ಹಾಡು ಪಾಡು

ಭಾನುವಾರದ ಪುರವಣಿಗಳಲ್ಲಿ ಸಾಹಿತ್ಯ ಯಾಕೆ ಮಾಯ?

ಅಕ್ಷತಾ

ಖಾಲಿ ಹಾಳೆಯ ಒಂದೇ ಮಗ್ಗುಲಿನಲ್ಲಿ ಚಿತ್ತಿಲ್ಲದಂತೆ ಬರೆದು, ಪದ ಮಿತಿಯನ್ನು ಬೆರಳು ಲೆಕ್ಕದಲ್ಲಿ ಎಣಿಸಿ, ಪತ್ರಿಕೆಯ ವಿಳಾಸಕ್ಕೆ ಕಳುಹಿಸಿದ ನಂತರ ಕತೆಗಾರ ಅಥವಾ ಕವಿಯ ಬರೆಹ ಚಾತುರ್ಯದ ನೈಜ ಪರೀಕ್ಷೆ. ಸಂಪಾದಕರಿಂದ ಬರುವ ಉತ್ತರಕ್ಕಾಗಿ ಚಾತಕಪಕ್ಷಿಯಂತೆ ಕಾದು ಕಾದೂ ಉತ್ತರವಿಲ್ಲದಿದ್ದಾಗ, ಮತ್ತೆ ಬರೆದು ಕಳುಹಿಸುವುದು, ಕಾಯುವುದು. ಹೀಗೆ ಬರೆಯುವುದರಲ್ಲೇ ಬರೆಹ ಪಕ್ವವಾಗುತ್ತಿತ್ತು. ಇನ್ನು ಸ್ವೀಕೃತವಾಗುವುದಿಲ್ಲ ಎಂಬ ನಿರಾಸೆಯಲ್ಲಿ ಬರೆದಾಗ ಸಂಪಾದಕರಿಂದ -ಸ್ವೀಕೃತಿ ಪತ್ರ ಬಂದರೆ ಲೇಖಕನಿಗೆ ಅರೆ ತೃಪ್ತಿ. ಪತ್ರಿಕೆಯಲ್ಲಿ ಪ್ರಕಟವಾಗಿ ಓದುಗರ ಮನದಂಗಳ ತಲುಪಿದಾಗ. ತನ್ನ ಪ್ರಕಟಿತ ಬರೆಹವನ್ನು ಓದುಗರು ಮೆಚ್ಚಿದರೆ ಅಂದು ಪೂರ್ತಿ ತೃಪ್ತ ಲೇಖಕ. ತನ್ನ ಬರೆಹದ ಪುಟವನ್ನಷ್ಟೇ ಪತ್ರಿಕೆಯಿಂದ ಜೋಪಾನವಾಗಿ ಕತ್ತರಿಸಿಟ್ಟುಕೊಳ್ಳುವ ಕವಿ, ಕತೆಗಾರನಿಗೆ ಅದೇ ದೊಡ್ಡ ಬಹುಮಾನ. ಇಂದು ಬರೆಹ ಲೋಕದಲ್ಲಿ ಹೆಸರು ಮಾಡಿದ ಬಹುತೇಕ ಕವಿ, ಕತೆಗಾರರ ಬರೆಹದ ಆರಂಭದ ದಿನಗಳ ಸಮಾಚಾರ ಇದು. ಈ ರೀತಿಯ ‘ಮರಳಿ ಯತ್ನವ ಮಾಡು’ ಎಂಬ ಸಿದ್ಧಾಂತವನ್ನು ಪೋಷಿಸಿದ್ದು ಪತ್ರಿಕೆಗಳಲ್ಲಿ ವಾರಕ್ಕೊಮ್ಮೆ ಬರುತ್ತಿದ್ದ ಸಾಹಿತ್ಯಕ್ಕೆ ಮೀಸಲಿದ್ದ ಸಾಪ್ತಾಹಿಕವೆಂಬ ಪುರವಣಿ. ಇದು ಲೇಖಕರ ಸಾಹಿತ್ಯದ ಭಾಷೆಯನ್ನು ಶುದ್ಧವಾಗಿಸಿದೆ. ಕಲ್ಪನೆಯನ್ನು ಕೂಸಾಗಿ ಹಡೆಸಿದೆ. ಆದರೆ ಇತ್ತೀಚಿನ ವರ್ಷಗಳಿಂದೀಚೆ ಸಾಹಿತ್ಯದ ಆಡುಂಬೊಲವಾಗಿದ್ದ, ಬರೆಹಾಸಕ್ತರಿಗೆ ಮೀಸಲಾಗಿದ್ದ ಸಾಪ್ತಾಹಿಕವೆಂಬ ಪುರವಣಿ ‘ಇದೆ’ ಎಂಬ ವರ್ತಮಾನದಿಂದ ‘ಇತ್ತು’ ಎಂಬ ಭೂತಕಾಲದತ್ತ ಅತೀ ವೇಗವಾಗಿ ಹೆಜ್ಜೆ ಹಾಕುತ್ತಿದೆಯೆಂಬ ನೋವು ಸಾಹಿತ್ಯ ವಲಯದ್ದು!

