ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡುವ ಸಂಭ್ರಮದ ಸಮಯ
ಪಿ.ಕೆ.ರಾಜಶೇಖರ್, ಜಾನಪದ ವಿದ್ವಾಂಸರು
ಸಂಕ್ರಾಂತಿ ಹಬ್ಬ ಎಂದರೆ ವಿಶಿಷ್ಟವಾದ ಬದಲಾವಣೆ ಹಾಗೂ ಉಜ್ವಲವಾದ ಬೆಳಕು ಎಂದರ್ಥ. ಪೌಷ್ಯಲಕ್ಷ್ಮೀ ಆಗಮನದ ತರುವಾಯ ಸೂರ್ಯನು ದ್ವಾದಶ ರಾಶಿಗಳಲ್ಲೊಂದಾದ ಮಕರ ರಾಶಿಗೆ ಪ್ರವೇಶಿಸಿ ದಕ್ಷಿಣದಿಂದ ಉತ್ತರಾಭಿಮುಖವಾಗಿ ಆರು ತಿಂಗಳ ಕಾಲ ಪ್ರಯಾಣ ಬೆಳೆಸುವನು. ಈ ಪಥ ಬದಲಿಕೆಯ ದಿನವನ್ನು ಮಕರ ಸಂಕ್ರಮಣ ಅಥವಾ ಮಕರ ಸಂಕ್ರಾಂತಿ ಎಂದು ಕರೆಯುವುದುಂಟು.
ಜನಪದರಿಗೆ ಎಳ್ಳು ಫಲವಂತಿಕೆಯನ್ನು ಜೀರಿಗೆ ಹೆಣ್ಣು- ಗಂಡುಗಳ ಸಂಬಂಧವನ್ನು ಬೆಳೆಸಿಕೊಡುವ ಧಾನ್ಯಗಳಾಗಿದ್ದು ಅವುಗಳನ್ನು ಬೆಳೆದು ಕೊಡುವ ಭೂಮಿ ತಾಯಿಯನ್ನು ಮೊದಲು ನೆನೆದು ನಮಿಸುವುದು ಒಳ್ಳೆಯ ಸಂಕೇತವಾಗಿದೆ.
ಮಾಗಿ ಒಂದು ರೀತಿಯಲ್ಲಿ ಸುಗ್ಗಿಯ ಕಾಲವೂ ಆಗಿದೆ. ವ್ಯವಸಾಯದ ಕೆಲಸಗಳೆಲ್ಲ ಮುಗಿದು, ಮನೆಯಲ್ಲಿ ಧಾನ್ಯಲಕ್ಷ್ಮಿ ನಲಿದಾಡುತ್ತಿರುವುದರಿಂದ ರೈತರ ಸುಖ-ಸಂತೋಷಗಳ ಆಮೋದ-ಪ್ರಮೋದಗಳ ಕಾಲವೇ ಈ ಸಂಕ್ರಾಂತಿ. ಹೌದು. ದುಡಿಮೆಯಿಂದ ಬಿಡುವಿನೆಡೆಗೆ ರೈತನ ಬದುಕು ಹೊರಳುವ ಶುಭವೇಳೆ ಈ ಸಂಕ್ರಾಂತಿ. ನಾಗರಿಕರ ದೃಷ್ಟಿ ಕೋನದಿಂದ ವಿವೇಚನೆ ಮಾಡುವಂಥದಾಗಿದ್ದರೆ, ಇದಕ್ಕಿಂತ ತೀರಾ ಭಿನ್ನವಾದದ್ದು ರೈತನ ದೃಷ್ಟಿ. ಸಂಕ್ರಾಂತಿ ಹಬ್ಬ ಶಿಷ್ಟ ಯೋಚಿಸುವ ಮಕರ ಸಂಕ್ರಮಣದ ಕಲ್ಪನೆಯೂ ಅಲ್ಲ; ನಾಗರಿಕರು ಆಚರಿಸುವ ಎಳ್ಳು ಬೀರುವ ಹಬ್ಬವೂ ಅಲ್ಲ. ಅದು ಅವನ ಇಡೀ ವರ್ಷದ ದುಡಿಮೆಗೆ ಭೂಮಿತಾಯಿ ಕೊಟ್ಟ ಬೆಳೆಯನ್ನು ಕಂಡು ಹಿಗ್ಗುವ ಸುಗ್ಗಿಹಬ್ಬ.
ಅನ್ನವನ್ನು ಬೆಳೆದುಕೊಡುವ ಭೂದೇವಿಯನ್ನು ಶ್ರದ್ಧೆಯಿಂದ ಭಕ್ತಿಯಿಂದ ಪೂಜಿಸಿ ಸಂಭ್ರಮಿಸಿ ಹಬ್ಬವನ್ನು ಆಚರಿಸುವಂತಹದ್ದು.
