– ಸುರೇಶ ಕಂಜರ್ಪಣೆ
ಬೇರೆ ರಾಜ್ಯಗಳಲ್ಲಿ ಇದೇ ಟ್ರೆಂಡ್ ಇದೆಯಾ ಅಂತ ವಿಚಾರಿಸುವಷ್ಟು ಸಂಪರ್ಕ ನನಗೂ ಇಲ್ಲ. ಆದರೆ
ಕನ್ನಡದ್ದು ಮಾತ್ರ ದಿಗಿಲು ಬೀಳುವಷ್ಟು ಆಕರ್ಷಕವಾಗಿದೆ.
ಕನ್ನಡದ ಶಕ್ತಿಕೇಂದ್ರಗಳು ಯಾವುದು ಅಂತ ಗೆಳೆಯನೊಬ್ಬ ಕೇಳಿದ. ಉತ್ತರ ತಕ್ಷಣ ಹೊಳೆಯಲಿಲ್ಲ.
ಆದರೆ ಸಾಹಿತ್ಯ ಅತಿಶಯ ಪ್ರಮಾಣದಲ್ಲಿ ಈ ಸ್ಪೇಸ್ ಆಕ್ರಮಿಸಿಕೊಂಡಿದ್ದು ಕಂಡಿತು. ಎಷ್ಟೊಂದು ವಿಚಾರಸಂಕಿರಣಗಳು, ಕವಿಗೋಷ್ಠಿಗಳು, ಅಂತಾರಾಜ್ಯ ಸಾಹಿತ್ಯ ಗೋಷ್ಠಿಗಳು, ಈ ನಡುವೆ
ಪುಸ್ತಕ ಬಿಡುಗಡೆ, ಅದರ ಫೇಸ್ ಬುಕ್ ರಿಲೇ.. ಫೋಟೋ ಸೆಷನ್ಸ್, ಸೆಲ್ಛಿಗಳು.. ಬೇರೆ ರಾಜ್ಯಗಳಲ್ಲಿ ಇದೇ ಟ್ರೆಂಡ್ ಇದೆಯಾ ಅಂತ ವಿಚಾರಿಸುವಷ್ಟು ಸಂಪರ್ಕ ನನಗೂ ಇಲ್ಲ. ಆದರೆ ಕನ್ನಡದ್ದು ಮಾತ್ರ ದಿಗಿಲು ಬೀಳುವಷ್ಟು ಆಕರ್ಷಕವಾಗಿದೆ.
ಉದಾ: ದೆಹಲಿ ಅಥವಾ ಅಂತಾರಾಜ್ಯ ಸಾಹಿತ್ಯಗೋಷ್ಠಿ, ಕವಿಗೋಷ್ಠಿ ಅಂದರೆ ದೆಹಲಿ ವಿರಾಜಿತ ಕಂಬಾರರೋ, ಇನ್ಯಾರೋ ಖಾಯಂ ಆಗಿ ಪ್ರಥಮ ಪೂಜೆ ಪಡೆಯುವಂತೆ ಕಾಣುತ್ತೆ. ಅವರೊಂದಿಗೆ ನಿರೀಕ್ಷಿತ ಕವಿ/ ಸಾಹಿತಿಗಳು. ಇತ್ತೀಚೆಗೆ ದೆಹಲಿ ನಿವಾಸಿ ಕವಯಿತ್ರಿಯೊಬ್ಬರು ಈ ಬಗ್ಗೆ ಖಾರವಾಗಿ ಬರೆದಿದ್ದರು. ಆದರೆ ಖಾರಾಬಾತ್ ರೂಢಿಯಾಗಿರುವ ನಮ್ಮ ಸಂಘಟಕರು ಇದಕ್ಕೆ ಸೊಪ್ಪು ಹಾಕಿದಂತೆ ಕಾಣಿಸಲಿಲ್ಲ. ಹೆಚ್ಚೆಂದರೆ ಸೊಪ್ಪಿನ ಪಲ್ಯ ಉಪ್ಸಾರು ತಯಾರು ಮಾಡಿ ಮುದ್ದೆ ಉಂಡಿರಬಹುದು.
ಈ ಹಿಂದೆಯೂ ಈ ಆಸ್ಥಾನ ಇತ್ತು. ಆಗ ಚಂಪಾ ಅವರಿಂದ ಹಿಡಿದು ಬಹುತೇಕ ಲೇಖಕರು ಯು.ಆರ್.ಎ.
