ಹಾಡು ಪಾಡು

ಅಡಿಯ ಜನಾಂಗದ ಕಾಡಿನ ಮಕ್ಕಳು ನನ್ನ ಕಾಪಾಡಿದರು….

ಕೊಡಗಿನಲ್ಲಿ ಕಾಡುಪಾಲಾಗಿದ್ದ ಕೇರಳದ ಶರಣ್ಯ ಅನುಭವ ಕಥನ

ನಾನು ಶರಣ್ಯ. ಕೇರಳದ ಕೋಝಿಕೋಡ್ ಜಿಲ್ಲೆಯ ನಾದಾಪುರಂನ ಯುವತಿ. ಕೊಚ್ಚಿಯಲ್ಲಿ ಐಟಿ ಇಂಜಿನಿಯರ್ ಆಗಿದ್ದೇನೆ. ನಾನು ಎಲ್ಲಿ ಹುಟ್ಟಿ, ಉದ್ಯೋಗ ಮಾಡುತ್ತೇನೆ ಎನ್ನುವುದಕ್ಕಿಂತಲೂ ಪ್ರಕೃತಿ, ಅರಣ್ಯ, ಮಳೆ, ಮೌನ ಇವೆಲ್ಲವೂ ನನ್ನನ್ನು ಸೆಳೆಯುವುದು ಎನ್ನುವುದು ನನ್ನ ನಿಜವಾದ ಪರಿಚಯ. ಅರಣ್ಯ ನನಗೆ ಕೇವಲ ಒಂದು ಕಾಡು ಪ್ರದೇಶವಲ್ಲ, ಅದು ಒಂದು ಸುಂದರ ಅನುಭೂತಿ. ಇಂತಹ ಅನುಭೂತಿಯ ಮೋಹ ಕೊಡಗಿನ ನನ್ನ ಚಾರಣಕ್ಕೆ ಮುಖ್ಯ ಕಾರಣವಾಯಿತು.

ಅಂದು ಗುರುವಾರ ಬೆಳಿಗ್ಗೆ ಎಂಟು ಗಂಟೆ. ತಡಿಯಂಡಮೋಳ್ ಚೆಕ್‌ಪೋಸ್ಟ್ ಬಳಿಯಿಂದ ಮೂರಂಗ ಟ್ರೆಕ್ಕಿಂಗ್ ಟೀಮಿನಲ್ಲಿ ಚಾರಣ ಆರಂಭಿಸಿದೆ. ಶಿಖರ ಏರಿ, ಮಧ್ಯಾಹ್ನದ ನಂತರ ಕುಶಾಲನಗರದ ನಿಸರ್ಗಧಾಮಕ್ಕೆ ಹೋಗುವುದೆಂದು ತೀರ್ಮಾನಿಸಲಾಗಿತ್ತು. ಆದರೆ ಪ್ರಕೃತಿ ನಮ್ಮ ಯೋಜನೆಗಳ ಮೇಲಿನ ಸ್ವಾತಂತ್ರ್ಯ ಕೊಡುವುದಿಲ್ಲ , ತನ್ನದೇ ಮಾರ್ಗದಲ್ಲಿ ಕರೆದೊಯ್ಯುತ್ತದೆ ಎಂಬುದು ತಡವಾಗಿ ಅರಿವಾಯಿತು. ಬೆಟ್ಟದ ತುದಿ ತಲುಪಿ ಒಂದು ಕ್ಷಣ ನಿಂತು ಸುತ್ತಲೂ ನೋಡಿದೆ. ಆ ಪರಿಸರ ನಿಜವಾಗಿಯೂ ಮಂತ್ರಮುಗ್ಧಳನ್ನಾಗಿಸಿತು, ಆದರೆ ಆ ಭಾವಪರವಶತೆ ಹೆಚ್ಚು ಹೊತ್ತು ಉಳಿಯಲಿಲ್ಲ. ಇಳಿಯುವಾಗ ನಾನು ಸ್ವ ಲ್ಪ ಮುಂದಿದೆ . ಅಲ್ಲಲ್ಲಿ ತಿರುವಿನಲ್ಲಿ ನಿಂತು ಜೊತೆಗಾರರಿಗಾಗಿ ಕಾದೆ. ಯಾರೂ ಇರದಿದ್ದಾಗ ವಿಶೇಷವೆನ್ನಿಸಲಿಲ್ಲ. “ಇನ್ನೇನು ಬರಬಹುದು” ಎಂದುಕೊಳ್ಳುತ್ತಿದೆ . ನನ್ನ ನಿರೀಕ್ಷೆ ಸುಳ್ಳೆಂಬುದು ಅನ್ನಿಸತೊಡಗಿದ್ದೇ ಸಣ್ಣ ಆತಂಕ ಹುಟ್ಟಿಕೊಂಡಿತು. ನಾನು ಇನ್ನೂ ಮೇಲಕ್ಕೆ ಹತ್ತಿದೆ, ಹುಡುಕಿದೆ, ಜೋರಾಗಿ ಕೂಗಿದೆ. ಆದರೆ, ಪ್ರತ್ಯುತ್ತರ ನನ್ನದೇ ಪ್ರತಿಧ್ವನಿ! ಆಗ ನನಗೆ ‘ದಾರಿ ತಪ್ಪಿದ್ದೇನೆ’ ಎಂಬುದು ಅಂದಾಜು ಆಯಿತು. ಭಯ ಆವರಿಸಿಕೊಂಡಿತೇ ಎಂದು ಕೇಳಿದರೆ ಉತ್ತರ ನೂರಕ್ಕೆ ನೂರರಷ್ಟು ‘ಹೌದು!’

ನನ್ನ ಬಳಿ ಇದ್ದ ಸಾಮಗ್ರಿಗಳೆಂದರೆ ಒಂದು ಕ್ಯಾಮೆರಾ, ಅರ್ಧ ಬಾಟಲಿ ನೀರು, ಒಂದು ಬಾಳೆಹಣ್ಣು. ಬಾಳೆಹಣ್ಣನ್ನು ನಾನು ಬೆಟ್ಟದ ತುದಿಯಲ್ಲೇ ತಿಂದು ಮುಗಿಸಿದ್ದೆ. ‘ಗಾಬರಿಯಾಗಬೇಡ! ’ ನನ್ನೊಳಗಿನ ಧೈರ್ಯ ಪಿಸುಗುಟ್ಟಿತು. ನಡೆಯಲು ಪ್ರಾರಂಭಿಸಿದೆ. ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದು ಗೊತ್ತಿಲ್ಲ. ಆದರೆ ನಿಲ್ಲುವುದಕ್ಕಿಂತ ನಡೆಯುವುದು ಉತ್ತಮವೆನಿಸಿ ನಡೆದೆ. ಮಧ್ಯಾಹ್ನವಾಗುವಷ್ಟರಲ್ಲಿ ‘ನಾನು ತಂಡದಿಂದ ಸಂಪೂರ್ಣವಾಗಿ ಬೇರ್ಪಟ್ಟಿದ್ದೇನೆ’ ಎಂಬುದು ಸ್ಪಷ್ಟವಾಯಿತು. ‘ಭಯಕ್ಕೆ ಶರಣಾಗಬಾರದು’ ಎಂದು ನಿರ್ಧರಿಸಿದೆ.

ಹೊರಗೆ ನಿಂತು ನೋಡುವವರಿಗೆ ಅರಣ್ಯ ಬಲು ಸುಂದರ! ಆದರೆ. . . ಆಳಕ್ಕಿಳಿದರೆ ಅದು ಚಕ್ರವ್ಯೂಹ. ಕತ್ತಲೆ ಆವರಿಸತೊಡಗಿದಾಗ ಸುರಕ್ಷಿತ ಸ್ಥಳದ ಹುಡುಕಾಟ ಆರಂಭವಾಯಿತು. ಅದು ಒಂದು ಬಂಡೆಯ ಅಂಚು! ಕೆಳಗೆ ಝರಿಯೊಂದು ಹರಿಯುತ್ತಿತ್ತು. ಪ್ರಾಣಿಗಳು ಅಷ್ಟು ಸುಲಭವಾಗಿ ಬರಲಾರವೆಂದು ಅಲ್ಲೇ ಉಳಿದೆ. ಅದು ನನ್ನ ಮೊದಲ ರಾತ್ರಿ. ಆ ರಾತ್ರಿ ನಾನು ಕಾಡಿನ ಮಾತಿಗೆ ಕಿವಿಯಾದೆ. ಬದುಕುವ, ಬದುಕಿಸುವ ಚೈತನ್ಯ ತುಂಬಿಸುವ ಮಾತು. ಎಲ್ಲೋ ದೂರದಲ್ಲಿ ಪ್ರಾಣಿಗಳ ಕೂಗು, ಹತ್ತಿರದಲ್ಲೇ ಯಾವುದೋ ಜೀವಿ ಉಸಿರಾಡುತ್ತಿದೆ ಎನ್ನಿಸುವ ಅನುಭವ! ತೀರಾ ಆಯಾಸವೆನ್ನಿಸಿದಾಗ ಕಣ್ಣೆಳೆದರೂ ನಿದ್ರೆ ಹತ್ತಿರ ಸುಳಿಯಲಿಲ್ಲ. ಕಣ್ಣು ಮುಚ್ಚಿದರೆ ಭಯ ಕಾಡುತ್ತದೆಯೆಂದು ಎಚ್ಚರವಾಗಿರಲು ಸರ್ವಥಾ ಪ್ರಯತ್ನಿಸಿದೆ.

ಎರಡನೇ ದಿನ!
ಬೆಳಿಗ್ಗೆಯೇ ದೇಹ ದಣಿದಿತ್ತು. ಮನಸ್ಸು ನಿಧಾನವಾಗಿ ವಾಸ್ತವಕ್ಕೆ ಒಗ್ಗಿತು. ಬದುಕುಳಿಯುವ ಹಂಬಲ ದೇಹದ ಅಗತ್ಯಗಳನ್ನು ಮೀರಿ ನಿಂತಿತು. ಹಸಿವು ಕಾಡಲಿಲ್ಲ. ಝರಿಯ ನೀರನ್ನು ಕುಡಿದೆ. ಅದು ಆವತ್ತಿನ ದಿನಕ್ಕೆ ಕೇವಲ ನೀರಲ್ಲ, ಜೀವಜಲ. ನಾನು ನನ್ನಲ್ಲೇ ಮಾತನಾಡಿದೆ. ಆದಷ್ಟು ಶಾಂತವಾಗಿರಲು ಪ್ರಯತ್ನಿಸಿದೆ. ಅಂದಿನ ದಿನವೂ ಕಾಡು ವಾಸ ನನ್ನದಾಯಿತು. ಯಾರೂ ಸಿಗಲಿಲ್ಲ. ಆ ರಾತ್ರಿ ಇನ್ನೂ ಸ್ವಲ್ಪ ಭಿನ್ನ. ಸುತ್ತಲೂ ಹೊಳೆಯುವ ಮಿಂಚು ಹುಳ ನಕ್ಷತ್ರಗಳು ಭೂಮಿಗಿಳಿದಂತೆ ಕಂಡವು. ಆ ಕ್ಷಣಕ್ಕೆ ನನಗೆ ಕಾಡು ಎಂದರೆ ಒಂದು ಸುಂದರ ಯಾತನೆ!

ಮೂರನೇ ದಿನ!
ನನ್ನೊಳಗೆ ಆಸೆ ಮತ್ತು ನಿರಾಸೆಗಳ ಮಧ್ಯೆ ಒಂದು ಯುದ್ಧವೇ ನಡೆಯುತ್ತಿತ್ತು. ಆಕಾಶದತ್ತ ನೋಡಿದರೆ ಒಂದೆರಡು ವಿಮಾನಗಳು ಹಾದು ಹೋಗುತ್ತಿರುವುದು ಕಂಡಿತು. ಪ್ರಯೋಜನವಿಲ್ಲವೆಂದು ಗೊತ್ತಿದ್ದೂ ಪುಟ್ಟ ಮಗುವಿನಂತೆ ಕೈ ಬೀಸಿದೆ. ಆದರೆ ನಾನು ಅವರಿಗೆ ಕಾಣಿಸಬೇಕಲ್ಲವೇ? ಮನಸ್ಸು ಕುಗ್ಗಬಾರದೆಂದು ಕ್ಯಾಮೆರಾ ತೆಗೆದು ಸುಮ್ಮನೆ ಫೋಟೋಗಳನ್ನು ಕ್ಲಿಕ್ಕಿಸತೊಡಗಿದೆ. ನೀರು ತುಂಬಿಸಿ ಬಂಡೆಯ ಮೇಲೆ ಇರಿಸಿದ ಬಾಟಲಿ ಸುತ್ತಲೂ ಹಾರುತ್ತಿರುವ ಒಂದು ಚಿಟ್ಟೆ ಮತ್ತು ಆಕಾಶದಲ್ಲಿ ಮಾಸಿದಂತೆ ಕಾಣುವ ಚಂದಿರ… ಇವು ನಾನು ಧೃತಿಗೆಡದೆ ಇರಲು ಸಹಾಯ ಮಾಡಿದವು. ಕಾಡಿನಲ್ಲಿ ನಿಜವಾದ ಅಪಾಯ ಇರುವುದು ವನ್ಯ ಮೃಗಗಳದ್ದಲ್ಲ, ವಿಚಲಿತವಾಗುವ ನಮ್ಮ ಮನಸ್ಸೇ ಶತ್ರುವಾಗುತ್ತದೆ.

ನಾಲ್ಕನೇ ದಿನ!
ಬೆಳಿಗ್ಗೆ ಮಳೆ ಸುರಿಯಿತು. ಕೊಡಗಿನವರಿಗೆ ವರದಾನದ ಕಾಫಿ ಹೂ ಮಳೆಯಂತೆ ಅದು. ಆದರೆ ನನಗೆ ಕಠೋರ ಪರೀಕ್ಷೆ. ಸಂಪೂರ್ಣವಾಗಿ ನೆನೆದು, ನಡುಕ ಶುರುವಾಯಿತು. ನನ್ನ ದೇಹದ ಮೇಲೆ ನಿಯಂತ್ರಣ ಕಳೆದುಕೊಂಡಂತೆ ಅನಿಸಿತು. ಮಳೆ ಕಡಿಮೆಯಾದ ಮೇಲೆ, ಕೊಂಚ ಬಿಸಿಲಿನ ಕಿರಣಗಳು ನುಸುಳಿ ಬಂದಾಗ ನಾನು ಬಟ್ಟೆಗಳನ್ನು ಬಿಚ್ಚಿ ಬಂಡೆ ಮೇಲೆ ಹಾಸಿ ಒಣಗಿಸಿ ಪುಟ್ಟ ಚೀಲದಲ್ಲಿ ತುಂಬಿಸಿದೆ. ನಡೆಯಲು ಪ್ರಯತ್ನಿಸಿದೆ. ನೆಲ ಜಾರುತ್ತಿತ್ತು. ಕೊಡಗಿನ ಕಾಡಿನ ಜಿಗಣೆಗಳು ಭಯಾನಕ, ಕಾಲಿಗೆ ಹತ್ತಿ ರಕ್ತ ಹೀರುತ್ತಿದ್ದವು. ಈಗಲೂ ಕೈ ಕಾಲುಗಳಲ್ಲಿ ಅಸಹನೀಯ ಕೆರೆತ ಕಡಿಮೆಯಾಗಿಲ್ಲ. ಆ ದಿನ ನಡೆಯಲಾರಂಭಿಸಿದೆ. ಒಂದು ಮನುಷ್ಯ ಸ್ವರ. ಆ ಕ್ಷಣವನ್ನು ನಾನು ಎಂದಿಗೂ ಮರೆಯಲಾರೆ. ನಾನು ನನ್ನ ಶಕ್ತಿಯನ್ನೆಲ್ಲ ಸೇರಿಸಿ ಕೂಗಿದೆ. “ನಾನು ಶರಣ್ಯ? ಕಾಪಾಡಿ…” ಆ ಧ್ವನಿ ಹತ್ತಿರವಾಯಿತು. “ಅಲ್ಲೇ ಇರು?” ಯಾರೋ ಕೂಗಿ ಹೇಳಿದರು, ನಿಂತೆ. ಸ್ವಲ್ಪ ಹೊತ್ತಿನ ನಂತರ ಐದು ಜನರು ಓಡುತ್ತಾ ನನ್ನತ್ತ ಬಂದರು. ಅವರು ಸಾಮಾನ್ಯರಲ್ಲ, ಕಾಡಿನ ಮಕ್ಕಳು. ಅವರ ಮುಖದಲ್ಲಿ ಆತಂಕವೂ ಇತ್ತು, ಆತ್ಮವಿಶ್ವಾಸವೂ ಇತ್ತು. ನೀರು, ತಿನಿಸು ಕೊಟ್ಟರು. ಹಸಿವು, ನೀರಡಿಕೆ ಕಡಿಮೆಯಾಗುವುದಕ್ಕಿಂತಲೂ ಹೆಚ್ಚು ‘ನಾನು ಸುರಕ್ಷಿತಳು’ ಎಂದು ಆ ಕ್ಷಣದಲ್ಲಿ ಸಿಕ್ಕಿದ ಸಾಂತ್ವನ ಹೆಚ್ಚಾಗಿತ್ತು. ಜೋರಾಗಿ ಅತ್ತೆ. ಅದು ಭಯದ ಕಣ್ಣೀರಲ್ಲ, ದಾರಿ ತೋರಿಸಿದ ಬಂಧುಗಳಿಗೆ ಆನಂದಬಾಷ್ಪ. ಬಂದವರು ನನ್ನನ್ನು ತಮ್ಮ ತಂಗಿಯಂತೆ ಕರೆದುಕೊಂಡು ನಡೆದರು.

ಅವರ ಹೆಜ್ಜೆಗಳು ಕಾಡು ಪ್ರಾಣಿಗಳ ಹೆಜ್ಜೆಗಳಂತೆ ವೇಗವಾಗಿದ್ದವು, ನಿಖರವಾಗಿದ್ದವು.

ಕೆಳಗೆ ಬಂದಾಗ ನನ್ನ ಜನರು ಕಾಯುತ್ತಿದ್ದರು. ಅವರ ಕಣ್ಣುಗಳಲ್ಲಿ ಆತಂಕ, ಸಂತೋಷದ ಸಮ್ಮಿಶ್ರ ಭಾವ. ಆ ಕ್ಷಣದಲ್ಲಿ, ‘ಬದುಕು ಎಷ್ಟು ಸೂಕ್ಷ್ಮ ಮತ್ತು ಎಷ್ಟು ಅಮೂಲ್ಯ’ ಎಂದು ತಿಳಿದುಕೊಂಡೆ. ನಾನು ಕಾಡಿನಿಂದ ಸುರಕ್ಷಿತವಾಗಿ ಹೊರಬಂದಿದ್ದೇನೆ. ಆದರೆ ಇದು ಕೇವಲ ನನ್ನ ಕಥೆಯಲ್ಲ, ನನ್ನನ್ನು ಉಳಿಸಿದವರದ್ದು ಕೂಡ.

ಕಾಪಾಡಿದವರು ಯಾರೂ ಅಧಿಕಾರಿಗಳಲ್ಲ, ಕಾಪಾಡಿದವರು ಸುದ್ದಿಯ ಶೀರ್ಷಿಕೆಗಳಲ್ಲೂ ಇರಲಿಲ್ಲ. ಆದರೆ ಅವರು ನನ್ನ ಜೀವನದ ಕಥೆಯಲ್ಲಿ ಪ್ರಮುಖ ಪಾತ್ರಧಾರಿಗಳು. ಅವರು ಕಾಡನ್ನು ನಂಬಿ ಬದುಕುವ ಮಣ್ಣಿನ ಮಕ್ಕಳು. “ನಮ್ಮ ಕಾಡಿನ ದೇವತೆ ನಿಮ್ಮನ್ನು ಉಳಿಸಲು ದಾರಿ ತೋರಿಸಿ ದಳು” ಎಂದರು. ನಾನು ಪ್ರಶ್ನಿಸಲಿಲ್ಲ. ಯಾಕೆಂದರೆ ಆ ಕ್ಷಣದಲ್ಲಿ, ನನ್ನ ದೇವರು ಕಾಡಿನ ಮಕ್ಕಳು. ಘಟನೆಯ ನಂತರ, ನನ್ನ ಬಗ್ಗೆ ಹಲವಾರು ಮಾತುಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. “ಉದ್ದೇಶಪೂರ್ವಕವಾಗಿ ಪ್ರಚಾರಕ್ಕಾಗಿ ನಾಟಕವಾಡಿದೆ” ಎನ್ನುತ್ತಿದ್ದಾರೆ. ಆದರೆ ಸತ್ಯ ತುಂಬಾ ಸರಳ ಮತ್ತು ಸ್ಪಷ್ಟ. ನಾನು ಆ ನಾಲ್ಕು ದಿನಗಳು ಹೋರಾಡಿದ್ದು ಕೇವಲ ಬದುಕುಳಿಯಲು ಮಾತ್ರ. ನಾನು ಅಸಾಮಾನ್ಯ ವ್ಯಕ್ತಿಯಲ್ಲ, ಸಾಮಾನ್ಯ ಮನುಷ್ಯಳು. ಆದರೆ ಆ ನಾಲ್ಕು ದಿನಗಳು ಕಲಿಸಿದ ಪಾಠ ಎಲ್ಲ ಪುಸ್ತಕ ಗಳಿಗಿಂತ ದೊಡ್ಡದು. ಪ್ರಕೃತಿ ನಮ್ಮನ್ನು ಪರೀಕ್ಷಿಸುವುದರ ಜೊತೆಗೆ ನಮ್ಮೊಳಗಿನ ಶಕ್ತಿಯನ್ನು ಪರಿಚಯಿಸುತ್ತದೆ. ಇಂದು ನಾನು ಮತ್ತೆ ನನ್ನ ಜೀವನಕೆ ಹಿಂದಿರುಗಿದ್ದೇನೆ.

