ಆಂದೋಲನ ಪುರವಣಿ

ತತ್ವಪದ: ಕನ್ನಡದ ಬದುಕಿನ ತುಂಬುಹೊಳೆ

ಯಾವುದೇ ರೀತಿಯ ಜಾತಿ ಸೂತಕಗಳಿಲ್ಲದ, ಲಿಂಗ ತಾರತಮ್ಯವಿಲ್ಲದ ಪ್ರಜಾಸತ್ತಾತ್ಮಕ ಆಶಯಗಳನ್ನು ಅನ್ವಯಿಸಿಕೊಂಡು ಸಮೂಹದಲ್ಲಿ ಕ್ರಿಯಾಶೀಲವಾಗಿರುವ ತತ್ವಪದಗಳು ಕನ್ನಡ ನಾಡಿನ ಅಸ್ಮಿತೆಯ ಭಾಗವಾಗಿವೆ. ಅವು ಈ ನೆಲದ ತತ್ವಚಿಂತನೆಯನ್ನು ನಿಸರ್ಗವಿವೇಕದ ಜೊತೆ ಬೆರೆಸುತ್ತ ಸಮೂಹದ ಚಿಂತನಾಕ್ರಮವನ್ನು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತಿವೆ. ನಮ್ಮ ನಡುವೆಯೇ ಇದ್ದರೂ ಶೈಕ್ಷಣಿಕ ವಲಯಕ್ಕೆ ಅಪರಿಚಿತವಾಗಿಯೇ ಉಳಿದಿರುವ, ಹೊರಗೇ ನಿಲ್ಲಿಸಿರುವ ತತ್ವಪದಗಳನ್ನು ಇನ್ನಾದರೂ ಒಳಗೆ ಕರೆದು ನಮ್ಮನ್ನು ಆವರಿಸಿರುವ ವಿಸ್ಮೃತಿಯಿಂದ ಹೊರಬರಬೇಕಿದೆ.

-ಎಸ್. ನಟರಾಜ ಬೂದಾಳು

ಕನ್ನಡ ನಾಡಿನ ಅನೇಕ ಪರಂಪರೆಗಳಲ್ಲಿ ತತ್ವಪದ ಪರಂಪರೆಯೂ ಒಂದು. ಈ ನೆಲದ ನಿತ್ಯ ಬದುಕಿನ ಭಾಗವಾಗಿರುವ ತತ್ವಪದಗಳು ಕೇವಲ ಕನ್ನಡ ಕಾವ್ಯದ ಒಂದು ಪ್ರಕಾರವಷ್ಟೆ ಅಲ್ಲ ಬದಲಿಗೆ ಇಲ್ಲಿನ ಜೀವನ ವಿಧಾನವನ್ನು ಗಾಢವಾಗಿ ಪ್ರಭಾವಿಸುತ್ತಿರುವ ಒಂದು ಸಾಧನಾ ಮಾರ್ಗ. ತತ್ವ ಮತ್ತು ಆಚರಣೆ ಎರಡೂ ಏಕೀರ್ಭವಿಸಿರುವ ಜೀವನ ವಿಧಾನವಾಗಿರುವ ತತ್ವಪದ ಪರಂಪರೆಯು ಸಾಮರಸ್ಯದ ಬದುಕೊಂದನ್ನು ಸಮೂಹಕ್ಕೆ ನೀಡುವ ಪ್ರಯತ್ನ ಮಾಡುತ್ತ ಬಂದಿದೆ. ಕನ್ನಡದ ಕಾವ್ಯ ಪರಂಪರೆಯಲ್ಲಿ ವಚನಗಳಂತೆ ತತ್ವಪದಗಳೂ ಸಮಾಜದ ಎಲ್ಲರ ಒಳಿತಿಗಾಗಿ ಶ್ರಮಿಸುತ್ತಿರುವ ಕಾವ್ಯಸಾಧನಾ ಮಾರ್ಗ.

