ಮಹಿಳೆ ಸಬಲೆ

ಮಾವುತರ ಮಡದಿಯರು ಮತ್ತು ಮಕ್ಕಳು

• ಕೀರ್ತಿ ಬೈಂದೂರು

ದಸರಾ ಯಶಸ್ವಿಯಾಗಿ ಮುಗಿಯಿತು. ಎಲ್ಲೆಂದರಲ್ಲಿ ಜನ ಮುಗಿಬಿದ್ದು, ಆನೆ ಅಂಬಾರಿ ನೋಡುತ್ತಾ ಮೈಮರೆತು, ಕೈಮುಗಿದು ಈ ವರ್ಷವನ್ನು ಸಂಭ್ರಮಿಸಿದ್ದಾರೆ.

ಆನೆಗಳೆಂದರೆ ಜನರಿಗೆ ವಿಶೇಷ ಪ್ರೀತಿ. ಅಂಬಾರಿಯ ತಾಲೀಮಿನ ಸಮಯದಲ್ಲೂ ಆನೆಗಳ ಹೆಸರುಗಳನ್ನು ಕೂಗುತ್ತಾ ತಮ್ಮ ಪ್ರೀತಿಯನ್ನು ಅವಕ್ಕೆ ಕೇಳಿಸುತ್ತಾರೆ; ಆನೆಯ ಮೇಲೆ ಹತ್ತಿ ಕೂತ ಮಾವುತ ಕೈಯಾಡಿಸುತ್ತಾ, ಈ ಜನರನ್ನು ಇನ್ನಷ್ಟು ಉತ್ಸಾಹಗೊಳಿಸುತ್ತಾನೆ.

ಮೈಸೂರಿನಲ್ಲಿ ದಸರಾ ಹಬ್ಬ ಬಂತೆಂದರೆ ಇದೆಲ್ಲ ಸಾಮಾನ್ಯ ದೃಶ್ಯ. ಒಂದೊಂದು ಆನೆಯೂ ಇಲ್ಲಿ ಸೆಲೆಬ್ರಿಟಿ. ಪ್ರತಿಯೊಂದಕ್ಕೂ ಅದರದ್ದೇ ಆದ ಅಭಿಮಾನಿ ಬಳಗವಿದೆ. ಜಂಬೂ ಸವಾರಿಯಲ್ಲಿ ಭೀಮ ಆನೆ ಮೆರವಣಿಗೆಯ ಹಾದಿಯಲ್ಲಿ ಹಾದು ಹೋಗುತ್ತಿದ್ದರೆ, ಜನರೆಲ್ಲ ಭೀಮನ ಹೆಸರನ್ನು ಕೂಗಿದ್ದೇ ಕೂಗಿದ್ದು, ಡೆಸಿಬಲ್ ಮಾಪನ ಒಡೆದುಹೋಗುವಷ್ಟಿದ್ದರೂ ಭೀಮ ಮಾತ್ರ ‘ನಾನು ಕೇಳಿಸಿಕೊಂಡಿದ್ದೇನೆ ಮಹರಾಯ’ ಎನ್ನುವಂತೆ ಸೊಂಡಿಲೆತ್ತಿ ಸೂಚಿಸುತ್ತಿತ್ತು.

ಇಂತಹ ಬಲಭೀಮನನ್ನೇ ನಂಬಿಕೊಂಡ ಮಾವುತ ವಾಸವಿದ್ದ ಬಿಡಾರಕ್ಕೆ ಭೇಟಿ ನೀಡಿದ್ದೆ. ಅಕಸ್ಮಾತಾಗಿ ಮಾವುತನ ಕುಟುಂಬ ಪರಿಚಯವಾಯಿತು. ಅವರೆಲ್ಲ ಕಾಡುನಾಡಿನ ಕೊಂಡಿಯಂತೆ ಬದುಕುತ್ತಿರುವವರು. ದಸರಾ ಹಬ್ಬದ ಸಮಯದಲ್ಲಿ ಒಂದೂವರೆ ತಿಂಗಳ ಮಟ್ಟಿಗೆ ನಾಡಿನ ವಾಸ ಮುಗಿಯುತ್ತಿದ್ದಂತೆ ಮತ್ತೆ ಕಾಡಿಗೆ ಪ್ರಯಾಣ. ಚುಮ್ಮಿ, ಚಂದನಾ, ಸುಮ, ಲಕ್ಷ್ಮಿ, ಅಶ್ವಿನಿ ಅವರೆಲ್ಲ ಮಾತಿಗೆ ಸಿಕ್ಕರು. ಚಾಪೆ ಹಾಸಿ, ಗುಂಪಿನಲ್ಲಿ ಕುಳಿತು, ಒಬ್ಬರು ಮತ್ತೊಬ್ಬರಿಗೆ ಎಣ್ಣೆ ಹಾಕಿ ತಲೆ ಬಾಚುತ್ತಿದ್ದರು. ಮೊದಲು ನಾಚಿದವರೆಲ್ಲ ಮಾತು ಮುಗಿಯುವ ಹೊತ್ತಿಗೆ ಪರಿಚಿತ ರಾಗಿದ್ದರು.

ಕುಶಾಲನಗರದ ಮತ್ತಿಗೊಡಿನಲ್ಲಿ ಇದ್ದವರು ಮೈಸೂರಿಗೆ ಬರುವುದು ವರ್ಷವೂ ರೂಢಿ. ಮಾವುತ, ಕಾವಾಡಿ ಬಂದು ಕೆಲ ದಿನಗಳಾದ ಮೇಲೆ ಸಂಬಂಧಿಕರೆಲ್ಲ ಬರುತ್ತಾರೆ. ಪ್ರತಿ ಆನೆಗೂ ಒಬ್ಬ ಮಾವುತ ಮತ್ತು ಕಾವಡಿ ಇದ್ದು, ಪ್ರತ್ಯೇಕ ಕೋಣೆಯನ್ನು ನೀಡುತ್ತಾರೆ. ಇವರಿಗೆ ಕೊಟ್ಟ ದುಡ್ಡಿನಿಂದ ಅಕ್ಕಿ, ಅಗತ್ಯ ಸಾಮಗ್ರಿಗಳನ್ನು ತಂದು ಅಲ್ಲಿ ಅಡುಗೆ ಮಾಡಿಕೊಳ್ಳುವ ಸೌಕರ್ಯವಿದೆ. ಮತ್ತೂ ವಿಶೇಷವೆಂದರೆ ಮಾಂಸ ದಡುಗೆಯನ್ನು ಎಲ್ಲ ಮಾವುತರ ಕುಟುಂಬಗಳು ಒಟ್ಟಾಗಿ ಸವಿದಿದ್ದಾರೆ. ಈ ಬಾರಿ ಮಾವುತರ ಮಕ್ಕಳೆಲ್ಲ ಅರಮನೆಯ ಸಾಂಸ್ಕೃತಿಕ ವೇದಿಕೆಯಲ್ಲಿ ಹೆಜ್ಜೆ ಹಾಕಿದ್ದಾರೆ.

ಮಕ್ಕಳ ಕುಣಿತವನ್ನು ಹೆಂಗಸರೆಲ್ಲ ಹಂಚಿಕೊಳ್ಳುವಾಗ, ಮುಖದಲ್ಲಿ ತೀರದ ಸಂಭ್ರಮ! ತಾವು ಏಳನೇ ತರಗತಿ ಓದಿದ್ದು ಸಾಕು, ಮಕ್ಕಳಾದರೂ ಚೆನ್ನಾಗಿ ಓದಬೇಕು ಎನ್ನುವ ಕಾಳಜಿ ಇವರದು. ಊರಿನಲ್ಲಿ ಶಾಲೆಗೆ ಮಕ್ಕಳನ್ನು ಬಿಟ್ಟು, ಮತ್ತವರನ್ನು ಮನೆಗೆ ಕರೆದುಕೊಂಡು ಬರಬೇಕಿತ್ತು. ಮಕ್ಕಳನ್ನು ನೋಡಿಕೊಳ್ಳುವುದು ಮುಖ್ಯ ಕೆಲಸ. ಆದರೆ ದಸರೆಯ ರಜೆಯಲ್ಲಿರುವ ಮಕ್ಕಳನ್ನು ಈ ಮೈಸೂರಿನ ಸಿರಿ ತನ್ನತ್ತ ಸೆಳೆದುಬಿಡುತ್ತದೆ. ‘ನಾವೇನೊ ಹೊರಡ್ತೀವಿ. ಆದ್ರೆ ಇವು ಅಳ್ತಾವೆ’ ಎನ್ನುತ್ತಾ ಸುಮ ಅವರು ತನ್ನ ಮಕ್ಕಳು ಮನೆಗೆ ಹೊರಡುವಾಗ ಮಾಡುವ ರಂಪಾಟವನ್ನು ತಿಳಿಸಿದರು.

ಚಲನಚಿತ್ರೋತ್ಸವದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ ‘ಜಾಕಿ’ ಚಿತ್ರ ನೋಡಿದ್ದನ್ನು ಹೇಳುವಾಗ ಹೆಂಗಸರು ಮತ್ತು ಮಕ್ಕಳ ಮುಖ ಕಳೆಗಟ್ಟಿತ್ತು. ಈ ಹಿಂದೆ ಮೈಸೂರಿನ ಥಿಯೇಟರ್‌ನಲ್ಲಿ ಚಿತ್ರ ನೋಡುತ್ತಿದ್ದರೂ ಜೀವನದಲ್ಲಿ ಮೊದಲ ಬಾರಿಗೆ ಎಲ್ಲರೂ ಒಟ್ಟಾಗಿ ಬಸ್ಸಿನಲ್ಲಿ ಹೋಗಿ, ಎಸಿ ಥಿಯೇಟರ್‌ನಲ್ಲಿ ಕುಳಿತು ಸಿನೆಮಾ ನೋಡಿದ್ದು. ಬಿಡುವು ಮಾಡಿಕೊಂಡು ಸಂಜೆಯ ಹೊತ್ತಿನಲ್ಲಿ ಮೈಸೂರಿನ ಬೀದಿಗಳಲ್ಲಿ ಅಲಂಕಾರಗೊಂಡಿರುವ ದೀಪಗಳನ್ನು ನೋಡುವುದಕ್ಕೆ ಹೋಗುತ್ತಾರೆ. ಸಯ್ಯಾಜಿ ರಸ್ತೆಯಲ್ಲಿ ಕಡಿಮೆ ಬೆಲೆಗೆ ಸಿಗುವ ವಸ್ತುಗಳನ್ನು ತೆಗೆದುಕೊಳ್ಳುತ್ತಾರೆ. ಪಕ್ಕದಲ್ಲಿ ಓಡಾಡುವ ಮೈಸೂರಿನ ಜನರನ್ನು ನೋಡುತ್ತಾ, ‘ನಾವೂ ಹೀಗೆ ಬಟ್ಟೆ ಹಾಕಿಕೊಳ್ಳುವಂತಿದ್ದರೆ?’ ಎಂದು ಕನಸು ಕಟ್ಟುತ್ತಾರೆ. ವಾಸ್ತವ ಮತ್ತೆ ಎಚ್ಚರಿಸಿ, ಅರಮನೆಯ ಬಿಡಾರಕ್ಕೆ ಬಂದು ಸೇರುತ್ತಾರೆ.

ಮಾವುತರ ಕುಟುಂಬಕ್ಕಾಗಿ ನಿರ್ಮಿಸಿದ ಪ್ರತ್ಯೇಕ ಆಸನದಲ್ಲಿ ಕುಳಿತು ದಸರಾ ಜಂಬೂ ಸವಾರಿಯನ್ನು ನೋಡಿದ್ದಾರೆ. ತಂತಮ್ಮ ಮಾವುತರಿಗೆ ಅಡುಗೆ ಮಾಡುವ ಕೆಲಸ ಮುಗಿಸಿ, ಕುಟುಂಬ ಸಮೇತರಾಗಿ ಊರಿಗೆ ಪ್ರಯಾಣ ಬೆಳೆಸಿದ್ದಾರೆ. ಮೈಸೂರು ದಸರೆಯ ಸಿರಿ ಸರಿಸಿ, ಮತ್ತೆ ತನ್ನ ನಿತ್ಯ ಬದುಕಿಗೆ ಅಣಿಯಾಗುತ್ತಿದೆ.

ಆಂದೋಲನ ಡೆಸ್ಕ್

Recent Posts

ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರು ಬದಲಾವಣೆ : ಸಂಸದ ಯದುವೀರ್‌

ಮೈಸೂರು : ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಆದರೆ, ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಯಾವ…

4 hours ago

ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ಇಳುವರಿ ಜೊತೆಗೆ ಹೆಚ್ಚಿನ ಆದಾಯ ಪಡೆಯರಿ : ರೈತರಿಗೆ ಸಿಎಂ ಕರೆ

ಬೆಳಗಾವಿ : ರಾಜ್ಯ ಸರ್ಕಾರ ರೈತ ಪರ ಸರಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ…

4 hours ago

ಟಿ-20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ :ಸೂರ್ಯಕುಮಾರ್ ಯಾದವ್ ನಾಯಕ

ಹೊಸದಿಲ್ಲಿ: ಮುಂಬರುವ ಐಸಿಸಿ ಟಿ-೨೦ ವಿಶ್ವಕಪ್‌ಗಾಗಿ ೧೫ ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಶುಭಮನ್…

4 hours ago

ಮೊಟ್ಟೆ ಕ್ಯಾನ್ಸರ್‌ ಕಾರಕವಲ್ಲ : ಕೇಂದ್ರ ವರದಿ

ಹೊಸದಿಲ್ಲಿ : ಮೊಟ್ಟೆ ಸೇವೆನೆಗೆ ಸುರಕ್ಷಿತವಾಗಿದ್ದು ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕವಾಗುವ ಯಾವುದೇ ಅಂಶ ಪತ್ತೆ ಆಗಿಲ್ಲ ಎಂದು ಕೇಂದ್ರ ಆಹಾರ…

4 hours ago

‘ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಿ’ : ಶಿವಶಂಕರ್ ಸೂಚನೆ

ಚಾಮರಾಜನಗರ : ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವಂತಹ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಲಶಕ್ತಿ ಮಂತ್ರಾಲಯದ…

5 hours ago

ಮೈಸೂರು | ನಾಳೆಯಿಂದ ಅರಮನೆ ಅಂಗಳದಲ್ಲಿ ಫಲಪುಷ್ಪ ಪ್ರದರ್ಶನ

ಮೈಸೂರು : ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಪ್ರವಾಸಿಗರು, ಸ್ಥಳೀಯರಿಗೆ ಮನರಂಜನೆ ಒದಗಿಸಲು ಅರಮನೆ ಅಂಗಳದಲ್ಲಿ ಡಿ.೨೧ರಿಂದ ೩೧ರವರೆಗೆ…

5 hours ago