ಕನ್ನಡದ ನಾಲ್ವರು ಖ್ಯಾತ ಕವಿಗಳು ತಮ್ಮ ಮೊದಲ ಕವಿತೆಯ ನೆನಪಲ್ಲಿ ಹೇಗೆ ಕಳೆದು ಹೋಗಿದ್ದಾರೆ ನೋಡಿ.
ಬಹುಶಃ, ಮೊದಲ ಕವಿತೆ ಯೌವನದಲ್ಲಿ ಮೂಡುವ ಮೊದಲ ಮೊಡದಂತೆ
ಗೋಕರ್ಣದ ನಮ್ಮ ಮನೆಯಲ್ಲಿ ಸಿಕ್ಕಾಪಟ್ಟೆ ಪುಸ್ತಕಗಳಿದ್ದವು. ಪತ್ರಿಕೆಗಳು ಬರುತ್ತಿದ್ದವು. ಅವನ್ನೆಲ್ಲ ನೋಡಿ ನನಗೆ ಸಾಹಿತ್ಯ, ಸಾಹಿತಿಗಳು ಎಂದರೆ ಅಲರ್ಜಿ ಆಗಿಹೋಗಿತ್ತು.
ನಾನು ಕಾಲೇಜ್ ಓದಲು ಕುಮಟಾಕ್ಕೆ ಹೋದೆ. ಸಣ್ಣ ಊರಿಂದ ದೊಡ್ಡ ಊರು, ಮನೆವಾಸದಿಂದ ಹಾಸ್ಟೆಲ್ ವಾಸ, ಕನ್ನಡ ಮಾಧ್ಯಮದಿಂದ ಇಂಗ್ಲಿಷ್ ಮಾಧ್ಯಮ – ಹೀಗೆ ಮುಪ್ಪುರಿ ಬದಲಾವಣೆಗಳ ತಲ್ಲಣದಲ್ಲಿ ಮನಸ್ಸು ಕಂಗೆಟ್ಟಿತು. ಹೊಸ ಚಡಪಡಿಕೆ ಶುರುವಾಯಿತು. ಆಗ ರಜೆಗೆ ಮನೆಗೆ ಬಂದಿದ್ದಾಗ ನಮ್ಮ ಜಿಲ್ಲೆಯ ಶರಾವತಿ ತೀರದ ಜೆ. ಎಸ್. ಅವಧಾನಿಯವರ “ಬೆಂಕಿ ಬಳ್ಳಿ” ಕವನ ಸಂಗ್ರಹ ನನ್ನ ತಂದೆ ಗೌರೀಶ ಕಾಯ್ಕಿಣಿಯವರ ಬಳಿ ಮುನ್ನುಡಿಗಾಗಿ ಬಂದಿತ್ತು. ಅದರ ಧ್ವನಿಪೂರ್ಣ ಶೀರ್ಷಿಕೆಯೇ ನನ್ನನ್ನು ಸೆಳೆಯಿತು. ಅದರ ಆಧುನಿಕ ಪ್ರತಿಮೆಗಳ ನಿಬಿಡ ಕವಿತೆಗಳನ್ನು ಓದುತ್ತ ನನಗೆ ಕಾವ್ಯದ ವೈರಸ್ ಇನ್ನಿಲ್ಲದಂತೆ ಅಂಟಿಕೊಂಡಿತು. ಬಹುಶಃ ಇದಕ್ಕೆ ವ್ಯಾಕ್ಸಿನ್ ಇಲ್ಲ. ಬರೆದ ಮೊದಲ ಕವಿತೆಗಳೆಂದರೆ ನೀರಿನಲ್ಲಿ ತೇಲಿ ಬಿಟ್ಟ ಕಾಗದದ ದೋಣಿಗಳಂತೆ. ಯಾವುದೆಂದು ನನಗಂತೂ ನೆನಪಿಲ್ಲ. ಎಷ್ಟೆಲ್ಲ ಗೀಚಿ ಅಳಿಸಿರುತ್ತೇವೆ. ಹರಿದಿರುತ್ತೇವೆ. ಆದರೆ ಪ್ರಕಟವಾದ ಮೊದಲ ಕವಿತೆಯ ಬಗ್ಗೆ ಹೇಳಬಲ್ಲೆ. ಸಾಕ್ಷಿ, ಸಂಕ್ರಮಣ ಮುಂತಾದ ಪತ್ರಿಕೆಗಳು ಕಾಲೇಜು ಲೈಬ್ರರಿಯಲ್ಲಿ ಬರುತ್ತಿದ್ದವು. ಸಾಕ್ಷಿಯ ಹಳೇ ಸಂಚಿಕೆ ಸಹ ಅಲ್ಲಿದ್ದವು. ಗೋಪಾಲಕೃಷ್ಣ ಅಡಿಗರು ಸಂಪಾದಕರಾಗಿದ್ದರು. ಏನು ಧೈರ್ಯ ಬಂತೋ , ‘ಪ್ರಾಯ’, ‘ಕಾಮ’, ‘ಸೊಕ್ಕು’, ‘ಜೀವನ’ ಇತ್ಯಾದಿ ಗಂಭೀರ ಕವಿತೆಗಳ ಜೊತೆಗೆ ‘ಬಸಳೆ’, ‘ಬುಗುರಿ’ ಎಂಬ ಸರಳ ಎರಡು ಕವಿತೆಗಳನ್ನೂ ಸೇರಿಸಿ ಕಳಿಸಿಕೊಟ್ಟೆ. ಆಗಂತೂ ಸಂಪಾದಕರಿಂದ ಪತ್ರಿಕೆಗಳಿಂದ ಅಸ್ವೀಕೃತಗೊಂಡು ವಾಪಸ್ ಬರುವ ಬರಹಗಳನ್ನು ತರುವ ಅಂಚೆಯಣ್ಣ ನಮಗೆ ಯಮದೂತರಂತೆ ಕಾಣುತ್ತಿದ್ದರು. ಆವಾಗೆಲ್ಲ ಸಂಪಾದಕರು ಸ್ವೀಕೃತವಾಗಿಲ್ಲ ಎಂದಷ್ಟೇ ಹೇಳುತ್ತಿದ್ದರೇ ಹೊರತು ಕಾರಣ ಹೇಳುತ್ತಿರಲಿಲ್ಲ.
ಒಂದು ದಿನ ‘ಸಾಕ್ಷಿ’ಯಿಂದ ಗೋಪಾಲಕೃಷ್ಣ ಅಡಿಗರಿಂದ ಒಂದು ತಿಳಿ ಹಸಿರು ಅಂತರ್ದೇಶಿ ಪತ್ರ ಬಂತು. “ನಿನ್ನ ‘ಬಸಳೆ’ ಮತ್ತು ‘ಬುಗುರಿ’ ಕವಿತೆಗಳು ಆಪ್ತವಾಗಿವೆ. ಏಕೆಂದರೆ ಅವು ಅನುಭವದಿಂದ ಬಂದ ಸರಳ ಪ್ರತಿಮೆಯ ಮೂಲಕ ಬದುಕನ್ನು ಅರಿಯಲು ಯತ್ನಿಸುತ್ತವೆ. ಅವನ್ನು ಪ್ರಕಟಿಸುತ್ತೇನೆ. ಉಳಿದವು ಅಳವಿಗೆ ಮೀರಿದ ಭಂಗಿಯನ್ನು ವೇಷವನ್ನು ತೊಟ್ಟಿವೆ. ” ಎಂದು ಬರೆದಿದ ರು. ನಂತರ ಕವಿತೆಗಳು ಮುಂದಿನ ಸಂಚಿಕೆಯಲ್ಲಿ ಪ್ರಕಟವಾದವು. ನನಗೋ ಸಂಭ್ರಮ ಮತ್ತು ಮುಜುಗರ. “ಗಂಭೀರ” ಕವಿ ಎನ್ನುವ ಬದಲು ‘ಬಸಳೆ ಸೊಪ್ಪಿನ ಕವಿ’ ಎಂದು ಕಾಲೇಜು ಹುಡುಗರು (ವಿಶೇಷತಃ ಹುಡುಗಿ ಯರು) ತಮಾಷೆ ಮಾಡಿದರೆ? – ಅಂತ. ಅಂದು ಅಡಿಗರ ಆ ಒಂದು ಅಂತರ್ದೇಶಿ ಪತ್ರ ಕವಿತೆಯ ಕುರಿತ ತಿಳಿವಿನ ಕಿಟಕಿಯೊಂದನ್ನು ತೆರೆಯಿತು.
