ಆಂದೋಲನ ಪುರವಣಿ

ಹಿಂದುತ್ವ ಅತಿಗೆ ಹೋಗಿ ಈಗ ಇಳಿಯುತ್ತಿದೆ: ದೇಮ

ಸಂದರ್ಶಕರು: ಆದಿತ್ಯ ಭಾರದ್ವಜ್

ಪ್ರಶ್ನೆ: ತಮಗೆ ಆರ್‌ಎಸ್‌ಎಸ್ ಬಗ್ಗೆ ಈಗ ಯಾಕೆ ಬರೆಯಬೇಕು ಅನ್ನಿಸಿತು?

ದೇಮ: ನನ್ನ ಈ ಪ್ರಯತ್ನಕ್ಕೆ ಕಾರಣ-ಆರ್‌ಎಸ್‌ಎಸ್ ಚಿತಾವಣೆ, ಬಿಜೆಪಿ ಸರ್ಕಾರದ ಅವಾಂತರಗಳು ಹಾಗೂ ಆರ್‌ಎಸ್‌ಎಸ್ ಛೂ ಗುಂಪುಗಳ ದಾಂದಲೆ- ಇವೇನೆ. ಕೆಲವು ಸಂಗತಿಗಳು ಸುಮಾರು ದಿನಗಳಿಂದಲೂ ನನ್ನನ್ನು ಕಾಡುತ್ತಿತ್ತು. ಉದಾರಣೆಗೆ- ಉಖ ಮೀಸಲಾತಿ, ಈ ಬಗ್ಗೆ ಸಣ್ಣ ಟಿಪ್ಪಣಿ ಮಾಡಿದ್ದೆ ಹಾಗೂ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ-೨೦೨೧’ ಹೆಸರಿನ ನಿಜಾರ್ಥದಲ್ಲಿ ಏನು ಮತಾಂತರ ನಿಷೇಧ ಕಾ್ಂದೆು ಮಾಡಿದ್ದಾರೋ ಅದರ ಬಗ್ಗೆಯೂ ಓದುವುದು, ಟಿಪ್ಪಣಿ ಬರೆಯುವುದು ಮಾಡಿದ್ದೆ. ಈ ರೀತಿೆುಂಲ್ಲ ನಾನು ತಳಮಳದಲ್ಲಿ ಇದ್ದಾಗ ಪಠ್ಯಪುಸ್ತಕದ ವಿವಾದ ಬಂತು. ಸರ್ಕಾರ ತುಂಬಾ ಅಂದರೆ ತುಂಬಾನೆ ಅವಾಂತರ ಮಾಡಿಬಿಟ್ಟಿತು.

ನಾನು ಹೆಡ್ಗೆವಾರ್ ಪಠ್ಯ ಸೇರ್ಪಡೆಗೆ ಆಕ್ಷೇಪಣೆ ಮಾಡಿ ಬರೆದ ಪತ್ರವನ್ನು ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರು ಉಪೇಕ್ಷೆ ಮಾಡಿದರು. ನನ್ನ ಉದ್ದೇಶ ಇಷ್ಟೇ ಇತ್ತು- ಹೆಡ್ಗೆವಾರ್ ಬರೆಹ ಪಠ್ಯವಾಗಿ ಚೆನ್ನಾಗಿ ಇರಲೂಬಹುದೇನೊ. ಆದರೆ ಹೆಡ್ಗೆವಾರ್ ಬಗ್ಗೆ ಮಕ್ಕಳಿಗೆ ಏನೆಂದು ಪರಿಚಯ ಮಾಡಿಕೊಡುತ್ತೀರಿ? ಚಾತುರ್ವರ್ಣ ಹಿಂದೂ ಪ್ರಭೇದದ ಆರ್‌ಎಸ್‌ಎಸ್ ಹುಟ್ಟು ಹಾಕಿದವರು ಎಂದು ಪರಿಚಯ ಮಾಡಿಕೊಡಬೇಕಾಗಿ ಬರುತ್ತದಲ್ಲ, ಇದು ಮಕ್ಕಳ ಶಿಕ್ಷಣಕ್ಕೆ ಒಳಿತೇ ಎನ್ನುವುದನ್ನು ಚರ್ಚಿಸಬೇಕೆಂದಿದ್ದೆ. ಹಾಗೇ ‘ಈ ಪಠ್ಯಪುಸ್ತಕ ತಿರುಚುವಿಕೆ ಎನ್‌ಡಿಎ ಸರ್ಕಾರದ ಮಾನವಸಂಪನ್ಮೂಲ ಸಚಿವ ಮುರಳಿ ಮನೋಹರ ಜೋಷಿ ಅವರ ಕಾಲದಿಂದಲೂ ಇತ್ತು’ ಎಂದು ನಾನು ಹೇಳಿದರೆ, ಅದಕ್ಕೆ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರು ‘ದೇವನೂರ ಮಹಾದೇವ ಸರಿಯಾಗಿ ಹೇಳಿದ್ದಾರೆ… ವಾಜಪೇಯಿಯವರ ಕಾಲದಲ್ಲಿ ಬಹಳ ಒಳ್ಳೆಯ ಕೆಲಸಗಳಾಗಿವೆ, ರಸ್ತೆ ಅಭಿವೃದ್ಧಿಯಾಗಿದೆ…’ ಅಂದರೆ ಮುಂದಕ್ಕೆ ನಾನು ಏನು ತಾನೇ ಮಾತಾಡಲಿ?

ಈ ಸಂದರ್ಭದಲ್ಲಿ ಬಿಜೆಪಿ ನಾಯಕರು, ಆರ್‌ಎಸ್‌ಎಸ್ ಪರಿವಾರದ ಚಿಂತಕರು ಮೈಗೆಲ್ಲಾ ಹರಳೆಣ್ಣೆ ಹಾಕಿಕೊಂಡು ಅಖಾಡಾಕ್ಕೆ ಇಳಿದಿದ್ದರು. ಇನ್ನೂ ಕೆಲವರು ಅಂಡಾಭಂಡಾ ಆಡುತ್ತಿದ್ದರು. ಸಾಣೆಹಳ್ಳಿ ಶ್ರೀಗಳು ಬಸವಣ್ಣನ ಪಠ್ಯ ತಿರುಚುವಿಕೆ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದರೆ, ಅದಕ್ಕೆ ಮುಖ್ಯಮಂತ್ರಿಗಳು ‘ಹೌದು, ಅಲ್ಲಲ್ಲಿ ಸಣ್ಣಪುಟ್ಟ ತಪ್ಪುಗಳಾಗಿವೆ. ಅದನ್ನು ಸರಿಪಡಿಸುತ್ತೇವೆ’ ಅಂದರು. ಅರೆ ಏನಿದು? ಬಸವಣ್ಣನ ಜೀವ ತೆಗೆದಿದ್ದಾರೆ. ದೇಹ ಇದೆ ಹೌದು. ಇಂಥಹದನ್ನೇ ಸಣ್ಣಪುಟ್ಟ ತಪ್ಪು ಅಂತಾರಲ್ಲ… ಏನಾಗಿದೆ ಅಂತ ತುಮುಲಕ್ಕೆ ಬಿದ್ದೆ. ಆ ತುಮುಲದಿಂದ ಹೊರಬರಲು ಇದರ ಆಳ ಏನು ಅಂತ ಒಂದಿಷ್ಟು ಓದತೊಡಗಿದೆ. ಅದರ ನಾಡಿ ಹಿಡಿಯಲು ನೋಡಿದೆ. ಒಂದು ತಿಂಗಳು ಓದಲು ತೆಗೆದುಕೊಂಡೆ ಅನ್ನಿಸುತ್ತದೆ. ಇದನ್ನು ೧೫ ದಿನ ಬರೆಯುತ್ತ ಒದ್ದಾಡಿದೆ. ಬರೆದದ್ದನ್ನು ಸ್ಪಷ್ಟಮಾಡಲು ಹಾಗೂ ಸರಳ ಮಾಡಲು ತಿಂಗಳ ಮೇಲೆ ತೆಗೆದುಕೊಂಡೆ.

ಪ್ರಶ್ನೆ: ನೀವು ‘ಆರ್‌ಎಸ್‌ಎಸ್ ವರ್ಣಾಶ್ರಮ ಧರ್ಮದ ಪ್ರತಿಪಾದಕರು’ ಎಂದಿರುವಿರಿ. ಆದರೆ ಆರ್‌ಎಸ್‌ಎಸ್- ಬಿಜೆಪಿ ಇವತ್ತು ದಲಿತರು ಆದಿವಾಸಿಗಳ ಬೆಂಬಲವನ್ನೂ ಪಡೆದಿದೆ. ಅದಕ್ಕೆ ಅವರು ಠ್ಠಚಿಚ್ಝಠಿಛ್ಟ್ಞಿ ಜ್ಞಿಛ್ಠಠಿ ಒಂದನ್ನು ರೂಪಿಸಿದ್ದಾರೆ. ಹಿಂದುತ್ವವು ಜಾತಿಯನ್ನು ಮೀರಿ ‘ಹಿಂದು’ ಸಮಾಜವನ್ನು ಒಗ್ಗೂಡಿಸುವ ಒಂದು ಸಿದ್ಧಾಂತ ಎಂಬ ವಾದವನ್ನು ಹಲವು ತುಳಿತಕ್ಕೊಳಗಾದ ಸಮುದಾಯಗಳ ಜನ ನಂಬುತ್ತಿರುವಂತಿದೆ. ಇದಕ್ಕೆ ಉತ್ತರವೇನು?

ದೇಮ: yes sir yes. ಇದಕ್ಕೆ ಉತ್ತರ ಸರಳವಾಗೂ ಇಲ್ಲ. ಕೆಲವು ತುಳಿತಕ್ಕೊಳಗಾದ ಸಮುದಾಯಗಳ ಜನರು ಇತ್ತೀಚೆಗೆ ಆರ್‌ಎಸ್‌ಎಸ್‌ನ ಈ ಪರಿಕಲ್ಪನೆ ಬಲೆಗೆ ಬಿದ್ದಿರುವುದೂ ಹೌದು, ನಂಬುತ್ತಿರುವುದೂ ನಿಜ. ದಲಿತರು, ಆದಿವಾಸಿ, ತಳಸಮುದಾಯಕ್ಕೆ ಏನೂ ಕೊಡಬೇಕಾಗಿಲ್ಲ, ಒಂದು ಮುಗುಳ್ನಗೆ ಸಾಕು, ಅವರ ಬೆನ್ನ ಮೇಲೆ ಕೈಯಿಟ್ಟರೂ ಅವರು ಕೃತಜ್ಞತೆಯಿಂದ ಮಾರುಹೋಗುತ್ತಾರೆ. ಅವರ ಈ ದುಃಸ್ಥಿತಿಗೆ ಇಲ್ಲಿ ಯಾರನ್ನು ಅಪರಾಧಿ ಮಾಡೋಣ?
ಒಂದು ಪ್ರಸಂಗ ಇತ್ತೀಚಿನದು. ಆಗಷ್ಟೆ ‘ಆರ್‌ಎಸ್‌ಎಸ್ ಆಳ ಮತ್ತು ಅಗಲ’ ಪ್ರಕಟವಾಗಿತ್ತು. ಆಗ ನಮ್ಮ ಮನೆ ಎಲೆಕ್ಟ್ರಿಕ್ ಕೆಲಸ ಸ್ವಲ್ಪ ರಿಪೇರಿಯಿತ್ತು. ನನ್ನ ಗೆಳೆಯರೊಬ್ಬರು ಕೆಲಸದಲ್ಲಿ ಪರಿಣಿತರು. ಅವರು ರಿಪೇರಿೆುಂಲ್ಲಾ ಮಾಡಿ ಇನ್ನೂ ಸ್ವಲ್ಪ ಕೆಲಸ ಬಾಕಿ ಉಳಿಸಿ, ಲೋಕಾಭಿರಾಮವಾಗಿ ಮಾತಾಡುತ್ತಾ ಕುಳಿತರು. ಅವರಿಗೆ ಅಪಾರವಾದ ಲೋಕಜ್ಞಾನ ಇದೆ. ಮಾತಿನ ನಡುವೆ, ಈಗ ಬರೆದ ಪುಸ್ತಕದ ಬಗ್ಗೂ ಬಂತು. ಅವರು ಆರ್‌ಎಸ್‌ಎಸ್‌ನ ಭೀಕರ ಭೂಗತಲೋಕದ ಬಗ್ಗೆ ವರ್ಣಿಸುತ್ತಾ ಒಂದು ಲೋಕ ಸೃಷ್ಟಿಸಿಬಿಟ್ಟರು. ಆಮೇಲೆ ‘ನೋಡ್ತಾ ಇರಿ, ದಲಿತರು, ತಳಸಮುದಾಯವರು ಬೀದಿ ಹೆಣಗಳಾಗಿ ಬಿಡ್ತಾರೆ… ನಾವು ಮನೆ ಹೊರಗಡೆ ಕುಳಿತಿದ್ದೀವಿ. ಬೀದೀಲಿ ಯಾರೋ ನಿಮ್ಮತ್ತ ಬೆರಳು ತೋರಿಸಿ ಹೋಗುತ್ತಾನೆ. ಪಕ್ಕದ ಇನ್ನೊಬ್ಬ ಗುಂಡು ಹಾರಿಸುತ್ತಾನೆ. ಮುಗೀತು ಅಲ್ಲಿಗೆ’ ಅಂದರು. ನಾನು ಕುಪಿತಗೊಂಡೆ. ಗುಂಡು ಹಾಕುತ್ತದೆ ಅಂತ ಅಲ್ಲ. ಈ ನನ್ನ ಗೆಳೆಯನ ಮನಸ್ಸಿನ ಆಳ-ಅಗಲ-ಆಟ ಏನು ಅಂತ? ನಾನು ಕಠೋರವಾಗಿ I say, Shut up. Don’t repeat. What ever it may beಅಂದೆ. ಅದೆಲ್ಲಿತ್ತೊ ಇಂಗ್ಲಿಷ್ ಅದೂ ಬಂತು. ಆಮೇಲೆ ಕನ್ನಡದಲ್ಲಿ ‘ಪ್ರಕೃತಿಯು ತರ್ಕಕ್ಕೆ ಮೀರಿದ್ದು. ನಮಗೆ ನಿಲುಕದ್ದು’ ಅಂದೆ. ಆಗಲೂ ಆತನ ಮನಸ್ಥಿತಿಯ ಆಳ-ಅಗಲ- ಆಟ ಅರ್ಥವಾಗಲಿಲ್ಲ. ಈಗಲೂ ಅರ್ಥವಾಗುತ್ತಿಲ್ಲ. ಇರಲಿ, ನನಗೆ ಎಳೆಯದರಲ್ಲಿ ಕತೆ ಹೇಳಿ ಬೆಳೆಸಿದ ನನ್ನ ಅಜ್ಜಿ ಹೇಳಿದ ಕತೆೊಂಂದು ಬಂದು ಸಾಂತ್ವಾನ ನೀಡಿತು. ‘ಒಬ್ಬ ಇಸ(ವಿಷ)ಬ್ರಹ್ಮ ಅಂತ. ಅವನಿಗೆ ನಾಕು ಮುಖ. ಎಂಟು ಕೈಗಳು. ಅವನು ನಮ್ಮವರನ್ನು ಒಂದು ಕಡೆಯಿಂದ ಕೊಲ್ಲುತ್ತಾ, ಬರುತ್ತಿರುತ್ತಾನೆ. ಅವನು ನಮ್ಮೂರಿಗೂ ಬರುತ್ತಾನೆ. ನಮ್ಮೂರಲ್ಲೊಬ್ಬ ಹುಡುಗ ತಪ್ಪಿಸಿಕೊಂಡು ಓಡುವಾಗ ಅಲ್ಲೊಬ್ಬ ಅಗಸರವನು ಬಟ್ಟೆ ಒಗೆಯುತ್ತಾ ಇರುತ್ತಾನೆ. ನಮ್ಮ ಹುಡುಗ ಅವನಿಗೆ ಹಿಂಗಿಂಗೆ ಅಂತ ಹೇಳುತ್ತೆ. ಅಷ್ಟರಲ್ಲಿ ಇಸಬ್ರಹ್ಮ ಅಲ್ಲಿಗೆ ಬರ್ತಾನೆ… ‘ಯಾರ್ ಇವ್ನ’ ಅಂತ ಕೇಳ್ತಾನೆ. ಅಗಸರವರನು ‘ನನ್ನ ಮಗ ಮಾಸ್ವಾಮಿ’ ಅಂತಾನೆ. ಆಗ ಹಿಸಬ್ರಹ್ಮ ‘ಆಗಾದರೆ ನೀವಿಬ್ಬರು ಒಟ್ಟಿಗೆ ಊಟ ಮಾಡಿ’ ಅನ್ನುತ್ತಾನೆ. ಆಗ ಈ ಅಗಸರವನು ಒಂದು ಬಾಳೆ ಎಲೆ ತಕ್ಕಂಡು ಅದರ ಉದ್ದಕ್ಕೂ ಬೆರಳಿಂದ ಒಂದು ಗೆರೆ ಎಳೆದು ಈ ಹುಡುಗನ ಎದುರಿಗೆ ಕೂರಿಸ್ಕಂಡು ‘ನೀನು ಆ ಕಡೆ ಉಣ್ಣು, ನಾನು ಈ ಕಡೆ ಉಣ್ತೀನಿ’ ಅಂತಾನೆ. ಇಸಬ್ರಹ್ಮ ಅಲ್ಲಿಂದ ಮುಂದಕ್ಕೋಯ್ತಾನೆ. ಅದಕ್ಕೆ ಈಗ ಬಾಳೆ ಎಲೆಗೆ ಮಧ್ಯದಲ್ಲಿ ಒಂದು ಗೆರೆ ಇರುತ್ತೆ. ಬದುಕಿದ ಆ ಹುಡುಗನ ಸಂತಾನವೇ ನಾವು’ – ಕತೆ ಇದು. ಯಾರು ಆ ಇಸ(ವಿಷ-Poison) ಬ್ರಹ್ಮ(Creator)? ಅವನಿಗೆ ನಾಲ್ಕು ಮುಖಗಳಂತೆ. ಇದು ಚಾತುರ್ವರ್ಣ ಪದ್ಧತಿಯೇ ಇರಬಹುದೆ? ಚಾತುರ್ವರ್ಣದ ಆರಂಭ ಕಾಲದಲ್ಲಿ ಜನಸ್ತೋಮವನ್ನು ಚಾತುರ್ವರ್ಣಕ್ಕೆ ಬಗ್ಗಿಸುವ ಪ್ರಯತ್ನದಲ್ಲಿ ಜಾತಿ/ವರ್ಗಭೇದ ಒಪ್ಪದವರ ಮೇಲೆ ಪುರಾತನ ಕಾಲದಲ್ಲಿ ಭೀಕರ ದಾಳಿ ನಡೆದಿರಬಹುದೆ? ಅದು ಈಗ ಸಮುದಾಯದ ಸುಪ್ತಮನಸ್ಸಲ್ಲಿ ಮಸುಕಾಗಿ ಕತೆಯ ರೂಪದಲ್ಲಿ ಉಳಿದಿರಬಹುದೆ? ಜಾತಿ/ವರ್ಣಕ್ಕೆ ಬಗ್ಗದ ಆ ಜಾತಿ-ವಿಹೀನರೇ ಇಂದು ‘ಹೀನ ಜಾತಿ’ ಎಂದೆನಿಸಿಕೊಳ್ಳುತ್ತಿರಬಹುದೆ? ಹೀಗೆಲ್ಲಾ ಈಗ ಅನ್ನಿಸತೊಡಗಿದೆ. ಇರಲಿ.