ಸಂಕ್ರಾಂತಿಯ ಮುನ್ನಾದಿನ ಕಣವನ್ನು ಸೆಗಣಿಯಿಂದ ಸಾರಿಸಿ ವಿಭೂತಿ ಬಿಡುವ ಶಾಸ್ತ್ರ ಮಾಡುತ್ತಾರೆ. ಅಂದರೆ ಬೂದಿಯಲ್ಲಿ ವ್ಯವಸಾಯೋಪಕರಣಗಳಾದ ನೇಗಿಲು, ಕುಂಟೆ, ಹಲುಬೆ, ಮೊರ, ಏಣಿ, ಕೊಂಗ, ಗೆರಸಿ,ವಂದ್ರಿ, ಮೆರ್ಕಡ್ಡಿ, ಒಡ್ಡಿನ ಕೋಲು, ಬಂಡಿ, ಬಸವಣ್ಣ, ಸೂರ್ಯ- ಚಂದ್ರ ಮುಂತಾದ ಚಿತ್ರಗಳನ್ನು ಕಣದ ತುಂಬ ಬಿಡಿಸುತ್ತಾರೆ.
ಮಕರ ಸಂಕ್ರಮಣದ ಹಿಂದಿನ ದಿನವನ್ನು ಭೋಗಿ ಎಂದು ಕರೆದು ಹಬ್ಬವನ್ನು ಆಚರಿಸುವ ಕ್ರಮ ಉತ್ತರ ಕರ್ನಾಟಕದಲ್ಲಿದೆ. ಈ ದಿನದಲ್ಲಿ ಮಹಿಳೆಯರು ಮಂಗಳಕರ ವಸ್ತುಗಳನ್ನು ಆಧರಿಸಿ ಬಾಗಿನಗಳನ್ನು ಕೊಡುತ್ತಾರೆ. ಮರುದಿನ ಸೂರ್ಯ ಮಕರ ರಾಶಿಗೆ ಪ್ರವೇಶಿಸುವ ಸಮಯವೇ ಸಂಕ್ರಮಣ ಒಳ್ಳೆಯ ಕಾಲ ಎಂದು ಭಾವಿಸಿದ್ದು, ಎಲ್ಲರೂ ಎಳ್ಳು ಚಟ್ಟನ್ನು ಮೈಗೆ ಹಚ್ಚಿಕೊಂಡು ಅಭ್ಯಂಜನ ಸ್ನಾನ ಮಾಡುವರು. ಸಂಕ್ರಾಂತಿ ಹಬ್ಬದ ಸವಿಯೂಟದಲ್ಲಿ ಎಳ್ಳು ಬೆಲ್ಲದ ಸಿಹಿತಿನಿಸುಗಳಿಗೆ ಹೆಚ್ಚಿನ ಪ್ರಾಶಸ್ತ್ಯ. ಈ ಶುಭದಿನದಲ್ಲಿ ಎಲ್ಲರೂ ಎಳ್ಳು ಬೆಲ್ಲವನ್ನು ತಿಂದು ಒಳ್ಳೆಯ ಮಾತನಾಡೋಣ’ ಎಂದು ಹೇಳುತ್ತಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿರುವ ಕದಬಳ್ಳಿಯಲ್ಲಿ ಸಂಕ್ರಾಂತಿಯನ್ನು ಬೇಟೆಯ ಹಬ್ಬವನ್ನಾಗಿ ಆಚರಿಸುತ್ತಾರೆ. ಇಲ್ಲಿರುವ ಕಾವೇಟಿ ರಂಗಸ್ವಾಮಿಯ ದೇವಾಲಯದಲ್ಲಿರುವ ರಂಗನಾಥನ ವಿಗ್ರಹದ ಅಕ್ಕಪಕ್ಕದಲ್ಲಿ ಎರಡು ನರಿಗಳು ಕಾವಲು ಕಾಯುತ್ತಿರುವಂತೆ ಕೆತ್ತಲಾಗಿದೆ. ಈ ದೇವರಿಗೂ ನರಿಗೂ ಏನು ಸಂಬಂದ ಎಂಬುದರ ಬಗ್ಗೆ ಯಾವ ವಿವರಣೆಯೂ ಎಲ್ಲಿಯೂ ಸಿಗುವುದಿಲ್ಲ ಕೆಲವು ಜನಪದ ಗೀತೆಗಳಲ್ಲಿ ಮಾತ್ರ ನದಿಯ ಪೂಜೆಯ ಪ್ರಸ್ತಾಪ ಕಂಡು ಬರುತ್ತದೆ. ಮಿಕ್ಕಂತೆ ಇದರ ಮೂಲ ನಿಗೂಢ.