ಇತಿಹಾಸವಾಗುತ್ತಿದೆಯೇ ಮುದ್ರಿತ ಪುರವಣಿಯ ಸಾಹಿತ್ಯ ಪುಟ?:  ಸಾಹಿತ್ಯಾಭಿರುಚಿ ಬೆಳೆಸಿದ, ಬೆಳೆಸುತ್ತಿದ್ದ, ಸಾಹಿತ್ಯಕ್ಕೇ ಮೀಸಲಾದ ಬಹುತೇಕ ಪತ್ರಿಕೆಗಳ ಸಾಪ್ತಾಹಿಕದ ಪುಟಗಳಲ್ಲಿ ಕಡಿತವಾಗಿದೆ. ‘ಕೊರೋನಾ ಕಾಲ ಎಂದು ಸಾಪ್ತಾಹಿಕಕ್ಕೆ ಕತ್ತರಿ ಹಾಕಲು ಕಾರಣವಾಗಿದೆ’ ಎಂಬುದು ಮೇಲ್ನೋಟಕ್ಕೆ ಹೇಳಲಾಗುತ್ತಿದೆಯಾದರೂ ವಾಸ್ತವ ಅದಲ್ಲ. ಕೋವಿಡ್ ಕಾಲಾನಂತರ ಪತ್ರಿಕೆಗಳ ಪುಟಗಳ ಸಂಖ್ಯೆ ಕಡಿಮೆಯಾಯಿತು. ಕೋವಿಡ್ ಒಂದು ಕಾರಣವಾಗಿದ್ದರೆ, ಮತ್ತೊಂದು ಕಾರಣ ನಂತರ ಪತ್ರಿಕೆ ಕೊಳ್ಳುವವರ ಸಂಖ್ಯೆ ಕಡಿಮೆಯಾಯಿತು. ಆರ್ಥಿಕವಾಗಿ ನಷ್ಟ ಅನುಭವಿಸುವ ಹಂತಕ್ಕೆ ತಲುಪಿದಾಗ ಇನ್ನೇನು ಪತ್ರಿಕೆಗಳ ಕಾಲ ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ಪತ್ರಿಕೆಗೆ ರೆವಿನ್ಯೂ ಸೆಕ್ಟರ್ ಪ್ರವೇಶವಾಯಿತು. ಪತ್ರಿಕೆ ಕಮರ್ಷಿಯಲ್ ದೃಷ್ಟಿಕೋನವನ್ನು ಯಾವಾಗ ಇಟ್ಟುಕೊಳ್ಳಲಾರಂಭಿಸಿತೋ ಅಂದಿನಿಂದ ಸಂಪಾದಕ, ಉಪಸಂಪಾದಕರ ಅಭಿರುಚಿಯಂತಿದ್ದ ಪತ್ರಿಕೆಯ ರೂಪುರೇಷೆಗೆ ಸಿ.ಇ.ಒ. ಕಣ್ಣಿನ ಹೊಸ ದೃಷ್ಟಿಕೋನ ಸೇರಿತು. ಪತ್ರಿಕೆ ಮುನ್ನಡೆಸಲು ಬೇಕಾದ ಆರ್ಥಿಕ ಸಬಲತೆಗಾಗಿ ಕೆಲವು ಮಾರ್ಪಾಡು ಮಾಡಿದಾಗ ಮೊದಲು ಕತ್ತರಿ ಹಾಕಿದ್ದೇ ಸಾಪ್ತಾಹಿಕದ ಸಾಹಿತ್ಯ ಪುಟಗಳಿಗೆ. ಕಾರಣ! ಸಾಹಿಠ್ಯಿಕ ಪುಟಗಳು ಪತ್ರಿಕೆಗೆ ಯಾವುದೇ ರೀತಿಯ ರೆವಿನ್ಯೂ ತರುವಂತಹದ್ದಲ್ಲ ಎಂಬುದು ಒಂದೆಡೆಯಾದರೆ, ಆ ಪುಟ ಗಳಿಗೆ ಜಾಹೀರಾತುದಾರರು ಇಲ್ಲದಿರುವುದೂ ಇನ್ನೊಂದು ಕಾರಣವಾಯಿತು. ಆದ್ದರಿಂದ ಸಾಪ್ತಾಹಿಕದ ಸಾಹಿತ್ಯಕ್ಕೆ ಮೀಸಲಾದ ಪುಟಗಳು ಕಣ್ಮರೆಯಾಯಿತು’ ಎಂಬುದು ಪತ್ರಿಕೆಯ ಸಹ ಸಂಪಾದಕರೊಬ್ಬರ ಅನುಭವದ ಮಾತು.

ಉದ್ಯಮಗಳ ಸಾಲಿನಲಿ ಪತಿ  ಕೋದ್ಯಮ:  ಇಂದು ಪತ್ರಿಕೆಗಳು ಸುದ್ದಿಯ ನೆಂಟನಾಗಿ ಮಾತ್ರ ಉಳಿದಿಲ್ಲ. ಪತ್ರಿಕೋದ್ಯಮವೂ ಒಂದು ಉದ್ಯಮವಾಗಿ ‘ಕಮರ್ಷಿಯಲ್’ ಎಂಬ ಗಾಳಿಯ ಬಿಸಿ ಪತ್ರಿಕೋದ್ಯಮಕ್ಕೂ ತಟ್ಟಿದೆ. ಸುದ್ದಿಮನೆಯ ನೆಂಟರಿಗೆ ಜಾಹೀರಾತು, ಟಾರ್ಗೆಟ್ ಎಂಬಿತ್ಯಾದಿ ಒತ್ತಡಗಳ ನಡುವೆ ಸಾಹಿತ್ಯದ ಪುಟಗಳನ್ನು ಉಳಿಸಿಕೊಳ್ಳುವುದು ಸುಲಭದ ಮಾತಾಗಿಲ್ಲ. ಜೊತೆಗೆ ಡಿಜಿಟಲೀಕರಣದ ಪ್ರಭಾವ ಪತ್ರಿಕಾರಂಗದಲ್ಲೂ ಇರುವುದರಿಂದ ಕೊಂಡು ಓದುವ ಪತ್ರಿಕೆಗಳಿಗಿಂತಲೂ, ಪ್ರಕಟವಾದ ತಮ್ಮ ಬರೆಹದ ಪುಟದ ‘ಇ-ಕಾಪಿ’ ಮುಖ್ಯವಾಗುತ್ತಿರುವುದರಿಂದ ಪತ್ರಿಕೆಗಳ ಮುದ್ರಣಕ್ಕೂ ಪೆಟ್ಟು ಬಿದ್ದಿದೆ.

ಇದು ‘ಲಿಂಕ್ ಪೀಸ್’ ಜಮಾನ!:  ಕುರಿತೋದುವ ಪ್ರವೃತ್ತಿ, ಕುಳಿತೋದುವ ರೂಪ ಪಡೆದುಕೊಂಡು, ಇಂದಿನ ದಿನಗಳಲ್ಲಿ ಅದೂ ಮಾಯವಾಗಿ ‘ಲಿಂಕ್ ಪ್ಲೀಸ್’ ಜಮಾನದಲ್ಲಿ ಓದುಗರೂ ಲೇಖಕರೂ ಇದ್ದಾರೆ. ಮುದ್ರಿತ ರೂಪದಲ್ಲಿ ಸಾಪ್ತಾಹಿಕಗಳು, ಪುರವಣಿಗಳು ಬರುತ್ತಿದ್ದ ದಿನಗಳಲ್ಲಿ ಓದುಗರ ನಡುವೆ ಕೊಂಡು ಓದುವ ಪ್ರವೃತ್ತಿಯಿತ್ತು. ಪ್ರತಿನಿತ್ಯ ದಿನ ಪತ್ರಿಕೆ ಕೊಳ್ಳದವರೂ ತಮ್ಮ ಬರೆಹ ಬಂದ ದಿನವಾದರೂ ಪತ್ರಿಕೆಗಳನ್ನು ಕೊಂಡು ಕೊಳ್ಳುವ ಪದ್ಧತಿಯಿತ್ತು. ಮುದ್ರಿತ ಸಾಪ್ತಾಹಿಕಗಳು ‘ಇ-ಸಾಪ್ತಾಹಿಕ’ ರೂಪ ಪಡೆದುಕೊಂಡ ನಂತರ ಎಲ್ಲವೂ ಬದಲಾಯಿತು. ಕಾಯುವ ತಾಳ್ಮೆಯಿಲ್ಲದ ಡಿಜಿಟಲ್ ಲೋಕದಲ್ಲಿ ಓದುಗನಿಗೂ ಬರೆಯುವವನಿಗೂ ಬೇಕಾಗಿರುವುದು ಲಿಂಕ್ ಮಾತ್ರ. ತಮ್ಮ ಪ್ರಕಟಿತ ಬರೆಹದ ಇ-ಕಾಪಿಯನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳುವ ಲೇಖಕನಿಗೆ ಮುದ್ರಿತ ಪ್ರತಿ ಮುಖ್ಯವಾಗುವುದೂ ಇಲ್ಲ. ಆತ ಜಾಲತಾಣಗಳಲ್ಲಿ ಹಂಚಿಕೊಳ್ಳದಿದ್ದರೆ ‘ಬರೆಹ ಪ್ರಕಟವಾಗಿದೆ’ ಎನ್ನುವುದು ಕೇವಲ ದಂತಕಥೆ! ಪತ್ರಿಕೆಗಳು ಮುದ್ರಿತ ರೂಪದಲ್ಲಿ ಬಂದರಷ್ಟೇ ಲಾಭ ವಿದೆಯೇ ಹೊರತು ಇ-ಪೇಪರ್‌ಗಳು ಯಾವುದೇ ರೀತಿಯ ಲಾಭವನ್ನು ತರದು. ಆದರೆ, ಮುದ್ರಿತ ರೂಪದ ಸಾಪ್ತಾಹಿಕ ಓದುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಕೆಲವು ಪತ್ರಿಕೆಗಳು ಸಾಪ್ತಾಹಿಕದ ಮುದ್ರಿತ ಪುಟಗಳನ್ನು ಕಡಿತಗೊಳಿಸಿದ್ದರೆ, ಇನ್ನೂ ಕೆಲವು ಪೂರ್ಣ ಪ್ರಮಾಣದ ಇ- ಪುರವಣಿಯಾಗಿ ಹೊಸ ರೂಪದಲ್ಲಿ ಬರುತ್ತಿದೆ. ಇದರಿಂದ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಉತ್ಸುಕ ಸಾಹಿತಿಗಳ ಇಚ್ಛೆಯನ್ನು ಈಡೇರಿಸಿರುವುದರಿಂದ ಓದುಗರೂ ಬರೆದವರು ಜಾಲತಾಣದಲ್ಲಿ ‘ಇಂದು ಪ್ರಕಟವಾದ ನನ್ನ ಕತೆ/ ಕವಿತೆಯ ಲಿಂಕ್’ ಎಂದು ಹಂಚಿಕೊಂಡರಷ್ಟೇ ಓದುವ ಪರಿಪಾಠವನ್ನು ರೂಢಿಸಿ ಕೊಂಡಿರುವುದು ಮುದ್ರಿತ ರೂಪದ ಸಾಪ್ತಾಹಿಕಗಳ ಹಿನ್ನಡೆಗೆ ಕಾರಣವಾಗಿದೆ.

ಕಡಿಮೆಯಾಗುತ್ತಿರುವ ರೀಡಿಂಗ್ ಟೈಮ್ !:  ಮೊಬೈಲ್ ಸ್ಕ್ರೀನ್ ಮೇಲೆ ಒಂದು ಸಲಕ್ಕೆ ಎಷ್ಟು ಪದಗಳನ್ನು ಓದಬಹುದೋ ಅಷ್ಟೇ ಓದಿನ ಆಸಕ್ತಿಯಾಗಿದೆ. ಈಗ ಮೆಸೇಜ್‌ಗಳನ್ನು ಓದುವ ನಡುವೆ ಹಾದು ಹೋಗುವಂತಹ ಪುಟ್ಟ ಪುಟ್ಟ ಕತೆ, ಕವಿತೆಗಳಿಗಷ್ಟೇ ಆದ್ಯತೆ. ರೀಡಿಂಗ್ ಟೈಮ್ ಅವಧಿ ಕಡಿಮೆಯಾಗಿ ಸ್ಕ್ರೀನಿಂಗ್ ಟೈಮ್ ಹೆಚ್ಚಾಗಿದೆ. ಹೀಗಿದ್ದಾಗ ದೀರ್ಘ ಬರೆಹಗಳು ಓದುಗರನ್ನು ಹಿಡಿದಿಡುವಲ್ಲಿ ಸೋತಿದೆ. ಆಡಿಯೋ ಬುಕ್, ನ್ಯೂಸ್ ಕ್ಯಾಪ್ಸೂಲ್ ಎಂಬ ಹೊಸ ಪರಿಕಲ್ಪನೆ ಹೆಚ್ಚು ಜನಪ್ರಿಯವಾಗಿದ್ದು ಓದುವ ಬದಲಾಗಿ ಕೇಳಿಸಿಕೊಳ್ಳುವುದು ಹೆಚ್ಚು ಜನಪ್ರಿಯವಾಗುತ್ತದೆ. ಹೀಗಿದ್ದಾಗ ಪತ್ರಿಕೆಗಳ ದೀರ್ಘ ಅಂಕಣಗಳು, ಕತೆಗಳು ರೀಡಿಂಗ್ ಟೈಮ್ ಅವಧಿ ಮೀರುವುದರಿಂದ ಸ್ಕ್ರೀನಿಂಗ್ ಟೈಮ್‌ಗೆ ಅವಶ್ಯವಿರುವ ವಿಷಯಗಳನ್ನು ಹುಡುಕುವುದು ಪತ್ರಿಕೆಗಳಿಗೂ ಸವಾಲಾಗಿದೆ. ೬೦-೯೦ ಸೆಕೆಂಡುಗಳೊಳಗೆ ವಿಷಯವನ್ನು ಪರಿಣಾಮಕಾರಿಯಾಗಿ ಮುಟ್ಟಿಸುವ ಚಾಲೆಂಜ್ ಪತ್ರಕರ್ತರದ್ದಾಗಿದೆ. ಆದುದರಿಂದ ಪತ್ರಕರ್ತರಿಗೆ ಸುದ್ದಿ ಕಲೆ ಹಾಕುವ ಟಾರ್ಗೆಟ್ ಇರುವುದರಿಂದ ಸಾಹಿತ್ಯ ಸಂಬಂಧಿ ವಿಚಾರಗಳೂ ಸ್ಕ್ರೀನಿಂಗ್ ಟೈಮ್‌ಗೆ ತಕ್ಕಂತೆ ಮಾರ್ಪಾಡುಗೊಳಿಸಬೇಕಾಗಿರುವುದು ಅನಿವಾರ್ಯವಾಗಿದೆ.

