• ಕೇಶವಮೂರ್ತಿ
ತೆಂಗಿನ ತೋಟದಲ್ಲಿ ‘ಯಾದ’ ಅಂದರೆ ಇಲಿಗಳು ಹಾಗೂ ಅಳಿಲುಗಳ ಕಾಟ ವಿಪರೀತವಾದಾಗ ಬೆಳೆ ಗಾರರು ಅವುಗಳಿಂದ ಬೆಳೆಗಳನ್ನು ರಕ್ಷಿಸಲು ವಿಧವಿಧವಾದ ತಂತ್ರಗಳನ್ನು ಬಳಸ್ತಾರೆ. ಇಲಿಗಳ ಹಾವಳಿಯನ್ನು ಹತೋಟಿಗೆ ತರಲು ಕೆಲ ಬಾರಿ ವಿಷ ಪ್ರಯೋಗ ಮಾಡುತ್ತಾರೆ. ಅಲ್ಲದೆ ಬೋನು ಇರಿಸಿ ಅವುಗಳನ್ನು ಸೆರೆ ಹಿಡಿಯುವುದೂ ಉಂಟು. ಇನ್ನು ಕೆಲ ಸಾವಯವ ಕೃಷಿಕರು ತೋಟಗಳಲ್ಲಿ ಬೆಕ್ಕುಗಳನ್ನು ಸಾಕುತ್ತಾರೆ ಅಥವಾ ಹಾವುಗಳನ್ನು ಸಾಯಿಸದೇ ತೋಟದಲ್ಲಿಯೇ ಇರುವಂತೆ ಮಾಡಿ ಅವುಗಳಿಂದ ಇಲಿಗಳ ಹಾವಳಿಯನ್ನು ಹತೋಟಿಗೆ ತರುವ ಪ್ರಯತ್ನ ಮಾಡುತ್ತಾರೆ. ಇಲಿಗಳು ಹಾಗೂ ಅಳಿಲುಗಳು ಮರಹತ್ತದಂತೆ ತೆಂಗಿನ ಮರದ ಮಧ್ಯದಲ್ಲಿ ಕಬ್ಬಿಣದ ತಗಡು ಶೀಟ್‌ಗಳನ್ನು ಹೊಡೆಯುವುದು ಮತ್ತೊಂದು ವಿಧಾನ. ಆದರೆ ಈ ಬುದ್ದಿವಂತ ಜೀವಿಗಳು ತಗಡಿನ ಮೇಲೆ ಹತ್ತುವುದನ್ನು ಹಾಗೂ ನೆಗೆಯುವುದನ್ನು ಕಂಡಾಗ ಬೆರಗಾದ ರೈತರು ಅದೇ ತಗಡನ್ನು ಉಲ್ಟಾ ಆಲಿಕೆಯ ರೀತಿಯಲ್ಲಿ ಕಟ್ಟಿ ‘ಯಾದ’ಗಳು ಮೇಲೆ ಹೋಗುವುದಕ್ಕೆ ಕಡಿವಾಣ ಹಾಕುತ್ತಾರೆ.
