ಆಂದೋಲನ ಪುರವಣಿ

ಹಣ್ಣಮ್ಮ: ’ಕ್ಯಾಮರಾ v/s ಕುವೆಂಪು’ ಪುಸ್ತಕದ ಒಂದು ಚುಟುಕು

ಆ ದಿನ ಕುವೆಂಪು ಮನೆಗೆ ಹೋದಾಗ ಹಿಂಬಾಗಿಲಿನಲ್ಲಿ ಹಣ್ಣಮ್ಮ ನಿಂತಿದ್ದಳು. ನಮ್ಮನ್ನು ನೋಡಿದ ಕೂಡಲೆ ‘ವಸಿ ಕುಕ್ಕೆ ಇಳಿಸಣ್ಣ’ ಎಂದು ಮನವಿ ಮಾಡಿದಳು.

ಅಷ್ಟರಲ್ಲಿ ತಾರಿಣಿ, ‘ಏನ್ ಹೋದ್ ವಾರ ಬರಲೇ ಇಲ್ಲವಲ್ಲ’ ಎಂದಾಗ. ‘ಬೆಟ್ಟಕ್ಕೆ ಹೋಗಿದ್ದೆ. ಸುಸ್ತಾಗಿವ್ನಿ ವಸಿ ಕಾಫಿ ಕೊಡವ್ವ’ ಎಂದು ತಲೆಯ ಮೇಲಿದ್ದ ಬಟ್ಟೆಯ ಸಿಂಬಿಯನ್ನು ಬಿಡಿಸಿ ಹಣೆಯ ಮೇಲೆ ಇಬ್ಬನಿಗಳಂತೆ ಹರಡಿದ್ದ ಬೆವರಿನ ಹನಿಗಳನ್ನು ಒರೆಸಿಕೊಳ್ಳುತ್ತಾ ಉಸ್ಸಪ್ಪಾ ಎಂದು ಕುಳಿತುಕೊಂಡಳು.
ಹಣ್ಣಮ್ಮನ ಹೆಸರು ಪುಟ್ಟಮ್ಮ ಇರಬಹುದು. ಆಕೆ ಹಣ್ಣುಗಳನ್ನಷ್ಟೇ ಮಾರಾಟ ಮಾಡುತ್ತಿದ್ದರಿಂದ ಎಲ್ಲರೂ ಹಣ್ಣಮ್ಮ ಎಂದೇ ಕರೆಯುತ್ತಿದ್ದರು. ಈ ಹಣ್ಣಮ್ಮ ಅದೆಷ್ಟೋ ವರ್ಷಗಳಿಂದ ಮೈಸೂರಿನ ಒಂಟಿಕೊಪ್ಪಲಿನ ಕೆಲವೇ ಮನೆಗಳಿಗೆ ವರ್ತನೆಯಂತೆ ಹಣ್ಣು ಪೂರೈಸುತ್ತಿದ್ದಳು. ಈ ಪಟ್ಟಿಯಲ್ಲಿ ಕುವೆಂಪು ಅವರ ಮನೆಯೂ ಸೇರಿತ್ತು.
ಹಣ್ಣಮ್ಮ ಕುಕ್ಕೆ ಇಳಿಸಿದ ಮೇಲೆ ತಾರಿಣಿಗೆ ಹೆಚ್ಚು ಮಾತನಾಡುವ ಅವಕಾಶವಿರುತ್ತಿರಲಿಲ್ಲ. ಆಕೆ ಏನಾದರು ತಂದಿರಲಿ, ‘ಐದ್ ಡಜ಼ನ್ ತಗಳವ್ವ. ಕಲ್ಲುಸಕ್ಕರೆ ಇದ್ದಂಗೈತೆ’ ಎಂದು ಫರ್ಮಾನು ಹೊರಡಿಸಿ ಹಣ್ಣುಗಳನ್ನೆತ್ತಿ ಆಚೆ ಇಡಲು ಶುರುಮಾಡುತ್ತಿದ್ದಳು. ‘ಮನೆಯಲ್ಲಿ ಇರೋದೆ ನಾಲ್ಕು ಜನ ಅಷ್ಟೊಂದು ತಗೊಂಡು ಏನ್ ಮಾಡ್ಲಿ..’. ಎಂಬ ತಾರಿಣಿಯ ಕೊಸರು ನುಡಿಗೆ ಅಲ್ಲಿ ಯಾವ ಬೆಲೆಯೂ ಸಿಗುತ್ತಿರಲಿಲ್ಲ. ಕನಿಷ್ಠ ಮೂರು ಡಜ಼ನ್ ಪೆನಾಲ್ಟಿಯಾದರು ಬಿದ್ದೇ ಬೀಳುತ್ತಿತ್ತು.
ಮತ್ತೊಂದು ದಿನ, ಕುವೆಂಪು ಮನೆಯಲ್ಲಿ ತನ್ನ ಕುಕ್ಕೆ ಖಾಲಿ ಮಾಡಿದ್ದ ಹಣ್ಣಮ್ಮ ಮನೆಯಿಂದ ಹೊರ ನಡೆದಿದ್ದಳು. ನಮ್ಮನ್ನು ಕಂಡಾಕ್ಷಣ ಗೇಟಿನ ಬಳಿ ಕುಕ್ಕೆ ಇಳಿಸಿ, ಅಲ್ಲೇ ಬಿದ್ದಿದ್ದ ಸೈಸ್ ಕಲ್ಲನ್ನು ತೋರಿ, ‘ಈ ಕುಕ್ಕೆಗೆ ಇಟ್ಟು ಕೊಡಿ’ ಎಂದು ಕೋರಿದಳು. ಆ ಕಲ್ಲು ಸಾಕಷ್ಟು ಭಾರವಿತ್ತು. ಗಲಿಬಿಲಿಗೊಂಡು ‘ಅದ್ಯಾಕೆ’ ಎಂದಾಗ, ‘ಸುಮ್ಮನೆ ಇಡು’ ಎಂದು ಆಜ್ಞಾಪಿಸಿದಳು. ಕಲ್ಲಿನೊಂದಿಗೆ ಕುಕ್ಕೆಯನ್ನು ತಲೆಯ ಮೇಲೆ ಇರಿಸಿದ ಬಳಿಕ ಸರಾಗವಾಗಿ ನಡೆದುಕೊಂಡು ಹೋದಳು.
ಜೀವನ ಪೂರ್ತಿ ತೂಕದ ಪುಟ್ಟಿಯನ್ನು ತಲೆಯ ಮೇಲಿಟ್ಟುಕೊಂಡೇ ನಡೆಯುತ್ತಿದ್ದ ಹಣ್ಣಮ್ಮನಿಗೆ ಖಾಲಿ ಪುಟ್ಟಿ ಹೊತ್ತು ನಡೆದರೆ ಆಯ ತಪ್ಪುತ್ತಿತ್ತೋ ಏನೊ!
ಹಣ್ಣಮ್ಮ ಸುಮಾರು ಮೂರು ದಶಕಗಳ ಕಾಲ ಕುವೆಂಪು ಮನೆಗೆ ಹಣ್ಣು ಪೂರೈಸಿದ್ದಳು. ವರ್ಷದಲ್ಲಿ ಕನಿಷ್ಠ ೩೦-೪೦ ಬಾರಿ ಕುವೆಂಪು ಅವರನ್ನು ಕಾಣುತ್ತಿದ್ದ ಆಕೆಗೆ ಇದು ಯಾರ ಮನೆ ಎಂದು ತಿಳಿದಿರಬಹುದೇ? ಎಂದಾದರು ಮಾತುಕತೆ ನಡೆದಿರಬಹುದೆ? ಯಾವ ವಿಷಯವಾಗಿ ಮಾತನಾಡಿರಬಹುದು? ಇದನ್ನೆಲ್ಲಾ ಹಣ್ಣಮ್ಮನಿಗೆ ಕೇಳಿದರೆ ಹೇಗೆ ಎಂದು ಒಮ್ಮೆ ಪೀಠಿಕೆ ಹಾಕಲು ಶುರು ಮಾಡಿದೆವು. ಆದರೆ ಆಕೆ ಅಸಹನೆಯಿಂದ ‘ಅಯ್ಯೊ ಸುಮ್ನಿರ್ರಣ್ಣ ನನ್ ಕಸ್ಟ ನನ್ಗೆ’ ಎಂದು ಮುಂದುವರೆದು, ‘ಆ ಲೋಕದಲ್ಲಿ ಮಾರಕ್ಕೆ ಹಣ್ಣು ಸಿಕ್ತಾವೊ ಇಲ್ವೊ? ಆ ಸಾಬಣ್ಣ ಇರ್ತಾನೊ ಇಲ್ವೊ? ಯಾರ್ತವು ಹೋಗಿ ಕೇಳ್ಳಿ? ಏನ್ ಮಾಡದು ಅಂತ ಗೊತ್ತಾಗೊಲ್ದು’ ಎಂದು ಸ್ವಗತದಲ್ಲಿ ಮಾತನಾಡಿಕೊಂಡಳು.
ಹಣ್ಣಮ್ಮ ಆಗಷ್ಟೇ ಮಹದೇಶ್ವರನ ಬೆಟ್ಟಕ್ಕೆ ಹೋಗಿ ಮುಡಿ ಕೊಟ್ಟು ಬಂದಿದ್ದಳು. ಅವಳ ಪಾರಮಾರ್ಥಿಕ ಯೋಚನಾ ಲಹರಿ ಎಲ್ಲೆಲ್ಲೋ ಹರಿದಾಡುತ್ತಿತ್ತು.
ಹಣ್ಣಮ್ಮನ ಮಾತುಗಳನ್ನು ಮೂರ್ತ ರೂಪಕ್ಕೆ ತರಲೆತ್ನಿಸಿದ ನಮಗೆ ಅರ್ಥವಾದದ್ದು ಇಷ್ಟು…
ತಾನು ತೀರಿ ಹೋಗಿ…. ಆ ಸ್ವರ್ಗಕ್ಕೋ…. ನರಕಕ್ಕೋ… ಅಥವಾ ಬೇರಾವುದೊ ಗೊತ್ತಿಲ್ಲದ ಲೋಕಕ್ಕೆ ಹೋದಾಗ ಅಲ್ಲಿ ಮಾರಾಟಕ್ಕೆ ಹಣ್ಣು ಸಿಗುತ್ತೊ ಇಲ್ಲವೊ… ಅಲ್ಲಿ ಹಣ್ಣು ಇದ್ರು ಸಾಬಣ್ಣ ಇರ್ತಾನೋ ಇಲ್ಲವೊ ಎಂಬ ಆತಂಕ ಆಕೆಗೆ.
ಈ ಸಾಬಣ್ಣ ಯಾರಪ್ಪಾ ಅಂದ್ರೆ. ಮೈಸೂರಿನ ಬೊಂಬು ಬಜ಼ಾರ್ ಬಳಿ ಇದ್ದ ಒಬ್ಬ ಮುಸ್ಲಿಂ ಹಣ್ಣು ವ್ಯಾಪಾರಿ. ಪ್ರತಿ ದಿನ ಬೆಳಗ್ಗೆ ಹಣ್ಣಮ್ಮನಿಗೆ ಹಣ್ಣುಗಳನ್ನು ಕೊಟ್ಟು, ಡಜ಼ನ್‌ಗೆ ಅಥವಾ ಕೆ.ಜಿ.ಗೆ ಎಷ್ಟು ರೂಪಾಯಿಗೆ ಮಾರಬೇಕೆಂದು ತಿಳಿಸಿ, ಸ್ವಲ್ಪ ಚಿಲ್ಲರೆ ಹಣವನ್ನೂ ಕೊಟ್ಟು ಕಳುಹಿಸುತ್ತಿದ್ದ.
ವ್ಯಾಪಾರ ಮುಗಿಸಿ ಮರುದಿನ ಮುಂಜಾನೆ ಸಾಬಣ್ಣನ ಬಳಿ ಬಂದಾಗ, ಎಲ್ಲವನ್ನು ಲೆಕ್ಕ ಮಾಡಿ ಹಣ್ಣಮ್ಮನ ಲಾಭವನ್ನು ಕೊಟ್ಟು, ಅಸಲಿಗೆ ಮತ್ತೆ ಹಣ್ಣು ತುಂಬಿ ಕಳುಹಿಸುತ್ತಿದ್ದ. ಸಾಲ ಕೊಟ್ಟು, ಲೆಕ್ಕ ಹೇಳಿ ಕೊಟ್ಟು, ಬಡ್ಡಿ ಇಲ್ಲದೆ ದಶಕಗಳ ಕಾಲ ಅನ್ಯೋನ್ಯವಾಗಿ ನಡೆದುಕೊಂಡು ಬಂದಿದ್ದ ಈ ಸಂಬಂಜ ಪರ ಲೋಕದಲ್ಲಿ ಈ ಸಾಬಣ್ಣ ಇಲ್ಲದಿದ್ದರೆ ಏನು ಮಾಡುವುದು ಎಂಬ ಹಣ್ಣಮ್ಮನ ಚಿಂತೆಗೆ ಕಾರಣವಾಗಿತ್ತು.
ಹಣ್ಣಮ್ಮ ಮತ್ತು ಸಾಬಣ್ಣನ ವ್ಯಾಪಾರ ವಹಿವಾಟುಗಳನ್ನು ಆರ್ಥಿಕ ತಜ್ಞರು ಯಾವ ಮಾಡೆಲ್‌ಗೆ ಸೇರಿಸುತ್ತಾರೊ ನಮಗೆ ಗೊತ್ತಿಲ್ಲ… ಆದರೆ ಒಂದಂತು ನಿಜ, ಚೌಕಾಸಿ ಇಲ್ಲದೆ, ಬಂಡವಾಳವಿಲ್ಲದೆ ನಡೆಯುತ್ತಿದ್ದ ಈ ವ್ಯಾಪಾರದಿಂದ ಹಣ್ಣಮ್ಮನ ಬದುಕು ನೆಮ್ಮದಿಯಾಗಿ ಸಾಗಿತ್ತು.
ಮುಂದೊಂದು ದಿನ ಹಣ್ಣಮ್ಮನ ಬದಲಿಗೆ ಆಕೆಯ ಮಗಳು ಮಾದೇವಿ ಬಂದಿದ್ದಳು.
‘ಏನ್ ಮಾದೇವಿ ಹಣ್ಣಮ್ಮ ಎಲ್ಲಿ….’ ಎಂದು ತಾರಿಣಿ ಕೇಳಿದರು.
‘ಅವಳು ಹೋಗ್ಬುಟ್ಲಕ್ಕ… ಹೋದ ವಾರ ಒಂದು ನಾಟಿ ಕೋಳಿ ಇಡ್ಕಂಡ್ ಬಂದು ಒಬ್ಬಳೇ ಸಾರ್ ಮಾಡ್ಕೊಂಡ್ ಉಂಡ್ಲು. ಬೆಳಿಗ್ಗೆ ಎದ್ದೇಳ್ನೇ ಇಲ್ಲ… ’
ಮುಂದುವರೆದ ಮಾದೇವಿ, ‘ಒಂದ್ ಐದ್ ಕೇಜಿ ತಗಳಕ್ಕ… ಕಲ್‌ಸಕ್ಕರೆ ಇದ್ದಂಗ್ ಇದ್ದಾವೆ’ ಎಂದು ಹೇಳುತ್ತಿದ್ದುದು ನಮ್ಮ ಕಿವಿಗೆ ಬಿತ್ತು.
ಕುವೆಂಪುವಿನ ಜೀವನ ದೃಷ್ಟಿ ಮತ್ತು ಅದರಾಚೆಯ ಪರಿಕಲ್ಪನೆಗಳನ್ನು ನಿಮ್ಮ ಛಾಯಾ ಚಿತ್ರಗಳು ಹಿಡಿದಿಡಬೇಕು ಎಂದು ನಮಗೆ ಹಲವರು ಸಲಹೆ, ಸೂಚನೆಗಳನ್ನು ಕೊಟ್ಟಿದ್ದರು. ಆದರೆ ಇಲ್ಲಿ ನಮಗೆ ಪುಟ್ಟಪ್ಪನವರಿರಲಿ ಈ ಪುಟ್ಟಮ್ಮ ಕೂಡ ಕೈಗೆಟುಕಲಿಲ್ಲ.

