ಆಂದೋಲನ ಪುರವಣಿ

ಈ ದೀಪಾವಳಿಗೆ ಊರಿಗೆ ಹೋಗಿಯೇ ಹೋಗುತ್ತೇನೆ

ಹಬ್ಬ ಬಂದಾಗಲೆಲ್ಲ ಫೋನಾಯಿಸಿ, ‘ಹಬ್ಬಕ್ಕೆ ಊರಿಗೆ ಬಾ ಮಗನೆ’ ಎನ್ನುವ ಅವ್ವನ ಮಾತು ನೆನಪಿಗೆ ಬರುತ್ತದೆ. ಮಗಳು, ‘ಅಪ್ಪಾ ಈ ದೀಪಾವಳಿಗೆ ಪೊನ್ನಾಚಿಗೆ ಹೋಗೋಣವೇ? ಗೌರಿಕಡ್ಡಿ ಬೆಳಗೋಣವೇ’ ಎನ್ನುತ್ತಾಳೆ. ಹೌದು ಈ ಎಲ್ಲ ಸಂಭ್ರಮದಿಂದ ಇಷ್ಟು ವರುಷ ದೂರ ಇದ್ದೆ. ಈಗ ಅದರ ಸೇಡು ತೀರಿಸಿಕೊಳ್ಳುವಂತೆ ಮನಸೋ ಇಚ್ಛೆ ಪಟಾಕಿ ಹೊಡೆದು ಬೆಳಕಲ್ಲಿ ಮೀಯುವಾಸೆ. ಈ ಸಲದ ದೀಪಾವಳಿಯಲ್ಲಿ ಪಟಾಕಿ ಯಾರದಾದರೇನು ಹಚ್ಚುವವನು ಮಾತ್ರ ನಾನೇ ಆಗಿರುತ್ತೇನೆ!