ಸಂಕ್ರಮಣಕ್ಕೆ ಮೂರು ದಿನಗಳಿರುವಾಗ ಕದಬಳ್ಳಿ ಸಮೀಪದ ಹಳ್ಳಿಗಳ ಜನರು ದಕ್ಷಿಣ ದಿಕ್ಕಿನಲ್ಲಿ ಮೂರು ಒಡ್ಡು ಬಲೆಯನ್ನು ಉತ್ತರ ದಿಕ್ಕಿಗೆ ಒಂಬತ್ತು ಒಡ್ಡು ಬಲೆಯನ್ನು ಪಶ್ಚಿಮ ದಿಕ್ಕಿಗೆ ಆರು ಒಡ್ಡು ಬಲೆಯನ್ನು ಹಾಕುತ್ತಾರೆ. ಈ ಬಲೆಗಳಿಗೆ ಸಿಕ್ಕಿದ ನರಿ ಅಥವಾ ಇತರ ಯಾವುದೇ ಪ್ರಾಣಿಯನ್ನು ತಂದು ಕಾವೇಟಿ ರಂಗನ ಗುಡಿಯ ಹಿಂದೆ ಇರುವ ಚಿಕ್ಕರಥದ ಬೋನಿನಲ್ಲಿ ಕೂಡಿಡುತ್ತಾರೆ. ಇದು ಎರಡನೇ ದಿನದ ಕಾರ್ಯ. ಮೂರನೇ ದಿನವೇ ರಂಗನಾಥನ ಉತ್ಸವ. ಈ ದಿನಗಳಲ್ಲೆಲ್ಲ ಮಾಂಸದೂಟ ಪ್ರಧಾನವಾಗಿರುತ್ತದೆ. ಒಟ್ಟಾರೆ ಸಂಕ್ರಾಂತಿ ಎಲ್ಲ ಜನರ ಪಾಲಿಗೆ ಸಂಭ್ರಮದ ಹಬ್ಬವಾಗಿ ರೂಢಿಗತವಾಗಿ ಬಂದಿದೆ
ಮೈಸೂರು ಜಿಲ್ಲೆಯ ಕೊಡಗಿನ ಸೆರಗಿನ ಕೆಲವು ಊರುಗಳಲ್ಲಿ ಸಂಕ್ರಾಂತಿ ಎಂದರೆ ಅದು ಬೇಟೆ ಹಬ್ಬ. ಊರ ಜನರೆಲ್ಲರೂ (ಪಿರಿಯಾಪಟ್ಟಣ) ಆನೆ ಚೌಕೂರಿಗೆ ಹೋಗುವ ರಸ್ತೆಯಲ್ಲಿರುವ ಮುತ್ತುರಾಯ ಸ್ವಾಮಿ ದೇವಸ್ಥಾನಕ್ಕೆ ಬೆಳಿಗ್ಗೆ ಬಂದು ಪೂಜೆ ಮಾಡಿ ಬೇಟೆಗೆ ಹೋಗುತ್ತಾರೆ. ಅಂದು ಹೊಡೆದ ಪ್ರಾಣಿಗಳ ಮಾಂಸವನ್ನು ಎಲ್ಲರೂ ಪಾಲು ಮಾಡಿಕೊಂಡು ಅಡಿಗೆ ಮಾಡಿ ಹಬ್ಬ ಆಚರಿಸುತ್ತಾರೆ, ಆದರೆ ಬೇಟೆ ಆಡಲು ಇತ್ತೀಚಿನ ದಿನಗಳಲ್ಲಿ ಅವಕಾಶ ಇಲ್ಲದ್ದರಿಂದ ಈ ಪದ್ಧತಿ ಮರೆಯಾಗಿದೆ.
ಭಾರತದಾದ್ಯಂತ ಮಕರ ಸಂಕ್ರಾಂತಿಯನ್ನು ಆಚರಿಸಿದರೂ ದಕ್ಷಿಣ ಭಾರತದಲ್ಲಿ ತಮಿಳರಿಗೆ ಇದು ಹೊಸ ವರ್ಷಾರಂಭ ಮಾತ್ರವಲ್ಲ ಪೊಂಗಲ್ ಹಬ್ಬ ಎಂದು ಹೇಳುವ ಸುಗ್ಗಿಯ ಹಬ್ಬವೂ ಆಗಿದೆ, ಆಗತಾನೆ ಬಂದಿರುವ ಹೊಸ ಬೆಳೆಯಿಂದ ತಿಂಡಿ ತಿನಿಸುಗಳನ್ನು ಮಾಡಿ ಭೂದೇವಿಗೆ ಸಮರ್ಪಿಸಿ ತದನಂತರ ಪ್ರಸಾದ ರೂಪವಾಗಿ ಅದನ್ನು ಸ್ವೀಕರಿಸುವ ಕೃತಜ್ಞತೆಯ ಹಬ್ಬ
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…
ಬೆಳಗಾವಿ: ಸುವರ್ಣ ಸೌಧದಲ್ಲಿ ಗುರುವಾರ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ…