ಆಂದೋಲನ ಪುರವಣಿ

ಹಾಡು ಪಾಡು : ಬಾಯಲ್ಲಿ ಬಿದ್ದು ಸಿಕ್ಕಿದ ಎಡಗಡೆಯ ಹಲ್ಲು

ವಯಸ್ಸಾಗುತ್ತ ಒಸಡು ಹಿಂದೆ ಸರಿಯುತ್ತದಂತೆ. ವಯಸ್ಸಾಗುತ್ತ ಮೈಯೂ ಕುಗ್ಗುವುದು ನೋಡಿದ್ದೇನೆ. ದಿನಾ ದಿನಾ ನೆನಪುಗಳ ಕಾಡು ಅಡಿಯಿಡಲಾಗದಷ್ಟು ದಟ್ಟವಾಗುತ್ತ ಕಾಡುತ್ತದೆ. ಅದು ಹೇಳಲಾಗದ, ಹೇಳಬಾರದ ಕಾಟ. ಸ್ಮರಣೆ, ಸ್ಮರ ಇಬ್ಬರೂ ಇಲ್ಲವಾದಾಗ ಕಾಣುವ ಸತ್ಯಕ್ಕೆ ಇವೆಲ್ಲ ನನ್ನ ಸಿದ್ಧತೆಯೂ ಇರಬಹುದು

ಹೀಗೊಂದು ದಂತ ಕಥಾ ಲಹರಿ

ಓ ಎಲ್ ನಾಗಭೂಷಣ ಸ್ವಾಮಿ
olnswamy@gmail.com

ಉಪ್ಪಿಟ್ಟಿನಲ್ಲಿ ಕಣ್ಣಿಗೆ ಬಿದ್ದ ಕಡಲೆ ಬೇಳೆಯನ್ನು ಚಮಚದಲ್ಲಿ ಎತ್ತಿ ತಟ್ಟೆಯ ಮೂಲೆಯಲ್ಲಿಡುತ್ತಾ, ಕಣ್ಣಿಗೆ ಕಾಣದ ಕಡಲೆ ಬೇಳೆಗಳನ್ನು ತಡಕುತ್ತಾ, ಅರೆ, ಈರುಳ್ಳಿಯನ್ನೇನು ಮಾಡುವುದು ಅನ್ನುವುದು ಹೊಳೆಯದೆ ಉಪ್ಪಿಟ್ಟಿನ ಪರಿಮಳವನ್ನೂ, ತಿನ್ನಬೇಕೆಂಬ ಆಸೆಯನ್ನೂ ಧಿಕ್ಕರಿಸುತ್ತಾ ಮುಂದೂಡುತ್ತಾ ಕೂತಿದ್ದೆ. ಉಪ್ಪಿಟ್ಟಿನ ತಟ್ಟೆಯ ಮುಂದೆ ವಿಷಾದಯೋಗ, ಆರೋಗ್ಯಕರವಾದ ಸ್ವಹಾಸ್ಯ, ತೇಜಮ್ಮ ಹೇಳಿದ ಹಾಗೆ, ಹೇಳುತ್ತಿರುವ ಹಾಗೆ ಇಲ್ಲಿಂದಲೇ ಶುರು ಮಾಡಲೇ ಅನ್ನುವ ಯೋಚನೆ ಎಲ್ಲವೂ ಉಪ್ಪಿಟ್ಟಿನಲ್ಲಿ ಬೆರೆತ ಒಗ್ಗರಣೆಯ ಸಾಸುವೆ ಕಾಳುಗಳ ಹಾಗೆ ಇರುವಾಗ, ಹೀಗೆ?
ಹತ್ತು ದಿನದ ಮೊದಲು, ಇಂಥವೆಲ್ಲ ಆಗುವ ಹಾಗೆ ತೀರಾ ಅನಿರೀಕ್ಷಿತ ಅನ್ನುತ್ತಾರಲ್ಲಾ ಹಾಗೇ ನಡೆದದ್ದು ಕಾರಣ. ಅವತ್ತೂ ಕೈಯಲ್ಲಿ ತಟ್ಟೆ ಇತ್ತು, ಕಣ್ಣ ಮುಂದೆ ಯಾವುದೋ ಸೀರಿಯಲ್ಲು ಓಡುತಿತ್ತು, ಸೊಸೆ ಬಿಸಿಬಿಸಿಯಾಗಿ ಮಾಡಿದ ಆಲೂ ಪರೋಟಾ, ಜೊತೆಗೆ ಉಪ್ಪಿನ ಕಾಯಿ ರಸ, ಜೊತೆಗೆ ಮೊಸರು ಬೆರೆತು ಬಹಳ ಖುಷಿಯಾಗಿ ನಾಲಗೆ ರುಚಿಯನ್ನು ಹೊರಳಿಸಿ ಹೊರಳಿಸಿ ಎಂದಿನಂತೆ ಮೈಮರೆತು ತಿನ್ನುತಿರುವಾಗ-
ಕರಕ್
ಅರೇ, ಏನೂ ಆಗಿಲ್ಲ! ಇಲ್ಲಾ ಏನೋ ಆಗಿದೆ! ನಾಲಗೆ ಬಾಯೊಳಗೆಲ್ಲ ಮಿಂಚಿನ ಹಾಗೆ ಸಂಚರಿಸಿತು, ಯಾಕೋ ಮುಂಭಾಗದ ಎಡಗಡೆಯ ಎರಡನೆಯ ಹಲ್ಲು, ಅಲ್ಲ, ಅದು ಹಲ್ಲಲ್ಲ, ತೋರು ಹಲ್ಲಿನ ಸಾಲನ್ನು ಬಿಗಿಯಾಗಿ ಹಿಡಿದಿಡಲೆಂದು ಒಸಡಿಗೆ ಬಡಿದುಕೊಂಡಿರುವ ನಿಜ ಹಲ್ಲಿನ ಗೂಟ ಒಳಮುಖವಾಗಿ ಬಗ್ಗಿದೆ. ಮುರಿಯಿತೇ? ಇಲ್ಲವೇನೋ. ನೋವಾಗಿಲ್ಲ. ಆದರೂ ಸೊಟ್ಟಗಾದಂತಿದೆ. ಇಲ್ಲ ಈಗ ನೆಟ್ಟಗೆ. ಹುಷಾರಾಗಿ, ಅಷ್ಟು ಹುಷಾರಾಗಿ ತಿನ್ನುವುದಕ್ಕೆ ನಿಮಗೂ ನನ್ನ ಸ್ಥಿತಿಯೇ ಬರಬೇಕು, ಹಾಗಾಗದಿರಲಿ, ಅಂತ ಸುಮ್ಮನೇ ಹಾರೈಸಿ ಮುಂದುವರಿದರೆ, ಆಗ
ತಿನ್ನುವುದೂ ಇಷ್ಟು ಎಚ್ಚರದ ಕೆಲಸವಾಯಿತಲ್ಲಾ? ಮೊಸರಿನ ರುಚಿ, ಉಪ್ಪಿನಕಾಯಿ ರಸ, ಪರೋಟದ ಮಿದುಗರಿಮಿದು ಸ್ಪರ್ಶ ಎಲ್ಲ ಎಲ್ಲಿ ಹೋದವೋ? ಮುಗಿಯುತ್ತಲೇ ಇಲ್ಲವಲ್ಲ, ಬಿಸಾಕಲಾಗದಷ್ಟು ಉಳಿದಿದೆ ತಟ್ಟೆಯಲ್ಲಿ. ಅದಕ್ಕಿಂತ ಮಿಗಿಲು ಹೀಗಾಯಿತು ಎಂದು ಯಾರಿಗೂ ಅರ್ಥವಾಗುವ ಹಾಗೆ ಹೇಳುವುದು ಹೇಗೆಂದೂ ತಿಳಿಯುತ್ತಿಲ್ಲಾ ಅಂದುಕೊಳ್ಳುತ್ತಲೇ ಮುಗಿಸಿ,
ನಾಳೆ ಭಾನುವಾರ, ನಾಳಿದ್ದೇ ಹಲ್ಲಿನ ಡಾಕ್ಟರ ಹತ್ತಿರ ಹೋಗುವುದೆಂದು ಶಪಥವನ್ನು ತೊಟ್ಟು, ಹುಷಾರಾಗಿ ನೀರು ಕುಡಿದು, ಹುಷಾರಾಗಿ ಬಾಯಿ ಒರೆಸಿಕೊಂಡು, ಇನ್ನೂ ಇನ್ನೂ ಹುಷಾರಾಗಿ ತೋರುಹಲ್ಲಿನ ಸಾಲನ್ನು ಅಲುಗುವ ಗೂಟಕ್ಕೇ ಹೊಂದಿಸಿ, ದೇವರೇ (ಇಂಥ ಹೊತ್ತಿನಲ್ಲೂ ನೆನಪಿಗೆ ಬರದಿದ್ದರೆ ಅವನೆಂಥ ದೇವರು?) ನಾಳೆಯವರೆಗೆ, ಹೊಸ ಹಲ್ಲು ಸೃಷ್ಟಿಯಾಗುವವರೆಗೆ ಹೀಗೇ ಇರಲಿ ಎಂದು ವ್ಯರ್ಥವೆಂದು ಗೊತ್ತಿರುವ ಪ್ರಾರ್ಥನೆಯನ್ನೇ ಮಾಡುತ್ತಾ,
ಪ್ರತಿ ಕ್ಷಣವೂ ಹಲ್ಲು ಮನಸನ್ನೆಲ್ಲ ತುಂಬಿಕೊಂಡು ಬೇರೆ ಯಾವ ಯೋಚನೆಯ ಇರುವೆಯೂ ಮನಸ್ಸಿನಲ್ಲಿ ತೂರುವುದಕ್ಕೂ ಜಾಗವಿರದೆ ಅದು ಹೇಗೋ ರಾತ್ರಿಯ ಊಟದ ಸಮಯದಲ್ಲಿ ಮೊಸರನ್ನ ತಿನ್ನುತ್ತಿರುವಾಗ ಇದೇನು ಸಿಕಿದ್ದು ಬಾಯಿಗೆ ಅಂತ ನೋಡಿಕೊಂಡರೆ ಕಲ್ಲಲ್ಲ, ಹಲ್ಲು?
ಬೆರಳಲ್ಲಿ ತೆಗೆದು ತಟ್ಟೆಯ ಪಕ್ಕದಲ್ಲಿಟ್ಟರೆ ಕಣ್ಣು ನೋಡಲೊಲ್ಲೆ ಅಂದಿತು,
ಬಾಯಿಯಲ್ಲಿ ನಾಲಗೆಗೆ ದಿಕ್ಕು ತೋರದಂತಾಯಿತು,
ಕೆಳಗಿನ ಹಲ್ಲು ಸಾಲಿಗೆ ಮೇಲಿನ ಸಾಲಿನ ಇಬ್ಬರು ಆದಿ ಗೆಳೆಯರಲ್ಲಿ ಒಬ್ಬ ಕಾಲವಶನಾಗಿ ಇನ್ನೊಂದು ಹಲ್ಲು ಒಣಗಿದ ಎಲೆಯ ಹಾಗೆ ಅನಿಸುತ್ತಾ ಊಟ ಮಾಡುವುದೇ ಕಷ್ಟವಾಗಿದ್ದು ಒಂದು ಮೆಟ್ಟಿಲು.
ಇನ್ನೊಂದು ಮೆಟ್ಟಿಲಲ್ಲಿ ಅರೆ ಇದು ನನ್ನ ಹಲ್ಲು ಹೌದೇ ಅನ್ನುವ ಪ್ರಶ್ನೆಯನ್ನು ಕೊನೆಗೂ ಅದನ್ನು ನೋಡಿದ ಕಣ್ಣು ಮಿದುಳಿನಲ್ಲಿ ಹುಟ್ಟಿಸಿತು.
ಇದು ನನ್ನದೇ ಅಂತ ಇಲ್ಲಿ ತಟ್ಟೆಯ ಪಕ್ಕದಲ್ಲಿ ಇರದೆ ಬಾಗಿಲ ಹತ್ತಿರ ಬಿದ್ದಿದ್ದರೆ ನನಗೆ ಗುರುತು ಸಿಗುತ್ತಿತ್ತೇ? ಒಂದು ಹಲ್ಲು ಬುಡ ಕಡಿದುಕೊಂಡು ಬಿದ್ದು ಇನ್ನಿಲ್ಲವಾಗಿದೆಯಲ್ಲಾ ಅದು ನನ್ನ ಒಂದು ಅಂಶವೇ? ನನ್ನದೇ ಆಗಿದ್ದರೆ ನನ್ನಿಂದ ದೂರವಾದ ಈ ಹಲ್ಲು ಯಾಕೆ ನನ್ನದೆಂದು ಗುರುತು ಸಿಗುತ್ತಿಲ್ಲ?
ಹಲ್ಲು ಮಾತ್ರವಲ್ಲ ನನ್ನದೇ ಕೈಯೋ ಬೆರಳೋ ಕಾಲೋ ನನ್ನಿಂದ ಬೇರೆಯಾದರೆ ಅದು ನನ್ನದು ಅನ್ನುವುದಕ್ಕೆ ಊನವಾದ ಜಾಗ ಬಿಟ್ಟು ಬೇರೆ ಯಾವ ಸಾಕ್ಷಿಯೂ ಇಲ್ಲ, ಯಾವ ಗುರುತೂ ಇಲ್ಲ, ಹೀಗೇ ಸಾಯುವುದು ಅಂದರೆ ಇಷ್ಟಿಷ್ಟೆ ನನ್ನನ್ನು ಕಳೆದುಕೊಳ್ಳುತ್ತ ಹೋಗುವುದೇ ಅನ್ನುವ ಉತ್ತರವಿರದ ಪ್ರಶ್ನೆ ಅಥವಾ ಉತ್ತರ ಹುಡುಕಲು ಮನಸ್ಸು ಒಲ್ಲದ ಪ್ರಶ್ನೆಗಳು ಮನಸಿನ ಮೇಲೆ ತೇಲಿ ಮತ್ತೆ ಮುಳುಗಿ ಮಾಯವಾಗುತ್ತಿದ್ದವು.
ಛೇ. ಹೀಗೆ ಇಲ್ಲವಾಗುವ ಬದಲು ಈ ಹಲ್ಲು ಪ್ರಥಮ ಚುಂಬನದಲ್ಲಿ ಭಗ್ನವಾಗಿದ್ದಿದ್ದರೆ ಒಂದು ರೊಮಾಂಟಿಕ್ ಕಥೆಯಾದರೂ ಆಗುತಿತ್ತಲ್ಲಾ ಅನ್ನುವ ತಲೆಹರಟೆಯೂ ಹುಟ್ಟಿತು. ಅದು ನಿಜವಾಗಬೇಕಾದರೆ ಈ ವಯಸ್ಸಿನಲ್ಲಿ ಇನ್ನೊಬ್ಬ, ಇದುವರೆಗೂ ಯಾರಿಂದಲೂ ಮುತ್ತಿಡಿಸಿಕೊಂಡಿರದ ಪ್ರೇಯಸಿ ಸಿಗಬೇಕು, ನಾನು ಅವಳಿಗೆ ಮುತ್ತಿಟ್ಟು ನನ್ನ ಹಲ್ಲು ಮುರಿಯಬೇಕಾಗುತ್ತಿತ್ತು. ಎಲಾ, ಮನಸೇ, ಇನ್ನೂ ನಿನಗೆ ವಯಸಾಗಿಲ್ಲವಲ್ಲಾ ದಂತಭಗ್ನಮಾಡುವ ಪ್ರೇಯಸಿಯನ್ನು ಬಯಸುತಿದ್ದೀಯಲ್ಲಾ ಅಂತ ನಕ್ಕೆನೋ, ನನ್ನೇ ಮೆಚ್ಚಿಕೊಂಡೆನೋ ಗೊತ್ತಿಲ್ಲ.
ರಾಘವಾಂಕ ಕವಿತೆಯಲ್ಲಿ ಇದ್ದಂಥ ಸೋದರ ಮಾವ ನನಗಿದ್ದಿದ್ದರೆ ‘ಛೇ ನಿನ್ನ ಹಲ್ಲಿನ ಬಗ್ಗೆಯೇ ಹೀಗೆ ಮನೋಚಾಂಚಲ್ಯಕ್ಕೆ ಗುರಿಯಾಗುವೆಯಾ, ಧಿಕ್!’ ಎಂದು ಖಂಡಿಸಿ, ಉಳಿದು ಕಂಪಿಸುತ್ತಿರುವ ಇನ್ನೊಂದು ಹಲ್ಲನ್ನೂ ಮುರಿಯುತ್ತಿದ್ದನೇನೋ!
ಅಥವಾ ನಾನು ಪುಷ್ಪದಂತನಾಗಿದ್ದಿದ್ದರೆ? ಅಂದರೆ ಎಂಎ ಕಾಲದಲ್ಲಿ ಯಾವುದೋ ನಡುಗನ್ನಡ ಕಾವ್ಯ ಓದುತ್ತಾ ಅದಲ್ಲಿ ಪುಷ್ಪದಂತನೆಂಬ ಪಾತ್ರ ಬಂದು, ಆ ಹೆಸರು ಎಷ್ಟು ಚೆನ್ನ ಎಂದು ಜೊತೆಯ ಹುಡುಗಿ ಮೆಚ್ಚಿಕೊಂಡಾಗ, ‘ಹಲ್ಲುಗಳೆಲ್ಲ ಹೂವಿನ ದಳಗಳಾಗಿದ್ದರೆ ಕೇಸರಿ ಬಾತು ತಿನ್ನುವುದು ಹೇಗೆ?’ ಎಂದು ನಾನು ಕೇಳಿ, ಅವಳು ಎಷ್ಟು ಚಂದ ಹಲ್ಲು ಬೀರಿ ನಕ್ಕದ್ದು ನೆನಪಾಗುತ್ತಿದೆ.