ಸ್ವಾಮಿ ಪೊನ್ನಾಚಿ

swamyponnachi123@gmail.com

ಈ ದೀಪಾವಳಿಗೆ ಊರಿಗೆ ಹೋಗಿಯೇ ಹೋಗುತ್ತೇನೆ

ತಮಿಳುನಾಡಿನಿಂದ ಕರೀಕಲ್ಲು ಕೆಲಸಕ್ಕೆ ನಮ್ಮೂರಿಗೆ ಜನ ಬರುವವರೆಗೂ ನಮ್ಮೂರಿನ ದೀಪಾವಳಿ ಎಂದರೆ ಹೊಸ್ತಿಲ ಬಳಿ ಇಡುತ್ತಿದ್ದ ಎರಡು ಮಣ್ಣಿನ ಹರಳೆಣ್ಣೆ ದೀಪಗಳಷ್ಟೇ! ಉಳಿದಂತೆ ಮಾಮೂಲಿಯಾಗಿ ಯಾವ ಹಬ್ಬವೇ ಆದರೂ ಹಿರೀಕರ ಸಮಾಧಿಗೆ ಎಡೆ ಮಡಗುವುದು. ಮಾದಪ್ಪನ ಬೆಟ್ಟದ ಕಡೆ ತಿರುಗಿ ಒಂದು ಕಟ್ಟು ಗಂಧದಕಡ್ಡಿ ಹಚ್ಚಿ ತಿಪ್ಪೆ ಮೇಲೆ ನೆಟ್ಟರೆ ಆ ವರ್ಷದ ದೀಪಾವಳಿ ಮುಗಿದಂತೆ. ಯಾವಾಗ ಕರಿಕಲ್ಲು ಕ್ವಾರಿ ಶುರುವಾಗಿ ಹೊರಗಿನಿಂದ ಕೆಲಸಕ್ಕೆ ಜನ ಬರತೊಡಗಿದರೋ ಅಲ್ಲಿಂದ ನಮ್ಮೂರಿನಲ್ಲೂ ದೀಪಾವಳಿಯ ಆಚರಣೆ ವಿಶೇಷವಾಗಿ ಶುರುವಾಯಿತು. ಅವರು ಸಂಸಾರ ಸಮೇತ ಇಲ್ಲೇ ಉಳಿದು ದೀಪಾವಳಿಯನ್ನು ಮೂರು ದಿನ ಅದ್ಧೂರಿಯಾಗಿ ಆಚರಿಸುತ್ತಾ ದಿಕ್ಕಾಪಾಲಾಗಿ ಪಟಾಕಿ ಸಿಡಿಸಿದಾಗಲೇ, ಆಕಾಶಕ್ಕೆ ರಾಕೇಟು ಹಾರಿಸಿ ಚಿತ್ರವಿಚಿತ್ರ ಚಿತ್ತಾರ ಮೂಡಿಸಿದಾಗಲೇ ನಮ್ಮೂರಿನ ಜನಕ್ಕೆ ಓಹೋ ದೀಪಾವಳಿ ಎಂದರೆ ಹೀಗೆಲ್ಲ ಮಾಡಬೇಕು ಎಂದು ಅರಿವಾದದ್ದು. ಸಂಕ್ರಾಂತಿಯಲ್ಲಿ ದನ ಗುಡುಗಿಸುವುದಕ್ಕೆ, ಜಮೀನಿನಿಂದ ಆನೆಗಳನ್ನು ಓಡಿಸುವುದಕ್ಕಷ್ಟೇ ಪಟಾಕಿ ಇರುವುದು ಎಂದುಕೊಂಡಿದ್ದ ನಮಗೆ, ಹೀಗೆ ದಂಡಿದಂಡಿಯಾಗಿ ಪಟಾಕಿ ಸುಡುತ್ತಾರೆಂದರೆ ಆಶ್ಚರ್ಯವಾಗುತ್ತಿತ್ತು. ಊರಗುಡಿಯಲ್ಲಿ ನೂರೊಂದು ದೀಪ ಹಚ್ಚುವುದನ್ನೇ ದೊಡ್ಡ ಸಡಗರ ಎಂದುಕೊಂಡಿದ್ದ ನಮಗೆ ಆಕಾಶದಲ್ಲಿ ಮೂಡುವ ಬಣ್ಣಬಣ್ಣದ ಚಿತ್ರಗಳು ಅಪ್ಯಮಾನವಾದವು. ಬಿದಿರಿನಿಂದ ಮಾಡಿದ ಪೆಟ್ಲುಕೋಲಿಗೆ ಕಾಡಿನಲ್ಲಿ ಸಿಗುತಿದ್ದ ಗಂಗುಂಡೆ ಕಾಯಿಹಾಕಿ ಕೊಂತದಿಂದ ಜೋರಾಗಿ ನೂಕಿದರೆ ಟಪ್ ಎಂದು ಚಿನಕುರಳಿ ಪಟಾಕಿಯಂತೆ ಸದ್ದು ಮಾಡುತಿತ್ತು. ದೀಪಾವಳಿ ಅಂತ ಇದನ್ನೆಲ್ಲ ಮಾಡುತ್ತಿದ್ದಿಲ್ಲವಾದರೂ ಕಾಡಿನಲ್ಲಿ ಆ ಗಂಗುಂಡೆ ಕಾಯಿ ಅದೇ ಟೈಮಿಗೆ ಸರಿಯಾಗಿ ಬಲಿಕೆಯಾಗಿ ಪೆಟ್ಲು ಕೋಲಿನ ತೂತಿಗೆ ಸರಿಯಾಗುತಿತ್ತು. ಬುಗುರಿ ಆಟ, ಗೋಲಿ ಆಟದ ಕಾಲಗಳಂತೆ ಈ ಪೆಟ್ಲೂಕೋಲಿನ ಆಟದ ಕಾಲ ದೀಪಾವಳಿಗೆ ಸರಿಯಾಗುತಿತ್ತು. ಈ ತಮಿಳು ಹುಡುಗರು ಕೈಯಲ್ಲಿ ಗನ್ನು ಹಿಡಿದು ಮದ್ದಿನ ಟೇಪು ಸಿಕ್ಕಿಸಿ ಪಟ್ ಪಟ್ ಎನಿಸುವುದನ್ನು ನೋಡಿದ ಮೇಲೆ ನಾವು ಆ ಪೆಟ್ಲುಕೋಲನ್ನು ಅತ್ತ ಬಿಸಾಕಿ ಗನ್ನು, ಮದ್ದಿನ ಟೇಪು ಬಳಸತೊಡಗಿದೆವು. ಪದೇಪದೇ ಒಂದೊಂದು ಏಟಿಗೂ ಕಾಯಿ ತುರುಕುತಿದ್ದ ನಮಗೆ ಈ ರೀಲು ಸಿಕ್ಕಿಸಿ ಏ.ಕೆ.೪೭ ರೇಂಜಿಗೆ ಒಂದೇ ಸಮನೆ ಟಪ್‌ಟಪ್ ಎನಿಸುವುದು ಪರಮ ಸಡಗರದ ಸಂಗತಿಯಾಗಿತ್ತು.

ಚಿಕ್ಕ ವಯಸ್ಸಿನಲ್ಲೇ ಓದುವುದಕ್ಕೆ ಅಂತ ಮಠಕ್ಕೆ ಸೇರಿಸಿದ್ದರಿಂದ ಮತ್ತು ಶಿವರಾತ್ರಿ, ಗೌರಿ ಹಬ್ಬಕ್ಕಷ್ಟೇ ಮಠದಿಂದ ಊರಿಗೆ ಕಳಿಸುತಿದ್ದರಿಂದ ದೀಪಾವಳಿಯಲ್ಲಿ ಹೆಚ್ಚು ಊರಿಗೆ ಹೋಗಿರಲಿಲ್ಲ. ನನಗೆ ಬುದ್ಧಿ ಬರುವುದಕ್ಕೆ ಶುರುವಾದಾಗಿನಿಂದ ಹೆಚ್ಚುಕಡಿಮೆ ಇಲ್ಲಿಯ ತನಕವೂ ದೀಪಾವಳಿಯಲ್ಲಿ ಊರಿನಲಿದ್ದಿರಲಿಲ್ಲ. ಫೋನ್ ಪೇ, ಗೂಗಲ್ ಪೇ, ಹೋಗಲಿ ನೆಟ್ಟಗೆ ಮಾತಾಡುವುದಕ್ಕೆ ಫೋನೇ ಇಲ್ಲದ ಕಾಲದಲ್ಲಿ ಆರು ತಿಂಗಳಿಗೋ, ಮೂರು ತಿಂಗಳಿಗೋ ನೋಡೋಕೆ ಬರುವ ಅಪ್ಪಕೊಟ್ಟು ಹೋದ ದುಡ್ಡು ಎರಡೇ ದಿನಕ್ಕೆ ಖಾಲಿಯಾಗಿ, ಮತ್ತೊಮ್ಮೆ ಅಪ್ಪ ಬರುವತನಕ ಖಾಲಿಯಾಗೇ ಇರುತಿದ್ದ ನನಗೆ ಕನಕಪುರದ ಪೇಟೇ ಸ್ನೇಹಿತರು ದೀಪಾವಳಿಗೆ ಪಟಾಕಿ ಹೊಡೆಯಲು ಖರ್ಚುಮಾಡುವ ಹಣ ನೋಡಿಯೇ ದಂಗಾಗಿ ಹೋಗಿದ್ದೆ. ದೀಪಾವಳಿ ಬಂತೆಂದರೆ ಮಠದಿಂದ ಕದ್ದು ಪೇಟೆಗೆ ಹೋಗುತಿದ್ದೆ. ಅಲ್ಲಿ ಸಿಡಿಸುವ ಆಟಂಬಾಂಬ್, ಸುರ್‌ಸುರ್ ಬತ್ತಿ, ಹೂಕುಂದಗಳ ಬಿತ್ತಾರಗಳನ್ನು ನೋಡಲು. ಆವಾಗೆಲ್ಲ ಪಟಾಕಿ ಹಚ್ಚಲು ಸಿಕ್ಕಾಪಟ್ಟೆ ಆಸೆ ಆಗುತ್ತಿತ್ತಾದರೂ ಪಟಾಕಿ ಕೊಳ್ಳಲು ದುಡ್ಡಿಲ್ಲದ ನನಗೆ ಅದೊಂದು ಮರೀಚಿಕೆಯೇ ಆಗಿತ್ತು. ಸಿಡಿಯದೆ ಟುಸ್ ಎಂದಿದ್ದ ಪಟಾಕಿಗಳನ್ನು ಆರಿಸಿ ಜೇಬಿನಲ್ಲಿಟ್ಟುಕೊಂಡು ಮಠದ ಪಕ್ಕದಲ್ಲೇ ಇರುವ ಸ್ಮಶಾನದಲ್ಲಿ ಸಿಡಿಸಲು ಹೋಗಿ ಮೇಷ್ಟ್ರಿಂದ ಸರಿಯಾಗಿ ರುಬ್ಬಿಸಿಕೊಂಡ ಮೇಲೆ ದೂರದಲ್ಲಿ ನಿಂತು ನೋಡುವುದಕ್ಕಷ್ಟೇ ಸೀಮಿತವಾಯಿತು. ಯಾರಾದರೂ ದೊಡ್ಡ ಮನುಷ್ಯರು ಮಠಕ್ಕೆ ಬಂದು ಮಠದಲ್ಲಿ ಊರಿಗೆ ಹೋಗದೆ ಅಳಿದುಳಿದಿರುವ ಮಕ್ಕಳಿಗೆ ಸುರ್‌ಸುರ್ ಬತ್ತಿಕೊಟ್ಟು, ತಂತಿ ಮತಾಪು ಹತ್ತಿಸಿಕೊಟ್ಟರೆ ಅದೇ ನನಗೆ ಬಲುದೊಡ್ಡ ಖುಷಿಯ ವಿಚಾರವಾಗುತಿತ್ತು. ಹಂಗೂ ಕೆಲ ಸ್ನೇಹಿತರು ಪಟಾಕಿ ಹೊಡೆಯಲು ಜೊತೆ ಸೇರಿಸಿಕೊಳ್ಳುತಿದ್ದರಾದರೂ ಮಠದ ಹುಡುಗರು ಅನ್ನುವ ಕಾರಣಕ್ಕೆ ಅವರ ಅಪ್ಪ ಅಮ್ಮ ನಮ್ಮನ್ನು ಬೈದು ಹೋಗಿ ಮಠಕ್ಕೆ, ಇಷ್ಟೊತ್ತಾದರೂ ಪೇಟೆಯಲ್ಲಿ ಇಟ್ಟಾಡ್ತ ಇದ್ದಿರಲ್ಲ ಅಂತ ಕಳಿಸಿಬಿಡುತಿದ್ದರು.

ಹತ್ತನೇ ತರಗತಿ ಅನ್ನಿಸುತ್ತದೆ. ಗೆಳೆಯನೊಬ್ಬನ ಒತ್ತಾಯದಿಂದ ಮಳವಳ್ಳಿಯ ಒಂದು ಹಳ್ಳಿಗೆ ಅವನ ಜತೆ ದೀಪಾವಳಿ ಹಬ್ಬಕ್ಕೆ ಹೋಗಿದ್ದೆ. ಬೀದಿಯಲ್ಲಿ ಬೆಳಗಿಸಲು ಗೌರಿಕಡ್ಡಿಗೆ ಬೆಂಕಿ ಹಚ್ಚಿಕೊಟ್ಟರು. ಅದೇತಾನೇ ಉದ್ದದ ಗೌರಿಕಡ್ಡಿಯನ್ನು ಮೊದಲ ಬಾರಿಗೆ ನೋಡಿದ್ದ ನಾನು ಖುಷಿಯಾಗಿ ಹಿಡಿದುಕೊಂಡು ಬೀದಿಬೀದಿಯಲ್ಲಿ ಅಲೆದು ಇನ್ನೇನು ಉರಿದು ಆರಿಹೋಗಿ ಕೈ ಸುಡುತ್ತದೆನ್ನುವಾಗ ಊರಕ್ಕೆ ಬಿಸಾಡಿಬಿಟ್ಟಿದ್ದೆ. ಸ್ವಲ್ಪಹೊತ್ತು ಬಿಟ್ಟು ನೋಡಿದರೆ ಪಕ್ಕದ ಬೀದಿಯಲ್ಲಿ ಜೋರು ಬೆಳಕು. ಎಲ್ಲೋ ದೊಡ್ಡ ಹೂಕುಂಡ ಹಚ್ಚಿದ್ದಾರೆ ಎಂದು ಈಚೆ ಓಡಿಬಂದು ನೋಡಿದರೆ ಹುಲ್ಲಿನ ಬವಣೆಗೆ ಬೆಂಕಿ ಜೊರಾಗಿ ಹತ್ತಿಕೊಂಡು ಉರಿಯುತ್ತಿದೆ. ನಾನು ಊರಿನ ಬೀದಿಯಲ್ಲಿ ಓಡಾಡಿದ್ದನ್ನು ನೋಡಿದ್ದರಲ್ಲದೆ; ಗೌರಿ ಕಡ್ಡಿ ಇಲ್ಲದೆ ಬರಿಗೈಲಿ ಬಂದಿದ್ದನ್ನು ಕಂಡಿದ್ದವರು ನಾನೇ ಎಸೆದ ಕಡ್ಡಿಯಿಂದ ಬವಣೆಗೆ ಬೆಂಕಿ ಬಿದ್ದಿದ್ದೆಂದು ಸುಲಭವಾಗಿ ಗುರುತಿಸಿದರು. ನನ್ನ ಕೋಟಲೆಯನ್ನು ನೋಡಿದ ಮನೆಯವರು ಆವತ್ತೇ ರಾತ್ರಿ ನನ್ನ ಜೊತೆಗೆ ಸ್ನೆಹಿತನನ್ನೂ ಸೇರಿಸಿ ಬಸ್ ಹತ್ತಿಸಿ ಮಠಕ್ಕೆ ಕಳಿಸಿಬಿಟ್ಟರು. ದೀಪಾವಳಿಯ ಆ ಬೇಜಾರು ಕೂಡ ಹಾಗೇ ಎದೆಯಲ್ಲಿ ಉಳಿದುಬಿಟ್ಟಿತ್ತು. ಪಟಾಕಿ ಕೊಂಡುಕೊಳ್ಳಲು ದುಡ್ಡಿಲ್ಲದೆ, ಬೇರೆಯವರು ಪಟಾಕಿ ಹೊಡೆದು ಖುಷಿ ಪಡುವುದನ್ನು ಸಹಿಸಲಾಗದೆ ದೀಪಾವಳಿ ಎಂದರೆ ಸಾಕು ಖುಷಿಗಿಂತ ಬೇಜಾರು ಪಟ್ಟುಕೊಳ್ಳುವ ಹಬ್ಬದಂತೆಯೇ ಭಾಸವಾಗತೊಡಗಿತು.

