ಆಂದೋಲನ ಪುರವಣಿ

ಹಣ್ಣಮ್ಮ: ’ಕ್ಯಾಮರಾ v/s ಕುವೆಂಪು’ ಪುಸ್ತಕದ ಒಂದು ಚುಟುಕು

ಆ ದಿನ ಕುವೆಂಪು ಮನೆಗೆ ಹೋದಾಗ ಹಿಂಬಾಗಿಲಿನಲ್ಲಿ ಹಣ್ಣಮ್ಮ ನಿಂತಿದ್ದಳು. ನಮ್ಮನ್ನು ನೋಡಿದ ಕೂಡಲೆ ‘ವಸಿ ಕುಕ್ಕೆ ಇಳಿಸಣ್ಣ’ ಎಂದು ಮನವಿ ಮಾಡಿದಳು.

ಅಷ್ಟರಲ್ಲಿ ತಾರಿಣಿ, ‘ಏನ್ ಹೋದ್ ವಾರ ಬರಲೇ ಇಲ್ಲವಲ್ಲ’ ಎಂದಾಗ. ‘ಬೆಟ್ಟಕ್ಕೆ ಹೋಗಿದ್ದೆ. ಸುಸ್ತಾಗಿವ್ನಿ ವಸಿ ಕಾಫಿ ಕೊಡವ್ವ’ ಎಂದು ತಲೆಯ ಮೇಲಿದ್ದ ಬಟ್ಟೆಯ ಸಿಂಬಿಯನ್ನು ಬಿಡಿಸಿ ಹಣೆಯ ಮೇಲೆ ಇಬ್ಬನಿಗಳಂತೆ ಹರಡಿದ್ದ ಬೆವರಿನ ಹನಿಗಳನ್ನು ಒರೆಸಿಕೊಳ್ಳುತ್ತಾ ಉಸ್ಸಪ್ಪಾ ಎಂದು ಕುಳಿತುಕೊಂಡಳು.
ಹಣ್ಣಮ್ಮನ ಹೆಸರು ಪುಟ್ಟಮ್ಮ ಇರಬಹುದು. ಆಕೆ ಹಣ್ಣುಗಳನ್ನಷ್ಟೇ ಮಾರಾಟ ಮಾಡುತ್ತಿದ್ದರಿಂದ ಎಲ್ಲರೂ ಹಣ್ಣಮ್ಮ ಎಂದೇ ಕರೆಯುತ್ತಿದ್ದರು. ಈ ಹಣ್ಣಮ್ಮ ಅದೆಷ್ಟೋ ವರ್ಷಗಳಿಂದ ಮೈಸೂರಿನ ಒಂಟಿಕೊಪ್ಪಲಿನ ಕೆಲವೇ ಮನೆಗಳಿಗೆ ವರ್ತನೆಯಂತೆ ಹಣ್ಣು ಪೂರೈಸುತ್ತಿದ್ದಳು. ಈ ಪಟ್ಟಿಯಲ್ಲಿ ಕುವೆಂಪು ಅವರ ಮನೆಯೂ ಸೇರಿತ್ತು.
ಹಣ್ಣಮ್ಮ ಕುಕ್ಕೆ ಇಳಿಸಿದ ಮೇಲೆ ತಾರಿಣಿಗೆ ಹೆಚ್ಚು ಮಾತನಾಡುವ ಅವಕಾಶವಿರುತ್ತಿರಲಿಲ್ಲ. ಆಕೆ ಏನಾದರು ತಂದಿರಲಿ, ‘ಐದ್ ಡಜ಼ನ್ ತಗಳವ್ವ. ಕಲ್ಲುಸಕ್ಕರೆ ಇದ್ದಂಗೈತೆ’ ಎಂದು ಫರ್ಮಾನು ಹೊರಡಿಸಿ ಹಣ್ಣುಗಳನ್ನೆತ್ತಿ ಆಚೆ ಇಡಲು ಶುರುಮಾಡುತ್ತಿದ್ದಳು. ‘ಮನೆಯಲ್ಲಿ ಇರೋದೆ ನಾಲ್ಕು ಜನ ಅಷ್ಟೊಂದು ತಗೊಂಡು ಏನ್ ಮಾಡ್ಲಿ..’. ಎಂಬ ತಾರಿಣಿಯ ಕೊಸರು ನುಡಿಗೆ ಅಲ್ಲಿ ಯಾವ ಬೆಲೆಯೂ ಸಿಗುತ್ತಿರಲಿಲ್ಲ. ಕನಿಷ್ಠ ಮೂರು ಡಜ಼ನ್ ಪೆನಾಲ್ಟಿಯಾದರು ಬಿದ್ದೇ ಬೀಳುತ್ತಿತ್ತು.
ಮತ್ತೊಂದು ದಿನ, ಕುವೆಂಪು ಮನೆಯಲ್ಲಿ ತನ್ನ ಕುಕ್ಕೆ ಖಾಲಿ ಮಾಡಿದ್ದ ಹಣ್ಣಮ್ಮ ಮನೆಯಿಂದ ಹೊರ ನಡೆದಿದ್ದಳು. ನಮ್ಮನ್ನು ಕಂಡಾಕ್ಷಣ ಗೇಟಿನ ಬಳಿ ಕುಕ್ಕೆ ಇಳಿಸಿ, ಅಲ್ಲೇ ಬಿದ್ದಿದ್ದ ಸೈಸ್ ಕಲ್ಲನ್ನು ತೋರಿ, ‘ಈ ಕುಕ್ಕೆಗೆ ಇಟ್ಟು ಕೊಡಿ’ ಎಂದು ಕೋರಿದಳು. ಆ ಕಲ್ಲು ಸಾಕಷ್ಟು ಭಾರವಿತ್ತು. ಗಲಿಬಿಲಿಗೊಂಡು ‘ಅದ್ಯಾಕೆ’ ಎಂದಾಗ, ‘ಸುಮ್ಮನೆ ಇಡು’ ಎಂದು ಆಜ್ಞಾಪಿಸಿದಳು. ಕಲ್ಲಿನೊಂದಿಗೆ ಕುಕ್ಕೆಯನ್ನು ತಲೆಯ ಮೇಲೆ ಇರಿಸಿದ ಬಳಿಕ ಸರಾಗವಾಗಿ ನಡೆದುಕೊಂಡು ಹೋದಳು.
ಜೀವನ ಪೂರ್ತಿ ತೂಕದ ಪುಟ್ಟಿಯನ್ನು ತಲೆಯ ಮೇಲಿಟ್ಟುಕೊಂಡೇ ನಡೆಯುತ್ತಿದ್ದ ಹಣ್ಣಮ್ಮನಿಗೆ ಖಾಲಿ ಪುಟ್ಟಿ ಹೊತ್ತು ನಡೆದರೆ ಆಯ ತಪ್ಪುತ್ತಿತ್ತೋ ಏನೊ!
ಹಣ್ಣಮ್ಮ ಸುಮಾರು ಮೂರು ದಶಕಗಳ ಕಾಲ ಕುವೆಂಪು ಮನೆಗೆ ಹಣ್ಣು ಪೂರೈಸಿದ್ದಳು. ವರ್ಷದಲ್ಲಿ ಕನಿಷ್ಠ ೩೦-೪೦ ಬಾರಿ ಕುವೆಂಪು ಅವರನ್ನು ಕಾಣುತ್ತಿದ್ದ ಆಕೆಗೆ ಇದು ಯಾರ ಮನೆ ಎಂದು ತಿಳಿದಿರಬಹುದೇ? ಎಂದಾದರು ಮಾತುಕತೆ ನಡೆದಿರಬಹುದೆ? ಯಾವ ವಿಷಯವಾಗಿ ಮಾತನಾಡಿರಬಹುದು? ಇದನ್ನೆಲ್ಲಾ ಹಣ್ಣಮ್ಮನಿಗೆ ಕೇಳಿದರೆ ಹೇಗೆ ಎಂದು ಒಮ್ಮೆ ಪೀಠಿಕೆ ಹಾಕಲು ಶುರು ಮಾಡಿದೆವು. ಆದರೆ ಆಕೆ ಅಸಹನೆಯಿಂದ ‘ಅಯ್ಯೊ ಸುಮ್ನಿರ್ರಣ್ಣ ನನ್ ಕಸ್ಟ ನನ್ಗೆ’ ಎಂದು ಮುಂದುವರೆದು, ‘ಆ ಲೋಕದಲ್ಲಿ ಮಾರಕ್ಕೆ ಹಣ್ಣು ಸಿಕ್ತಾವೊ ಇಲ್ವೊ? ಆ ಸಾಬಣ್ಣ ಇರ್ತಾನೊ ಇಲ್ವೊ? ಯಾರ್ತವು ಹೋಗಿ ಕೇಳ್ಳಿ? ಏನ್ ಮಾಡದು ಅಂತ ಗೊತ್ತಾಗೊಲ್ದು’ ಎಂದು ಸ್ವಗತದಲ್ಲಿ ಮಾತನಾಡಿಕೊಂಡಳು.
ಹಣ್ಣಮ್ಮ ಆಗಷ್ಟೇ ಮಹದೇಶ್ವರನ ಬೆಟ್ಟಕ್ಕೆ ಹೋಗಿ ಮುಡಿ ಕೊಟ್ಟು ಬಂದಿದ್ದಳು. ಅವಳ ಪಾರಮಾರ್ಥಿಕ ಯೋಚನಾ ಲಹರಿ ಎಲ್ಲೆಲ್ಲೋ ಹರಿದಾಡುತ್ತಿತ್ತು.
ಹಣ್ಣಮ್ಮನ ಮಾತುಗಳನ್ನು ಮೂರ್ತ ರೂಪಕ್ಕೆ ತರಲೆತ್ನಿಸಿದ ನಮಗೆ ಅರ್ಥವಾದದ್ದು ಇಷ್ಟು…
ತಾನು ತೀರಿ ಹೋಗಿ…. ಆ ಸ್ವರ್ಗಕ್ಕೋ…. ನರಕಕ್ಕೋ… ಅಥವಾ ಬೇರಾವುದೊ ಗೊತ್ತಿಲ್ಲದ ಲೋಕಕ್ಕೆ ಹೋದಾಗ ಅಲ್ಲಿ ಮಾರಾಟಕ್ಕೆ ಹಣ್ಣು ಸಿಗುತ್ತೊ ಇಲ್ಲವೊ… ಅಲ್ಲಿ ಹಣ್ಣು ಇದ್ರು ಸಾಬಣ್ಣ ಇರ್ತಾನೋ ಇಲ್ಲವೊ ಎಂಬ ಆತಂಕ ಆಕೆಗೆ.
ಈ ಸಾಬಣ್ಣ ಯಾರಪ್ಪಾ ಅಂದ್ರೆ. ಮೈಸೂರಿನ ಬೊಂಬು ಬಜ಼ಾರ್ ಬಳಿ ಇದ್ದ ಒಬ್ಬ ಮುಸ್ಲಿಂ ಹಣ್ಣು ವ್ಯಾಪಾರಿ. ಪ್ರತಿ ದಿನ ಬೆಳಗ್ಗೆ ಹಣ್ಣಮ್ಮನಿಗೆ ಹಣ್ಣುಗಳನ್ನು ಕೊಟ್ಟು, ಡಜ಼ನ್‌ಗೆ ಅಥವಾ ಕೆ.ಜಿ.ಗೆ ಎಷ್ಟು ರೂಪಾಯಿಗೆ ಮಾರಬೇಕೆಂದು ತಿಳಿಸಿ, ಸ್ವಲ್ಪ ಚಿಲ್ಲರೆ ಹಣವನ್ನೂ ಕೊಟ್ಟು ಕಳುಹಿಸುತ್ತಿದ್ದ.
ವ್ಯಾಪಾರ ಮುಗಿಸಿ ಮರುದಿನ ಮುಂಜಾನೆ ಸಾಬಣ್ಣನ ಬಳಿ ಬಂದಾಗ, ಎಲ್ಲವನ್ನು ಲೆಕ್ಕ ಮಾಡಿ ಹಣ್ಣಮ್ಮನ ಲಾಭವನ್ನು ಕೊಟ್ಟು, ಅಸಲಿಗೆ ಮತ್ತೆ ಹಣ್ಣು ತುಂಬಿ ಕಳುಹಿಸುತ್ತಿದ್ದ. ಸಾಲ ಕೊಟ್ಟು, ಲೆಕ್ಕ ಹೇಳಿ ಕೊಟ್ಟು, ಬಡ್ಡಿ ಇಲ್ಲದೆ ದಶಕಗಳ ಕಾಲ ಅನ್ಯೋನ್ಯವಾಗಿ ನಡೆದುಕೊಂಡು ಬಂದಿದ್ದ ಈ ಸಂಬಂಜ ಪರ ಲೋಕದಲ್ಲಿ ಈ ಸಾಬಣ್ಣ ಇಲ್ಲದಿದ್ದರೆ ಏನು ಮಾಡುವುದು ಎಂಬ ಹಣ್ಣಮ್ಮನ ಚಿಂತೆಗೆ ಕಾರಣವಾಗಿತ್ತು.
ಹಣ್ಣಮ್ಮ ಮತ್ತು ಸಾಬಣ್ಣನ ವ್ಯಾಪಾರ ವಹಿವಾಟುಗಳನ್ನು ಆರ್ಥಿಕ ತಜ್ಞರು ಯಾವ ಮಾಡೆಲ್‌ಗೆ ಸೇರಿಸುತ್ತಾರೊ ನಮಗೆ ಗೊತ್ತಿಲ್ಲ… ಆದರೆ ಒಂದಂತು ನಿಜ, ಚೌಕಾಸಿ ಇಲ್ಲದೆ, ಬಂಡವಾಳವಿಲ್ಲದೆ ನಡೆಯುತ್ತಿದ್ದ ಈ ವ್ಯಾಪಾರದಿಂದ ಹಣ್ಣಮ್ಮನ ಬದುಕು ನೆಮ್ಮದಿಯಾಗಿ ಸಾಗಿತ್ತು.
ಮುಂದೊಂದು ದಿನ ಹಣ್ಣಮ್ಮನ ಬದಲಿಗೆ ಆಕೆಯ ಮಗಳು ಮಾದೇವಿ ಬಂದಿದ್ದಳು.
‘ಏನ್ ಮಾದೇವಿ ಹಣ್ಣಮ್ಮ ಎಲ್ಲಿ….’ ಎಂದು ತಾರಿಣಿ ಕೇಳಿದರು.
‘ಅವಳು ಹೋಗ್ಬುಟ್ಲಕ್ಕ… ಹೋದ ವಾರ ಒಂದು ನಾಟಿ ಕೋಳಿ ಇಡ್ಕಂಡ್ ಬಂದು ಒಬ್ಬಳೇ ಸಾರ್ ಮಾಡ್ಕೊಂಡ್ ಉಂಡ್ಲು. ಬೆಳಿಗ್ಗೆ ಎದ್ದೇಳ್ನೇ ಇಲ್ಲ… ’
ಮುಂದುವರೆದ ಮಾದೇವಿ, ‘ಒಂದ್ ಐದ್ ಕೇಜಿ ತಗಳಕ್ಕ… ಕಲ್‌ಸಕ್ಕರೆ ಇದ್ದಂಗ್ ಇದ್ದಾವೆ’ ಎಂದು ಹೇಳುತ್ತಿದ್ದುದು ನಮ್ಮ ಕಿವಿಗೆ ಬಿತ್ತು.
ಕುವೆಂಪುವಿನ ಜೀವನ ದೃಷ್ಟಿ ಮತ್ತು ಅದರಾಚೆಯ ಪರಿಕಲ್ಪನೆಗಳನ್ನು ನಿಮ್ಮ ಛಾಯಾ ಚಿತ್ರಗಳು ಹಿಡಿದಿಡಬೇಕು ಎಂದು ನಮಗೆ ಹಲವರು ಸಲಹೆ, ಸೂಚನೆಗಳನ್ನು ಕೊಟ್ಟಿದ್ದರು. ಆದರೆ ಇಲ್ಲಿ ನಮಗೆ ಪುಟ್ಟಪ್ಪನವರಿರಲಿ ಈ ಪುಟ್ಟಮ್ಮ ಕೂಡ ಕೈಗೆಟುಕಲಿಲ್ಲ.

(ಕೃಪಾಕರ ಸೇನಾನಿ ಬರೆದ `ಕ್ಯಾಮರಾ v/s ಕುವೆಂಪು’ ಕೃತಿ ಇಂದು ಬೆಳಗ್ಗೆ ಹತ್ತೂವರೆಗೆ ಮೈಸೂರು ಮಾನಸಗಂಗೋತ್ರಿಯ ಬಿ ಎಂ ಶ್ರೀ ಸಭಾಂಗಣದಲ್ಲಿ ಬಿಡುಗಡೆಯಾಗುತ್ತಿದೆ)

andolanait

Recent Posts

ಓದುಗರ ಪತ್ರ: ಬೆಲೆಯಲ್ಲಿ ನಾವು ತಗ್ಗೋದೇ ಇಲ್ಲ

ಬೆಲೆಯಲ್ಲಿ ನಾವು ತಗ್ಗೋದೇ ಇಲ್ಲ ಅಂತ ಚಿನ್ನ ಬೆಳ್ಳಿ! ಬೆಲೆ ಎಷ್ಟಾದರೂ ನಾವು ಬಗ್ಗೋದೇ ಇಲ್ಲ ಅಂತ ಕೆಲ ಗ್ರಾಹಕರು…

3 hours ago

ಓದುಗರ ಪತ್ರ: ಡಿಕೆಶಿಯವರ ನಿಲುವು ಸ್ವಾಗತಾರ್ಹ

ವಿದೇಶಿ ನೆಲದಲ್ಲಿ ದೇಶವನ್ನು ಟೀಕಿಸುವುದಿಲ್ಲ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ನಿಲುವು ಸ್ವಾಗತಾರ್ಹವಾಗಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲೇ ಅವರು…

3 hours ago

ಓದುಗರ ಪತ್ರ: ಬಾಂಗ್ಲಾದಲ್ಲಿ ಹಿಂದೂಗಳ ಸರಣಿ ಹತ್ಯೆ ಖಂಡನೀಯ

ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಬಾಂಗ್ಲಾ ದೇಶಕ್ಕೆ ೧೯೭೨ ರಲ್ಲಿ ಪಾಕಿಸ್ತಾನದಿಂದ ಬೇರ್ಪಡಿಸಿ…

4 hours ago

ಓದುಗರ ಪತ್ರ: ನಂಜನಗೂಡಿನಲ್ಲಿ ಆಟೋಗಳಿಗೆ ಮೀಟರ್ ದರ ಜಾರಿಯಾಗಲಿ

ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಆಗಮಿಸುತ್ತಾರೆ. ಆದರೆ ಕೆಲವು ಆಟೋ ಚಾಲಕರು…

4 hours ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ‘ನಿಯೋನೇಟಲ್ ಕೇರ್’ ಸೇವೆಯ ಮಾತೆ ಡಾ.ಅರ್ಮಿಡಾ ಫೆರ್ನಾಂಡೀಸ್

ಏಷ್ಯಾದ ಪ್ರಪ್ರಥಮ ಎದೆಹಾಲಿನ ಬ್ಯಾಂಕನ್ನು ಆರಂಭಿಸಿದ ಕೀರ್ತಿ ಕರ್ನಾಟಕದಲ್ಲಿ ಹುಟ್ಟಿದ, ಗೋವಾ ಮೂಲದ, ಈಗ ಮುಂಬೈಯಲ್ಲಿ ತನ್ನ ಸಾಮಾಜಿಕ ಕಾರ್ಯಗಳನ್ನು…

4 hours ago

ಮಲೆ ಮಹದೇಶ್ವರ ಬೆಟ್ಟ| ಕಾಲ್ನಡಿಗೆ ಪಾದಯಾತ್ರಿಗಳಿಗೆ ಸೌಲಭ್ಯ ಕಲ್ಪಿಸಿ: ಡಿಸಿಎಂ ಡಿಕೆಶಿ ಸೂಚನೆ

ಮಹಾದೇಶ್‌ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಸಹ…

4 hours ago