ಹಾಡು ಪಾಡು

ಆಷಾಢದ ಮಂಕು ಕಳೆದು ಇದೀಗ ಶ್ರಾವಣದ ಬೆಳಕು

ಶುಭಮಂಗಳ ರಾಮಾಪುರ

ಆಷಾಢ ಮಾಸದಲ್ಲಿ ಹಬ್ಬ ಹರಿದಿನಗಳಾಗಲಿ, ಮದುವೆ ಮುಂಜಿ ಇನ್ನಿತರ ಶುಭ ಸಮಾರಂಭಗಳಾಗಲಿ ನಡೆಯದೆ ಚೈತನ್ಯ ಕಳೆದುಕೊಂಡಿದ್ದ ಮನಸ್ಸು ಶ್ರಾವಣ ಮಾಸದ ಆಗಮನವಾಗುತ್ತಿದ್ದಂತೆ ಸಂಭ್ರಮದಿಂದ ಕುಣಿಯುತ್ತಿದೆ. ಒಂದೆಡೆ ಸಾಲುಸಾಲಾಗಿ ಬರುವ ಹಬ್ಬಗಳಾದರೆ, ಮತ್ತೊಂದೆಡೆ ಮದುವೆ, ಗೃಹಪ್ರವೇಶಗಳಂತಹ ಶುಭ ಸಮಾರಂಭಗಳು. ನೆಂಟರಿಷ್ಟರು ಸ್ನೇಹಿತರು ಒಂದೆಡೆ ಕೂಡಿ ಸಂತಸದಿಂದ ದಿನಕಳೆಯಲು ಶ್ರಾವಣ ಮಾಸ ಸಾಕ್ಷಿಯಾಗಿದೆ.

ನಾಗರಪಂಚಮಿ, ರಕ್ಷಾಬಂಧನ, ವರಮಹಾಲಕ್ಷ್ಮೀ, ಶ್ರಾವಣ ಶನಿವಾರ, ಮಂಗಳಗೌರಿ ವ್ರತ ಹೀಗೆ ಒಂದೇ ಎರಡೇ… ಹಬ್ಬಗಳ ಆಚರಣೆ ಒಂದು ಸಂಭ್ರಮವಾದರೆ ಅವುಗಳಿಗಾಗಿ ಪೂರ್ವತಯಾರಿ ಮಾಡಿಕೊಳ್ಳುವುದು ಕೊಂಚ ತ್ರಾಸದಾಯಕವೇ ಸರಿ. ಮನೆಯ ಸ್ವಚ್ಛತೆ (ಹಳ್ಳಿಗಳಲ್ಲಂತೂ ಮಡಿಮಾಡಬೇಕೆಂಬ ಹೆಸರಿನಲ್ಲಿ ಮನೆಕೆಲಸದ ಕಾರುಬಾರು ನೋಡಲಸಾಧ್ಯ), ಪೂಜೆಗೆ ಅಣಿಮಾಡುವುದು, ಹಬ್ಬದೂಟದ ತಯಾರಿ, ಹೀಗೆ ಹೆಂಗಳೆಯರಂತೂ ಕೆಲಸದಲ್ಲೇ ಮುಳುಗಿಬಿಡುತ್ತಾರೆ. ಶ್ರಾವಣ ಮಾಸ ಬಂತೆಂದರೆ ನನಗೆ ನನ್ನ ಬಾಲ್ಯದ ದಿನಗಳು ನೆನಪಾಗುತ್ತದೆ.

ನನ್ನೂರಲ್ಲಂತೂ ಶ್ರಾವಣ ಮಾಸದ ಶನಿವಾರ ಬಹಳ ವಿಶೇಷ. ಈ ದಿನ ವಿಶೇಷವಾಗಿ ಗಂಡುಮಕ್ಕಳು ಬೆಳ್ಳಂಬೆಳಿಗ್ಗೆ ಎದ್ದು ಸ್ನಾನ ಮಾಡಿ ಮಡಿಯುಟ್ಟು ನೊಸಲಿಗೆ ಕೆಂಪು ಬಿಳಿಯ ನಾಮವನ್ನು ಹಾಕಿ, ಹೆಗಲಿಗೆ ಜೋಳಿಗೆಯೊಂದನ್ನು ಸಿಕ್ಕಿಸಿಕೊಂಡು ಅಮ್ಮ ಸಿದ್ಧಪಡಿಸಿಕೊಟ್ಟ ಹುಂಡಿಯನ್ನು (ತಾಮ್ರದ ಚೊಂಬಿಗೆ ತುಳಸಿ ಎಲೆಗಳನ್ನು ಹಾಕಿ, ಜೊತೆಗೆ ತಿರುಪತಿ ತಿಮ್ಮಪ್ಪನ ಹೆಸರಿನಲ್ಲಿ ಕಾಣಿಕೆಯನ್ನು ಹಾಕಿ ಅರಿಶಿನದಲ್ಲಿ ಮಿಂದ ಬಿಳಿವಸ್ತ್ರದಿಂದ ಚೊಂಬಿನ ಬಾಯಿಯನ್ನು ಬಂಽಸಿ ಗೋಲಕದಂತೆ ಮಾಡಿದ ಹುಂಡಿ) ತೆಗೆದುಕೊಂಡು ಮನೆಮನೆಗೆ ಹೋಗಿ, ಗೋವಿಂದಾ… ಗೋವಿಂದ! ಗೋವಿಂದಾ… ಗೋವಿಂದ! ಅಂತ ಗೋವಿಂದ ನಾಮಸ್ಮರಣೆ ಮಾಡುತ್ತ ಭಿಕ್ಷೆ ಬೇಡಿದರೆ ದಾಸಯ್ಯನ ಜಾಗಟೆ ಸದ್ದು ಭಿಕ್ಷಾಟನೆಗೆ ಇನ್ನಷ್ಟು ಮೆರುಗು ಕೊಡುತ್ತಿತ್ತು. ಭಕ್ತಾದಿಗಳು ಕೊಟ್ಟ ಹಣದ ರೂಪದ ಕಾಣಿಕೆ ಹುಂಡಿಗೆ ಬಿದ್ದರೆ ಅಕ್ಕಿ ಬೆಲ್ಲ ಜೋಳಿಗೆಯನ್ನು ತುಂಬುತ್ತಿತ್ತು. ಅದರಿಂದ ಆ ದಿನದ ಪ್ರಸಾದ ತಯಾರಿಸಿ ಸಂಜೆ ಮನೆಮಂದಿಯೆಲ್ಲಾ ತಿನ್ನುವುದು, ಕೊನೆಯ ಶ್ರಾವಣ ಕಳೆಯುತ್ತಿದ್ದಂತೆ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಹೋಗಿ ಸಂಗ್ರಹಿಸಿದ ಕಾಣಿಕೆಯನ್ನು ಅರ್ಪಿಸಿದರೆ ಊರಿನವರೇ ತಿಮ್ಮಪ್ಪನ ಆಶೀರ್ವಾದ ಪಡೆದಂತೆ ಅಂತ ನನ್ನಜ್ಜಿ ತಿಮ್ಮಮ್ಮ ಆಗಾಗ ಹೇಳ್ತಾ ಇದ್ರು.

