ಹಾಡು ಪಾಡು

ಕಾಷ್ಟ ಶಿಲ್ಪಿಯ ಕಷ್ಟದ ಜೀವನ

ಅರವತ್ತರ ಆಸುಪಾಸಿನಲ್ಲಿರುವ ಆ ನುರಿತ ಕಾಷ್ಟ ಶಿಲ್ಪಿಯ ಕೈಯಲ್ಲಿ, ತುಮಕೂರಿನ ಸಿದ್ದಗಂಗಾ ಶ್ರೀಗಳ ಪ್ರತಿರೂಪ ಅರಳುತ್ತಿತ್ತು. ಐದು ಸಾವಿರಕ್ಕೂ ಹೆಚ್ಚಿನ ಕಾಷ್ಟ ಶಿಲ್ಪಗಳನ್ನು ಕೆತ್ತಿದ ಹೆಗ್ಗಳಿಕೆ ಇವರದು. ಆರೂವರೆ ಅಡಿ ಎತ್ತರದ ಚಾಮುಂಡೇಶ್ವರಿ ಅಮ್ಮನವರ ಮೂರ್ತಿಯಿಂದ ಹಿಡಿದು, ಅರ್ಧ ಅಡಿಯ ಗಣೇಶನ ವಿಗ್ರಹದ ಕೆತ್ತನೆಯನ್ನೂ ಮಾಡಿದ್ದಾರೆ. ಆರಂಭದಲ್ಲಿ ಅತೀ ಕಷ್ಟದ ಆನೆ ದಂತದ ಕುಸುರಿ ಕೆತ್ತನೆಯಲ್ಲಿ ಮತ್ತು ಶ್ರೀಗಂಧದ ನಾಜೂಕು ಕೆಲಸದಲ್ಲೂ ಪರಿಣತಿ ಸಾಽಸಿ, ಅದರಲ್ಲೇ ಸಾಕಷ್ಟು ಕೆಲಸ ಮಾಡಿದರೂ, ಅವೆರಡರ ಲಭ್ಯತೆಯ ದುರ್ಲಭದಿಂದಾಗಿ ಈಗ ಶಿವಾನಿ ಎಂಬ ಪ್ರಸಿದ್ಧ ಮತ್ತು ಬಹು ಬೇಡಿಕೆಯ ಕಾಡು ಮರದ ಕೆತ್ತನೆಯಲ್ಲಿ ತೊಡಗಿಕೊಂಡಿದ್ದಾರೆ. ದೇವಾನುದೇವತೆಗಳಲ್ಲದೆ, ಪ್ರಸಿದ್ಧರ ಶಿಲ್ಪ ಕೆತ್ತನೆಯೂ ಇವರಿಗೆ ಸಲೀಸು.

ಕಂಡ ಒಡನೆಯೇ ಮುಗುಳ್ನಗುತ್ತಾ ಆತ್ಮೀಯತೆಯಿಂದ ಬರಮಾಡುತ್ತಾ, “ಅತೀ ಚಿಕ್ಕ ಜಾಗ, ಕುಳಿತುಕೊಳ್ಳಿ ಅಂತ ಹೇಳಲು ಜಾಗ ಇಲ್ಲ”, ಎಂದು ಸಂಕೋಚದಿಂದ ಬಾಗಿಲಲ್ಲೇ ಕುಳಿತುಕೊಳ್ಳಲು ಹೇಳಿದರು. ನಂತರ ನಾನು ಕಿವಿಯಾಗಿದ್ದು ಎನ್.ಎಸ್.ಕುಮಾರಚಂದ್ರನ್, ಎಂಬ ಕಾಷ್ಟಶಿಲ್ಪಿಯ ಜೀವನ ಕಥೆಗೆ. ಕಲಾವಿದರ ಬದುಕು ಕಷ್ಟಗಳ ಹಾದಿ ಎನ್ನುತ್ತಾರೆ. ಅದಕ್ಕೆ ನಿದರ್ಶನ ಎಂಬಂತಿದೆ ಇವರ ಕಥೆ.

ಹುಟ್ಟಿದ್ದು ಕೇರಳದ ತಿರುವನಂತಪುರದ ಕುಶಲಕರ್ಮಿಗಳ ಸಾಧಾರಣ ಕುಟುಂಬ ಒಂದರಲ್ಲಿ. ತಂದೆ ನಾಗಪ್ಪಚಾರಿಯವರು ಶಿಲ್ಪಿಗಳು. ತಾಯಿ ಸರೋಜಿನಿ ಅವರು ಗೃಹಿಣಿ. ಪಿಣರಂಮೊಡು ಎಂಬ ಇವರ ಕುಟುಂಬದಲ್ಲಿ ಎಲ್ಲರೂ ಕಲಾವಿದರೇ. ಇವರ ಚಿಕ್ಕ ತಾತ ಮಾಧವನ್ ಅವರದು ೧೯೫೦-೬೦ರ ದಶಕದಲ್ಲಿ ತಮಿಳು ಚಿತ್ರರಂಗದಲ್ಲಿ ದೊಡ್ಡ ಹೆಸರು. ದುಡಿಮೆಗಾಗಿ ನಾಗಪ್ಪಚಾರಿಯವರ ಕುಟುಂಬವು ಅರವತ್ತರ ದಶಕದಲ್ಲೇ ಮೈಸೂರು ಸೇರಿತು.

ಎರಡನೇ ಇಯತ್ತೆಗೆ ಓದು ನಿಲ್ಲಿಸಿದ ಕುಮಾರಚಂದ್ರನ್ ಅವರು ತಂದೆಯ ಬಳಿಯೇ ಶಿಲ್ಪಶಾಸ್ತ್ರದ ಅಭ್ಯಾಸ ಆರಂಭಿಸಿದರು. ಉತ್ತಮ ತಳಹದಿಯ ಕಲಿಕೆಯನ್ನು ಬೇರೆ ಗುರುಗಳ ಬಳಿಯು ಮುಂದುವರಿಸಿದ್ದಾಯಿತು. ಕಲೆ ಒಲಿಯಿತು. ಒಳ್ಳೆಯ ಶಿಲ್ಪಿಯಾದ್ದರಿಂದ ಶೀಘ್ರದಲ್ಲೇ ಬೇಗಳೂರಿನ, ಒಂದು ಪ್ರಸಿದ್ಧ ಶಿಲ್ಪಕಲಾ ಅಂಗಡಿಯಲ್ಲಿ ಕೆಲಸವಾಯಿತು. ಜೀವನ ಇನ್ನು ಸುಗಮ ಎಂದೆನಿಸಿ, ರೇಣುಕಾ ಅವರೊಡನೆ ವಿವಾಹವಾಯಿತು. ೨೦೦೨ರ ಹೊತ್ತಿಗೆ ಇಬ್ಬರು ಹೆಣ್ಣುಮಕ್ಕಳ ತಂದೆಯಾದರು ಕುಮಾರಚಂದ್ರನ್.

ಹಗಲಿರುಳು ದುಡಿದರೂ ಕುಟುಂಬ ನಿರ್ವಹಣೆ ಕಷ್ಟವಾಗತೊಡಗಿತ್ತು. ಕಮ್ಮಿ ಸಂಬಳಕ್ಕೆ ಶಿಲ್ಪಗಳನ್ನು ಮಾಡಿಸಿ ಹೆಚ್ಚಿನ ಲಾಭಕ್ಕೆ ಮಾರುವ ಕಾರ್ಖಾನೆ ಮಾಲೀಕರ ಬುದ್ದಿವಂತಿಕೆ ತಿಳಿಯತೊಡಗಿತು.

ಸರಿ, ಇನ್ನು ಸ್ವಂತ ಕಾಯಕ ಶುರು ಮಾಡುವುದೇ ಸೈ ಎಂದು, ಬೆಂಗಳೂರಿಂದ ಮೈಸೂರಿಗೆ ವಾಪಸ್ಸು ಬಂದಾಯಿತು. ನಿಜವಾದ ಸವಾಲು ಶುರುವಾಗಿದ್ದೇ ಈಗ. ಮರದ ಶಿಲ್ಪಗಳನ್ನು ಮಾಡಲು, ಸೂಕ್ತವಾದ ಮರ ಕೊಳ್ಳಲು ಸಾಕಷ್ಟು ಹಣ ಬೇಕು. ಜೊತೆಗೆ ಗ್ರಾಹಕರಿಗಾಗಿ ವರ್ಷಗಟ್ಟಲೆ ಕಾಯಬೇಕು. ಆದರೂ ಲಾಭಕ್ಕೆ ಮಾರುವುದು ಅತಿಕಷ್ಟದ ಕೆಲಸ.
ಹಾಗೆಂದು ಮುಂಗಡ ಪಾವತಿಸಿ ನಿರ್ದಿಷ್ಟ ಶಿಲ್ಪಗಳಿಗಾಗಿ ಕೇಳುವ ಗ್ರಾಹಕರನ್ನಷ್ಟೇ ನಂಬಿದರೆ ಜೀವನ ಸಾಗಿಸುವುದು ಅಸಾಧ್ಯ. ಕುಲಕಸುಬು ಬಿಟ್ಟರೆ ಬೇರೆ ತಿಳಿಯದ ಪರಿಸ್ಥಿತಿಯಲ್ಲಿ ಸಾಲದ ಸುಳಿಗೆ ಸಿಲುಕುವುದು ಅನಿವಾರ್ಯ. ಸಾಲದ ಬಡ್ಡಿ ಕಟ್ಟಲಾದರೂ ಸ್ಥಿರ ಆದಾಯ ಬೇಕು. ಅಂತೂ ಮತ್ತೆ ಬೇರೊಬ್ಬರಿಗೆ ಕೆಲಸ ಮಾಡುವ ಸ್ಥಿತಿ, ಈ ಚಕ್ರದಿಂದ ಪಾರಾಗುವ ಸಾಧ್ಯತೆಯೇ ಇಲ್ಲವೇನೋ ಎಂಬಂತೆ!

ಸದ್ಯಕ್ಕೆ ಮೈಸೂರಿನ ಕಾವೇರಿ ಎಂಪೋರಿಯಂಗೆ ಶಿಲ್ಪಗಳನ್ನು ಒದಗಿಸುವ, ಈಶ್ವರ ಹ್ಯಾಂಡಿಕ್ರಾಫ್ಟ್ ಎಂಬಲ್ಲಿ ಶಿಲ್ಪಿಯಾಗಿ ಕೆಲಸ. ಬರುವ ಸಂಬಳ ಯಾತಕ್ಕೂ ಸಾಲದು. ಇದೆಲ್ಲದರ ನಡುವೆ ಕೈ ಹಿಡಿದ ಮಡದಿಯ ಅನಾರೋಗ್ಯಕ್ಕೆ ಮತ್ತಷ್ಟು ಸಾಲ. ಅದೂ ವ್ಯರ್ಥ ಎಂಬಂತೆ ಬಂದೆರಗಿದ ಆಕೆಯ ಸಾವು ಮನಸ್ಸನ್ನು ಕುಗ್ಗಿಸಿತ್ತು.
ಕಷ್ಟಗಳು ಇವೆ ಎಂದಾಕ್ಷಣ ಜೀವನ ನಿಲ್ಲಿಸಲಾದೀತೆ? ಈಸಬೇಕು, ಇದ್ದು ಜೈಸಬೇಕು ಎಂಬ ದಾಸ ವಾಣಿಯಂತೆ, ತಮ್ಮ ಜೀವನ ಹೋರಾಟ ನಿಲ್ಲಿಸಿಲ್ಲ ಕುಮಾರಚಂದ್ರನ್ ಅವರು. ತಾನು ಕಲಿತ, ಬೆಳೆಸಿದ ಕಲೆಯು ಮತ್ತಷ್ಟು ಜನ ಕಲಿಯುವಂತಾಗಬೇಕು. ಅದಕ್ಕಾಗಿ ಶಿಲ್ಪ ಶಾಲೆಯೊಂದನ್ನು ತೆರೆಯಬೇಕೆಂಬ ಮಹದಾಸೆ ಇವರಿಗೆ. ಇದಕ್ಕಾಗಿ ಉಳ್ಳವರ, ಕಲಾಪೋಷಕರ ನೆರವಿನ ನಿರೀಕ್ಷೆಯಲ್ಲಿದ್ದಾರೆ.‌

ಇವರ ಕೈಯಲ್ಲಿ ಮೂಡಿದ ಸಾವಿರಾರು ವಿಗ್ರಹಗಳು ಸೂಕ್ತ ಸ್ಥಾನಕ್ಕೆ ಸೇರಿವೆ. ಆದರೆ ಅವುಗಳ ಕಲಾವಿದನಿಗೆ ಸ್ವಂತದ ಸೂರಿಲ್ಲ ಎಂಬುದು ಸೂಕ್ತವೇ? ಎಂದು ಕೇಳುವ ಇವರು, ರಿಲಾಯನ್ಸ್ ನಂತಹ ದೊಡ್ಡಕಂಪೆನಿಗಳು, ಮಧ್ಯವರ್ತಿಗಳನ್ನು ಬಿಟ್ಟು, ನಮ್ಮಂತಹ ಕಲಾವಿದರಿಂದ ನೇರವಾಗಿ ಖರೀದಿಸಬೇಕು ಅಥವಾ ಕುಶಲಕರ್ಮಿಗಳನ್ನು, ಶಿಲ್ಪಿಗಳನ್ನು ಅವರೇ ನೇರವಾಗಿ ನೇಮಕ ಮಾಡಿಕೊಳ್ಳಬೇಕು. ಆಗ ಕಲೆ ಮತ್ತು ಕಲಾವಿದ ಇಬ್ಬರೂ ಉಳಿದು ಬೆಳೆಯುತ್ತಾರೆ ಎಂಬುದು ಅವರ ಆಂಬೋಣ.

ಕಾಷ್ಟ ಶಿಲ್ಪಿ ಕುಮಾರಚಂದ್ರನ್ ಅವರನ್ನು ಸಂಪರ್ಕಿಸಬಹುದಾದ ಮೊಬೈಲ್ ಸಂಖ್ಯೆ 9986085049

-ನಂದಿನಿ ಎನ್ (nandiniemailbox@gmail.com)

ಆಂದೋಲನ ಡೆಸ್ಕ್

Recent Posts

ಸಂಸದ ಯದುವೀರ್‌ ಪ್ರಯತ್ನದ ಫಲಶ್ರುತಿ : ತಂಬಾಕು ಮಾರಾಟಕ್ಕೆ ಅನುಮತಿ

ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತಂಬಾಕು ಬೆಳೆಗಾರರ ಸಮಸ್ಯೆಗಳು ಹಾಗೂ ಮಾರಾಟ…

2 hours ago

ಅರಮನೆ ಫಲಪುಷ್ಪ ಪ್ರದರ್ಶನ | ಸಂಗೀತ ಸಂಜೆಯಲ್ಲಿ ಪ್ರೇಕ್ಷಕರು ತಲ್ಲೀನ

ಮೈಸೂರು : ಮೈಸೂರು ಅರಮನೆ ಮಂಡಳಿ ವತಿಯಿಂದ ಕ್ರಿಸ್‌ಮಸ್ ಹಾಗೂ ಹೊಸವರ್ಷದ ಪ್ರಯುಕ್ತ 10 ದಿನಗಳ ‘ಅರಮನೆ ಫಲಪುಷ್ಪ ಪ್ರದರ್ಶನ’…

4 hours ago

ಎತ್ತಿನ ಗಾಡಿಗೆ ಸಾರಿಗೆ ಬಸ್‌ ಡಿಕ್ಕಿ : ಎತ್ತು ಸಾವು

ಹಲಗೂರು : ಎತ್ತಿನ ಗಾಡಿ ತೆರಳುತ್ತಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಎತ್ತು ಸ್ಥಳದಲ್ಲೇ ಮೃತಪಟ್ಟ ಘಟನೆ…

4 hours ago

ಮುತ್ತತ್ತಿ : ಕಾವೇರಿ ನದಿ ಸೆಳೆತಕ್ಕೆ ಸಿಲುಕಿ ಯುವಕ ಸಾವು

ಹಲಗೂರು : ಇಲ್ಲಿಗೆ ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟಿರುವ ಘಟನೆ…

4 hours ago

ಪೊಲೀಸ್‌ ಭದ್ರತೆಯಲ್ಲಿ ದೇಗುಲ ಪ್ರವೇಶಿಸಿದ ದಲಿತ ಮಹಿಳೆಯರು : ಶಾಂತಿ ಸಭೆಯಲ್ಲಿ ಪಂಚ ಬೇಡಿಕೆ

ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಪೊಲೀಸರ ಭದ್ರತೆಯೊಂದಿಗೆ ಗ್ರಾಮದ ಪರಿಶಿಷ್ಟ ಜಾನಾಂಗದ ಮಹಿಳೆಯರು, ಪುರುಷರು ದೇವಾಲಯಗಳಿಗೆ ಪ್ರವೇಶಿಸಿದರು.…

4 hours ago

ಅಕ್ರಮ ವಿದ್ಯುತ್‌ ಸಂಪರ್ಕ: 31 ಪ್ರಕರಣ ದಾಖಲು, 2.17 ಲಕ್ಷ ರೂ. ದಂಡ

ಮೈಸೂರು : ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದಿರುವ ಸಂಬಂಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ)…

5 hours ago