(ಕೃಪಾಕರ ಸೇನಾನಿ ಬರೆದ `ಕ್ಯಾಮರಾ v/s ಕುವೆಂಪು’ ಕೃತಿ ಇಂದು ಬೆಳಗ್ಗೆ ಹತ್ತೂವರೆಗೆ ಮೈಸೂರು ಮಾನಸಗಂಗೋತ್ರಿಯ ಬಿ ಎಂ ಶ್ರೀ ಸಭಾಂಗಣದಲ್ಲಿ ಬಿಡುಗಡೆಯಾಗುತ್ತಿದೆ)

andolanait

Recent Posts

ಆಗಸ್ಟ್‌ 29 ರಂದು ಮೈಸೂರಿಗೆ ಮಾಜಿ ಸಿಎಂ ಆಗಮನ

ಮೈಸೂರು : ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಮೈಸೂರಿಗೆ ಆಗಮಿಸಲಿದ್ದಾರೆ. ಬೆಳಿಗ್ಗೆ 10;30ಕ್ಕೆ ಹೆಲಿಕಾಪ್ಟರ್‌ನಲ್ಲಿ…

21 mins ago

ಸಚಿವ ನಾಗೇಂದ್ರ ವಿರುದ್ಧ ಆರೋಪಕ್ಕೆ ಸಾಕ್ಷ್ಯಗಳಿಲ್ಲ : ಸಿಎಂ ಡಿ.ಕೆ.ಶಿವಕುಮಾರ್‌

ನವದೆಹಲಿ : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪ ಎದುರಿಸುತ್ತಿರುವ ಸಚಿವ ಬಿ. ನಾಗೇಂದ್ರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಮುಖ್ಯಮಂತ್ರಿ…

35 mins ago

ಗ್ರಾಮೀಣ ಜಲ ಆಸ್ತಿಗಳ ವೈಜ್ಞಾನಿಕ ನಿರ್ವಹಣೆಗೆ ಜಿಐಎಸ್ ಆಧಾರಿತ ಆಪ್ : ಸಚಿವ ಈಶ್ವರ ಖಂಡ್ರೆ

ಬೆಂಗಳೂರು : ಗ್ರಾಮೀಣ ಜಲ ಆಸ್ತಿಗಳ ವೈಜ್ಞಾನಿಕ ನಿರ್ವಹಣೆ ಮತ್ತು ನಕಲಿ ಬಿಲ್ ಗಳಿಗೆ ಕಡಿವಾಣ ಹಾಕಲು ಭೌಗೋಳಿಕ ಮಾಹಿತಿ…

1 hour ago

ಕೆಆರ್‌ಎಸ್‌ ಜಲಾಶಯಕ್ಕೆ ಮತ್ತಷ್ಟು ಹೆಚ್ಚಾದ ಒಳಹರಿವು

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದ ಒಳಹರಿವಿನಲ್ಲಿ ಮತ್ತಷ್ಟು…

5 hours ago

ಓದುಗರ ಪತ್ರ: ಮ್ಯಾನ್‌ಹೋಲ್ ಸರಿಪಡಿಸಿ

ವಿಜಯನಗರಕ್ಕೆ ಹೋಗುವ ರಸ್ತೆಯಲ್ಲಿ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದ ಮಹಾದ್ವಾರದ ಎದುರಗಡೆ ರಸ್ತೆಯ ಅಂಚಿಗೆ ಸೇರಿದಂತಿರುವ ಮ್ಯಾನ್ ಹೋಲ್‌ನಿಂದ ಹೊಲಸು ನೀರು…

9 hours ago

ಓದುಗರ ಪತ್ರ: ಎಚ್೧ಎನ್೧ ಮುನ್ನೆಚ್ಚರಿಕೆ ಇರಲಿ

ಕರ್ನಾಟಕದ ೩೨ ಜಿಗಳಲ್ಲಿ ಆಗಸ್ಟ್೨೨ರವರೆಗೆ ಒಟ್ಟು ೫,೦೦೦ ಎಚ್೧ಎನ್೧ ಪ್ರಕರಣಗಳು ದಾಖಲಾಗಿರುವುದು ಕಳವಳಕಾರಿ ಸಂಗತಿಯಾಗಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲೂ ಪ್ರಕರಣಗಳು…

9 hours ago