ಮೂವತ್ತು ವರ್ಷಗಳ ಹಿಂದೆ ಒಮ್ಮೆ ಶ್ರಾವಣ ಶನಿವಾರದಲ್ಲಿ ಅಣ್ಣ ಜೋಳಿಗೆ ಮತ್ತು ಹುಂಡಿ ಹಿಡಿದು ಭಿಕ್ಷಾಟನೆಗೆ ಹೊರಟಾಗ ‘ನಾನೂ ಗೋವಿಂದ ಮಾಡ್ತೀನಿ’ ಅಂತ ಹಠಕ್ಕೆ ಬಿದ್ದ ನನ್ನನ್ನ ‘ಗಂಡುಬೀರಿ ಥರ ಆಡ್ತೀಯಲ್ಲ! ಅದೆಲ್ಲಾ ಗಂಡುಮಕ್ಕಳು ಮಾತ್ರ ಮಾಡಬೇಕು, ಹೆಣ್ಮಕ್ಕಳು ಹಂಗೆಲ್ಲಾ ಹೋಗಬಾರದು’ ಅಂತ ಅಮ್ಮ ಗದರಿದರೂ ಬಿಡದೆ ನನ್ನಣ್ಣ ಕದ್ದೂ ಮುಚ್ಚಿ ಜೊತೆಯಲ್ಲಿ ಕರೆದುಕೊಂಡುಹೋಗಿ ಗೋವಿಂದ ಮಾಡ್ಸಿದ್ದು ಇನ್ನೂ ಕಣ್ಣ ಮುಂದೆ ಕಟ್ಟಿದಂತಿದೆ. ಈಗಿನ ಮಕ್ಕಳಿಗೆ ಇದರಲ್ಲಿ ನಂಬಿಕೆ -ಆಸಕ್ತಿ ಎರಡೂ ಇಲ್ಲ. ‘ವರಮಹಾಲಕ್ಷ್ಮೀ ಹಬ್ಬ ಇನ್ನೇನು ಬಂದೇ ಬಿಡ್ತು, ಒಂದೇ ಒಂದು ಕೆಲಸ ಆಗಿಲ್ಲ, ಮನೆಯ ದೂಳು ಹೊಡೆದಿಲ್ಲ, ಗುಡಿಸಿಲ್ಲ, ಒರೆಸಿಲ್ಲ, ಮನೆಗೆ ಕುಂಕುಮಕ್ಕೆ ಅಂತ ಜನ ಬರ್ತಾರೆ, ಮನೆ ಫಳಫಳ ಅನ್ನಬೇಕು, ನೀನೂ ಸ್ವಲ್ಪ ಕೈ ಜೋಡಿಸಬಾರದಾ?’ ಅಂತ ಪಾಪ ನನ್ನಮ್ಮ ಗೋಗರೆದರೆ ಅಯ್ಯೋ ಅನ್ಸುತ್ತೆ.

ಈ ಹಬ್ಬಗಳು ಯಾಕಾದರೂ ಬರುತ್ತೋ ಅಂತ ಒಂದೊಂದ್ಸಲ ಅನ್ನಿಸಿದರೂ ಮನೆಯಲ್ಲಿ ಹಬ್ಬದ ವಾತಾವರಣವಿದ್ದರೆ ಮನಸ್ಸು ಉಲ್ಲಸಿತವಾಗುತ್ತದೆ. ಮೊದಲೆಲ್ಲಾ ಒಂದು ದಿನಕ್ಕೆ ಸೀಮಿತವಾಗಿದ್ದ ವರಲಕ್ಷ್ಮೀ ವ್ರತ ಇತ್ತೀಚೆಗೆ ಮೂರು ದಿನಗಳು, ಕೆಲವೆಡೆ ಮುಂದಿನ ವಾರದವರೆಗೂ ಸಾಗುತ್ತಲೇ ಇರುತ್ತದೆ. ಲಕ್ಷ್ಮೀ ಕೂರಿಸುವುದು ಈ ಹಬ್ಬದ ವಿಶೇಷ. ಕೆಲವೊಬ್ಬರು ಬರೀ ಕಳಸವನ್ನಷ್ಟೇ ಇಟ್ಟು ಹಬ್ಬ ಮಾಡಿದರೆ ಇನ್ನೂ ಬಹುತೇಕ ಜನ ಲಕ್ಷ್ಮೀಯ ವಿಗ್ರಹ ಕೂರಿಸಿ, ಅದಕ್ಕೆ ಸೀರೆ ಉಡಿಸಿ ಅಲಂಕಾರಗೊಳಿಸಿ ಪೂಜೆ ಮಾಡುತ್ತಾರೆ. ಒಬ್ಬರ ಮನೆ ಲಕ್ಷ್ಮೀಗಿಂತ ಮತ್ತೊಬ್ಬರ ಮನೆ ಲಕ್ಷ್ಮೀ ಚಂದವೆಂಬಂತೆ ಅಷ್ಟು ಚಂದವಾಗಿ ಅಲಂಕೃತಳಾಗುತ್ತಾಳೆ ನಮ್ಮ ಲಕ್ಷ್ಮಮ್ಮ. ಕರೆಯದೆ ಯಾರ ಮನೆಗೂ ಹೋಗಬಾರದು ಎಂಬ ಮಾತೊಂದಿದೆ. ಆದರೆ ಈ ಹಬ್ಬಕ್ಕೆ ಈ ಮಾತು ಅಪವಾದವೇ ಸರಿ. ಕುಂಕುಮಕ್ಕೆ ಯಾರೂ ಯಾರನ್ನೂ ಕರೆಯಬೇಕಿಲ್ಲ, ತಾವಾಗಿಯೇ ಬಂದು ಹೋಗಿ ಅರಿಶಿನ ಕುಂಕುಮದ ವಿನಿಮಯವಾಗುತ್ತದೆ. ಇತ್ತೀಚೆಗಂತೂ ವರಮಹಾಲಕ್ಷ್ಮೀ ಆಡಂಬರದ ಪ್ರತೀಕವೇ ಆಗಿಬಿಟ್ಟಿದ್ದಾಳೆ. ಅದ್ಧೂರಿಯಾಗಿ ಸಿದ್ಧಗೊಳಿಸುವುದೇ ಅಲ್ಲದೇ ಬಗೆಬಗೆಯ ತಿಂಡಿತಿನಿಸುಗಳದ್ದೇ ದರ್ಬಾರು. ಬೇಕರಿಯ ತಿಂಡಿತಿನಿಸು ಲಕ್ಷ್ಮೀಗೂ ಪ್ರಿಯವಾಗಿಬಿಟ್ಟಿದೆಯೆಂಬಂತೆ!

ಒಮ್ಮೆ ನಾನೂ ಅಕ್ಕನೂ ಸೇರಿ ಇಪ್ಪತ್ತೊಂದು ಬಗೆಯ ಸಿಹಿತಿಂಡಿಗಳನ್ನು ರಾತ್ರಿಯಿಡೀ ನಿದ್ದೆಗೆಟ್ಟು ಹಬ್ಬದ ಪೂಜೆಗೆಂದು ತಯಾರಿಸಿ, ಅಮ್ಮ ಪೂಜೆ ಮಾಡುವಾಗ ಇಬ್ಬರೂ ತೂಕಡಿಸುತ್ತಾ ಕುಂತಿದ್ದನ್ನು ಮರೆಯಲಾಗುತ್ತಿಲ್ಲ. ಶ್ರಾವಣಮಾಸದಲ್ಲಿ ಎಲ್ಲ ದೇವರ ಪೂಜೆಯೂ ವಿಶೇಷವೇ. ಪ್ರತೀ ಹಬ್ಬಕ್ಕೂ ಹೊಸತೊಂದು ಸಂಕಲ್ಪ. ಈ ಹಬ್ಬಕ್ಕೂ ನನ್ನದೊಂದು ಸಂಕಲ್ಪವಿದೆ. ಪ್ರಯತ್ನ ನಮ್ಮದು; ಫಲಾಫಲ ದೇವರದ್ದು.

ಆಂದೋಲನ ಡೆಸ್ಕ್

Recent Posts

ಹುಣಸೆ, ಹಲಸು ಮತ್ತು ನೇರಳೆಗಾಗಿ ರಾಷ್ಟ್ರೀಯ ಮಂಡಳಿ ರಚಿಸಲು ಕೇಂದ್ರಕ್ಕೆ ಹೆಚ್.ಡಿ.ದೇವೇಗೌಡರ ಮನವಿ

ಹೊಸದಿಲ್ಲಿ: ಮಾಜಿ ಪ್ರಧಾನಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಹೆಚ್.ಡಿ. ದೇವೇಗೌಡರು ಶುಕ್ರವಾರ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ…

8 hours ago

ಪೌರಕಾರ್ಮಿಕರು ಸೇರಿ ಎಲ್ಲಾ ಕಾರ್ಮಿಕರಿಗೆ ಪಾಲಿಕೆಯಿಂದಲೇ ನೇರ ವೇತನ ಪಾವತಿಗೆ ಕ್ರಮ : ಬೈರತಿ ಸುರೇಶ್

ವಿಧಾನಸಭೆ : ರಾಜ್ಯದಲ್ಲಿರುವ ಮಹಾನಗರಪಾಲಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ಚಾಲಕರು, ಲೋಡರ್ ಗಳು, ತ್ಯಾಜ್ಯ ಸಂಗ್ರಹಕಾರರು ಸೇರಿದಂತೆ ಇನ್ನಿತರೆ…

9 hours ago

ಮೈಸೂರು | ನಾಳೆ ಗಿಚ್ಚಿ ಗಿಲಿಗಿಲಿ ಜೂನಿಯರ‍್ಸ್ ರಿಯಾಲಿಟಿ ಶೋʼನ ಆಡಿಷನ್‌

ಮೈಸೂರು : ಕಲರ್ಸ್ ಕನ್ನಡ ವಾಹಿನಿಯ ‘ಗಿಚ್ಚಿ ಗಿಲಿಗಿಲಿ ಜೂನಿಯರ‍್ಸ್’ ರಿಯಾಲಿಟಿ ಷೋಗಾಗಿ ಡಿ.20 ರಂದು ಬೆಳಿಗ್ಗೆ 11 ಗಂಟೆಗೆ…

10 hours ago

ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಚಾಲನೆ

ಬೆಳಗಾವಿ : ಆರೋಗ್ಯ ಸೇವೆಯಿಂದ ವಂಚಿತರಾಗಿರುವ ಜನರಿಗೆ ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕ ಯೋಜನೆ ನೆರವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

10 hours ago

ಸಿನಿಮಾ ಜವಾಬ್ದಾರಿಯುಳ್ಳ ಶಿಕ್ಷಣದ ಮಾಧ್ಯಮವಾಗಬೇಕು : ನಿರ್ದೇಶಕ ಸುರೇಶ್‌ ಆಶಯ

ಮೈಸೂರು : ಸಿನಿಮಾಗಳು ಮನರಂಜನೆಗಷ್ಟೇ ಸೀಮಿತವಾಗದೆ ಸಾಮಾಜಿಕ ಜವಾಬ್ದಾರಿಯುಳ್ಳ ಶಿಕ್ಷಣದ ಮಾಧ್ಯಮವಾಗಬೇಕು ಎಂದು ಖ್ಯಾತ ನಿರ್ದೇಶಕ ಬಿ.ಸುರೇಶ್ ಆಶಿಸಿದರು. ನಗರದ…

10 hours ago

ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿಗಳ ಕುರಿತು ಅರಿವು ಮೂಡಿಸಿ : ಜಿಲ್ಲಾಧಿಕಾರಿ ಸೂಚನೆ

ಮೈಸೂರು : ಅಲ್ಪಸಂಖ್ಯಾತರ ಸಮುದಾಯ ವಾಸಿಸುವ ಸ್ಥಳಗಳಲ್ಲಿ ಬಾಲ್ಯ ವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿಗಳ ದುಷ್ಪರಿಣಾಮಗಳ ಕುರಿತು ಅರಿವು ಕಾರ್ಯಕ್ರಮಗಳನ್ನು…

10 hours ago