ಪಾರಂಪರಿಕವಾದ ವೈದಿಕರ ಧಾರ್ಮಿಕ ಮತ್ತು ಸಾಮಾಜಿಕ ಯಾಜಮಾನ್ಯವನ್ನು ಮಾನ್ಯಮಾಡದ ಈ ಪರಂಪರೆಗಳು ವೇದ ಪ್ರಮಾಣವನ್ನು ತಿರಸ್ಕರಿಸುತ್ತವೆ. ವೈದಿಕ ಪರಂಪರೆಯು ಪ್ರಚೋದಿಸಿದ ವರ್ಣಾಶ್ರಮ ವ್ಯವಸ್ಥೆಯನ್ನೂ, ಜಾತಿ ವ್ಯವಸ್ಥೆಯನ್ನೂ ಕಟುವಾಗಿ ವಿರೋಧಿಸುತ್ತವೆ. ಮುಕ್ತಿ ಅಥವಾ ಮೋಕ್ಷವು ಎಲ್ಲರಿಗೂ ದೊರಕಲು ಸಾಧ್ಯವೆಂಬ ಸಮಾನತೆಯನ್ನು ಮುಂದಿಡುತ್ತವೆ. ಜ್ಞಾನಮಾರ್ಗದಿಂದ ಮುಕ್ತಿ ಸಾಧ್ಯವೆಂದು ನಂಬುತ್ತವೆ. ತಮ್ಮದೇ ರೀತಿಯ ಸ್ವಂತ ಪ್ರಯತ್ನಗಳಿಂದ ವಿಶ್ವದ ಸತ್ಯವನ್ನು ಯಾರಾದರೂ ಅರಿತುಕೊಳ್ಳಲು ಸಾಧ್ಯವೆಂದು ಸಾರುತ್ತವೆ. ಅವುಗಳಿಗೆ ತಮ್ಮ ಅರಿವಿನ ಪ್ರಚಾರದ ಹೊರತಾಗಿ ಯಾವುದೇ ಅಧಿಕಾರದ ಹಂಬಲವಿಲ್ಲ. ಇದು ಅಖಿಲಭಾರತ ವ್ಯಾಪ್ತಿಯ ಶ್ರಮಣಧಾರೆಗಳ ಸಂಬಂಧದಲ್ಲಿ ತತ್ವಪದಗಳ ಬಗೆಗೆ ನೀಡಬಹುದಾದ ಸ್ಥೂಲ ವಿವರಣೆ.

ಕರ್ನಾಟಕದ ಉದ್ದಗಲಕ್ಕೂ ಹರಡಿಹೋಗಿರುವ, ವಚನ ಪರಂಪರೆಗಿಂತಲೂ ವ್ಯಾಪಕವಾದ ಮತ್ತು ವಿಸ್ತಾರವಾದ ತತ್ವಪದಕಾರರ ಪರಂಪರೆಯಲ್ಲಿ ನೂರಾರು ತತ್ವಪದಕಾರರು ಇದ್ದಾರೆ. ಶಿಶುನಾಳ ಷರೀಫ, ಶಂಕರಾನಂದಯೋಗಿ, ಬಕ್ಕಪ್ಪಯ್ಯ, ನೀರಲಕೇರಿ ಬಸವಲಿಂಗಶರಣ, ಕೊಳ್ಳೂರ ಹುಸನಾಸಾಬ, ನಿಜಗುಣಶಿವಯೋಗಿ, ನಾಗಲಿಂಗಯೋಗಿ, ಹಾಗಲವಾಡಿ ಮುದ್ದುವೀರಸ್ವಾಮಿ, ಕೆಸ್ತೂರದೇವ, ಹೇರೂರು ವಿರುಪನಗೌಡ, ಗೂಗಲ್ಲು ಪರಪ್ಪಯ್ಯ, ಸರ್ಪಭೂಷಣ ಶಿವಯೋಗಿ, ಘನಮಠ ಶಿವಯೋಗಿ, ಹರಿಹರಗುರು, ಚೆನ್ನೂರ ಜಲಾಲ್ ಸಾಬ, ಸೋಮೆಕಟ್ಟೆ ಚೆನ್ನವೀರಸ್ವಾಮಿ, ಪರಮದೇವ, ಚಿದಾನಂದಾವಧೂತ, ಮಹಲಿಂಗರಂಗ, ನಾಯಕನಹಟ್ಟಿ ತಿಪ್ಪೇಸ್ವಾಮಿ, ಕೈವಾರ ನಾರಾಯಣಪ್ಪ, ಗಟ್ಟಿಹಳ್ಳಿ ಅಂಜನಪ್ಪ, ಕಡಕೋಳ ಮಡಿವಾಳಪ್ಪ, ಮುಪ್ಪಿನ ಷಡಕ್ಷರಿ, ತೆಲಗಬಾಳ ರೇವಪ್ಪ, ಕಡ್ಲಿವಾಡ ಸಿದ್ದಪ್ಪ, ಖೈನೂರ ಕೃಷ್ಣಪ್ಪ, ರುಕ್ನುದ್ದೀನ್ ಸಾಹೇಬ, ತಿಂತಿಣಿ ಮೋನಪ್ಪಯ್ಯ, ಕೊಡೇಕಲ್ ಬಸವಣ್ಣ, ಸಿರಗಾಪೂರ ಬಂಡೆಪ್ಪ, ಕೂಡಲೂರ ಬಸವಲಿಂಗ ಶರಣ, ಬಾಲಲೀಲಾ ಮಹಾಂತ ಶಿವಯೋಗಿ, ಹಾರಕೂಡ ಚೆನ್ನಬಸವ ಶಿವಯೋಗಿ, ಕುಕಡೊಳ್ಳಿ ಚೆನ್ನಮಲ್ಲಯ್ಯ, ಸಾವಳಗಿ ಮಹಮ್ಮದ ಸಾಬ, ಗೊಬ್ಬೂರು ಹಂಪಣ್ಣ, ಮತ್ತು ನೂರಾರು ಅಜ್ಞಾತ ತತ್ವಪದಕಾರರ ಸಾವಿರಾರು ತತ್ವಪದಗಳು ನಮ್ಮ ನಡುವೆ ಏಕತಾರಿ ಮತ್ತು ಕಂಜರಿಯ ಜೊತೆ ಝೇಂಕರಿಸುತ್ತಿವೆ.