ಡಾಕ್ಟರ ಹತ್ತಿರ ಹೋದೆ. ದಂತವೈದ್ಯರು. ಅವರದೇ ಸ್ಪೆಷಲ್ ಅಧ್ಯಯನ. ನಮ್ಮ ಬಾಯಿಯ ಮೇಲಿನ ಹದಿನಾರು, ಕೆಳಗಿನ ಹದಿನಾರು ಹಲ್ಲುಗಳಿಗೆ ಮೇಲಿನ ಮತ್ತು ಕೆಳಗಿನ, ಎಡ ಮತ್ತು ಬಲ ಎಂಬ ಸ್ಥಿರನಾಮದೊಂದಿಗೆ ಎಂಟು ಬೇರೆ ಬೇರೆ ಹೆಸರಿವೆಯೋ ಏನೋ. ಹುಡುಕಿ ನೋಡಬೇಕು. ಹಲ್ಲಿನ ಡಾಕ್ಟರು ಎಷ್ಟು ದಂತಕಥೆಗಳ ಭಂಡಾರವಾಗಿರುತ್ತಾರೋ! ಸಂತೆಯಲ್ಲಿ ದನದ ವ್ಯಾಪಾರ ಮಾಡುವವರು, ಕುದುರೆ ಕೊಳ್ಳುವವರು ಕೂಡ, ಪ್ರಾಣಿಗಳ ಬಾಯಿ ತೆಗೆಸಿ ಹಲ್ಲು ಪರೀಕ್ಷೆ ಮಾಡಿ ಎಣಿಸಿ ನೋಡುತ್ತಾರೆಂದು ಕೇಳಿ ಬಲ್ಲೆ. ಪ್ರಿಯ ಪ್ರೇಯಸಿಯರಿಗಿಂತ ಮಿಗಿಲಾಗಿ ಯಾವ ಹಿಂಜರಿಕೆಯೂ ಇಲ್ಲದೆ ಅಪರಿಚಿತರ ಬಾಯಿಯೊಳಗಿನ ಲೋಕವನ್ನು ಇಂಚು ಇಂಚಾಗಿ ನೋಡುವ ಡಾಕ್ಟರ ಮನಸ್ಸು ಹೇಗಿರಬಹುದು. ಅವರ ಕನಸಿನ ತುಂಬ ಥರಾವರಿ ಹಲ್ಲು ಬಂದು ಕಚ್ಚಿಯೋ ಕಚಗುಳಿ ಇಟ್ಟೋ ಕಿರಿದೂ ನೊರಗುಟ್ಟಿಯೋ ಹೇಗೆ ವರ್ತಿಸಬಹುದು? ಡಾಕ್ಟರು ಹೋಗಲಿ, ಈ ಎಳೆಯ ನರ್ಸುಗಳು ಪೇಶೆಂಟುಗಳ ಬಾಯಿಯೊಳಗಿನ ಲೋಕ ನೋಡುವ ಯಶೋದೆಯರು, ಗಂಡು ಜೀವಿಗಳ ಬಗ್ಗೆಯೇ ಅಸಹ್ಯ ತಾಳದಿರುವುದು, ಮುತ್ತನ್ನು ಒಲ್ಲದೆ ಸುಖಿಸುವುದು ಹೇಗೆ ಸಾಧ್ಯವೋ?
ಯಾಕೆಂದರೆ ಇಡೀ ಬಾಯಿಯ ಎಕ್ಸರೇ ತೆಗೆಸಿಕೊಂಡು ಬಂದಾಗ ಅರೇ ನನ್ನ ಬಾಯಿಯೇ ಇದು? ಈ ತಲೆಬುರುಡೆ, ಕೆನ್ನೆ ಮೂಳೆ, ಬಿದ್ದ ಹಲ್ಲಿನ ಖಾಲಿ ಜಾಗ, ಒದ್ದೆ ನೆಲದಲ್ಲಿ ನೆಟ್ಟ ಪುಟ್ಟ ಕಡ್ಡಿಯ ಸಾಲಿನಂಥ ಕೆಳ ಹಲ್ಲು ಸಾಲು! ಛೀ… ನಮ್ಮ ಬಗ್ಗೆ ಅಸಹ್ಯ ಹುಟ್ಟಿ ವಿರಕ್ತಿ ಅರಳುವುದಕ್ಕೆ ಮುದ್ದಾಗಿ, ಚೆಲುವಾಗಿ, ಖುಷಿಯಾಗಿ, ಮರುಕಪಟ್ಟು ಏನೆಲ್ಲ ನಿಜವನ್ನೂ ಆಗಾಗ ನುಡಿಯುವ ನಮ್ಮ ಬಾಯಿಯ ಒಳಗನ್ನೇ ಒಂದು ಸಲ ನೋಡಿಕೊಂಡರೂ ಸಾಕು.
ಹಾಗಂತ ವೈರಾಗ್ಯ ಬರಲಿಲ್ಲ. ಉಳಿದಿದ್ದ ಒಂದು ಹಲ್ಲು, ಮುರಿದುಕೊಂಡಿದ್ದ ಇನ್ನೆರಡು ತುಂಡು ಇಪ್ಪತ್ತು ನಿಮಿಷದೊಳಗೆ ಕಿತ್ತರು. ತೋರಿಸಲೂ ಇಲ್ಲ. ಅಷ್ಟು ಮಾಡುವುದಕ್ಕೆ ನನ್ನ ಹೃದಯದ ಡಾಕ್ಟರು, ಡಯಾಬಿಟಿಸ್ ಡಾಕ್ಟರುಗಳಿಂದ ನನ್ನ ದೇಹದ ಮಿಕ್ಕ ಆರೋಗ್ಯಕ್ಕೆ ತೊಂದರೆ ಇಲ್ಲವೆಂದು ಸರ್ಟಿಫಿಕೇಟು ಪಡೆದು ಇತ್ಯಾದಿಗಳೆಲ್ಲ ನೆನಪೇ ಉಳಿದಿಲ್ಲ. ಬಾಯಿತುಂಬುವ ಹಾಗೆ ಹತ್ತಿ, ಅದರ ಸುತ್ತ ಬ್ಯಾಂಡೇಜು ಬಟ್ಟೆ, ಮತ್ತೆ ಇನ್ನೊಂದಷ್ಟು ಪದರ ಹತ್ತಿ ಇಟ್ಟು ಅದನ್ನೆಲ್ಲ ಮತ್ತೆ ಬ್ಯಾಂಡೇಜು ಸುತ್ತಿ ದವಡೆಗೆ ಒತ್ತರಿಸಿಕೊಂಡು ಅರ್ಧ ಗಂಟೆ ಕಳೆದು ಡಾಕ್ಟರ ಮಾತಿನಂತೆ ಐಸ್ ಕ್ರೀಮು ತಿಂದಾಗ ಆಹಾ ಎಷ್ಟು ತಂಪು, ಎಷ್ಟು ಹಿತ, ಎಷ್ಟು ರುಚಿ!