ನನ್ನೊಳಗೆ ಏನೋ ಬದಲಾವಣೆ ಇದೆ. ಇನ್ನು ಮುಂದೆ ಕಾಡೆಂದರೆ ನನಗೆ ಕೇವಲ ಸಾಹಸವಲ್ಲ, ಅದೊಂದು ಪಾಠ. ನನ್ನ ಜೀವನದ ಅತ್ಯಂತ ಕಷ್ಟದ ಕ್ಷಣಗಳಲ್ಲಿ ಕೈಹಿಡಿದವರು ಸುದ್ದಿಯಾಗಲು ಬಯಸದ, ಏನಕ್ಕೂ ಆಸೆ ಪಡದ ಹಾಡಿಯ ಜನಾಂಗದ ಆ ಕಾಡಿನ ಮಕ್ಕಳು. ಅವರು ನನ್ನ ನಿಜವಾದ ‘ರಕ್ಷಕರು’ ಎಂದರೆ ‘ಗಾರ್ಡಿಯನ್ ಏಂಜಲ್ಸ್.’

ನಿರೂಪಣೆ : ಮೋಳಿ ವರ್ಗೀಸ್‌
molmolcv22@gmail.com

ಆಂದೋಲನ ಡೆಸ್ಕ್

Recent Posts

ನಾಳೆ ಸಂಜೆ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ

ಮುಂಬೈ: ಭಾರತೀಯ ಚಿತ್ರರಂಗದ ಗಾಯಕಿ ಆಶಾ ಭೋಸ್ಲೆ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಆಶಾ ಭೋಸ್ಲೆ ಅವರು…

9 mins ago

ಅಬ್ದುಲ್‌ ಜಬ್ಬಾರ್‌ ರಾಜೀನಾಮೆ ಅಂಗೀಕರಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ಅವರು ನೀಡಿರುವ ರಾಜೀನಾಮೆಯನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ…

2 hours ago

ಹಾಸನ: ಕಾಡಾನೆ ದಾಳಿಗೆ ಮತ್ತೋರ್ವ ರೈತ ಬಲಿ

ಹಾಸನ: ಕಾಡಾನೆ ದಾಳಿಗೆ ಮತ್ತೋರ್ವ ರೈತ ಬಲಿಯಾಗಿರುವ ಧಾರುಣ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕಣಗುಪ್ಪೆ…

2 hours ago

ಏಪ್ರಿಲ್.‌15ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಏಪ್ರಿಲ್.‌15ರವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ…

2 hours ago

ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

ಮುಂಬೈ: ಭಾರತೀಯ ಚಿತ್ರರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ವಿಧಿವಶರಾಗಿದ್ದಾರೆ. ಹಿರಿಯ ಗಾಯಕಿ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ ಕಂಬನಿ…

2 hours ago

ಹೆಬ್ಜುಲ್ಲಾ ಭದ್ರಕೋಟೆ ಟಾರ್ಗೆಟ್‌ ಮಾಡಿ ಇಸ್ರೇಲ್‌ ದಾಳಿ: 11 ಮಂದಿ ಸಾವು

ಬೈರುತ್‌: ಅಮೇರಿಕಾ-ಇರಾನ್‌ ಮಾತುಕತೆ ವಿಫಲವಾದ ಕೆಲವೇ ಗಂಟೆಗಳ ನಂತರ ಹೆಬ್ಜುಲ್ಲಾ ಭದ್ರಕೋಟೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ನಡೆಸಿದ ದಾಳಿಯಲ್ಲಿ 11 ಮಂದಿ…

2 hours ago