ತತ್ವಪದಕಾರರ ತಾತ್ವಿಕತೆಯ ಸ್ವರೂಪ: ಭಾರತೀಯ ಚಿಂತನಾ ಕ್ರಮದಲ್ಲಿ ಪ್ರಮುಖವಾಗಿ ಎರಡು ಧಾರೆಗಳಿವೆ. ಒಂದು ವೈದಿಕ ಧಾರೆ, ಇನ್ನೊಂದು ಶ್ರಮಣ ಧಾರೆ. ಭಾರತೀಯ ಶ್ರಮಣಧಾರೆಗಳೆಂದು ಗುರುತಿಸುವ ಬೌದ್ಧ, ಜೈನ, ಆಜೀವಿಕ, ನಾಥ, ಕಾಳಾಮುಖ, ಅವಧೂತ, ಸಿದ್ಧ, ಸೂಫಿ, ವಚನಕಾರ ಮುಂತಾದ ಧಾರೆಗಳ ತಾತ್ವಿಕತೆಯ ಅನ್ವಯವನ್ನು ಕಾಣಬಹುದಾದ ತತ್ವಪದಕಾರ ಪರಂಪರೆಯು ಇಂದಿಗೂ ಜೀವಂತವಾಗಿರುವ ಪರಂಪರೆ. ಸಿದ್ಧರು, ಅವಧೂತರು, ಆರೂಢರು, ಅಚಲಿಗರು, ಗುರುಮಕ್ಕಳು, ಗುರುಭಕ್ತಿ ತೆಗೆದುಕೊಂಡವರು, ಶಿವಯೋಗಿಗಳು, ಬಯಲ ಸಾಧಕರು, ಅದ್ವಯ ಸಾಧಕರು ಮುಂತಾಗಿ ಕರೆಸಿಕೊಳ್ಳುವ ಈ ಸಾಧಕರಲ್ಲಿ ಅನೇಕ ಚಿಂತನಾ ಪ್ರಸ್ಥಾನಗಳಿವೆ.

