ಮಹಿಳೆ ಸಬಲೆ

ಹೆಣ್ಣಣಾದ ಗಂಡು ಬರೆದ ಮನದ ಕಣ್ಣು

ಶಭಾನ ಮೈಸೂರು
ವರ್ಣ, ಜಾತಿ, ವರ್ಗ, ಲಿಂಗ ಮುಂತಾದ ಕಾರಣಗಳಿಂದ ಹಲವು ಮಂದಿ ಸಾಹಿತ್ಯ ವಲಯ ದಿಂದ ದೂರವೇ ಉಳಿದ ಕಾಲ ಒಂದಿತ್ತು. ಈ ಎಲ್ಲ ನಿರ್ಬಂಧಗಳನ್ನೂ ದಾಟಿ ಬರಹವನ್ನು ಅಭಿವ್ಯಕ್ತಿಯ ಮಾಧ್ಯಮವನ್ನಾಗಿಸಿಕೊಂಡ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಈ ಸಾಲಿಗೆ ಹೊಸ ಸೇರ್ಪಡೆಯೇ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯ ಅನುಭವಾಭಿವ್ಯಕ್ತಿ. ಕನ್ನಡ ಸಾಹಿತ್ಯದಲ್ಲಿ ಇದುವರೆಗೂ ದಾಖಲಾಗದ ಈ ಸಮುದಾಯದವರ ಅನುಭವಗಳನ್ನು ‘ಮನದ ಕಣ್ಣು’ ಕವನ ಸಂಕಲನದ ಮೂಲಕ ಮೊಟ್ಟಮೊದಲಿಗೆ ನಿರೂಪಿಸಿರುವವರು ಮೈಸೂರು ಜಿಲ್ಲೆ, ತಿ. ನರಸೀಪುರದ ಚಾಂದಿನಿ.

‘ಕ್ಷಮಿಸಿ ನನ್ನ ಬಗೆಗೆ ಯಾರೂ ಬರೆಯದ ಕಾರಣ, ನನ್ನ ಬಗ್ಗೆ ನಾನೇ ಬರೆದುಕೊಂಡೆ. . . ’ ಎನ್ನುತ್ತ ಲೇಖನಿ ಹಿಡಿಯುವ ಕವಯಿತ್ರಿ ತಮ್ಮ ಅಂತರಂಗವನ್ನೆಲ್ಲ ಬಯಲು ಮಾಡುತ್ತಾರೆ. ಮಲ್ಲಿಕಾರ್ಜುನನಿಂದ ಚಾಂದಿನಿಯಾಗಿ ಬದಲಾದ ಇಡೀ ಪ್ರಕ್ರಿಯೆಯನ್ನು, ಬದುಕು ತಂದೊಡ್ಡಿದ ಸಾಲು ಸವಾಲುಗಳನ್ನು ಆಪ್ತವಾಗಿ ಕವಿತೆಯಾಗಿ ಕಟ್ಟಿಕೊಡುತ್ತಾರೆ. ಇಲ್ಲಿ ಕೇವಲ ಚಾಂದಿನಿ ಮಾತ್ರ ಮಾತಿಗಿಳಿಯುವುದಿಲ್ಲ. ಬದಲಿಗೆ ಇಡೀ ಸಮುದಾಯದ ಧ್ವನಿಯೇ ತೆರೆದುಕೊಳ್ಳುತ್ತದೆ.