———————-
ಇವತ್ತಿನ ತನಕವೂ ಆ ಘಟನೆಯ ಬಗ್ಗೆ ನನಗೆ ಪದ್ಯ ಬರೆಯಲು ಸಾಧ್ಯವಾಗಲೇ ಇಲ್ಲ!
ಸರಿಯಾಗಿ ನೆನಪಿಲ್ಲ. ಬಹುಶಃ ಅದು ಒಂಬತ್ತು ಅಥವಾ ಹತ್ತನೇ ತರಗತಿಯಲ್ಲಿದ್ದಾಗ ಅನಿಸುತ್ತದೆ. ಎರಡು ೨ ರೂಪಾಯಿ ಕೊಟ್ಟು ದಲಿತ ಸಂಘರ್ಷ ಸಮಿತಿಯ ಸದಸ್ಯನಾದೆ. ನಮಗೆ ಕೋಟಿಗಾನಹಳ್ಳಿ ರಾಮಯ್ಯ ಅವರ ‘ನನ್ನ ತಂಗಿ ಅನಸೂಯಾ’ ಹಾಡನ್ನು ಹಾಡ್ಯದ ಸೋಮಶೇಖರಣ್ಣ, ರಾಜಕುಮಾರಣ್ಣ, ಲಕ್ಕಪ್ಪ ಮೇಷ್ಟ್ರು ಹೇಳಿಕೊಟ್ಟರು. ಆ ಹಾಡು ಕೇಳಿ ಕಣ್ಣು ತುಂಬಿ ಬಂದಿತ್ತು. ನಮ್ಮವರ ವಾಸ್ತವ ಸ್ಥಿತಿ ಆ ಹಾಡಿನಲ್ಲಿತ್ತು. ನಮ್ಮದೇ ಅಕ್ಕ ತಂಗಿಯರ ಕತೆಯಂತಿತ್ತು. ಅದಾದ ನಂತರ ನಾವು ಡಾ. ಅಂಬೇಡ್ಕರ್ ನಗರ ಎಂದು ಫಲಕ ಹಾಕಿದ್ದೆವು. ಆದರೆ ದಿನ ಬೆಳಗಾಗುವುದರ ಒಳಗೆ ಅದನ್ನು ಒಡೆದು ಹೋಟೆಲ್‌ನಲ್ಲಿ ದೋಸೆ ಮಾಡಿ ಬೋರ್ಡ್ ಇಲ್ಲದಂತೆ ಮಾಡಿದ್ದರು. ಅದರಿಂದ ನಮಗೆ ತುಂಬಾ ಆಘಾತವಾಗಿತ್ತು.
ಇನ್ನೊಂದು ಸಲ ಮರಳು ಲೋಡ್‌ಗೆ ಹೋಗುತ್ತಿದ್ದ ನಮ್ಮೂರಿನ ಇಬ್ಬರು ತರುಣರು ಮಳೆಗಾಲದ ದಿನ ಲೋಡ್ ಇಳಿಸಿ ಊರಿನ ಹೋಟೆಲ್‌ಗೆ ಟೀ ಕುಡಿಯಲೆಂದು ಹೋಗುತ್ತಾರೆ. ಅಂದಿನ ದಿನಗಳಲ್ಲಿ ನಮಗೆ ಒಳಗೆ ಪ್ರವೇಶವಿರಲಿಲ್ಲ. ಆದರೆ ಮಳೆ ಸಿಬುರು ಬಡಿಯುತ್ತದೆಂದು ಒಂದು ಕಾಲು ಸ್ವಲ್ಪ ಒಳಗಿಟ್ಟಿದ್ದರು. ಇದನ್ನು ನೋಡಿದ ಉಳಿದ ಸಮುದಾಯದ ಜನ ‘ಏನ್ರೋ ಇವತ್ತು ಹೋಟೆಲ್ ಒಳಗೆ ಬಂದಿದ್ದೀರಿ, ನಾಳೆ ನಮ್ಮ ಹೆಣ್ಣು ಕೇಳೋಕೆ ಬರ್ತೀರಿ’ ಎಂದು ಅವರಿಬ್ಬರು ಕಾಫಿ ಲೋಟ ಹಿಡಿದಿದ್ದ ಬಲಗೈಯನ್ನು ಕಾಮಗಾರಿ ನಡೆಯುತ್ತಿದ್ದ ಶಾಲೆಯೊಂದರ ಕಿಟಕಿ ಸರಳಿನ ನಡುವೆ ಇಟ್ಟು ಮುರಿಯುತ್ತಾರೆ. ಅವರ ಅಳು ನಮ್ಮ ಇಡೀ ಕಾಲೊನಿಯಲ್ಲಿ ಭಯ, ಆತಂಕದ ವಾತಾವರಣ ಸೃಷ್ಟಿಸಿತ್ತು. ನಮಗೆಲ್ಲರಿಗೂ ಕಾದ ಹೆಂಚಿನಲ್ಲಿ ಕುಳಿತ ಅನುಭವ. ಇದು ನನ್ನನ್ನು ಬಹಳ ಕಾಡಿದ ನೆತ್ತಿ ಕೂದಲು ಕಿತ್ತಂತಹ ಅನುಭವ. ಇವತ್ತಿನ ತನಕವೂ ಆ ಘಟನೆಯ ಬಗ್ಗೆ ನನಗೆ ಪದ್ಯ ಬರೆಯಲು ಸಾಧ್ಯವಾಗಲೇ ಇಲ್ಲ! ಹಾಸನದಲ್ಲಿ ಕಾಲೇಜು ಓದುತ್ತಿದ್ದ ಸಮಯದಲ್ಲಿ ಪ್ರತಿಭಟನೆಯ ಕಿಚ್ಚು ನನ್ನನ್ನು ಆವರಿಸಿತ್ತು. ಆವಾಗ ಪದ್ಯಗಳನ್ನು ಬರೆಯಲು ಆರಂಭಿಸಿದ್ದೆ. ಹಾಸನದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಸಭೆಯಲ್ಲಿ ಹಾಡಲೆಂದೇ ‘ಅಂತ್ಯಜನ ಆರಂಭ’ ಎಂಬ ಒಂದು ಪದ್ಯ ಬರೆದೆ.
ಅಂದಿನ ಸಭೆಗೆ ಬಿ. ಕೃಷ್ಣಪ್ಪರು ಬರುತ್ತಾರೆಂದು ತಿಳಿದಿತ್ತು. ಅವರಿಗೊಂದು ಸಲ ‘ಅಂತ್ಯಜನ ಆರಂಭ’ ತೋರಿಸಬೇಕೆಂಬ ಆಸೆಯಿಂದ ಅದನ್ನು ಬರೆದಿದ್ದೆ. ಪ್ರತಿಭಟನೆಯ ಸಭೆಯಲ್ಲಿ ಓದಬೇಕೆಂಬ ಹುಮ್ಮಸ್ಸು, ಕ್ರಾಂತಿಯ ಕಿಚ್ಚಿನಲ್ಲಿಯೇ ಹೊರಟಿದ್ದೆ. ಆ ಕಿಚ್ಚಿಗೂ ಕಾರಣವಿತ್ತು.
ಪ್ರೈಮರಿ ಶಾಲೆಯಲ್ಲಿ ಸಹಪಾಠಿಯೊಬ್ಬ ನನ್ನಮ್ಮನ ಹೆಸರು ಹಿಡಿದು ‘ತಿಪ್ಪಿ’ ಎಂದು ಕರೆದ. ಅಮ್ಮ ಓಗೊಳ್ಳಲಿಲ್ಲ. ‘ಹೊಲೆತಿ’ ಎಂದು ಮತ್ತೆ ಕರೆದ. ಅಲ್ಲೇ ಕುಳಿತಿದ್ದ ನನಗೆ ರೋಷ ಉಕ್ಕಿ ಬಂತು. ನನಗೇ ತಿಳಿಯದಂತೆ ಅವನಿಗೆ ಹೊಡೆದು ಎದೆ ಮೇಲೆ ಕುಳಿತಿದ್ದೆ. ನನ್ನವ್ವನ ಹೆಸರು ಮತ್ತು ಜಾತಿ ಹಿಡಿದು ಕರೆದ ಆ ನೋವು ನನ್ನೊಳಗೆ ಸದಾ ಉರಿಯುತ್ತಿತ್ತು. ಈ ಘಟನೆಯೂ ‘ಅಂತ್ಯಜನ ಆರಂಭ’ಕ್ಕೆ ಪ್ರೇರಣೆಯಾಯಿತು. ಪದ್ಯವನ್ನು ಬಿ. ಕೃಷ್ಣಪ್ಪರಿಗೆ ತೋರಿಸಿ ಸಭೆಯಲ್ಲಿ ಹಾಡಲು ಅವಕಾಶ ಕೇಳಿದೆ. ‘ಇದು ಪ್ರತಿಭಟನೆ ಸಭೆ, ಇಲ್ಲಿ ಓದ್ಬೇಡ ಕಣಯ್ಯಾ. ಯಾವುದಾದ್ರೂ ಸಾಹಿತ್ಯ ಗೋಷ್ಠಿಯಿದ್ರೆ ಓದು’ ಎಂದರು. ಕಾಕತಾಳೀಯವೆಂಬಂತೆ ಅಂದು ಸಂಜೆಯೇ ಒಂದು ಕವಿಗೋಷ್ಠಿ ಏರ್ಪಾಡಾಗಿತ್ತು. ಅದನ್ನು ಆಯೋಜಿಸಿದವರು ಇವತ್ತಿನ ಪ್ರಸಿದ್ಧ ಲೇಖಕರಾದ ಹಾಡ್ಲಹಳ್ಳಿ ನಾಗರಾಜ್ ಅವರು. ಅವರಲ್ಲಿ ‘ಪದ್ಯ ಓದಲು ಅವಕಾಶ ಮಾಡಿಕೊಡಿ’ ಎಂದು ಕೇಳಿಕೊಂಡೆ. ಮೊದಲು ಹಿಂದೇಟು ಹಾಕಿದರೂ ನಂತರ ಅವಕಾಶ ಕೊಟ್ಟರು. ಹೀಗೆ ನನ್ನ ಮೊದಲ ಪದ್ಯ ‘ಅಂತ್ಯಜನ ಆರಂಭ! ’
ಇಂತಹ ಪದ್ಯಗಳನ್ನು ಬರೆಯತೊಡಗಿದ ನಂತರ ನೆಹರೂ ಯುವಕರ ವೇದಿಕೆ ಸಕಲೇಶಪುರದಲ್ಲಿ ‘ವೇದಿಕೆಯ ಮೇಲೆ ಹೊಲೆಯನು ಓದಿದಾಗ’ ಎಂಬ ಎರಡನೇ ಪದ್ಯ ಓದಿದೆ. ನಾನು ಹತ್ತನೇ ತರಗತಿ ಪಾಸಾದಾಗ ಎಲ್ಲರೂ ‘ಹೊಲೆಯರ ಹುಡುಗ ಪಾಸಾದನಂತೆ’ ಎಂದು ವ್ಯಂಗ್ಯವಾಡಿದ್ದರು.
ಸುಬ್ರಹ್ಮಣ್ಯನೆಂಬ ನಾನು ಸುಬ್ಬು ಹೊಲೆಯಾರ್ ಎಂಬ ಕಾವ್ಯನಾಮದಿಂದ ಸಾಹಿತ್ಯ ಲೋಕದಲ್ಲಿ ಪರಿಚಯವಾಗಲು ಇದೂ ಒಂದು ಕಾರಣವಾಯಿತು. ‘ಅಂತ್ಯಜನ ಆರಂಭ’ದಿಂದ ಬಹಳಷ್ಟು ಪದ್ಯಗಳನ್ನು ಬರೆಯುತ್ತಾ ಬಂದೆ.