ಸಿದ್ಧ ಪರಂಪರೆಯ ನೇರ ಪ್ರಭಾವದಲ್ಲಿ ರೂಪುಗೊಂಡ ತತ್ವಪದಕಾರರ ಪಂಥಕ್ಕೆ ತಾತ್ವಿಕತೆಯ ದೃಷ್ಟಿಯಿಂದ ಅಖಿಲ ಭಾರತದ ವ್ಯಾಪ್ತಿಯಿದೆ. ಭಾರತದ ಉದ್ದಗಲಗಳಿಂದ ಮೂಡಿ ಬಂದ ಈ ಸಿದ್ಧಪರಂಪರೆ ಇಂದಿಗೂ ಸಮಾಜದಲ್ಲಿ ಅತ್ಯಂತ ಪ್ರಭಾವೀ ಪಂಥವಾಗಿದ್ದು ಬಹುಸಂಖ್ಯಾತ ಅನುಯಾಯಿಗಳನ್ನು ಪಡೆದಿದೆ. ಸಿದ್ಧರನ್ನು ಭಾರತದ ಶ್ರಮಣಧಾರೆಗಳ ಸಂಗಮವೆಂದು ಕರೆದರೂ ಸರಿಯೆ. ಭಾರತೀಯ ಶ್ರಮಣಪರಂಪರೆಯನ್ನು ಬುದ್ಧಪೂರ್ವಕಾಲದಿಂದಲೂ ಗುರುತಿಸಬಹುದು.

ತತ್ವಪದಕಾರರ ಪರಂಪರೆಯು ಜೀವಂತ ಪರಂಪರೆಯಾಗಿರುವುದರಿಂದ ಈ ಪಂಥದ ಆಚರಣೆ, ವಿಧಿನಿಷೇಧಗಳು ಮತ್ತು ಯಥೇಚ್ಛವಾಗಿ ದೊರಕುವ ಸಾಹಿತ್ಯವು ಈ ಪಂಥದ ತಾತ್ವಿಕತೆಯನ್ನು ಅರಿತುಕೊಳ್ಳಲು ಸಹಾಯ ಮಾಡುತ್ತವೆ. ಒಂದೊಂದು ಧಾರೆಯ ತಾತ್ವಿಕ ನಿಲುವುಗಳು, ಆಚರಣೆಗಳು, ಅಭಿವ್ಯಕ್ತಿ, ಆಯಾ ಪಂಥಗಳ ವಿಶಿಷ್ಟ ಸಂಗತಿಯಾಗಿರುತ್ತದೆ. ಈ ಧಾರೆಗಳ ನಡುವೆ ಅನೇಕ ಸಮಾನ ಅಂಶಗಳಿರುವುದಾದರೂ ತಮ್ಮ ತಮ್ಮ ಧಾರೆಗಳ ಪ್ರತ್ಯೇಕತೆಯನ್ನು ಎಚ್ಚರದಿಂದ ಕಾಯ್ದುಕೊಳ್ಳುತ್ತಾರೆ. ಈ ಧಾರೆಗಳ ಪ್ರಮುಖ ಸಮಾನ ತಾತ್ವಿಕಾಂಶಗಳನ್ನು ಹೀಗೆ ಪಟ್ಟಿಮಾಡಬಹುದು:

  1. ಇವೆಲ್ಲ ಗುರುಪಂಥಗಳು. ಇಲ್ಲಿ ಗುರುವೇ ಸರ್ವಸ್ವ. ಗುರುವಿಗಿಂತ ಮೇಲೆ ಮತ್ಯಾರೂ ಇಲ್ಲ. ದೇವರೇನಾದರೂ ಇರುವುದಾದರೆ ಅ
    ವನೂ ಗುರುವಿನ ರೂಪದಲ್ಲಿಯೇ ಬರಬೇಕು. ಗುರು ಶಿವ(ಮಂಗಲ) ಸ್ವರೂಪಿಯಾದವನು. ಅರಿವಿನ ಮೂರ್ತರೂಪ. ವ್ಯಕ್ತಿರೂಪದ ಗುರು ಸಂಕೇತಮಾತ್ರ.
    ನಿಜವಾಗಿ ಅರಿವೇ ಗುರು. ಒಮ್ಮೆ ಗುರುವಿನಿಂದ ದೀಕ್ಷೆ ಪಡೆದ ಸಾಧಕನಿಗೆ ನಿರಂತರವಾಗಿ ಅವನ ಮಾರ್ಗದರ್ಶನ ಇರಲೇಬೇಕೆಂದಿಲ್ಲ. ಸಾಧಕನಾಗಿ ಶಿಷ್ಯನೂ ಸ್ವತಂತ್ರನೇ. ಗುರುವನ್ನು ಸ್ತುತಿಸುವ ನೂರಾರು ತತ್ವಪದಗಳನ್ನು ನೋಡಬಹುದು.
  2. ತತ್ವಪದಕಾರರು ನುಡಿದಂತೆ ನಡೆದು ಬದುಕುವವರು. ಕೇವಲ ಮಾತಿನ ಜ್ಞಾನವನ್ನು ಅವರು ಜ್ಞಾನವೆಂದು ಒಪ್ಪುವುದಿಲ್ಲ. ಅವನ್ನು ಅವರು ನಡೆಯಲ್ಲಿ ಪಾಲಿಸಿ ತೋರುತ್ತಾರೆ.
  3. ತತ್ವಪದಕಾರರಿಗೆ ಧರ್ಮದ, ಜಾತಿಯ, ಭಾಷೆಯ ಗಡಿಗಳಿಲ್ಲ. ಜಾತಿ-ಧರ್ಮದ ಎಲ್ಲೆಗಳನ್ನು ದಾಟಿದ ವಿಶ್ವಮಾನವ ಪ್ರಜ್ಞೆ ಅವರದ್ದು.
  4. ತತ್ವಪದಕಾರರಿಗೆ ‘ಸಂಸಾರ’ ನಿಷಿದ್ಧವಲ್ಲ. ಅವರೂ ಎಲ್ಲರಂತೆ ಕುಟುಂಬಿಗಳು. ಕುಟುಂಬದ ಪ್ರೀತಿ-ವಿಶ್ವಾಸಗಳನ್ನು ಗೌರವಿಸುತ್ತಾರೆ. ಸಂಸಾರದೊಳಗಿದ್ದೇ ಪರಮಾರ್ಥವನ್ನು ಕಾಣಬಹುದೆಂದು ನಂಬುತ್ತಾರೆ.
  5. ಗುರುವಿನಿಂದ ದೀಕ್ಷಾಬದ್ಧರಾದ ಸಾಧಕರು ನಿರಂತರ ಸಾಧನೆಯ ಹಾದಿಯಲ್ಲಿರುತ್ತಾರೆ. ನಿಗದಿತ ಸಮಯಗಳಲ್ಲಿ ನಿಗದಿತ ಸ್ಥಳಗಳಲ್ಲಿ ಅವರೆಲ್ಲ ಒಟ್ಟಿಗೇ ಸೇರಿ ತತ್ವಚಿಂತನೆ ನಡೆಸುತ್ತಾರೆ.
  6. ಸಾವಿನ ಸಂದರ್ಭದಲ್ಲಿ ದೀಕ್ಷೆಪಡೆದ ಸಾಧಕರೆಲ್ಲ ಸೇರುತ್ತಾರೆ. ಕುಲ-ಜಾತಿಯ ಕಟ್ಟುಕಟ್ಟಳೆ ಇರುವುದಿಲ್ಲ. ಸಾವನ್ನು ಶೋಕವನ್ನಾಗಿ ಆಚರಿಸುವುದಿಲ್ಲ. ಬದಲಿಗೆ ಒಂದೆಡೆ ಕುಳಿತು ತತ್ವ ಹಾಡುತ್ತಾರೆ. ಜಾತ್ಯತೀತವಾದ ಜೀವಂತ ಪರಂಪರೆಯೊಂದು ಈ ನೆಲದಲ್ಲಿ ಇದೆ ಎನ್ನುವುದಾದರೆ ಅದು ತತ್ವಪದಕಾರರ ಪರಂಪರೆ ಮಾತ್ರ. ವರ್ಷಕ್ಕೊಮ್ಮೆ ಅಥವಾ ನಿರ್ದಿಷ್ಟ ಸಮಯದಲ್ಲಿ ಗುರುಶಿಷ್ಯರೆಲ್ಲ ಸೇರಿ ಗುರುಕಾರ್ಯವನ್ನು ನಡೆಸುತ್ತಾರೆ.
  7. ತತ್ವಪದಗಳು ಸಂಗೀತರಚನೆಗಳು. ಕೆಲವು ತತ್ವಪದಗಳಿಗೆ ನಿರ್ದಿಷ್ಟ ರಾಗ-ತಾಳಗಳ ಸೂಚನೆಯಿರುತ್ತದೆ. ಒಂದೇ ಹಾಡಿಗೆ ಅನೇಕ ಪಠ್ಯಗಳಿರಬಹುದು. ಸಾಮಾನ್ಯವಾಗಿ ತತ್ವಪದಗಳಿಗೆ ಅಂಕಿತವಿರುತ್ತದೆ.
  8. ತತ್ವಪದಕಾರರು ‘ಅತ್ಯಾಶ್ರಮಿಗಳು’. ಅವರು ವರ್ಣಾಶ್ರಮ ವ್ಯವಸ್ಥೆಯನ್ನು, ಜಾತಿಸೂತಕಗಳನ್ನು ಮಾನ್ಯ ಮಾಡುವುದಿಲ್ಲ. ಲಿಂಗ ಅಸಮಾನತೆಯಾಗಲೀ, ಮುಟ್ಟು ಮೈಲಿಗೆಯಾಗಲೀ ಇಲ್ಲ. ಇಲ್ಲಿ ಎಲ್ಲರೂ ಸಮಾನರು. ಕಡಕೋಳ ಮಡಿವಾಳಪ್ಪನ ಈ ತತ್ವಪದ ನಾಡಿನ ಉದ್ದಗಲಕ್ಕೂ ಅನುರಣಿಸುತ್ತದೆ:

