. ಅರಸರ ಚುನಾವಣೆಯಲ್ಲಿ ಇವರ ಓಡಾಟವನ್ನು ಅದಮ್ಯ ಉತ್ಸಾಹದಿಂದ ವಿವರಿಸಿದ್ದರು. ಒಂದು ಮಹಾ ಸಂಪತ್ತಿನಂತೆ ಜತನದಿಂದ ಕಾಪಾಡಿಕೊಂಡು ಬಂದಿರುವ ಚುನಾವಣಾ ಮತಗಳ ಕೌಂಟಿಂಗಿನಲ್ಲಿ ಅರಸರ ಪರವಾಗಿ ಏಜೆಂಟರಾಗಿದ್ದಕೊಂಡು ಮಾಡಿಕೊಂಡಿದ್ದ ಮತಗಳ ಲೆಕ್ಕದ ಟಿಪ್ಪಣಿ ಚೀಟಿಗಳನ್ನು ಉತ್ಸಾಹದಿಂದ ತೋರಿಸಿದ್ದರು. ತಮ್ಮ ತೋಟದಲ್ಲಿನ ಕೋತಿಗಳ ಹಾವಳಿ ತಡೆಯುವ ಸಲುವಾಗಿ ಸ್ವಲ್ಪ ಕಾಲ ಕೋವಿ ಕೊಡುವಂತೆ ಇವರ ತಂದೆಗೆ ಅರಸು ಬರೆದಿರುವ ಪತ್ರವನ್ನು ತೋರಿಸಿದಾಗ ಸೊರಗಿದ್ದ ಅವರ ಕಣ್ಣುಗಳಲ್ಲಿ ಬೆಳಕು ಕೋರೈಸುತ್ತಿತ್ತು.
ಅರಸು ಅವರ ರಾಜಕಾರಣ, ಅಂತಃಕರಣ, ದೂರದೃಷ್ಟಿ, ಅವರ ಕ್ಯಾಬಿನೇಟಿನ ಸಚಿವರು, ಅವರ ಕಾಲದ ಅಧಿಕಾರಿಗಳು, ಅವರು ತಂದ ಬಿಲ್ಲುಗಳು… ಇಡೀ ನಾಲ್ಕು ತಾಸು ಅರಸು, ಅರಸು, ಅರಸು. ಮಧ್ಯೆ ಇವರ ಲಂಕೇಶರ ಸಂಬಂಧ, ಯಲ್ಲಪ್ಪ ರೆಡ್ಡಿಯವರ ಕಾಡಿನ ಪರಿಕಲ್ಪನೆ, ಮೈಸೂರು ರಾಜಕಾರಣ, ತಮ್ಮ ಹೊಲಮನೆ, ತಮ್ಮೂರಿನ ಸರ್ಕಾರಿ ಸ್ಕೂಲು- ಹೀಗೆ ಕೆಲವು ವಿಷಯಗಳು ಬಿಸಿಲ ಮಳೆಯಂತೆ ಕ್ಷಣ ಬಂದು ಹಾದು ಹೋದವು.
ನಂತರ ದಕ್ಷಿಣ ಕರ್ನಾಟಕದ ಒಂದು ದೊಡ್ಡ ಮಠದ ಸ್ವಾಮಿಗಳ ಬಗೆಗೆ ಅಭಿಮಾನದಿಂದ ಮಾತಾಡಿದರು, ಯಡಿಯೂರಪ್ಪನವರ ಸಂಕಷ್ಟಗಳ ಬಗ್ಗೆ ಮಾತಾಡಿದರು. ಬಹುಶಃ ಸೋಮಣ್ಣನವರ ನಿಲುವುಗಳು ಬದಲಾಗಿರಬಹುದು ಅಂದುಕೊಂಡೆವು. ಕಾಲದ ಹೊಡೆತದಲ್ಲಿ ಅದರಲ್ಲೂ ರಾಜಕಾರಣದಲ್ಲಿ ಹುಲ್ಲಿನ ಮೇಲೆ ಬಿದ್ದ ಮಂಜಿನ ಹನಿಯಂತೆ ಕ್ಷಣಾರ್ಧದಲ್ಲಿ ಆಗುತ್ತಿರುವ ಬದಲಾವಣೆಗಳ ನಡುವೆ ಸೋಮಣ್ಣನವರಂಥ ರಾಜಕೀಯ ಒತ್ತಾಸೆಗಳಲ್ಲಿನ ಬಿರುಕುಗಳು ನಮಗೇನು ಅಪವಾದದಂತೆ ಕಾಣಲಿಲ್ಲ.
ಚರಿತ್ರೆಯೇ ಆಗಿರಲಿ, ಸಾಮಾಜಿಕ ಬದುಕೇ ಆಗಿರಲಿ, ಪುರಾಣವೇ ಆಗಿರಲಿ, ರಾಜಕಾರಣವೇ ಆಗಿರಲಿ ಕಳೆದು ಹೋದ ಕಾಲದ ಮಹತ್ತುಗಳನ್ನು ನಮ್ಮ ಕಾಲಕ್ಕೆ ತಂದು ಮಾರ್ಗಸೂಚಿಯಾಗಿ ನಿಲ್ಲಿಸುವುದು ಯಾವುದೇ ಕಾಲದ ಜರೂರು… ಹಳೆಯ ಹೊನ್ನು ನಮ್ಮ ವರ್ತಮಾನದ ಬಾಳಿಗೆ ಬೇಕಾದ ಮಾನವೀಯ ಆಭರಣಗಳನ್ನು ಎರಕ ಹೊಯ್ದುಕೊಳ್ಳಲು ಅಗತ್ಯವಾಗಿ ಬೇಕು. ಅಂತೆಯೇ ಸೋಮಣ್ಣನವರು ಒಂದು ಕಾಲ, ಆ ಕಾಲದ ರಾಜಕೀಯ ಪ್ರಜ್ಞೆಯನ್ನು ಹೊತ್ತುತಂದು ಸುರಿಯುತ್ತಿದ್ದರು. ಇಂಥ ಸೋಮಣ್ಣ ಈಗ ಇಲ್ಲವಾಗಿದ್ದಾರೆ.