ಕೆಲ ಅನುಭವಿ ಕೃಷಿಕರ ಪ್ರಕಾರ, ‘ತೆಂಗಿನ ಮರಕ್ಕೆ ತಗಡು ಹೊಡೆಯುವ ಮೊದಲು, ಮರ ಹತ್ತಿ ಮರದಲ್ಲಿ ವಾಸವಾಗಿರುವ ಯಾದಗಳನ್ನು ಓಡಿಸಬೇಕು. ಇಲ್ಲದಿದ್ದರೆ ಅವು ಮರದ ಮೇಲೆಯೇ ಇದ್ದು ಗರಿ ಕೂಡಿರುವ ತೋಟದಲ್ಲಿ ಮರದಿಂದ ಮರಕ್ಕೆ ಸುಲಭವಾಗಿ ಓಡಾಡುತ್ತವೆ’. ಹೀಗೆಯೇ ತೆಂಗಿನ ಬೆಳೆಗಾರರನ್ನು ಕಾಡುವ ಇಲಿಗಳ ಹತೋಟಿಗೆ ತರತರಹದ ವಿಧಾನ ಅನುಸರಿಸಿದರೂ ಅವು ಮರ ಹತ್ತೋದು ಬಿಟ್ಟಿಲ್ಲ. ಏಕೆ? ಇದೇ ಪ್ರಶ್ನೆಯನ್ನು ರೈತರೊಬ್ಬರು ತುಂಬಿದ ಸಭೆಯಲ್ಲಿ ಕೇಳಿದ್ದರು. ಯಾರಿಂದಲೂ ಸಮರ್ಪಕ ವಾದ ಉತ್ತರ ಬರಲಿಲ್ಲ. ‘ನೀವು ಏನೆಲ್ಲಾ ವಿಧಾನಗಳನ್ನು ಅನುಸರಿಸಿದರೂ ಇಲಿಗಳನ್ನು ಮರ ಹತ್ತದಂತೆ ತಡೆಯುವುದಕ್ಕೆ ಆಗಲ್ಲ. ಅವು ಏಕೆ ಮರ ಹತ್ತುತ್ತವೆ? ಯಾರಾದ್ರೂ ಯೋಚನೆ ಮಾಡಿದ್ದೀರಾ? ಮುಂದುವರಿದು, ಆ ರೈತರೇ ಹೇಳಿದ್ದರು, ‘ನೋಡಿ ಇಲಿಗಳ ಆಹಾರ ಮರದಲ್ಲಿದೆ. ಆ ಆಹಾರ ಬಿಟ್ಟರೆ ಅವಕ್ಕೆ ಬೇರೆ ಆಹಾರವಿಲ್ಲ. ಹಾಗಾಗಿ ಅವು ಎಷ್ಟೇ ಕಷ್ಟಗಳು ಎದುರಾದರೂ ಮರ ಹತ್ತೇ ಹತ್ತುತ್ತವೆ. ಏಕೆ ಹೇಳಿ? ಅವಕ್ಕೆ ಆಹಾರ ಬೇಕು. ಅವೂ ಬದುಕಬೇಕು’, ತುಂಬಿದ ಸಭೆ ಶಾಂತವಾಯಿತು. ಮುಂದುವರಿದು ಹೇಳಿದರು, ‘ನೋಡಿ ಇಲಿಗಳು ಮರ ಹತ್ತುವುದು ತೆಂಗಿನ ಮರದಲ್ಲಿರೋ ಅದರ ಆಹಾರಕ್ಕಾಗಿ ಅಂದಮೇಲೆ, ಅದರ ಆಹಾರವನ್ನು ನಿಮ್ಮ ತೋಟದಲ್ಲಿ ಮರಗಳ ಬುಡದಲ್ಲೇ ಒದಗಿಸಿ. ಆಗ ಅದು ಕಷ್ಟ ಪಟ್ಟು ಮರವನ್ನಾದರೂ ಏಕೆ ಹತ್ತಬೇಕು. ಬುಡದಲ್ಲಿ ನೀವು ಒದಗಿಸಿರುವ ಆಹಾರವನ್ನೇ ತಿಂದುಕೊಂಡು ನೆಲದಲ್ಲಿಯೇ ಬಿಲವನ್ನು ತೋಡಿಕೊಂಡು ವಾಸಿಸುತ್ತವೆ. ಅವುಗಳು ನೆಲದಲ್ಲಿ ಬಿಲ ತೋಡುವುದರಿಂದ ಮಳೆ ನೀರು ಭೂಮಿಯಲ್ಲಿ ಸುಲಭವಾಗಿ ಇಂಗುತ್ತದೆ. ಅವುಗಳ ಮಲ ಮತ್ತು ಮೂತ್ರದ ಮೂಲಕ ಮಣ್ಣಿನ ಫಲವತ್ತತ್ತೆಯೂ ಹೆಚ್ಚಾಗುತ್ತದೆ. ಹಾಗೆಯೇ ಹರಿದಾಡುವ ಹಾವುಗಳಿಗೆ ಅವು ಆಹಾರವಾಗಿ, ನಿಮ್ಮ ತೋಟದಲ್ಲಿ ನಿಸರ್ಗವೇ ನಿಯಂತ್ರಣ ಮಾಡಲಿದೆ’.