ಮುಡಚಟ್ಟಿನೊಳು ಬಂದು ಮುಟ್ಟೀ ತಟ್ಟೀ ಎನುತೀರ
ಮಡಚಟ್ಟು ಎಲ್ಯಾದ್ಹೇಳಣ್ಣ
ಮುಟ್ಟಾದ ಮೂರು ದಿನಕೆ ಹುಟ್ಟಿ ಬಂದೀದಿ ನೀನು
ಮುಡಚಟ್ಟು ಎಲ್ಯಾದ್ಹೇಳಣ್ಣ ॥ ಪ ॥

ತೊಗಲೊಳು ತೊಗಲೊಕ್ಕು ತಗಲಿ ಬಂದವ ನೀನು
ತಗಲ ಮಾತಾಡುವದೇನಣ್ಣ
ಇದರ ಬಗಿಯ ತಿಳಿಯದೆ ವಗದು ಮಾತನಾಡಿದರೆ
ನಗಿಗೇಡಿ ಕಾಣುತಾದಣ್ಣ ॥ ೧ |

. . . . . .. .

ಸೂಸಲಾಡುವ ದೇಹ ಸೋಸಿ ನೀರವ ಮಾಡಿ
ಮಡಿ ಮಾಡಿಕೊಳ್ಳಬೇಕಣ್ಣ
ನಮ್ಮ ಧೀರ ಮಹಾಂತೇಶನ ಬಿಡದೆ ಕೊಂಡಾಡಿದರೆ
ಕಡಿತನಕ ಮಡಿಯಾಗುವದಣ್ಣ ॥೫॥