ಸ್ಪರ್ಧೆಗಳು ಮತ್ತು ಪ್ರಚಾರ ಪ್ರಿಯತೆ:  ಯಾವುದೇ ಒಂದು ಸಾಪ್ತಾಹಿಕ ಅಥವಾ ಪುರವಣಿಗೆ ಹಿನ್ನಡೆಯಾಗುತ್ತಿದೆಯೆಂದರೆ ಅಲ್ಲಿ ಬರೆಯುವವರ ಪಾಲೂ ಇದೆ ಎಂಬ ಸತ್ಯವನ್ನು ತಳ್ಳಿ ಹಾಕುವಂತಿಲ್ಲ. ‘ಹಿಂದೆಯೆಲ್ಲ ಪತ್ರಿಕಾ ಕಚೇರಿಗೆ ಬಹಳಷ್ಟು ಕತೆ, ಕವಿತೆ, ಲೇಖನಗಳು ಪ್ರಕಟಣೆಯ ಕೃಪೆಗಾಗಿ ಬರುತ್ತಿದ್ದವು. ಆದರೆ ಕ್ರಮೇಣ ಕಡಿಮೆಯಾಗಿ ಪತ್ರಿಕೆಯವರೇ ಹೇಳಿ ಬರೆಯಿಸುವಂತಹ ಸ್ಥಿತಿಗೆ ತಲುಪಿದ್ದೇವೆ. ಕೆಲವು ಪತ್ರಿಕೆಗಳು ಆಸಕ್ತ ಸಂಸ್ಥೆಗಳ ಸಹಯೋಗದಲ್ಲಿ ಕತೆ, ಕವಿತೆ ಸ್ಪರ್ಧೆಗಳನ್ನು ನಡೆಸುತ್ತಿದ್ದು, ಇಲ್ಲಿಯೂ ಬಹುಮಾನಿತರು ಪುನರಾವರ್ತನೆಯಾಗುತ್ತಿದ್ದಾರೆ. ಹೊಸ ರೀತಿಯ, ವಿಭಿನ್ನ ಶೈಲಿಯ ಕತೆಗಳನ್ನು ಪ್ರಯತ್ನಿಸುವ ಬದಲಾಗಿ ಕತೆಗಾರರು ಸ್ಪರ್ಧೆಯ ಮಾನದಂಡಕ್ಕೆ ತಕ್ಕಂತೆ ಬರೆಯುತ್ತಿದ್ದಾರೆ. ಕತೆ ಬರೆಯುವ ಮಟ್ಟದ ಸುಧಾರಣೆಗಿಂತಲೂ ಪ್ರಚಾರಪ್ರಿಯತೆ ಕತೆಗಾರರ ಆಸಕ್ತಿಯಾದರೆ ಕತೆ ಚೌಕಟ್ಟನ್ನು ದಾಟಲು ಸಾಧ್ಯವಿಲ್ಲ. ಏಕತಾನತೆಯಿಂದಾಚೆ ಬರದಿದ್ದರೆ ಓದುಗರನ್ನು ತಲುಪುವುದು ಕಷ್ಟ! ಹೀಗಾಗಿ ಕತೆಗಾರರು ಸ್ಪರ್ಧೆಗಳಿಗಾಗಿ ಮಾತ್ರವೇ ಬರೆಯುವ ನಿಲುವಿನಿಂದ ಈಚೆ ಬಂದರಷ್ಟೇ ಪತ್ರಿಕೆಯೂ ಸಾಹಿತ್ಯಕ್ಕೆ ಪುಟಗಳನ್ನು ಮೀಸಲಿಡಬಹುದು. ಪತ್ರಿಕೆಗಳಲ್ಲಿ ಸಾಹಿತ್ಯದ ಉಳಿವು ಕೇವಲ ಪತ್ರಿಕೆಯವರ ಜವಾಬ್ದಾರಿ ಮಾತ್ರವಲ್ಲ, ಪ್ರತೀ ಲೇಖಕ – ಓದುಗನ ಜವಾಬ್ದಾರಿಯೂ ಹೌದು. ಕಾಲಕ್ಕೆ ತಕ್ಕಂತೆ ಓದುಗರ ಅಭಿರುಚಿಗೆ ತಕ್ಕಂತೆ ವಿಭಿನ್ನ ಶೈಲಿಯಲ್ಲಿ ಬರೆಯುವ ಹೊಣೆ ಲೇಖಕರದ್ದೂ ಆಗಿದೆ. ಸ್ಪರ್ಧಾ ಸೀಮಿತ ಬರೆಹಕ್ಕೆ ಪ್ರಾಮುಖ್ಯತೆ ಕೊಡುವ ಬದಲಾಗಿ ತೋಚಿದ ವಿಷಯವನ್ನು ಹೊಸ ರೀತಿಯಲ್ಲಿ ಬರೆದು ಕಳುಹಿಸಿದರೆ, ಪತ್ರಿಕಾ ಕಚೇರಿಗೆ ಅಂತಹ ಬರೆಹಗಳು ಬಂದರೆ ಖಂಡಿತವಾಗಿಯೂ ಪ್ರಕಟಿಸುವ ಆಸಕ್ತಿ ಪತ್ರಿಕೆಗೆ ಇದೆ’. ಇದು ಸಾಹಿತ್ಯಾಸಕ್ತ ಸಂಪಾದಕರೊಬ್ಬರ ಮಾತು.

ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿ:  ಹೊಸತನ ಎಷ್ಟೇ ಬಂದರೂ ಪತ್ರಿಕೆಗಳನ್ನು ಕೈಯಲ್ಲಿ ಹಿಡಿದು ಪ್ರತಿಯೊಂದು ಅಂಕಣವನ್ನೂ ಬಿಡದೆ ಓದುವ ಸುಖಕ್ಕೆ ಯಾವುದೂ ಎದುರು ನಿಲ್ಲದು. ಪತ್ರಿಕೆಗಳು ಯಾವುದೇ ಪುಟವನ್ನು ಪ್ರಕಟಿಸುವ ತೀರ್ಮಾನ ಕೈ ಬಿಟ್ಟಾಗ ಆ ಸೋಲಿನಲ್ಲಿ ಲೇಖಕನದ್ದೂ ಓದುಗನದ್ದೂ ಸಮಪಾಲು. ಮಾಧ್ಯಮವೆನ್ನುವುದು ಏಕಮುಖವಲ್ಲ. ಒಂದು ಕಾಲದಲ್ಲಿ ಬಲಿಷ್ಠ ಮಾಧ್ಯಮವಾಗಿ ಗುರುತಿಸಿಕೊಂಡಿದ್ದ ಪ್ರಿಂಟಿಂಗ್ ಮಾಧ್ಯಮವೇ ಇನ್ನೇನು ಕೆಲವು ವರ್ಷಗಳಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುವುದೇ? ಎಂಬ ಡೋಲಾಯಮಾನ ಸ್ಥಿತಿಯಲ್ಲಿರುವಾಗ ಓದುಗ, ಲೇಖಕ ಇಬ್ಬರೂ ಕಾಲ ಕಾಲಕ್ಕೆ ಕಿವಿ ಹಿಂಡಿ ಪತ್ರಿಕೆಯ ಉಳಿವಿಗಾಗಿ ನಿಂತರೆ ಪತ್ರಿಕೆಗಳು ಕೂಡಾ ಯಾವುದೇ ಪುಟಕ್ಕೆ ಕತ್ತರಿ ಹಾಕದು. ಮತ್ತೆ ‘ಕುಳಿತು ಓದುವ ಸುಖ’ಕ್ಕೆ ಓದುಗ ಒಗ್ಗಿಕೊಳ್ಳಬೇಕು. ಕಾಲದ ಓಘಕ್ಕೆ ತಕ್ಕಂತೆ ಬರೆಯುವ ಜಾಣತನ ಕವಿಯದ್ದೂ ಕತೆಗಾರನದ್ದೂ ಆಗಿರಬೇಕು.

