ಆಂದೋಲನ ಪುರವಣಿ

ಹಿಮಾಲಯ ಬೆನ್ನೇರಿದ ಮೈಸೂರು ಸೈಕಲ್ ನಾರಿಯರು

• ನಂದಿನಿ ಎನ್.
ಹಚ್ಚ ಹಸಿರಿನ ಪಚ್ಚೆ ಪೈರು ಒಂದೆಡೆ, ಜುಳು ಜುಳು ಹರಿವ ತೊರೆಯೊಂದೆಡೆ, ಮಧ್ಯೆ ಮಲಗಿದ, ನೇರ ಎನ್ನಬಹುದಾದ ಕೆಂಪನೆಯ ಕಾಲುದಾರಿಯ ತುಸು ಇಳಿಜಾರಿನಲ್ಲಿ, ಎಳೆ ಬಿಸಿಲ ಸೀಳಿ ಬರುವ ತಂಪು ಗಾಳಿಗೆ ಕಣ್ಮುಚ್ಚಿ, ಆಕಾಶಕೆ ಮುಖವೊಡ್ಡಿ, ಆ ಸುಂದರ ಕ್ಷಣದ ಅನುಭೂತಿಯಷ್ಟೂ ನನಗೇ ಸಿಗಬೇಕೆನ್ನುವ ಆಸೆಯಲ್ಲಿ ಸೈಕಲ್ಲಿನ ಹಿಡಿಯನ್ನು ಬಿಟ್ಟು ಥೇಟ್ ಶಾರುಖ್ ಖಾನ್ ಸ್ಟೈಲ್‌ನಲ್ಲಿ ಕೈ ಆಗಲಿಸಿ ಭರದಿಂದ ಮುನ್ನುಗ್ಗುವಾಗ ಸಿಗುವ ಆನಂದಕ್ಕೆ ಪಾರವೇ ಇಲ್ಲ!

ವೃತ್ತಿಯಲ್ಲಿ ಮಕ್ಕಳ ದಂತ ವೈದ್ಯೆ ಡಾ.ವೃಂದ, ತನ್ನ ಈ ಸೈಕ್ಲಿಂಗ್‌ನ ಅನುಭವವನ್ನು ವಿವರಿಸುವಾಗ ಮನದಲ್ಲಿದ್ದ ತೀರದ ಉತ್ಸಾಹ ಎದ್ದುಕಾಣುತ್ತಿತ್ತು. ಕ್ರೀಡೆಯಲ್ಲಿ ಅತೀವ ಆಸಕ್ತಿ ಇದ್ದು, ಕೂಡು ಕುಟುಂಬದ ನಿರ್ವಹಣೆಯಲ್ಲಿ ಸಮಯ ಹೊಂದಿಸುವುದೇ ಕಷ್ಟವಿದ್ದರೂ, ತನಗಾಗಿ ಕೊಂಚ ಕಾಲ ಸೈಕ್ಲಿಂಗ್‌ನಲ್ಲಿ ತೊಡಗಿಸಿಕೊಂಡಿರುವ ಗೃಹಿಣಿ ವೀಣಾ ಅಶೋಕರದ್ದೂ ಕೂಡ ಇದೇ ಅನುಭವ. ಈ ರೀತಿ ವ್ಯಾಯಾಮಕ್ಕೆ, ಒತ್ತಡ ನಿವಾರಣೆಗೆ ಎಂದು ಸೈಕಲ್ ತುಳಿಯಲು ಶುರು ಮಾಡಿ, ಈಗ ಸೈಕ್ಲಿಂಗ್‌ನಲ್ಲಿ ಸಾಕಷ್ಟು ಸಾಧನೆ ಮಾಡಿರುವ ಮೈಸೂರಿನ ಬಹಳಷ್ಟು ಮಹಿಳೆಯರಲ್ಲಿ ಇವರೀರ್ವರೂ ಇದ್ದಾರೆ.

ಸೈಕ್ಲಿಂಗ್ ಅನ್ನು ಹವ್ಯಾಸಕ್ಕಾಗಿ ಮಾಡುವುದು ಬೇರೆ ಮತ್ತು ವೃತ್ತಿಪರವಾಗಿ ಅನುಸರಿಸುವುದು ಬೇರೆ! ಹವ್ಯಾಸ ಹೆಚ್ಚು ಬೇಡದು, ಹಾಗೇ ವೃತ್ತಿಯ ಬೇಡಿಕೆ ನೀಗದು! ಅವಶ್ಯಕತೆಗೆ ತಕ್ಕಂತೆ ಐದು ಸಾವಿರ ರೂ.ಗಳಿಂದ ಲಕ್ಷಗಳ ರೂ. ಗಳವರೆಗೂ ಸೈಕಲ್‌ಗಳು ಲಭ್ಯವಿವೆ. ಇದರ ಜೊತೆಗೆ ಅದಕ್ಕಾಗಿಯೇ ಬೇಕಾಗುವ ಉಡುಪುಗಳು, ಶಿರಸ್ತ್ರಾಣ, ಶೂ, ಕಾಲುಚೀಲ, ನೀರಿನ ಬಾಟಲಿ, ಸೈಕಲ್ ನಿರ್ವಹಣೆ …ಹೀಗೆ ಅನೇಕ ಅವಶ್ಯಕತೆಗಳಿವೆ. ಹಾಗಾಗಿ ಹವ್ಯಾಸಕ್ಕಲ್ಲದೆ ವೃತ್ತಿಯಾಗಿ ಇದನ್ನು ಸ್ವೀಕರಿಸಿದಲ್ಲಿ ಜೇಬಿಗೆ ಸ್ವಲ್ಪ ಭಾರವಾಗುವುದೂ ದಿಟ ! ಇದರೊಂದಿಗೆ ಫಿಟ್ಟೆಸ್ ಹೆಸರಿನಲ್ಲಿ ನಾಲಿಗೆಯ ಚಪಲಕ್ಕೆ ಕಡಿವಾಣ ಬೀಳುವ ಭಯವೂ ಇದೆ ! ಈ ಆರಂಭಿಕ ತೊಡಕುಗಳನ್ನು ಮೀರಿದರೆ ಅವಕಾಶಗಳು ಅಪರಿಮಿತ!

ವರ್ಷವಿಡೀ ಹಲವಾರು ಸಂಸ್ಥೆಗಳು ಒಂದಿಲ್ಲೊಂದು ಸೈಕ್ಲಿಂಗ್ ಕಾರ್ಯಕ್ರಮವನ್ನು ಆಯೋಜಿಸುತ್ತವೆ. ಸ್ಥಳೀಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಗಳಲ್ಲದೆ ಅಂತರರಾಷ್ಟ್ರೀಯ ಮಟ್ಟದ ಸೈಕ್ಲೋಥಾನ್‌ಗಳೂ ಕೂಡ ಸಾಕಷ್ಟು ಸಂಖ್ಯೆಯಲ್ಲಿ ಆಯೋಜಿಸಲ್ಪಡುತ್ತವೆ. ಭಾಗವಹಿಸುವವರಲ್ಲಿ ಈ ಅವಕಾಶಗಳು ಹೊಸ ಸ್ನೇಹವನ್ನು, ಅವಿಸ್ಮರಣೀಯ ಅನುಭವವನ್ನು ಮತ್ತು ಆತ್ಮವಿಶ್ವಾಸವನ್ನು, ವೃದ್ಧಿಸುವುದರಲ್ಲಿ ಸಂದೇಹವೇ ಇಲ್ಲ!

ಮೈಸೂರಿನ ಮಟ್ಟಿಗೆ ಹೇಳುವುದಾದರೆ, ಈ ಶತಮಾನ ಕಂಡ ಅತ್ಯಂತ ಕೆಟ್ಟ ಜಾಗತಿಕ ಸೋಂಕು ಕೊರೊನಾ ದಿನಗಳಲ್ಲಿ ಸಾರ್ವಜನಿಕರಲ್ಲಿ ಹೆಚ್ಚು ಆರೋಗ್ಯ ಕಾಳಜಿ ಮೂಡಿದ್ದಲ್ಲದೆ, ಸೈಕ್ಲಿಂಗ್ ಮಾಡುವವರ ಸಂಖ್ಯೆ ಗಣನೀಯವಾಗಿ ಏರಿತು.