ಭಾಷೆ, ಮೀಮಾಂಸೆಗೆ ಹೊಸ ನಡೆ: ವಚನ ಮತ್ತು ತತ್ವಪದಗಳಲ್ಲಿನ ಬೆಡಗಿನ ಪ್ರಯೋಗವನ್ನು ಇದುವರೆಗೆ ‘ಧ್ವನಿ’ ಪ್ರಸ್ಥಾನದ ಹಿನ್ನೆಲೆಯಲ್ಲಿ ಚರ್ಚಿಸುತ್ತಿರುವುದನ್ನು ನೋಡಬಹುದು. ಆದರೆ ನಿರಸನ ಪ್ರಕ್ರಿಯೆಯನ್ನು ತನ್ನ ಮಾರ್ಗವಾಗಿಸಿಕೊಂಡ ತತ್ವಪದಕಾರರ ಪರಂಪರೆಗೆ ಭಾಷೆ ಅನೇಕ ಮಿತಿಗಳನ್ನು ಒಡ್ಡಿತು. ರಚನೆಗಳನ್ನಷ್ಟೇ ನುಡಿದು ಗೊತ್ತಿರುವ ಭಾಷೆಗೆ ನಿರಚನೆಯನ್ನು ನುಡಿಯಲು ಕಲಿಸುವ ಜವಾಬ್ದಾರಿ ಕೂಡ ಶ್ರಮಣಧಾರೆಗಳ ಮೇಲೆ ಬಿತ್ತು. ಹಾಗಾಗಿ ಶ್ರಮಣಧಾರೆಗಳು ಜಾಡಿಗೆ ಬಿದ್ದಿದ್ದ ಭಾಷೆಯನ್ನು ಚಲನಶೀಲವಾಗಿಸಿ ಭಿನ್ನದಾರಿ ಹಿಡಿಯುವಂತೆ ಮಾಡಲು ಸಂಧಾಭಾಷೆ, ಉಲಟ್ ಭಾಂಸಿ, ಬೆಡಗು ಮುಂಡಿಗೆಗಳು ಮುಂತಾದ ಪ್ರಯೋಗಗಳನ್ನು ಮಾಡಿದರು. ಅದಕ್ಕಾಗಿ ಹೊಸ ರೂಪಕಗಳ ಜಗತ್ತನ್ನು ಅನಾವರಣ ಮಾಡಿದರು. ಹೀಗೆ ಭಾಷೆಗೆ ಹೊಸ ನಡಿಗೆಯನ್ನು ಕಲಿಸಿ ತಮ್ಮ ದಾರಿಗೆ ಅದನ್ನು ಒಗ್ಗಿಸಿಕೊಳ್ಳುವ ಕೆಲಸವನ್ನೂ ಅವರು ಮಾಡಬೇಕಾಯಿತು. ಭಾಷೆ ಮತ್ತು ಭಾಷೆಯಲ್ಲಿನ ಅಭಿವ್ಯಕ್ತಿ ಮಾತ್ರವೇ ಜ್ಞಾನದ ಮಾಧ್ಯಮವಾಗಿ ಪ್ರತಿಷ್ಠಾಪಿತವಾಗಿದ್ದುದನ್ನು ತತ್ವಪದಕಾರರು ಪ್ರಶ್ನಿಸಿ ಕಸುಬು ಮತ್ತು ಕೌಶಲವನ್ನು ಜ್ಞಾನದ ಮಾಧ್ಯಮವಾಗಿ ಪರಿಗಣಿಸಿದರು. ಶರೀಫನ ಈ ತತ್ವಪದ ಕಸುಬು ಮತ್ತು ಕೌಶಲವನ್ನು ಜ್ಞಾನದ ಮಾಧ್ಯಮವನ್ನಾಗಿ ಕಾಣುತ್ತದೆ.

ಚಿನ್ನ ಎಂಬುವ ಮಣ್ಣನು ತರಿಸಿ
ತನು ಎಂಬುವ ನೀರನು ಹರಿಸಿ
ಮನ ಎಂಬುವ ಹುದಲನು ಕಲಸಿ
ಗುಣ ಎಂಬುವ ಸೂಸನು ಹಾಕಿ

ಹಲವು ತೋಟದ ಹೂಗಳು: ಕರಾವಳಿಯ ಐದಾರು ಜಿಲ್ಲೆಗಳ ಹೊರತಾಗಿ ಕರ್ನಾಟಕದ ಎಲ್ಲ ಭಾಗಗಳಲ್ಲಿಯೂ ಮತ್ತು ಗಡಿನಾಡಿನ ಭಾಗಗಳಲ್ಲಿ ಕರ್ನಾಟಕದಾಚೆಗೂ ಕನ್ನಡ ತತ್ವಪದಗಳು ವಿಸ್ತರಿಸಿಕೊಂಡಿವೆ. ಹಾಗೆಯೇ ತತ್ವಪದಕಾರರ ಪರಂಪರೆ ಕರ್ನಾಟಕಕ್ಕೆ ಸೀಮಿತವಾಗಿರುವ ಪ್ರಕಾರವಲ್ಲ. ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರ ಗಳಲ್ಲಿ ತತ್ವಪದಗಳಿರುವುದರಿಂದ ಈ ನಾಡಿನ ಭಾಷೆಗಳೊಡನೆ ಕನ್ನಡ ತತ್ವಪದಗಳ ಕೊಳು-ಪಡೆ ನಡೆದಿದೆ. ತೆಲುಗು, ತಮಿಳು, ಮರಾಠಿ ಮತ್ತು ಉರ್ದು ತತ್ವಪದಗಳು ಕನ್ನಡನಾಡಿನೊಳಕ್ಕೂ, ಕನ್ನಡದ ತತ್ವಪದಗಳು ಈ ಸೋದರ ನೆಲದೊಳಕ್ಕೂ ಹೊಕ್ಕು ಬಳಕೆ ಮಾಡಿವೆ. ಇದೊಂದು ರೀತಿಯ ಗುಪ್ತಪಂಥವಾಗಿರುವುದರಿಂದ ಮುಖ್ಯವಾಹಿನಿಯೆನಿಸಿ ಕೊಳ್ಳದೆ ಅಜ್ಞಾತವಾಗಿ ಉಳಿದಿದೆ. ನಾಡಿನಾದ್ಯಂತ ಸಾವಿರಾರು ಗದ್ದುಗೆಗಳು, ಹಾಳು ಮಂಟಪಗಳು, ಗುಡ್ಡಬೆಟ್ಟಗಳು, ತತ್ವಪದಕಾರರ ತಾಣಗಳಾಗಿವೆ. ಭಾರತೀಯ ಅನುಭಾವ ಪರಂಪರೆಯ ವಾರಸುದಾರಿಕೆ ಇರುವುದು ಇಂದೂ ಜೀವಂತವಾಗಿರುವ ತತ್ವಪದ ಪರಂಪರೆಗೆ ಎನ್ನುವುದಂತೂ ನಿಶ್ಚಿತವಾದುದು.

ಬಯಲಲ್ಲಿ ಇಟ್ಟ ಬುತ್ತಿ – ವಿಶ್ವಮಾನವ ಪ್ರಜ್ಞೆ: ಸಾಧಕ ಮಾರ್ಗವನ್ನು ಕುರಿತ ಅವರ ನಿಲುವುಗಳು ಅನೇಕ ರೂಪಕಗಳ ಮೂಲಕವೂ ವ್ಯಕ್ತವಾಗುತ್ತವೆ. ಈ ಮಾರ್ಗಕ್ಕೆ ಪ್ರವೇಶ ಹೇಗೆ? ಯಾರಿಗೆ? ಎಂಬ ಪ್ರಶ್ನೆಗೆ ತತ್ವಪದಕಾರರಿಂದ ಸಿಕ್ಕ ಉತ್ತರ ರೂಪದ ರೂಪಕ ಇದು: ಇದು ಗುರು ಕಟ್ಟಿಕೊಟ್ಟ ಬುತ್ತಿ; ಬಯಲಲ್ಲಿ ಇಟ್ಟ ಗಂಟು. ಯಾರಾದರೂ ಬರಬೈದು, ಬುತ್ತಿ ಬಿಚ್ಚಬೈದು, ಉಣ್ಣಬೈದು ಇದು ಎಲ್ಲರಿಗೂ ಮುಕ್ತವಾಗಿ ತೆರೆದಿರುವ ದಾರಿ. ಆದರೆ ಈ ದಾರಿಗೆ ಕಾಲಿಡುವ ಮುನ್ನ ಕಳೆದುಕೊಳ್ಳುವುದರ ಮೂಲಕ ಪಡೆದುಕೊಳ್ಳಬೇಕಾದ ಅರ್ಹತೆಯೊಂದಿದೆ. ಇಲ್ಲಿ ಎಲ್ಲ ಪೊಳ್ಳು ಸಂರಚನೆಗಳೂ ಕ್ಷಣಾರ್ಧದಲ್ಲಿ ಕಳಚಿ ಬೀಳುತ್ತವೆ. ದೂರದ ಪ್ರಯಾಣದಲ್ಲಿ ಜಾತಿ ಕುದುರೆಯೊಂದು ಮೆತ್ತಿಸಿಕೊಂಡು ಬಂದ ಧೂಳನ್ನು ಒಂದು ಸಾರಿ ಝಾಡಿಸಿ ಕೊಡವಿದಂತೆ, ಇದು ಜಾತಿ ಧರ್ಮ ಮುಂತಾದ ಎಲ್ಲ ತಾರತಮ್ಯಗಳಿಂದ ಬಿಡುಗಡೆಗೊಂಡ ವಿಶ್ವಮಾನವ ಪ್ರಜ್ಞೆಯು ಅನಾವರಣವಾಗುವ ಮಾರ್ಗ.

andolana

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

9 mins ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

37 mins ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

2 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

2 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

3 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

4 hours ago