ಸಾಮಾಜಿಕ-ಕೌಟುಂಬಿಕ, ಆಂತರಿಕ ಸಂಘರ್ಷಗಳೊಂದಿಗೆ ಗುದ್ದಾಡುತ್ತಲೇ ತಮ್ಮ ಇರುವಿಕೆಯನ್ನು ಸಾಬೀತುಪಡಿಸಲು ಹೊರಡುವ ಕವಯಿತ್ರಿಯ ಹೋರಾಟ ಘನತೆವೆತ್ತ ಬದುಕಿಗಾಗಿ ಮಾತ್ರ. ಎಲ್ಲರಂತೆ ತಮ್ಮ ಸಮುದಾಯದವರೂ ಬದುಕು ಸಾಗಿಸಬೇಕೆಂಬ ಆಸೆ ಹೊತ್ತಿರುವ ಚಾಂದಿನಿ ‘ಇದು ಒಂಟಿ ದನಿಯಲ್ಲ, ಸಾವಿರ ಜನರ ಪ್ರತಿಧ್ವನಿ. . . ’ ಎನ್ನುತ್ತಾರೆ. ‘ಬದಲಾಗದ ಈ ಲೋಕ, ಬಯಲಾದ ಈ ಸತ್ಯಗಳ ನಡುವೆ ಸಿಲುಕಿದ ತೊಳಲಾಟವ ಕೇಳುವರಾರು? ’ ಆದರೂ ಜನ ಈ ಸತ್ಯವನ್ನು ಅರಿಯಲೇಬೇಕು ಎಂಬ ಒತ್ತಾಯದೊಂದಿಗೆ ಎಲ್ಲವನ್ನೂ ಹೇಳಹೊರಡುತ್ತಾರೆ.

‘ನಾನು ಅವಳಾಗಲು ಟವಲನ್ನು ದಾವಣಿ ಮಾಡಿದ್ದೆ, ಲುಂಗಿಯನ್ನೇ ಲಂಗ ಮಾಡಿದ್ದೆ, ಗೊಬ್ಬಳಿಯ ಬೀಜವನ್ನು ಕಾಲಿಗೆ ಚೈನು ಮಾಡಿ ನಡೆಯುವಾಗ ಬರುವ ಶಬ್ದವನ್ನು ಕೇಳಿ ಆನಂದಿಸುತ್ತಿದ್ದೆ.. ’ ಎಂಬ ಇವರ ಕವಿತೆಯ ಸಾಲಿನಲ್ಲಿ ಒಂದು ಆತ್ಮತೃಪ್ತಿ ಇದೆ. ಅದು ತನಗೆ ಬೇಕಾದುದು ದಕ್ಕಿತೆಂಬ ನೆಮ್ಮದಿಯ ಭಾವವನ್ನೂ ತಂದಿದೆ. ಆದರೆ ಸಾಮಾಜಿಕ ತಿರಸ್ಕಾರ ಇವೆಲ್ಲವನ್ನು ಕ್ಷಣ ಮಾತ್ರದಲ್ಲಿ ನುಚ್ಚು ನೂರಾಗಿಸುತ್ತದೆ.

‘ನಾನು ಗಂಡು ಮಗ ನಮ್ಮಪ್ಪ ಅಮ್ಮನಿಗೆ ನಮ್ಮೂರಿನವರಿಗೆ ಮಾತ್ರ, ನಾನು ಹೆಣ್ಣು, ನನ್ನೊಳಗಿನ ಬಸಿಯಲಾಗದ ತುಮುಲಗಳಿಗೆ ಮಾತ್ರ’ ಇವರ ಈ ತುಮುಲಗಳನ್ನು ಅರ್ಥೈಸಿ ಕೊಳ್ಳದ ಜನ ಇವರನ್ನು ಹಂಗಿಸುವ ರೀತಿ ಯಂತು ಅಮಾನವೀಯ. ಕೇವಲ ಪ್ರೀತಿಯ ನ್ನಷ್ಟೇ ಹುಡುಕುತ್ತ ಪಯಣ ಬೆಳೆಸುವ ಕವಯಿತ್ರಿಗೆ ಜನರು ತೋರುವ ಪುಕ್ಕಟೆ ಕರುಣೆಯ ಅಗತ್ಯವಿಲ್ಲ. ಬದಲಿಗೆ ತಮ್ಮ ಅಸ್ತಿತ್ವ ವನ್ನು ಒಪ್ಪುತ್ತಾ, ಸಿಗಬೇಕಾದ ಹಕ್ಕುಗಳನ್ನು ಸಮಾಜ ನೀಡಿದರೆ ಸಾಕು ಎನ್ನುತ್ತ ಆಕ್ರೋಶದ ನುಡಿಗಳನ್ನಾಡುತ್ತಾರೆ.

ರೌಡಿಯಿಂದ ಬೆದರಿಕೆಗೆ ಒಳಗಾಗಿದ್ದು, ಪೊಲೀಸರಿಂದ ಲಾಠಿ ಏಟು ತಿಂದದ್ದು, ಸುಳ್ಳು ಕೇಸುಗಳಿಗೆ ಬಲಿಯಾಗಿ ಕೋರ್ಟಿಗೆ ಅಲೆ ದದ್ದು, ಜನರ ಅಪಹಾಸ್ಯಕ್ಕೆ ಗುರಿಯಾಗಿದ್ದು, ಬದುಕ ನೂಕಲು ಭಿಕ್ಷೆ ಬೇಡಿದ್ದು, ಸೆಕ್ಸ್‌ವರ್ಕ್ ಮಾಡಿದ್ದು ಎಲ್ಲವನ್ನು ಮುಕ್ತವಾಗಿ ಬಿಚ್ಚಿಟ್ಟಿರುವ ಚಾಂದಿನಿ ಅವರು ಕ್ಷಣ ಕ್ಷಣವೂ ಹಂಬಲಿಸು ವುದು ನಿರುಮ್ಮಳ ಜೀವನಕ್ಕಾಗಿ. ತನ್ನಂತೆ ತನ್ನ ಇಡೀ ಸಮುದಾಯ ಅಭದ್ರತೆಯಲ್ಲೇ ಬದುಕು ನೂಕುತ್ತಿರುವ ಹೊತ್ತಲ್ಲಿ, ಸಾಮಾನ್ಯರಂತೆ ತಮ್ಮನ್ನೂ ಮನುಷ್ಯರಂತೆ ಕಾಣಿ ಎಂದು ಕಳಕಳಿಯಾಗಿ ವಿನಂತಿಸಿಕೊಳ್ಳುವ ಕವಯಿತ್ರಿಗೆ ಒಂದು ಭರವಸೆ ಇದೆ. ಎಲ್ಲೆಲ್ಲೂ ತಮ್ಮನ್ನು ಹೀಯಾಳಿಸುವ ಜಗತ್ತು ಮುಂದೊಂದು ದಿನ ತಮ್ಮ ಕುರಿತ ಧೋರಣೆಯನ್ನು ಬದಲಿಸಿಕೊಳ್ಳುತ್ತದೆ ಎಂಬ ಆಶಾಭಾವನೆ ಇದೆ. ಅದಕ್ಕಾಗಿ ಅವರು ‘ಕಾಲ ಬದಲಾವಣೆಗಾಗಿ ಕಾಯುತ್ತಿರುವೆ ಕಲ್ಲಾಗಿ’ ಎನ್ನುತ್ತಾರೆ.

ತಮ್ಮ ಕವಿತೆಗಳ ಮೂಲಕ ಇಡೀ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವರ ದನಿಯಾಗಿ, ಅವರ ಬದುಕಿನ ಮಜಲುಗಳನ್ನು ಯಾವ ಮುಜುಗರವೂ ಇಲ್ಲದೆ ಎಳೆ ಎಳೆಯಾಗಿ ತೆರೆದಿಡುವ ಚಾಂದಿನಿ ಅವರ ‘ಮನದ ಕಣ್ಣು’ ಓದುಗರ ಕಣ್ಣು ತೆರೆಸುವ ಒಂದು ವಿಶೇಷವಾದ ಕವನ ಸಂಕಲನ. ಪದ ಬಳಕೆ, ಕಾವ್ಯ ಲಾಲಿತ್ಯ, ಪ್ರಾಸ ಇತ್ಯಾದಿ ಕಾರಣಗಳಿಗಿಂತ ಅಂತರಂಗದ ತುಮುಲಗಳನ್ನು, ಹಸಿ ಹಸಿ ಅನುಭವಗಳನ್ನು ಯಥಾವತ್ತಾಗಿ ನಿರೂಪಿಸಿರುವ ಕಾರಣಕ್ಕೆ ಈ ಕಾವ್ಯಕಟ್ಟು ಸಾಹಿತ್ಯ ಚರಿತ್ರೆಯಲ್ಲಿ ವಿಶೇಷ ಗೌರವಕ್ಕೆ ಪಾತ್ರವಾಗುತ್ತದೆ.