” ಹಿಂದೆ ಎಲ್ಲ ಪತ್ರಿಕೆಗಳಲ್ಲಿ ಸಾಹಿತಿಗಳೇ ಸಂಪಾದಕರಾಗಿದ್ದರು. ಯಾರೂ ಜರ್ನಲಿಸಂ ಅಥವಾ ಮಾರ್ಕೆಟಿಂಗ್ ಮಾಡಿ ಬಂದವರಾಗಿರಲಿಲ್ಲ. ಸಾಹಿತ್ಯದ ಹಿನ್ನೆಲೆಯಿಂದ ಬಂದವರಾಗಿದ್ದರಿಂದ ಸಾಹಿತ್ಯಕ್ಕಾಗಿ ಪುಟ ಬೇಕೆನ್ನುವ ನಿಲುವು ಹೊಂದಿದ್ದರು. ಸಾಹಿತ್ಯದ ಪುಟಗಳಿಗೆ ಕತ್ತರಿ ಬಿದ್ದಾಗ ಓದುಗರಿಂದ ಪ್ರತಿಕ್ರಿಯೆ ಬರಲಿಲ್ಲ. ಆ ಕುರಿತು ಪತ್ರ ಬರೆದಿದ್ದು ಬೆರಳೆಣಿಕೆಯಷ್ಟು ಕವಿಗಳು ಮಾತ್ರ! ಓದುಗರಿಗೆ ಅವಶ್ಯವಿಲ್ಲವೆಂದಾದ ಮೇಲೆ ಆ ಪುಟಗಳನ್ನು ಯಾವ ಪತ್ರಿಕೆಯೂ ಪ್ರಕಟಿಸದು. ಜರ್ನಲಿಸಂ ಎಂಬುದು ಬದಲಾಗುತ್ತಿದೆ.ಸಾಹಿತಿ ಸ್ಪರ್ಧಾವಿಜೇತರ ಪಟ್ಟಿಗಾಗಿ ಬರೆಯಬಾರದು. ಬಹುಮಾನದ  ಮೊತ್ತ ದೊಡ್ಡದಿದ್ದ ಮಾತ್ರಕ್ಕೆ ಉತ್ಕ್ರಷ್ಟವೆಂದಲ್ಲ. ಕತೆ ಓದುಗನ ಮನಸ್ಸಿನಲ್ಲಿ ಉಳಿಯುವುದೇ ದೊಡ್ಡ ಬಹುಮಾನ. ಈಗ ನಮ್ಮ ಕತೆಗಳು ಪತ್ರಿಕೆಯಲ್ಲಿ ಪ್ರಕಟವಾದರೆ ಯಾರಿಗೂ ತಿಳಿಯುವುದೇ ಇಲ್ಲ. ಆ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡರಷ್ಟೇ ತಿಳಿಯುತ್ತದೆ. ಬರೆಯುವ ಪ್ರತಿಯೊಬ್ಬರೂ ತಮ್ಮ ಲೇಖನ, ಕತೆ, ಕವಿತೆಗಳ ಲಿಂಕ್‌ಗಳನ್ನು ಕೇಳುತ್ತಾರೆಯೇ ಹೊರತು ಮುದ್ರಿತ ಪತ್ರಿಕೆ ಕೊಳ್ಳುವುದಿಲ್ಲ. ಪತ್ರಿಕೆಗಳು ಸಾಪ್ತಾಹಿಕ ಪುರವಣಿಗಳನ್ನು ಪ್ರಕಟ ಮಾಡುತ್ತಿಲ್ಲ ಎಂದು ಆರೋಪಿಸುವವರೂ ತಮ್ಮ ವಾಟ್ಸಾಪ್, ಫೇಸ್ಬುಕ್ ಪುಟಗಳಲ್ಲಿ ಹಂಚಿಕೊಳ್ಳುವುದು ಇ-ಕಾಪಿಗಳನ್ನೇ ಹೊರತು ಮುದ್ರಿತ ಪತ್ರಿಕೆಯನ್ನಲ್ಲ!

” ಯಾವುದೇ ಒಂದು ಸಾಪ್ತಾಹಿಕ ಅಥವಾ ಪುರವಣಿಯಲ್ಲಿ ಸಾಹಿತ್ಯ ಮೂಲೆ ಗುಂಪಾಗುತ್ತಿರುವ ಕಾರಣದ ಹಿಂದೆ ಬರೆಯುವವರ ಪಾತ್ರವೂ ಇದೆ ಎಂಬ ಸತ್ಯವನ್ನು ತಳ್ಳಿ ಹಾಕುವಂತಿಲ್ಲ.”