———————-
‘ನೀನು ಹುಟ್ಟು ಕವಿ, ಬರಿ’ ಎಂದರು ನಾಗಭೂಷಣ; ಅಷ್ಟೇ ಸಾಕಾಯಿತು ನನಗೆ
ಚಿಕ್ಕಂದಿನಿಂದಲೇ ಕಾಯಿಲೆಯಿಂದ ನರಳುತ್ತಾ ಸದಾ ಕಣ್ಣೀರಿಡುತ್ತಿದ್ದ ಅಳುಮುಂಜಿ ತಮ್ಮ, ಮುದ್ದು ಮಾತುಗಳಿಂದ ಅವನ ನೋವು ಮರೆಸುತ್ತಿದ್ದ ಅಜ್ಜಿ, ಸಂಕಷ್ಟಗಳ ನಡುವೆ ‘ತಲ್ಲಣಿಸದಿರು ಕಂಡ್ಯಾ ತಾಳು ಮನವೆ’ ಎಂದು ಹಾಡುತ್ತಿದ್ದ ಅಮ್ಮ, ‘ಭಿಕ್ಷೆ ಬೇಕಾದರೂ ಬೇಡಿ, ಆದರೆ ಮೋಸ-ವಂಚನೆ ಮಾಡದಿರಿ’ ಎಂದು ಎಚ್ಚರಿಸುತ್ತಿದ್ದ ಅಪ್ಪ ; ಆಸೆ-ಕನಸು-ಭರವಸೆ ಇದೇ ಬದುಕಾಗಿ, ಬದುಕಿನ ದಾರಿಯಲ್ಲಿ ಬೆಂಗಾವಲಾಗಿ ಬಂದ ನೂರಾರು ಜೀವಗಳು – ಕವಿತೆ ಯಾಕೆ? ಹೇಗೆ? ಯಾರಿಗಾಗಿ? ಎಂಬುದನ್ನು ಕಲಿಸಿಕೊಟ್ಟವು.
ನನ್ನೊಳಗೆ ಕವಿತೆಯ ಬೀಜ ಮೊಳಕೆಯೊಡೆದದ್ದು ಬಹುಶಃ ಎರಡನೆಯ ಇಯತ್ತೆಯಲ್ಲಿ. ‘ಎಲ್ಲಿ ಹೋದರೂ. . . ಚಂದ್ರ ನನ್ನೊಂದಿಗೇ ಓಡಿ ಬರುತ್ತಾನೆ, ನಾನು ನಿಂತರೆ ಅವನೂ ನಿಲ್ಲುತ್ತಾನೆ, ಓಡಿದರೆ ಅವನೂ ಓಡುತ್ತಾನೆ’ ಎಂದು ಅಚ್ಚರಿ, ಸಂಭ್ರಮದಿಂದ ಓಡೋಡಿ ಬಂದು ಒಂದು ರಾತ್ರೆ ಅಮ್ಮನಿಗೆ ಹೇಳಿದೆ. ‘ಇಷ್ಟು ದೊಡ್ಡವಳಾಗಿದ್ದೀಯಾ. . . ತಮ್ಮನನ್ನು ನೋಡಿಕೊಳ್ಳುವುದು ಬಿಟ್ಟು, ಚಂದ್ರನ ಬೆನ್ನು ಹತ್ತಿದ್ದೀಯಾ. . . ನಾಚಿಕೆಯಾಗುವುದಿಲ್ಲವೇ ನಿನಗೆ? ’ ಎಂದು ರೇಗಿದಳು. ಇದು ನನ್ನ ಕವಿ ಕಲ್ಪನೆಗೆ ಸಿಕ್ಕ ಪ್ರಥಮ ಬಹುಮಾನ! ಏಳು ವರುಷದವಳಾದ ನನಗೆ ಅಮ್ಮನ ಮಾತು ಎಷ್ಟು ನಾಟಿತೆಂದರೆ ಆ ಕ್ಷಣದಲ್ಲೇ ನಾನು ಭರ ಭರ ಬೆಳೆದು ದೊಡ್ಡವಳಾದೆ. ನನ್ನ ಬಾಲ್ಯದ ಸಂಗಾತಿ, ದೊಡ್ಡಮ್ಮನ ಮಗಳು ಸುಮನ ಇಂಗ್ಲಿಷ್ ಮೇಜರ್ ಓದುತ್ತಿದ್ದಳು. ಕೆಲವು ಪದ್ಯಗಳನ್ನು ಆಕೆ ಇಂಗ್ಲಿಷಿನಲ್ಲೇ ಓದುತ್ತಿದ್ದುದರಿಂದ ಹಾಗೆ ಇಂಗ್ಲಿಷಿನಲ್ಲೇ ಪದ್ಯ ಬರೆದರೆ ಅದಕ್ಕೆ ಬೆಲೆಯೇನೋ ಎಂದು ಭಾವಿಸಿ, ಅರೆಬರೆ ಇಂಗ್ಲಿಷ್‌ನಲ್ಲೇ ಚಂದ್ರನನ್ನು ಕುರಿತು ʼMy Window Companion’ ಎಂಬ ಕವಿತೆ ಬರೆದೆ. ಈ ಪದ್ಯವನ್ನು ನಾನು ಪ್ರಥಮ ಪಿಯುಸಿಯಲ್ಲಿದ್ದಾಗ ಕಾಲೇಜಿನ ಮ್ಯಾಗಜೀನ್ ಪ್ರಕಟಿಸಿತು. ನಂತರ ನಾನು ಕವಿ ಹೌದೋ ಅಲ್ಲವೋ ಎಂಬ ತಳಮಳದಲ್ಲಿದ್ದಾಗ ಸಿಕ್ಕವರು ನಾಗಭೂಷಣ. ‘ನೀನು ಹುಟ್ಟು ಕವಿ, ಬರಿ’ ಎಂದರು. ಅಷ್ಟೇ ಸಾಕಾಯಿತು ನನಗೆ! ಅವರ ಸಹವಾಸದಲ್ಲಿ ನೂರಾರು ಕನ್ನಡ ಕವಿತೆಗಳನ್ನು ಓದಿದೆ. ಅಂಜುತ್ತ ಅಳುಕುತ್ತ ನನಗೆ ತೋಚಿದಂತೆ ಕವಿತೆ ಬರೆದೆ.