 

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ದಸರಾ ವೆಬ್‌ಸೈಟ್‌ ಲೋಕಾರ್ಪಣೆ : ಅ.11ರಿಂದ 21ರವರೆಗೆ ನಡೆಯಲಿರುವ ಕಾರ್ಯಕ್ರಮಗಳ ಮಾಹಿತಿ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲು ಹಾಗೂ ಪ್ರವಾಸಿಗರಿಗೆ ಉಪಯುಕ್ತವಾದ ಮಾಹಿತಿ ಕೊಡಲು ದಸರಾ-೨೦೨೬ರ…

9 hours ago

ತಮಿಳುನಾಡಿಗೆ ಕಾವೇರಿ ನೀರು: 3 ಸಾವಿರ ಕ್ಯೂಸೆಕ್‌ಗೆ ಇಳಿಸಲು ರಾಜ್ಯ ಸರ್ಕಾರ ಮನವಿ

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. 6 ಸಾವಿರ ಕ್ಯೂಸೆಕ್‌ ನೀರನ್ನು 3 ಸಾವಿರ…

11 hours ago

ರಾಜ್ಯ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ: ಸೆಪ್ಟೆಂಬರ್.18 ರಿಂದ ಅಮಿತ್ ಶಾ 2 ದಿನ ರಾಜ್ಯ ಪ್ರವಾಸ ‌

ಹುಬ್ಬಳ್ಳಿ: ಸೆಪ್ಟೆಂಬರ್ 18ರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ 2 ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಸೆಪ್ಟೆಂಬರ್ 18ರ…

11 hours ago

ರಾಮನಗುಡ್ಡ ಕೆರೆ ಭರ್ತಿ : ಕೋಡಿ ಬಿದ್ದು ಹರಿದ ನೀರು

ಮಹಾದೇಶ್. ಎಂ ಗೌಡ ಹನೂರು: ತಾಲ್ಲೂಕಿನ ಮಂಗಲ ಗ್ರಾಮದ ಹುಲುಸುಗುಡ್ಡೆ ಬಳಿ ಇರುವ ಐತಿಹಾಸಿಕ ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ…

15 hours ago

ಓದುಗರ ಪತ್ರ: ಕೊನೆಗೊಳ್ಳಲಿ ಸಂಘರ್ಷ!

ಕೊನೆಗೊಳ್ಳಲಿ ಸಂಘರ್ಷ! ಯುದ್ಧವನು ಕೊನೆಗಾಣಿಸಲು ರಾಜತಾಂತ್ರಿಕ ಮಾತುಕತೆಯೇ ಉತ್ತಮವೆಂಬ ಭಾರತದ ನಿಲುವಿಗೆ ಬ್ರಿಕ್ಸ್ ನಾಯಕರು ಒಕ್ಕೊರಲಿನಿಂದ ಒಪ್ಪಿರುವುದು ಸ್ವಾಗತಾರ್ಹ! ಇದಲ್ಲವೇ…

20 hours ago

ಓದುಗರ ಪತ್ರ: ಚುರುಕಾಗಲಿ 6ರ ಪ್ಲಾಟ್ ಫಾರಂ ಟಿಕೆಟ್ ಕೌಂಟರ್

ಮೈಸೂರಿನ ನೈಋತ್ಯ ರೈಲ್ವೆಗೆ ಸೇರಿರುವ ಅಶೋಕ ಪುರಂ ರೈಲು ನಿಲ್ದಾಣದಲ್ಲಿ ಪ್ಲಾಟ್ ಫಾರಂ ೬ರ ಕಡೆ ರೈಲು ಪ್ರಯಾಣಿಕರಿಗೆ ಅನುಕೂಲವಾಗಲೆಂದು…

20 hours ago