ಮತ್ತು ಗೋಕಾಕರ ಬಗ್ಗೆ ಲೇವಡಿ ಮಾಡಿದ್ದಿತ್ತು. ವೈಯಕ್ತಿಕವಾಗಿ ಭ್ರಷ್ಟರಾದದ್ದೋ, ನಾಲಾಯಕ್‌ಗಳಿಗೆ ಮಣೆ ಹಾಕಿದ್ದೋ ಇತ್ಯಾದಿ ಆರೋಪಗಳಿರಲಿಲ್ಲ. ಅದು ಏನಿದ್ದರೂ ತಮ್ಮ ಅಭಿರುಚಿಗೆ ತಕ್ಕಂತವರ ಆಯ್ಕೆಯ ಮರ್ಜಿ ಎಂದವರಿದ್ದಾರೆ.
ಇದೊಂಥರಾ ಮಠ, ದೇವಸ್ಥಾನಗಳ ದೊಡ್ಡ ಹೋಮಹವನಗಳ ತರಹ. ಮುಖ್ಯ ಪುರೋಹಿತ ತನ್ನ ಪರಿಚಯಸ್ಥರನ್ನೇ ಶಿಫಾರಸು ಮಾಡೋದು.
ರಾಷ್ಟ್ರಮಟ್ಟದ ಯುವ ಕವಿಗೋಷ್ಠಿ ಅಂತ ನಡೆಸುವ ಪರಿಪಾಠ ಈಗಲೂ ಇದೆ ಅಂದುಕೊಂಡಿದೀನಿ. ಹತ್ತು
ಹದಿನೈದು ವರ್ಷಗಳ ಮೊದಲು ಕನ್ನಡದಿಂದ ಹೀಗೆ ಆಯ್ಕೆಯಾದ ಕವಿಗಳು ಆ ಝಗಮಗಕ್ಕೆ ಹೊಂದಲಾರದೇ ಕಾರ್ಯಕ್ರಮ ಮುಗಿಸಿ ಹೊಗೆ ಕೋಣೆಯಿಂದ ಹೊರಗೆ ಬಂದ ಹಾಗೆ ಓಡಿ ಬಂದಿದ್ದೂ ಕಂಡಿದ್ದೇನೆ. ಆದರೆ ಹೀಗೆ ಹೋದವರು ಈ ಝಗಮಗಕ್ಕೆ ಮಾರುಹೋಗಿ ಒಂಥರಾ ಆಡೋದೂ ನೋಡಿದ್ದೇನೆ.
ಇನ್ನು ವಿವಿ ಮಟ್ಟದ ‘ರಾಷ್ಟ್ರೀಯ’ ವಿಚಾರಸಂಕಿರಣಗಳ ಥಳುಕೇ ಬೇರೆ. ನ್ಯಾಕ್ ಕಾರಣಕ್ಕೆ ಇವೆಲ್ಲಾ ರಾಷ್ಟ್ರೀಯ ಎನ್ನುವ ಬ್ಯಾನರ್ ಅಂಟಿಸಿಕೊಂಡರೂ ಅಲ್ಲಿ ಇರುವವರೆಲ್ಲಾ ನಿಲಯದ ಕಲಾವಿದರೇ. ಲಡ್ಡಿಗೆ ಲವಂಗ ಚುಚ್ಚಿದ ಹಾಗೆ ಒಬ್ಬರೋ ಇಬ್ಬರೋ ಮುಂಬೈ, ಹೈದರಾಬಾದ್‌ನಿಂದ ಬಂದರಾಯಿತು. ಬಹುತೇಕ ವಿಷಯಗಳು ನಿರೀಕ್ಷಿತವೇ. ಅದನ್ನು ಮಾಡಿಸುವವರೆಲ್ಲಾ ರಾಜ್ಯದೊಳಗಿನ ಪಂಡಿತ ವಿಮರ್ಶಕರೇ.. ಈ ‘ಡಾ’ಗಳಿಂದಾಚೆ ಕನ್ನಡದ ಹೆಚ್ಚಿನವರು ಈ ವೇದಿಕೆ ಹತ್ತಿಯೇ ಇಲ್ಲ.