ಇಂದಿನ ಕಾಲಮಾನದಲ್ಲಿ ದಲಿತರು, ಆದಿವಾಸಿಗಳು, ತಳಸಮುದಾಯಗಳು ಎಲ್ಲಿ ಚಾತುರ್ವರ್ಣ ಹಿಂದೂ ಪ್ರಭೇದದಿಂದ ಕಳಚಿಕೊಂಡುಬಿಡುತ್ತಾರೋ ಎಂಬ ಆತಂಕಕ್ಕೆ ಒಳಗಾಗಿ ಆರ್‌ಎಸ್‌ಎಸ್ ಮತ್ತು ಅದರ ಸಂತಾನಗಳು ದಲಿತರು, ಆದಿವಾಸಿಗಳು, ತಳಸಮುದಾಯಗಳ ಉದ್ಧಾರಕರಂತೆ ವೇಷ ಧರಿಸಿದ್ದಾರೆ. ಆರ್‌ಎಸ್‌ಎಸ್ ನಡೆ-ನುಡಿ ಬದಲಿಸಿಕೊಂಡಿದೆ. ಇದನ್ನು ನಾವು ಮೊದಲು ಮನದಟ್ಟು ಮಾಡಿಕೊಳ್ಳಬೇಕು. ಸಮಾಜಕ್ಕೂ ಮನದಟ್ಟು ಮಾಡಬೇಕು ಹಾಗೂ ಆರ್‌ಎಸ್‌ಎಸ್ ಸಂತಾನ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಹೆಚ್ಚಾಗಿ ಅಧಿಕಾರದ ಲಾಲಸೆಗಾಗಿ ರಾಜಕಾರಣದಿಂದ ಅಂತಸ್ತು, ಸ್ಥಾನಮಾನ ಪಡೆಯಲು, ವೇಗವಾಗಿ ಹಣ ಗಳಿಸಲು ತಳಸಮುದಾಯಗಳ ಅವಾಕಾಶವಾದಿ ಜನರೂ ನುಗ್ಗುತ್ತಿದ್ದಾರೆ ಎಂದೂ ಅನ್ನಿಸುತ್ತದೆ. ಹಿಂದೆ ರಾಜ ಪಾಳೆಗಾರರ ಕಾಲದಲ್ಲಿ ಯುದ್ಧವಾಗುವಾಗ ಜನ ಲೂಟಿ ಮಾಡಲು ಸೈನ್ಯಕ್ಕೆ ಸೇರುತ್ತಿದ್ದರಂತೆ. ಹೆಚ್ಚು ಕಮ್ಮಿ ಇದೂ ಅದೇ ರೀತಿಯೇ ಲೂಟಿಗಾಗಿ. ಇಂತಹದು ಕ್ಷಣಿಕ. ನೀರ ಮೇಲಣ ಗುಳ್ಳೆ.

ಇನ್ನು Subaltern hindutva ಪ್ರಶ್ನೆಗೆ ಬಂದರೆ, ಇದು ‘ದೇಹ ಒಂದು’ ವಾಸ್ತವದ ಮೂಲಕ ಅದನ್ನು ಸಮಾಜಕ್ಕೂ ಅಳವಡಿಸಿ ‘ಹಿಂದೂ ಒಂದು’ ಎಂದು ಅನ್ನುವ ಮೂಲಕ ಸಮಾಜವನ್ನು ಸ್ಥಗಿತಗೊಳಿಸುವ ‘ಇದ್ದಲ್ಲೆ ಬಿದ್ದಿರು’ ಸಿದ್ಧಾಂತ. ಆಯ್ತು, ಭಾರತದಲ್ಲಿ ಮತದಾನದ ಹಕ್ಕು ಪಡೆದ ಭಾರತದ ಹಿಂದೂ-ಪ್ರಜೆಗಳು ತಮ್ಮ ಇಷ್ಟವಾದ ಜಾತಿ/ವರ್ಣವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಮಾಡಿದರೆ ಆಗ ‘ಹಿಂದೂ ಒಂದು’ ಆಗಬಹುದೇನೊ! ಹುಟ್ಟಿಗೇ ಜಾತಿ/ವರ್ಣ ಅಂಟಿಸಿ ಬಿಟ್ಟಿದ್ದಾರಲ್ಲಪ್ಪ! ಹುಟ್ಟಿಗೆ ಅಂಟಿರುವ ಜಾತಿ/ವರ್ಣಗಳ ಹುಟ್ಟಡಗಿಸಬೇಕಾಗಿದೆ.

ಪ್ರಶ್ನೆ: ಆರ್‌ಸ್‌ಎಸ್ ಕಾರ್ಯವಿಧಾನದಲ್ಲಿ ಸುಳ್ಳಿನ ಪಾತ್ರದ ಬಗ್ಗೆ ತಾವು ಬರೆದಿರುವಿರಿ. ಇವತ್ತು ಜಗತ್ತು Post Truth Age ನಲ್ಲಿ ಇದೆ ಎಂದು ಬಣ್ಣಿಸಲಾಗುತ್ತಿದೆ. ಇದನ್ನು ಎದುರುಗೊಳ್ಳುವ ಬಗೆ ಹೇಗೆ?

ದೇಮ: ಇವತ್ತು ಜಗತ್ತು Post Truth Age  ನಲ್ಲಿದೆ ಎಂದಿದ್ದೀರಿ. ಅದಕ್ಕೂ ಮೊದಲು Truth Age ಇತ್ತೆ? ನನಗೆ ಅನುಮಾನ. ಈಗPost Truth Age ಹೇಗೆ ಬಂತು? ನನಗೆ ಇದು ಅರ್ಥವಾಗುತ್ತಿಲ್ಲ. ಈ ಹಿಂದೆ ಚಂದಮಾಮದಲ್ಲಿ ಒಂದು ಜಾಹೀರಾತು ಬರುತ್ತಿತ್ತು. ಅದರಲ್ಲಿ ಗಾಂಧೀಜಿ ‘ಮನುಷ್ಯ ತನ್ನನ್ನು ವಂಚಿಸಿಕೊಂಡಷ್ಟು ಬೇರೆ ಯಾರನ್ನೂ ವಂಚಿಸಿರಲಾರ’ ಎಂದು ಒಂದು ನುಡಿಗಟ್ಟು ಇತ್ತು. ಗಾಂಧಿಗೆ ಹೀಗೆ ಅನ್ನಿಸುವುದಾದರೆ, ಇನ್ನು ನನ್ನ ಕತೆ ಏನಪ್ಪಾ ದೇವರೇ ಅಂತ ಒದ್ದಾಡಿದ್ದೆ. ಇದು ಆಗಾಗ ನನ್ನೊಳಗೆ ಸುಳಿದು ಹೋಗುತ್ತಿರುತ್ತದೆ. ಇರಲಿ, ಈ ಕಾಲಕ್ಕೂ ಬಂಧುತ್ವದ ಪರಿಭಾಷೆಯಲ್ಲಿ ಮಾತಾಡೋಣ. ಈ ದಿಕ್ಕಲ್ಲಿ ಸಣ್ಣಪುಟ್ಟ ಕ್ರಿೆುಂಗಳೂ ಆಗಬೇಕು. ಬೇಕು-ಎಲ್ಲ ಸ್ತರದಲ್ಲೂ ವಿಕೇಂದ್ರೀಕರಣ, ಸರ್ವ ಸಮುದಾಯದ ಭಾಗವಹಿಸುವಿಕೆಯ ಪ್ರಜಾಪ್ರಭುತ್ವ.

