ನವರಾತ್ರಿಯೆಂದ ಕೂಡಲೇ ಏನು ಲಹರಿ ಬರುತ್ತದೆ ನಿಮ್ಮ ಮನಸ್ಸಿನೊಳಗೆ ಎಂದು ಸ್ನೇಹಿತರೊಬ್ಬರು ಕೇಳಿದರು. ದಸರಾದ ಒಂದು ದಿನ .
ನನ್ನ ದಕ್ಷಿಣ ಕನ್ನಡದ ನವರಾತ್ರಿಯೆಂದರೆ ಬಣ್ಣಬಣ್ಣದ ಹೂವು, ಸೀರೆಗಳ ಅಲಂಕಾರದಲ್ಲಿ ಕಂಗೊಳಿಸುವ ದೇವಿಯರನ್ನು ನೋಡಲು ಹಾಗೇ ನಾವೂ ಅಲಂಕರಿಸಿಕೊಂಡು ಹಲವು ದೇವಸ್ಥಾನಗಳಿಗೆ ಹೋಗುವ ಉತ್ಸಾಹ, ಅಲ್ಲಿನ ಪುಟ್ಟಪುಟ್ಟ ವೇದಿಕೆಗಳು ಮತ್ತು ಅವುಗಳ ಹಾಡು-ಹಸೆ, ನಾಟ್ಯ-ನಾಟಕಗಳು, ಮಾರ್ನವಮಿಯ ವೇಷಗಳು, ಗೊಂಬೆ, ಬಣ್ಣಬಣ್ಣದ ದೀಪಾಲಂಕಾರ, ಶಾರದಾದೇವಿ ಸ್ಥಾಪನೆ, ಮೆರವಣಿಗೆ, ವಿಸರ್ಜನೆ…
ಮೈಸೂರು ದಸರಾ ಅಂದರೆ ಆನೆಗಳ ಆಗಮನ ಮತ್ತವುಗಳ ಕ್ಯಾಂಪು, ಅಂಬಾರಿ, ಮೈಸೂರನ್ನು ಕಾಯುವ ಚಾಮುಂಡಿ ಮತ್ತವಳ ದಸರಾ ಮೆರವಣಿಗೆ, ಟ್ಯಾಬ್ಲೊಗಳು, ಸಾಮಾನ್ಯ ದಿನಗಳಲ್ಲಿ ಅಂಥ ಜನಸಂದಣಿಯಿಲ್ಲದೆ ಶಾಂತವಾಗಿರುವ ನಗರದ ರಸ್ತೆರಸ್ತೆಗಳು ಹಗಲು-ರಾತ್ರಿಯೆನ್ನದೆ ಗಿಜಿಗುಡುತ್ತಾ ಉತ್ಸವದ ವಾತಾವರಣವೊಂದು ಒಂಬತ್ತು ದಿನ ನಿರಂತರ ಕಂಗೊಳಿಸುವ, ಸಂಜೆಯಾಗುತ್ತಿದ್ದಂತೆ ಊರಿನೆಲ್ಲ ಓಣಿಗಳಲ್ಲೂ ಹೆಂಗಳೆಯರು ಸಿಂಗರಿಸಿಕೊಂಡು ಕುಂಕುಮಕ್ಕೆ ಕರೆಯಲು, ಕುಂಕುಮ ಪಡೆಯಲು ಅತ್ತಿಂದಿತ್ತ ಓಡಾಡುವ ಸಂಭ್ರಮ. ನವರಾತ್ರಿಯೆಂದರೆ ಇಂಥ ಅಪ್ಪಟ ಮನೋರಂಜನೆಯೂ ಕೂಡ ಅನ್ನುವ ಕಾಣ್ಕೆಯತ್ತ ಕರೆದುಕೊಂಡು ಬಂದಾಗ ಬದುಕು ಮೈಸೂರಿನಲ್ಲಿ ನೆಲೆ ಮಾಡಿತ್ತು.
ನವರಾತ್ರಿಯ ಬೆಳಕು ಹರಿಯುವ ಮುಂಚೆ ನಮ್ಮನೆಯ ಕುತ್ತಟ್ಟದ ಕರಿಮರದ ಕಲಂಬಿಯೋಳಗಿಂದ ನಾಕಾರು ರೇಶಿಮೆ ಬಟ್ಟೆಯ ಪದರಗಳಲ್ಲಿ ಸುತ್ತಿಡಲ್ಪಟ್ಟ ದೇವಿಯ ಒಂದಷ್ಟು ಆಭರಣಗಳು ಮತ್ತು ಒಂದಡಿ ಎತ್ತರ, ಒಂದೆರಡು ಅಡಿಗಳಷ್ಟು ಉದ್ದದ ದೇವಿಯ ವಾಹನ, ಕೆಂಪು ಹರಳುಗಳನ್ನು ಕಣ್ಣುಗಳಾಗಿ ಇಟ್ಟುಕೊಂಡ ಬೆಳ್ಳಿಯ ಸಿಂಹಗಳನ್ನು ನೊರೆಕಾಯಿ ಹಾಕಿ ಉಜ್ಜಿ ತೊಳೆದು ಲಕಲಕ ಅನಿಸಿ ತಯಾರು ಮಾಡಿ ಇಟ್ಟಿದ್ದವುಗಳನ್ನು ದೇವಸ್ಥಾನದ ಪೂಜೆಯವರು ಬಂದು ಬೆಲ್ಲದ ಕಾಫಿ ಸವಿದು ಅದೂ ಇದೂ ಮಾತಾಡಿ ಒಂದು ಪುಟ್ಟ ಕಾಗದದ ತುಂಡಿನಲ್ಲಿ ಆಭರಣಗಳ ಲೆಕ್ಕ ಬರೆದು ಅದರ ಒಂದು ಪ್ರತಿ ನಮಗೆ ಕೊಟ್ಟು ಇನ್ನೊಂದನ್ನು ತಾನು ತೊಟ್ಟ ಬೈರಾಸದ ಗಂಟಿನೊಳಗೆ ತುರುಕಿ, ಮತ್ತೆ ಅವೇ ನಾಕಾರು ರೇಶಿಮೆಯ ತುಂಡುಗಳಲ್ಲಿ ಎಲ್ಲ ವಸ್ತುಗಳನ್ನೂ ಸುತ್ತಿ ಭಕ್ತಿಭಾವದಿಂದ ಕಣ್ಣಿಗೊತ್ತಿಕೊಂಡು ತಲೆಯ ಮೇಲಿಟ್ಟುಕೊಂಡು ದೇವಸ್ಥಾನಕ್ಕೊಯ್ಯುತ್ತಿದ್ದರು. ಅವರೆಲ್ಲ ಕೂತು ಮಾತಾಡಿದ ಜಗುಲಿಯ ಇನ್ನೊಂದು ತುದಿಯಲ್ಲಿ ಕೂತು ನಾನು ಮತ್ತು ತಂಗಿ ಬಹಳ ಮನೋರಂಜಕವಾದದ್ದೇನೋ ನಡೆಯುತ್ತಿದೆಯೆಂಬಂತೆ ಈ ಪ್ರಕ್ರಿಯೆಗೆ ಸಾಕ್ಷಿಯಾಗುತ್ತಿದ್ದೆವು. ಆ ಸಂಜೆ ಪೂಜೆಗೆ ದೇವಸ್ಥಾನಕ್ಕೆ ಹೋದಾಗ ಇಡೀ ಊರೇ ಭಯಭಕ್ತಿಯಿಂದ ನಡೆದುಕೊಳ್ಳುತ್ತಿರುವ ಸಾಕ್ಷಾತ್ ದುರ್ಗಾದೇವಿ ತೊಟ್ಟಿರುವುದು ನಮ್ಮ ಮನೆಯಿಂದ ಹೋದ ಆಭರಣಗಳನ್ನು, ಅವಳೆದುರಿನ ಮಂಟಪದಲ್ಲಿ ಮಲ್ಲಿಗೆ ಮಾಲೆ ತೊಟ್ಟು ಘನಗಾಂಭೀರ್ಯದಿಂದ ಎಲ್ಲರ ಕಣ್ಣು ಸೆಳೆಯುತ್ತ ನಿಂತಿರುವುದು ನಮ್ಮ ಮನೆಯಿಂದ ಹೋದ ಸಿಂಹ ಅಂತ ಕಂಡಾಗ, ನವರಾತ್ರಿಯ ಪೂಜೆಯ ಎಲ್ಲ ಉಸ್ತುವಾರಿಗಳಲ್ಲೂ ಅಜ್ಜ, ಅಪ್ಪ ಮುಂಚೂಣಿಯಲ್ಲಿರುವುದು ನೋಡಿದಾಗ ಒಂದು ಹೆಮ್ಮೆಯ ಸುಖ ಮೈಯುದ್ದಕ್ಕೂ ಹರಿದಾಡುತ್ತಿತ್ತಲ್ಲಾ, ನವರಾತ್ರಿಯೆಂದರೆ ನನ್ನೆಲ್ಲ ತೊದಲು-ಮೊದಲುಗಳಿಗೆ ಸಾಕ್ಷಿಯಾದ ನನ್ನೂರು ಉಳಿಯಾರಿನ ಆ ಪುಳಕ ಅನಿಸುವಲ್ಲಿಂದ…
ದೇವಸ್ಥಾನದ ರಾತ್ರಿ ಪೂಜೆಯ ಕೊನೆಯ ಘಟ್ಟದಲ್ಲಿ ಮಂಗಳಾರತಿಯ ಹೊತ್ತು ರಾಶಿ ಮಲ್ಲಿಗೆ, ಸೇವಂತಿಗೆ, ಅಬ್ಬಲಿಗೆ ಮಾಲೆಗಳಿಂದ ಅಲಂಕೃತಳಾಗಿರುವ ಅವಳೆದುರಿನ ನಡೆಯುದ್ದಕ್ಕೂ ಕರ್ಪೂರ ಹಚ್ಚಿಡಲಾಗುತ್ತಿತ್ತು. ಗಂಟೆ, ಜಾಗಟೆ, ಶಂಖ, ನಗಾರಿ ದನಿ ಜೋರಾಗುತ್ತಾ ಇಡೀ ಒಳಾಂಗಣವನ್ನು ಆವರಿಸಿದ ಕರ್ಪೂರಜ್ವಾಲೆಯ ಧೂಮದೊಳಗಿಂದ ಗರ್ಭಗುಡಿಯೊಳಗಿನ ಆರತಿ ನಿಧಾನ ಅವಳ ಉದ್ದಗಲಕ್ಕೂ ಹರಿದಾಡುವುದು ಕಾಣುವಾಗ, ಮಧ್ಯದಲ್ಲೆಲ್ಲೋ ಒಂದುಕ್ಷಣ ತುಂಬು ಹೆಣ್ತನದ ತಾಯಿಯೊಬ್ಬಳು ಸಂತೃಪ್ತಳಾಗಿ ನಕ್ಕ ಹಾಗನಿಸುತ್ತಿತ್ತು. ಆಗ ಧನ್ಯತೆಯ ಭಾವವೊಂದು ಕಣ್ಣಿಂದ ಸುಖದ ಹನಿಗಳಾಗಿ ಹರಿದುಬರುತ್ತಿತ್ತಲ್ಲಾ, ಅವಳು ತೃಪ್ತಳಾದಳೆಂಬ ಕಲ್ಪನೆಯೊಂದು ಹೀಗೆ ನಮ್ಮೊಳಗಿನ ಖುಷಿಯಾಗಿ ಮಾರ್ಪಡುತ್ತಿತ್ತಲ್ಲಾ…
ಅಯ್ಯೋ ಬರೀ ಅಡುಗೆ ಮಾಡಿಕೊಂಡು, ಪಾತ್ರೆ ತೊಳಕೊಂಡು ಬದುಕು ಕಳೆದುಬಿಡುತ್ತೇನೇನೋ ಅನ್ನುವ ಭಯಕ್ಕೆ ನಿದ್ದೆಯೇ ಬರುತ್ತಿಲ್ಲ ಅನ್ನುತ್ತ ಒದ್ದಾಡುತ್ತಿದ್ದ, ಇಂಜಿನಿಯರ್ ಹುಡುಗಿಯೊಬ್ಬಳು ಮಗು, ಗಂಡ, ಅತ್ತೆ, ಮಾವ ಅಂತ ಮನೆವಾರ್ತೆಯಲ್ಲಿ ಕಳೆದುಹೋಗಿದ್ದಳು. ಮೂರು ವರ್ಷದ ಮಗುವನ್ನು ಎತ್ತಿಕೊಂಡು ಈ ನವರಾತ್ರಿಯ ಒಂದು ಸಂಜೆ ಕುಂಕುಮಕ್ಕೆ ಕರೆಯಲು ಬಂದಿದ್ದಳು. ಕೆಲಸ, ಕರಿಯರ್, ಫ್ಯೂಚರ್ ಅಂತ ತಲೆಕೆಡಿಸಿಕೊಂಡು ಈ ದಿನಗಳನ್ನು ಸವಿಯುವುದನ್ನೇ ಮರೆತಿದ್ದೆ, ಇಂದು ಬೊಗಸೆಯಲ್ಲಿರುವುದರಲ್ಲಿ ನಾಳೆ ಯಾವುದು ಉಳಿದುಕೊಳ್ಳಲಿದೆಯೋ ಯಾವುದು ಸೋರಿಹೋಗಲಿದೆಯೋ ಗೊತ್ತಿಲ್ಲ ಅಕ್ಕಾ… ಅಂದಾಗ,
ಬರೀ ಗಣಹೋಮ, ಸತ್ಯನಾರಾುಂಣ ಕಥೆ, ದುರ್ಗಾ ನಮಸ್ಕಾರ, ಏಕಾದಶಿ, ಪೂಜೆ-ಪುನಸ್ಕಾರಗಳನ್ನೇ ಬದುಕಿನ ರೀತಿನೀತಿಗಳನ್ನಾಗಿ ಮಾಡಿಕೊಂಡಿದ್ದ ಕ್ಲಾಸ್ಮೇಟು ಒಬ್ಬಳು ಈ ನವರಾತ್ರಿಯಲ್ಲೊಂದು ದಿನ ಫೋನ್ ಮಾಡಿ ಮೂವತ್ತು ವರ್ಷಗಳಾದರೂ ಮದುವೆಗೆ ಒಪ್ಪಲೊಲ್ಲದ ತನ್ನ ಮಗಳ ಬಗ್ಗೆ ಮಾತಾಡುತ್ತಾ, ಯಾರಾದರೂ ಬಾಯ್‌ಫ್ರೆಂಡ್ ಇದ್ರೆ ಹೇಳು ಅವನೊಟ್ಟಿಗಾದ್ರೂ ಸರಿ ಮದುವೆ ಮಾಡ್ತೇವೆ, ಒಂದು ಸಂಗಾತಿ ಅಂತ ಬೇಕು ಬದುಕಿಗೆ ಅಂತ ಹೇಳಿದ್ರೆ, ಅವಳಿಗಿರೋದು ಗರ್ಲ್‌ಫ್ರೆಂಡ್ ಅಂತೆ, ಅವಳೊಟ್ಟಿಗೇ ಮದುವೆ ಮಾಡ್ಬೇಕಂತೆ… ನಂಗಂತೂ ಒಂದೂ ಅರ್ಥ ಆಗುತ್ತಿಲ್ಲ. ಆದರೆ ಮಗಳು ಈಗ ದೊಡ್ಡವಳು, ತಿಳಿವಳಿಕೆ ಇರುವವಳು, ಅವಳಿಗೆ ಬಹಳ ಸ್ಪಷ್ಟತೆ ಇದೆ, ಸಾಕಲ್ವಾ, ಸರಿ, ನಿನ್ನಿಷ್ಟ, ನಿನ್ನ ಭವಿಷ್ಯ ನಿನ್ನ ನಿರ್ಧಾರ ಅಂತ ಹೇಳಿ, ಮದುವೆ ಮಾಡ್ತಾ ಇದ್ದೇವೆ, ವಿಜಯದಶಮಿ ದಿನ ಬೆಂಗಳೂರಲ್ಲಿ ಮದುವೆ, ಇನ್ವಿಟೇಶನ್ ವಾಟ್ಸಾಪ್‌ನಲ್ಲಿ ಕಳಿಸ್ತೇನೆ, ಬರಬೇಕು ಅಂತ ಹೇಳಿದಾಗ, ಹೆಣ್ಣು ತನ್ನ ಮಿತಿ ಮತ್ತು ಶಕ್ತಿಗಳ ಜೊತೆ, ಕಾಲ ತಂದು ಎದುರಿಡುವ ಬದಲಾವಣೆಗಳನ್ನು ವಿರೋಧಿಸಿ ಒದ್ದಾಡದೆ, ಒಟ್ಟಾರೆ ತನ್ನತನವನ್ನು ತಾನು ಮೊದಲು ಗುರುತಿಸಿ, ಸ್ವೀಕರಿಸಿ, ಗೌರವಿಸುವುದು, ಸುರಕ್ಷವಾಗಿ ಕಾಪಾಡಿಕೊಳ್ಳುವುದು ಮತ್ತು ಈ ಕ್ಷಣದ ಕೊಡುಗೆಗಳನ್ನು ಮನಸಾರೆ ಅನುಭವಿಸಿ ಬದುಕುವುದು ಸಾಧ್ಯವಾಗುವ ಅವಳ ಮೊದಲ ಹೆಜ್ಜೆ ಖಂಡಿತ ಅವಳನ್ನು ಸುತ್ತಲಿನ ಕೆಡುಕನ್ನು ಎದುರಿಸಿ, ಗೆಲುವನ್ನು, ವಿಜಯವನ್ನು ಸಂಭ್ರಮಿಸುವುದರ ಕಡೆಗೊಯ್ಯಲಿದೆ, ನವರಾತ್ರಿಯೆಂದರೆ ದೇವಿಯ ಅಂದಿನ ವಿಜಯಗಳನ್ನು ನಮ್ಮ ಇಂದಿನ ಗೆಲುವುಗಳ ಜೊತೆ ಸಮೀಕರಿಸಿ ನೋಡಿಕೊಳ್ಳಬಲ್ಲ ಮತ್ತು ಅವಳನ್ನು ನೆನೆಯುತ್ತಾ ನಮ್ಮ ಆತ್ಮವಿಶ್ವಾಸ ಗಟ್ಟಿಯಾಗಿಸಿಕೊಳ್ಳಬಲ್ಲ ವಿವೇಕವರ್ಧನೆಗೆ ಇರುವ ಅವಕಾಶ ಅಂತನಿಸುವಲ್ಲಿಯವರೆಗೆ…
ಗುಟುಕು ಗುಟುಕಾಗಿ ನೆನಪುಗಳನ್ನು, ಮೆಲುಕುಗಳನ್ನು ಮನಸಿಗೆ ಉಣಿಸುತ್ತಾ ಹೋದ ಆ ಒಂದಷ್ಟು ಕ್ಷಣಗಳನ್ನು ಹೀಗೆ ಬರೆದು ಅವರಿಗೆ ಕಳುಹಿಸಿಕೊಟ್ಟೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…