ಅದರಲ್ಲೂ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಸೈಕಲ್ ತುಳಿಯಲು ಶುರು ಮಾಡಿದ್ದು ಗಮನಾರ್ಹ. ದೈಹಿಕ ಸದೃಢತೆಯ ಜೊತೆಗೆ ಆತ್ಮವಿಶ್ವಾಸವನ್ನೂ ಹೆಚ್ಚಿಸುವ ಸೈಕ್ಲಿಂಗ್ ಕಲಿಸಲು ಮೈಸೂರಿನಲ್ಲಿ ಉತ್ತಮ ತರಬೇತುದಾರರಿರುವ ಕಾರಣ ಕೊರೊನಾ ಬಳಿಕ ತಂತಮ್ಮ ವೃತ್ತಿಗೆ ಮರಳಿದರೂ ಈ ಮಹಿಳೆಯರು ಸೈಕ್ಲಿಂಗ್ ಅನ್ನು ಮರೆಯಲಿಲ್ಲ! ಮೈಸೂರಿನ ಹಲವಾರು ಸೈಕ್ಲಿಂಗ್ ಕಾರ್ಯಕ್ರಮಗಳಲ್ಲಿ ಇವರ ಹಾಜರಿ ಖಚಿತ.

ಹಿಮಾಲಯದ ರುದ್ರರಮಣೀಯ ಪ್ರಕೃತಿಯ ಮಡಿಲಲ್ಲಿರುವ ಮನಾಲಿ – ಲೇಹ್ – ಕಾರದೊಂಗ್ಲಾ ಪಾಸ್ ರಸ್ತೆಯನ್ನು ಕ್ರಮಿಸುವುದು ಪ್ರತೀ ಸೈಕ್ಲಿಸ್ಟ್‌ನ ಕನಸು. ಆದರೀ ಕನಸನ್ನು ನನಸಾಗಿಸಲು ಮೈಯನ್ನು ಹುರಿಗಟ್ಟಿಸುವ ಜೊತೆಗೆ ಮಾನಸಿಕವಾಗಿಯೂ ಸದೃಢರಾಗುವುದು ಆವಶ್ಯಕ. ಕುಟುಂಬ ಮತ್ತು ಸ್ನೇಹಿತರ ಬೆಂಬಲದ ಜೊತೆಗೆ ಸಮುದಾಯದ ಪ್ರೋತ್ಸಾಹವೂ ಮಹಿಳಾ ಸೈಕ್ಲಿಸ್ಟ್‌ಗಳಿಗೆ ಮುಖ್ಯವಾಗುತ್ತದೆ. ಇಂತಹ ಅತಿಪ್ರಯಾಸದ ದೂರವನ್ನು ನಮ್ಮ ಮೈಸೂರಿನ ಕೆಲ “ಛಲದಂಕ ಮಲ್ಲಿ’ಯರು ಹಠ ತೊಟ್ಟು ಕ್ರಮಿಸಿ, ಸಾಧಿಸಿ ತೋರಿದ್ದಾರೆ!

ವೃತ್ತಿ-ಮನೆ- ಮಕ್ಕಳ ಜೊತೆಗೆ ಅನಾಯಾಸವಾಗಿ ತಮ್ಮ ಪ್ರವೃತ್ತಿಯನ್ನು ಮುಂದುವರಿಸುವುದಲ್ಲದೆ ಅದರಲ್ಲಿ ಸಾಧಿಸಿರುವುದು ಉಳಿದ ಮಹಿಳೆಯರಿಗೆ ಪ್ರೇರಣೆಯಾಗಬಹುದೇ? ಎಲ್ಲರಿಗೂ ಬರಲಿರುವ ಮಹಿಳಾ ದಿನದ ಶುಭಾಶಯಗಳು !!

 

andolana

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

9 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

10 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

10 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

11 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

11 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

11 hours ago