ಸರಿಯಾಗಿ ಲೆಕ್ಕ ಹಾಕಿದರೆ ಅಂದಾಜು ಎರಡೋ ಮೂರೋ ಡಜನ್ ಅಕಡೆಮಿಕ್ ವಿಮರ್ಶಕರು ಈ
ಸರ್ಕ್ಯೂಟ್‌ನಲ್ಲಿ ಇರುತ್ತಾರೆ. ಅವರು ರಾಜ್ಯಾದ್ಯಂತ ಭಾಗವಹಿಸುತ್ತಿರುತ್ತಾರೆ. ಫೆಬ್ರವರಿ-ಮಾರ್ಚ್‌ನಲ್ಲಿ ಬಜೆಟ್ ಮುಗಿಸುವ ತರಾತುರಿ ಕಾರಣ ಈ ವಿಚಾರಸಂಕಿರಣಗಳ ಬಾಧೆ ಜಾಸ್ತಿ. ಹೆಚ್ಚಿನ ವಿಚಾರಸಂಕಿರಣಗಳಲ್ಲಿ ಹಾಜರಾತಿ ಮೂರಂಕಿ ದಾಟದು. ಆದರೆ; ವೆಚ್ಚ ಆರಂಕಿ
ಇತ್ತೀಚೆಗೆ ಯುಜಿಸಿ ಕಾಲೇಜು ಮಾಸ್ತರುಗಳಿಗೆ ಪುನರ್ಮನನ ಕಮ್ಮಟದ ಬಗ್ಗೆ ಯುವ ವಿಮರ್ಶಕರೊಬ್ಬರು
ಬರೆದ ಲೇಖನ ನೋಡಿದರೆ ಎದೆ ಹಾರುತ್ತದೆ. ಬಂದ ಹಿರಿಯ ಪಾಠಿಗರು(ಪಾಠ ಮಾಡುವವರು) ಕನಿಷ್ಠ
ತಯಾರಿಯೂ ಮಾಡಿಕೊಂಡಿರಲಿಲ್ಲ. ಅಥವಾ ಹುಳ ಹಿಡಿದ ಒಂದು ತಲೆಮಾರು ಹಿಂದಿನ ವಿಷಯಗಳನ್ನೇ ಮತ್ತೆ ಪ್ರಸ್ತುತಪಡಿಸುತ್ತಿದ್ದ ದುರಂತದ ಬಗ್ಗೆ ಅವರು ಬರೆದಿದ್ದರು. ಕನ್ನಡ ಸಂಶೋಧನಾ ಹೆಜ್ಜೆ ಗತಿಯ ಸ್ಥಾಗಿತ್ಯದ ಬಗ್ಗೆ ಬಿಳಿಮಲೆಯವರು ಹಲವು ಕಡೆ ಪ್ರಸ್ತಾಪಿಸಿದ್ದಿದೆ.
ಇದು ಎಲುಬು ಕಡಿಯುವ ಸುಮ್ಮಾನವಾದರೆ ಹೊಸ ತಲೆಮಾರಿನ ಕತೆಗಾರ/ಕವಿಗಳ ಪ್ರಕಟಣೆ, ಪುಸ್ತಕ ಬಿಡು
ಗಡೆಯ ಸಂಭ್ರಮ ಕಂಡರೆ ಬೇಡರ ಕಣ್ಣಪ್ಪ ಚಿತ್ರದ ಹಾಡಿನ ಮೊದಲ ಸಾಲು ನಮ್ಮ ರಾಷ್ಟ್ರೀಯ ಉದ್ಗಾರವಾಗಬೇಕು.
ಇವು ಸೀಮಂತ, ನಾಮಕರಣಗಳ ಸಂಭ್ರಮಕ್ಕಿಂತ ಮೇಲೆ ಹೋದಂತಿಲ್ಲ. ಅಲ್ಲಿ ಕಾವ್ಯದ ಬಗ್ಗೆಯೋ ಕತಾ ಪ್ರಕಾರದ ಬಗ್ಗೆಯೋ ಏನಾದರೂ ಗಂಭೀರ ಟೇಕ್ ಹೋಮ್ ಸಿಕ್ಕಿತಾ ಎಂಬುದರ ಬಗ್ಗೆ ಒಂದು ಸಾಲೂ ಈ ವರದಿ/ಸ್ವವರದಿಗಳಲ್ಲಿ ಇರುವುದಿಲ್ಲ. ಇದರ ಮುಂದಿನ ಹಂತವಾಗಿ ಕಾಂಪ್ಲಿಮೆಂಟರಿಯಾಗಿ ಕಳಿಸಿದ ಕೃತಿಗೆ ಸಹಜ ಸೌಜನ್ಯದಲ್ಲಿ ಸ್ಪಂದಿಸಿದ್ದನ್ನೂ ಫೇಸ್ಬುಕ್ಕಿನಲ್ಲಿ ಹಾಕಿ ನಮ್ಮನ್ನು ರುಬ್ಬುವ ಪರಿಪಾಠ ಶುರುವಾಗಿದೆ. ಹೊಸಬರ ಈ ಅಭ್ಯಾಸ ಕಂಡು ಕೊಂಚ ಹಿರಿಯರೂ ಈ ಹಾದಿ ತುಳಿದು ಲೈಕುಗಳನ್ನು ಆಸ್ಥೆಯಿಂದ ನೋಡುವ ಚಟಕ್ಕೆ ಬಿದ್ದಿರುವಂತಿದೆ.
ನಾನು ಇತ್ತೀಚೆಗೆ ಹೊಸ ತಲೆಮಾರಿನ ಒಂದಷ್ಟು ಲೇಖಕರ (ಅಂದಾಜು 40 ಲೇಖಕರ) 80 ಪುಸ್ತಕಗಳನ್ನು ಕೊಂಡು ತಂದು ಓದತೊಡಗಿದೆ. ಓದಿದ ಖುಷಿಗೆ ಫೋನು ಮಾಡಿ ಮಾತಾಡಿದಾಗ ಸಿಕ್ಕ ಅಭಿಪ್ರಾಯ ಸುಮಾರಾಗಿ ಒಂದೇ.
‘ಯಾರೂ ಗಂಭೀರವಾಗಿ ನಮ್ಮ ಬರವಣಿಗೆಯ ಮಿತಿ, ಸಾಧ್ಯತೆ ಬಗ್ಗೆ ಹೇಳುತ್ತಿಲ್ಲ ಸಾರ್, ಆದ್ದರಿಂದ ಬರವಣಿಗೆಯ ಮುಂದಿನ ಹೆಜ್ಜೆ ಹಾದಿಯೇ ಗೊತ್ತಾಗ್ತಿಲ್ಲ’ ಎಂದು ಪ್ರಾಮಾಣಿಕವಾಗಿ ಅಲವತ್ತುಕೊಂಡರು. ಇತ್ತೀಚೆಗೆ ಮಯೂರದಲ್ಲಿ ಹೊಸ ತಲೆಮಾರಿನ ಕುರಿತು ಸುದೀರ್ಘ ಲೇಖನ ಒಂದು ಬಿಟ್ಟರೆ ಬೇರೆ ಯಾವ ಲೇಖನಗಳನ್ನೂ ನಾನು ಕಂಡಿಲ್ಲ.
ಆದರೆ ಇಷ್ಟು ಹೇಳಿಕೊಳ್ಳುವಾಗಲೂ ಈ ಲೇಖಕರಿಗೆ ಈ ಸಂಭ್ರಮದ ಝಗಮಗದಿಂದ ಹೊರಗೆ ಬರಬೇಕೆಂಬ
ಇರಾದೆ ಕಡಿಮೆಯಾದಂತೆ ತೋರಲಿಲ್ಲ.
ಈ ಮಧ್ಯೆ ಹೊಸ ಲಿಟ್ ಫೆಸ್ಟ್‌ಗಳ ದಡೂತಿ ವೇದಿಕೆಗಳೂ ಹುಟ್ಟಿಕೊಂಡು ನನ್ನಂತಹವನ ಗೊಂದಲವನ್ನು ಇನ್ನಷ್ಟು ಹೆಚ್ಚಿಸಿವೆ.
ಇಲ್ಲೆಲ್ಲಾ ಕನ್ನಡಕ್ಕೆ ಮೊದಲು ಅವಕಾಶ ಇರಲಿಲ್ಲ. ಇತ್ತೀಚೆಗೆ ಕನ್ನಡ ಸೇನೆಗಳ ಭಯಕ್ಕೆ ಈ ಉಪವೇದಿಕೆಗಳನ್ನು ಸೃಷ್ಟಿಸಿರಬಹುದು ಎಂಬುದು ನನ್ನ ಊಹೆ. ಅಗ್ರ ಪಂಕ್ತಿ ಅಲ್ಲದಿದ್ದರೂ ಅಡ್ಡ ಪಂಕ್ತಿ ಹಾಕಿದರೂ ಸಾಕು, ಸದ್ಯಕ್ಕೆ. ಅವರು ವೇದಿಕೆ ಕೊಟ್ಟರೆ ಅದೇನೋ ಪುಳಕ.
ಮೊದಲು ಮಠಗಳ ಸಾಹಿತ್ಯೋತ್ಸವದಲ್ಲಿ ಈ ತರದ ಕರೆ ಬಂದು ಅಲ್ಲಿ ಶಾಲು ಹೊದಿಸಿಕೊಂಡು ಮಂತ್ರಾಕ್ಷತೆ ಪಡೆವ ಯೋಗ ಇರುತ್ತಿತ್ತು! ಈಗ ಅದು ಕೊಂಚ ಮಂಕಾಗಿದೆ. ಈ ಲಿಟ್ ಫೆಸ್ಟ್ ಅದರ ಆಧುನಿಕ ಅವತಾರ ತಾಳಿದಂತಿದೆ.