ಯಾವ ಆಹಾರಗಳನ್ನು ನೀವು ತೋಟದಲ್ಲಿ ಇಲಿಗಳಿಗಾಗಿ ಬೆಳೆಯಬೇಕು ಎಂದರೆ, ಸಿಹಿ ಗೆಣಸು, ಆರಾರೋಟ್, ಕ್ಯಾರೆಟ್ ಹಾಗೂ ಇತರೆ ಗೆಡ್ಡೆ ಜಾತಿಯ ಬೆಳೆಗಳು. ಇವು ನೆಲಕ್ಕೆ ಹೊದಿಕೆಯಾಗಿ ತೇವ ಸಂರಕ್ಷಣೆಗೂ
ಸಹಕಾರಿಯಾಗಲಿದೆ. ನಿಸರ್ಗ ಪರಿಪೂರ್ಣವಾಗಿದೆ ಅನ್ನುವ ಮಾತಿದೆ. ಇಲ್ಲಿ ನಾವು ಮಾತ್ರ ಬದುಕಿ, ಇತರ ಪ್ರಾಣಿಪಕ್ಷಿಗಳು ಹಾಳಾಗಬೇಕು ಎನ್ನುವ ಭಾವನೆಯೇ ತಪ್ಪು. ನಾವೂ ಬದುಕಿ, ಇತರರಿಗೂ ಬದುಕಲು ಅವಕಾಶ ನೀಡಬೇಕು. ಆಗ ಸಾಮರಸ್ಯ ಸಾಧ್ಯ. ಕೋತಿಗಳ ಕಾಟ ತಪ್ಪಿಸಲು, ತೋಟದ ಸುತ್ತ ಅವುಗಳಿಗೆಂದೇ ನಾಟಿ ಮಾವು, ಹಲಸು, ನೇರಳೆ ಮರ ಹಾಕಿರುವ ರೈತರಿದ್ದಾರೆ. ಅಳಿಲು, ಇಲಿ, ಹಕ್ಕಿ ಪಕ್ಷಿಗಳಿಗಾಗಿ ಆಲ, ಅತ್ತಿ, ಗೋಣಿ ಮರಗಳನ್ನು ಬೆಳೆಸಿರೋ ಪುಣ್ಯಾತರಿದ್ದಾರೆ. ನಿಮ್ಮ ಆಹಾರ ನೀವು ತಿನ್ನಿ ನಮ್ಮ ಆಹಾರದ ಕಡೆ ಬರಬೇಡಿ ಅಂತಾ ಅವುಗಳಿಗೆ ಪರ್ಯಾಯ ಆಹಾರ ಒದಗಿಸಿದರೆ, ಅವುಗಳೇಕೆ ನಮ್ಮ ಆಹಾರದ ಬೆಳೆಗಳ ತಂಟೆಗೆ ಬರುತ್ತವೆ? ಅಷ್ಟಕ್ಕೂ ಅವೇನು ನಮ್ಮ ವೈರಿಗಳಾ?
ಆಲೋಚನೆ ಮಾಡಿ, (ಅಂಕಣಕಾರರು ಮೈಸೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರು) keshavamurthy.n@gmail.com
ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…
ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು…
ಹೊಸದಿಲ್ಲಿ : 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್‌ಗೆ ಜಾಮೀನು ದೊರೆತಿರುವುದನ್ನು ವಿರೋಧಿಸಿ ಸಂತ್ರಸ್ತೆ…
ಬೆಂಗಳೂರು : ಮಾರ್ಕ್ʼ ಸಿನಿಮಾದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ…
ಚಾಮರಾಜನಗರ : ಅನ್ನದಾತರಾಗಿರುವ ರೈತರ ಬಗ್ಗೆ ಆತ್ಮೀಯ ಕಾಳಜಿಯಿದ್ದು, ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದೆ…
ಬೆಂಗಳೂರು : ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು…