ಹಾದಿಬದಿಯ ನಿರಾಶ್ರಿತರು ಆಕಾಶವನ್ನೇ ಹೊದಿಕೆಯಾಗಿಸಿಕೊಂಡು,ಭೂಮಿಯನ್ನೇ ಹಾಸಿಗೆಯನ್ನಾಗಿಸಿ ಕೊಂಡು ಸಿಕ್ಕ ಕೆಲಸ ಮಾಡುತ್ತಾ, ಸಿಕ್ಕಸಿಕ್ಕ ಹಾಗೆ ಬದುಕು ಸವೆಸುತ್ತಾ ಕಳೆಯುತ್ತಾರೆ. ಚಳಿಯಾದರೇನು, ಮಳೆಯಾದರೇನು, ಬಿಸಿಲಾದರೇನು ಎಂಬಂತೆ ದಿನಗಳನ್ನು ಉರುಳಿಸುತ್ತಾ ಬದುಕುತ್ತಿರುತ್ತಾರೆ.
• ಸಿರಿ ಮೈಸೂರು
ಬೆಳಿಗ್ಗೆ ಎದ್ದರೆ ಮೈಕೊರೆಯುವ ಚಳಿ, ಅದೆಷ್ಟು ಬೇಗ ಬಂತಲ್ಲ ಚಳಿಗಾಲ! ಡಿಸೆಂಬರ್ ಬಂತೆಂದರೆ ಹಾಗೇ, ಬೆಳಿಗ್ಗೆ ಸಮಯ ಎಷ್ಟಾದರೂ ಚಳಿ ಮಾತ್ರ ಕಡಿಮೆಯಾಗಿರು ವುದಿಲ್ಲ. ರಾತ್ರಿ ಮೈಮೇಲೇರಿಸಿಕೊಂಡ ಹೊದಿಕೆಯನ್ನು ಸರಿಸಲು ಮನಸ್ಸೇ ಬರುವುದಿಲ್ಲ. ಒಂದು ಲೋಟ ಕಾಫಿ ಕುಡಿದ ಮೇಲೆ ನಿಧಾನಕ್ಕೆ ಶುರುವಾಗುತ್ತದೆ ದಿನ.
ಕೇಳಲು ಅದೆಷ್ಟು ಚೆಂದವಾಗಿದೆಯಲ್ಲವೇ? ಹೌದು. ಬೆಚ್ಚಗಿನ ಜೀವನ ಕೇಳಲು, ಅನುಭವಿಸಲು..ಎಲ್ಲಕ್ಕೂ ಚೆಂದವೇ. ಏಕೆಂದರೆ ನಮಗೆ ಚಳಿ ತಡೆಯಲು ಬೇಕಾದಷ್ಟು ಅನುಕೂಲಗಳಿವೆ. ಬೆಚ್ಚಗಿನ ಬಟ್ಟೆಗಳು, ಕುಲಾವಿ, ಶಾಲು, ಹೊದಿಕೆ..ಎಲ್ಲಕ್ಕೂ ಮುಖ್ಯವಾಗಿ ತಲೆಮೇಲೊಂದು ಸೂರು. ಆದರೆ ಎಲ್ಲರೂ ಇಷ್ಟೇ ಅನುಕೂಲವಾಗಿರುತ್ತಾರಾ? ಎಂದು ಒಮ್ಮೆ ಯೋಚಿಸಿದರೆ ಉತ್ತರ ಬಹಳ ಕಠೋರ. ಏಕೆಂದರೆ, ಇಲ್ಲ. ಎಲ್ಲರಿಗೂ ಈ ಅನುಕೂಲ ಇರುವುದಿಲ್ಲ. ನಾವು ನಮ್ಮ ಮನೆಯಲ್ಲಿ ಕೂತು ‘ನನ್ನ ಬಳಿ ಇನ್ನೂ ಒಳ್ಳೆ ಸ್ಟೆಟರ್ ಇರಬೇಕಿತ್ತು’ ಎಂದು ಯೋಚಿಸುತ್ತಿರುವಾಗಲೇ ಅಲ್ಲೆಲ್ಲೋ ರಸ್ತೆಬದಿಯಲ್ಲಿ ಜೀವನ ಮಾಡುತ್ತಿರುವವರು ಕೂತು ನನಗೊಂದು ಹುಲ್ಲಿನ ಸೂರಾದರೂ ಇರಬಾರದಿತ್ತೇ?’ ಎಂದು ಬೇಸರಿಸಿಕೊಳ್ಳುತ್ತಿರುತ್ತಾರೆ. ದೊಡ್ಡವರು ಹೇಳಿರುವಂತೆ ಖಂಡಿತವಾಗಿಯೂ ಜೀವನ unfair. ಇದನ್ನು ಯೋಚಿಸಿದಾಗಲೇ ಇಷ್ಟು ಬೇಸರವಾದ ನನಗೆ ಆನಂತರ ಚಳಿಯಲ್ಲಿ ನಡುಗುವ ಜನರನ್ನು ನೋಡಿ, ಮಾತನಾಡಿಸಿ, ಅವರ ಕತೆಗಳನ್ನು ಕೇಳಿದಾಗ ಬೇಸರ ದುಪ್ಪಟ್ಟಾಯ್ತು ಎಂದರೆ ಅತಿಶಯೋಕ್ತಿಯಲ್ಲ. ‘ಅಷ್ಟಕ್ಕೂ ಬದುಕೇಕೆ ಹೀಗೆ?’ ಎಂಬುದು ನನ್ನ ತಲೆಯಲ್ಲಿ ಕೊನೆಯಲ್ಲಿ ಉಳಿದ ಪ್ರಶ್ನೆ.
ಅಂದು ಬೆಳಿಗ್ಗೆ ಕೊರೆವ ಚಳಿಯಲ್ಲಿ ನಾನು ಹೋಗಿದ್ದು ಗೆಳತಿಯೊಬ್ಬಳನ್ನು ರೈಲ್ವೇ ಸ್ಟೇಷನ್‌ಗೆ ಡ್ರಾಪ್ ಮಾಡಲು. ಆಕೆಗೆ ಬೆಳಗಿನಜಾವ ಐದೂ ಮೂವತ್ತರ ಟೈನ್ ಇದ್ದ ಕಾರಣ ಬಹಳ ಬೇಗವೇ ಮನೆ ಬಿಡಬೇಕಾಯಿತು. ಸ್ಕೂಟರ್‌ನಲ್ಲಿ ಹೋಗುವಾಗ ಥಂಡಿ ಗಾಳಿ ಮೈಸವರುತ್ತಿತ್ತು. ಕೈ ಮರಗಟ್ಟಿತ್ತು. ಜೊತೆಗೆ ಮುಂದೆ ರಸ್ತೆಯೂ ಕಾಣದಷ್ಟು ಮಂಜಿತ್ತು. ಹೇಗೋ ಹೋಗಿ ಆಕೆಯನ್ನು ರೈಲು ನಿಲ್ದಾಣಕ್ಕೆ ಬಿಟ್ಟು ವಾಪಸ್ ಬರುವಾಗ ಚಳಿ ಹೋಗಲೆಂದು ಕಾಫಿ ಕುಡಿಯಲು ರಸ್ತೆಬದಿಯ ಅಂಗಡಿಯ ಬಳಿ ಗಾಡಿ ನಿಲ್ಲಿಸಿದೆ. ಅದು ಸಣ್ಣ ಗೂಡಂಗಡಿ, ಪಕ್ಕದಲ್ಲಿ ಅಜ್ಜಿಯೊಬ್ಬರು ತೆಳ್ಳನೆಯ ಹೊದಿಕೆ ಹೊದ್ದು ನಡುಗುತ್ತಾ ಮೈಮುದುರಿಕೊಂಡು ಕುಳಿತಿದ್ದರು. ಹೀಗೇ ಕುತೂಹಲಕ್ಕೆ ಮಾತಿಗಿಳಿದೆ. ‘ಯಾಕಜ್ಜ ಈ ಚಳಿಯಲ್ಲಿ ಇಲ್ಲಿ ಕೂತಿದ್ದೀರ? ಬೇರೆ ಊರಿನವರಾ?’ ಎಂದು ಕೇಳಿದೆ. ಮುಗುಳುನಗೆ ನಕ್ಕ ಅಜ್ಜಿ ಉತ್ತರಿಸಿದರು. ‘ಇಲ್ಲವ್ವಾ. ರಸ್ತೇಲಿ ಜೀವ ಮಾಡೋರ್ಗೆ ಯಾವ ಊರಾದ್ರೇನು? ಎಲ್ಲಾ ಊರೂ ನಂದೇ’ ಎಂದರು. ‘ಅಯ್ಯೋ! ರಾತ್ರಿಯೆಲ್ಲಾ ಇದೇ ಚಳಿಯಲ್ಲಿ ಇಲ್ಲೇ ಇದ್ರಾ?’ ಎಂದು ಕೇಳಿದೆ. ಹೌದೆನ್ನುವಂತೆ ತಲೆಯಾಡಿಸಿದರು. ‘ಯಾಕೆ’ ಎಂದು ನಾನು ಮುಂದುವರೆದು ಕೇಳಿದ ಪ್ರಶ್ನೆಗೆ ಅವರ ಬಳಿ ಉತ್ತರ ಇದ್ದಂತಿರಲಿಲ್ಲ.
ಇದನ್ನೂ ಓದಿ :-ಮಹಾಪಂಚ್ ಕಾರ್ಟೂನ್
ಕೊನೆಗೆ ಹೇಗೋ ಮಾತನಾಡಿಸಿ ಅವರ ಕಥೆ ಕೇಳಿದಮೇಲೆ ತಿಳಿದದ್ದು ಈ ಅಜ್ಜಿ ಮೈಸೂರಿನ ಹೊರವಲಯದ ಯಾವುದೋ ಹಳ್ಳಿಯವರು, ಗಂಡ ವಯಸ್ಸಾದ ಮೇಲೆ ಕಾಯಿಲೆಗೆ ತುತ್ತಾಗಿ ತೀರಿಕೊಂಡಿದ್ದ. ಜೀವನೋಪಾಯವನ್ನೆಲ್ಲಾ ಆತನೇ ನೋಡಿಕೊಳ್ಳುತ್ತಿದ್ದ ಕಾರಣ ಈಕೆಗೆ ಏನನ್ನೂ ಮಾಡಲು ಬರುತ್ತಿರಲಿಲ್ಲ. ತಮ್ಮ ಊರಿನಲ್ಲಿ ಒಂದು ಮನೆಯೂ ಇರಲಿಲ್ಲ. ಅವರಿವರನ್ನು ಬೇಡಲು ಮನಸ್ಸಾಗದೇ ಏನಾದರೊಂದು ಕೆಲಸ ಮಾಡಲೆಂದು ಮೈಸೂರಿಗೆ ಬಂದ ಈಕೆ ಆಗೀಗ ಹೂವು ಕಟ್ಟುವುದು, ಗೂಡಂಗಡಿಗಳ ಮುಂದೆ ಗುಡಿಸಿಕೊಡುವುದು.. ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಬಿಸಿಲುಗಾಲದಲ್ಲಿ ಬಸ್ ಸ್ಟಾಪ್, ರಸ್ತೆಬದಿಯಲ್ಲೇ ಉಳಿದರೆ ಚಳಿಗಾಲ, ಮಳೆಗಾಲದಲ್ಲಿ ಗೂಡಂಗಡಿಗಳು, ಅಂಗಡಿ ಮುಂದಿನ ಸೂರುಗಳೇ ಇವರ ಅರಮನೆ, ನಿತ್ಯಕರ್ಮ ಗಳಾದ ಸ್ನಾನ, ಶೌಚಕ್ಕೆಲ್ಲಾ ಸಾರ್ವಜನಿಕ ಶೌಚಾಲಯಗಳನ್ನೇ ಅವಲಂಬಿಸಿರುವ ಈಕೆಯ ಜೀವನ ಕೈಲಿದ್ದ ಒಂದು ಬಟ್ಟೆಯ ಪುಟ್ಟ ಗಂಟು. ಅದೇ ದಿಂಬು, ಅದೇ ಹಾಸಿಗೆ, ಅದೇ ಹೊದಿಕೆ. ಅಲ್ಲೇ ರೈಲ್ವೇ ನಿಲ್ದಾಣದ ಬಳಿ ಇರುವ ಕರುಣೆಯ ಗೋಡೆಯಿಂದ ಇವರ ಜೀವನಕ್ಕೆ ಒಂದಷ್ಟು ಅನುಕೂಲಕರ ವಸ್ತುಗಳು ಸಿಕ್ಕಿವೆಯಂತೆ. ಒಟ್ಟಿನಲ್ಲಿ ಇವರ ಜೀವನ ಅಲೆಮಾರಿಯದ್ದು. ಇವರ ಮಾತು ಮುಗಿಯುವಷ್ಟರಲ್ಲಿ ನನಗೆ ಅನಿಸುತ್ತಿದ್ದ ಚಳಿಯೆಲ್ಲಾ ಮಾಯವಾಗಿ ಕಣ್ಣಂಚಿನಲ್ಲಿ ನೀರಾಡುತ್ತಿತ್ತು. ಕೈಯಲ್ಲಿದ್ದ ಕಾಫಿ ಆರಿ ಅಂಗಾರಾಗಿತ್ತು. ಇನ್ನೊಂದು ಕಾಫಿ ಕೊಂಡು ಅವರಿಗೆ ಕೊಟ್ಟು ಬರುವಾಗ ‘ನಿಮ್ಮ ಹೆಸರೇನು ಅಜ್ಜಿ?’ ಎಂದರೆ ‘ಲಕ್ಷ್ಮಿ’ ಎಂದು ನಗುಮೊಗದಿಂದಲೇ ನನ್ನನ್ನು ಬೀಳ್ಕೊಟ್ಟರು.
ಇದು ಇವರೊಬ್ಬರ ಕಥೆಯಾದರೆ ರಸ್ತೆಬದಿಯಲ್ಲೇ ಜೀವನ ನಡೆಸುವ ಎಷ್ಟೋ ಜನರದ್ದು ಇಂತಹ ಎಷ್ಟೋ ಕಥೆಗಳಿರುತ್ತವೆ. ಯಾವುದೋ ರಾಜ್ಯದಿಂದ ಭಾಷೆ ಗೊತ್ತಿಲ್ಲದೆ ಇಲ್ಲಿ ಬಂದು ಸಿಕ್ಕಸಿಕ್ಕ ಕೆಲಸವನ್ನೆಲ್ಲಾ ಮಾಡುತ್ತಿರುವವರು, ಇಲ್ಲೇ ಸುತ್ತಮುತ್ತಲಿನವರಾಗಿದ್ದು ಕಾರಣಾಂತರಗಳಿಂದ ಕುಟುಂಬದಿಂದ ಹೊರದೂಡಲ್ಪಟ್ಟವರು, ಕಾಯಿಲೆಗಳಿಂದ ಯಾರಿಗೂ ಬೇಡವಾದವರು, ಎಲ್ಲಿಂದಲೋ ತಪ್ಪಿಸಿಕೊಂಡು ಬಂದ ವ್ಯಸನಿಗಳು ಹಾಗೂ ಮಾನಸಿಕ ಅಸ್ವಸ್ಥರು..ಹೀಗೆ ಅದೆಷ್ಟೋ ಜನರನ್ನು ಬೆಳಿಗ್ಗೆ-ರಾತ್ರಿಯ ಕೊರೆಯುವ ಚಳಿಯಲ್ಲಿ ನಾನು ನೋಡಿದ್ದೇನೆ. ಕೆಲವರನ್ನು ಮಾತನಾಡಿಸಿದ್ದೇನೆ. ಒಬ್ಬೊಬ್ಬರು ಟೆಂಟ್ ಹಾಕಿ ಸಿಕ್ಕಸಿಕ್ಕಲ್ಲೇ ಜೀವನ ಮಾಡಿದರೆ ಇನ್ನು ಕೆಲವರಿಗೆ ಅಷ್ಟು ಶಕ್ತಿಯೂ ಇರುವುದಿಲ್ಲ. ಒಮ್ಮೆ ಬೀದಿಬದಿಯಲ್ಲಿ ಜೀವನ ಮಾಡುವಂತಾದಮೇಲೆ ಮತ್ತೆ ಮಿಕ್ಕ ಜನರಂತೆ ಒಂದು ಮನೆ ಮಾಡಿಕೊಂಡು ಜೀವನ ನಡೆಸುವುದು ಕಷ್ಟಸಾಧ್ಯದ ಕೆಲಸ. ಅಷ್ಟು ಶಕ್ತಿ ಅವರಿಗಿದ್ದರೆ ಅದಕ್ಕಿಂತ ಖುಷಿ ಮತ್ತೇನಿದೆ! ನಾನು ಮಾತನಾಡಿಸಿದ ಇಂತಹ ಕೆಲವರಲ್ಲಿ ಒಬ್ಬರು ಮಕ್ಕಳಿಂದ ಮನೆಯಿಂದೀಚೆ ದೂಡಲ್ಪಟ್ಟವರಾದರೆ ಇನ್ನೊಬ್ಬರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದವರು. ಮತ್ತೊಬ್ಬರು ಅರೆನೆನಪಿದ್ದವರು..ಹೆಚ್ಚಕಡಿಮೆ ಬುದ್ಧಿಮಾಂದ್ಯರು. ಇನ್ನೊಬ್ಬರು ಭಿಕ್ಷೆಯಿಂದಲೇ ಬೆಳೆದು, ಜೀವಿಸಿ, ಈಗಲೂ ಹಾಗೇ ಇರುವವರು. ಇವರನ್ನೆಲ್ಲ ನೋಡಿದಾಗ ನಮಗಿರುವ ಸೌಕರ್ಯಗಳು, ಜೀವನ ಅದೆಷ್ಟು ಮೌಲ್ಯಯುತವಾದುದು ಎಂಬ ಅರಿವಾಗುತ್ತದೆ. ಇಂತಹ ಜನರಿಗೆ ಆಗಾಗ ಆಹಾರ ನೀಡುವ, ಚಳಿಗಾಲದಲ್ಲಿ ಹೊದಿಕೆಗಳನ್ನು ನೀಡುವ, ಬೆಚ್ಚಗಿನ ಬಟ್ಟೆಗಳನ್ನು ನೀಡುವ ಕೆಲಸ ನಡೆಯುತ್ತದೆ. ಇದು ಸಾರ್ಥಕ ಕೆಲಸವೇ ಹೌದು. ಇಂತಹ ಜನರನ್ನು ಹುಡುಕಿ, ಅವರಿಗೆ ಚಿಕಿತ್ಸೆ ಅಥವಾ ಅಗತ್ಯ ಸೌಕರ್ಯಗಳನ್ನು ನೀಡಿ ಅವರ ಕಾಲ ಮೇಲೆ ಅವರು ನಿಂತು ಜೀವನ ನಡೆಸುವ ಮಟ್ಟಕ್ಕೆ ತರುವ ಸರ್ಕಾರಿ ಸಂಸ್ಥೆಗಳಿವೆ. ಅವು ಆ ಕೆಲಸವನ್ನು ಮಾಡುತ್ತಿವೆ. ಅದರಿಂದ ಇಂತಹ ಎಷ್ಟೋ ಜನರ ಬದುಕು ಬಹಳವೇ ಸುಧಾರಿಸಿದೆ. ಆದರೆ ಏನೇ ಆದರೂ ಎಲ್ಲರನ್ನೂ, ಎಲ್ಲವನ್ನೂ ಸರಿಪಡಿಸುವುದು ಕಷ್ಟಸಾಧ್ಯ. ಏಕೆಂದರೆ ಇಂತಹ ನಿರಾಶ್ರಿತರು ಅದೆಲ್ಲೆಲ್ಲೋ ಇರುತ್ತಾರೆ. ಅವರೆಲ್ಲರೂ ಸರ್ಕಾರದ ಸಂಸ್ಥೆಯ ಕಣ್ಣಿಗೆ ಬೀಳುವುದು ಸಾಧ್ಯವಾಗದ ಕೆಲಸ. ಜೊತೆಗೆ ನಿರಾಶ್ರಿತರಿಗೆ ಇಂತಹ ಸೌಲಭ್ಯಗಳಿವೆ ಎಂದು ತಿಳಿಯುವುದೂ ಕಷ್ಟವೇ.
ಇವೆಲ್ಲದರ ಪರಿಣಾಮವಾಗಿ ಏನಾಗುತ್ತದೆ? ನಿರಾಶ್ರಿತರು ಆಕಾಶವನ್ನೇ ಹೊದಿಕೆಯಾಗಿಸಿಕೊಂಡು, ಭೂಮಿಯನ್ನೇ ಹಾಸಿಗೆಯನ್ನಾಗಿಸಿಕೊಂಡು ಸಿಕ್ಕ ಕೆಲಸ ಮಾಡುತ್ತಾ, ಸಿಕ್ಕಸಿಕ್ಕ ಹಾಗೆ ಬದುಕು ಸವೆಸುತ್ತಾ ಕಳೆಯುತ್ತಾರೆ. ಚಳಿಯಾದರೇನು, ಮಳೆಯಾದರೇನು, ಬಿಸಿಲಾದರೇನು ಎಂಬಂತೆ ದಿನಗಳನ್ನು ಉರುಳಿಸುತ್ತಾ ಬದುಕುತ್ತಿರುತ್ತಾರೆ. ಇವನ್ನೆಲ್ಲಾ ನೋಡಿದರೆ ಕರುಳು ಕಿವುಚುತ್ತದೆ. ಸಾಧ್ಯವಾದಷ್ಟು ಮಟ್ಟಕ್ಕೆ ಸಹಾಯ ಮಾಡಬಹುದಾದರೂ ಈ ಪರಿಸ್ಥಿತಿಯನ್ನು ಸಂಪೂರ್ಣ ತೊಡೆದುಹಾಕುವುದು ಸಾಧ್ಯವಿಲ್ಲದ ಮಾತು. ಅಂದಹಹಾಗೆ ಇದು ನಮ್ಮೂರು-ನಿಮ್ಮೂರಿನ ಮಾತು ಮಾತ್ರವಲ್ಲ. ಅತ್ಯಂತ ಮುಂದುವರೆದ ಪ್ರಪಂಚದ ಮೂಲೆಮೂಲೆಯ ಎಷ್ಟೆಷ್ಟೋ ನಾಗರಿಕತೆಗಳಲ್ಲಿ ಈಗಲೂ ಇರುವ ವಾಸ್ತವ. ಹೆಚ್ಚು ಸೂಕ್ಷ್ಮ ಸಂವೇದನೆ ಇರುವವರಿಗೆ ಏಕೆ ಬದುಕು ಇಷ್ಟು ನಿರ್ದಯಿ?’ ಎನಿಸಿದರೆ ಸ್ವಲ್ಪ ಪ್ರಾಕ್ಟಿಕಲ್ ಜನರಿಗೆ ‘ಜಗಜಗಿಸುವ ಬೆಳಕಿದ್ದೆಡೆ ಕಾರ್ಗತ್ತಲೂ ಇರುತ್ತದೆ. ನಮ್ಮ ಕೈಲಾದಷ್ಟು ಬೆಳಕು ಬೀರಬಹುದೇ ಹೊರತು ಅಂಧಕಾರವನ್ನು ಸಂಪೂರ್ಣವಾಗಿ ತೊಡೆದುಹಾಕಲಾಗದು? ಎನಿಸುತ್ತದೆ. ಒಟ್ಟಿನಲ್ಲಿ ಇಂತಹ ಬೀದಿಬದಿಯ ಜನರ ಬದುಕನ್ನು ನೋಡಿದ ಯಾರಿಗೂ ‘ಪಾಪ..’ ಎನಿಸದೇ ಇರದು.
‘ಚಳಿ, ಮಳೆ, ಗಾಳಿಗಳು ಮನುಷ್ಯನ ಮೇಲೆ ಪರಿಣಾಮವೇ ಬೀರದಂತಿದ್ದರೆ ನಿರಾಶ್ರಿತರ ಬದುಕು ಅದೆಷ್ಟು ಸುಗಮವಾಗಿರುತ್ತಿತ್ತಲ್ಲವೇ?’ ಎಂಬ ಹುಚ್ಚು ಯೋಚನೆಯೊಂದಿಗೆ ಬರಹ ಮುಗಿಸುವ ವೇಳೆಗಾಗಲೇ ಡಿಸೆಂಬರ್‌ನ ಸಂಜೆಯ ಚಳಿ ಮೈಕೊರೆಯಲು ಶುರುವಾಗಿದೆ. ಅದೆಷ್ಟೋ ದಿನಗಳ ಹಿಂದೆ ಭೇಟಿ ಮಾಡಿದ ಲಕ್ಷ್ಮೀ ಅಜ್ಜಿಯ ನೆನಪು ಥಂಡಿ ಗಾಳಿಯಂತೆ ದಪ್ಪ ಸೈಟರ್ ಅನ್ನೂ ದಾಟಿ ಕಾಡುತ್ತಲೇ ಇದೆ.
sirimysuru18@gmail.com
ಮೈಸೂರು : ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಆದರೆ, ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಯಾವ…
ಬೆಳಗಾವಿ : ರಾಜ್ಯ ಸರ್ಕಾರ ರೈತ ಪರ ಸರಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ…
ಹೊಸದಿಲ್ಲಿ: ಮುಂಬರುವ ಐಸಿಸಿ ಟಿ-೨೦ ವಿಶ್ವಕಪ್‌ಗಾಗಿ ೧೫ ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಶುಭಮನ್…
ಹೊಸದಿಲ್ಲಿ : ಮೊಟ್ಟೆ ಸೇವೆನೆಗೆ ಸುರಕ್ಷಿತವಾಗಿದ್ದು ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕವಾಗುವ ಯಾವುದೇ ಅಂಶ ಪತ್ತೆ ಆಗಿಲ್ಲ ಎಂದು ಕೇಂದ್ರ ಆಹಾರ…
ಚಾಮರಾಜನಗರ : ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವಂತಹ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಲಶಕ್ತಿ ಮಂತ್ರಾಲಯದ…
ಮೈಸೂರು : ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಾಗಿ ಪ್ರವಾಸಿಗರು, ಸ್ಥಳೀಯರಿಗೆ ಮನರಂಜನೆ ಒದಗಿಸಲು ಅರಮನೆ ಅಂಗಳದಲ್ಲಿ ಡಿ.೨೧ರಿಂದ ೩೧ರವರೆಗೆ…