ಪ್ರಶ್ನೆ: ಇವತ್ತು ದೇಶದಲ್ಲಿ ಮತ್ತು ರಾಜ್ಯದಲ್ಲಿ ಹಿಂದುತ್ವದ, ಆಳುವ ಪಕ್ಷದ ಟೀಕಾಕಾರರನ್ನು ಅನೇಕ ರೀತಿಗಳಲ್ಲಿ ದಮನಿಸಲಾಗುತ್ತಿದೆ ಎಂಬ ಕೂಗು ಎದ್ದಿದೆ. ಅದು ಜೈಲಿಗೆ ಹಾಕುವುದರಿಂದ, ಕೊಲೆ ಬೆದರಿಕೆಗಳು, ಹತ್ಯೆಗಳವರೆಗೆ. ಇದು ಬರಹಗಾರರಲ್ಲಿ ಒಂದು ಭಯದ ವಾತಾವರಣ, ಒಂದು self-censorship ಮನೆ ಮಾಡುವಂತೆ ಮಾಡಿದೆಯೇ?

ದೇಮ: ಇರಬಹುದು, ಚಳಿ ಬಿಡಿಸಬೇಕಾಗಿದೆ.

ಪ್ರಶ್ನೆ: ಕಳೆದ ಆರು ತಿಂಗಳಿಂದ ರಾಜ್ಯದಲ್ಲಿ ಕೋಮು ಧೃವೀಕರಣ ಹೆಚ್ಚಿದೆ. ಹಿಜಾಬ್, ಹಲಾಲ್, ಮುಸ್ಲಿಮರ ಆರ್ಥಿಕ ಬಹಿಷ್ಕಾರದವರೆಗೂ ಬಂದಿದೆ. ಹಿಂದುತ್ವದ ಅಡಿಯಲ್ಲಿ ಜಾತಿಯನ್ನು ಮೀರಿ ‘ಹಿಂದು’ ಸಮಾಜವನ್ನು ಒಗ್ಗೂಡಿಸಲು ಮುಸ್ಲಿಮರ ‘ಗುಮ್ಮ’ ತೋರಿಸಲಾಗುತ್ತಿದೆ ಎಂದು ಪುಸ್ತಕದಲ್ಲಿ ಪ್ರಸ್ತಾಪಿಸಿದ್ದೀರ. ನಾವು ನಮ್ಮ ರಾಜ್ಯದಲ್ಲಿ ಯಾವುದನ್ನು ಕೋಮು ಸೌಹಾರ್ದದ ನೆಲೆಗಳು ಅಂದುಕೊಂಡೆವೋ ಅವುಗಳನ್ನು ಕೋಮು ಧೃವೀಕರಣಕ್ಕೆ ಬಳಸಿಕೊಳ್ಳಲಾಗುತ್ತಿದೆ. ನೀವು ಇತ್ತೀಚಿಗೆ ಮುಸ್ಲಿಂ ಸಮುದಾಯದ ಅಂಗಡಿಯಲ್ಲಿ ಮಾಂಸ ಖರೀದಿಸಿ ಪ್ರತಿಭಟಿಸಿದಿರಿ. ಈಗ ಕೋಮು ಸೌಹಾರ್ದ ಮೂಡಿಸುವ ಬಗೆ ಹೇಗೆ?

ದೇಮ: ಸುಳ್ಳು ಸುದ್ಧಿ ನಂಬದಿದ್ದರೆ, ಪರಸ್ಪರ ಮುಖಾಮುಖಿಯಾದರೆ, Fact check ಮಾಡಿದರೆ ಮುಕ್ಕಾಲು ಸಮಸ್ಯೆ ತಂತಾನೆ ಬಗೆ ಹರಿಯುತ್ತದೆ. ಇಂದು ನಮಗೆ ಬೇಕಾಗಿರುವುದು- ಅಲ್ಲಲ್ಲೆ ಸಣ್ಣಪುಟ್ಟ ಕ್ರಿಯೆಗಳು, ಪರಸ್ಪರ ಒಡನಾಟ.

ಪ್ರಶ್ನೆ: ಕರ್ನಾಟಕದಲ್ಲಿ ಉಗ್ರ ಹಿಂದುತ್ವ ಕೆಲಸ ಮಾಡದು ಎಂದು ಬಿಜೆಪಿಯ ಒಂದು ಬಣ ಸಹ ನಂಬಿದೆ. ಆದರೆ ಈಗ ನಮ್ಮನ್ನು ದಕ್ಷಿಣದ ಯುಪಿ ಎಂದು ಕರೆಯಲಾಗುತ್ತದೆ. ನಿಮಗೆ ಏನನಿಸುತ್ತೆ?

ದೇಮ: ಅವರ ಆಟ ನೋಡಿ ನೋಡಿ ಸುಸ್ತಾಗಿದೆ. ಹೋಗಲಿ ಬಿಡಿ, ಅವರು ಏನಾದರೂ ಕರೆದುಕೊಳ್ಳಲಿ.

ಪ್ರಶ್ನೆ: ಈ ಪುಸ್ತಕಕ್ಕೆ ನೀವು ಕಾಪಿರೈಟ್ ಬಿಟ್ಟುಕೊಟ್ಟು, ಹಲವರು ಒಟ್ಟಿಗೆ ಈ ಪುಸ್ತಕವನ್ನು ಅಚ್ಚು ಮಾಡಿದ್ದಾರೆ. ಈ ನೂತನವಾದ ಮಾಡೆಲ್ ಬಗ್ಗೆ ಕೊಂಚ ಹೇಳಿ.

ದೇಮ: ಕಾಪಿರೈಟ್ ಬಿಟ್ಟುಕೊಟ್ಟಿಲ್ಲ. ಪುಸ್ತಕಕ್ಕೆ ಬೆಲೆಯನ್ನು ನಿಗದಿತ ೪೦ ರೂಪಾಯಿ ಒಳಗೆ ಇಟ್ಟರೆ ರಾಯಲ್ಟಿ ಬೇಡ ಎಂದು ಹೇಳಿದ್ದೇನೆ. ಹೆಚ್ಚು ಬೆಲೆ ಇಟ್ಟರೆ ರಾಯಲ್ಟಿ ಕೊಡಬೇಕಾಗುತ್ತದೆ. ಮೊದಲು ೬ ಜನ ಪ್ರಕಾಶಕರು ಜೊತೆಗೂಡಿ ೯ ಸಾವಿರ ಪ್ರತಿಗಳನ್ನು ಜೂನ್ ಕೊನೆ ವಾರದಲ್ಲಿ ಅಚ್ಚು ಮಾಡಿಸಿದರು. ಎಲ್ಲ ಪ್ರತಿಗಳೂ ಎಲ್ಲರಲ್ಲೂ ಎರಡೇ ದಿನಗಳಲ್ಲಿ ಮುಗಿದು ಹೋದವು. ಜುಲೈನಿಂದ ಮರುಮುದ್ರಣ ಮಾಡಿಸತೊಡಗಿದರು. ಗೌರಿ ಮೀಡಿಯಾ ಟ್ರಸ್ಟ್ ಒಂದೇ ಇದುವರೆಗೆ ೧೭ ಸಾವಿರ ಪ್ರತಿಗಳನ್ನು ಮುದ್ರಿಸಿದೆ. ಇದಾದ ಮೇಲೆ ಇನ್ನೂ ಅನೇಕ ಪ್ರಕಾಶಕರು ಮುಂದೆ ಬಂದರು. ಅಲ್ಲಲ್ಲೆ ತಾಲ್ಲೂಕು ತಾಲ್ಲೂಕುಗಳಿಂದ ಪ್ರಕಾಶಕರು ಹುಟ್ಟಿಕೊಳ್ಳುತ್ತಿದ್ದಾರೆ. ಕ್ಯಾಂಪಸ್‌ಗಳಲ್ಲೂ ಕೂಡ. ಉದಾಹರಣೆಗೆ ಮೈಸೂರು ಮಾನಸ ಗಂಗೋತ್ರಿಯ ನಾಕಾರು ವಿದ್ಯಾರ್ಥಿಗಳು ಸೇರಿ ೨ ಸಾವಿರ ಪ್ರತಿಗಳನ್ನು ಪ್ರಕಟಿಸಿ ಹಂಚಿ ಮುಗಿಸಿದ್ದಾರೆ. ಗುಲ್ಬರ್ಗಾ ಜಿಲ್ಲೆಯ ಒಂದು ತಾಲ್ಲೂಕಿನಲ್ಲಿ ಒಂದಿಷ್ಟು ಜನ ಮಹಿಳಾ ಸಾಮಾಜಿಕ ಕಾರ್ಯಕರ್ತರು ತಾವೇ ಪ್ರಕಟಿಸಿ ಹಂಚುತ್ತಿದ್ದಾರೆ. ‘ನಮ್ಮ ಸಂಘಟನೆಯನ್ನು ವಿಸ್ತರಿಸಿಕೊಳ್ಳುವುದಕ್ಕೆ ಈ ಪುಸ್ತಕ ನಮಗೆ ವಾಹಕವಾಗಿದೆ’ ಎಂದು ಹೇಳಿದರು. ಕೆಲವು ವ್ಯಕ್ತಿಗಳೂ ಪ್ರಕಟಿಸುತ್ತಿದ್ದಾರೆ. ಇವು ಅಲ್ಲಲ್ಲೆ ಸ್ಥಳೀಯವಾಗೇ ವಿತರಿಸಲ್ಪಡುತ್ತಿವೆ. ಅಷ್ಟೇಕೆ, ಮದುವೆಯಲ್ಲಿ, ಗೃಹ ಪ್ರವೇಶದಲ್ಲಿ ಅತಿಥಿಗಳಿಗೂ ನೀಡುತ್ತಿದ್ದಾರೆ- ಬಹುಶಃ ಹೀಗಿರುವುದು ಕಾರಣವಾಗಿರಬಹುದು. ಈ ಬಗೆಯ ವಿತರಣೆ ವ್ಯವಸ್ಥೆ ಯಾವ ದೊಡ್ಡ ಪ್ರಕಾಶಕರಿಗೂ ಅಷ್ಟಾಗಿ ಅಡೆತಡೆ ಮಾಡುತ್ತಿಲ್ಲ. ಇದೂ ಕೂಡ ಕಾರಣವಿರಬಹುದು.

ಪ್ರಶ್ನೆ: ನೀವು ಆರ್‌ಎಸ್‌ಎಸ್ ಅನ್ನು ಹಿಮ್ಮುಖ ಚಲನೆಯ ಸಂಘಟನೆ ಎಂದು ಬಣ್ಣಿಸಿದ್ದೀರಿ. ನಿಮ್ಮ ಪ್ರಕಾರ ಆರ್‌ಎಸ್‌ಎಸ್‌ನ ಕಾರ್ಯಸೂಚಿ ಏನು?

ದೇಮ: ಬಣ್ಣಿಸಿರುವುದರಲ್ಲೆ ಮೂರು ಮತ್ತೊಂದು ಅವರ ಕಾರ್ಯ ಸೂಚಿಯೂ ಇದೆಯಲ್ಲವೆ? ಆರ್‌ಎಸ್‌ಎಸ್ ಸಂತಾನದ ಸರ್ಕಾರಗಳು ತರುತ್ತಿರುವ ಕಾಯ್ದೆಗಳಲ್ಲೂ ಹಿಂಚಲನೆಯೇ ಇದೆಯಲ್ಲವೆ?

