court summons
ಅಂಜಲಿ ರಾಮಣ್ಣ
ಮೈಸೂರು ಕಡೆಯ ಜನರಿಗೆ ಚಿರಪರಿಚಿತರಾಗಿದ್ದ ನನ್ನ ತಂದೆ ಕೆ.ರಾಮಣ್ಣ ಅವರು ಮೈಸೂರಿನ ಶಂಕರಮಠ ರಸ್ತೆಯಲ್ಲಿ ಒಂದು ಮನೆ ಕಟ್ಟಿದ್ದರು. ಇಬ್ಬರು ಮೂವರು ಬಾಡಿಗೆದಾರರು ಕೊಟ್ಟ ಕಷ್ಟ ಅಷ್ಟಿಷ್ಟಲ್ಲ. ದೊಡ್ಡ ಕುಟುಂಬದ ಸಂಸಾರಸ್ಥ ಒಬ್ಬ ಬಾಡಿಗೆದಾರ. ಆತನ ಮನೆಭರ್ತಿ ವಯಸ್ಕ ಹೆಂಗಸರು, ಯುವತಿಯರು, ಮಕ್ಕಳು ಇದ್ದರು. ಸರಿಯಾಗಿ ಬಾಡಿಗೆಯನ್ನೂ ಕೊಡದೆ, ಮನೆಯನ್ನು ಬಿಡಲೂ ಒಪ್ಪದೆ ಆತನ ಸತಾಯಿಸುವಿಕೆ ಜಾಸ್ತಿ ಆದಾಗ ಕೋರ್ಟಿನಲ್ಲಿ ದಾವೆ ಹೂಡಲಾಗಿತ್ತು.
ವರ್ಷಗಳ ನಂತರ ಅಂತೂ ನಮ್ಮ ತಂದೆಯವರದ್ದೇ ಮನೆ ಅಂತಾಗಿ ಬಾಡಿಗೆದಾರ ಮನೆ ತೆರವು ಮಾಡಿಕೊಡಬೇಕು ಎಂದು ಕೋರ್ಟಿನ ಆದೇಶ ಆಯಿತು. ನ್ಯಾಯಾಲಯದ ಆದೇಶವನ್ನು ಜಾರಿಗೆ ತರುವುದಕ್ಕೋಸ್ಕರ ನ್ಯಾಯಾಲಯದ ನೋಟಿಸ್ ಮತ್ತು ಸಮನ್ಸ್ ಅನ್ನು ನೀಡಲು ಪೊಲೀಸರು ಯಾವಾಗ ಹೋದರೂ ಆತ ಮನೆಯ ಹೆಬ್ಬಾಗಿಲಿನಲ್ಲಿ ಹೆಂಗಸರನ್ನು ಸಾಲಾಗಿ ಕುಳ್ಳಿರಿಸಿ ಮನೆಯಲ್ಲಿ ಯಾರೂ ಗಂಡಸರಿಲ್ಲ ಎಂದು ಸಬೂಬು ಹೇಳಿಸಿ ನ್ಯಾಯಾಲಯದ ಪೊಲೀಸರನ್ನು ಹಿಂದಿರುಗಿಸುತ್ತಿದ್ದರು. ಮನೆಯನ್ನು ವಶಪಡಿಸಿಕೊಳ್ಳುವ ಆದೇಶ ಪ್ರತಿಯನ್ನು ತೆಗೆದುಕೊಂಡು ಹೋದಾಗಲೂ ಇದ್ದಬದ್ದ ಹೆಂಗಸರೆಲ್ಲಾ ಹೊಸ್ತಿಲ ಮೇಲೇ ಕುಳಿತು ಗಂಡಸರು ಇಲ್ಲ ಎಂದು ಬಿರುಸಿನಲ್ಲಿ ಹೇಳುತ್ತಿದ್ದರು.
ಆಗ ಚಾಲ್ತಿಯಲ್ಲಿದ್ದ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ (Criminal Procedure Code) ೧೯೭೩ ಈ ಕಾನೂನಿನ ಸೆಕ್ಷನ್ ೬೪ರಲ್ಲಿ ಸಮನ್ಸ್ ನೀಡಲಾಗಿರುವ ವ್ಯಕ್ತಿ ಮನೆಯಲ್ಲಿ ಇರದಿದ್ದ ಸಂದರ್ಭದಲ್ಲಿ ಸಮನ್ಸ್ಅನ್ನು ಕುಟುಂಬದ ವಯಸ್ಕ ‘ಪುರುಷ’ ಸದಸ್ಯನಿಗೆ ತಲುಪಿಸಿ ಬರಬೇಕು ಎಂದಿತ್ತು. ಹಾಗಾಗಿ ಬಹಳ ಪ್ರಕರಣಗಳಲ್ಲಿ ಮಹಿಳೆಯರನ್ನು ಗುರಾಣಿಯಂತೆ ಬಳಸಿಕೊಂಡು ಪ್ರಕರಣಗಳ ವಿಲೇವಾರಿಯನ್ನು ವಿಳಂಬವಾಗುವಂತೆ ಮಾಡಲಾಗುತ್ತಿತ್ತು. ಕೋರ್ಟಿನಲ್ಲಿ ಅಂತಿಮ ತೀರ್ಪು ಬರುವುದರೊಳಗೆ ಆತ ಮನೆಯ ಹೊರಗಿನ ಆವರಣ ಬಿಟ್ಟು ಒಳಗಿನ ಎಲ್ಲಾ ಬಾಗಿಲುವಾಡಗಳನ್ನು, ಮರಗೆಲಸವನ್ನು ಕಿತ್ತು ಎಲ್ಲಿಗೋ ಸಾಗಿಸಿ ಬಿಟ್ಟಿದ್ದರು. ಗೋಡೆಗಳ ಪ್ಲಾಸ್ಟರ್ಅನ್ನು ಮುಕ್ಕು ಮಾಡಿ ನೆಲವನ್ನೆಲ್ಲಾ ಅಗೆದು ಬಿಟ್ಟಿದ್ದರು.
ತ್ವರಿತಗತಿಯ ನ್ಯಾಯ ಎನ್ನುವ ಉದ್ದೇಶವನ್ನು ಹೊಂದಿರುವ, ಜುಲೈ ೨೦೨೪ರಂದು ಜಾರಿಗೆ ಬಂದಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ೨೦೨೩ ಈ ಕಾನೂನಿನ ಸೆಕ್ಷನ್ ೬೬ರಲ್ಲಿ ಸಮನ್ಸ್ ನೀಡಲಾಗಿರುವ ವ್ಯಕ್ತಿ ಮನೆಯಲ್ಲಿ ಇಲ್ಲದಾಗ, ಕುಟುಂಬದ ‘ಯಾವುದೇ’ ವಯಸ್ಕ ಸದಸ್ಯರಿಗೆ ತಲುಪಿಸಬೇಕು ಎನ್ನುವ ಬದಲಾವಣೆ ತರಲಾಗಿದೆ. ಹಾಗಾಗಿ ಮಹಿಳೆಯರನ್ನು ಮುಂದಿಟ್ಟುಕೊಂಡು ನ್ಯಾಯಾಲಯದ ಸಮಯವನ್ನು ಹಾಳು ಮಾಡುವ ಹಾಗಿಲ್ಲ. ನ್ಯಾಯಾಲಯದ ಆದೇಶವನ್ನು ಜಾರಿ ತರುವುದಕ್ಕಾಗಿಯೋ, ಆರೋಪಿ ಎನ್ನುವ ಕಾರಣಕ್ಕೋ, ಸಾಕ್ಷಿ ಹೇಳುವುದಕ್ಕಾಗಿ ಹಾಜರಿರಬೇಕು ಎಂತಲೋ, ಆಪಾದಿತ ಎಂದು ದಾವೆಯಲ್ಲಿ ಸೇರಿಸಬೇಕೋ ಬೇಡವೋ ಎಂದು ನಿರ್ಧರಿಸುವ ಕಾರಣಕ್ಕೂ ನ್ಯಾಯಾಲಯವು ವ್ಯಕ್ತಿಯೊಬ್ಬನಿಗೆ ಸಮನ್ಸ್ ನೀಡಬಹುದು.
ಅಂತಹ ಸಮನ್ಸ್ಅನ್ನು ಮರುಜಾರಿಯ ನಂತರವೂ ಕುಟುಂಬದ ಯಾವುದೇ ಮಹಿಳೆಯು ಆ ಸಮನ್ಸ್ ಸೇರಬೇಕಾದ ವ್ಯಕ್ತಿಗೆ ತಲುಪಿಸಲು ಅಡ್ಡಿಯಾದರೆ ಅದನ್ನು ಸೆಕ್ಷನ್ ೨೦೭ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿ ಆಕೆಗೆ ೧ ರಿಂದ ೬ ತಿಂಗಳುಗಳ ಕಾಲ ಜೈಲು ಶಿಕ್ಷೆ ನೀಡಬಹುದು ಮತ್ತು ೫ ರಿಂದ ೧೦ ಸಾವಿರ ರೂ.ಗಳವರೆಗಿನ ದಂಡವನ್ನೂ ವಿಧಿಸಬಹುದು. ಅಷ್ಟೇ ಅಲ್ಲದೆ ಆಕೆಯನ್ನು ನ್ಯಾಯಾಂಗ ನಿಂದನೆ ಕಾನೂನಿನ ಅಡಿಯಲ್ಲಿಯೂ ಅಪರಾಧಿ ಎಂದು ಹೇಳಿ ಸೆಕ್ಷನ್ ೧೨ರ ಅಡಿಯಲ್ಲಿ ಹೆಚ್ಚುವರಿ ಸೆರೆವಾಸ ಮತ್ತು ದಂಡ ವಿಧಿಸುವ ಅವಕಾಶ ನ್ಯಾಯಾಲಯಕ್ಕೆ ಇರುತ್ತದೆ. ಕುಟುಂಬದ ಯಾವುದೇ ವಯಸ್ಕ ಮಹಿಳೆಯು ಮನೆಯಲ್ಲಿನ ಪುರುಷರ ಮಾತನ್ನು ನಂಬಿ ಸಮನ್ಸ್ ಅನ್ನು ತಿರಸ್ಕರಿಸುವ ಹಾಗಿಲ್ಲ. ಅಂತೆಯೇ ಸಮನ್ಸ್ಅನ್ನು ಮನೆಯಲ್ಲಿ ಕೆಲಸ ಮಾಡುವ ಕೆಲಸದಾಕೆ ಸ್ವೀಕರಿಸುವ ಹಾಗಿಲ್ಲ.
(ಲೇಖಕರು ಮಹಿಳೆ ಮತ್ತು ಮಕ್ಕಳ ಹಕ್ಕುಗಳ ವಕೀಲರು)
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…
ಮಂಡ್ಯ: ಸುಮಾರು 15 ತಿಂಗಳಿನಿಂದ ವೇತನ ಸಿಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಂಡ್ಯದ ಮೈಶುಗರ್ ಶಾಲೆಯ ಶಿಕ್ಷಕರ ಬಾಕಿ ವೇತನಕ್ಕಾಗಿ…
ಹಾಸನ: ಗ್ಯಾರಂಟಿಗೆ ಕೋಟಿಗಟ್ಟಲೇ ಹಣ ಖರ್ಚು ಮಾಡ್ತಿರೋದು ಸಮಾನತೆ ತರಲು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಹಾಸನದಲ್ಲಿ…
ಬಳ್ಳಾರಿ: ಹೊಸಪೇಟೆ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಜಲಾಶಯದ ಮೇಲ್ಬಾಗದಲ್ಲಿ ಗೇಟ್ ಮುಂದೆ…
ಮೈಸೂರು: ಮದುವೆ ಆಗುವುದಾಗಿ ನಂಬಿಸಿ ಮಹಿಳಾ ವಕೀಲೆಯೊಬ್ಬರೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ನಂತರ ಮೋಸ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ವಕೀಲ…