ಪೀಯುಸಿಗೆ ಕೊಳ್ಳೇಗಾಲಕ್ಕೆ ಬರುವ ಹೊತ್ತಿಗೆ, ನಾನು ಒಂದಷ್ಟು ಪುಸ್ತಕಗಳನ್ನು ಓದಿ ಅಸ್ಪಶ್ಯತೆ, ಅದೂ, ಇದು ಅಂತೆಲ್ಲ ಪ್ರಶ್ನೆ ಮಾಡುವಷ್ಟರ ಮಟ್ಟಿಗೆ ಚೂರು ವಿಚಾರವಂತನಾಗಿದ್ದೆ. ಅದೇ ಸಮಯದಲ್ಲಿ ಯಳಂದೂರಿನ ಸ್ನೇಹಿತನೊಬ್ಬ ಹಾಸ್ಟೆಲ್ಲಿನಿದ್ದ ನನ್ನನ್ನು ದೀಪಾವಳಿಗೆ ತನ್ನ ಊರಿಗೆ ಕರೆದುಕೊಂಡು ಹೋದ. ಅಲ್ಲಿ ದೀಪಾವಳಿಯನ್ನ ಕಲ್ಲೆತ್ತುವ ಹಬ್ಬವೆಂದೂ ಕರೆದು, ಆ ದಿನ ಅಟ್ಟದ ಮೇಲಿರುವ ಕಾವಲಿ ಇಳಿಸಿ ರಾಶಿ ದೋಸೆ ಮಾಡಿ ಪೇರಿಸಿ, ಮನೆಗೆ ಬಂದವರಿಗೆ ಸಂಭ್ರಮದಿಂದ ಕೊಡುತ್ತಾರೆ. ಮೊದಲೆಲ್ಲಾ ಇಡ್ಲಿ, ದೋಸೆಯನ್ನು ಈ ಭಾಗದಲ್ಲಿ ಹಬ್ಬಗಳಿಗೆ ಮಾತ್ರ ಮಾಡುತಿದ್ದುದು. ಅದೂ ಸ್ಥಿತಿವಂತರ ಮನೆಯಲ್ಲಿ. ಹಿಂದುಳಿದ, ಸ್ಥಿತಿವಂತರಲ್ಲದವರ ಮನೆಗಳಲ್ಲಿ ಅದೂ ಇರುತ್ತಿರಲಿಲ್ಲ. ದೀಪಾವಳಿ ಹಬ್ಬದ ದಿನ ಮಾತ್ರ ಈ ಸ್ಥಿತಿವಂತರಲ್ಲದವರು ಉಳ್ಳವರ ಮನೆಗೆ ಹೋಗಿ ಅವರು ಮಾಡುವ ದೋಸೆಯನ್ನು ಬೇಡಿ ತಿಂದು ಬರುತಿದ್ದರು. ಸಾಮಾನ್ಯವಾಗಿ ಈ ಭಾಗದಲ್ಲಿ ದಲಿತರೇ ಹೆಚ್ಚು ಇದ್ದುದರಿಂದ ವರ್ಷಪೂರ್ತಿ ಅವರಿಗೆ ಕುಡಿಯಲು, ತಿನ್ನಲು ಏನೂ ಕೊಡದಿದ್ದವರು ಈ ದೀಪಾವಳಿ ಹಬ್ಬದಲ್ಲಿ ಮಾತ್ರ ತಿನ್ನುವುದಕ್ಕೆ ಕೊಡುತ್ತಿರುವುದು ನನಗೆ ಒಂದು ರೀತಿಯಲ್ಲಿ ಅಚ್ಚರಿಯಾಗುತಿತ್ತಲ್ಲದೆ, ಭಿಕ್ಷೆ ಹಾಕುತ್ತಿರುವಂತೆ ಭಾಸವಾಗುತ್ತಿತ್ತು. ಆ ದಿನ ಸ್ನೇಹಿತರ ಮನೆಯಲ್ಲೂ ಕೂಡ ಹೀಗೆ ಬರುವ ದಲಿತರನ್ನು ಮುಟ್ಟಿಸಿಕೊಳ್ಳದೆ ದೋಸೆ ನೀಡುತ್ತಿರುವುದು ಕಂಡು ಈ ದೀಪಾವಳಿಯ ಬಗ್ಗೆ ಮತ್ತಷ್ಟು ಬೇಜಾರಾಗತೊಡಗಿತು. (ಈಗ ಕಲ್ಲೆತ್ತುವ ಆಚರಣೆ ಇಲ್ಲ. ಮತ್ತು ಇಡ್ಲಿ, ದೋಸೆಗಳು ನಿತ್ಯಜೀವನದ ಅಂಗವೇ ಆಗಿರುವುದರಿಂದ ಅದು ವಿಶೇಷ ತಿಂಡಿ ಎಂದು ಅನ್ನಿಸಿಕೊಳ್ಳುವುದಿಲ್ಲ. ಮತ್ತೂ ಈಗ ಮನೆಮನೆಗೆ ಹೋಗಿ ಯಾರೂ ದೋಸೆ ಕೇಳುವುದೂ ಇಲ್ಲ. ಕೆಲವೊಂದು ಕುಟುಂಬಗಳು ಇದನ್ನು ಸಂಪ್ರದಾಯದಂತೆ ಪಾಲಿಸುತ್ತಾ ಈಗಲೂ ದೋಸೆಯನ್ನು ರಾಶಿಯಾಗಿ ಮಾಡುವುದುಂಟು. ಆ ಕಾಲದಲ್ಲಿ ದೋಸೆ ತಿಂದಿದ್ದ ಹಿರಿಜೀವಗಳು ಅದನ್ನ ಮರೆಯಬಾರದೆಂದು ಸಾಂಪ್ರದಾಯಿಕವಾಗಿ ಹೋಗಿ ಒಂದು ದೋಸೆಯನ್ನು ಸಾಂಕೇತಿಕವಾಗಿ ಪಡೆಯುವುದೂ ಉಂಟು)