ಪ್ರಶ್ನೆ: ಕರ್ನಾಟಕದಲ್ಲಿ ಹಿಂದುತ್ವ ಕೆಲಸ ಮಾಡುತ್ತಿದೆೆುೀಂ? ಈ ಪುಸ್ತಕಕ್ಕೆ ಲಭಿಸಿರುವ ಅಭೂತಪೂರ್ವ ಸ್ಪಂದನೆ ನಿಮಗೆ ಏನನ್ನು ಹೇಳುತ್ತಿದೆ?

ದೇಮ: ಕರಾವಳಿ ಭಾಗ ನೋಡಿದರೆ ಹಿಂದುತ್ವ ಕೆಲಸ ಮಾಡಿರಲೂಬಹುದು ಅನ್ನಿಸುತ್ತದೆ. ಅದು ಅತಿಗೆ ಹೋಗಿ ಈಗ ಇಳಿಯುತ್ತಿದೆ ಅಂತಲೂ ಅನ್ನಿಸುತ್ತಿದೆ. ಇರಲಿ. ಈ ಹೊತ್ತಿಗೆ ಬಗ್ಗೆ ರೆಸ್ಪಾನ್ಸ್ ನನಗೂ ವಿಸ್ಮಯವೆ. ಕನ್ನಡ ಮಾತ್ರ ಅಲ್ಲ, ಉಳಿದೆಲ್ಲಾ ಭಾಷೆಗಳ ಸಂಭ್ರಮ ಹೇಳತೀರದು. ಎಲ್ಲರೂ ತಮ್ಮದು ಅಂದುಕೊಂಡಿದ್ದಾರೆ! ಇದಕ್ಕಿಂತ ದೊಡ್ಡದು ಇನ್ನೇನಿರುತ್ತದೆ? ಜೂನ್ ೩೦ರಂದು ೬ ಜನ ಪ್ರಕಾಶಕರು ಜೊತೆಗೂಡಿ ೯ ಸಾವಿರ ಪ್ರತಿಗಳನ್ನು ಪ್ರಕಟಿಸಿದರು. ಇನ್ನೂ ಒಂದೂ ತಿಂಗಳೂ ತುಂಬಿಲ್ಲ. ಈಗ ಪ್ರಕಾಶಕರು ಮುವತ್ತರಷ್ಟು; ಪ್ರತಿಗಳು ಒಂದು ಲಕ್ಷದ ಎರಡು ಸಾವಿರ ತಲುಪಿದೆ. ಈ ಪ್ರಕ್ರಿಯೆ ನಿರಂತರವಾಗಿ ಜರುಗುತ್ತಲೇ ಇದೆ. ಹಿಂದುತ್ವಕ್ಕೆ ಇದೂ ಕೂಡ ಉತ್ತರವಾಗಬಹುದಲ್ಲವೆ?

ಪ್ರಶ್ನೆ: ಇನ್ನು ಮೂರು ವರ್ಷಗಳಿಗೆ ಆರ್‌ಎಸ್‌ಎಸ್ ಸಂಘಟನೆಗೆ ನೂರು ವರ್ಷ. ೨೦೧೪ರಲ್ಲಿ ಅವರು ದೇಶದಲ್ಲಿ ಅಧಿಕಾರ ಹಿಡಿದ ಮೇಲೆ ಅವರ ಕಾರ್ಯಸೂಚಿಯನ್ನು ಹೇಗೆ ಅನುಷ್ಠಾನಗೊಳಿಸಿದ್ದಾರೆ? ಅವರ ಮುಂದಿನ ಗುರಿ-ನಡೆ ಹೇಗಿರಲಿದೆ ಅಂತ ನಿಮಗೆ ಅನ್ನಿಸುತ್ತೆ?

ದೇಮ: ಉದಾಹರಣೆಗೆ : ಮತಾಂತರ ನಿಷೇಧ ಕಾಯ್ದೆಯಲ್ಲಿ ಮಾಡಿರುವುದೇನು? ಪಠ್ಯಪುಸ್ತಕ ತಿರುಚುವಿಕೆಯಲ್ಲಿ ಮಾಡಿರುವುದೇನು? ಎಖ ತಂದು ಮಾಡಿರುವುದೇನು? ಇದರೊಳಗೆಲ್ಲಾ ಸಂವಿಧಾನ ಧ್ವಂಸ ಕಾಣುವುದಿಲ್ಲವೆ? ಇದನ್ನೆ ಆರ್‌ಎಸ್‌ಎಸ್ ಆಳ ಮತ್ತು ಅಗಲ ವಿವರಿಸುತ್ತದೆ. ಆದರೂ, ಆರ್‌ಎಸ್‌ಎಸ್‌ಗೆ ಅಕ್ರಮವೇ ಸಕ್ರಮ. ಹಾಗಾಗಿ ಅದರ ನುಡಿ ತಿಳಿಯುವುದೂ ಸ್ವಲ್ಪ ಕಷ್ಟವೆ. ಅದರ ನಡೆ ತಿಳಿಯುವುದು ಮತ್ತಷ್ಟು ಕಷ್ಟವೇ. ಆದರೆ, ಸದಾ ಅವರ ಮೇಲೆ ಒಂದು ಕಣ್ಣಿಟ್ಟಿರಬೇಕಿರುತ್ತದೆ.

-ದೇವನೂರ ಮಹಾದೇವ

(ದೇವನೂರ ಮಹಾದೇವ ಅವರು ‘ದಿ ಹಿಂದೂ’ ಪತ್ರಿಕೆಗೆ ನೀಡಿದ ಸಂದರ್ಶನದ ವಿಸ್ತೃತ ಕನ್ನಡ ರೂಪ)

andolana

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

7 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

9 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

10 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

11 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

11 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

11 hours ago