ಮರುದಿನ ಊದಿದ ಕೆನ್ನೆ, ಉಪ್ಪು ನೀರಲ್ಲಿ ಬಾಯಿ ಮುಕ್ಕುಳಿಸು ದಿನಕ್ಕೈದು ಸಲ, ಹೀಗೆ ಮೂರು ದಿನ. ಆಮೇಲೆ ನೋಡಿದರೆ ಕನ್ನಡಿಯಲ್ಲಿ ನನ್ನ ಮುಖ ನನ್ನದೇ ಅಂತ ಗುರುತು ಸಿಕ್ಕುತ್ತಿಲ್ಲ. ಒಂದು ಥರಾ ಗಾಂಧಿಯ ಹಾಗೆ ಬೊಚ್ಚು ಬಾಯಿ. ಅಲ್ಲ, ನನ್ನ ಸೋದರ ಮಾವ ನೆನಪಾದರು. ಅವರು ಉಳಿಯುವುದು ಕಷ್ಟವೆಂದು ತಿಳಿದಾಗ ನೋಡಲು ಹೋದರೆ ಅವರು ಗುರುತೇ ಸಿಗಲಿಲ್ಲ. ಮೈ ಕುಗ್ಗಿ, ಸವೆದು, ಬಾಯಿ ಹಲ್ಲೆಲ್ಲ ಇಲ್ಲವಾಗಿ ಅರ್ಧ ಬಾಯಿ ತೆರೆದು ಮಲಗಿದ್ದರು. ಅರೆಬರೆ ಎಚ್ಚರದಲ್ಲಿ ಮಾತಾಡಿಸಿದರು. ಈ ನನ್ನ ಬಯಲು ಬಾಯಿ ನೋಡುತ್ತ ಅರೇ ಗಂಗಾಧರ ಮಾವನ ಬಾಯಿ ಹೀಗೇ ಇತ್ತಲ್ಲಾ ಅನಿಸಿ?
ನಾನೂ ಹೀಗೇ ಸಾಯುವುದಕ್ಕೆ ಸಿದ್ಧವಾಗುತ್ತಿರಬಹುದು. ಎದೆಯಲ್ಲಿ ಮೂರು ಸ್ಟಂಟು, ಜೊತೆಗೇ ಇರುವ ಮಧುಮೇಹ, ತಕ್ಕಮಟ್ಟಿಗೆ ರಿಪೇರಿಯಾಗಿರುವ ಶ್ವಾಸಕೋಶ, ಕೃತಕ ಮಸೂರ ಹೊತ್ತಿರುವ ಕಣ್ಣು, ಅರ್ಧ ಖಾಲಿಯಾದ ಬಾಯಿ, ಒಳಗೇ ದಿನವೂ ಅಲ್ಲ ಕ್ಷಣ ಕ್ಷಣವೂ ಸಾಯುತ್ತಿರುವ ಜೀವಕೋಶ ಲಕ್ಷಗಟ್ಟಲೆ… ಪೂರ್ತಿಯಾಗುವ ಕ್ಷಣ ಗೊತ್ತಿಲ್ಲವೆಂಬುದೇ ಸಮಾಧಾನ.
ಅದಕ್ಕೇ ಜೋಕು-ಹುಟ್ಟಾ ಕಪ್ಪಗಿದ್ದ ಕೂದಲೇ ಬೆಳ್ಳಗಾದ ಮೇಲೆ ಹುಟ್ಟಿನಿಂದ ಬೆಳ್ಳಗಿರುವ ನಮಗೆ ಮರ್ಯಾದೆ ಇಲ್ಲವೆಂದು ಹಲ್ಲು ಬೀಳುತ್ತವಂತೆ. ಕಪ್ಪು-ಬಿಳಿ, ಕೆಡುಕು-ಒಳಿತು ಬರೀ ಸುಳ್ಳು. ಅಥವಾ ಅರ್ಥವಾಗದು. ಕಪ್ಪು ಕೂದಲು ಬೆಳ್ಳಗಾದರೆ ಕೆಡುಕೆಲ್ಲ ಒಳಿತಾಯಿತೆಂದು ಒಳಿದು ಇಲ್ಲವಾಯಿತೇ? ಥೂ, ಮಿದುಳಿಗೆ ಬೇರೆ ಕೆಲಸವಿಲ್ಲ. ಬರೀ ಪ್ರಶ್ನೆ.
ತಡೆ ಇರದ ಬಾಯಿಯಲ್ಲಿ ಮಾತು ಅಸ್ಪಷ್ಟ. ಸ್ಪಷ್ಟವಾಗಬೇಕಾದರೆ ಒಳಗಿನಿಂದ ಬರುವ ಗಾಳಿಯ ಹೊನಲನ್ನು ತಡೆಯುವ ಹಲ್ಲು ಬೇಕು, ನಾಲಗೆಯೊಂದಿಗೆ ಸೇರಿ ಗಾಳಿಯನ್ನು ಕ್ಷಣ ತಡೆದು ಸದ್ದು ಹುಟ್ಟಿಸಬೇಕು. ಬರೀ ಬಯಲಗಾಳಿಯಾದರೆ ಅರ್ಥವಿರದ ಸದ್ದು, ಮಾತು ಯಾರಿಗೂ ತಿಳಿಯದು. ಅರ್ಥವೆಂದರೆ ತಡೆ! ಅರ್ಥದ ತಡೆಯೂ ಇರದ ಸತ್ಯ ಬಯಲು.
ಸ್ಪಷ್ವವಾಗಿ ಮಾತು ಆಡುತ್ತಿದ್ದೇನೆ ಅನ್ನುವುದು ನನ್ನ ತಿಳಿವಳಿಕೆ. ಅಲ್ಲ, ಅದು ಸುಳ್ಳು ಅನ್ನುವುದು ಬುದ್ಧಿಯ ಮಾತು.
ರಾಮುಗೆ ಅನುಭವದ ಮಾತು ನನಗೆ ಬುದ್ಧಿಯ ಮಾತಾಗಿ ಇಷ್ಟು ದಿನ ಕೇಳುತಿತ್ತು. ಅರಿಷ್ಟಡ್ವರ್ಗಕ್ಕೂ ಮಿತ್ರಷಡ್ವರ್ಗಕ್ಕೂ ವ್ಯತ್ಯಾಸವಿಲ್ಲ ಅಂತ ಒಂದು ಸಲ ಅಂದಿದ್ದ. ನಿನ್ನೆ ಡಾಕ್ಟರು ಹೇಳಿದರು. ನಿಮ್ಮ ಕೆಳಗಿನ ಹಲ್ಲು ಮೇಲಿನ ಖಾಲಿ ಒಸಡಿಗೆ ತಾಗುತ್ತ ಗಾಯವಾಗಿದೆ ಅಂದರು. ನನ್ನ ಇರುವ ಹಲ್ಲೇ ಇಲ್ಲವಾಗಿರುವ ಹಲ್ಲಿನ ತಳಹದಿಯಾದ ಒಸಡಿಗೆ ಶತ್ರು! ಅನುಭವಕ್ಕೆ ಬಂದಿತು. ಇದಿರು ಹಲ್ಲು ಇರದಿದ್ದರೆ ತಿನ್ನುವುದೆಷ್ಟು ಕಷ್ಟ! ಹಲ್ಲೇ ಇಲ್ಲದ ರಾಮು ಪಡುವ ಕಷ್ಟ ಅರ್ಧದಷ್ಟಾದರು ಅರ್ಥವಾಗುತ್ತಿದೆ. ನುರಿಸಲಾಗದು, ಹಾಗೇ ನುಂಗಿದರೆ ಜೀರ್ಣವಾಗದು, ಜಗಿಯದೆ ರುಚಿ ಪೂರ್ತಿಯಾಗದು, ನನ್ನ ಮೋರೆ ವಿಕಾರವೆಂಬ ಅಳುಕು ತಪ್ಪದು… ಇತ್ಯಾದಿ.
ತೋರಿಕೆ ಹಲ್ಲಿನ ಸಾಲು ನೋಡುವುದಕ್ಕೆ ಹಲ್ಲು. ನಾಲಗೆಗೆ ನಾಲಗೆಯ ಮೇಲಿನ ವಸ್ತುವಿಗೆ ಅಂಗಳಕ್ಕೆ ಒತ್ತಿ ರಸ ಬಾಯಿತುಂಬುವ ಸುಖವಿಲ್ಲ. ನಾಲಗೆ, ತಿನಿಸು, ಹಲ್ಲು, ಬಾಯಿ ಅಂಗಳದ ಗೋಡೆ ಸಹಜತೆ ಕಳೆದುಕೊಂಡು ಹಲ್ಲಿನಂತೆ ಕಾಣುವ ಆಕಾರ, ಅಂಗಳಕ್ಕೆ ತೆಳ್ಳನೆ ಹೊದಿಕೆ, ರುಚಿ ಮರೆತು ಹೋಗುವುದಕ್ಕೆ ಇನ್ನೇನುಬೇಕು!
ವಯಸ್ಸಾಗುತ್ತ ಒಸಡು ಹಿಂದೆ ಸರಿಯುತ್ತದಂತೆ. ವಯಸ್ಸಾಗುತ್ತ ಮೈಯೂ ಕುಗ್ಗುವುದು ನೋಡಿದ್ದೇನೆ. ದಿನಾ ದಿನಾ ನೆನಪುಗಳ ಕಾಡು ಅಡಿಯಿಡಲಾಗದಷ್ಟು ದಟ್ಟವಾಗುತ್ತ ಕಾಡುತ್ತದೆ. ಅದು ಹೇಳಲಾಗದ ಹೇಳಬಾರದ ಕಾಟ. ಸ್ಮರಣೆ, ಸ್ಮರ ಇಬ್ಬರೂ ಇಲ್ಲವಾದಾಗ ಕಾಣುವ ಸತ್ಯಕ್ಕೆ ಇವೆಲ್ಲ ನನ್ನ ಸಿದ್ಧತೆಯೂ ಇರಬಹುದು. ಇಷ್ಟು ವರ್ಷಗಳ ಕಾಲ ಕಳೆದುಕೊಳ್ಳುತ್ತ ಬಂದಿರುವುದನ್ನೆಲ್ಲ ಕಷ್ಟಪಟ್ಟು ನೆನಪು ಮಾಡಿಕೊಂಡರೆ, ಕಳೆದದ್ದು ಕಳೆದೇ ಇಲ್ಲ ಅನ್ನುವ ಹಾಗೆ ಸಲೀಸಾಗಿ ಬದುಕಿರುವುದು ಮನಸ್ಸಿಗೆ ಬಂದರೆ, ನಾನು ಅನ್ನುವುದು ಪೂರ್ತಿ ಇಲ್ಲವಾದಾಗಲೂ ಇನ್ನೇನೂ ಆಗದು ಅನ್ನುವ ಧೈರ್ಯವೂ ಹುಟ್ಟುತ್ತಿದೆ. ತೋರುದಂತದೊಡನೆ ಮತ್ತೆ ನಗುನಗುತ್ತ ಲೋಕಕ್ಕೆ ಇದಿರಾಗುವ, ಸ್ಪಷ್ಟವಾಗಿ ಮಾತಾಡುವ, ನಿಜವಾಗಿ ಇಲ್ಲವಾಗುವ ಕ್ಷಣ ಬರುವವರೆಗೆ ಏನೂ ಆಗಿಲ್ಲ ಅನ್ನುವ ಹಾಗೆ ರಿನ್ಯೂ ಆಗುವ ಕ್ಷಣ ಇನ್ನು ಕೆಲವೇ ದಿನಗಳಲ್ಲಿ ಬಂದೀತು, ಆಗ ಇನ್ನೊಂದು ಲಹರಿ ಹುಟ್ಟೀತು.

andolanait

Recent Posts

ಕನ್ನಡಿಗರಿಗೆ ಉದ್ಯೋಗ ನೀಡದ ಸಾಹಿತ್ಯ ಸಮ್ಮೇಳನ: ವಾಟಲ್‌ ನಾಗರಾಜ್‌ ಆಕ್ರೋಶ

ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…

9 hours ago

ಹಾಸ್ಯ ಸಾಹಿತ್ಯ ಆಧುನಿಕ ಬದುಕಿಗೆ ಔಷಧಿ: ಪ್ರೊ.ಕರಿಯಪ್ಪ

ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…

9 hours ago

ಸಿ & ಡಿ ಲ್ಯಾಂಡ್ ಸಮಸ್ಯೆ ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ: ಯು.ಟಿ. ಖಾದರ್

ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…

9 hours ago

ಸಿ.ಟಿ ರವಿ ಕೊಲೆಗೆ ಪೊಲೀಸರ ಸಂಚು: ಅಶೋಕ್‌ ಆರೋಪ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…

10 hours ago

ವಿರಾಜಪೇಟೆ | ಬಿಟ್ಟಂಗಾಲದಲ್ಲಿ ಚಿರತೆ ಬೆಕ್ಕು ಸಾವು

ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…

10 hours ago

ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ನಟ ದರ್ಶನ್‌ ವಾಸ್ತವ್ಯ

ಮೈಸೂರು: ನಟ ದರ್ಶನ್‌ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…

10 hours ago