****
ಇವೆಲ್ಲಾ ಆಧಾರ್ ಕಾರ್ಡ್ ತರಹ. ಅದು ಅಸ್ತಿತ್ವದ ಪುರಾವೆಯೇ ಹೊರತು, ನಾಗರಿಕತ್ವದ ದೃಢೀಕರಣ ಅಲ್ಲ
ಎಂದು ಆಧಾರ್ ಕಾರ್ಡಲ್ಲಿ ಬರೆದಿಲ್ವೇ? ಆದರೂ ಅದಕ್ಕೆಂಥಾ ಮನ್ನಣೆ!!!!
ಈ ಪುಳಕ ನಿಲ್ಲುವವರೆಗೂ ಲೇಖಕ ಆಳವಾಗಲು ಸಾಧ್ಯವೇ ಇಲ್ಲ ಅನ್ಸುತ್ತಪ್ಪಾ.
ಕುಂಟಾಬಿಲ್ಲೆಯಲ್ಲಿ ಕಣ್ಣು ಮುಚ್ಚಿ ಹೆಜ್ಜೆ ಹಾಕುತ್ತಾ ‘ಅಮರೆಟ್’ ಅಂತ ಕೂಗುವಾಗ ಹಿಂದೆ ಇದ್ದವರು
ಹೇಳಬೇಕು.
ಈ ಅಮರೆಟ್ ಮರೆಯಾಗಿದೆ. ನಮ್ಮ ಕಾಲದಲ್ಲಿ ಒಂದು ಪ್ರತಿಕ್ರಿಯೆಗೂ ಇನ್‌ಲ್ಯಾಂಡ್ ಲೆಟರಲ್ಲಿ ಬರೆಯಬೇಕಿತ್ತು. ಇಲ್ಲ ಶೂದ್ರ, ಸಂಕ್ರಮಣಗಳಿಗೆ ಎರಡುಮೂರು ಪುಟ ಬರೆಯಬೇಕಿತ್ತು. ಆ ನರಕವೇ ನಮ್ಮ ಸಂವೇದನೆಯನ್ನು ಎಚ್ಚರದಲ್ಲಿ ಕಾಪಿಡಲು ನೆರವಾಗಿತ್ತು ಅನ್ನಿಸುತ್ತೆ.
kpsuresha@gmail.com
ಟಿ.ನರಸೀಪುರ : ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದ ಘಟನೆ ಟಿ.ನರಸೀಪುರ ತಾಲ್ಲೂಕಿನ ಶ್ರೀರಂಗರಾಜಪುರ ಗ್ರಾಮದಲ್ಲಿ ನಡೆದಿದೆ. ಕಳೆದ…
ಮೈಸೂರು: ಎಂಎಲ್‌ಸಿ ಸ್ಥಾನಕ್ಕಾಗಿ ರಕ್ತದಲ್ಲಿ ಸಹಿ ಮಾಡಿ ಮನವಿ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೊಬ್ಬರು ತಮ್ಮ…
ಧನುರ್ಮಾಸ ಆರಂಭವಾದ ಕೂಡಲೇ ಎಲ್ಲೆಡೆ ದೇವಸ್ಥಾನಗಳಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಬೆಳಗಿನ ಜಾವ ಪೂಜೆ ಆರಂಭವಾಗುತ್ತದೆ. ಮಹಿಳೆಯರು ಬೆಳಗಿನ ಚಳಿಯಲ್ಲಿಯೇ ದೇವಾಲಯಗಳಿಗೆ…
ಮೈಸೂರು : ಚಲಿಸುತ್ತಿದ್ದ ವೇಳೆಯೇ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಹೊತ್ತಿ ಉರಿದಿರುವ ಘಟನೆ…
ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡು ಪಟ್ಟಣದಿಂದ ಊಟಿ ಮತ್ತು ಸುಲ್ತಾನ್ ಬತ್ತೇರಿಗೆ ಹಾದು ಹೋಗಿರುವ ರಸ್ತೆಗಳಲ್ಲಿ ಮತ್ತು…
ಮೈಸೂರು ನಗರದ ಸಬ್ ಅರ್ಬನ್ ಬಸ್ ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ದ್ವಾರಗಳ ಬಳಿ ಆಟೋಗಳನ್ನು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುತ್ತಿದ್ದು,…