ಇದೇ ಮನಸ್ಥಿತಿಯಲ್ಲಿದ್ದ ನನಗೆ ಕೆಲಸ ಸಿಕ್ಕಿದ ಮೇಲೆ, ಮೂರು ದಿನ ರಜೆ ಸಿಕ್ಕಿತು ಇಲ್ಲಿದ್ದು ಏನು ಮಾಡಲಿ ಅಂತ ದೀಪಾವಳಿ ಹಬ್ಬದ ದಿನವೇ ಊರಿಗೆ ಹೊರಟಿದ್ದೆ. ಹಾಳಾದ ಆ ಕರೀಕಲ್ಲಿನ ಜನರು ನಮ್ಮೂರಿನವರಿಗೆ ದೀಪಾವಳಿ ಹಬ್ಬದ ಮಡಿ ಮೈಲಿಗೆ ಅಂಟಿಸಿ ಹೋಗಿದ್ದರು. ಮನೆಗೆ ಹೋದ ನನ್ನನ್ನು ಹೊರಗಡೆ ಕೂರಿಸಿ ತಲೆ ಮೇಲೆ ಸಗಣಿ ನೀರೆರಚಿದರಲ್ಲದೆ, ಒಗೆದು ಇಸ್ತ್ರಿ ಮಾಡಿಟ್ಟುಕೊಂಡಿದ್ದ ಬ್ಯಾಗಿನಲ್ಲಿದ್ದ ಅಷ್ಟೂ ಬಟ್ಟೆಗಳನ್ನು ಮಡಿ ಅಂತ ಹೇಳಿ ಮತ್ತೆ ಸಗಣಿ ನೀರಿಗೆ ಹಾಕಿದರು. ಇಂತಹ ಮೂಢನಂಬಿಕೆಗಳನ್ನು ಇಷ್ಟ ಪಡದ ನಾನು ಥತ್ತರೀಕೆ ಅಂತೇಳಿ ಹಬ್ಬಗಳಿಗೆ ಊರಿಗೆ ಹೋಗುವುದನ್ನೇ ನಿಲ್ಲಿಸಿ ಬಿಟ್ಟಿದ್ದೆ.

ಈಗ ಹಬ್ಬದ ಪರಿಕಲ್ಪನೆ ಮೊದಲಿಗಿಂತಲೂ ಭಿನ್ನವಾಗಿದೆ. ಸ್ವಲ್ಪ ಬದಲಾವಣೆಗಳೂ ಆಗಿದೆ.ಈ ಆಧುನಿಕ ಕಾಲಕ್ಕೆ ಅದು ಒಗ್ಗಿಕೊಂಡಿದೆ. ಹಬ್ಬಗಳ ಕುರಿತು ಇದ್ದ ನನ್ನ ಮನೋಧೋರಣೆಯೂ ಬದಲಾಗಿದೆ. ಕಡುಬಡವರೂ ಕೂಡ ಪಟಾಕಿ ಚೀಟಿ ಅಂತ ಕಟ್ಟಿ ಸಾಕು ಬೇಕು ಅನ್ನುವಷ್ಟು ಪಟಾಕಿ ಸಿಡಿಸುತ್ತಾರೆ. ಹೊಸಬಟ್ಟೆಗಳನ್ನು ಹಾಕಿಕೊಂಡು ಸಂಭ್ರಮ ಪಡುತ್ತಾರೆ. ಮೂರೂ ದಿನವೂ ಬೆಳಕು ಹಚ್ಚಿ, ಬೆಳಕು ಹಂಚುತ್ತಾರೆ. ಮನೆ ಮುಂದೆ ನೂರಾರು ದೀಪ ಬೆಳಗುತ್ತಾರೆ. ಈ ದೀಪಗಳನ್ನು ನೋಡಿದಾಗಲೆಲ್ಲ ನನಗೆ ಒಳಗೆ ಹೇಳಿಕೊಳ್ಳಲಾಗದ ಖುಷಿಯಾಗುತ್ತದೆ. ಅಂಧಕಾರವೆಂಬ ಅಜ್ಞಾನದಿಂದ ಬೆಳಕೆಂಬ ಜ್ಞಾನದ ಕಡೆ ಹೋಗುತ್ತಿರುವಂತೆ ಕಾಣುತ್ತದೆ. ಜಗತ್ತೆಲ್ಲ ಬೆಳಕಲ್ಲಿ ಮಿಂದೇಳುತ್ತಿದ್ದರೆ, ಪಾಪಕೂಪದಿಂದ ಪಾರಾಗಿ ಪುಣ್ಯದಕಡೆ ಸಾಗುತಿದ್ದಾರೆ ಎನಿಸುತ್ತದೆ. ಹಳೆ ಬಾಳು ಸತ್ತಿತ್ತು, ಕೂಳೆ ಬಾಳು ಸುಟ್ಟಿತ್ತು, ಹೊಸ ಬಾಳು ಹುಟ್ಟಿತ್ತು ದೀಪ ಹಚ್ಚ ಎಂಬ ಪರಮೇಶ್ವರ ಭಟ್ಟರ ದೀಪಹಚ್ಚ ಹಾಡಿನ ಸಾಲುಗಳು ನೆನಪಾಗುತ್ತವೆ.

andolana

Recent Posts

ಕುಶಾಲನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣ

• ಕೆ.ಬಿ.ಶಂಶುದ್ದೀನ್ ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಪಟ್ಟಣ ಅಭಿವೃದ್ಧಿಯಾದಂತೆ ಕಳ್ಳತನವೂ ಹೆಚ್ಚಳ; ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯ…

6 mins ago

ಬಸವನಕಟ್ಟೆ ಏರಿಯಲ್ಲಿ ಬಿರುಕು; ನೀರು ಪೋಲು

ವಡೆಯನಪುರ ಸಮೀಪದ ಕೆರೆ ಒಡೆಯುವ ಆತಂಕ; ಏರಿಯನ್ನು ದುರಸ್ತಿಪಡಿಸಲು ಒತ್ತಾಯ • ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ವಡೆಯನಪುರದ ಸಮೀಪವಿರುವ…

13 mins ago

ಹೊಲಗದ್ದೆಗಳಲ್ಲಿ ಹಕ್ಕಿಪಕ್ಷಿಗಳು ಏಕೆ ಬೇಕು?

• ರಮೇಶ್ ಪಿ.ರಂಗಸಮುದ್ರ ಪಕ್ಷಿಗಳಿಗೂ ಕೃಷಿಗೂ ಅವಿನಾಭಾವ ಸಂಬಂಧವಿದೆ. ಪಕ್ಷಿಗಳು ಮಾನವನಿಗಿಂತಲೂ ಹೆಚ್ಚಾಗಿ ಪ್ರಕೃತಿಯೊಡನೆ ಬೆರೆತಿವೆ. ಸಸ್ಯ ವೈವಿಧ್ಯತೆಯ ನಡುವೆ…

31 mins ago

ಕೊಬ್ಬರಿ ಬೆಂಬಲ ಬೆಲೆ ಏರಿಕೆ

ಪ್ರತಿ ಕ್ವಿಂಟಾಲ್ ಉಂಡೆ ಕೊಬ್ಬರಿಗೆ 100 ರೂ. ಹಾಗೂ ಹೋಳಾದ ಕೊಬ್ಬರಿಗೆ 420 ರೂ. ದರ ಹೆಚ್ಚಿಸಲಾಗಿದೆ ಎಂದು ಕೇಂದ್ರ…

44 mins ago

ಭತ್ತದ ಕೊಯ್ಲಿಗೆ ಮುನ್ನ ಕೆಲವು ಸಲಹೆಗಳು

• ಜಿ.ಕೃಷ್ಣ ಪ್ರಸಾದ್ ಕಾವೇರಿ ಬಯಲಿನಲ್ಲಿ ಭತ್ತದ ಕಟಾವು ಶುರುವಾಗಿದೆ. ದೈತ್ಯ ಗಾತ್ರದ ಕಟಾವು ಯಂತ್ರಗಳು ಗದ್ದೆಗೆ ಲಗ್ಗೆ ಇಟ್ಟಿವೆ.…

50 mins ago

ರಾಜ್ಯದಲ್ಲಿ ಬಗೆಹರಿಯದ ಬಿಜೆಪಿ ಬಣ ಹೋರಾಟ

ರಾಜ್ಯ ಬಿಜೆಪಿಯ ಆಂತರಿಕ ಸಂಘರ್ಷ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಒಂದು ಕಡೆ ಪಕ್ಷಾಧ್ಯಕ್ಷ ವಿಜಯೇಂದ್ರ ಅವರ ಬಣ ಮತ್ತೊಂದು ಕಡೆ…

59 mins ago