andolanait

Recent Posts

‘ದೇವರು ರುಜು ಮಾಡಿದನು’ ಎಂದ ಸಿಂಪಲ್ ಸುನಿ; ಶೀರ್ಷಿಕೆ ಅನಾವರಣ

ಈ ವರ್ಷ ಬಿಡುಗಡೆಯಾದ ವಿನಯ್‍ ರಾಜಕುಮಾರ್‍ ಅಭಿನಯದ ‘ಒಂದು ಸರಳ ಪ್ರೇಮಕಥೆ’ ಚಿತ್ರದ ನಂತರ ಒಂದಿಷ್ಟು ಹೊಸ ಚಿತ್ರದ ಕೆಲಸಗಳಲ್ಲಿ…

2 mins ago

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ ಅರೆಸ್ಟ್

ಬೆಂಗಳೂರು: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸಹೋದರ ಗೋಪಾಲ್‌ ಜೋಶಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಂಎಲ್‌ಸಿ ಟಿಕೆಟ್‌ಗಾಗಿ…

39 mins ago

ರಾಜ್ಯದಲ್ಲಿ ಹಿಂದಿ ಹೇರಿಕೆ: ತಮಿಳುನಾಡು ರಾಜ್ಯಪಾಲ ರವಿ ವಿರುದ್ಧ ಧ್ವನಿ ಎತ್ತಿದ ಎಂ.ಕೆ.ಸ್ಟಾಲಿನ್

ಚೆನ್ನೈ: ಹಿಂದಿ ಮಾಸಾಚರಣೆ ನೆಪದಲ್ಲಿ ಕೇಂದ್ರ ಸರ್ಕಾರದಿಂದ ನೇಮಕವಾದ ರಾಜ್ಯಪಾಲರು ದೇಶದ ಏಕತೆಯನ್ನು ಮರೆತು, ಕೇಂದ್ರ ಯೋಜನೆಗಳು ಮತ್ತು ಘೋಷಣೆಗಳಂತೆ…

49 mins ago

ಮುಡಾ ಫೈಲ್ ಸುಟ್ಟು ಹಾಕಿರುವ ಭೈರತಿ ಸುರೇಶ್ ರನ್ನು ತಕ್ಷಣ ಬಂಧಿಸಿ: ಶೋಭಾ ಕರಂದಾಜ್ಲೆ ಆಗ್ರಹ

ಬೆಂಗಳೂರು: ಸಚಿವ ಭೈರತಿ ಸುರೇಶ್‌ ಅವರು ಮುಡಾದಿಂದ ಫೈಲ್‌ಗಳನ್ನು ತಂದು ಸುಟ್ಟು ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಸುರೇಶ್‌ರನ್ನು ತಕ್ಷಣ ಬಂಧಿಸಬೇಕು…

1 hour ago

ಕೆಂಪೇಗೌಡರು ಕಟ್ಟಿದ ಕೆರೆಗಳನ್ನೆಲ್ಲಾ ಹಣದ ದಾಹಕ್ಕೆ ನುಂಗಿದ್ದಾರೆ: ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ

ಮಂಡ್ಯ: ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರು ಕಟ್ಟಿದ ಕೆರೆ-ಕಟ್ಟೆಗಳನ್ನು ಹಣದ ದಾಹಕ್ಕೆ ನುಂಗಿ ಹಾಕಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧ ಕೇಂದ್ರ…

1 hour ago

ಮಾಜಿ ಸಿಎಂ ಎಸ್.ಎಂ.ಕೃಷ್ಣ ಮಣಿಪಾಲ್ ಆಸ್ಪತ್ರೆಗೆ ದಾಖಲು

ಬೆಂಗಳೂರು: ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಅವರು ಅನಾರೋಗ್ಯದಿಂದ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಆಸ್ಪತ್ರೆಗೆ…

1 hour ago