ಆಂದೋಲನ ಡೆಸ್ಕ್

Recent Posts

ದಸರಾ ಉನ್ನತ ಮಟ್ಟದ ಸಭೆ: ದಸರಾ ಪಾಸ್‌ಗಳನ್ನು ಸಂಪೂರ್ಣ ತಿರಸ್ಕರಿಸಿದ ಸಂಸದ ಯದುವೀರ್‌ ಒಡೆಯರ್‌

ಬೆಂಗಳೂರು: ಇಂದು ನಡೆದ ಮೈಸೂರು ದಸರಾ ಮಹೋತ್ಸವದ ಉನ್ನತ ಮಟ್ಟದ ಸಭೆಯಲ್ಲಿ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು…

3 hours ago

ಜೀಪಿನ ಮೇಲೆ ಬಿದ್ದ ಮರದ ಕೊಂಬೆ: ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ

ಗೋಣಿಕೊಪ್ಪ: ಪೊನ್ನಂಪೇಟೆ ಪಟ್ಟಣದಲ್ಲಿ ಭಾರಿ ಗಾಳಿ-ಮಳೆಯ ನಡುವೆ ಚಲಿಸುತ್ತಿದ್ದ ಜೀಪಿನ ಮೇಲೆ ಮರದ ಬೃಹತ್ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ…

4 hours ago

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ: ಅ.11ಕ್ಕೆ ದಸರಾ ಉದ್ಘಾಟನೆ

ಬೆಂಗಳೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಸಂಭ್ರಮಕ್ಕೆ ದಿನಾಂಕ ಫಿಕ್ಸ್‌ ಆಗಿದೆ. ಅಕ್ಟೋಬರ್.‌11ರಂದು ಚಾಮುಂಡಿಬೆಟ್ಟದಲ್ಲಿ ದಸರಾ ಮಹೋತ್ಸವ…

5 hours ago

ಜನವಸತಿ ಪ್ರದೇಶದಲ್ಲಿ ಸಂಚರಿಸಿ ಆತಂಕ ಸೃಷ್ಟಿಸಿದ ಕಾಡಾನೆ

ಸುಂಟಿಕೊಪ್ಪ: ಕೊಡಗರಹಳ್ಳಿಯ ಜನವಸತಿ ಪ್ರದೇಶದಲ್ಲಿ ಕಾಡಾನೆಯೊಂದು ಸಂಚರಿಸುವ ಮೂಲಕ ಈ ಭಾಗದ ನಿವಾಸಿಗಳಲ್ಲಿ ಅತಂಕ ಮೂಡಿಸಿದ ಘಟನೆಯೊಂದು ವರದಿಯಾಗಿದೆ. ಕಾಡಾನೆಯೊಂದು…

6 hours ago

ವಯನಾಡು ಭೂಕುಸಿತ ದುರಂತ ಪ್ರಕರಣ: ಸಾವಿನ ಸಂಖ್ಯೆ 7ಕ್ಕೆ ಏರಿಕೆ

ವಯನಾಡು: ವಯನಾಡ್ ಭೂಕುಸಿತ ಸ್ಥಳದಲ್ಲಿ ಇಂದು ಮತ್ತೊಂದು ಮೃತದೇಹ ಪತ್ತೆಯಾಗಿದ್ದು, ದುರಂತದಲ್ಲಿ ಸಾವನ್ನಪ್ಪಿದ ಒಟ್ಟು ಜನರ ಸಂಖ್ಯೆ ಏಳಕ್ಕೆ ಏರಿದೆ…

6 hours ago

ಚೀನಾ ಪ್ರವಾಹದ ಮಧ್ಯೆ 900ಕ್ಕೂ ಹೆಚ್ಚು ವಿಷಕಾರಿ ಹಾವುಗಳು ನಾಪತ್ತೆ: ನೀರಿಗೆ ಇಳಿಯದಂತೆ ಜನತೆಗೆ ಸೂಚನೆ

ಬೀಜಿಂಗ್:‌ ಚೀನಾದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಾವುಗಳ ಸಂತಾನೋತ್ಪತ್ತಿ ಕೇಂದ್ರಗಳು ಹಾನಿಗೊಳಗಾಗಿವೆ. ಪರಿಣಾಮ ಗುವಾಂಗ್ಕ್ಸಿ ಪ್ರದೇಶದಲ್ಲಿ ಹೆಚ್ಚು ಸರ್ಪಗಳು ತಪ್ಪಿಸಿಕೊಂಡಿವೆ.…

7 hours ago