————-
ಅನಂತಮೂರ್ತಿಯವರು ನನ್ನನ್ನು ಭಾನುವಾರದ ಕವಿ ಎಂದು ಕರೆದಿದ್ದರು.
ಅರವತ್ತು ವರ್ಷಗಳ ಹಿಂದೆ. ನಾನು ಆಗ ತಾನೇ ಡಿಗ್ರಿ ಮುಗಿಸಿದ್ದೆ. ಆವಾಗ ‘ಪ್ರಜಾವಾಣಿ’ಯಲ್ಲಿ ಕವನ ಪ್ರಕಟಿಸಲು ಆರಂಭಿಸಿದ್ದರು. ಅಲ್ಲಿ ಕವಿತೆ ಪ್ರಕಟವಾಗುವುದೆಂದರೆ ಪ್ರತಿಷ್ಠೆಯ ವಿಷಯವಾಗಿತ್ತು. ಅಡಿಗರು, ನರಸಿಂಹಸ್ವಾಮಿ ಅವರಂತಹ ಆಗಿನ ಕಾಲದ ಪ್ರಖ್ಯಾತ ಕವಿಗಳ ಕವಿತೆಗಳು ಬರುತ್ತಿದ್ದವು. ಆಗಿನ ‘ಪ್ರಜಾವಾಣಿ’ಯ ಸುದ್ದಿ ಸಂಪಾದಕರಾಗಿದ್ದ ವೈ. ಎನ್. ಕೃಷ್ಣಮೂರ್ತಿಯವರು ನನಗೆ ಬಹಳ ಆತ್ಮೀಯರಾಗಿದ್ದರು. “ನಾನೂ ನಿಮ್ಮ ಪತ್ರಿಕೆಗೆ ಪದ್ಯಗಳನ್ನು ಕಳುಹಿಸಬಹುದೇ? ” ಎಂದು ಕೇಳಿದೆ. “ಖಂಡಿತವಾಗಿ ಕಳುಹಿಸಿಕೊಡಿ, ಉದಯೋನ್ಮುಖ ಕವಿಗಳಿಗಾಗಿಯೇ ಇರುವುದು ಅದು” ಎಂದರು.
ಆಗ ನಾನು ಒಂದು ಕವಿತೆಯನ್ನು ಕಳುಹಿಸಿದೆ. ಬಾಳ ಬೆಲೂನಿನ ತುಂಬ ಶೂನ್ಯದ ಜಲಜನಕ ಬುರಬುರ ತುಂಬಿ ನಾ ಗಾಳಿಗೆ ಬಿಟ್ಟಾಗ ಅದನ್ನು ಈ ಭೂಗೋಳಕ್ಕೇ ಬಿಗಿದು ಕಟ್ಟುವ ದಾರ ನನ್ನ ಗೆಳೆಯರು ಹೀಗೆ ಆರಂಭಗೊಳ್ಳುವ ‘ಗೆಳೆಯರು’ ಎಂಬ ಕವಿತೆ ಅದು. ೧೯೬೮ನೇ ಇಸವಿಯ ಒಂದು ಭಾನುವಾರದ ಪುರವಣಿಯಲ್ಲಿ ಅದು ಪ್ರಕಟವಾಗಿ ಅಂದಿನ ಪ್ರಮುಖ ಕವಿಗಳ, ವಿಮರ್ಶಕರ ಗಮನ ಸೆಳೆಯಿತು. ನಂತರ ಪತ್ರಿಕೆಗಳಲ್ಲಿ ನನ್ನ ಕವಿತೆಗಳು ಸತತವಾಗಿ ಪ್ರಕಟವಾಗತೊಡಗಿದವು. ‘ಪ್ರಜಾವಾಣಿ’ ಪತ್ರಿಕೆಯಲ್ಲಿ ನೂರಕ್ಕೂ ಹೆಚ್ಚಿನ ದಾಖಲೆ ಸಂಖ್ಯೆಯಲ್ಲಿ ನನ್ನ ಕವಿತೆಗಳು ಪ್ರಕಟವಾಗಿವೆ.
ಯು.ಆರ್.ಅನಂತ ಮೂರ್ತಿಯವರು ನನ್ನನ್ನು ‘ಸಂಡೇ ಪೋಯೆಟ್’ (ಭಾನುವಾರದ ಕವಿ) ಎಂದು ಕರೆದದ್ದೂ ಉಂಟು. ಹೀಗೆ ‘ಗೆಳೆಯರು’ ಕವಿತೆಯು ಕನ್ನಡ ಸಾರಸ್ವತ ಲೋಕದಲ್ಲಿ ನಾನು ಕವಿಯಾಗಿ ಗುರುತಿಸಿಕೊಳ್ಳಲು ಕಾರಣವಾದನನ್ನ ಮೊದಲ ಕವಿತೆ.
ನಿರೂಪಣೆ : ಅಕ್ಷತಾ
ಬೆಂಗಳೂರು: ನಾವು ಮುಂಚೂಣಿ ನಾಯಕರಾಗಿದ್ದೆವು. ಈಗ ಬೇರೆ ಕುದುರೆಗಳು ಬಂದಿವೆ. ಇದೊಂದು ರೇಸ್. ಈಗ ಅವರ ಕುದುರೆಗಳು ಮುಂದೆ ಇವೆ…
ಸೋಮವಾರಪೇಟೆ: ವಿಪರೀತ ಬಿಸಿಲಿನಿಂದ ಕಂಗೆಟ್ಟಿರುವ ತಾಲ್ಲೂಕಿನ ಗ್ರಾಮೀಣ ಜನರು ಮಳೆಗಾಗಿ ದೇವರ ಮೊರೆ ಹೋಗುತ್ತಿದ್ದಾರೆ. ಹಿರಿಕರ ಗ್ರಾಮದ ಕೃಷಿಕರು, ಗ್ರಾಮದ…
ಕಲಬುರ್ಗಿ: ಇಂದು(ಏಪ್ರಿಲ್.15, 2026) ರಾಜ್ಯದಲ್ಲಿಯೇ ಅತೀ ಹೆಚ್ಚು ಉಷ್ಣಾಂಶ ಕಲಬುರ್ಗಿ ಜಿಲ್ಲೆಯಲ್ಲಿ ದಾಖಲಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕಲಬುರ್ಗಿ ಜಿಲ್ಲೆಯ ನಾಲ್ಕು…
ಲಕ್ನೋ: ಕರ್ನಾಟಕ ಕಾಂಗ್ರೆಸ್‌ನ ಹಿರಿಯ ಶಾಸಕರು ಅಯೋಧ್ಯೆ ರಾಮಮಂದಿರಕ್ಕೆ ತೆರಳಿ ರಾಮಲಲ್ಲಾನ ದರ್ಶನ ಪಡೆದರು. 12 ಮಂದಿ ಶಾಸಕರು ಇಂದು…
ಯೋಗೇಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿ ಅಪರಾಧಿ ಎಂದು ತೀರ್ಪು ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ…
ಬೆಂಗಳೂರು: ಮಂಡ್ಯಕ್ಕೆ ಆಗಮಿಸಲು ಬೆಂಗಳೂರಿಗೆ ಬಂದಿಳಿದಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಸಿದ್ದರಾಮಯ್ಯ ಮನವಿ ಪತ್ರ ಸಲ್ಲಿಸಿದ್ದಾರೆ. ಇಂದು…